ದುಕಿಗೆ ಬೇಕಾದ ಬೆಳಕಿನ ಬೀಜ
‘ಅಪರೂಪದ ಪುರಾಣ ಕಥೆಗಳು’
ಮಹಾಭಾರತ, ರಾಮಾಯಣ, ಭಾಗವತ, ಕಥಾಸರಿತ್ಸಾಗರಗಳ ಕಥಾಕೋಶಗಳಿಂದ ಆಯ್ದ, ಬದುಕಿಗೆ ಅವಶ್ಯವಾದ ಕಥೆಗಳನ್ನು ಹಿರಿಯರು ಹೇಳಿದ್ದನ್ನು ನೆನಪಿಟ್ಟುಕೊಂಡು ಸಂಗ್ರಹಿಸಿದ ಕಥೆಗಳ ಸಂಕಲನವೇ ಅಪರೂಪದ ಪುರಾಣ ಕಥೆಗಳು. ಲೇಖಕಿ ಆಶಾ ರಘು ಈ ಕಥೆಗಳನ್ನು ಸರಳ, ಸುಂದರವಾಗಿ, ಜೊತೆಗೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
ವಿಶೇಷವಾಗಿ ನಮ್ಮ ಮಕ್ಕಳಿಗೆ ಇಂತಹ ಪುರಾಣದ ಕಥೆಗಳ ಅವಶ್ಯಕತೆ ಇಂದು ಅವಶ್ಯವಿದೆ. ಶಾಲಾ ಪಠ್ಯಗಳನ್ನು ಹೊರತುಪಡಿಸಿದರೆ ಮಳೆ, ಬೆಳೆ, ಕಾಡು, ಕೃಷಿ, ಪುರಾಣ -ಇತಿಹಾಸಗಳ ಬಗ್ಗೆ ನಮ್ಮ ಮಕ್ಕಳಿಗೆ ಮಾಹಿತಿ ಇಲ್ಲ. ಗ್ಯಾಜೆಟ್ ಲೋಕದಲ್ಲಿ ಕಳೆದುಹೋಗುತ್ತಿರುವ ಮಕ್ಕಳ ಮನಸ್ಸನ್ನು ತಂದೆ- ತಾಯಿ ಇಂತಹ ಪುರಾಣದ ಕಥೆಗಳ ಮೂಲಕ ಮರು ಕಟ್ಟುವ ಕೆಲಸವನ್ನು ಮಾಡಬೇಕಿದೆ.
ಇಲ್ಲಿನ ಕಥೆಗಳು ಕೇವಲ ಮಕ್ಕಳಿಗೆ ಮಾತ್ರವಲ, ಹಿರಿಯರು ಕೂಡ ಓದಿ ತಿಳಿಯಬೇಕಾದವೇ ಆಗಿವೆ. ಸತ್ಯಕಾಮನಂತಹ ಹುಡುಗನನ್ನು ಶಿಷ್ಯನಾಗಿ ಸ್ವೀಕರಿಸಿದ ಗುರುಗಳ ಗುರುತ್ವ, ದಧೀಚಿ-ಶಿಬಿಯರ ಲೋಕಕಲ್ಯಾಣ ಗುಣ, ಚೂಡಾಮಣಿಯನ್ನು ಕಳುಹಿಸಿಕೊಟ್ಟ ಸೀತೆಯ ಸಂದೇಶದ ಹಿಂದಿನ ಅರ್ಥ, ಅರ್ಧನಾರೀಶ್ವರ ಕಲ್ಪನೆಯೊಳಗಿನ ಸಾಂಕೇತಿಕತೆ..... ಹೀಗೆ ಸುಮಾರು ೪೮ ವಿವಿಧ ಕಥೆಗಳು ಇಲ್ಲಿ ನಿರೂಪಣೆಯಾಗಿದೆ. ಈ ಕಥೆಗಳು ಓದುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಿದೆ. ಆದ್ದರಿಂದ ಮಕ್ಕಳು ಇಂತಹವುಗಳನ್ನು ಪ್ರೀತಿಯಿಂದ ಸ್ವೀಕರಿಸಿ ನಮ್ಮ ಸಂಸ್ಕೃತಿ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಮೊದಲ ಕಥೆ ‘ಚೂಡಾಮಣಿಯ ಮಾಯೆ’ ಇದರಲ್ಲಿ ರಾವಣನಿಂದ ಸೆರೆ ಹಿಡಿಯಲ್ಪಟ್ಟ ತನ್ನ ಪತ್ನಿಯನ್ನು ಬಿಡಿಸಿಕೊಂಡು ಹೋಗುವುದು ನನ್ನ ದೇವರಿಗೆ ಅಶಕ್ಯವೇ ಎಂದು ಸೀತಾಮಾತೆ ಹನುಮಂತನಲ್ಲಿ ಕೇಳಿದ್ದನ್ನು ಆತ ಶ್ರೀ ರಾಮನ ಬಳಿ ಬಂದು ಹೇಳಿದಾಗ ಅದರ ಹಿಂದಿನ ಅರ್ಥವನ್ನು ರಾಮನು ಗಮನಿಸಿ ಮುಗುಳ್ನಗುವ ಕುರಿತಾಗಿದ್ದರೆ, ‘ಧರ್ಮದ ಬೀಜ’ದಲ್ಲಿ ಕುರುಕ್ಷೇತ್ರ ಎಂಬ ಹೆಸರು ಬಂದಿದ್ದು ಹೇಗೇ? ಅದು ಧರ್ಮಕ್ಷೇತ್ರವಾದುದು ಹೇಗೆಂಬುದರ ಬಗ್ಗೆ ಇದೆ. ‘ಅರ್ಧನಾರೀಶ್ವರ’ ದಲ್ಲಿ ಅರ್ಧನಾರೀಶ್ವರ ಸೃಷ್ಟಿಯ ಜೊತೆಗೆ ಲಿಂಗಸ್ವರೂಪಿ ಶಿವನ ಪರಿಕಲ್ಪನೆಯೂ ಇದೆ. ಲಿಂಗವೆಂದಾಗ ಅದು ಕೇವಲ ಶಿವನ ಸಂಕೇತ ಮಾತ್ರವಲ್ಲ ಎನ್ನುವ ವಿಚಾರವಿದೆ. ‘ಉಭಯ ಸಂಕಟಕ್ಕೆ ಬಿದ್ದ ಶ್ರೀಕೃಷ್ಣ’ ತನ್ನ ಭಕ್ತರಾದ ಅರ್ಜುನ ಮತ್ತು ಸುಧನ್ವರ ಪ್ರತಿಜ್ಞೆಯನ್ನು ಯುದ್ಧಭೂಮಿಯಲ್ಲಿ ನೆರವೇರಿಸಿದ ಬಗ್ಗೆ, ‘ಚಂಡಿ’ ಕಥೆಯಲ್ಲಿ ಉದ್ಧಾಲಕನ ಮಡದಿಯಾದ ಚಂಡಿ ಪತಿಯಿಂದ ಕಲ್ಲಾಗಿ ಶಾಪ ಹೊಂದುವುದು, ನಂತರ ಅದು ವಿಮೋಚನೆಗೊಂಡಿದ್ದರ ಕುರಿತಾಗಿದೆ.
