ಮರೆತುಹೋಗುತ್ತಿರುವ ಸಂಸ್ಕೃತಿ ನೆನಪಿಸುವ
‘ಕಜ್ಜಾಯ’
‘ಕಜ್ಜಾಯ’ ಇದು ಸುನಂದಾ ಬೆಳಗಾಂವಕರ್ ಅವರ ಲಲಿತ ಪ್ರಬಂಧಗಳ ಸಂಕಲನ. ಇಲ್ಲಿ ೧೦ ಪ್ರಬಂಧಗಳಿವೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಧಾರವಾಡ ಕನ್ನಡದಲ್ಲಿರುವ ಇಲ್ಲಿನ ಭಾಷೆ ಬೇಸರ ತರಿಸುವುದಿಲ್ಲ. ಮೂರ್ನಾಲ್ಕು ದಶಕಗಳ ಹಿಂದಿನ ಧಾರವಾಡ ಮತ್ತು ಸುತ್ತಮುತ್ತಲಿನ ಜನಜೀವನವನ್ನು ಇಲ್ಲಿ ಬಿಂಬಿಸಲಾಗಿದೆ.
ಜನರ ಸುಸಂಸ್ಕೃತ ನಡವಳಿಕೆ, ಅವರ ವೃತ್ತಿಯಲ್ಲಿನ ನಿರಂತರತೆ, ಅಲ್ಲಿನ ಊಟ- ತಿಂಡಿಗಳ ವಿಶಿಷ್ಟತೆ, ಪ್ರತಿ ಪ್ರಬಂಧದಲ್ಲಿದೆ. ಲೇಖಕಿ ತನ್ನ ತಂದೆ- ತಾಯಿ- ಅಜ್ಜಿ- ನೆರೆಯವರಿಂದ ಬಂದ ಅನುಭವಗಳನ್ನೆಲ್ಲ ಇಲ್ಲಿ ಧಾರೆ ಎರೆದಿದ್ದಾರೆ. ಈ ಲಲಿತ ಪ್ರಬಂಧಗಳೆಲ್ಲ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ತಮ್ಮ ಬಾಲ್ಯದಿನಗಳ ಅನುಭವಗಳ ಬುತ್ತಿಯೇ ಇಲ್ಲಿ ಕಜ್ಜಾಯವಾಗಿದೆ. ಅತಿ ಸರಳ ಭಾಷೆ, ವಿಷಯ ಸಮೃದ್ಧಿಯೇ ಕಜ್ಜಾಯವನ್ನು ಓದುವಂತೆ ಮಾಡುತ್ತದೆ. ಒಂದು ಕಾಲದ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ, ಚಮತ್ಕಾರಿಕವಾಗಿ ಈ ಪ್ರಬಂಧ ಸಂಕಲನದಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ.
ಮಣ್ಣು
ಇದರಲ್ಲಿ ಲೇಖಕಿ ಮೂರು ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ, ಧಾರವಾಡದ ಮಣ್ಣು, ಶ್ರಾವಣದ ಮಳೆ ಮತ್ತು ಮೂರ್ತಿ ತಯಾರಿಸುವ ದಾನಪ್ಪ ಅವರ ಸಂಸಾರದ ಕಥೆ. ಇವು ಮೂರು ಮಣ್ಣಿಗೆ ಅಂಟಿಕೊಂಡ ಕಥೆಗಳು. ಶ್ರಾವಣದ ಮಳೆ ಧಾರವಾಡದಲ್ಲಿ ಧಾರಾಕಾರವಾಗಿ ಬೀಳುತ್ತಿದ್ದಾಗ ಅಲ್ಲಿನ ಜಿಗಟು ಮಣ್ಣು ಮಣ್ಣಿನಲ್ಲಿ ಕಾಲಿಟ್ಟಾಗ ಚಪ್ಪಲಿಗಳೆಲ್ಲಾ ಕಿತ್ತು ಬರುತ್ತಿದ್ದವು. ಉಟ್ಟ ಸೀರೆಯ ಹಿಂಭಾಗವೆಲ್ಲ ಕೆಸರಿನಿಂದ ರಾಡಿಯಾಗುತ್ತಿತ್ತು. ಶ್ರಾವಣ ಮಾಸದಲ್ಲಿ ಹಬ್ಬಗಳ ಸಾಲು ಸಂಭ್ರಮ. ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸುವುದು ಪದ್ಧತಿ, ಸರಳ ಜೀವಿ, ನಿವೃತ್ತ ಶಿಕ್ಷಕ ದಾನಪ್ಪ ಮಾಸ್ಟ್ರು ಕಲೆಯ ಉಪಾಸಕರು. ಗಣಪತಿ ಮೂರ್ತಿಗಳನ್ನು ಮಾಡುವುದೇ ಅವರ ಕುಲಕಸುಬು. ಪ್ರೇಕ್ಷಕರ ಮನಸ್ಸಿನ ಮೇಲೆ ಗಾಢ ಮುದ್ರಿಕೆ ಮೂಡಿಸಬಲ್ಲ ಉತ್ತಮ ಕಲಾಕಾರರು ಅವರಾಗಿದ್ದರು. ಆದರೆ ಅವರ ಏಕೈಕ ಮಗ ಶ್ರೀಶೈಲ ಮಣ್ಣಿನ ಕೆಲಸದಿಂದ ದೂರ. ಧಾರವಾಡದಲ್ಲಿದ್ದು ಮಣ್ಣ ಮೂರ್ತಿ ಮಾಡಿ ಮುಕ್ಕುದೇನೈತೆ. ನಾನು ಮುಂಬೈಗೆ ಹೋಗಿ ನೌಕರಿ ಮಾಡುತ್ತೇನೆ. ಈ ಊರಲ್ಲಿ ಏನು ಮಣ್ಣು ಐತಿ ಎಂದು ವ್ಯಂಗ್ಯ ಮಾಡುತ್ತಾನೆ ನಂತರ ದಾನಪ್ಪನವರು ತನ್ನ ಪೆನ್ಷನ್ ಹಣವನ್ನೆಲ್ಲಾ ಕೊಟ್ಟು ಮುಂಬೈಗೆ ಕಳಿಸುತ್ತಾರೆ. ಮನೆಯಲ್ಲಿ ಇತ್ತ ಕಡು ಬಡತನ ಕಾಡುತ್ತದೆ. ಲೈಟ್ ಬಿಲ್ ತುಂಬಿರುವುದಿಲ್ಲ. ಮಣ್ಣು, ಇತರೆ ಸಾಮಗ್ರಿ ತರಲು ಹಣವಿರುವುದಿಲ್ಲ. ದಾನಪ್ಪನವರ ಕಲೆಗೆ ದಾರಿದ್ರ್ಯ ಬಂದಿತ್ತು. ಧಾರವಾಡದ ಮಣ್ಣು ಮಣ್ಣಾಗಿರಿಸಿತ್ತು. ಇತ್ತ ಶ್ರೀಮಂತನಾಗಲು ಮುಂಬೈಗೆ ಹೋಗಿದ್ದ ಮಗ ಎಲ್ಲವನ್ನೂ ಕಳೆದುಕೊಂಡು ಮರಳಿ ಮಣ್ಣಿಗೆ ಬಂದು ಬಡವನಾಗಿದ್ದ. ಹೀಗೆ ದಾನಪ್ಪ ಮಾಸ್ತರರ ಸಂಸಾರ, ಧಾರವಾಡದ ಮಣ್ಣು, ಶ್ರಾವಣದ ಮಳೆಯ ರಾಡಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ
sಸ್ಮೃತಿ
ಇದರಲ್ಲಿ ಲೇಖಕಿಯ ಕಾಲೇಜು ದಿನಗಳ ನೆನವರಿಕೆ ಇದೆ. ನೆನಪುಗಳನ್ನು ಅಕ್ಷಯನಿಧಿ, ಬಾಳಿನ ಬುತ್ತಿ ಎಂದು ಕರೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ ಓದುತ್ತಿದ್ದಾಗ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭ, ಅಲ್ಲಿ ಚೀಟಿ ಆಟ, ಪ್ರತಿ ಒಬ್ಬ ವಿದ್ಯಾರ್ಥಿ ಒಂದೊಂದು ಚೀಟಿಯನ್ನು ಎತ್ತಿ ಅದರಲ್ಲಿ ಬರೆದಂತೆ ನಟಿಸುವುದು, ಲೇಖಕಿಗೆ ಬಂದ ಚೀಟಿಯಲ್ಲಿ ‘ತಂಗಿ ಒಗಟ ಹಾಕಿ ಗಂಡನ ಹೆಸರು ಹೇಳವ್ವ’ ಎಂದು ಬರೆದಿತ್ತು. ಚೀಟಿಯಲ್ಲಿ ಬರೆದಂತೆ ಗಂಡನ ಹೆಸರನ್ನು ಹೇಳಿ ಒಗಟನ್ನು ಹೇಳಬೇಕಿತ್ತು. ಅಂಜಿಕೆ, ನಾಚಿಕೆಯಿಂದ, ಸೀರೆಯ ಸೆರಗಿನ ತುದಿಯನ್ನು ಹೊಸೆಯುತ್ತ ಧೈರ್ಯದಿಂದ ಹೇಳಿದ ಒಗಟು ‘ಕೈ ಕೆಸರಾದರೆ ಬಾಯಿ ಮೊಸರು, ಲಗ್ನವಾಗದೆ ನಾನು ಏನು ಹೇಳಲಿ, ಯಾವ ಹುಚ್ಚರಾಯರ ಹೆಸರು?’ ಇಂತಹ ಗಳಿಗೆಯನ್ನು ಅವರು ನೆನೆಸಿಕೊಂಡು ನಂತರ ಕೈ ಹಿಡಿದು ಸಪ್ತಪದಿ ತಿರುಗಿದಾಗ ಪತಿಯನ್ನು ಹುಚ್ಚರಾಯನೆಂದು ಮದುವೆಗೆ ಬಂದಿದ್ದ ಗೆಳೆಯರೆಲ್ಲ ನೆನೆಸಿಕೊಂಡು ನಕ್ಕು ಗೇಲಿ ಮಾಡಿದ್ದನ್ನು ವಿವರಿಸಿದ್ದಾರೆ
ರುಚಿ
ಈ ಪ್ರಬಂಧದಲ್ಲಿ ತಮ್ಮ ತಾಯಿಯ ಕೈ ರುಚಿಂii ಬಗ್ಗೆ ಬರೆದಿದ್ದಾರೆ. ತಂದೆಯೊಂದಿಗೆ ತಾನು ಊಟಕ್ಕೆ ಕುಳಿತಾಗ ತಾಯಿಯ ಕೈ ರುಚಿಯನ್ನು ತಂದೆ ಶ್ಲಾಘಿಸುವುದು, ಮಗಳಿಗೂ ತಾಯಿಯಾದವಳು ಅಡಿಗೆಯನ್ನು ಕಲಿಸಬೇಕು ಎಂದು ಸೂಚಿಸುವುದು, ಸಂಗೀತವನ್ನು ಯಾರಾದರೂ ಪುಸ್ತಕ ಓದಿ ಕಲಿಯುತ್ತಾರೆಯೇ? ಅದು ಗುರುಮುಖೇನ ಬರಬೇಕು. ಹಾಗೆ ಅಡಿಗೆಯೂ ಸಹ ತಾಯಿಯಿಂದಲೇ ಬರಬೇಕು. ಹೆಂಗಸರಿಗೆ ಅಡಿಗೆ ಬರಲಿಕ್ಕೆ ಬೇಕು. ಅಡಿಗೆ ಬರದೇ ಇದ್ರೆ ಅವಮಾನ ಎಂದು ಹೇಳುತ್ತಾರೆ. ಮನೆಯಲ್ಲಿ ಪತ್ನಿ ಮಾಡಿದ ಭಕರಿ ಚಟ್ನಿ, ಪುಂಡಿಪಲ್ಯವನ್ನು ಅವರ ತಂದೆ ಹೊಗಳುತ್ತಾ ಈ ಪಲ್ಯ ಮಾಡಿದವರ ಕೈಗೆ ಬಂಗಾರದ ಕಟ್ಟು ಹಾಕಿಸಬೇಕು. ಬಹಳ ರುಚಿ ಆಗಿದೆ ಎನ್ನುತ್ತಾರೆ. ಧಾರವಾಡದ ಮಣ್ಣಿಗೆ ರುಚಿ ಇದೆ, ನೀರಿಗೂ ರುಚಿ ಇದೆ. ಅಲ್ಲಿಯ ಊರಿನ ಮಣ್ಣಿನ ಗುಣ, ನೀರಿನ ಗುಣ, ಹವೆಯ ಗುಣ ರುಚಿಯಾದುದು. ಜನರು ರಸಿಕರು, ಸರಸ್ವತಿಯ ಪೂಜಕರು, ಇಲ್ಲಿನ ಲೈನ್ ಬಜಾರ್ ಫೇಡೆ ರುಚಿ. ತಿಂದವರಿಗೆ ಎಂದೂ ಮರೆಯಲು ಆಗದು. ಧಾರವಾಡದ ಶ್ರೇಷ್ಠ ಗಾಯಕರ ನಿರಾಡಂಬರವಾದ ಮಾತು ಸಹ ರುಚಿ. ಮನದುಂಬಿ ಹಾಡುವ ಭಜನೆ ಸಹ ರುಚಿ, ಧಾರವಾಡವೇ ರುಚಿ, ಧಾರವಾಡದ ಜನ ರುಚಿ, ಧಾರವಾಡದ ಹೊನ್ನು ರುಚಿ, ಧಾರವಾಡದ ಹೆಣ್ಣನ್ನು ಮದುವೆಯಾದ ಗಂಡಿಗೆ ಕೇಳಿ ಧಾರವಾಡ ಹೆಣ್ಣು ಸಹ ರುಚಿ ಎನ್ನುತ್ತಾರೆ.
