ಮೌಢ್ಯಕ್ಕೆ  ಹಿಡಿದ ಕನ್ನಡಿ ‘ಮನೀಷೆ’



ಮನೀಷೆ ಇದು ಕಥೆಗಾರ ವಸುಧೇಂದ್ರ ಅವರ ಕೃತಿ. ಮೌಢ್ಯ ಕುರಿತಾಗಿ ಇರುವ ಬರಹಗಳೇ ಇದರಲ್ಲಿವೆ. ಮಠ, ಜಾತಿಯ ಹೆಸರಲ್ಲಿ ನಡೆಯುತ್ತಿರುವ ಮಡಿ, ಮೈಲಿಗೆಗಳ ಬಗ್ಗೆ ಸುಂದರವಾಗಿ ಕಥೆಗಳನ್ನು ಇಲ್ಲಿ ಹೆಣೆದಿದ್ದಾರೆ. ಅತಿ ಸರಳ ಬಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ ಕಥೆಗಳಿವು. ಮೌಢ್ಯದ ಪರಿಣಾಮದಿಂದ ಏನೇನು ಸಂಭವಿಸುತ್ತದೆ, ಇನ್ನೊಬ್ಬರ ಮನಸ್ಸಿಗೆ, ಜೀವನದ ಮೇಲೆ ಹೇಗೆ ಒರಿಣಾಮ ಬೀರುತ್ತದೆ ಎನ್ನುವುದನ್ನೂ ಕೆಲವು ಕಥೆಗಳಲ್ಲಿ ಚಿತ್ರಿಸಿದ್ದಾರೆ. ಇನ್ನೂ ಇಂತಹ ಸ್ಥಿತಿ ಇರುವುದರಿಂದ ಮನಸ್ಸನ್ನು ಕೃತಿ ಕಲಕುತ್ತದೆ. ಒಂದು ಅತ್ಯುತ್ತ್ತಮ ಕೃತಿಯಾಗಿ ಇದು ಹೊರಹೊಮ್ಮಿದೆ. 


‘ನಮ್ಮ ವಾಜೀನ್ನೂ ಆಟಕ್ಕೆ ಸೇರಿಸಿಕೊಳ್ರೋ’ 


ಈ ಕಥೆಯಲ್ಲಿ ಬಿಳಿ ತೊನ್ನು ಇರುವ ಬಾಲಕನೊಬ್ಬ ಸಂಪ್ರದಾಯವಾದಿಗಳಿಂದ ಅವಮಾನಕ್ಕೀಡಾಗುವುದು, ಮಠದಲ್ಲಿ ರಾಯರ ಆರಾಧನೆ ವೇಳೆ ಆತನಿಗೆ ಊಟಕ್ಕೆ ಬಡಿಸಲು ಬಿಡದೆ ಅವಮಾನಿಸುವುದು, ಹಸಿವಿನಿಂದ ಬಳಲುತ್ತಿದ್ದ ಆತನ ತಾಯಿ ಕಮಲವ್ವ ಕೂಡ ಮೌನದಿಂದ ಮಗನೊಟ್ಟಿಗೆ ಹಾಗೆಯೇ ಮರಳಿ ಊರಿಗೆ ಬರುವುದು ಕಥೆಯ ಈ ತಿರುಳಾಗಿದೆ.


ಮನೀಷೆ’


