ಸೃಜನಶೀಲ ಸಾಹಿತ್ಯ ಸೌಂದರ್ಯದ ಅನಾವರಣ
 
‘ತಾವರೆಯ ತೇರು’



‘ತಾವರೆಯ ತೇರು’ ಹೆಸರು ಹೇಳುವಂತೆ ಇದೊಂದು ಕಾವ್ಯ ಪ್ರತಿಮೆ, ವಿಮರ್ಶಾ ಸಂಕಲನ. ವಿಮರ್ಶಕ , ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿಯ ಕೃರ್ತ. ಇದರಲ್ಲಿ ಒಟ್ಟು ೨೨ ವಿಮರ್ಶಾ ಬರಹಗಳಿವೆ.

 ಇಲ್ಲಿರುವ ಎಲ್ಲಾ ಲೇಖನಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಿವಿಧ ಮುಖಗಳನ್ನು ವಿಮರ್ಶಿಸುತ್ತವೆ. ಇಲ್ಲಿ ಕವಿರಾಜಮಾರ್ಗ ಪೂರ್ವದಿಂದ ಹಿಡಿದು ಆಧುನಿಕ ಯುಗದವರೆಗಿನ ಕನ್ನಡ ಕಾವ್ಯಗಳ ಕುರಿತ ಸಹೃದಯ ವಿವೇಚನೆ ಇದೆ. ಅಲ್ಲಮಪ್ರಭುವಿನ ಬೆಡಗಿನ ವಚನ, ಕನಕ ಪುರಂದರರ ಕೀರ್ತನೆ, ನಯಸೇನ, ರಾಘವಾಂಕರ ಕಾವ್ಯ, ಕುವೆಂಪು, ಡಿವಿಜಿ, ಎಸ್ ವಿ ಪರಮೇಶ್ವರ ಭಟ್ಟರು, ಬನ್ನಂಜೆ ಗೋವಿಂದಾಚಾರ್ಯ, ವೀರಪ್ಪ ಮೊಯ್ಲಿ, ಅಂಬಾತನಯ ಮುದ್ರಾಡಿ  ಹೀಗೆ ಪ್ರಾಚೀನರಿಂದ ಅರ್ವಾಚೀನದವರೆಗಿನ ಕಾವ್ಯ ಯಾತ್ರೆಗಳಿವೆ. ಕನ್ನಡ ಮನಸ್ಸಿನ ಸೃಜನಶೀಲ ಸಾಹಿತ್ಯ ಸೌಂದರ್ಯವನ್ನು ಅನಾವರಣ ಮಾಡಿದ್ದಾರೆ.

 

‘ತಾವರೆಯ ತೇರು’ 

ಇದು ಕುವೆಂಪು ಅವರ ಒಂದು ಕವನ ಸಂಕಲನ. 

ನಿನ್ನ ಮೌನದ ಅರ್ಥವೇನಿಹುದೋ ಅದನರಿಯೆ

ನಮ್ಮ ತಾವರೆ ತೇರು ತೇಲುತಿಹುದು

  ಈ ಸಾಲುಗಳಲ್ಲಿರುವ ಅರ್ಥ ಗಮನಾರ್ಹಹವಾದು. ಮಂದಹಾಸ ಬೀರುತ್ತಿರುವ ಕಲಾ ಸುಂದರಿ ಮಾತನಾಡದೆ ಮೌನಿಯಾಗಿರುವುದೇಕೆ ಎಂಬುದರ ಅಂತರಾರ್ಥ ಕವಿ ತಿಳಿದಿಲ್ಲ.  ಈ ಮೌನದ ರಹಸ್ಯವನ್ನು ಶೋಧಿಸಲು ಕವಿ ಹೃದಯ ಮುಂದಾಗಿರುವುದನ್ನು ಇಲ್ಲಿ ಹೇಳುತ್ತಾ ತಾವರೆಯ ತೇರು ತೇಲುತ್ತಿವೆ ಕಲೆಯನ್ನು ಅರ್ಥೈಸುವ ಪ್ರಕ್ರಿಯೆಯಲ್ಲಿ ಸಹೃದಯ ತಲೆದೂಗುವ ತನ್ಮಯತೆ ಇದು ಎನ್ನುತ್ತಾರೆ. ತಾವರೆಯ ತೇರು ಒಂದು ಕಲಾವಿಮಾನ ಯಾತ್ರೆ. ಅದರ ಉದ್ದೇಶ ಅನಂತತೆಯನ್ನು ಅರ್ಥೈಸಿಕೊಳ್ಳುವುದು. ತಾವರೆ ತೇರು  ಆಧ್ಯಾತ್ಮ ಶುದ್ಧಿಯನ್ನು ಸಾಧಿಸಲು ಬಳಸಿದ ಒಂದು ಸಾಧನ ಮಾತ್ರ ಎನ್ನುತ್ತಾರೆ.


  ಡಿವಿಜಿಯವರ ‘ಅಂತಃಪುರಗೀತೆ’ 

ಈ ಕೃತಿ ಬೇಲೂರಿನ ಶಿಲಾಬಾಲಿಕೆಯರ ಕುರಿತಾದದ್ದು. ಈ ಶಿಲಾಬಾಲಿಕೆಯರು ದೇಶ ವಿದೇಶಗಳಿಂದ ಬಂದ ಬಹುಭಾಷಾ ವಿಲಾಸಿನಿಯರು. ಹಾಗಾಗಿ ಬೇಲೂರು ಕೇಶವನ ಅಂತಃಪುರವು ಶೃಂಗಾರ ನರ್ತನದಿಂದ ಕೂಡಿದೆ. ಇಲ್ಲಿ ಕೇಶವನ ಸನ್ನಿಧಿ ಎನ್ನುವುದು ದೇಹ- ಮನಸ್ಸು -ಆತ್ಮಗಳ ಅನ್ಯೋನ್ಯತೆಯನ್ನು ಅನುಭವಿಸುವ ಆಸ್ಥಾನ. ಇಂದ್ರಿಯಗಳ ಮೂಲಕ ಆನಂದಾನುಭೂತಿಯನ್ನು ಇಲ್ಲಿ ಅನುಭವಿಸಬಹುದಾಗಿದೆ. ಆಧ್ಯಾತ್ಮಿಕತೆಯನ್ನು ಆಂತರ್ಯದಲ್ಲಿ ಹಿಡಿದಿಟ್ಟುಕೊಂಡ ಈ ಕೃತಿಯ ಸೌಂದರ್ಯ ಅನ್ವೇಷಣೆಯನ್ನು ಮುಖ್ಯ ಕಾಯಕವನ್ನಾಗಿಸಿಕೊಂಡ ಕಾವ್ಯ ಕುಸುಮ. ಇಲ್ಲಿ ಸಹೃದಯನ ಅಂತರಂಗವೇ ಅಂತಃಪುರವಾಗಿ ಪರಿವರ್ತನೆಗೊಳ್ಳುತ್ತದೆ. ಚನ್ನಕೇಶವನ ಅನುಸಂಧಾನ ಉಂಟಾಗಿ ಆನಂದಾನುಭೂತಿ ಸಾಧ್ಯವಾಗುತ್ತದೆ.  


‘ರಾಘವಾಂಕನ ಹರಿಶ್ಚಂದ್ರ ಕಾವ್ಯ’