ಬೆಣ್ಣೆಯ ಗಡಿಗೆ
ಬೆಣ್ಣೆ ತಂದುಕೊಡು ಭರಮಿಯ ಕಥೆ ಇದು. ಗಂಡ ಸತ್ತಿದ್ದ ಭರಮಿ ಹಾಲಿನ ವ್ಯಾಪಾರದವಳು, ಚೆಲುವೆ. ಎಮ್ಮೆ ಮಾರಾಟದ ನೆಪದಲ್ಲಿ ನವಲೂರು ಶಿವಪ್ಪ ಗೌಡರಿಗೆ ಪರಿಚಯವಾಗಿ ಆಕೆಯ ದೇಹದ ಮಾಟಕ್ಕೆ ಮನಸೋತು ಅವಳೊಂದಿಗೆ ಸ್ನೇಹ ಬೆಳೆಸಿ ಅವಳೊಂದಿಗೆ ಕಾಲಕಳೆಯುತ್ತಿದ್ದರು. ಗೌಡರಿಗೆ ಪತ್ನಿ ಗೌರಿ ಮತ್ತು ಮಗ ಇದ್ದರು. ಭರಮಿ ಮಗ ಬಸವಣ್ಣಿ. ಒಂದು ದಿನ ಎಮ್ಮೆ ಮನೆಗೆ ಬಂದಿರಲಿಲ್ಲ. ಗುಡುಗು- ಸಿಡಿಲಿನ ಆರ್ಭಟವಿದ್ದಾಗಲೇ ಹುಡುಕಲು ಹೋದ ಬಸವಣ್ಣಿ ಸಿಡಿಲಿನಾಘಾತಕ್ಕೆ ಸಿಲುಕಿ ಸಾವನ್ನಪ್ಪಿದ. ಬೆಣ್ಣೆ ಗಡಿಗೆಗಳನ್ನು ಎತ್ತಿನಗಾಡಿಯಲ್ಲಿ ತಂದು ಧಾರವಾಡದ ಸಂತೆಯಲ್ಲಿ ಮಾರುತ್ತಿದ್ದ, ಮನೆಮನೆಗೆ ತಲುಪಿಸುತ್ತಿದ್ದ ಭರಮಿಯನ್ನು ಈ ದುರಂತ ಛಿದ್ರಗೊಳಿಸಿತ್ತು. ಬೆಣ್ಣೆಯ ಗಡಿಗೆಗಳು ಚಿತಾಭಸ್ಮದ ಕುಂಭಗಳಾಗಿ ಕಾಡುತ್ತಿವೆ ಎಂದು ಲೇಖಕಿ ಹೇಳುತ್ತಾರೆ.
ಋಣ
ಧಾರವಾಡದ ಗಣ್ಯ ವಕೀಲ ಸಮೀರ್ ಶ್ರೀಮಂತ. ಸಂಜನಾಳನ್ನು ವಿವಾಹಿವಾಗಿ ಹತ್ತು ವರ್ಷವಾದರೂ ಮಕ್ಕಳಾಗಿರಲಿಲ್ಲ. ಹರಕೆ ಹೊತ್ತಿದರೂ ಫಲಿಸಿರಲಿಲ್ಲ. ಇಂತಹ ವೇಳೆ ಅಕಸ್ಮಾತ್ ಅವರ ಮನೆಗೆ ಯಾರೋ ಸಾಕಿದ ನಾಯಿಮರಿಯೊಂದು ಎಲ್ಲಿಂದಲೋ ತಪ್ಪಿಸಿಕೊಂಡು ಬಂದು ಸೇರಿಕೊಂಡಿತ್ತು. ಮರಿಯನ್ನುನು ಮಗುವಂತೆ ಸಾಕಿ ಅದಕ್ಕ್ಕೆ ದಾಸ ಎಂದು ಹೆಸರಿಟ್ಟಳು. ಚೆನ್ನಾಗಿ ಬೆಳೆದ ದಾಸ ಒಂದು ದಿನ ಕಾಣೆಯಾಯಿತು. ಜಾಹೀರಾತು ಕೊಟ್ಟರು. ಕಣ್ಮರೆಯಾದ ೪ನಯ ದಿನ ವಾಪಸ್ ಮನೆಗೆ ಬಳಲುತ್ತ ಬಂದ. ಕುತ್ತಿಗೆಗೆ ಗೋಣಿ ಚೀಲ ಕಟ್ಟಿತ್ತು. ಗೀತಾ ಅಂಜನಾಳ ನಾದಿನಿ, ಅಂಜನಾಳನ್ನು ಮತ್ತ ದಾಸನನ್ನು ಕಂಡರೆ ಆಗುತ್ತಿರಲಿಲ್ಲ. ಈ ಸಿಟ್ಟಿಗೆ ಗೀತಾ ಮನೆ ಆಳು ಶಿವಪ್ಪನಿಗೆ ೧೦ ರೂ. ಕೊಟ್ಟು ದಾಸನಿಗೆ ಚೆನ್ನಾಗಿ ಥಳಿಸಿ ಗೋಣಿಚೀಲದಲ್ಲಿ ತುಂಬಿ ಬಾಯಿ ಕಟ್ಟಿ ಉಣಕಲ್ ಕೆರೆ ಹತ್ತಿರ ಬಿಸಾಡಿ ಬರಲು ಹೇಳಿದ್ದಳು. ಆತ ಹಾಗೆಯೇ ಮಾಡಿದ್ದ. ಮನೆಯಿಂದ ೧೦ ಮೈಲು ದೂರವಿದ್ದರೂ ಚೀಲ ಹರಿದುಕೊಂಡು ಎದ್ದು ದಾಸ ಮನೆಗೆ ಮರಳಿದ್ದ. ಇದನ್ನೇ ಋಣ ಎನ್ನುವುದು. ಇದು ಅಂಜನಾಗೆ ಗೊತ್ತಾದ್ದರಿಂದ ಮಯಾದೆ ಹೋದಂತಾಗಿ ‘ದಾಸ ಇರುವವರಗ ಈ ಮನೆಗೆ ಕಾಲಿಡುವುದಿಲ್ಲ’ ಎಂದು ಹೇಳಿ ಹೋಗಿದ್ದಳು. ಕೆಲವು ದಿನಗಳಲ್ಲಿ ಸಂಜನಾಗೆ ಜ್ವರ ಬಂದು ಧನುರ್ವಾಯು ತಗುಲಿ ಸತ್ತುಹೋದಳು. ಆಕೆಯನ್ನು ಸುಟ್ಟುಬಂದರೂ ದಾಸ ಅಲ್ಲಿಂದ ಕದಲಲಿಲ್ಲ. ನಂತರ ಅಂಜನಾ ಹೋಗುತ್ತಿದ್ದ ದಾರಿಯಲ್ಲೆಲ್ಲಾ ಹೋಗಿ ಬರುತ್ತಿದ್ದ. ಈ ಮಧ್ಯೆ ಸಮೀರ ಎರಡನೆಯ ಮದುವೆಯಾದ, ಮಗ ಹುಟ್ಟಿದ. ದಾಸನಿಗೆ ಅನ್ನವಿಕ್ಕಿದ ಅಂಜನಾಳ ಕೈ ಋಣ ಹಾಗೆಯೇ ಮುಂದುವರೆಯುವಂತೆ ನೋಡಿಕೊಂಡ. ಕೊನೆಯವರೆಗೂ ದಾಸ ವಿಶ್ವ್ವಾಸಿಗನಾಗಿ ಮನೆಯ ಋಣ ತೀರಿಸುತ್ತಲೇ ಇದ್ದ.