 ಈ ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಮನಸ್ಸಿನ ವಿಭಿನ್ನ ಭಾವನೆಗಳು ಹೇಗೆ ಗೊಂದಲಕ್ಕೆ, ಸಿಟ್ಟಿಗೆ, ಉದ್ವೇಗಕ್ಕೆ ತಳ್ಳುತ್ತವೆ ಎನ್ನುವುದನ್ನು ಸುಬ್ರಹ್ಮಣ್ಯ ಎನ್ನುವವನ ಮೂಲಕ ಚಿತ್ರಿಸಿದ್ದಾರೆ. ಸುಬ್ರಹ್ಮಣ್ಯ ಕಾರ್ಖಾನೆಯ ಕೆಲಸಕ್ಕೆ ಹೊರಡುವಾಗ ಮನೆಯಿಂದ ಹೊರ ಬಂದು ಸ್ಕೂಟರ್ ಚಾಲು ಮಾಡಿದಾಗ ಏನೋ ಬಿಟ್ಟು ಬಂದೆ ಎನಿಸುತ್ತದೆ. ಅರ್ಧ ದಾರಿಗೆ ಹೋದಾಗ ಪೆಟ್ರೋಲ್ ಖಾಲಿ ಎಂದೆನಿಸುತ್ತದೆ. ಮನೆಗೆ ಕರೆ ಮಾಡಿ ಏನೋ ಬಿಟ್ಟು ಬಂದಿದ್ದೇನೆ ಹುಡುಕಿಡು ಎಂದು ಪತ್ನಿಗೆ ಹೇಳುತ್ತಾನೆ. ಅಲ್ಲಿಂದ ಮಿತ್ರನ ಸಂಗೀತ ಕಚೇರಿಗೆ ಹೋದಾಗ ಅಲ್ಲಿ ಅದನ್ನು ಸರಿಯಾಗಿ ಕೇಳುವ ತಾಳ್ಮೆ ಇರುವುದಿಲ್ಲ. ಅಕ್ಕಪಕ್ಕ ಕುಳಿತವರು ಸಂಗೀತ ಕಚೇರಿಯಲ್ಲಿ ಮುಳುಗಿದ್ದರೂ ಈತನಿಗೆ ಏನೇನೂ ಅನುಭವಿಸುವಂತಾಗುತ್ತದೆ.  ಅಲ್ಲಿಂದ ಎದ್ದು ಬಂದು ಮನೆಗೆ ಬರುವಾಗ ದಾರಿ ತಪ್ಪುತ್ತದೆ. ರಾತ್ರಿ ರೂಮಿನಲ್ಲಿ  ಕಥೆ ಬರೆಯಲು ಕುಳಿತುಕೊಳ್ಳುತ್ತಾನೆ. ಅರೆಬರೆ ಬರೆದು ಹರಿದು ಬಿಸಾಡುತ್ತಾನೆ. ಹೆಂಡತಿಯು ಗಂಡ ಹೇಳಿದಂತೆ ಹುಡುಕಿದರೂ ಕಳೆದುಹೋದುದು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಹೆಂಡತಿಯ ಕೆನ್ನೆಗೆ ಹೊಡೆಯುತ್ತಾನೆ. ಹೀಗೆ ಗೊಂದಲದ ಗೂಡಲ್ಲಿ ಗಂಡ-ಹೆಂಡತಿ ಬದುಕಿ ಬಾಳುವ ಕಥೆ ಇದು.


 ‘ಹುಲಿಯ ಬೆನ್ನೇರಿ’. 


 ಊಟ, ತಿಂಡಿಯಲ್ಲಿ ಮದ್ದು ಹಾಕುವ ಹೆಂಗಸೊಬ್ಬಳು ತಾನು ಮದ್ದು ಹಾಕದಿದ್ದರೂ ಮೇಲಿನಿಂದ ಹಲ್ಲಿ ಬಿದ್ದು ಪಾಯಸ ಹಾಳಾದ ವಿಷಯ ತನ್ನ ಕುತ್ತಿಗೆಗೆ ಬಂದ ಸಂದರ್ಭದಲ್ಲಿ  ‘ತಾನು ತಂದ ಮದ್ದನ್ನು ಹಾಕಿಲ’ ಎಂದು ಬಾಯ್ಬಿಟ್ಟು ಹೇಳಿಕೊಳ್ಳುವ ಸಂದರ್ಭ ಎದುರಾಗುತ್ತದೆ. ಕಾಶವ್ವ ಇಲ್ಲಿ ಮದ್ದು ಹಾಕುವ ಹೆಂಗಸು. ಇದು ಎಲ್ಲರಿಗೂ ಗೊತ್ತಿರುತ್ತದೆ. ಅವಳು ಅಡುಗೆ ಮಾಡುವುದರಲ್ಲಿ ಹೆಸರುವಾಸಿ. ಕಾಶವ್ವಳ ಅತ್ತಿಗೆ ರುಕ್ಮಿಣಿಯು ಮಠದ ಆರಾಧನೆಗೆ ಅಡುಗೆ ಕೆಲಸದವರು ಬಂದಿಲ್ಲ ಎಂದು ಹೇಳಿ ಕಾಶವ್ವಳನ್ನು ಕರೆದೊಯ್ಯುತ್ತಾಳೆ. ಅಲ್ಲಿ ಹೋಗಿ ಬಾಲ ಬಿಚ್ಚಿದರೆ ನಿನ್ನ ಕುತ್ತಿಗೆ ಹಿಚುಕುತ್ತೇನೆ ಎಂದು ಎಚ್ಚರಿಕೆ ಕೊಡುತ್ತಾಳೆ. ಪಾಯಸ ಮಾಡುವಾಗ  ಪಾತ್ರೆಯಲ್ಲಿ ಹಲ್ಲಿ ಮೇಲಿನಿಂದ ಬಿದ್ದಿತ್ತು. ಇದೇ ವೇಳೆ ಬಂದ ರುಕ್ಮಿಣಿ ‘ನಿನ್ನ ಬುದ್ಧಿಯನ್ನು ತೋರಿಸಿಬಿಟ್ಟೆ. ಮನೆ ಮಂದಿಯನ್ನೆಲ್ಲ ಕೊಲ್ಲಬೇಕು ಎಂದು ನಿರ್ಧರಿಸಿದ್ದೀಯೇನು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ. ಆಗ ಕಾಶವ್ವ ತಾನು ತಂದಿದ್ದನ್ನು ಹಾಕಿಲ್ಲ ಎಂದು ಸೊಂಟದಲ್ಲಿದ್ದ ಮದ್ದಿನ ಗಂಟನ್ನು ತೋರಿಸುತ್ತಾಳೆ. ತನ್ನನ್ನು ರಕ್ಷಿಸಿಕೊಳ್ಳಲು ಸತ್ಯ ನುಡಿಯಬೇಕಾದ ಸ್ಥಿತಿ ಬಂದೊದಗಿದ ಘಟನೆಯನ್ನು ಹುಲಿಯ ಬೆನ್ನೇರಿ ಎಂಬ ಉಪಮೇ ಮೂಲಕ ಕಟ್ಟಿಕೊಟ್ಟಿದ್ದ್ದಾರೆ.