‘ಬಂಡಿಯವನಿಂದ ಬ್ರಹ್ಮಜ್ಞಾನ’ ದಲ್ಲಿ ಬಂಡಿಯವನಿಂದ ರಾಜ ಜನಶೃತಿ ಪೌತ್ರಾಯಣನಿಗೆ ಹೇಗೆ ಬ್ರಹ್ಮಜ್ಞಾನದ ಅರಿವಾಯಿತು ಎನ್ನುವುದರ ಬಗ್ಗೆ, ‘ನಮೋ ನಾರದ’ದಲ್ಲಿ ಮೋಕ್ಷಕ್ಕೆ ಭಕ್ತಿ ಮಾರ್ಗ ಅನುಸರಿಸಿದ, ಮಹಾಜ್ಞಾನಿ, ತಪಸ್ವಿ, ಕೃತಿಗಳನ್ನು ರಚಿಸಿದವನು ನಾರದ. ಎಲ್ಲೆಡೆ ಜಗಳ ತಂದಿಟ್ಟ ಎಂಬ ಮಾತಿದೆ. ನಾರದರು ಲೋಕಕಲ್ಯಾಣಕ್ಕಾಗಿ ಎಲ್ಲವನ್ನೂ ಮಾಡಿದರು ಎನ್ನುವುದನ್ನು ವಿವರಿಸಲಾಗಿದೆ. ‘ಸಂಜೀವಿನಿ ವ್ರತ’ ದಲ್ಲಿ ಇದರರ್ಥ, ಭೀಮನ ಅಮಾವಾಸ್ಯೆ ದಿನ ಆಚರಿಸುವ ಈ ವೃತದ ಬಗ್ಗೆ ಮಹತ್ತರವಾದ ವಿಷಯವನ್ನು ಕಟ್ಟಿಕೊಡಲಾಗಿದೆ. ‘ಸೇಡು ಬಿಡದ ಉತ್ತಂಕ’ ಕೃತಿಯಲ್ಲಿ ರಾಜ ಜನಮೇಜಯ ಸರ್ಪ ಯಾಗ ಮಾಡಿ ಹಾವುಗಳ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರಚೋದನೆ ಕೊಟ್ಟವನು ಉತ್ತಂಕ, ಏಕೆ, ಹೇಗೆ ಎಂಬ ಬಗ್ಗೆ, ‘ಕವಲಾದ ಯಜುರ್ವೇದ’ ದಲ್ಲಿ ಯಜುರ್ವೇದವು ತೈತ್ತೀರಿಯ ಮತ್ತು ವಾಜಸತೀಯ ಎಂಬ ಎರಡು ಕವಲುದಾರಿಯಾದದ್ದು ಹೇಗೆ ಎಂಬ ಬಗ್ಗೆ ಇದೆ.
‘ಪತಿಯ ತಾಯಿಯಾದ ರತಿ’ ಇದರಲ್ಲಿ ರತಿ ಮಾಯಾವತಿಯಾದದ್ದು, ದ್ವಾರಕಾನಗರದಲ್ಲಿ ಚಿಕ್ಕ ಮಗುವನ್ನು ತಾಯಿಯಂತೆ ಪೋಷಿಸಿ, ಬೆಳೆಸಿ, ಆತನಿಗೆ ವಿದ್ಯಾಭ್ಯಾಸವನ್ನು ಹೇಳಿಕೊಟ್ಟಿದ್ದು, ಆತನೇ ಮುಂದೆ ಪತಿಯಾಗಿ ಮನ್ಮಥನಾಗುವುದು, ಹೀಗೆ ತನ್ನ ಗಂಡನನ್ನು ತಾನೇ ಪಾಲಿಸಿ, ಪೋಷಿಸಿ, ಬೆಳೆಸಿ ವೈರಿಗಳ ಸಂಹಾರ ಮಾಡಿಸಿದ ಕಥೆ ಇದೆ. ‘ಯುದ್ಧ ಬೇಡಿದ ಜಾಂಬವಂತ’ ದಲ್ಲಿ ಶ್ರೀರಾಮಚಂದ್ರನು ಯುದ್ಧ ಮಾಡಿದ ಕಪಿಗಳಿಗೆ ಕಾಣಿಕೆ ಕೊಡುವಾಗ ಜಾಂಬವಂತ ಅದನ್ನು ಸ್ವೀಕರಿಸದೆ, ನಿನ್ನೊಂದಿಗೆ ಯುದ್ಧ ಮಾಡಬೇಕು ಎನ್ನುವುದು ತನ್ನ ಬಯಕೆ ಎನ್ನುತ್ತಾನೆ. ಶಮಂತಕಮಣಿ ವಿಚಾರವಾಗಿ ಶ್ರೀಕೃಷ್ಣನು ಜಾಂಬವತಿ ಮೇಲೆರಗಿದಾಗ ಯುದ್ಧ ನಡೆಯುತ್ತದೆ. ಹೀಗೆ ಶ್ರೀಕೃಷ್ಣನಲ್ಲಿ ರಾಮನನ್ನು ಕಾಣುತ್ತಾನೆ. ನಂತರ ರಾಮನ ಕಾಲಿಗೆರಗಿ ‘ನಿನ್ನೊಟ್ಟಿಗೆ ಯುದ್ಧ ಮಾಡುವ ಕನಸು ಈಡೇರಿತು’ ಎಂದು ಹೇಳುತ್ತಾನೆ.