ಮೊಸರವಲಕ್ಕಿ
ಪ್ರಬಂಧದಲ್ಲಿ ಧಾರವಾಡದ ಮೊಸರು ಅವಲಕ್ಕಿಯ ರುಚಿಯನ್ನು ವಿವರಿಸಿದ್ದಾರೆ. ಎಂಥವರ ಬಾಯಿಯಲ್ಲಿಯೂ ನೀರು ಸುರಿಯುತ್ತದೆ. ಮೊಸರವಲಕ್ಕಿ ಎಂದರೆ ಮೊಸರು ಅವಲಕ್ಕಿ, ಅವಲಕ್ಕಿ ಮೊಸರಲ್ಲ. ಮೊಸರವಲಕ್ಕಿಯ ರುಚಿಯು ಅವಲಕ್ಕಿ ಮೊಸರಿಗೆ ಬಾರದು. ಮೊಸರು ಕೆನೆಕೆನೆಯಾಗಿ ಗಟ್ಟಿ ಇರಬೇಕು. ಗಡಿಗೆ ಮೊಸರಿದ್ದರಂತೂ ಚೆಂದ. ಮೊಸರಿಗೆ ಅವಲಕಿ, ಉಪ್ಪು ಬೆರೆಸಬೇಕು. ಜೊತೆಗಿಷ್ಟು ಚಟ್ನಿಪುಡಿ ಇದ್ದರೆ ಒಳ್ಳೆಯದು. ಹಸಿಮೆಣಸಿನಕಾಯಿ, ಕೊತ್ತಂಬರಿ, ಉಳ್ಳಾಗಡ್ಡಿಯನ್ನು ಸಣ್ಣಕ್ಕೆ ಹೆಚ್ಚಿ ಬೆರೆಸಬೇಕು ಎಂದು ಧಾರವಾಡದ ಭಾಷೆಯಲ್ಲಿ ಅತಿ ಸುಂದರವಾಗಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅವಲಕ್ಕಿ ಮಾಡುವುದರಲ್ಲಿ ಲೇಖಕಿ ಅವರ ಮಾವನವರಿಂದ ‘ತಜ್ಞೆ’ ಎಂಬ ಬಿರುದನ್ನು ಪಡೆದಿದ್ದರು. ಸಾಂಕೇತಿಕ ಸಾಮಾನ್ಯ ಉಪಾಹಾರ ಮೊಸರವಲಕ್ಕಿ ಎನ್ನುವ ಲೇಖಕಿ, ನನ್ನ ನೆನಪಿನ ಪುಟದಲ್ಲಿ ಅಚ್ಚಳಿಯದೇ ನಿಂತ ಮೊಸರವಲಕ್ಕಿಯೇ ‘ಪ್ರಸಾದ’ ಎಂದು ಹೇಳಿಕೊಳ್ಳುತ್ತಾರೆ.
ಕೆಂಪು ಡಬ್ಬಿ
ಈ ನಮ್ಮ ಸಂಸಾರವು ಪೋಸ್ಟ್ ಆಫೀಸಿನ ಕೆಂಪು ಡಬ್ಬಿಂii ಹಾಗೆ ರಂಧ್ರ್ರವನ್ನು ಹೊಂದಿದೆ. ಸಂತಾಪ, ಸಮಾಧಾನ, ಸುಖ, ದುಃಖ, ಮಮತೆ, ರಾಗ- ಲೋಭ ಈ ಸಪ್ತಸ್ವರಗಳ ಕೋಲಾಹಲ ಇದೆ. ಜೀವನವೆಂಬ ಈ ಕೆಂಪು ಡಬ್ಬಿಯಲ್ಲಿ ಇರುವುದನ್ನು ಲೇಖಕಿ ಪೋಸ್ಟ್‌ಮ್ಯಾನ್ ಸಿದ್ದಪ್ಪನ ಮಗಳು ರಮಾ ಹೆರಿಗೆಯಾದ ನಂತರ ಸರಿಯಾಗಿ ಆರೈಕೆ ಸಿಗದೆ ಸತ್ತುಹೋದ ವಿಚಾರ ಮತ್ತು ಗಂಡ ತನಗೆ ಬರೆಯುತ್ತಿದ್ದ ಸುಖ -ದುಃಖಗಳ ಪತ್ರಗಳ ಹಿನ್ನೆಲೆಯಲ್ಲಿ
ಬರೆದಿದ್ದಾರೆ.