‘ಬಾಗಿಲಿಂದಾಚೆ, ಪೋಗದಿರೆಲೋ ರಂಗ’

 ಈ ಕತೆಯಲ್ಲಿ ಅಜ್ಜಿಯ ಜೊತೆ ಅಜ್ಜಿ ಮನೆಗೆ ಹೋದ ಬಾಲಕನೊಬ್ಬ ಮರಳಿ ಮನೆಗೆ ಬರಲು ಒಪ್ಪದೇ ಇರುವುದರ ಕಥೆ ಇದೆ. ಮಗನನ್ನು ಕಳಿಸಿಕೊಟ್ಟ ತಾಯಿಗೆ ಅಂದು ಬಾವಿಗೆ ಬಿದ್ದು ಮಗ ಸತ್ತುಹೋದ ಎಂಬ ಕನಸು ಬೀಳುತ್ತದೆ. ಇದರಿಂದ ಹೆದರಿದ ಆಕೆ ತವರಿಗೆ ತೆರಳಿ ಬಲವಂತದಿಂದ ಮಗನ್ನು ಕರೆತರಲು ಯತ್ನಿಸಿದರೂ  ಆತ ಒಪ್ಪುವುದಿಲ್ಲ. ನಂತರ ಒತ್ತಾಯದಿಂದ ಹೊರಟರೂ  ಸಪ್ಪೆ ಮುಖ ಮಾಡಿಕೊಂಡು, ಆಸಕ್ತಿ ಇಲ್ಲದಂತವನಾಗಿ ಮನೆಗೆ ಬರುತ್ತಾನೆ. ರಾತ್ರಿ ಊಟ ಬೇಡ ಎನ್ನುತ್ತಾನೆ. ಆದರೂ ತಾಯಿ ಬಲವಂತವಾಗಿ ಮೊಸರನ್ನ ಕಲಸಿಟ್ಟು ತಿನ್ನು ಎಂದರೆ ತಾಯಿಯ ಮುಖಕ್ಕೆ ಮೊಸರನ್ನವನ್ನು ಬೀಸಿ ಒಗೆಯುತ್ತಾನೆ. ಈ ಅವತಾರ ಆತನ ತಂದೆ ತಾಯಿಗಳಿಗೆ ದಿಗ್ಭ್ರಮೆ ಮೂಡಿಸುತ್ತದೆ. ತಾಯಿ ತನಗೆ ಹೊಡೆಯುವಳು ಎಂಬ ಭಯದಿಂದ ನಲುಗುತ್ತಾನೆ. ತಾಯಿ ಮಗನ್ನು  ಬಿಟ್ಟು ಇರಲಾರದ ಕಥೆ ಇದು.  

