ಸ್ವಾತಂತ್ರ್ಯವೇ ಬಾಳಿನ ಬೆಳಕು
ಪೊನ್ನಮ್ಮಾಳ್ ಎಂಬ ಹೆಣ್ಣು ಹುಲಿ
ಭಾರತದ ಸ್ವಾತಂತ್ರ್ಯ ಚಳವಳಿಯ ಅಗ್ನಿಕುಂಡಕ್ಕೆ ಕರ್ನಾಟಕದಿಂದ ಧುಮುಕಿದ ಪ್ರಥಮ ಮಹಿಳೆ. ‘ದ ಹಿಂದು’ ವರದಿಗಾರರಾಗಿದ್ದ ತಂದೆ ಮಣಿ ಅವರಿಂದ ಸ್ವಾತಂತ್ರ್ಯ ದೀಕ್ಷೆ ಪಡೆದು ಅವರು ಸಾಗಿದ ಅಗ್ನಿಪಥದಲ್ಲಿ ದಿಟ್ಟವಾಗಿ ಮುನ್ನಡೆದವರು. ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಹೆಣ್ಣು ಹುಲಿಯಾಗಿ ಘರ್ಜಿಸಿದ ಹುಡುಗಿ. ಬ್ರಿಟಿಷ್ ಸರ್ಕಾರದ ಎದೆ ನಡುಗಿಸಿದ ಹಾಗೂ ಭೂಗತರಾಗಿ ಎರಡು ವರ್ಷ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರವೂ ಚಳವಳಿಗಳನ್ನು ನಿಲ್ಲಿಸದೆ ಹೋರಾಟಗಳಲ್ಲಿ ತೊಡಗಿಕೊಂಡು ಜೀವನ ಪರ್ಯಂತ ವಿವಿಧ ಚಳವಳಿಗಳ ಮೂಲಕ ಬದುಕಿದವರು. ಜನಪರವಾಗಿ ಹೋರಾಡಿದವರು. ಇವರೇ ಟಿ ಎಸ್ ಪೊನ್ನಮ್ಮಾಳ್.
ಇಂತಹ ಸ್ವಾತಂತ್ರ್ಯ ಹೋರಾಟಗಾರ್ತಿಯ ಜೀವನಗಾಥೆ ಬೆಳಕಿಗೆ, ಪ್ರಚಾರಕ್ಕೆ ಬರದೇ ಇರದಿರುವುದು ನಿಜಕ್ಕೂ ಬೇಸರದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದಿಗಳೇ ತುಂಬಿದ್ದ, ಚಳವಳಿಗಳ ತವರೂರಾದ ಮಲೆನಾಡಿನ ಶಿವಮೊಗ್ಗದಲ್ಲಿ ಈ ಚಳವಳಿಯನ್ನು ತನ್ನ ಒಡಲಿಗೆ ಹಾಕಿಕೊಂಡು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ ಧೀರ ಮಹಿಳೆ. ಶಾಂತವೇರಿ ಗೋಪಾಲಗೌಡರ ಒಡನಾಟದವರು. ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಚಳವಳಿ, ಸಮಾಜವಾದಿ ಹೋರಾಟ, ಕಾಗೋಡು ಹೋರಾಟ, ಕುದುರೆಮುಖ ಗಣಿಗಾರಿಕೆ ವಿರುದ್ಧದ ಹೋರಾಟ, ತುಂಗಾ ಮೂಲ ಉಳಿಸಿ ಚಳವಳಿ... ಒಂದೇ ಎರಡೇ? ಇಡೀ ಬದುಕೇ ಇವರಿಗೆ ಕೆಂಡ ಹಾಸಿಗೆಯ ದಾರಿ. ಕುಸಿಯದೆ, ಕುಗ್ಗದೆ, ಛಲದಿಂದ ಮುನ್ನಡೆದ ಗಂಡುಗುಂಡಿಗೆಯ ನಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ಪಿ ಎಸ್ ಪೊನ್ನಮ್ಮಾಳ್ (ಪೊನ್ನಮ್ಮ) ಬಾಲ್ಯದಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಜನರ ಒಳಿತಿಗಾಗಿ ದುಡಿದವರು. ಪ್ರತಿಯೊಬ್ಬರ ಮನಸ್ಸಿನಲ್ಲಿ ಜೀವಂತವಾಗಿರುವ ಹೆಸರು ಪೊನ್ನಮ್ಮಾಳ್.