ಹತ್ತು ಐದು
ಗೋಪಿ ಕಾಲೇಜಿನಲ್ಲಿ ಹುಡುಗಿಯರ ಹುಚ್ಚಿನ ವಿದ್ಯಾರ್ಥಿಯಾಗಿದ್ದ. ಯಾವಾಗಲೂ ಹುಡುಗಿಯರ ಲಕ್ಷ್ಯವನ್ನು ತನ್ನೆಡೆಗೆ ಸೆಳೆದುಕೊಳ್ಳಲು ದೊಡ್ಡ ಧ್ವ್ವನಿ ತೆಗೆದು ಮಾತನಾಡುತ್ತಿದ್ದ, ಚೇಷ್ಟೆ ಮಾಡುತ್ತಿದ್ದ. ಗೋಪಿ ತಾಯಿ ಮಾನಸಿಕ ರೋಗಿಯಾಗಿದ್ದಳು. ತಂದೆ ದಾಂಡೇಲಿಯಲ್ಲಿ ಚಿಕ್ಕ ಕೆಲಸದಲ್ಲಿದ್ದರು. ಇಬ್ಬರು ಚಿಕ್ಕ ತಮ್ಮಂದಿರು ಹಾಗೂ ಒಬ್ಬ ತಂಗಿ ಇದ್ದರು. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಈತನ ಜೊತೆಗೆ ಈತನ ಅತ್ತೆಯರದಾಗಿತ್ತು. ಗೋಪಿ ಕುಟುಂಬಕ್ಕೆ ಪರಿಚಯದವರಾದ ಲೇಖಕಿ ಒಮ್ಮೆ ಕರೆಯ ಮೇರೆಗೆ ಅವನ ಮನೆಗೆ ಹೋಗುತ್ತಾರೆ. ಮನೆಯಲ್ಲಿ ಎಷ್ಟು ಕಷ್ಟವಿದ್ದರೂ ಗೋಪಿ ತನ್ನ ದುಃಖವನ್ನು ಬೇರೆಯವರ ಎದುರು ತೋರಿಸದಿರುವುದು ಅವರಿಗೆ ಕಂಡುಬರುತ್ತದೆ. ನಾಟಕದ ಗೀಳು, ಹಾಡಿನ ಹುಚ್ಚು, ಬರೆಯುವ ಚಪಲ ಅವನಿಗೆ ಇತ್ತು. ಗೋಪಿಯ ತಂಗಿ ಹಾವು ಕಡಿದು ಸತ್ತು ಹೋಗಿದ್ದಳು. ಆಕೆಯ ಅಂತ್ಯ ಸಂಸ್ಕಾರಕ್ಕೆ ಅವನಲ್ಲಿ ಹಣವಿರಲಿಲ್ಲ. ಲೇಖಕಿಯ ಬಳಿ ಬಂದು ೧೫ ರೂಪಾಯಿ ಕೇಳುತ್ತಾನೆ. ಅವರು ೧೦, ೫ ರೂ. ನ ನೋಟು ಕೊಡುತ್ತಾರೆ. ಈ ಹಣದಿಂದ ಕಟ್ಟಿಗೆಯನ್ನು ಖರೀದಿಸಿ ತನ್ನ ತಂಗಿಯ ಅಂತ್ಯಕ್ರಿಯೆ ನಡೆಸುತ್ತಾನೆ. ಈ ವಿಷಯ ಲೇಖಕಿಯೇ ಗೊತ್ತಾದ ನಂತರ ತಲೆಸುತ್ತಿದಂತಾಗುತ್ತದೆ. ತಂದೆಯ ಅನಾರೋಗ್ಯ, ಹುಚ್ಚಿ ತಾಯಿ, ವಿಧವೆ ಮುದುಕಿ ಅತ್ತೆ, ಚಿಕ್ಕ ತಮ್ಮಂದಿರು, ಬಡತನ, ಎಲ್ಲದಕ್ಕೂ ಮಿಗಿಲಾಗಿ ತಂಗಿಯ ಸಾವು, ಆತನ ಜೀವವನ್ನು ಹೈರಾಣು ಮಾಡುತ್ತದೆ. ಇನ್ನೊಂದೆಡೆ, ಅಪ್ಪ ಕೆಲಸ ಬಿಟ್ಟು ಬಂದಿದ್ದನು. ಮನೆಯಲ್ಲಿ ದುಡಿಮೆ ಇಲ್ಲದ ಕಾರಣ ಗೋಪಿ ಹೋಟೆಲ್ ಒಂದರಲ್ಲಿ ಬಿಲ್ ಬರೆಯುವನಾಗಿದ್ದ. ಅಲ್ಲಿಯೂ ಕೆಲಸ ಬಿಟ್ಟು ರಾತ್ರಿ ರೈಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ . ಒಮ್ಮೆ ಲಗೆಜ್ ಹಾಕಿದ ನಂತರ ಪ್ರಯಾಣಿಕ ಹಣ ಕೊಡದ ಕಾರಣ ಅದರ ವಸೂಲಿಗೆ ರೈಲು ಹತ್ತಿದವನು ಹಿಡಿತ ತಪ್ಪಿ ಕೆಳಕ್ಕೆ ಬಿದ್ದು ಸಾವಿನ ಅಂಚಿನಲ್ಲಿರುತ್ತಾನೆ. ಟಾಂಗಾದ ಮಾಲಕನೊಬ್ಬ ಆತನನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಆತನ ಕೈಲಿ ಹದಿನೈದು ರೂಪಾಯಿ ಕೊಟ್ಟು ಲೇಖಕಿಗೆ ತಲುಪಿಸಲು ಸೂಚಿಸುತ್ತಾನೆ. ಅದೇ ರಾತ್ರಿ ಗೋಪಿ ಸಾವನ್ನಪ್ಪುತ್ತಾನೆ. ತಾನು ಪಡೆದ ೧೫ ರೂಪಾಯಿ ಸಾಲವನ್ನು ಲೇಖಕಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಾನೆ ಆದರೆ ಆ ಹಣವನ್ನು ಲೇಖಕಿ ಇಟ್ಟುಕೊಳ್ಳದೆ ಕಾಲೇಜಿನ ಬಡ ವಿದ್ಯಾರ್ಥಿ ನಿಧಿಗೆ ಕೊಡುತ್ತಾರೆ.
