ರಂಗ-ಜೀವನರಂಗದ ಬೆಸುಗೆ
‘ರಂಗ ರಂಗೋಲಿ’
‘ರಂಗ ರಂಗೋಲಿ’ ಇದು ರಂಗಕಲಾವಿದೆ ಪೂರ್ಣಿಮಾ ಸುರೇಶ್ ಅವರ ಅಂಕಣ ಬರಹದ ಕೃತಿ. ಇದರಲ್ಲಿ ರಂಗ ಮತ್ತು ಜೀವನರಂಗದ ಬೆಸುಗೆಯಿದೆ. ರಂಗಭೂಮಿಯ ತಮ್ಮ ಅನುಭವಗಳನ್ನು ಇಲ್ಲಿ ತಮ್ಮದೇ ಆದ ವಿಶಿಷ್ಟ ಭೂಮಿಕೆಯಲ್ಲಿ ಸೆರೆಹಿಡಿದಿದ್ದಾರೆ. ರಂಗಮಂಟಪದ ಭಯದ ಕತ್ತಲು ಆವರಿಸಿಕೊಂಡಿದ್ದ ಬಾಲಕಿಯೊಬ್ಬಳು ಮುಂದೆ ರಂಗುರಂಗಾದ ರಂಗದ ಬೆನ್ನು ಹತ್ತಿದ ಬರಹಗಳು ಇದರಲ್ಲಿವೆ. ರಂಗದ ಕಥೆಯನ್ನು ಹುಡುಕಿ ತೆಗೆದು ಅದಕ್ಕೊಂದು ಘನೀಕೃತ ಸ್ವರೂಪವನ್ನು ಕೊಟ್ಟು ಅಭೂತಪೂರ್ವವಾಗಿ ತೆರೆಯ ಮೇಲೆ ತಂದ ಬಗ್ಗೆ ವಿವರವಿದೆ. ಇಲ್ಲಿನ ಪ್ರತಿ ಬರಹದಲ್ಲೂ ಒಂದು ಜೀವಂತಿಕೆ ಇದೆ, ಬದುಕಿನ ಪಾಠವಿದೆ, ಕಲಿತದ್ದನ್ನು ದಾಖಲಿಸುವ ಸಾಕ್ಷಿಪ್ರಜ್ಞೆ ಇದೆ, ಅನುಭವದ ಸಾರವನ್ನು ಹಿಡಿದಿರುವ ಗಟ್ಟಿತನವಿದೆ. ಆದ್ದರಿಂದಲೇ ಈ ಕೃತಿ ನಮಗೆ ಅಪ್ಯಾಯಮಾನವಾ ಗುತತದೆ. ಕೃತಿಯಲ್ಲಿ ಒಟ್ಟೂ ೨೯ ಅಂಕಣ ಬರಹಗಳಿವೆ.
ಮೊದಲ ಬರಹ ‘ನಾಂದಿ ಪದ್ಯ’ದಲ್ಲಿ ತನ್ನ ನಾಟಕ ಬದುಕಿನ ಮೊದಲ ಪುಟಗಳನ್ನು ಲೇಖಕಿ ತೆರೆದಿಟ್ಟಿದ್ದಾರೆ. ಊರಲ್ಲಿ ಮತ್ತು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹರಕೆ ಬಯಲಾಟಕ್ಕೆ ಅಜ್ಜಿ ಜೊತೆ ಹೋಗುತ್ತಿದ್ದುದು, ಸಂಜೆ ಶಾಲೆಯಿಂದ ಮನೆಗೆ ಬಂದ ನಂತರ ಹೊಸ ಪಾತ್ರಗಳಲ್ಲಿ ಅರಳುವುದು, ಕಲ್ಪನೆಯ ಪ್ರಪಂಚ ತೆರೆದು ತೋರಿಸಿದ ಅಜ್ಜಿ ಕುಣಿತಕ್ಕೆ ನಗುವುದು, ಪಾಠ ಪುಸ್ತಕ ಎಲ್ಲಿ ಉಂಟು ಎಂದು ಕೇಳುತ್ತಿದ್ದುದು, ವಸಂತ ಸೇನೆ ಪ್ರಸಂಗ ತನ್ನ ಆಳಕ್ಕಿಳಿದು ಕುಣಿಸಿದ್ದು, ಶಕಾರನ ಗಟ್ಟಿ ದ್ವನಿ ಎದೆಯಲ್ಲಿ ಉಳಿದಿದ್ದು ಇವೆಲ್ಲ ಶ್ರೀಮಂತದ ದಿನಗಳು ಎಂದು ವರ್ಣಿಸುತ್ತಾರೆ
‘ಸಿರಿ ತುಂಬಿದ ಬಾಲ್ಯ’ ದಲ್ಲಿ ಪುಟ್ಟ ಬಾಲಕಿಯಾಗಿದ್ದ ತನ್ನ ಮನಸ್ಸಿನ ಮೇಲೆ ಹಿರಿಯಡ್ಕದ ಸಿರಿ ಜಾತ್ರೆ ಒತ್ತಿದ ಅಚ್ಚು ತನ್ನನ್ನು ರಂಗಪ್ರಪಂಚಕ್ಕೆ ಕಾಲಿಡುವಂತೆ ಮಾಡಿದ್ದನ್ನು ಪ್ರಸ್ತಾಪಿಸುತ್ತಾ, ಅಲ್ಲಿನ ಅಂಗಡಿ, ಮುಂಗಟ್ಟುಗಳು, ಪಾಡ್ದನ, ಸಿರಿಜಾತ್ರ್ರೆಯ ಸ್ವರ, ಪಾತ್ರ ತನ್ನಲ್ಲಿ ಅಚ್ಚಾಗಿ ಸಿರಿ ಪ್ರಪಂಚ ಬೀಡುಬಿಟ್ಟಿದ್ದನ್ನು ವಿವರಿಸಿದ್ದಾರೆ. ‘ಜಾತ್ರೆಯ ಲೋಕ’ ಬರಹದಲ್ಲಿ ಜಾತ್ರೆ ಮುಗಿದ ನಂತರ ಸರಂಜಾಮುಗಳನ್ನು ಕಟ್ಟುವ ಕೆಲಸಗಾರರು, ಅಲ್ಲಿ ಬಿಟ್ಟು ಹೋಗುವ ವಸ್ತುಗಳ ಪಳೆಯುಳಿಕೆಗಳು, ನೆಲಕ್ಕೆ ಬಿದ್ದ ಬಳೆ ಚೂರುಗಳನ್ನು ತಂದು ಕಾಯಿಸಿ ಜೋಡಿಸುವ ಹುಡುಗಾಟ, ಸಂಜೆ ಕೈಯಲ್ಲಿ ಸೊಪ್ಪು ಹಿಡಿದು ಯಕ್ಷಗಾನ ಆಡುವುದು ಹೀಗೆ ಜಾತ್ರೆ ಎಂಬ ಉತ್ಸವ ಮಕ್ಕಳ ಹಸಿ ಮನಸ್ಸಿಗೆ ಚಿತ್ತಾರ ಬರೆಯುತ್ತಿತ್ತು ಎನ್ನುತ್ತಾರೆ.
