ಅನುಭವದ ಅಮೃತ ಬಿಂದುಗಳು
‘ಜ್ಞಾನದೀಪ’
ಇದು ೧೦೮ ಸೂಕ್ತಿಗಳ ಚಿಂತನ ಮಂಥನ. ಕನ್ನಡ ಪಂಡಿತರೂ, ಹಿಂದಿ ಪ್ರವೀಣರೂ, ಸಂಸ್ಕೃತ ವಿದ್ವಾಂಸರೂ, ಪ್ರಾಧ್ಯಾಪಕರೂ ಆಗಿದ್ದ ದಿ. ವಿ ಎನ್ ಭಟ್ ಬೆತ್ತಗೇರಿ ಇವರು ರಚಿಸಿದ ಕೃತಿ ಇದು. ಹೆಸರೇ ಹೇಳುವಂತೆ ‘ಜ್ಞಾನದೀಪ’ ಇದು ಅಪೂರ್ವ ಸುಭಾಷಿತಗಳಿಂದ ಒಡಗೂಡಿ ಅವುಗಳ ಕನ್ನಡ ಅರ್ಥವನ್ನು ಸಹಿತ ಕಟ್ಟಿಕೊಟ್ಟಿದೆ.
ಕೃತಿಯಲ್ಲಿರುವ ಜ್ಞಾನದೀಪಗಳೆಲ್ಲವೂ ಜೀವನಾನುಭವದಿಂದ ಕೂಡಿದ ಮತ್ತು ಜೀವನಾನುಭವವನ್ನು ಕಟ್ಟಿಕೊಡುವಂತವು. ಹಿತವಾದ ಸುಭಾಷಿತಗಳನ್ನು ಆಯ್ದು ಬದುಕಿನ ಅನುಭವಗಳನ್ನು ಮಿತವಾದ ಬರಹಗಳಿಂದ ಓದುಗರಿಗೆ ನಿವೇದಿಸಿದ ಲೇಖಕರ ಕೆಲಸವನ್ನು ಇಲಿ ಮೆಚ್ಚಲೇಬೇಕು. ವಿದ್ವಾನ್ ವಿ. ಎನ್. ಭಟ್ಟರು ಜ್ಞಾನದೀಪದ ಮೂಲಕ ಅಸಂಖ್ಯಾತ ಓದುಗರಲ್ಲಿದ್ದ ಕತ್ತಲೆಯನ್ನು ದೂರ ಮಾಡಿದ್ದಲ್ಲದೆ ಕತ್ತಲೆ ಭಯವನ್ನೂ ಕಳೆದಿದ್ದಾರೆ. ಬೆಳಕಿನ ಭರವಸೆಯನ್ನು ನೀಡಿದ್ದಾರೆ. ಇಂದಿನ ನಮ್ಮ ಭಾರತೀಯ ಸಂದರ್ಭದಲ್ಲಿ ಇವೆರಡೂ ಅಗತ್ಯವಾಗಿದೆ.
‘ಜ್ಞಾನದೀಪ’ ಅತ್ಯಂತ ಜನಪ್ರಿಯ ಕೃತಿ. ಇದಕ್ಕೆ ಕಾರಣವೇನೆಂದರೆ ವಿ ಎನ್ ಭಟ್ಟರಲ್ಲಿದ್ದ ವಿದ್ವತ್ತು ಮತ್ತು ಕಾವ್ಯದೃಷ್ಟಿ ಇದರಲ್ಲಿ ಮಿಳಿತಗೊಂಂಡಿದೆ. ಸುಮಾರು ಐದಕ್ಕೂ ಹೆಚ್ಚು ಮರುಮುದ್ರಣವನ್ನು ಕಂಡಿರುವ ಈ ಕೃತಿಯಲ್ಲಿ ಭಟ್ಟರ ವಿಸ್ತಾರವಾದ ಓದು, ಮಾನವೀಯ ಅನುಕಂಪ ಹಾಗೂ ಕಾಳಜಿಗಳಿಂದ ಪ್ರಭಾವಿತಗೊಂಡಿದೆ. ಅವರ ಧರ್ಮ ಅನ್ವೇಷಣೆ, ಲೌಕಿಕದ ನೆಮ್ಮದಿಯ ದಾರಿಯಲ್ಲಿದೆ. ಅವರ ಶಾಸ್ತ್ರಪ್ರಭುತ್ವವು ನೈತಿಕ ನೆಲೆಗಳಿಂದ ಪುಟಿಯುತ್ತಿರುವುದನ್ನು ಕೃತಿಯಲ್ಲಿ ಕಾಣಬಹುದು. ಸುಮಾರು ೧೦೮ ಸುಭಾಷಿತಗಳನ್ನು ಕನ್ನಡದಲ್ಲಿ ಬರೆದು, ಅವುಗಳ ದೀರ್ಘ ಅರ್ಥವನ್ನು ಮತ್ತು ವಿವರಣೆಯನ್ನು ಇಲ್ಲಿ ಸೋದಾಹರಣೆಯುಕ್ತವಾಗಿ ಕಟ್ಟಿಕೊಟ್ಟಿದ್ದಾರೆ.
