ಮಾನಸಿಕ ಒತ್ತಡಕ್ಕೆ  ಪರಿಹಾರ ನೀಡುವ ಕೃತಿ

‘ಮಾನಸಿಕ ಒತ್ತಡದಿಂದ ಪಾರಾಗುವುದು ಹೇಗೆ?’



ಪ್ರಸ್ತುತ ಕೃತಿ ದಿನವಿಡೀ ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿರುವವರಿಗೆ ಒಂದು ಪರಿಹಾರವನ್ನು ನೀಡುವಂತದ್ದು. ಮಾನಸಿಕ ಒತ್ತಡ ಎಂದರೇನು? ಸಮಾಜ ಆಧುನಿಕವಾಗುತ್ತಿರುವಂತೆ ಮಾನಸಿಕ ಒತ್ತಡದ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿರುವುದೇಕೆ? ೨೦ನೇ ಶತಮಾನದ ಹಲವಾರು ಪಿಡುಗುಗಳಲ್ಲಿ ಮಾನಸಿಕ ಒತ್ತಡ ಪ್ರಮುಖವಾದದ್ದು ಏಕೆ? ಇಂಥ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲವೇ? ಅವುಗಳನ್ನು ತಡೆಗಟ್ಟಿ ನಿರಾಳರಾಗಲು ಹೇಗೆ ಸಾಧ್ಯ ಎನ್ನುವುದನ್ನು ಈ ಕೃತಿ ವಿವರಿಸುತ್ತದೆ.

 ಈ ಕೃತಿಯನ್ನು ಧಾರವಾಡ ಪ್ರೊ. ಆರ್ ವಿ ಕಟ್ಟಿಮನಿ ರಚಿಸಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವ ಪದ ಸ್ಟ್ರೆಸ್. ಕನ್ನಡದಲ್ಲಿ ಮಾನಸಿಕ ಒತ್ತಡ ಎಂದು ಇದನ್ನು ಅರ್ಥೈಸುತ್ತಾರೆ. ಈ ಸಮಸ್ಯೆ ಆಧುನಿಕ ಮಾನವನನ್ನು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಕಾಡತೊಡಗಿದೆ. ಆಧುನಿಕ ಜೀವನ ಹಲವಾರು ಅನಿವಾರ್ಯ ಒತ್ತಡಗಳನ್ನು ಹೇರುತ್ತಿದೆ.  ಅದರ ಪ್ರಭಾವ ಹೆಚ್ಚು ಕಡಿಮೆ ಇಡೀ ಕುಟುಂಬದ ಮೇಲೆ ಎದುರಾಗುತ್ತ್ತಿದೆ. ಅಂತಹ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಮಾರ್ಗೋಪಾಯಗಳು ಸಾಕಷ್ಟು ರೂಪುಗೊಂಡಿವೆ.

 ಮನಸ್ಸನ್ನು, ಶರೀರವನ್ನು, ನಿರ್ಮಲಗೊಳಿಸಲು ನೆರವಾಗುವಂತಹ ಹಲವಾರು ಉಪಯುಕ್ತ ವಿಧಾನಗಳ ಬಗ್ಗೆ ಸರಳವಾಗಿ, ವಿವರವಾಗಿ, ಅಧಿಕೃತವಾಗಿ, ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಲೇಖಕರು ಇಲ್ಲಿ ವಿಚಾರ ಮಂಡಿಸಿದ್ದಾರೆ. ಇದು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಬಳಿಯೂ ಇರಬೇಕಾದ ಸ್ವಸಹಾಯದ ಗೈಡ್ ಎಂದು ಹೇಳಬಹುದು. ಕೃತಿಯಲ್ಲಿ ಒಟ್ಟು ೨೨ ಕಿರು ಲೇಖನಗಳಿವೆ.

 ಯಾವುದಾದರೂ ಒಂದು ವಿಪತ್ತಿನ ಘಟನೆ ಅಥವಾ ಸನ್ನಿವೇಶ ಎದುರಾದಾಗ ನಮ್ಮ ಮನಸ್ಸು ತಲ್ಲಣಿಸುತ್ತದೆ. ಮನಸ್ಸು ಹೀಗೆ ಪದೇ ಪದೇ ಒತ್ತಡಕ್ಕೆ ಸಿಲುಕಿದರೆ ಆ ವ್ಯಕ್ತಿ ಕುಸಿಯುತ್ತಾನೆ. ಜೊತೆಗೆ ಅಜೀರ್ಣ, ತಲೆನೋವು,  ರಾತ್ರಿ ನಿದ್ದೆ ಬಾರದಿರುವುದು, ಕೆಲಸದ ಮೇಲೆ ಗಮನ ಇಲ್ಲದಿರುವುದು ಮುಂತಾದ ಅವಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರೊಟ್ಟಿಗೆ ನಿರುದ್ಯೋಗ, ನೌಕರಿಯಲ್ಲಿನ ಕಿರಿಕಿರಿ, ಸಂಸಾರದಲ್ಲಿನ ಕಲಹ, ತಿಕ್ಕಾಟ, ಲೈಂಗಿಕ ಜೀವನದಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ, ಯಶಸ್ಸು ಸಾಧಿಸುವುದು ಅಥವಾ ಸೋಲನ್ನು ಅನುಭವಿಸುವುದು ಉಂಟಾಗುತ್ತವೆ. ಇವೆಲ್ಲವೂ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