ಕ್ರಾಂತಿಕಾರಿ ಕವಿ ವರವರ ರಾವ್ ಹೇಳಿದ ಮಾತೊಂದಿದೆ- ‘ತನ್ನ ಸ್ವಾರ್ಥಕ್ಕಾಗಿ ಸಾಯುವುದು ಹಕ್ಕಿಯ ಗರಿಯಷ್ಟು ಹಗುರವಾದದು. ಆದರೆ ಜನರ ವಿಮೋಚನೆಗಾಗಿ ಸಾಯುವುದು ಹಿಮಾಲಯ ಪರ್ವತದಷ್ಟು ಭಾರವಾದುದು’. ಇದಕ್ಕೆ ಅತ್ಯುತ್ತಮ ಉದಾಹರಣೆ ಟಿ ಎಸ್ ಪೊನ್ನಮ್ಮಾಳ್. ೧೯೨೩ರಲ್ಲಿ ತುಮಕೂರಿನ ಮಧುಗಿರಿಯಲ್ಲಿ ಪೊನ್ನಮ್ಮ ಜನನ. ನಂತರ ಅವರ ಕುಟುಂಬ ನೆಲೆಸಿದ್ದು ಶಿವಮೊಗ್ಗದಲ್ಲಿ. ಖಾದಿ ಪರಿಚಯಿಸಿ ಖಾದಿ ಭಂಡಾರ ನಡೆಸುತ್ತಿದ್ದ ತಂದೆ ಮಣಿ ಅವರ ಚಿಂತನೆಗಳು ಬಾಲ್ಯದಲ್ಲಿ ಮಗಳನ್ನು ಪ್ರಭಾವಿಸಿದ್ದವು. ಹೆಗಲ ಮೇಲೆ ಖಾದಿ ಬಟ್ಟೆ ಹಾಕಿಕೊಂಡು ತಂದೆಯೊಂದಿಗೆ ಹಳ್ಳಿಗಳಿಗೆ ವ್ಯಾಪಾರಕ್ಕೆ ಹೋಗುತ್ತಿದ್ದರು. ಆ ಕಾಲದಲ್ಲಿ ಸೇವಾದಳಕ್ಕೆ ಸೇರಿ ಹುಡುಗರೊಂದಿಗೆ ಒಬ್ಬಳೇ ಹುಡುಗಿ ಲಾಠಿ, ಕತ್ತಿ ಒರಸೆ ಕಲಿತಿದ್ದವರು. ಬಿ. ಎಸ್‌ಸಿ ಓದುತ್ತಿದ್ದಾಗ ಕ್ವಿಟ್ ಇಂಡಿಯಾ ಚಳವಳಿಗೆ ಕರೆಗೆ ಓಗೊಟ್ಟು ೧೯೪೨ ರಲ್ಲಿ ಚಳವಳಿಗೆ ಧುಮುಕಿದವರು. ಅಲ್ಲಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೆಲವು ಕಾಲ ಭೂಗತರಾಗಿದ್ದುಕೊಂಡು ಕರಪತ್ರ ಹಂಚುವುದು, ಚಳವಳಿಗಳಿಗೆ ಹಣ ಸಂಗ್ರಹದ ಕೆಲಸ ಮಾಡುವುದು, ಚಳವಳಿಕಾರರಿಗೆ ಗುಪ್ತವಾಗಿ ಮಾಹಿತಿ ಕೊಡುತ್ತಿದ್ದರು. ಸದಾ ಪೊಲೀಸರಿಗೆ ಬೇಕಾದವರು. ನಂತರ ಆಂದೋಲನದಲ್ಲಿ ಬಂಧಿತರಾಗಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಎರಡು ವರ್ಷ ಜೈಲುವಾಸ ಅನುಭವಿಸಿದ್ದರು. ಅಲ್ಲಿಂದ ವಾಪಸ್ ಬಂದ ನಂತರ ಶಿವಮೊಗ್ಗದ ಹೋರಾಟದಲ್ಲಿ ಮತ್ತೆ ಜೈಲುವಾಸ ಅನುಭವಿಸಿದರು. ಆಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯೇ ಜೈಲಾಗಿತ್ತು. ಮಹಿಳಾ ಖೈದಿಗಳು ಜಾಸ್ತಿಯಾಗಿದ್ದರಿಂದ ಜೈಲಿನಲ್ಲಿ ಮಹಿಳಾ ಹೋರಾಟಗಾರರಿಗಾಗಿ ಎರಡು ರೂಮು ಕಟ್ಟಿಸಲಾಗಿತ್ತು. ಹೆಂಗಸರೆಲ್ಲರನ್ನು ಬಿಟ್ಟ ನಂತರ ಮತ್ತೆ ಒಟ್ಟಾಗಿ ಜಿಲ್ಲಾಧಿಕಾರಿ ಕಚೇರಿಯ ಗೇಟ್ ಮುರಿದು, ಪೊಲೀಸರನ್ನು ನೂಕಿ ಕೆಡವಿ, ಮತ್ತೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಮತ್ತೆ ಎಲ್ಲರನ್ನೂ ಬಂಧಿಸಿ ಬೆಂಗಳೂರಿನ ಜೈಲಿಗೆ ಕಳುಹಿಸಲಾಗಿತ್ತು. ಅದರೆ ಎರಡೇ ತಿಂಗಳಲ್ಲಿ ಸ್ವಾತಂತ್ರ್ಯ ಘೋಷಣೆ ಆಗಿದ್ದರಿಂದ ಜೈಲಿನಿಂದ ಹೊರಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಗಾಂಧೀಜಿಯವರಿಂದ ಚರಕ ಉಡುಗೊರೆ ಪಡೆದಿದ್ದರು. ಕಾರ್ಯಕ್ರಮ ಒಂದರಲ್ಲಿ ಸಾವರ್ಕರ್ ತಲೆಗೆ ಕೆಂಪು ಟೋಪಿ ತೊಡಗಿಸಿದ್ದರು. ಇವೆಲ್ಲ ಅವರ ಗರಿಮೆಯಾಗಿತ್ತು.
ಮಲೆನಾಡಿನ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ಕಿಚ್ಚನ್ನು ಹಚ್ಚಿದವರಲ್ಲಿ ಹೊನ್ನಮ್ಮ ಸಹ ಒಬ್ಬರು. ಅಂದಿನ ದಿನಗಳಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವುದು ಸುಲಭವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ವಿದೇಶಿ ವಸ್ತುಗಳ ಬಹಿಷ್ಕಾರ, ಈಚಲು ಮರ ಕಡಿತ, ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ನಿಷೇಧ, ಖಾದಿ ಮಾರಾಟ, ವಿದ್ಯಾರ್ಥಿ ಸಂಘಟನೆ ಮುಂತಾದವುಗಳನ್ನು ನಿರಂತರವಾಗಿ ಮಾಡುತ್ತಿದ್ದರು.
ಸ್ವಾತಂತ್ರ್ಯಾನಂತರವೂ ಚಳವಳಿ:
೧೯೭೦ರ ದಶಕದಲ್ಲಿ ಶಿವಮೊಗ್ಗ ತಾಲೂಕು ಬೋರ್ಡ್ ಸದಸ್ಯರಾಗಿ ಹಳ್ಳಿಗಳಿಗೆ ಓಡಾಡಿ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಮಹಿಳಾ ಸಮಾಜವನ್ನು ಸ್ಥಾಪಿಸಿ ಮಹಿಳಾ ಮಂಡಳಿಯನ್ನು ಆರಂಭಿಸಿದ್ದರು. ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಪರ ಚಳವಳಿಗಳನ್ನು ನಡೆಸುತ್ತಿದ್ದರು. ೧೯೯೪ ರಲ್ಲಿ ನಡೆದ ತುಂಗಾ ಮೂಲ ಉಳಿಸಿ ಹೋರಾಟದಿಂದ ಹಿಡಿದು ೨೦೦೩ರ ವರೆಗೆ ನಡೆದ ತುಂಗಭದ್ರ ಉಳಿಸಿ ಹೋರಾಟದವರೆಗೂ ಸಕ್ರಿಯ ಪಾತ್ರ ವಹಿಸಿದವರು. ಕುದುರೆಮುಖ ಗಣಿಗಾರಿಕೆ ನಿಲುಗಡೆಯ ಹೋರಾಟವನ್ನು ಸಹ ಸಮರ್ಪಕವಾಗಿ ನಿರ್ವಹಿಸಿದವರು. ಸರ್ಕಾರದ ಕಡೆಯಿಂದ ದೌರ್ಜನ್ಯ ನಡೆದರೆ ಅವರ ಮೊದಲ ಗುಂಡಿಗೆ ನಾನೇ ಬಲಿಯಾಗುತ್ತಾನೆ ಎಂದು ಎದೆಗೊಟ್ಟು ಕಣದಲ್ಲಿ ನಿಂತಿದ್ದರು.
