ಗುರುವನ್ನರಿಯುವ ಉತ್ಕಟ ಅಪೇಕ್ಷೆಯ
‘ಶರಣಾಗತಿ’
‘ಶರಣಾಗತಿ’ ಇದು ಲಾವಣ್ಯ ಶ್ರೀಕಾಂತ್ ಅವರ ಚೊಚ್ಚಲ ಕವನ ಸಂಕಲನ. ಇದರಲ್ಲಿ ಮಾತೃಪ್ರೇಮ, ಶರಣಾಗತಿ, ಭರವಸೆ ಇದೆ. ವಿರಹ ಭಾವಗಳ ಉತ್ಕರ್ಷದ ಅವಸ್ಥೆ, ಭಗವಂತನ ಸೇರುವ, ಗುರುವಿನಲ್ಲಿ ಸೇರುವ ಹಸಿವಿದೆ. ವಿರಹದ ನೋವಿದೆ, ಭಗವಂತನೊಂದಿಗೆ ನಾಳೆಯಾದರೂ ಸೇರಬಹುದು ಎಂಬ ಭರವಸೆ ಇದೆ. ಇಲ್ಲಿ ಲಿಂಗ ಮಿಲನದ ಭಾವಾಪೇಕ್ಷೆ ಅಲ್ಲ, ಇಲ್ಲಿ ಆತ್ಮಾರ್ಪಣೆಯ ಭಾವವಿದೆ. ಎಲ್ಲವನ್ನೂ ಭಗವಂತನಿಗೆ ಸಮರ್ಪಿಸಬೇಕೆಂಬ ಆದಮ್ಯ ಬಯಕೆ ಇದೆ. ಆತ್ಮದರ್ಶನದ ಸಣ್ಣ ಸೆಳಕಿದೆ. ಇಂಥ ಒಂದು ದಿವ್ಯ ಮಿಲನಕ್ಕೆ ಲಾವಣ್ಯ ಈ ಕವನ ಸಂಕಲನವನ್ನು ಬಳಸಿಕೊಂಡಿದ್ದಾರೆ.
ಕಲ್ಮಶಗಳನ್ನು ತೊಳೆದು ಹಾಕಿ ಪರಿಶುದ್ಧನಾಗಿ ಮಾಡುವ ಕೋರಿಕೆಯನ್ನು ಇಲ್ಲಿನ ಕವನಗಳಲ್ಲಿ ಕವಯಿತ್ರಿ ಭಗವಂತನ ಮುಂದೆ ಇಟ್ಟಿದ್ದಾರೆ. ಇದು ಒಂದು ಹೊಸ ಬೆಳಕನ್ನು ನೀಡುವ ಕೃತಿ. ಗುರುವಿನಲ್ಲಿ ಮಾತೃತ್ವವನ್ನು, ಮಾತೃತ್ವದಲ್ಲಿ ಗುರುವನ್ನು ಕಾಣಲು ಲೇಖಕಿ ಇಲ್ಲಿ ಹಂಬಲಿಸಿರುವುದು ಹೆಚ್ಚಿನ ಕವನಗಳಲ್ಲಿ ಕಂಡುಬರುತ್ತದೆ. ಗುರುವಿನ ಮಾರ್ಗದರ್ಶನದಿಂದ ಶ್ರೀಹರಿಯನ್ನು ಅರಿಯುವ ಉತ್ಕಟ ಅಪೇಕ್ಷೆ ಈ ಕವನದ ಸಾರವಾಗಿದೆ.
ನದಿ ಪಾಪ ಅಂದರೆ ಕಶ್ಮಲ ತೊಳೆಯುವ ತಾಯಿ. ಆದರೆ ಅವಳನ್ನು ಯಾರು ತೊಳೆಯುವರು ಎಂಬ ಪ್ರಶ್ನೆಯನ್ನು ‘ಅಪಘನಾಶಿನಿಯ ಅಳಲು’ ಕವನದಲ್ಲಿ ಕೇಳುತ್ತಾರೆ. ನಾವು ಮುಳುಗೆದ್ದ ಮಾತ್ರ್ರಕ್ಕೆ ಪಾಪಗಳು ತೊಳೆದು ಹೋದೀತೇ ಎಂದು ಪ್ರಶ್ನಿಸುತ್ತಾ, ಇವರ ಕಲ್ಮಶಗಳಿಂದ/ ಕಲುಷಿತಳಾದ ನಮ್ಮನ್ನು/ ಕಾಪಾಡುವವರಿಲ್ಲವೇ? ಎಂದು ಕೇಳುತ್ತಾರೆ.