 ಈ ಒತ್ತಡಕ್ಕೆ ನೂರೆಂಟು ಕಾರಣಗಳಿರುತ್ತವೆ. ಬದುಕನ್ನು ಅನುಭವಿಸಲು ನಿರಾಳ ಮನಸ್ಸು ಅಗತ್ಯ. ಇದಿಲ್ಲದಿದ್ದರೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಆಗ ಸಾಮಾನ್ಯವಾಗಿ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದಕ್ಕೆ ಶರಣಾಗುತ್ತಾನೆ, ಪದೇ ಪದೇ ಅಸ್ವಸ್ಥತೆಗೆ ಒಳಗಾಗುತ್ತಾನೆ. ಜೀವನದಲ್ಲಿ ಹೊಸ ಸಮಸ್ಯೆ ಏನಾದರೂ ಇಣುಕುವುದು ಕಂಡು ಬರಲಾರಂಭಿಸುತ್ತದೆ.

ನಿವಾರಣಾ ಮಾರ್ಗ: 

 ಒತ್ತಡ ಬಿಡುಗಡೆಗೆ ಮಾರ್ಗೋಪಾಯ ಎಂದರೆ ಯಾವುದಾದರೂ ಒಂದು ಘಟನೆ ನಮ್ಮನ್ನು ಕುಗ್ಗಿಸುತ್ತಿರುವಾಗ ನಮ್ಮ ಶಕ್ತಿ ಯುಕ್ತಿಗಳನ್ನು ಬಳಸಿ ಎದುರಿಸಬೇಕು. ಇಲ್ಲವಾದಲ್ಲಿ ಅದರಿಂದ ಪಕ್ಕಕ್ಕೆ ಸರಿಯಬೇಕು. ಇದು ಆಯಾಯ ವ್ಯಕ್ತಿಗಳ ವ್ಯಕ್ತಿತ್ವ, ಸ್ಥಿತಿಗತಿ ಮೇಲೆ ಅವಲಂಬಿತವಾಗಿದೆ. ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿದ್ದಷ್ಟು ಹೊಸತನಕ್ಕೆ ಹೊಂದಿಕೊಂಡು ಬಾಳಬಲ್ಲವನಾಗುತ್ತಾನೆ. ಆತ್ಮವಿಶ್ವಾಸದಿಂದ ಸಂದರ್ಭವನ್ನು ಎದುರಿಸಿ ನಿಂತರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒತ್ತಡ ಎದುರಾದಾಗ ಮನಸ್ಸಿನ ಮೇಲೆ ಜಯ ಸಾಧಿಸಬೇಕು. ಸಮಸ್ಯೆ ಗ್ರಹಿಸಿ ನಿರ್ನಾಮ ಮಾಡಲು ಪ್ರಯತ್ನಿಸಬೇಕು. ವಿವೇಕವನ್ನು ಹೊಂದಬೇಕು. ಜೀವನಾನುಭವ, ಆತ್ಮೀಯರ ಒಡನಾಟ, ಸಮಾಧಾನದ ಚಿತ್ತ ಅಥವಾ ಕೌನ್ಸಿಲಿಂಗ್ ಮುಂತಾದವುಗಳ ಮೊರೆಯನ್ನು ಹೋಗಬಹುದು.