ಅಹಿಂಸಾವದಿಯಾಗಿ, ಗಾಂಧೀವಾದಿಯಾಗಿ, ಪೊನ್ನಮ್ಮ ನುಡಿದಂತೆ ನಡೆದವರು. ಕರ್ಮಜೀವಿಯಾಗಿ ಬದುಕಿ ಸಮಾಜದ ಬಗ್ಗೆ ಚಿಂತಿಸುತ್ತಲೇ ೮೮ ವರ್ಷದ ಸಾರ್ಥಕ ಜೀವನ ನಡೆಸಿದವರು. ಶಿಸ್ತು, ಸಮಯ, ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ರಸ್ತೆಗಿಳಿದು ಅನ್ಯಾಯದ ವಿರುದ್ಧ, ಹಿಂದುಳಿದವರ, ಬಡವರ, ಮಹಿಳೆಯರ, ಕಾರ್ಮಿಕರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಿದ್ದರು. ಮಹಾತ್ಮ ಗಾಂಧಿಯವರನ್ನು ಸದಾ ನೆನಪಿಸಿಕೊಳ್ಳುತ್ತಿದ್ದ ಅವರು ಹೋರಾಟಕ್ಕೆ ಗಾಂಧೀಯೇ ಸ್ಫೂರ್ತಿ ಎನ್ನುತ್ತಿದ್ದರು. ಮಹಿಳೆಯರ ಕಷ್ಟ -ಸಂಕಷ್ಟಗಳಿಗೆ ನೆರವಾದವರು. ಕರ್ನಾಟಕದಲ್ಲಿ ನಡೆದ ಉಳುವವನೇ ಹೊಲದೊಡೆಯ, ಗೇಣಿದಾರರ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದಿಟ್ಟ ಸಮಾಜವಾದಿ ಎಂಬ ಬಿರುದನ್ನು ಸಹ ಮಾತ್ರ ವಾತ್ಸಲ್ಯದ ಪೊನ್ನಮ್ಮ ಪಡೆದಿದ್ದರು.
ಸರ್ಕರದ ಯಾವುದೇ ಸಹಾಯ ಬೇಡ:
ಸ್ವಾತಂತ್ರ್ಯ್ರ ಹೋರಾಟಗಾರರಿಗಾಗಿ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರೂ ಅದನ್ನು ಕೊನೆಯವರೆಗೂ ಪೊನ್ನಮ್ಮ ಪಡೆಯಲಿಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಸರ್ಕಾರ ಪೆಟ್ರೋಲ್ ಬಂಕ್ ಸ್ಥಾಪಿಸಲು ಅನುಮತಿ ಕೊಡುತ್ತಿತ್ತು. ಪೊನ್ನಮ್ಮ ಇದರ ಲಾಭ ಪಡೆಯಲಿಲ್ಲ. ಇವರ ಹೆಸರಿನಲ್ಲಿ ಮಹಿಳೆಯೊಬ್ಬರು ತನಗೆ ಪೆಟ್ರೋಲ್ ಬಂಕ್ ಕೊಡಿಸಿ ಎಂದು ಕೇಳಿದ್ದಕ್ಕೆ ಚೆನ್ನಾಗಿ ಬೈದಿದ್ದರು. ಸರ್ಕಾರದ ಯಾವುದೇ ಸಹಾಯಕ್ಕ್ಕೂ ನಾನು ಕೈ ಚಾಚುವುದಿಲ್ಲ ಎಂದು ದೃಢವಾಗಿ ಹೇಳಿದ್ದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವು ಆಡಳಿತ ನಾಶ ಮಾಡುತ್ತವೆ ಎನ್ನುವ ನಿಲುವು ಅವರದಾಗಿತ್ತು.