‘ಅರುಣೋದಯ’ದಲ್ಲಿ ಕಾಲುಗಳಿರದ ಕಶ್ಯಪ ಮುನಿಯ ಮಗ ಆನೂರನನ್ನು ಬ್ರಹ್ಮ ತನ್ನಲ್ಲಿಗೆ ಕರೆಸಿಕೊಂಡು ಅರುಣನನ್ನಾಗಿ ಮಾಡಿ ಸೂರ್ಯನ ಎದುರು ನಿಲ್ಲಿಸುತ್ತಾನೆ. ಸೂರ್ಯನಿಗಿಂತ ಮುಂಚೆ ಅರುಣೋದಯವಾಗುವಂತೆ ನೀನು ಆಗು ಎಂದು ಹರಸುವುದರ ಕಥೆ ಇದೆ. ‘ಕುಬೇರನ ಸ್ವರ್ಣಲಂಕೆ’ ಯಲ್ಲಿ ಸ್ವರ್ಣ ಲಂಕೆ ವರ್ಣನೆ, ನಂತರ ಕುಬೇರನಿಂದ ಲಂಕೆ ಕೈತಪ್ಪಿ ರಾಕ್ಷಸರ ಕ್ಷೇತ್ರವಾಗುವುದು, ಬಳಿಕ ರಾವಣನ ಪಾಲಾಗುವುದು, ವಾಪಸ್ ವಿಭೀಷಣನ ಪಾಲಾಗುವುದರ ಬಗ್ಗೆ ಇದೆ.
‘ಬ್ರಹ್ಮ ಕಪಾಲ’ದಲ್ಲಿ ಬ್ರಹ್ಮನ ಐದನೇ ತಲೆ ಕಡಿದ ಶಿವನಿಗೆ ಬ್ರಹ್ಮ ಹತ್ಯಾ ದೋಷ ತಾಗುವುದು, ಕಪಾಲವಾಗಿ ಶಿವನಿಗೆ ಅದು ಅಂಟುವುದು, ವಾರಣಾಸಿಯಲ್ಲಿ ದೋಷವನ್ನು ಕಳೆದುಕೊಂಡಿದ್ದರ ಬಗ್ಗೆ ಇದೆ. ‘ತ್ರಿಶಂಕು ಸ್ವರ್ಗ’ ದಲ್ಲಿ ತ್ರಿಶಂಕು ಸ್ವರ್ಗ ಎಂದರೇನು? ಮೇಲೂ ಇಲ್ಲ, ಕೆಳಕ್ಕೂ ಇಲ್ಲ, ಮಧ್ಯದಲ್ಲಿ ಉಳಿಯುವುದು ಎನ್ನುವ ಅರ್ಥವನ್ನು ತ್ರಿಶಂಕುವಿನ ಮೂಲಕ ತೋರಿಸಿಕೊಟ್ಟಿದ್ದಾರೆ. ‘ಸಂಪಾತಿಯೂ ಜಟಾಯುವೂ’ ಕಥೆಯಲ್ಲಿ ಅಣ್ಣ ತಮ್ಮರಾದ ಸಂಪಾತಿ ಮತ್ತು ಜಟಾಯುವಿನ ನಡುವಿನ ಸ್ಪರ್ಧೆ, ಸುಟ್ಟು ಬೀಳುವುದು, ಸತ್ತ ನಂತರ ಮೋಕ್ಷ ಪ್ರಾಪ್ತಿಯಾಗಿ ಶ್ರೀರಾಮನಿಗೆ ಸೀತೆಯನ್ನು ಹುಡುಕುವಲ್ಲಿ ನೆರವಾಗುವುದರ ಬಗ್ಗೆ ಇದೆ. ‘ಸತ್ಯಸಂಧ ಸತ್ಯಕಾಮ’ ದಲ್ಲಿ ಬ್ರಹ್ಮತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಸತ್ಯಕಾಮನಿಗೆ ಗುರು ಗೌತಮನು ಸಂಪೂರ್ಣ ಜ್ಞಾನವನ್ನು ದಯಪಾಲಿಸುವುದು, ಅಲ್ಲಿಂದ ಮುಂದೆ ಶ್ರದ್ಧೆ ಮತ್ತು ನಿಷ್ಠೆಗೆ ಇನ್ನೊಂದು ಹೆಸರಾಗಿ ಸತ್ಯಸಂಧ ಸತ್ಯಕಾಮ ಹೆಸರಾಗುವುದು, ಲೋಕಕಲ್ಯಾಣಕ್ಕಾಗಿ ತಮ್ಮ ದೇಹವನ್ನೇ ತ್ಯಾಗ ಮಾಡಿದ ಮಹಾತ್ಯಾಗಿ ದಧೀಚಿಯ ಕುರಿತಾಗಿ ‘ದಧೀಚಿಯ ಮಹಾತ್ಯಾಗ’ದಲ್ಲಿ ಇದೆ. ‘ಮರಾಮರಾಮರಾಮ’ ದಲ್ಲಿ ದರೋಡೆಕೋರನಾಗಿದ್ದ ಪ್ರಚೇತಸನಿಗೆ ನಾರದರಿಂದ ರಾಮ ಮಂತ್ರ ದೀಕ್ಷೆ. ಆತನೇ ವಾಲ್ಮೀಕಿಯಾದದು. ಕಾವ್ಯಗುಣ ಹುಟ್ಟಿ ರಾಮಾಯಣವನ್ನು ರಚಿಸಿದ್ದರ ಬಗ್ಗೆ ಇದೆ.
‘ತ್ರಿತನಿಂದ ಪಾವನತೀರ್ಥ’ ದಲ್ಲಿ ಗೌತಮನ ಮಗ ತ್ರಿತನನ್ನು ಆತನ ಸಹೋದರರೇ ಬಾವಿಗೆ ಬೀಳುವಂತೆ ಮಾಡುವುದು, ಅಲ್ಲಿಂದಲೇ ದೇವತೆಗಳ ಅನುಗ್ರಹದಿಂದ ಹೊರಬಂದು ಸಹೋದರರಿಗೆ ಶಾಪ ಕೊಡುವುದು, ತಾನು ಬಿದ್ದಿದ್ದ ಬಾವಿಯ ನೀರು ಪಾವನ ತೀರ್ಥವಾಗಿ ಹರಿಯುವಂತೆ ಮಾಡಿದ್ದರ ಕಥೆ ಇದೆ. ಉಳಿದಂತೆ ನೊಣ ತಿಂದ ಪಾಪ, ಮಾ ರುತಃ, ಯೌವ್ವನ ಪಡೆದ ಚ್ಯವನ, ಒನಕೆ ಹೆತ್ತ ಸಾಂಬ, ಸಗರಪುತ್ರರ ಸದ್ಗತಿ... ಮೊದಲಾದ ಕಥೆಗಳು ನಮ್ಮನ್ನು ಸೆಳೆಯುತ್ತವೆ.
ಒಟ್ಟಿನಲ್ಲಿ, ಇಲ್ಲಿನ ಕಥೆಗಳೆಲ್ಲ ನಮ್ಮ ಬದುಕಿಗೆ ಬೇಕಾದ ಬೆಳಕಿನ ಬೀಜಗಳೆನ್ನಬಹುದು. ಇದನ್ನು ಬದುಕಿಗೆ ಅವಶ್ಯವಾದ ಜೀವನಧಾನ್ಯವನ್ನಾಗಿಸುವ ಮಹತ್ವದ ಪ್ರಯತ್ನ ಆಗಬೇಕಿದೆ.
......................

Comments
Post a Comment