‘ಚಾವಡಿಯಲ್ಲಿ ರಂಗಗೀತೆ’ ಯಲ್ಲಿ ತಾನು ವಾಸಿಸುತ್ತಿದ್ದ ಮನೆಯ ಮಾಲೀಕರು ಮೂವರು ಹೆಂಗಸರಾಗಿದ್ದರು. ಅವರಲ್ಲಿ ಹಿರಿಯರು ಅಜ್ಜಮ್ಮ. ಅವರ ವ್ಯಕ್ತಿತ್ವ, ತನ್ನ ಮೇಲೆ ಬೀರಿದ ಗಾಢ ಪ್ರಭಾವವನ್ನು ವರ್ಣಿಸಿದ್ದಾರೆ. ‘ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು’ ಇದರಲ್ಲಿ ಹಿಂದಿನ ಬರಹದಲ್ಲಿ ಬರೆದ ಅಜ್ಜಮ್ಮನ ಜೊತೆ ಇದ್ದ ಸಣ್ಣಜ್ಜಿ ಮತ್ತು ವತ್ಸಲಾ ಚಿಕ್ಕಿಯ ಬಗ್ಗೆ ಬರೆಯುತ್ತಾ, ಸಣ್ಣಜ್ಜಿಯದು ತಪಸ್ಸಿನ ಬದುಕು. ವತ್ಸಲಾ ಚಿಕ್ಕಿ ಹೆಣ್ಣುರೂಪದ ಗಂಡಿನಂತಿದ್ದರು. ಈ ಮೂವರು ದೇವಕನ್ನಿಕೆಯರೆಂದು ವರ್ಣಿಸುತ್ತಾ, ಅವರು ಹಾಡಿಸಿದ ಹಾಡು, ನೃತ್ಯ, ನಡೆಯ ಅನುಕರಣೆ, ವ್ಯಕ್ತಿಗಳ ಮಾತೆಲ್ಲವೂ ತನ್ನಲ್ಲಿ ಒಬ್ಬ ಕಲಾವಿದೆ ಅಂಕುರಿಸಲು ದೀವಿಗೆಯಾಗಿದ್ದನ್ನು ಸ್ಮರಿಸುತ್ತಾರೆ.
‘ಶಾಲಾ ರಂಗದೊಳಗೊಂದು ಕೋಲಾಟ’ ಇದರಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ವಾರ್ಷಿಕೋತ್ಸವದಲ್ಲಿ ತಾನು ಕೋಲಾಟಕ್ಕೆ ಆಯ್ಕೆಯಾಗಿದ್ದು, ಕೋಲಾಟದಲ್ಲಿ ಹೆಜ್ಜೆ ತಪ್ಪಿದ್ದು, ಸೇರಿದ್ದ ಜನಸ್ತೋಮ ನೋಡಿ ಕೋಲಾಟ ತನ್ನಿಂದಾಗದು ಎಂದು ಹೆದರಿದ್ದು, ಶಿಕ್ಷಕರು ಕೊಟ್ಟ ಗುದ್ದು ಪೆಟ್ಟಿನ ಉರಿ, ಕೋಲಾಟದ ಮೊದಲ ರಂಗ ಪ್ರಯತ್ನದಲ್ಲೇ ಕೋಲು ಮುರಿದಿದ್ದನ್ನು ವಿವರಿಸಿದ್ದಾರೆ. ‘ಮರಿ ಕಪ್ಪೆ ಹಾರಿತು ಬಾವಿಯ ಹೊರಗೆ’ ಇದರಲ್ಲಿ ವಾಲಿ ವಧೆ ನಾಟಕ ಮಾಡಿದ್ದು, ಇದಕ್ಕೆ ತಾನೇ ನಿರ್ದೇಶಕಿಯಾಗಿ ರಾತ್ರಿ ಹಗಲೆನ್ನದೆ ತಯಾರಿ ಮಾಡಿದ್ದು, ಸುಂದರ ಪ್ರಸ್ತುತವಾಗಿ ಯಶಸ್ಸು ಕಂಡಿದ್ದು, ಕಲಾವಿದೆಯೊಬ್ಬಳು ಕಣ್ತೆರೆಯುವಂತಾಗಿದ್ದನ್ನು ವಿವರಿಸುತ್ತಾ ಬಾವಿಯೊಳಗಿಂದ ಕಪ್ಪೆ ಹೊರಬಂದಂತೆ ಕುಪ್ಪಳಿಸುತ್ತಾ ಬಂದಿದ್ದನ್ನು ಸೊಗಸಾಗಿ ವಿವರಿಸಿದ್ದಾರೆ.
‘ಅಜ್ಜಿಯ ಗೂಡಲಿ ಹಾರಲು ಕಲಿತ ಗುಬ್ಬಿಮರಿ’ ಇದರಲ್ಲಿ ಕಡಲಿನಂತಿದ್ದ ಅಜ್ಜಿಯ ಅಚ್ಚಿನ ಪಾತ್ರೆಯಲ್ಲಿ ತಯಾರಾಗಿ ಬಂದ ತನ್ನ ಬದುಕು, ನಾಟಕದ ಪಾತ್ರಧಾರಿಯಾಗಿದ್ದು, ಕುಣಿತ ಕಲಿಸಿದ್ದು, ಪಾತ್ರದೊಳಗೆ ತನ್ಮಯತೆಯ ಮಹಾಮಂತ್ರ ಬೋಧಿಸಿದ್ದನ್ನು, ಕಥೆ, ಕಲ್ಪನೆ, ಧೈರ್ಯ, ಕಲೆಯ ನೆಲೆ ಎಲ್ಲವನ್ನೂ ತನ್ನಲ್ಲಿ ತುಂಬಿ ಹಾರಲು ಕಲಿಸಿದಳು ಎಂದು ವಿವರಿಸಿದರೆ, ‘ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ’ ಇದರಲ್ಲಿ ಪಿಯುನಲ್ಲಿ ಓದುವಾಗ ಆಮ್ರಪಾಲಿ, ಪೃಥ್ವಿದೇವಿಯ ಪಾತ್ರವನ್ನು ಮಾಡಿದ್ದು, ನಿಜವಾದ ಕಲಾವಿದೆ ಎಂಬ ಪ್ರಶಂಸೆ ಉಪನ್ಯಾಸಕರಿಂದ ದಕ್ಕಿತೆನ್ನುವ ಲೇಖಕಿ, ‘ಆಕಾಶವಾಣಿಯ ಅವಕಾಶದಾಕಾಶ’ ದಲ್ಲಿ ತಾನು ಮೊದಲ ಬಾರಿ ಕಥೆ ಬರೆದಿದ್ದು, ಆಕಾಶವಾಣಿಯಲ್ಲಿ ವಾಚನ ಮಾಡಿದ್ದು, ಶಿಕ್ಷಕರ ಪ್ರೋತ್ಸಾಹದಿಂದ ಆಕಾಶವಾಣಿ ಕಲಾವಿದೆಯಾಗಿದ್ದನ್ನು ಹೇಳಿಕೊಂಡಿದ್ದಾರೆ. ‘ಚಮ್ಮಾರ ಹೊಲಿದ ತೊಗಲುಗೊಂಬೆ’ ಯಲ್ಲಿ ಚಮ್ಮಾರನ ಚಾಲಾಕಿ ಹೆಂಡತಿಯ ನಾಟಕದಲ್ಲಿ ಶ್ರೀಮಂತ ವರ್ತಕನ ನಾಲ್ಕನೇ ಹೆಂಡತಿಯ ಪಾತ್ರವಾಗಿ ನವಲೋಕದ ಪರಿಚಯವಾದದನ್ನು ‘ತೆರೆ ತೆರೆ ತೆರೆದ ಬಣ್ಣದ ಪರದೆ’ ಯಲ್ಲಿ ಹ್ಯಾಮ್ಲೆಟ್ ನಾಟಕದ ಕನ್ನಡ ರೂಪಾಂತರ ‘ಹೇಮಂತ’ದಲ್ಲಿ ಪ್ರೇಯಸಿಯ ಪಾತ್ರ ಮಾಡಿದ್ದನ್ನು, ‘ಪರದೆಯಲ್ಲಿ ಉಳಿದ ರಾಜಕುಮಾರಿ’ಯಲ್ಲ್ಲಿ ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯನ್ನು ದೂರದರ್ಶನ ಧಾರಾವಾಹಿ ಮಾಡಿದಾಗ ಅದರಲ್ಲಿ ಜಲಜಾಕ್ಷಿ ಪಾತ್ರವನ್ನು ಪಡೆದುದು, ಶೂಟಿಂಗ್ ನಂತರ ಈ ಪಾತ್ರ ಬೇಡವೆಂದು ಧಾರಾವಾಹಿಯಿಂದ ಹಿಂದೆಸರಿದುದ್ದನ್ನು, ನಂತರ ರಂಗಭೂಮಿಯಲ್ಲಿ ಹೆಣ್ಣಿಗೆ ತೊಡಕು ಇರುವುದರಿಂದ ಹೊಸ ಸಂಘಟನೆಯನ್ನು ಹುಟ್ಟುಹಾಕಿದ್ದನ್ನು ಬರೆದುಕೊಂಡಿದ್ದಾರೆ.