ಗಾಂದಿ, ಅಂಬೇಡ್ಕರ್, ಲೋಹಿಯ, ಮಾರ್ಕ್ಸ್, ಮಾವೋ ಇವರೆಲ್ಲರೂ ಅವರಿಗೆ ಇಷ್ಟದ ವ್ಯಕ್ತಿಗಳಾಗಿದ್ದರು. ಶಿಕ್ಷಣ, ರಾಜಕೀಯ, ಭ್ರಷ್ಟಾಚಾರ, ಸ್ತ್ರೀಯರ ಸ್ಥಿತಿಗತಿ ...ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ತಮ್ಮ ಅನುಭವದ ಮೂಸೆಯಲ್ಲಿ ಸೈದ್ಧಾಂತಿಕವಾಗಿ ಮಾತನಾಡುತ್ತಿದ್ದರು ಮತ್ತು ಚರ್ಚೆ ಮಾಡುತ್ತಿದ್ದರು. ಪ್ರಾಮಾಣಿಕತೆಯ ಹೋರಾಟದ ಬದುಕನ್ನು, ಸರಳ ಸಜ್ಜನಿಕೆಯ ಜೀವನವನ್ನು ಅವರು ನಡೆಸಿದವರು. ಜೀವಮಾನದಲ್ಲಿ ಅವರು ಗಳಿಸಿದ ಜನಪ್ರಿಯತೆ, ನಡೆಸಿದ ಸರಳ ಜೀವನ, ದಿಟ್ಟ ಹಾಗೂ ನೇರ ಬದುಕು, ಸವೆಸಿದ ತಪೋಮಾರ್ಗ, ಮಾಡಿದ ಸಮಾಜ ಸೇವೆ ಇವೆಲ್ಲ ಅವಿಸ್ಮರಣೀಯ.
ಅವಿವಾಹಿತೆಯಾಗಿದ್ದ ಅವರು ೨೦೦೮ರಲ್ಲಿ ಇಹಲೋಕ ತ್ಯಜಿಸಿದರು. ಸದಾ ಶ್ವೇತವರ್ಣದ ಸೀರೆಯುಟ್ಟು, ಶುದ್ಧ ಮನಸ್ಸಿನಿಂದ, ಸಮಾಜದಲ್ಲಿ ನಿಸ್ವಾರ್ಥತೆಯಿಂದ ಏನನ್ನೂ ನಿರೀಕ್ಷಿಸದೆ ಸೇವೆಯನ್ನು ಮಾಡಿ ಮಹಿಳೆ. ತಮ್ಮ ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದವರು. ಛಲ, ದೃಢತೆ ಹೊಂದಿದವರಿಗೆ ಧೈರ್ಯ ತುಂಬುವ ಕೆಲಸವನ್ನು ಕೊನೆಯವರೆಗೂ ಪೊನ್ನಮ್ಮ ಮಾಡಿದರು. ವಿವಿಧ ಚಳವಳಿಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ನಿರಂತರವಾಗಿ ಪಾಲ್ಗೊಂಡರು. ಅವರ ಹೆಸರೇ ಯುವ ಪೀಳಿಗೆಗೆ ಇಂದಿಗೂ ಸದಾ ಸ್ಫ್ಪೂರ್ತಿ. ಹಳೇಬೇರಿನ ಸತ್ವದಿಂದ ಹೊಸ ಚಳವಳಿಗಳು ಹೊಸ ಚಿಗುರನ್ನು ಪಡೆಯಬೇಕು ಎನ್ನುವುದು ಅವರ ಮಾತಾಗಿತ್ತು.
,,,,,,,,,,,,,,,,,,,,,,,,,,,,,

Comments
Post a Comment