ಬೇಲಿಯಲ್ಲಿ ಅರಳಿದ ಹೂವನ್ನು ಯಾರೂ ಗಣಿಸುವುದಿಲ್ಲ ಯಾಕೆ ಎಂದು ಕೇಳುತ್ತಾ, ಕೆಸರಲ್ಲರಳಿದರೂ/ ಕಮಲ ಪವಿತ್ರ/ ಬೇಲಿಯಲ್ಲರಳಿ ಕಂಗೊಳಿಸುವ/ ನಾನು ಅಪವಿತ್ರ/ ಎಂದು ತಾರತಮ್ಯ ಮಾಡುವ ಬಗ್ಗೆ ಹೇಳುವ ಕವಯಿತ್ರಿ, ನಮ್ಮೊಳಗಿನ ಭಾವಕ್ಕೆ ಬೆಲೆ ಇಲ್ಲದೆ ಹೋದರೆ ಇಂತಹ ಸಾಮಾನ್ಯ ಭಾವಗಳು ಅಂತರಾಳದ ವೇದನೆಗಳಾಗುತ್ತವೆ. ಮತ್ತು ಅವುಗಳಿಗೆ ಹೊರಗಣ ಸಮಾಧಾನ ಬೇಕಿಲ್ಲ. ಈ ನೋವುಗಳಿಗೆ ಒಳಗಿನ ಒಡೆಯ ಅಥವಾ ಒಬ್ಬ ಗುರುವನ್ನು ಅಪೇಕ್ಷಿಸುತ್ತಾರೆ. ಆದ್ದರಿಂದಲೇ ಅವರ ಕವಿತೆಗಳೆಲ್ಲ ಗುರುವಿನ ಮುಂದೆ ಬೆತ್ತಲಾಗಿಸುವ ಸ್ವಗತದ ಮೊರೆಹೋಗುತ್ತಾರೆ.
ಎಷ್ಟು ಕಷ್ಟಗಳನ್ನಾದರೂ ಸಹಿಸಿಯೇನು, ನಿನ್ನ ವಿರಹ ಒಂದನ್ನು ಉಳಿದು ಎಂಬ ಮುಕ್ತಿ ಸ್ಥಿತಿಯನ್ನು ‘ಮನವಿ’ ಎಂಬ ಕವನದಲ್ಲಿ ವಿವರಿಸುತ್ತಾರೆ. ಉಳಿಯ ಪೆಟ್ಟು ಎಷ್ಟಿರಲಿ/ ತಿನ್ನಲಣಿಯಾಗಿಹುದು/ ಕಲ್ಲ ಶಿಲೆಯಾಗಿಸಿ/ ಕಾಪಾಡು ಗುರುವೇ/ ಎಂದು ಕೋರುತ್ತಾರೆ. ಕಾರಣಗಳೆಲ್ಲವ ಮೆಟ್ಟಿ ನಾನು/ ಪಡೆದೇ ತೀರುವೆ ನಿನ್ನನು/ ಎಷ್ಟು ಅಡೆತಡೆಗಳೆದುರಾದರೂ/ ಯಾರು ತಡೆಯಬಲ್ಲರು ನನ್ನನ್ನು ಎಂದು ಪ್ರಶ್ನಿಸುತ್ತಾರೆ.
ಇನ್ನೊಂದು ಕವನದಲ್ಲಿ ಆಧ್ಯಾತ್ಮದ ಜೀವ ಮಾರ್ಗದ ಕೆಲವು ಕಠೋರ ತಪಸ್ಸುಗಳನ್ನು ತೋರಿಸಿದ್ದಾರೆ. ಯೋಗವೆಂದರೆ ಅವಯವಗಳ ತಿರುಚಿ/ ಮುರುಚಿ ಮಾಡುವ ಆಸನಗಳ/ ಸಮ್ಮಿಶ್ರಣವಲ್ಲವೋ ಮೂಢ/ ಆಂತರ್ಯದ ಹುಡುಕಾಟಕ್ಕೊದಗಿದ / ದಾರಿಯೂ ಆಗಬಹುದು/ ಎಂಬ ಪರಿಪೂರ್ಣ ಎಚ್ಚರವನ್ನು ನೀಡುತ್ತಾರೆ.