‘ಮೌಢ್ಯೋಪಾಸನೆ’ 

  ಮಡಿಯನ್ನೇ ಜೀವನದ ಪರಮೋಧ್ಯೇಯವೆಂದು ನಂಬಿದ್ದ ಅಜ್ಜಿಯ ಕಥೆ ಇದು. ತನಗಾದ ಅನ್ಯಾಯದ ಅರಿವಿಲ್ಲದೆ ಆ ರೀತಿಯ ಮೌಢ್ಯವನ್ನೇ ಜೀವನದ ರೀತಿಯನ್ನಾಗಿ ಅವಳು ನಂಬುವಂತೆ ಮಾಡಿದ ಸಮಾಜದ ಕುರಿತಾಗಿದೆ. ಮಡಿಯನ್ನೇ ಜೀವನವೆಂದು ನಂಬಿ ಸ್ವಂತ ಮಗಳಿಂದಲೂ ನಿಷ್ಠುರ ಕಟ್ಟಿಕೊಂಡು ತನ್ನ ಪ್ರಾಣವನ್ನೂ ಲೆಕ್ಕಿಸದೆ ಬಾಳಿದ ಅಜ್ಜಿ ನಕ್ಷತ್ರವಾಗಿದ್ದಳೆಂದು ಆಕೆಯ ಮೊಮ್ಮಗಳು ಊಹಿಸುತ್ತಾಳೆ. ನಿರೂಪಕಿಯ ತಾಯಿ ಕಮಲವ್ವ  ಕ್ಯಾನ್ಸರ್‌ನಿಂದ ಆಸ್ಪತ್ರೆ ಸೇರಿರುತ್ತಾರೆ. ಅಲ್ಲಿ ತಾಯಿಗೆ ಊಟ ತಂದುಕೊಟ್ಟರೆ ಮೈಲಿಗೆಯಲ್ಲಿ ನಾನು ಉಣ್ಣುವುದಿಲ್ಲ ಎಂದು ಹಠ ಹಿಡಿಯುತ್ತಾಳೆ. ನಿರಾಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ‘ಮನೆಗೆ ಹೋದಮೇಲೆ ಮಡಿ ಮಾಡಿಕೊಳ್ಳಿ’ ಎಂದು ವೈದ್ಯರು ಹೇಳಿದ ಬಳಿಕ ಆಹಾರ ತೆಗೆದುಕೊಳ್ಳುತ್ತಾರೆ. ಕೆಲವು ದಿನಗಳ ನಂತರ ಕಮಲವ್ವ ಡಿಸ್ಚಾರ್ಜ್ ಆಗುತ್ತಾರೆ. ಊರಿಗೆ ಬಂದ ನಂತರ ತಲೆಕೂದಲನ್ನು ತೆಗೆಸಿ, ರಾಯರ ಮಠಕ್ಕೆ ಹೋಗಿ ತೀರ್ಥ ಪ್ರಸಾದ ಪಡೆದು ಬರುತ್ತಾಳೆ. ಆದರೆ ಮನೆ ಕೆಲಸ ಮಾಡಲು ಅವಳ ತಾಯಿ (ನಿರೂಪಕಿಯ ಅಜ್ಜಿ) ಅವಕಾಶ ಕೊಡುವುದಿಲ್ಲ.  ಮಡಿ ಒಂದನ್ನು ಬಿಟ್ಟು ಉಳಿದೆಲ್ಲ ಸೇವೆಯನ್ನು ಅಜ್ಜಿ ಮಗಳಿಗೆ ಮಾಡುತ್ತಾರೆ. ಆರೋಗ್ಯ ಹದಗೆಟ್ಟು ಕಮಲವ್ವ ಸಾಯುತ್ತಾರೆ. ಬಳಿಕ ಅಜ್ಜಿಗೂ ಗಂಟಲು ಕ್ಯಾನ್ಸರ್ ಶುರುವಾಗುತ್ತದೆ. ಅವಳು ಸಹ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಮೈಲಿಗೆ ಎಂದು ಆಸ್ಪತ್ರೆಯಲ್ಲಿ ಊಟ ಮಾಡುವುದಿಲ್ಲ. ವೈದ್ಯರು ಎಷ್ಟು ಹೇಳಿದರೂ ಒಪ್ಪದೇ ‘ನನ್ನ ಮಡಿಯನ್ನು ಕೆಡಿಸಬೇಡಿ’ ಎಂದು ಕೈಮುಗಿದು ಕೇಳಿಕೊಳ್ಳುತ್ತಾಳೆ. ನಂತರ ಗುಣವಾಗದೆ ಸಾಯುವುದು ಖಚಿತವಾದಾಗ ಊರಿಗೆ ಕರೆತರಲಾಗುತ್ತದೆ. ವೈಕುಂಠ ಏಕಾದಶಿ ದಿನ ತನಗೆ ಸ್ನಾನ ಮಾಡಿಸಿ ಬಾಗಿಲ ಬಳಿ ಮಲಗಿಸಿ ಎಂದು ಹೇಳಿರುತ್ತಾರೆ. ಮೊಮ್ಮಕ್ಕಳು ಹಾಗೆ ಮಾಡುತ್ತಾರೆ. ಅದೇ ದಿನ ಅವಳು ಸತ್ತು ಹೋಗುತ್ತಾಳೆ.  ಹೀಗೆ ಮಡಿಯೇ ಸರ್ವಸ್ವವಾದ ಕತೆ ಇದು.

