ಜ್ಞಾನದ ಕುತೂಹಲ ಹೆಚ್ಚಿಸುವ
 ‘ನಾನೂ ವಿಜ್ಞಾನಿಯಾಗುವೆ’



ನಮ್ಮ ಜೀವನದ ಎಲ್ಲಾ ಸ್ತ್ತರಗಳಲ್ಲಿಯೂ ವಿಜ್ಞಾನ ಅನಿವಾರ್ಯ ಎಂಬಂತಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ  ತಿಳಿಯಪಡಿಸಬೇಕಾಗಿದೆ. ಲೇಖಕರಾದ, ನಿವೃತ್ತ ಪ್ರಾಂಶುಪಾಲರಾದ ಮತ್ತೂರು ಸುಬ್ಬಣ್ಣ ‘ನಾನೂ ವಿಜ್ಞಾನಿಯಾಗುವೆ’ ಈ ಕೃತಿಯ ಮೂಲಕ ನೇರವಾಗಿ ವಿಜ್ಞಾನದ ಪ್ರಮೇಯ ನಿಯಮಗಳನ್ನು ತಿಳಿಸದಿದ್ದರೂ ವಿಜ್ಞಾನದ ಸ್ವಾರಸಕರ ಅಂಶಗಳನ್ನು ಕಥೆಗಳಲ್ಲಿ ಮಕ್ಕಳು ಅನುಭವಿಸುವಂತೆ ಮಾಡಿದ್ದಾರೆ. ಎಲ್ಲ ಮಕ್ಕಳಲ್ಲೂ ಇರುವ ಏಕೆ, ಹೇಗೆ, ಏನು ಎಂಬ ಪ್ರಶ್ನೆಗಳಿಗೆ ನಾವು ಸರಿಯಾಗಿ ಸ್ಪಂದಿಸಿದರೆ ಎಷ್ಟೆಲ್ಲ ಪ್ರತಿಭೆಗಳು ಅರಳಬಹುದು. ಇಲ್ಲಿನ ಕಥೆಗಳೆಲ್ಲ ತುಂಬಾ ಕುತೂಹಲಕಾರಿ ಹಾಗೂ ಆಸಕ್ತಿಯುತವಾಗಿದ್ದು ಮಕ್ಕಳು ಪದೇಪದೇ ಓದುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಲಿವೆ. ಪುಟ್ಟದಾದ ೧೦ ಕಥೆಗಳು ಇದರಲ್ಲಿವೆ.



 ‘ನಾನೂ ವಿಜ್ಞಾನಿಯಾಗುವೆ’

ವಿಜ್ಞಾನಿಯಾಗಬೇಕೆಂಬ ಹಠ ಹಿಡಿದ ಮಗನಿಗೆ ತಂದೆ ಮನೆಯಲ್ಲಿ ಸಣ್ಣಪುಣ್ಣ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸುತ್ತಾ ಆತ ವಿಜ್ಞಾನಿಯಾಗುವಲ್ಲಿ ಇನ್ನಷ್ಟು ಆಸಕ್ತಿ ತುಂಬಿದ ಕಥೆ ಇದು.


‘ಚಂದ್ರಣ್ಣನ  ಅಂಗಳದಲ್ಲಿ’

 ಅಪ್ಪ ಹಿಂದಿನ ದಿನ ರಾತ್ರಿ ಮಕ್ಕಳಿಗೆ ಚಂದ್ರಯಾನದ ಬಗ್ಗೆ ಹೇಳಿದ ಕಥೆಯನ್ನು ರಾತ್ರಿ ಮಕ್ಕಳು ಕನಸಿನಲ್ಲಿ ಕಾಣುವುದು ಈ ಕಥೆಯ ಸಾರಾಂಶ. ಚಂದ್ರನ ಮೇಲ್ಮೈ ಬಗ್ಗೆ, ಅಲ್ಲಿಗೆ ಗಗನಯಾತ್ರಿಗಳು ತೆರಳಿ ಭಾರತದ ಧ್ವಜವನ್ನು ನೆಡುವುದು ಮಕ್ಕಳಿಗೆ ಕನಸಿನಲ್ಲಿ ಕಂಡು ಬರುತ್ತz.


