ಎಳೆಯ ಮಕ್ಕಳ ಸೃಜನಶೀಲತೆಗೆ ಸಾಣೆ
‘ಮೊದಲ ತೊದಲು’
ಮಕ್ಕಳ ಬರವಣಿಗೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ರಚಿತವಾದ ‘ಮೊದಲ ತೊದಲು’ ಪ್ರಾಥಮಿಕದಿಂದ ಪಿಯುವರೆಗಿನ ವಿದ್ಯಾರ್ಥಿಗಳ ಕವನಗಳ ಸಂಕಲನ. ಇದನ್ನು ಸಾಲಿಗ್ರಾಮದ ಚಿತ್ರಪಾಡಿಯ ಪ್ರೊ. ಉಪೇಂದ್ರ ಸೋಮಯಾಜಿಯವರು ಕೃತಿರೂಪದಲ್ಲಿ ಪ್ರಕಟಿಸಿದ್ದಾರೆ. ಮಕ್ಕಳು ಬರೆದ ಕಥೆ, ಕವನಗಳು ಬಿಡಿಯಾಗಿ ಉಳಿದುಹೋಗಬಾರದೆಂದು ಅವುಗಳನ್ನು ಸಂಗ್ರಹಿಸಿ ಸಂಕಲವನ್ನಾಗಿ ಮಾಡಿದ್ದಾರೆ.
ಇದರಲ್ಲಿ ಮಕ್ಕಳು ಪ್ರಕೃತಿ ವೈಭವವನ್ನು ಮತ್ತು ದಿನನಿತ್ಯದ ಜೀವನದಲ್ಲಿನ ವಿಷಯ, ವಸ್ತುಗಳನ್ನು ಕಂಡು ವಿಸ್ಮಿತರಾಗಿ ಹಾಡಿದ, ತಮ್ಮ ಮೇಲೆ ಪ್ರಭಾವ ಬೀರಿದವರನ್ನು ನೆನಪಿಸಿಕೊಳ್ಳುವ ವಿಷಯವಿದೆ. ಪ್ರಾಣಿ -ಪಕ್ಷಿಗಳ ಮೇಲಣ ಪ್ರೀತಿ, ನಾಡು -ನುಡಿಯ ಅಭಿಮಾ, ಶಾಲೆ- ಶಿಕ್ಷಕ ಮತ್ತು ಇತರ ವಿಚಾರಗಳ ಕುರಿತಾದ ೬೨ ಕವನಗಳಿವೆ. ನಾಲ್ಕನೇ ತರಗತಿಯಿಂದ ಪಿಯುವರೆಗಿನ ವಿವಿಧ ವಯೋಮಾನದ ಮಕ್ಕಳು ತಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಬರೆದ ಕವನಗಳು ಇವು.
ಅವರ ತಿಳುವಳಿಕೆಯ ಸ್ಥರದಲ್ಲಿ ಇವುಗಳನ್ನು ನಾವು ಸ್ವೀಕರಿಸಬೇಕು. ಅಳತೆ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಆದರೆ ಎಲ್ಲವೂ ನಮಗೆ ತೃಪ್ತಿ ನೀಡುತ್ತವೆ, ಮೆಚ್ಚುಗೆ ಉಂಟಾಗುತ್ತದೆ. ಅವರ ಅನುಭವಗಳ ವ್ಯಾಪ್ತಿಯಲ್ಲ್ಲಿ ಇವುಗಳನ್ನು ಪ್ರಾಸ ರೂಪದಲ್ಲಿ ಅಥವಾ ಪ್ರಾಸರಹಿತವಾಗಿ ರಚಿಸಿದ್ದಾರೆ. ಮಕ್ಕಳಿಗೆ ಇಂತಹ ಕವನ ಸಂಕಲನಗಳನ್ನು ನಿಜವಾಗಿಯೂ ಕೊಟ್ಟಲ್ಲಿ ಅದು ಅವರಿಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಮೂಲಕ ಈ ಕೃತಿಯೂ ರುಚಿಸುವಂತೆ ಮಾಡುತ್ತದೆ. ಬರೆಯುವ, ಓದುವ ಆಸಕ್ತಿಯುಳ್ಳ ಮಕ್ಕಳಿಗೆ ತಾವು ಇನ್ನಷ್ಟು ಸಾಧನಶೀಲರಾಗಬೇಕೆಂಬ ಭಾವನೆ ಬಲವಾಗುವುದು ನಿಶ್ಚಿತ. ಮಕ್ಕಳ ಬರಹವೆಂದು ತಿರಸ್ಕಾರದಿಂದ ಈ ಕೃತಿಯನ್ನು ಖಂಡಿತಾ ನೋಡದೆ, ಸಾಹಿತ್ಯ ಅಭಿಮಾನಿಗಳು ಇವುಗಳನ್ನು ಓದಿ, ಮಕ್ಕಳನ್ನು ಉತ್ತೇಜಿಸಿದಲ್ಲಿ ಮಕ್ಕಳ ಸಾಹಿತ್ಯಕ್ಕೆ ಇನ್ನಷ್ಟು ಶಕ್ತಿ ಮತ್ತು ಪ್ರಚಾರ ಬರುವುದರಲ್ಲಿ ಸಂಶಯವಿಲ್ಲ.