‘ರಂಗದ ಹೊಲದಲ್ಲಿ ಕವಿತೆಯ ಬಿತ್ತು’ ಇದರಲ್ಲಿ ನಾಟಕದಿಂದ ಹಿಂದೆ ಸರಿದಾಗ ಅಕ್ಷರಗಳ ಮೊರೆ ಹೋಗಿದ್ದು, ರಂಗಕರ್ಮಿ ಕಾಸರಗೋಡು ಚಿನ್ನಾ ಕೊಂಕಣಿ ನಾಟಕ ‘ಕರ್ಮಾಧೀನ್’ಗೆ ಒಪ್ಪಿಸಿದ್ದು, ನಂತರ ‘ಎಕ್ಲೊ, ಅನೆಕ್ಲೊ’ ನಾಟಕ ಅಭಿನಯ, ಇದೇ ವೇಳೆ ಮೊದಲ ಕವನ ಸಂಕಲನ ‘ನನ್ನೊಳಗಿನ ಭಾವ ಬಿಡುಗಡೆ’ ಲೋಕಾರ್ಪಣೆ ಮಾಡಿದನ್ನು ವಿವರಿಸಿದ್ದಾರೆ. ಬಹ್ರೇನ್‌ಗೆ ಹೋಗಿ ಎರಡು ನಾಟಕ ಆಡಿದ್ದು, ಅಲ್ಲಿನ ಜನರ ಪ್ರೀತಿ, ವಿಶ್ವಾಸ ಪಡೆದಿದ್ದು, ಅಲ್ಲಿನ ಸಹೃದಯರು ನಾಟಕ ಸಂಭ್ರಮಿಸಿ ತನ್ನನ್ನು ಗುರುತಿಸಿದ್ದನ್ನು ‘ಹಕ್ಕಿ ಹಾರಿತು ನೋಡಿದಿರಾ!’ದಲ್ಲಿ ವಿವರಿಸಿದ್ದಾರೆ.
‘ರಂಗ ರಂಗೋಲಿ’ಯಲ್ಲಿ ವೈದೇಹಿಯವರ ‘ಗುಲಾಬಿ ಟಾಕೀಸ್’ ನಲ್ಲಿ ಕುಂಜಿಪಾತು ಪಾತ್ರದಲ್ಲಿ ನಟನೆ ಘಟನೆ ಮೂಲಕ ಹಿರಿತೆರೆಗ ಪ್ರವೇಶ ಪಡೆದಿದ್ದು, ಸಿನಿಮಾದ ಕಲಾವಿದರ ಆಯ್ಕೆ ಎಂದು ಹೋದಾಗ ಎದುರಿಸಿದ ಸಂದರ್ಭ, ಗಿರೀಶ್ ಕಾಸರವಳ್ಳಿ ಕೊನೆಗೂ ತನಗೆ ಕರೆ ಮಾಡಿ ಆಯ್ಕೆಯಾದ ವಿಷಯ ತಿಳಿಸಿದ್ದು, ಸಿನಿಮಾದಲ್ಲಿ ನಟಿಸಿದ್ದು ಅದೃಷ್ಟ ಎನ್ನುವುದನ್ನು ಬರೆಯುತ್ತಾ ಕಲೆಯ ಬಗ್ಗೆ ವಿಶಾಲ ದೃಷ್ಟಿ ಬೆಳಸಿಕೊಳ್ಳಬೇಕು ಬೆಳೆಸಿಕೊಂಡಿದ್ದರಿಂದ ಇದು ಸಹಾಯವಾಯಿತು ಎಂದು ಬರೆಯುತ್ತಾರೆ.