ಅಜ್ಜಿಯ ಕೋಳಿ

 ತನ್ನ ಅಗ್ಗಿಷ್ಟಿಕೆ  ಮತ್ತು ಕೋಳಿಯಿಂದಲೇ ಬೆಳಗಾತ್ತದೆ, ಊರಿನವರು ಜೀವನ ನಡೆಸುತ್ತಾರೆ ಎಂದು ತಿಳಿದಿದ್ದ, ವೈಜ್ಞಾನಿಕ ಯುಗದ ಅರಿವಿಲ್ಲದ ಅಜ್ಜಿಯೊಬ್ಬಳು ಜನರಿಗೆ ಪಾಠ ಕಲಿಸಲು ತೀರ್ಮಾನಿಸಿ ಕಾಡಿಗೆ ಹೋಗುತ್ತಾಳೆ. ಆದರೆ ಇತ್ತ ಊರಿನವರು ಕೋಳಿ ಮತ್ತು ಅಗ್ಗಿಷ್ಟಿಕೆ ಇಲ್ಲದೆ ಆಧುನಿಕ ತಂತ್ರಜ್ಞಾನದಿಂದ ಬದುಕುವುದು ಅವಳಿಗೆ ಗೊತ್ತಾಗುತ್ತದೆ. ನಂತರ ಕಾಡಿನಲ್ಲಿ ಯುವಕನೊಬ್ಬ ಆಕೆಯನ್ನು  ಭೇಟಿಯಾಗಿ ಅಗ್ಗಿಷ್ಟಿಕೆ ಮತ್ತು ಕೋಳಿಯ ಕಾಲ ಮುಗಿದಿದೆ. ಈಗ ಎಲ್ಲ ತಂತ್ರಜ್ಞಾನದ ಯುಗ ಎಂದು ಹೇಳಿ ಹಳ್ಳಿಗೆ ಕರೆತರುತ್ತಾನೆ.


 ‘ ಇಲಿಗಳ ಧೈರ್ಯ’

 ಬೆಕ್ಕಿಗೆ ಗಂಟೆ ಕಟ್ಟುವರಾರು’ ಎನ್ನುವ ಕಥೆಯನ್ನು ಕೇಳಿದ್ದೇವೆ. ಆದರೆ ಈ ಕಥೆಯಲ್ಲಿ ಬೆಕ್ಕಿನಿಂದ ಪಾರಾಗಲು ಇಲಿಗಳು ಬೆಕ್ಕಿನ ಕೊರಳಿಗೆ ವಿದ್ಯುತ್ತಿನ ಕರೆ ಗಂಟೆ ಕಟ್ಟುವುದು, ಸ್ವಿಚ್ ಒತ್ತಿದಾಗ ಅದು ಬಾರಿಸುವ ಯೋಜನೆ ಜಾರಿಗೆ ತರಲು ಸಭೆಯಲ್ಲಿ ಯೋಜಿಸಿ ಇದಕ್ಕಾಗಿ ಮಂಗನನ್ನು ಬರಮಾಡಿಕೊಂಡು ಅದರ ಸಹಾಯ ಪಡೆಯುತ್ತಾರೆ ಅದರಂತೆ ಮಂಗ ಬೆಕ್ಕಿನ ಕೊರಳಿಗೆ ಕರೆಗಂಟೆಯನ್ನು ಕಟ್ಟಲು ನಾಲ್ಕಾರು ಯುವ ಇಲಿಗಳನ್ನು ಕರೆದುಕೊಂಡು ಹೋಗುತ್ತದೆ. ಮಲಗಿದ್ದ ಬೆಕ್ಕಿನ ಕಾಲುಗಳನ್ನು ನಾಲ್ಕು ಇಲಿಗಳು ಭದ್ರವಾಗಿ ಹಿಡಿದಿರುತ್ತವೆ. ಮಂಗ ಬೆಕ್ಕಿನ ಹತ್ತಿರ ಹೋಗಿ ಇದು ಬೆಕ್ಕಲ್ಲ, ಹುಲಿ ಎನ್ನುತ್ತದೆ. ಹುಲಿ ಎಂಬ ಶಬ್ದ ಕೇಳಿದ ಕೂಡಲೇ ಬೆವರಿದ ಇಲಿಗಳು ಅಲ್ಲಿಂದ ಎದ್ದು ಪರಾರಿಯಾದವು. ಇಲಿಗಳ ಧೈರ್ಯವನ್ನು ಕಂಡು ಮಂಗ ನಕ್ಕಿತು.


 ‘ರೋಬಿಣಿ’

 ಸಿಂಗಾಪುರದಿಂದ ತುಂಬಿದ್ದ ರೋಬೋ ಗಿಳಿಯನ್ನು ಆ ಮನೆಯ ಮಕ್ಕಳು ತಮ್ಮ ಮಿತ್ರರಿಗೆ ಕರೆತಂದು ತೋರಿಸುವುದು, ಮಕ್ಕಳು ಹೇಳಿದಂತೆ ಗಿಳಿ  ಆಟವಾಡುವುದು, ಹಾರುವುದು, ಕುಣಿಯುವುದು, ಮಕ್ಕಳು ಅದನ್ನು ತಾವೂ ಸಹ ಅಂತಹುದೇ ಗಿಳಿ ಸಾಕಲು ಯೋಚಿಸುವುದು, ತಮಗೂ ಅದೇ ತರದ ಗಿಳಿ ಬೇಕು ತಂದುಕೊಡಿ ಎಂದು ಕೇಳುವುದು, ಕೊನೆಗೆ ಹೇಗಾದರೂ ಮಾಡಿ ಆ ಗಿಳಿಯನ್ನು ಮುಟ್ಟಿಬರಲು ರಾತ್ರಿ ವೇಳೆ ಯತ್ನಿಸುವುದು, ಎಲ್ಲರೂ ಮಲಗಿದ್ದಾಗ ಅದನ್ನು ಮುಟ್ಟಲು ಬಂದಾಗ ಮಕ್ಕಳಿಗೆ ರೂಬಿಣಿ ಸತ್ತು ಹೋಗಿದೆ ಎಂದು ಗೊತ್ತಾಗುತ್ತದೆ. ಆದರೆ ಅದರಲ್ಲಿದ್ದ ಹುಡುಗನೊಬ್ಬ ಪಕ್ಕದಲ್ಲಿ ಬಿದ್ದಿದ್ದ ವೈರ್‌ಗಳನ್ನೆಲ್ಲ ಗಮನಿಸಿ ಇದು ನಿಜವಾದ ಗಿಳಿಯಲ್ಲ, ಅದು ರೋಬೋ ಗಿಳಿ. ಚಾರ್ಜಿಗೆ ಇಟ್ಟಿದ್ದಾರೆ. ಅದಕ್ಕಾಗಿ ಅದು ಸತ್ತಂತಿದೆ ಎಂದು ಹೇಳುತ್ತಾನೆ.


  ‘ನಿರ್ಮಲ ವಾಹನ’

  ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ವಿವಿಧ ಪ್ರಾಜೆಕ್ಟ್‌ಗಳನ್ನು ಮಾಡುವ ಕೆಲಸ ಕೊಡಲಾಗಿತ್ತು. ಇದಕ್ಕಾಗಿ ಐದು ಜನರ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಐದು ಜನ ದಡ್ಡ ವಿದ್ಯಾರ್ಥಿಗಳನ್ನು ಹೊರಗಿಡಲಾಗಿತ್ತು. ಇವರನ್ನು ಶಿಕ್ಷಕರು ಕೂಡ ಅಲಕ್ಷ್ಯಿಸುತ್ತಿದ್ದರು. ಆದರೆ ಇದೇ ವಿದ್ಯಾರ್ಥಿಗಳು ಕಸಗುಡಿಸುವ ಆಧುನಿಕ ವಾಹನ ಸ್ವಚ್ಛ ಭಾರತ ಕುರಿತಾದ ಪ್ರಾಜೆಕ್ಟ್ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಥೆ ಇದು. ಶಿಕ್ಷಕರಾದವರು ದಡ್ಡ ವಿದ್ಯಾರ್ಥಿಗಳನ್ನು ಗಮನಿಸಬೇಕು. ಕೇವಲ ಬುದ್ಧಿವಂತ ಅಥವಾ ತಮಗಿಷ್ಟವಾದವರನ್ನು ಮಾತ್ರ ಬಳಸಿಕೊಳ್ಳಬಾರದು, ದಡ್ಡರನ್ನೂ ಬೆಳೆಸಬೇಕೆನ್ನುವುದಕ್ಕೆ  ಇದೊಂದು ಉತ್ತಮ ಉದಾಹರಣೆ.