‘ನಮ್ಮ ನಾಡು’ ಕವನದಲ್ಲಿ ಕಾಡು, ಮೋಡ, ಮಿಂಚು, ಗುಡುಗು, ಗುಡುಗಿಗೆ ತಕ್ಕಂತೆ ನರ್ತಿಸುವ ನವಿಲು, ಹೊಯ್ಯುವ ಮಳೆ, ಹೂವು ತಳಿರುಗಳು, ಹಕ್ಕಿಯ ಹಾಡುಗಳು ಇವೆಲ್ಲವೂ ನಮ್ಮ ಚೆಲುವ ಕನ್ನಡ ನಾಡಿನಲ್ಲಿ ಕಣ್ಮನ ಸೆಳೆಯುವುದನ್ನು ಚಿತ್ರಿಸಲಾಗಿದೆ. ನೀತಿ ಪಾಠ ಕಲಿಸುವ, ವಿದ್ಯೆ ಕೊಡುವ ಮಂದಿರ, ಜ್ಞಾನ ನೀಡುವ, ನಮ್ಮನ್ನು ಮನುಜರಾಗಿ ಬೆಳೆಸುವ, ಸತ್ಯ, ಶಾಂತಿ, ಸಹನೆ ಬೋಧಿಸುವ ಸ್ಥಳವಿದು ಎಂದು ‘ನಮ್ಮ ಶಾಲೆ’ ಕವನದಲ್ಲಿ ಕೊಂಡಾಡುತ್ತಾರೆ. ನಮ್ಮಯ ಭಾಷೆಗೆ ಆಪತ್ತು ಬಂದಿದೆ. ಆಂಗ್ಲ ಭಾಷೆಯು ಈ ಆಪತ್ತನ್ನು ತಂದಿದೆ. ಆಂಗ್ಲ ಶಾಲೆಗೆ ಎಲ್ಲರೂ ಸೇರುತ್ತಿದ್ದಾರೆ. ಆದರೆ ಕನ್ನಡ ಭಾಷೆಗೆ ಯಾವ ಸಮಸ್ಯೆ ಇದೆ ಎಂದು ಯಾರೂ ಹೇಳುತ್ತಿಲ್ಲ. ಈಗ ಅಪ್ಪ -ಅಮ್ಮ ಎಂದು ಕರೆಯುವವರೂ ವಿರಳವಾಗುತ್ತ ಮಮ್ಮಿ -ಡ್ಯಾಡಿ ಎಂಬ ಸಂಸ್ಕೃತಿ ಬಂದಿದೆ. ಈ ಎಲ್ಲ ಇಂಗ್ಲೀಷ್ ಮೋಹವನ್ನು ಮರೆತು ನಾವು ಕನ್ನಡ ಮಾತನಾಡಲು ದೊಡ್ಡತನ ತೋರಿಸಬೇಕೆಂದು ‘ಕನ್ನಡ ಕಲಿಯಿರಿ’ ಯಲ್ಲಿ ವಿವರಿಸಲಾಗಿದೆ.
