ನನಿತ್ಯದ ಅನುಭವದ

 ‘ಪರಿಮಳಗಳ ಮಾಯೆ’
...........................


 ಬರವಣಿಗೆ ನಮ್ಮ ಮನೆಯಲ್ಲಿ ನನ್ನಿಂದಲೇ ಕೊನೆಗೊಳ್ಳಬಾರದು. ನೀನು ಏನಾದ್ರೂ ಬರೆಯಮ್ಮ ಎಂದು ತಂದೆ ಹೇಳತ್ತಿದ್ದುದರಿಂದ  ಅವರ ನಂತರ ಬರವಣಿಗೆಗೆ ಇಳಿದೆ  ಎಂದು ಶಿಕ್ಷಕಿಯಾಗಿರುವ  ಈ ಕೃತಿಯ ಲೇಖಕಿ ಆರ್.  ಸಮತಾ ಪ್ರೀತಿಯಿಂದ ಆರಂಭದಲ್ಲೇ ಹೇಳಿಕೊಂಡಿದ್ದಾರೆ. ಹಲವು ಮಿತ್ರರ ಒತ್ತಾಯವೂ ‘ಪರಿಮಳಗಳ ಮಾಯೆ’  ಕೃತಿ ಹೊರಬರಲು ಕಾರಣ ಎಂದು ಸ್ಮರಿಸಿದ್ದಾರೆ. 

 ಇದೊಂದು ಲಲಿತ ಪ್ರಬಂಧಗಳ ಸಂಕಲನ, ಇದರಲ್ಲಿ  ೧೮ ಬರಹಗಳಿವೆ. ಎಲ್ಲವೂ  ಆತ್ಮೀಯವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಇದರಲ್ಲಿ ವಿವಿಧ ಘಟನೆಗಳನ್ನು ಲೇಖಕಿ ಹೇಳುತ್ತಾರೆ. ಲವಲವಿಕೆಯ, ತುಂಟ ಬರಹಗಳು ಇದರಲ್ಲಿವೆ. ವೈಯಕ್ತಿಕ ಅನುಭವವನ್ನು ಭಾವನಾತ್ಮಕವಾಗಿ ಬಿತ್ತಿದ್ದಾರೆ. ಮೂಲತಃ ಭದ್ರಾವತಿಯವರಾದ, ಹಾಲಿ ಕೊಡಗಿನಲ್ಲಿ ಶಿಕ್ಷಕಿಯಾಗಿರುವ ಆರ್. ಸಮತಾ ಅವರ ಇಲ್ಲಿನ ಬರಹಗಳು ವಿವಿಧ ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಈಗಾಗಲೇ ಪ್ರಕಟವಾಗಿವೆ. 

ಬರಹಗಳ ಬಗ್ಗೆ ಹೇಳುವುದಾದರೆ, ಒಂದಕ್ಕಿಂತ ಒಂದು ಬರಹ ಚೆನ್ನಾಗಿದೆ. ಇವೆಲ್ಲ ನಮ್ಮ ದಿನನಿತ್ಯದ ಅನುಭವದಲ್ಲಿ ಬರುವಂತಹವು.  ಆದ್ದರಿಂದ ಓದುವಾಗ ಮುಖದಲ್ಲಿ ನಗು ಚಿಮ್ಮಿಸುತ್ತವೆ. ಅತಿ ಸಲೀಸಾಗಿ ವಿಚಾರವನ್ನು ವಿವರಿಸುವ ಜಾಣ್ಮೆ ಲೇಖಕಿಯಲ್ಲಿದೆ. ಗೊತ್ತಿರುವ ವಿಷಯವಾದರೂ ಅದನ್ನು ಓದುಗರ ಮನಮುಟ್ಟುವಂತೆ ಕಲಾತ್ಮಕವಾಗಿ ಕಟ್ಟುವ ಶೈಲಿ ಮೆಚ್ಚುವಂತದ್ದು. 

 ಪಿಚ್ಚರ್ ಹುಚ್ಚು, ಹೊಟ್ಟೆ ಬರುತ್ತೆ ಹೋಗೊಲ್ಲ, ಕೂದಲು ಉದುರುತ್ತೆ ಬರೊಲ್ಲ, ವಿಚಿತ್ರ ಆಸೆಗಳು, ನಾಳೆ ಏನು ಅಡುಗೆ ಮಾಡುವುದು, ಲಿಯೋ ಬೆನ್ನೇರಿ, ಪರಿಮಳಗಳ ಮಾಯೆ, ಬೋಟಿ ಗೊಜ್ಜು ಮೊದಲಾದವು ಅನುಭವ ಕಥನಗಳಾಗಿ ಮನಸೆಳೆಯುತ್ತವೆ. ಕೃತಿಯ ಹೆಸರಿರುವ ‘ಪರಿಮಳಗಳ ಮಾಯೆ’ ಅಧ್ಯಾಯದಲ್ಲಿ ಹಲಸಿನಹಣ್ಣು ಹಣ್ಣುಗಳ ರಾಜ. ಅದರ ಪರಿಮಳವೇ ಒಂದು ಖುಷಿ. ಈ ಪರಿಮಳದ ಕೊಳದಲ್ಲಿ ಮುಳುಗೆದ್ದ ಬಳಿಕವೇ ಆ ಹಣ್ಣಿಗೆ ಮುಕ್ತಿ ಎನ್ನುತ್ತಾರೆ. ಇದಕ್ಕೆ ಗಂಡ ರೇಗಿಸುವುದನ್ನೂ ಸಹ  ವಿವರಿಸಿದ್ದಾರೆ. ಮುಂದಿನ ಜನ್ಮ ಎನ್ನುವುದಿದ್ದರೆ ನನ್ನನ್ನು ಕರಡಿಯಾಗಿ ಹುಟ್ಟಿಸಿ ತುಂಬಿದ ಹಲಸಿನ ವನದಲ್ಲಿ ಬಿಟ್ಟುಬಿಡು ಎಂದು ಬೇಡುವೆ ಎಂದು ಹೇಳುತ್ತಾರೆ.