ಸುಂದರ ಸೂಕ್ತಿಗಳು ಮತ್ತು ಸುಭಾಷಿತಗಳು ಇಲ್ಲಿ ನಮ್ಮ ನೆನಪಿನಲ್ಲಿ ಸದಾ ಉಳಿಯುವಂತೆ ಆಗಿವೆ. ರಾಮಾಯಣ, ಮಹಾಭಾರತದಿಂದ ಹಿಡಿದು ಕಾಳಿದಾಸ, ಪಂಚತಂತ್ರ, ಸಂಸ್ಕೃತ ಮತ್ತು ಕನ್ನಡದ ಕವಿಗಳಿಂದ ಹೀಗೆ ಎಲ್ಲೆಲ್ಲಿಂದಲೋ ಬಂದು ನಮ್ಮ ಹೃದಯದ ಕದ ತೆರೆದು ದೀಪ ಬೆಳಗಿವೆ. ಇಲ್ಲಿನ ಸುಭಾಷಿತಗಳ ಅರ್ಥ ವಿವರಣೆ ಸಂದರ್ಭದಲ್ಲಿ ಬಸವಣ್ಣ ಮತ್ತು ಅಲ್ಲಮರ ವಚನಗಳನ್ನು ಉದಾಹರಣೆಯಾಗಿ ವಿವರಿಸಿದ್ದನ್ನು ಕಾಣಬಹುದು. ‘ಜ್ಞಾನದೀಪ’ದ ವಸ್ತು ವಿಷಯ ವೈವಿಧ್ಯಮಯವಾಗಿದೆ. ಇಲ್ಲಿನ ಬರಹಗಳಲ್ಲಿ ನಾವು ಹೇಗೆ ಬದುಕಬೇಕು, ನಮ್ಮೊಂದಿಗೆ ಪರರು ಮತ್ತು ಪರರೊಂದಿಗೆ ನಾವು ಹೇಗಿರಬೇಕು ಹಾಗೂ ಈ ಪ್ರಪಂಚದೊಂದಿಗೆ ಹೇಗಿರಬೇಕು ಎಂಬ ಮೂಲಭೂತ ಸಂಗತಿಗಳನ್ನು ಕೃತಿ ತಿಳಿಸಿಕೊಡುತ್ತದೆ. ಇದನ್ನು ಶಾಸ್ತ್ರಗಳು ತಿಳಿಸಿದ ಬಗ್ಗೆ, ಜ್ಞಾನಿಗಳು ಬರೆದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಸುಂದರವಾದ ದೃಷ್ಟಾಂತಗಳಿಂದ ನಮ್ಮ ಪ್ರಜ್ಞೆ ಇಲ್ಲಿ ಅರಳುವಂತೆ ಲೇಖಕರು ಮಾಡಿದ್ದಾರೆ. ಇಲ್ಲಿ ಬರುವ ವಿಷಯಗಳನ್ನು ಗಮನಿಸಿದಾಗ ಸ್ವರ್ಗಕ್ಕಿಂತ ಮಿಗಿಲಾದ ತಾಯ್ನಾಡಿನ ಮಾತಿದೆ. ಅತಿಯಾಗಿ ನೀರು ಕುಡಿಯಬೇಡಿ, ಹಗಲು ನಿದ್ರೆ ಮಾಡಬೇಡಿ ಎಂಬ ಆರೋಗ್ಯ ಪಾಠವನ್ನು ಇದು ಹೇಳಿದೆ. ಬಾಳು ಅ ನಿತ್ಯ, ಧರ್ಮ ಸಂಗ್ರಹಿಸಿ ಎಂಬ ಮಾತನ್ನು ಹೇಳುತ್ತಾರೆ. ರೂಪ, ಗರ್ವ, ದಾನ ಅತಿಯಾದರೂ ದುಃಖಕ್ಕೆ ಕಾರಣ. ಆದ್ದರಿಂದ ಅತಿರೇಕವನ್ನು ವರ್ಜಿಸಿರಿ ಎಂಬ ಕಿವಿಮಾತು ಇದೆ. ಆಯುಷ್ಯ, ವಿದ್ಯೆ, ಯಶಸ್ಸು, ಬಲ ಇವು ವಿಧೇಯತೆ ಮತ್ತು ವಿನಮ್ರತೆಯಿಂದ ಬರುತ್ತವೆ ಎಂಬ ಸುಭಾಷಿತದ ಮಾತನ್ನು ವಿವರಿಸಿದ್ದಾರೆ. ಹೆಣ್ಣು, ಸಂಪತ್ತು, ಸಂಸಾರ, ಪ್ರಿಯವಾದ ನಡೆನುಡಿ, ಸಜ್ಜನಿಕೆ, ವೈರಾಗ್ಯ, ಸುಖ, ದುಃಖ, ಗುಣ, ದೋಷ, ಪ್ರೇಮ, ದ್ವೇಷ, ಮಗ, ಮಗಳು, ಮುಪ್ಪು, ಯೌವ್ವನ, ಬಾಲ್ಯ, ವಿದ್ಯೆ, ತ್ಯಾಗ, ಸ್ವರ್ಗ, ನರಕ, ಸತ್ಯ, ಸ್ನೇಹ ಹೀಗೆ ನೂರಾರು ವಿಚಾರಗಳನ್ನು ಕುರಿತು ಕೃತಿಕಾರರು ಇಲ್ಲಿ ತಮ್ಮ ಅನುಭವದ ಅಮೃತ ಬಿಂದುಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಕೃತಿಯಲ್ಲಿ ಉಕ್ತವಾದ ಸುಭಾಷಿತಗಳ ಬೆಳಕಿನ ಒಂದೊಂದು ಹನಿಯನ್ನು ಕುಡಿದವನಿಗೆ sವದ ಬೆಟ್ಟ ಎಟುಕುವುದು ಸುಲಭ ಎಂಬಲ್ಲಿ ಸಂದೇಹವಿಲ್ಲ. ಇಲ್ಲಿನ ಪ್ರತಿಯೊಂದು ಮಾತು ತಿಳಿವಿನ ತರಂಗವಾಗಿದೆ. ಅನುಭವದ ಅಮೃತವಾಗಿದೆ. ವಿವೇಕದ ಕಿಡಿಯಾಗಿದೆ. ಹೀಗೆ ಒಂದೊಂದು ಒಳ್ಳೆಯಿಂದಲೂ ಒಂದೊಂದು ಅನುಭವ ವಿವೇಕಗಳನ್ನು ಮಥಿಸಿ ವಿವರಿಸುವ ಈ ಕೃತಿ ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ ಎನಿಸಿವೆ. ಇಲ್ಲಿ ಪ್ರೊ. ವಿ.ಎನ್. ಭಟ್ ಅವರ ವಿದ್ವತ್ತಿನ ಕಣಜದಿಂದ ಸೂರೆ ಮಾಡಿದ ಅನ್ನದ ಕಣಗಳು ನಮಗೆ ಸಮೃದ್ಧ ಸುಖ ಭೋಜನವನ್ನು ನೀಡುತ್ತವೆ.
..........................
??

Comments
Post a Comment