ವಿದ್ಯೆಯ ಕೊಡುವ ಕರುಣಾಮೂರ್ತಿ, ಸತ್ಪ್ರಜೆಯಾಗಲು ನೀ ಸ್ಫೂರ್ತಿ, ತರುವೆವು ಎಂದಿಗೂ ದೇಶಕ್ಕೆ ಕೀರ್ತಿ, ಎತ್ತುವೆ ನಿಮಗೆ ಭಕ್ತಿಯ ಆರತಿ ಎಂಬ ಸೊಗಸಾದ ವರ್ಣನೆಯನ್ನು ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕ ಕವನದಲ್ಲಿ ನಿರೂಪಿಸಿದ್ದಾರೆ. ನವಿಲು ಮಕ್ಕಳನ್ನು ಸೆಳೆಯುವ ಅತ್ಯಂತ ಮೆಚ್ಚಿನ ಪಕ್ಷಿ. ಮೋಡದ ಎಡೆಯಲಿ/ ವಿಧವಿಧ ಬಣ್ಣ/ ಕಾಮನಬಿಲ್ಲು/ ಸಾವಿರ ಬಣ್ಣದ ಗರಿಗಳ/ ಬಿಚ್ಚಲು ನವಿಲೇ/ ನೀನು ಸೆಳೆವೆ ಎನ್ನ/ ಎನ್ನುವ ಮೂಲಕ ನವಿಲಿನ ವರ್ಣನೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಮಳೆ ಆರಂಭವಾಗುವ ಸಂದರ್ಭದಲ್ಲಿ ಮೆಲ್ಲನೆ ಹೆಜ್ಜೆ ಇಡುತ್ತ ಕುಣಿಯುವ ನವಿಲಿನ ಚಂದವನ್ನು ಅದರ ನಾಟ್ಯವನ್ನು ಇಲ್ಲಿ ಹೇಳಲಾಗಿದೆ.
‘ಪ್ರಕೃತಿಯ ಸವಿ’ ಎಂಬ ಕವನದಲ್ಲಿ ಪ್ರಕೃತಿ ಮಾತೆಯನ್ನು ವರ್ಣಿಸಿರುವ ವಿದ್ಯಾರ್ಥಿನಿ, ಇಲ್ಲಿ ಶುಕ-ಪಿಕಗಳು ಹಾಡಿವೆ /ಜುಳು ಜುಳು ನದಿ ಹರಿಯುತ್ತಿದೆ/ ಹಂಸಗಳು ಈಜಾಡುತ್ತಿವೆ/ ತಾವರೆಗಳು ಕೊಳದಲ್ಲಿ ಅರಳುತ್ತಿವೆ/ ನಾವಿಕರು ದೋಣಿಯನ್ನು ನಡೆಸುತ್ತಿದ್ದಾರೆ/ ಎಂದು ಹೇಳುತ್ತಾ ಸಹ್ಯಾದ್ರಿಯ ಸಾಲು ಬಲು ಚೆಂದ/ ಹಸುರಿನ ಪ್ರಕೃತಿಯಲ್ಲಿ ಶ್ರೀಗಂಧ/ ಇಳಿದಿದೆ ಸ್ವರ್ಗವು ಮೇಲಿಂದ/ ನೋಡುತ ತಣಿವೆ ಹುರುಪಿಂದ/ ಎಂದು ತನ್ನದೇ ಆದ ಚಿತ್ರಣವನ್ನು ನೇಯ್ದಿದ್ದಾಳೆ. ಸೂರ್ಯನನ್ನು ಇನ್ನೊಬ್ಬ ವಿದ್ಯಾರ್ಥಿನಿ ಪರಿಚಯಿಸಿರುವ ರೀತಿ ಹೀಗಿದೆ- ಹಗಲಿಡೀ ಸೂರ್ಯನಿಂದ ಬೆಳಕಿನ ಭಂಡಾರವೇ ಸಿಗುತ್ತಿದೆ. ಆತ ಉಸಿರನ್ನು ಕೊಡುವ ಕೆಲಸ ಮಾಡುತ್ತಾನೆ. ಇರುಳಲ್ಲಿ ಚಂದ್ರನಿಗೆ ಬೆಳಕನ್ನು ನೀಡುತ್ತಾನೆ. ಹಗಲಲ್ಲಿ ಉರಿ ಬಿಸಿಲನ್ನು ಕಾರುತ್ತಾ, ನಮ್ಮ ಕಣ್ಣು ಕುಕ್ಕುತ್ತಾನೆ. ತಾನು ಮೂಡುವ ಮತ್ತು ಮುಳುಗುವ ಸಮಯ ಎಂತಹವರನ್ನೂ ಆಕರ್ಷಿಸುವಂತೆ ಮಾಡುತ್ತಾನೆ ಎಂದು ಬಣ್ಣಿಸಿದ್ದಾನೆ.