‘ರಾಮಿಯ ಶಬ್ದ ಪ್ರಯೋಗ’

 ತರಗತಿ ಶಿಕ್ಷಕರಿಂದ ತಿರಸ್ಕರಿಸಲ್ಪಟ್ಟಿದ್ದ ರಾಮಿ ಎಂಬ ವಿದ್ಯಾರ್ಥಿ ರಾಷ್ಟ್ರೀಯ ವಿಜ್ಞಾನ ಮೇಳಕ್ಕೆ  ಶಬ್ದದಿಂದ ಉತ್ಪತ್ತಿಯಾಗುವ ಶಕ್ತಿಯನ್ನೇ ವಿದ್ಯುತ್ ಶಕ್ತಿಯನ್ನಾಗಿ ಮಾರ್ಪಾಡು ಮಾಡುವ ವೈಜ್ಞಾನಿಕ ಉಪಕರಣವನ್ನು ತಯಾರಿಸಿದ್ದರ ಕುರಿತಾಗಿದೆ. ಈತ ತರಗತಿಯಲ್ಲಿ ಈ ಉಪಕರಣವನ್ನು ಸಹಪಾಠಿಗಳಿಗೆ ತೋರಿಸುತ್ತಿದ್ದಾಗ ಇದನ್ನು ಗಮನಿಸಿದರೂ ಟೀಚರ್ ಈತನ ಹೆಸರನ್ನು ವಿಜ್ಞಾನ ಮೇಳಕ್ಕೆ ಆಯ್ಕೆ ಮಾಡದೇ ಬೇರೆಯವರನ್ನು ಆಯ್ಕೆ ಮಾಡುವುದು,  ಆತ ಗಲಾಟೆ ಮಾಡುತ್ತಿದ್ದಾನೆಂದು ಪ್ರಾಚಾರ್ಯರಿಗೆ ದೂರುವುದು, ಅವರು ಕರೆದು ವಿಚಾರಿಸಿದಾಗ ರಾಮಿ ನಿಜ ವಿಷಯ ಹೇಳುವುದು, ನಂತರ ಆತನ ಪ್ರಯೋಗ ಗಮನಿಸಿ ವಿಜ್ಞಾನ ಮೇಳಕ್ಕೆ ಆಯ್ಕೆ ಮಾಡುವುದರ ಕುರಿತು ಕಥೆ ಇದು.


 ‘ಹೊಸ ಹಕ್ಕಿ’

ಇದರಲ್ಲಿ ಹಿಮಾಲಯದ ಕಡೆಯಿಂದ ಹಾರಿಬಂದ ಅಪರೂಪದ ಹಕ್ಕಿಯೊಂದು ಶಾಮುಗೆ ಮನೆಯಂಗಳದಲ್ಲಿ  ಕಂಡುಬರುತ್ತದೆ. ಇದು ಸೂರ್ಯೋದಯಕ್ಕೆ ಮುನ್ನ ಮಾತ್ರ ಕೂಗುತ್ತದೆ. ನಂತರ ಕಾಣಿಸಿಕೊಳ್ಳುವುದಿಲ್ಲ. ಇದನ್ನು ಶಾಲೆಯಲ್ಲಿ ಹೇಳಿದಾಗ ಮಕ್ಕಳು ಈ ಹಕ್ಕಿಯನ್ನು ಮಾರನೇ ದಿನ ಮುಂಜಾನೆ ನೋಡಲು  ಮನೆಯ ಹತ್ತಿರ ಬರುತ್ತಾರೆ. ಆದರೆ ಆ ಗುಂಪಿನಲ್ಲಿದ್ದ ಅರ್ಜುನ ಹಕ್ಕಿಯನ್ನು ಹೊಡೆಯಬೇಕೆಂದು ಕವಣೆಕಲ್ಲು ಸಮೇತ ಬಂದಿರುತ್ತಾನೆ. ಹಕ್ಕಿ ನೋಡಿ ಆತ  ಕವಣೆಕಲ್ಲನ್ನು ಎಳೆಯುವ ಹೊತ್ತಿಗೆ ರಕ್ಷಿತಾಳು ಆತನನ್ನು ತಳ್ಳಿ ಕಲ್ಲು ಬೇರೆ ಎಲ್ಲೋ ಹೋಗಿ ಹೊಡೆಯುವ ಹಾಗೆ ಮಾಡಿ ಹಕ್ಕಿಯನ್ನು ಕಾಪಾಡುತ್ತಾಳೆ.