   ಭಯ ಮುಂತಾದವುಗಳು ಎದುರಾದಾಗ ಪ್ರಶಾಂತ ಚಿತ್ತವನ್ನು ರೂಢಿಸಿಕೊಳ್ಳಬೇಕು. ವಿಷಾದ ಸಂದರ್ಭದಲ್ಲಿ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುವುದು ಉತ್ತಮ. ಸರಳ ಜೀವನ ಪದ್ಧತಿ ಬದುಕಿನಲ್ಲಿ ಎದುರಾಗುವ ಒತ್ತಡಗಳನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭದಲ್ಲಿ ರಕ್ಷಣಾತ್ಮಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಮಸ್ಯೆಯನ್ನು ಅಥವಾ ಒತ್ತಡವನ್ನು ಅಂಗೀಕರಿಸದೆ ಅದರಿಂದ ತಪ್ಪಿಸಿಕೊಳ್ಳಬೇಕು. ಬೇರೆ ವಿಷಯದತ್ತ ಮನಸ್ಸು ಹೊರಳಿಸಬೇಕು. ನಮ್ಮಲ್ಲಿನ ಸಿಟ್ಟು -ಸಿಡುಕುಗಳನ್ನು ಬೇರೆಯವರತ್ತ ಹೊರಳಿಸಬೇಕು. ತನ್ನಿಂದ ಸಾಧಿಸಲಾಗದ ಸಾಧನೆ, ಯಶಸ್ಸುಗಳನ್ನು ತಾನೇ ಸಾಧಿಸಿದಂತೆ ಹಗಲುಗನಸು ಕಾಣಬೇಕು. ಕನಸು ಕಾಣುವ ಬದಲಿಗೆ ಯಶಸ್ಸು ತನ್ನ ಕೈಲಿದೆ ಎಂದು ಕಲ್ಪಿಸಿಕೊಳ್ಳಬೇಕು. ಇತರರು ಮಾಡಿದ ಅನ್ಯಾಯದಿಂದ ಅವರ ಮೇಲೆ ಸಿಟ್ಟು ಬಂದಾಗ ಆ ಸಿಟ್ಟನ್ನು ನಮ್ಮ ಮೇಲೆ ಪ್ರದರ್ಶಿಸಿಕೊಳ್ಳಬೇಕು. ನಮ್ಮ ಲೋಪ ದೋಷ ದೌರ್ಬಲ್ಯಗಳನ್ನು ಬೇರೆಯವರ ಮೇಲೆ ಹಾಕಬೇಕು. ನಾನು ಮಾಡುವ ಕೆಟ್ಟ ಕೆಲಸವನ್ನು ಅಥವಾ ಅದರಿಂದ ಪಾರಾಗಲು ವ್ಯವಸ್ಥೆ , ಸಮಾಜ ಅಥವಾ ಬೇರೆ ವ್ಯಕ್ತಿಗಳ ವಿರುದ್ಧ ಪ್ರದರ್ಶಿಸಬೇಕು. ಪರಿಸ್ಥಿತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅದರಿಂದ ದೂರವಾಗುವುದು ಉತ್ತಮ. ಅಶ್ಲೀಲ ಮಾತು, ಜೋಕ್ಸ್ ಮೂಲಕ ಹೊರಹಾಕುವುದರಿಂದಲೂ ಅಪಾಯಕಾರಿ ಬಯಕೆಗಳನ್ನು, ಅದರ ಉದ್ವಿಗ್ನತೆಯನ್ನು ತಗ್ಗಿಸಿಕೊಳ್ಳಬಹುದು.

ಕೌಟುಂಬಿಕ ಜೀವನದ ಒತ್ತಡ:

ಕೌಟುಂಬಿಕ ಜೀವನ ಒತ್ತಡ ವಿಮೋಚನೆ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀರುತ್ತದೆ.  ಮಕ್ಕಳ ಪಾಲನೆ ಅಥವಾ ಗಂಡ ಹೆಂಡತಿಯ ನಡುವಿನ ಅಧಿಕಾರ ಎದುರಾದಾಗ ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು. ಗಂಡ ಅಥವಾ ಹೆಂಡತಿ ಯಾರಾದರೂ ಒಬ್ಬರು ಸ್ವಲ್ಪ ಶಾಂತಿ -ಸಮಾಧಾನ ಹೊಂದಿದ್ದರೆ ಇದರಿಂದ ದೂರವಾಗಬಹುದು. ಇಲ್ಲವೇ ಯಾರಾದರೂ ಒಬ್ಬರು ಅಲ್ಲಿಂದ ಎದ್ದು ಹೋಗಿಬಿಡುವುದು ಒಳ್ಳೆಯದು. ಹೆಂಡತಿ ಅಥವಾ ಮಕ್ಕಳ ಮೇಲೆ ಸಿಟ್ಟು ಬಂದಾಗ, ಅವರ ಮೇಲೆ ರೇಗಬೇಕು ಎನಿಸಿದಾಗ ತಕ್ಷಣ ಹೊರಗೆ ಹೋಗಿ ಶಾಂತ ಮನಸ್ಸಿನಿಂದ ನಡಿಗೆಯನ್ನು ಮಾಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಸಿಟ್ಟು ಬಂದಾಗ ಉಳಿದವರು ಸಹಾನುಭೂತಿ, ಸಹಕಾರ ತೋರಿಸಬೇಕು. ಮನೆಯ ಸದಸ್ಯರು ತಮ್ಮ ತಮ್ಮ ಕೋಪ ತಾಪಗಳನ್ನು ತಮ್ಮಲ್ಲಿ ಮುಚ್ಚಿಟ್ಟುಕೊಂಡಿರದೆ  ಮನ ಬಿಚ್ಚಿ ಮಾತನಾಡಿ ಪರಿಹರಿಸಿಕೊಳ್ಳುವ  ವಾತಾವರಣವಿರಬೇಕು. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು .

 ಆರ್ಥಿಕ ಒತ್ತಡ

ಆರ್ಥಿಕತೆ ಬದುಕಿನಲ್ಲಿ ಸುಖ -ಸೌಲಭ್ಯಗಳನ್ನು ಒದಗಿಸಿದಂತೆ ಅತ್ಯಧಿಕ ಒತ್ತಡವನ್ನು ಮನುಷ್ಯನಿಗೆ ತಂದೊಡ್ಡುತ್ತದೆ. ಇದಕ್ಕೆ ಬಡವ, ಬಲ್ಲಿದ ಎನ್ನುವುದು ಇಲ. ಮನುಷ್ಯನ  ಮಾನ -ಮರ್ಯಾದೆ -ಜಂಬ -ಅಪಮಾನ- ಪ್ರತಿಷ್ಠೆ ಇವೆಲ್ಲವೂ ದುಡ್ಡಿನೊಂದಿಗೆ ತುಳುಕು ಹಾಕಿಕೊಂಡಿವೆ. ಹೀಗಿರುವಾಗ ಈ ಆರ್ಥಿಕ ಒತ್ತಡವನ್ನು ಹೇಗೆ ಮಾಡಬೇಕೆಂದರೆ  ಬಜೆಟ್ ಅನ್ನು ತಯಾರಿಸಿಕೊಳ್ಳಬೇಕು. ಸಂಪಾದನೆ ಮತ್ತು ಖರ್ಚು ಬರೆದಿಡಬೇಕು. ಪ್ಲಾನಿಂಗ್ ಮಾಡುವಾಗ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ತಯಾರಿಸಿದರೆ ಸಮಸ್ಯೆ ಎದುರಾಗುವುದಿಲ್ಲ 

  ಮನುಷ್ಯನಿಗೆ ಆತ್ಮವಿಶ್ವಾಸ ಎನ್ನುವುದು ಒಂದು ವರ. ಅದು ಮನುಷ್ಯನನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ. ಆತ್ಮವಿಶ್ವಾಸದಿಂದ ಇದ್ದಷ್ಟು ಅಪರಾಧಿಪ್ರಜ್ಞೆ, ಅಭದ್ರತೆಯ ಭಾವನೆ ಕಡಿಮೆಯಾಗುತ್ತದೆ. ಇಂತಹ ವ್ಯಕ್ತಿ ಯಾರು ಏನು ಹೇಳಿದರೂ ಅದನ್ನು ಪೂರ್ಣವಾಗಿ ನಂಬುವುದಿಲ್ಲ. ಯಾವುದೇ ಪ್ರಭಾವಗಳಿಗೆ ಶರಣಾಗುವುದಿಲ್ಲ. ತಾನು ನಂಬಿದ ಸಿದ್ಧಾಂತಗಳಿಗೆ ಕಟ್ಟುಬಿದ್ದಿರುತ್ತಾನೆ. ಇಲ್ಲಸಲ್ಲದ ತಂಟೆಗೆ ಹೋಗುವುದಿಲ್ಲ. ಇತರರನ್ನು ಮೆಚ್ಚಿಸಲು ಹೋಗುವುದಿಲ್ಲ. ಇವೆಲ್ಲವೂ ಮಾನಸಿಕ ಒತ್ತಡದಿಂದ ದೂರೀಕರಿಸುವಂತಹ ಅತ್ಯುತ್ತಮ ಅಂಶಗಳು. ಇವುಗಳನ್ನು ಮೈಗೂಡಿಸಿಕೊಂಡರೆ ಎಂತಹ ವ್ಯಕ್ತಿ ಕೂಡ ಯಶಸ್ಸನ್ನು ಸಾಧಿಸಬಹುದು ಎನ್ನುವುದು ಈ ಕೃತಿ ಸವಿವರವಾಗಿ ಮನದಟ್ಟು ಮಾಡಿಕೊಡುವಲ್ಲಿ ಸಫಲವಾಗಿದೆ. 

ಎಲ್ಲರೂ ಅವಶವಾಗಿ ಓದಲೇಬೇಕಾದ  ಕೃತಿ ಇದು.

......................


 

Comments

Popular posts from this blog