 ‘ಹೊಟ್ಟೆ ಬರುತ್ತೆ ಹೋಗಲ್ಲ’ ‘ಕೂದಲು ಹೋಗುತ್ತೆ ಬರೊಲ್ಲ’ ಎನ್ನುವ ಎರಡೂ ಬರಹದಲ್ಲಿ ಹಾಸ್ಯ  ಮತ್ತು ಅನುಭವ ಎರಡೂ ಇದೆ. ಹೊಟ್ಟೆ ಕರಗಿಸಲು ಏನೆಲ್ಲ ಹರಸಾಹಸ ಮಾಡಿದರೂ ಅದು ಕರಗದ ಬಗ್ಗೆ ಮನೋಜ್ಞವಾಗಿ ಚಿತ್ರ್ರಿಸಿದ್ದಾರೆ. ಹೊಟ್ಟೆ ಇಳಿಯದಿದ್ದಾಗ, ನಿನ್ನ ತಂಟೆಗೆ ನಾನು ಬರುವುದಿಲ್ಲ, ಬೆಳೆಯುತ್ತ, ಕುಲುಕುತ್ತ ಇದ್ದುಬಿಡು ಎಂದು ಹೇಳುತ್ತಾರೆ. ತಲೆಕೂದಲು ವಿಚಾರದಲ್ಲೂ ಸಹ  ಬೋಳು ತಲೆಯನ್ನು ಮುಚ್ಚಿಕೊಳ್ಳಲು ಮಾಡುವ ಸರ್ಕಸ್ಸನ್ನು ವಿವರಿಸುತ್ತಾರೆ. ಕೆಲವರು ಕೂದಲು ಬೆಳೆಸಲು ಯತ್ನಿಸುತ್ತಾರೆ. ಆದರೆ ಯಾವ ಉಪಾಯವೂ ಫಲಿಸುವುದಿಲ್ಲ. ಈ ಸತ್ಯವನ್ನು ಮನಸಾರೆ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ.    

‘ಅಣ್ಣನೆಂಬ ಅಪ್ಪನ ನೆನೆಪು’ ಬರಹದಲ್ಲಿ ಕನ್ನಡದ ಕಟ್ಟಾ ಅಭಿಮಾನಿಯಾಗಿದ್ದ ಅಪ್ಪ, ಕನ್ನಡ ಪತ್ರಿಕೆಗಳನ್ನು ಮನೆಗೆ ತರಿಸುತ್ತಿದ್ದರಿಂದಮಲೇ ಸಾಹಿತ್ಯದ ಒಲವು ಬೆಳೆಯಲು ಕಾರಣವಾಯಿತು ಸಮಾಜವಾದಿ ಲೇಖಕ, ನಾಸ್ತಿಕ ಆದರೂ ಮನೆಯ ಯಾವ ಪೂಜೆ, ನಂಬಿಕೆಗೆ ಅಡ್ಡಬಂದಿರಲಿಲ್ಲ. ಅಪ್ಪ ಕೊಟ್ಟು ಹೋಗಿರುವ ಅಮೂಲ್ಯ ಕೊಡುಗೆ ಸಾಹಿತ್ಯದ ಓದುಬರಹ ಎನ್ನುವುದನ್ನು ಸ್ಮರಿಸುತ್ತಾರೆ.

ಹೀಗೆ ಪ್ರತಿ ಬರಹವನ್ನು ತನಗೆ ದಕ್ಕಿದ ಹಾಗೆ ಸುಲಲಿತವಾಗಿ ತಮ್ಮದೇ ಆದ ಭಾಷೆಯಲ್ಲಿ ಪುಸ್ತಕದ ಬರಹಗಳನ್ನಾಗಿ ಕಟ್ಟಿಕೊಟ್ಟು ಅದರ ಚೆಲುವಿಗೆ ಕಾರಣರಾಗಿದ್ದಾರೆ. ಹಾಸ್ಯದ ಬಣ್ಣವನ್ನು ವಿಚಾರಗಳಿಗೆ ಲೇಪಿಸಿ ಜೀವಂತಿಕೆಯಲ್ಲಿ  ಕೃತಿಯನ್ನು ಹಿಡಿದಿಟ್ಟಿದ್ದಾರೆ. ನಗುವಿನ ಜೊತೆಗೆ ವಾಸ್ತವವನ್ನೂ ತಿಳಿಸುವ ಯತ್ನವನ್ನು ಲೇಖಕಿ ಮಾಡಿದ್ದಾರೆ.

...................

Comments

Popular posts from this blog