 ಇದು ವಸ್ತು ಪೌರಾಣಿಕವಾಗಿದ್ದರೂ ಅದರಲ್ಲಿ ಸೃಜನಶೀಲ ಬದಲಾವಣೆಗಳನ್ನು ಮಾಡಿದ್ದು ರಾಘವಾಂಕನ ಪ್ರತಿಭೆಗೆ ಸಾಕ್ಷಿಯಾಗಿದೆ. ಗಾಣಗಾತಿಯರ  ಪ್ರಸಂಗ,  ನಕ್ಷತ್ರಕನ ಪಾತ್ರ  ಸೃಷ್ಟಿ,  ವಿಶ್ವೇಶ್ವರ ಸಾಕ್ಷಾತ್ಕಾರಗಳು ರಾಘವಾಂಕನ ವಿನೂತನ ಸೃಷ್ಟಿ ಎಂಬುದು ಗಮನಾರ್ಹ. ಹರಿಶ್ಚಂದ್ರ ಒಬ್ಬ ಸಾಮಾನ್ಯ ಮನುಷ್ಯನಾಗಿ ಇಲ್ಲಿ ಚಿತ್ರಿತನಾಗಿದ್ದಾನೆ. ಶಾಪದಿಂದಾಗಲಿ, ಅನುಗ್ರಹದಿಂದಾಗಲಿ ಆತ ಹುಟ್ಟಿದವನಲ್ಲ. ಶಿವನೊಲುಮೆ  ಪಡೆದ ಮೇಲೂ ಆತ ಕೈಲಾಸಕ್ಕೆ ಹೋಗಿಲ್ಲ. ಈ ನೆಲದಲ್ಲಿ ಹುಟ್ಟಿ  ಎಲ್ಲರೊಂದಿಗೆ  ಬದುಕಿ ಬಾಳಿದ್ದಾನೆ. ಸಾಧನೆಯ ಮೂಲಕ ಸಾಕ್ಷಾತ್ಕಾರವನ್ನು ಪಡೆದಿದ್ದಾನೆ. ಸತ್ಯವೆಂಬ ಜೀವನ ಮೌಲ್ಯವನ್ನು ಒಪ್ಪಿಕೊಂಡು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಹೆಣಗಾಡಿದ್ದಾನೆ ಎನ್ನುವುದನ್ನು ವಿವರಿಸಿದ್ದಾರೆ.


  ‘ಉಡುತಡಿಯ ಮಹಾದೇವಿಯ ರಗಳೆ’

 ಇದು ಹಂಪೆಯ ಹರಿಹರ ಕವಿ ವಿರಚಿತ ಅಕ್ಕಮಹಾದೇವಿಯ ರಗಳೆ. ಕಾವ್ಯ ಪ್ರಕಾರದಲ್ಲಿ ಪ್ರಮುಖ ಕೃತಿ ಇದು. ಅಕ್ಕನ ಬಾಲ್ಯ, ಶಿವಪೂಜೆ, ಸಂಸಾರ, ತ್ಯಾಗ, ಪ್ರಯಾಣ, ಸಿದ್ಧಿ, ಬದುಕಿನ ಘಟ್ಟಗಳನ್ನು ತಿಳಿಸುವ ಈ ಕಾವ್ಯಕ್ಕೂ ಚಾಮರಸ, ಚನ್ನಬಸವ ಮೊದಲಾದವರು ರಚಿಸಿದ ಕಾವ್ಯಕ್ಕೂ ವ್ಯತ್ಯಾಸವಿದೆ. ಹರಿಹರನ ಕಾವ್ಯದಲ್ಲಿ ಪಾರ್ವತಿಯ ಸೇವಕಿಯಾಗಿ ಅಕ್ಕಮಹಾದೇವಿ ಕಂಡುಬರುತ್ತಾಳೆ. ಅಕ್ಕಮಹಾದೇವಿಯ ಬದುಕು ಒಂದು ದುರಂತ ಕಾವ್ಯದ ಪುಟಗಳಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಹರಿಹರನ ಕಾವ್ಯದಲ್ಲಿ ಅಕ್ಕಮಹಾದೇವಿ ಕೌಶಿಕನೊಂದಿಗೆ ವಿವಾಹವಾಗಿ ದೈಹಿಕ ಸಂಪರ್ಕವಿತ್ತು ಎಂಬ ಪ್ರಸ್ತಾಪವೇ ಇಲ್ಲ. ಆಕೆ ಅನುಭವ ಮಂಟಪಕ್ಕೆ ಬಂದು ವಚನಕಾರರನ್ನು ಭೇಟಿಯಾಗಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದನ್ನು ಮಾತ್ರ ಹೇಳುತ್ತಾರೆ.