‘ಹಣತೆ’ ಎಂಬಲ್ಲಿ ಹಣತೆ ಪುಟ್ಟದಾದರೂ/ ಬೆಳಕು ಚಿಕ್ಕದೇ/ ಕಾರಿರುಳ ನಡಿಗೆಗೆ/ದಾರಿದೀಪವಾಗಲೂಬಹುದು ಎನ್ನುವ ಮೂಲಕ ಕಿರುಬೆಳಕು ಕತ್ತಲಲ್ಲಿ ನಮಗೆ ಆಧಾರವಾಗಬಹುದು ಎಂಬ ಸಂದೇಶ ನೀಡುತ್ತಾರೆ. ‘ಸುಮ್ಮನಾಗುವುದೆಂದರೆ’ ಯಲ್ಲಿ ನಮ್ಮೆಲ್ಲ ಕ್ಷಣಕ್ಷಣದ ಚಿತ್ತವೃತ್ತಿಗಳನ್ನೆಲ್ಲ ಕಡೆಗಣಿಸಿ, ಮನಸ್ಸಿನ ಕುಣಿತಗಳನ್ನೆಲ್ಲ ಸ್ಥಗಿತಗೊಳಿಸಿ ಸುಮ್ಮನಾಗುವುದು ಸುಲಭವಲ್ಲ. ತಣಿಯದ ಬಯಕೆಗಳು, ಆಂತರ್ಯದಿಂದ ಜ್ವಾಲಾಮುಖಿಯಂತೆ ಹೊರಬರುವ ವಿಷಗಳನ್ನು ಸುಮ್ಮನಿರಿಸಲು ಸಾಧ್ಯವೇ ಇಲ್ಲ. ನಮ್ಮ ಆಂತರ್ಯದಲ್ಲಿ ಪ್ರಶಾಂತ ಸರೋವರ ನಿರ್ಮಿಸುವುದು ಕಷ್ಟ ಎನ್ನುತ್ತಾರೆ.
‘ಜೀವದ ಜೀವ’ ಎಂಬಲ್ಲಿ ಶ್ರೀಕೃಷ್ಣನನ್ನು ವರ್ಣಿಸುತ್ತಾರೆ. ರಾಧೆಯ ಭಾವ ಒಂದೆಡೆಯಾದರೆ/ ಯಶೋದೆಯೂ ಆಗುವೆನಲ್ಲ/ ಏನು ಹೆಸರು ಕೊಡಲಿ ಈ ಭಾವೋತ್ಕರ್ಷಕ್ಕೆ/ ಎನ್ನುತ್ತಾ, ತನ್ನ ಜೀವದ ಜೀವ, ಭಾವ ಎಂದು ಕೊಂಡಾಡುತ್ತಾರೆ.
ಪ್ರಸ್ತುತ ಕವನ ಸಂಕಲದಲ್ಲಿ ಲಾವಣ್ಯ ಅವರು ಗುರುವಿನ ಸಮರ್ಪಣೆಗಾಗಿ ಕಾದು ಕುಳಿತಿದ್ದಾರೆ. ಗುರುವನ್ನು ನಂಬಿ ಅಪ್ಪಿಕೊಳ್ಳುವುದು ಪರಮ ಸಮರ್ಪಣೆ, ಈ ಸಮರ್ಪಣೆಯ ಹಿಂದೆ ಅಗಾಧ ಭಕ್ತಿ ಇದೆ ಎನ್ನುವುದನ್ನು ಸಾರುತ್ತ್ತಾರೆ. ಗುರುವಿನಲ್ಲಿ ಮಾತೃತ್ವವನ್ನೂ, ಮಾತೃತ್ವದಲ್ಲಿ ಗುರುವನ್ನೂ ಕಾಣಲು ಹಂಬಲಿಸಿದ್ದಾರೆ. ಗುರುವಿಗೆ ಸಂಪೂರ್ಣ ಶರಣಾಗತಿ, ಗುರುವಿನ ಮಾರ್ಗದರ್ಶನದಿಂದ ಶ್ರೀಹರಿಯನ್ನು ಅರಿಯುವ ಉತ್ಕಟ ಅಪೇಕ್ಷೆ ಈ ಎಲ್ಲ ಕವನಗಳ ಸಾರವಾಗಿದೆ.
..........................

Comments
Post a Comment