 ‘ಹುಲಿಗೆವ್ವ’


 ತನ್ನ ಜೊತೆ ಶಾಲೆಗೆ ಬರುತ್ತಿದ್ದ ಹುಲಿಗೆವ್ವ ಈಗ ಹಯವದನ ಕೆಲಸ ಮಾಡುತ್ತಿದ್ದ ಕಂಪನಿಗೆ ಹೊಸ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಮುಂಬೈನಿಂದ ಬಳ್ಳಾರಿಗೆ ವರ್ಗವಣೆಯಾಗಿ ಬಂದಿದ್ದಳು. ಅವಳು ಬಂದ ದಿನ ಬಾಸ್ ಎಲ್ಲರ ಪರಿಚಯ ಮಾಡಿಕೊಡುವಾಗ ಆಕೆಯೇ ಹಯವದನನನ್ನು ನೋಡಿ  ಭಟ್ಟ ಎಂದು ಹೇಳಿದಳು. ಎಲ್ಲರಿಗೂ ಆಶ್ಚರ್ಯವಾಗಿತ್ತು. ಹಯವದನನ ಪರಿಚಯ ಹೇಗೆಂದು. ಊರಿನಲ್ಲಿ ಅತ್ಯಂತ ಬಡ ಸ್ಥಿತಿಯಲ್ಲಿದ್ದ ಹುಲಿಗೆವ್ವಳಿಗೆ ತಾಯಿ ಇರಲಿಲ್ಲ.  ತಂದೆ ಕುರುಡ ದಾಸಪ್ಪನೊಂದಿಗೆ ಪ್ರತಿದಿನ ಜಾಗಟೆ, ಜೋಳಿಗೆ,  ನಂದಾದೀಪ ಹಿಡಿದುಕೊಂಡು ಕೇರಿಯಲ್ಲಿ ಬೇಡಲು ಬರುತ್ತಿದ್ದರು. ಹಯವದನನ ತಾಯಿ ಇವರಿಗೆ ಭಿಕ್ಷೆ ಕೊಡದೆ ಊಟ- ತಿಂಡಿ ಸೇವಿಸುತ್ತಿರಲಿಲ್ಲ. ಈತನೇ ಆಕೆಗೆ ನೋಟ್ಸ್‌ಗಳನ್ನು ಕೊಡುತ್ತಿದ್ದನು. ಎಸ್ಸೆಸೆಲ್ಸಿ ಪಾಸಾದ ಬಳಿಕ ಕೆಲವು ದಿನಗಳಲ್ಲಿ ಅವಳ ತಂದೆ ಸಾಯುತ್ತಾನೆ. ಕೆಲವೇ ದಿನದಲ್ಲಿ ಆಕೆ ನಾಪತ್ತೆಯಾಗುತ್ತಾಳೆ.  ರೈಲು ಹತ್ತಿ ಮುಂಬೈಗೆ ಹೋಗಿ ಹೊಟ್ಟೆಪಡಿಗೆ ಮನೆಯೊಂದರಲ್ಲಿ ಕಸ-ಮುಸುರೆ ಮಾಡುತ್ತ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿ ಮನೆಯ ಯಜಮಾನನ ಮಗ ಕಂಪ್ಯೂಟರ್‌ನಲ್ಲಿ  ಕೆಲಸ ಮಾಡುವುದನ್ನು ನೋಡಿ ಕಲಿಯಬೇಕೆಂಬ ಆಸೆಯಾದಾಗ ಆತ ತನ್ನೊಂದಿಗೆ ಮಲಗಿದರೆ ಮಾತ್ರ ಕಲಿಸುವುದಾಗಿ ಹೇಳುತ್ತಾನೆ. ಕಲಿಯುವ ಆಸೆಗಾಗಿ ಮಲಗುತ್ತಾಳೆ. ನಂತರ ಅಲ್ಲಿ ಆತನ ಕಾಟ ಜಾಸ್ತಿಯಾದಾಗ ಹಾಸ್ಟೆಲಲ್ಲಿದ್ದು, ಕಲಿತು ಉನ್ನತ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ, ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಭಡ್ತಿ ಹೊಂದಿ ಬಳ್ಳಾರಿಗೆ ಬರುತ್ತಾಳೆ ಇದು ಕಥೆಯ ತಿರುಳು.

.......................


Comments

Popular posts from this blog