‘ಕವಿರಾಜಮಾರ್ಗ’

  ಇದು ಕನ್ನಡದ ಮೊಟ್ಟ ಮೊದಲ ಅಲಂಕಾರ ಗ್ರಂಥವಾಗಿದೆ. ಪ್ರಾಚೀನ ಕಾಲದಲ್ಲಿದ್ದ ಕನ್ನಡ ಕವಿಗಳನ್ನು ಸ್ಪಷ್ಟವಾಗಿ ದಾಖಲಿಸಿದೆ. ಇದರಲ್ಲಿ ಉಲ್ಲೇಖಿತವಾದ ಅನೇಕ ಲಕ್ಷ್ಯಪದ್ಯಗಳು ಪೂರ್ವ ಕವಿ ಕೃತವೆಂದು ವಿದ್ವಾಂಸರು ಊಹಿಸಿದ್ದಾರೆ. ರಾಜಮಾರ್ಗ ಪೂರ್ವಯುಗದಲ್ಲಿ ಕಂಡುಬರುವ ಅನೇಕ ಶಾಸನ ಪದ್ಯಗಳು ಆ ಕಾಲದ ಕನ್ನಡ ಭಾಷೆಯ ರೀತಿ ನೀತಿಗಳನ್ನು ವಸ್ತು ವಿನ್ಯಾಸಗಳನ್ನು ದಾಖಲಿಸಿವೆ.  


‘ದಾಸ ಸಾಹಿತ್ಯ ಸುಧೆ’

  ಅಮೂರ್ತವಾದ ಭಗವತ್ ಶಕ್ತಿ ದಾಸಸಾಹಿತ್ಯಕ್ಕೆ ಇದೆ. ಜಡವು ಚೇತನವಾಗುವ ಸಮರ್ಥ ಸಂಕೇತ ಇದರಲ್ಲಿ ಅನಾವರಣಗೊಂಡಿದೆ. ಸಂಸ್ಕೃತ ಮಂತ್ರೋಪಾಸನೆಯ ಬದಲಿಗೆ ಕನ್ನಡದಲ್ಲಿ ಕೀರ್ತನೆಯ ಸ್ವರೂಪವನ್ನು ಜಾರಿಗೆ ತಂದು ಜನಸಾಮಾನ್ಯರಲ್ಲಿ ಧರ್ಮದ ನಿಜರೂಪವನ್ನು ದಾಸ ಸಾಹಿತ್ಯ ತೋರಿದೆ. ಜನಪದರ ಬಾಯಲ್ಲಿ ಭಕ್ತಿಗೀತೆಗಳು ನೆಲೆ ನಿಲ್ಲುವಂತೆ ಮಾಡಿದೆ.  ಬದುಕಿನೊಂದಿಗೆ ಒಂದು ಚಳವಳಿಯಾಗಿ ಭಕ್ತಿ ಸಾಹಿತ್ಯ ನಿಂತಿದೆ.  


‘ಕುವೆಂಪು ರಾಮಾಯಣದ ಸಮಕಾಲಿನ ಸಂಗತಿಗಳು’

 ಇದರಲ್ಲಿ ವರ್ತಮಾನದ ಅನೇಕ ಸಂಗತಿಗಳು ಕಾವ್ಯದ ಶರೀರದಲ್ಲಿ ಬೆಸೆದುಕೊಂಡು ಯುಗ ಮೌಲ್ಯವನ್ನು ಸಾರಿ ಹೇಳುತ್ತವೆ. ಸಮನ್ವಯ, ಅಹಿಂಸೆ, ಸರ್ವೋದಯ, ಸಮಾನತೆ ಮತ್ತು ಸಾಮಾನ್ಯತ ಪ್ರೀತಿಗಳೇ ಈ ಯುಗದ ಮೌಲ್ಯಗಳು ಎನ್ನುವುದು ಈ ಮಹಾ ಕಾವ್ಯದಲ್ಲಿ ಪ್ರತಿಪಾದನೆಗೊಂಡಿದೆ. ರಾಮಾಯಣದ ಕಥೆ ರಾಮಾಯಣವನ್ನು ಆಧುನಿಕ ಯುಗಕ್ಕೆ ಸೆಳೆದು ತಂದು ಸಂಘರ್ಷದ ವಿಚಾರಗಳಿಂದ ಅದನ್ನು ಅನುಭವಿಸುವಂತೆ ರಸ ಋಷಿ ಕವಿ ಇಲ್ಲಿ ಮಾಡಿದ್ದಾರೆ.  