ಗೋವಿನ ಕಥೆ
ಲೇಖಕಿ ಮತ್ತು ಸರಸಿ ಇಬ್ಬರೂ ಗೆಳತಿಯರು. ಸರಸಿಗೆ ೫ ವರ್ಷವಾಗಿರುವಾಗಲೇ ಅವಳ ತಂದೆ ತೀರಿಹೋಗಿದ್ದರು. ಇಬ್ಬರೂ ಆಟವಾಡುತ್ತ ಹಾಡು ಹೇಳುತ್ತಿದ್ದರು. ಗೋವಿನ ಹಾಡು ಲೇಖಕಿಗೆ ಇಷ್ಟವಾದದ್ದಾಗಿತ್ತು. ಸರಸಿ ಆ ಹಾಡನ್ನು ಕೇಳಿದರೆ ಕಣ್ಣೀರು ಹಾಕುತ್ತಿದ್ದಳು. ಹೀಗೇಕೆ ಎಂದು ಅರಿಯದಾದ ಲೇಖಕಿ ಅಜ್ಜಿಯರಲ್ಲಿ ಕೇಳಿದಾಗ ಆಕೆಯ ಇತಿಹಾಸದ ಅರಿವಾಗುತ್ತದೆ. ತಂದೆ ಇಲ್ಲ, ಮನೆಯಲ್ಲಿ ಕಷ್ಟ್ಟ ಎಂದು ಗೊತ್ತಾಗುತ್ತದೆ. ಇದರಿಂದ ಸರಸಿಯ ತಾಯಿ ಬಾಗಲಕೋಟೆಯಲ್ಲಿ ಅತ್ತೆಮನೆಯಲ್ಲಿ ಮಗಳೊಡನೆ ಇರುವಂತಾಗಿತ್ತು. ಆದರೆ ಅಲಿ ಅತ್ತೆ ಮತ್ತು ನಾದಿನಿಯರ ಕಾಟಕ್ಕೆ ಸೋತುಹೋದರು. ಸರಸಿ ಎಸ್ಸೆಸೆಲ್ಸಿಯಲ್ಲಿ ಬಾಗಲಕೋಟೆಗೆ ಮೊದಲ ಸ್ಥಾನ ಬಂದಿದ್ದಳು. ಕೆಲವೇ ವರ್ಷದಲ್ಲಿ ಬೆಳಗಾವಿಯ ಬಿ ಇ ಇಂಜಿನೀಯರ್ ಜೊತೆ ಮದುವೆಯಾಯಿತು. ಬಳಿಕ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಇದರಿಂದ ಅನಾಥ ಪ್ರಜ್ಞೆ ಕಾಡಿ ಆ ಹಾಡು ಹಾಡಿದಾಗ ಕಣ್ಣೀರು ಹಾಕುತ್ತಿದ್ದಳು. ಸರಸಿಯ ಪಾಲಿಗೆ ಗೋವಿನ ಹಾಡು ನೋವಿನ ಕಥೆ. ನನಗೆ ಬದುಕಿನ ಅರಿವು ಮಾಡಿಕೊಟ್ಟ ಕಥೆ ಎನ್ನುತ್ತ್ತಾರೆ.
ಹೀಗೆ ತಮಗಾದ ನೋವು- ನಲಿವುಗಳನ್ನು ಇಲ್ಲಿ ಓದುಗರಿಗೆ ಉಣಬಡಿಸಿದ್ದಾರೆ. ಅವರ ಕಣ್ಣಿನಲ್ಲಿ ನೀರು ಭರಿಸುವಂತಹ ಸನ್ನಿವೇಶ ಎದುರಾದಾಗ ಅದನ್ನು ಓದಿದ ನಮ್ಮ ಕಣ್ಣೂ ಹನಿಯತೊಡಗುತ್ತದೆ. ಅಷ್ಟೊಂದು ಹೃದಯಸ್ಪರ್ಶಿಯಾದ ಲಲಿತ ಪ್ರಬಂಧಗಳು ಇಲ್ಲಿವೆ.
................................

Comments
Post a Comment