 ‘ಜಾಲಿ ಹಸುವೂ, ಕಳೆದ ಮೊಬೈಲೂ’

ಮನೆಯ ಮುಂದೆ ಪ್ರತಿದಿನ ಬೆಳಿಗ್ಗೆ ಒಂದು ನಿಲ್ಲುತ್ತಿದ್ದ ಜಾಲಿ ಎಂಬ ಹಸುವು ಮನೆಯಲ್ಲಿದ್ದ ಮೊಬೈಲ್ ಅನ್ನು ನುಂಗಿತ್ತು. ಎಷ್ಟು ಹುಡುಕಿದರೂ ಮನೆಯಲ್ಲಿ ಸಿಕ್ಕಿರಲಿಲ್ಲ. ನಂತರ ಹಸುವಿನ ಮೇಲೆ ಅನುಮಾನ ಮೂಡುತ್ತದೆ. ಹಸುವನ್ನು ಅರಸಿ ಹೋಗುತ್ತಾರೆ. ಖಾಲಿ ಸೈಟೊಂದರಲ್ಲಿ ಸಂಗೀತದ ಶಬ್ದ ಕೇಳಿಬರುತ್ತಿತ್ತು. ಅಲ್ಲಿ ಹಸುಗಳೆಲ್ಲ ನೃತ್ಯ ಮಾಡುತ್ತಿದ್ದವು. ಆ ಜಾಗದಲ್ಲಿ ಅನುಮಾನ ಬಂದು ಹುಡುಕುವಾಗ ಕಾಲಿಗೆ ಮೊಬೈಲ್ ತಾಗುತ್ತದೆ. ಅದು ತಮ್ಮದೇ ಮೊಬೈಲ್ ಎಂದು ಖಾತ್ರಿ ಮಾಡಿಕೊಳ್ಳುತ್ತಾರೆ.


‘ಕಿರಣ್‌ಗೆ ಬಹುಮಾನ ಬಂದಿದ್ದು’


  ಎರೆಹುಳುವೊಂದು ಗಿಡ ಹಸುರಾಗಿ, ಸೊಂಪಾಗಿ ಬೆಳೆಯಲು ಸಹಾಯ ಮಾಡಿ ಕಿರಣ ಎಂಬ ಬಾಲಕನಿಗೆ ಶಾಲೆಯಲ್ಲಿ ನಡೆದ ವನಮಹೋತ್ಸವ ಸ್ಪರ್ಧೆಯಲ್ಲಿ  ಅತ್ಯತ್ತಮವಾಗಿ ಗಿಡ ಬೆಳೆಸಿ ಬಹುಮಾನ ಪಡೆಯಲು ಕಾರಣವಾದ ಕಥೆ ಇದು. ಕಿರಣ್ ಬಿಸಿಲಲ್ಲಿ ಬಿದ್ದು ಒದ್ದಾಡುತ್ತಿದ್ದ ಎರೆಹುಳುವನ್ನು ಗಿಡದ ಬುಡಕ್ಕೆ ಹಾಕಿ ಕಾಪಾಡಿದ್ದರಿಂದ ಆ ಗಿಡ ಚೆನ್ನಾಗಿ ಬೆಳೆದು ಅವನು ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾಡಿತು ಎನ್ನುವುದನ್ನು ತಿಳಿಸುವ ಕಥೆ.

....................


Comments

Popular posts from this blog