‘ಕುವೆಂಪು ಸಾಹಿತ್ಯ ಆಧ್ಯಾತ್ಮಿಕ ವೈಚಾರಿಕತೆ’

  ಇದರಲ್ಲಿ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಈ ವಿಶ್ವಮಾನವ ಗೀತೆಯಲ್ಲಿ ಮಹಾಕವಿಯ ಆಧ್ಯಾತ್ಮಿಕತೆ ಹರಳುಗಟ್ಟಿದೆ. ಅನಾದಿ, ಅನಂತ, ಅಗಮ್ಯ, ಅಪ್ರತಿಮ, ಅಗೋಚರ ಆತ್ಮವನ್ನು ಪ್ರಾಪಂಚಿಕ ಉಪಾಧಿಗಳಿಂದ ಕಟ್ಟಿ ಹಾಕಬಾರದೆಂದು ಅನಿರ್‍ಬಂಧಿತ ಸ್ವಾತಂತ್ರ್ಯದಿಂದ ವಿಶ್ವವಿಸ್ತಾರಕ್ಕೆ ಹರಿಯಬಿಡಬೇಕೆಂದು ಈ ಗೀತೆ ಸಾರಿ ಹೇಳುತ್ತದೆ.  ನಾಮರೂಪಗಳು ಬಂದ ಹಾಗೆ ಮರಳಿ ಹೋಗುತ್ತವೆ. ಆದರೆ ಅದರ ಹಿಂದೆ ಅವಿತಿರುವ ದಿವ್ಯ ದೀಪ್ತಿ  ಆತ್ಮವು ಬಂಧವಿಮೋಚನೆಗೊಂಡು ಅನಂತದ ಆನಂದವನ್ನು ಸವಿಯುತ್ತದೆ. ಇದೇ ಜಗತ್ತನ್ನು ಆವರಿಸಿದ ಸತ್ಯ ಎನ್ನುವುದನ್ನು ಕವಿ ಕುವೆಂಪು ಈ ಪದ್ಯದ ಮೂಲಕ ವಿವರಿಸಿದ್ದಾರೆ. ಕುವೆಂಪು ಮಹಾಕಾವ್ಯದ ಹೆಚ್ಚಿನ ಪಾತ್ರಗಳು ತಪಃಸಿದ್ಧಿಯಿಂದ ಆಗುವುದನ್ನು ಗಮನಿಸಬಹುದು. ಶ್ರೀರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಂದ ಕುವೆಂಪು ಗಾಢವಾಗಿ ಪ್ರೇರಿತರಾದವರು. ಸ್ವಭಾವತ: ತತ್ವಜ್ಞಾನಿಯೂ, ದಾರ್ಶನಿಕರೂ ಆಗಿದ್ದ ಕುವೆಂಪು ತಮ್ಮ ಆಧ್ಯಾತ್ಮ ಸಾಧನೆ ಅಂಗವಾಗಿ  ವಿಶ್ವದ ಸಾಹಿತ್ಯದಲ್ಲಿ ಅದ್ವಿತೀಯ ಸಾಧಕರಾದರು, ರಸಋಷಿಯಾದರು, ಸಂತ ಕವಿಯಾದರು.


ಪರಮಹಂಸರು ರೂಪಿಸಿದ ಸ್ವಾಮಿ ವಿವೇಕಾನಂದರು

ವಿವೇಕಾನಂದರು ಓದುತ್ತಿದ್ದ ಕೊಲ್ಕತ್ತಾದ ಕಾಲೇಜಿನ ಪ್ರಾಚಾರ್ಯರು ಏಕಾಗ್ರತೆ ಬಗ್ಗೆ  ಪಾಠ ಮಾಡುವಾಗ ರಾಮಕೃಷ್ಣ ಪರಮಹಂಸರ ಬಗ್ಗೆ ಹೇಳಿದ್ದರಿಂದ ಅವರನ್ನು ದಕ್ಷಿಣಕ್ಕೆ ಬಂದು ಹಲವು ಬಾರಿ ಕಾಣುತ್ತಾರೆ. ಆಗ ವಿವೇಕರಿಗೆ  ಕಷ್ಟ, ಬಡತನವಿತ್ತು. ಇದರ ಬಗ್ಗೆ ಹೇಳಿಕೊಂಡಾಗ ಧ್ಯಾನ ಮಾಡುವಂತೆ ಪರಮಹಂಸರು ಬೋಧಿಸುತ್ತಾರೆ. ಧ್ಯಾನಕ್ಕೆ ಕುಳಿತಾಗ ವಿವೇಕರು ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಪ್ರಾರ್ಥಿಸಿದರು. ಪರಮಹಂಸರ ಆಧ್ಯಾತ್ಮದ ಬೋಧನೆಯಿಂದಾಗಿ ನರೇಂದ್ರ (ವಿವೇಕಾನಂದ) ನಲ್ಲಿ ಮಹತ್ತರ ಬದಲಾವಣೆ ಆಗುತ್ತದೆ. ಹೀಗೆ ನರೇಂದ್ರನ ಒಳಹೊರಗನ್ನೆಲ್ಲಾ ಪರಮಹಂಸರು ವ್ಯಾಪಿಸಿಬಿಡುತ್ತಾರೆ. ಶಿಷ್ಯನಿಗೆ ಅದ್ವೈತರಹಸ್ಯವನ್ನು ಹೇಳಿಕೊಡುತ್ತಾರೆ. ವಿಶ್ವವ್ಯಾಪಿ ಸಚ್ಚಿದಾನಂದ ತತ್ವದ ಸಾಕ್ಷಾತ್ಕಾರವಾಗುತ್ತದೆ. ಅಂತ್ಯದಲ್ಲಿ ಸಮಾಧಿಯಾಗುವ ನಾಲ್ಕು ದಿನದ ಮೊದಲು ಪರಮಹಂಸರು ತಮ್ಮ ದಿವ್ಯಶಕ್ತಿಯನ್ನೆಲ್ಲಾ ವಿವೇಕರಿಗೆ ದಯಪಾಲಿಸಿದ್ದರು. ಪರಮಹಂಸರ ತಪಃಪ್ರಭಾವದಿಂದ ವಿವೇಕರು ಪರಿಪೂರ್ಣ ವ್ಯಕ್ತಿಯಾಗಿದ್ದನ್ನು ಮನೋಜ್ಞವಾಗಿ ಲೇಖಕರು ಇಲ್ಲಿ ಬಿಚ್ಚಿಟ್ಟಿದ್ದಾರೆ.


ವೀರಪ್ಪ ಮೊಯ್ಲಿಯವರ ‘ಸಿರಿಮುಡಿ ಪರಿಕ್ರಮಣ’

‘ಸಿರಿಮುಡಿ ಪರಿಕ್ರಮಣ’ವು ಅಪಮಾನಗೊಂಡ ದ್ರೌಪದಿಯ ಪ್ರತಿಕಾರದ ಸುತ್ತ ಹೆಣೆದುಕೊಂಡ ಪ್ರತಿಮಾರೂಪದ ಕೇಶಪಾಶ ಪ್ರಪಂಚ. ಇಲ್ಲಿ ಕಲ್ಪನಾಂಶ ಚಿಂತನೆಗಳು  ದರ್ಶನದ ರಸಸಿದ್ದಿಯಿಂದ ಪರಿಪುಷ್ಟಗೊಂಡಿವೆ. ಯುದ್ಧ ಮತ್ತು ಶಾಂತಿಗಳ ಪುನರ್ ವ್ಯಾಖ್ಯೆಯಲ್ಲಿ ಸಹೃದಯನನ್ನು ಸೆರೆಹಿಡಿದು ಸಂಸ್ಕೃತಿ ಸಂಕಥನದ ಕಡೆಗೆ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ. ಈ ಕಾವ್ಯ ಜೀವನಮೌಲ್ಯ ಪ್ರತಿಪಾದಿಸುವ ಉನ್ನತ ಹಿಮಾಚಲ ಶಿಖರವಾಗಿದೆ.