ವಿದ್ಯಾರ್ಥಿಗಳ ದೃಷ್ಟಿಯಲ್ಲಿ ವಿವಿಧ ಹೂಗಳು ಹೇಗೆ ಕಾಣುತ್ತವೆ ಎನ್ನುವುದನ್ನು ‘ಹೂವು’ ಕವನದಲ್ಲಿ ಕಾಣಬಹುದು. ಹೂವನ್ನು ನೋಡಲು ಮನವು ಅರಳಿತು/ ಎಂಥಾ ಸೊಗಸು ಇದು/ ಈ ಹೂವಿನ ನೋಟದಿಂದ/ ತಾನು ಕ್ಲಾಸನ್ನೇ ಮರೆತು ಹೋದೆ/ ಎಂದು ಹೇಳಿಕೊಂಡಿದ್ದಾಳೆ. ಮಲ್ಲಿಗೆ ಬಿಳಿಬಿಳಿಯಾಗಿ, ಸಂಪಿಗೆ ಕೇಸರಿಯಲಿ, ಸೇವಂತಿಗೆ ಅರಿಶಿಣದಲ್ಲಿ, ಗೋರಂಟಿ ನೇರಳೆಯಲ್ಲಿ, ಗಂಟೆ ಹೂವು ಮಿಠಾಯಿ ಬಣ್ಣದಲ್ಲಿ, ಅಬ್ಬಲಿಗೆ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವುದನ್ನು ವಿವರಿಸಿದ್ದಾಳೆ.
‘ಕೂಲಿಯಿಂದ ಶಾಲೆಗೆ’ ಎನ್ನುವ ಕವನ ಮನಮುಟ್ಟುವಂತದ್ದು. ಇದರಲ್ಲಿ ಮಕ್ಕಳು ಸ್ಕೂಲಿಗೆ ಹೋಗದೆ ಶಾಲೆಗೆ ಬರುವ ಮೂಲಕ ಶಿಕ್ಷಣ ಕಲಿಯಬೇಕು. ಇದರಿಂದ ಮುಂದೆ ಉತ್ತಮ ಬಾಳನ್ನು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಗುಣಮಟ್ಟದ ಶಿಕ್ಷಣ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಏರಿಸುತ್ತದೆ ಎನ್ನುವುದನ್ನು ಸುಂದರವಾಗಿ ಕವನದಲ್ಲಿ ವಿವರಿಸಿದ್ದಾರೆ. ಪಾಲಕರು ತಮ್ಮ ಮಕ್ಕಳು ಮುಂದೇನಾಗುತ್ತಾರೆ ಎನ್ನುವುದನ್ನು ಚಿಂತಿಸದೆ ಅವರ ಕಲಿಕೆಗೆ ಸಹಾಯ ಮಾಡಬೇಕು. ಶಾಲೆಯಲ್ಲಿ ಬಿಸಿಊಟ ಇದೆ, ಒಳ್ಳೆಯ ಪಾಠವಿದೆ, ಎಲ್ಲವೂ ಉಚಿತವಿದೆ, ಗುಣಮಟ್ಟದ ಶಿಕ್ಷಣ ಇದೆ. ಇದರಿಂದ ಮಕ್ಕಳು ಎಲ್ಲರೂ ಮೆಚ್ಚುವ ಹಾಗೆ ಕಲಿಯುತ್ತಿದ್ದಾರೆ. ಬೆಳಕಿನತ್ತ ಹೆಜ್ಜೆ ಇಡುತ್ತಿದ್ದಾರೆ. ಶಾಲೆಯಿಂದ ಹೆಚ್ಚಿನ ತಿಳಿವಳಿಕೆಯನ್ನು ಪಡೆದು ಬಾಳನ್ನು ಸಾರ್ಥಕಗೊಳಿಸಲು, ಸನ್ಮಾರ್ಗದಲ್ಲಿ ಸಾಗಲು ಸಾಧ್ಯ. ಆದ್ದರಿಂದ ಮಕ್ಕಳು ಕೂಲಿಗೆ ಹೋಗದೆ ಶಾಲೆಗೆ ಹೋಗಬೇಕೆಂಬ ಉತ್ತಮ ಸಂದೇಶವನ್ನು ವಿದ್ಯಾರ್ಥಿನಿಯೊಬ್ಬಳು ನೀಡಿದ್ದಾಳೆ.
ಹೀಗೆ ಇಲ್ಲಿನ ಕವನಗೆಲ್ಲ ಉತ್ತಮ ಸಂದೇಶವನ್ನು ಮಕ್ಕಳಿಗೆ ನೀಡುತ್ತವೆ. ಬಾಲ್ಯದಲ್ಲೇ ಮಕ್ಕಳಿಗೆ ಇಂತಹ ಕೃತಿಗಳನ್ನು ಕೈಗಿತ್ತಲ್ಲಿ ಅವರಲ್ಲಿಯೂ ಇನ್ನಷ್ಟು ಸಾಹಿತ್ಯಾಸಕ್ತಿ ಬೆಳೆಯಲು, ಉದ್ದೀಪನಗೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ. ಎಳೆಯ ಮಕ್ಕಳ ಸೃಜನಶೀಲತೆಗೆ ಈ ಸಂಕಲನ ಸಾಕ್ಷಿ.
........................

Comments
Post a Comment