‘ಹೃದಯ ರಂಗಸ್ಥಳ’ದಲ್ಲಿ ಅಮೋಘ ಎಂಬ ಸಾಂಸ್ಕೃತಿ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಜಯಂತ್ ದಳವಿ ಅವರ ಮರಾಠಿ ನಾಟಕ ‘ಸಂಬಂಧ’ವನ್ನು ಕನ್ನಡದಲ್ಲಿ ಪ್ರದರ್ಶಿಸಿದ್ದು, ಅದರಲ್ಲಿನ ಬುದ್ಧಿಮಾಂದ್ಯ ಮಗನ ತಾಯಿಯ ಪಾತ್ರ ನೋಡಿ ನಾಟಕ ಮುಗಿದ ಬಳಿಕ ಮಹಿಳೆಯೊಬ್ಬಳು ಬಂದು ಅತ್ತಿದ್ದು, ತಮ್ಮ ಮನೆಯ ಕತೆಯೂ ಇದೇ ಆಗಿತ್ತೆನ್ನುವ ಮೂಲಕ ಅವರ ತವರನ್ನು ಅನಾವರಣಗೊಳಸಿತ್ತೆನ್ನುವ ಲೇಖಖಿ, ಇದು ರಂಗಭೂಮಿಯ ಶಕ್ತಿ ಎಂದಿದ್ದಾರೆ.
‘ಸಿರಿ’ಗೆರೆ ರಂಗದಲಿ’ ಏಕವ್ಯಕ್ತಿ ನಾಟಕಗಳನ್ನು ನೋಡಿದ ನಂತರ ತಾನೇಕೆ ಇದನ್ನು ಪ್ರಯತ್ನ ಮಾಡಬಾರದು ಎಂಬ ಚಿಂತನೆ ಲೇಖಕಿಯಲ್ಲಿ ಮೂಡುತ್ತದೆ. ಹಲವು ಕಥೆಗಳನ್ನು ಇದಕ್ಕಾಗಿ ಪರಿಶೀಲಿಸುತ್ತಾರೆ. ಕೊನೆಗೆ ‘ಶಕ್ತಿ ಸ್ವರೂಪಿಣಿ ಸಿರಿ’ಯ ಕಥೆ ಮಾಡಲು ನಿರ್ಧರಿಸಿದ್ದನ್ನು ಹೇಳುತ್ತಾ, ರಂಗಕರ್ಮಿ ಸೀತಾ ಕೋಟೆ ‘ಶಕುಂತಲೆ’ ಚಿತ್ರದ ಮೂಲಕ ಬಿತ್ತಿದ ಬೀಜ ತನ್ನಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನಕ್ಕೆ ಎಡೆ ಮಾಡಿಕೊಟ್ಟಿತು. ಕೃಷ್ಣಮೂರ್ತಿ ಕವತ್ತಾರ್ ಮೂಲಕ ಉತ್ತಮ ಕಥೆ ಸಿಕ್ಕಿತು. ೪೦ಕ್ಕ್ಕೂ ಹೆಚ್ಚಿ ಸಿರಿಯ ಪ್ರದರ್ಶನವಾಗಿದ್ದನ್ನು ಪ್ರಸ್ತಾಪಿಸುತ್ತಾ ಸಿರಿಯ ಶ್ರೀಮಂತಿಕೆ ತನನ್ನು ಶ್ರೀಮಂತಗೊಳಿಸಿತು ಎಂದು ಬರೆದುಕೊಂಡಿದ್ದಾರೆ.
ಹೀಗೆ ಈ ಸಂಕಲನವು ಲೇಖಕಿಯ ಬರೇ ಅನುಭವದ ದಾಖಲಾತಿಯಾಗದೆ ರಂಗಭೂಮಿಯ ದಾಖಲಾತಿಯೂ ಆಗಿದೆ. ಜೊತೆಗೆ ಈ ಕೃತಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಲಿದೆ ಎನ್ನಬಹುದು.
..........................

Comments
Post a Comment