ಅಲ್ಲಮನೆಂಬ ಬೆಡಗು

ಶೂನ್ಯಸಿಂಹಾಸನದ ಪಟ್ಟಕ್ಕೇರಿದ ಅಲ್ಲಮನ ವ್ಯಕ್ತಿತ್ವವೇ  ಗಂಭೀರ ಸ್ವರೂಪದ್ದು. ನಿಷ್ಠುರ ಸ್ವಭಾವ ಆತನದ್ದು. ಸಾಮಾಜಿಕರೊಂದಿಗೆ ಹೆಚ್ಚು ಆತ ಬೆರೆಯುತ್ತಿರಲಿಲ್ಲ. ಅವನ ವ್ಯಕ್ತಿತ್ವ ಸಂಕೀರ್ಣವಾಗಿರುವಂತೆ ಅಭಿವ್ಯಕ್ತಿಯೂ ಸಂಕೀರ್ಣವಾಗಿದೆ. ಅಲ್ಲಮನ ವಚನಗಳಲ್ಲಿ ಭಾಷೆ ಸೋಲುವಂತಿದೆ. ಆದರೆ ಅದನ್ನು ಗೆಲ್ಲಿಸುವಂತಹ  ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಅಲೌಕಿಕ ಅನೀರ್ವಚನೀಯತೆಯನ್ನು ರೂಪಕಗಳ ಮೂಲಕ ಸೆರೆಹಿಡಿದು ಭಾಷೆಗೆ ಬೆಡಗನ್ನು ತೊಡಿಸುವ ಅಲ್ಲಮನ ಪರಿಯನ್ನು ಮೆಚ್ಚಲೇಬೇಕು.

ಉಳಿದಂತೆ  ಬನ್ನಂಜೆಯವರ ಕಾವ್ಯಲೋಕ, ಅಂಬಾತನಯರ ಪ್ರೇಮೋಪನಿಷತ್ತು, ಸಿ ಪಿ ಕೃಷ್ಣಕುಮಾರ್,  ಎಸ್ ವಿ ಪರಮೇಶ್ವರ ಭಟ್ಟರು, ತುಳುನಾಡಿನ ದುರ್ಗಾರಾಧನೆ,  ಗಮಕ ವ್ಯಾಖ್ಯಾನ, ಶ್ರೀಕೃಷ್ಣ ಮತ್ತು ರಾಧೆ, ಜಾನಪದ ಸಂಶೋಧನೆ ಮೊದಲಾದವುಗಳ ವಿಶ್ಲೇಷಣೆಯನ್ನೂ ಅದ್ಭುತವಾಗಿ ಮಾಡಿದ್ದಾರೆ. 

ಒಟ್ಟಿನಲ್ಲಿ, ಪ್ರಜ್ಞೆ ಮತ್ತು ಪಾಂಡಿತ್ಯಕ್ಕೆ ಹೆಸರಾದ ಕಬ್ಬಿನಾಲೆ ವಸಂತ ಭಾರದ್ವಾಜ  ಅವರ ಭಾಷೆಯಲ್ಲಿ ಕಸುವಿದೆ, ಭಾವದಲ್ಲಿ ಕಾಂತಿಯಿದೆ, ಭಾವ-ಭಾಷೆಗಳನ್ನು ಸಂಲಗ್ನಗೊಳಿಸುವಲ್ಲಿ ನಿಷ್ಣಾತರೆನ್ನುವುದನ್ನು ಈ ಕೃತಿಯ ಮೂಲಕ ಮನಗಾಣಬಹುದಾಗಿದೆ.   

..................................


Comments

Popular posts from this blog