ಬದುಕಿನ ಸಂಗತಿಗಳನ್ನು ಕಾಡುವ
‘ಬದುಕು ಜಟಕಾ ಬಂಡಿ’
‘ಬದುಕು ಜಟಕಾ ಬಂಡಿ’ ಇದು ಜೀವನ್ಮುಖಿ ವೈವಿಧ್ಯಮಯ ಕಥೆಗಳ ಸಂಕಲನ. ಅನಂತ ಕುಣಿಗಲ್ ಇದರ ಕರ್ತೃ. ಇಲ್ಲಿನ ಕಥೆಗಳು ಮತ್ತು ಪಾತ್ರಗಳು ಮಾತನಾಡುತ್ತವೆ. ಪಾತ್ರಗಳು ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ನಿಲ್ಲುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆಗಳಿವು. ಈ ಸಂಕಲನ ಸಮಾಜದ, ಜನರ ಬದುಕಿನ ಬಗ್ಗೆ ಇರುವ ಲೇಖಕರ ಕಾಳಜಿಯನ್ನು ಎತ್ತಿಹಿಡಿಯುತ್ತದೆ.
ಕೃತಿಯಲ್ಲಿ ಎರಡು ರೀತಿಯ ಕಥೆಗಳಿವೆ. ಒಂದು ಸಣ್ಕಥೆ ಮತ್ತೊಂದು ಪುಟ್ಕಥೆ. ಎರಡರಲ್ಲೂ ತಲಾ ೧೦ ಕಥೆಗಳಿವೆ. ಪುಟ್ಕಥೆಗಳು ಹೆಸರಿಗೆ ತಕ್ಕಂತೆ ಇದ್ದು, ಕೊನೆಯಲ್ಲಿ ಒಂದು ಸಂದೇಶವನ್ನು ಸಾರುತ್ತವೆ. ಸುಲಭದಲ್ಲಿ ಓದುಗರನ್ನು ಆಕರ್ಷಿಸುತ್ತಿವೆ.
ಒಂದು ಹೋರಾಟದ ಕಥೆ
ಕರ್ನಾಟಕದ ಬಯಲುಸೀಮೆ ಪ್ರಾಂತ್ಯದ ಬ್ಯಾಟರಾಯನಪುರ ಎಂಬ ಹಳ್ಳಿಗೆ ಬ್ರಿಟಿಷರಿಂದ ಬೋರಪ್ಪ ಎನ್ನುವನು ಮುಕ್ತಿ ದೊರೆಯಲು ನಡೆಸಿದ ಹೋರಾಟದ ಕಥನ ಇದು. ಗಿರಿಜನ ಜಾತಿಗೆ ಸೇರಿದ ಬೋರಪ್ಪ ಊರ ಹೊರಗೆ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರೂ, ಊರ ಹೋರಾಟಗಳಲ್ಲಿ, ಚರ್ಚೆಗಳಲ್ಲಿ, ಸಂಧಾನ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಿದ್ದನು. ಬ್ರಿಟಿಷರ ವಿರುದ್ಧ ಕೆಂಡ ಕಾರುತ್ತಿದ್ದ ಈತ ಬ್ರಿಟಿಷ ಅಧಿಕಾರಿಗಳು ಊರಿಗೆ ಬಂದಾಗ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಕೆನ್ನೆ ಮೇಲೆ ಹೊಡೆದಿದ್ದರು. ಆತ ಅವರ ಮುಖಕ್ಕೆ ಉಗಿದ್ದಿದ್ದನು. ಇದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಅಧಿಕಾರಿ ಬೋರಪ್ಪನ ತಲೆಗೆ ಗುಂಡಿಟ್ಟು ಕೊಲೆ ಮಾಡುತ್ತಾರೆ. ಆತನ ಪತ್ನಿ ಸಾಕವ್ವ ಮತ್ತು ಮೊಮ್ಮಗ ಶಿವ ಬೋರಪ್ಪನಿಗೆ ನ್ಯಾಯ ಕೊಡಿಸುವ ಶಪಥ ಮಾಡುತ್ತಾಳೆ.
ಮೇಟ್ಕುಳಿ
ಸಂಕ್ರಾಂತಿಯಂದು ಬಳಸುವ ಮೇಟ್ಕುಳಿ (ಪತ್ರೆ) ಎಂಬ ವಿಶಿಷ್ಟ ಬಳ್ಳಿಯನ್ನು ತರಲು ಕಾಡಿಗೆ ಹೋಗುವ ಸುಧಾಮ ಎಂಬ ಯುವಕನ ಕಥೆ ಇದು. ಮೇಟ್ಕುಳಿ ಗುರುತೇ ಇಲ್ಲದ ಸುಧಾಮ ಕಾಡಿನಲ್ಲಿ ಹೋಗಬೇಕಾದರೆ ಕೆಂಪಣ್ಣ ಎನ್ನುವವನು ಸೊಪ್ಪಿನ ಮೆದೆಯಲ್ಲಿನ ಪತ್ರೆಯ ಬಳ್ಳಿಯ ಎಲೆಗಳನ್ನು ತನ್ನಲ್ಲಿದ್ದ ಯಾವುದೋ ಬಳ್ಳಿಗೆ ಸೇರಿಸಿ ತಾತನ ಬಳಿ ಓಡಿ ಬರುತ್ತಾನೆ. ತಂದಿದ್ದ ಹೊಂಬನ್ನು ಕಣಕ್ಕೆ ಮುಡಿಸಿ ತಾತ-ಮೊಮ್ಮಗ ಅಲ್ಲಿಂದ ಹೊರಡುತ್ತಾರೆ.
ಕೆಂಪು ಬಸ್‌ನ ನೀಲಿ ಸೀಟು
ಬೆಂಗಳೂರಿಗೆ ತೆರಳಲು ಹೊರಟಿದ್ದ ನಿರೂಪಕರು ಊರಿನ ಬಸ್ ನಿಲ್ದಾಣಕ್ಕೆ ಬಂದಾಗ ತುಂಬಿ ಹೋಗಿದ್ದನ್ನು, ಯುವತಿಯೊಬ್ಬಳು ತನ್ನ ಫ್ರೆಂಡ್‌ಗಾಗಿ ಸೀಟ್ ಅನ್ನು ಹಿಡಿದುಕೊಂಡಿದ್ದರೂ ತಾತನೊಬ್ಬ ತಾನು ಟಿಕೆಟ್ ಪಡೆದಿದ್ದೇನೆಂದು ಹೇಳಿ ಕುಳಿತುಕೊಳ್ಳುವುದು, ಹುಡುಗಿಯ ಪಕ್ಕ ಕುಳಿತಿದ್ದ ಇನ್ನೊಬ್ಬ ಅಂಕಲ್ ವಯಸ್ಸಿನ ತಾತ ಮತ್ತು ತಾತ ಇಬ್ಬರೂ ಬಸ್ಸಿನಂತೆ ಓಲಾಡುವ ತಮ್ಮ ರಾಜಕೀಯ ನಿಲುವನ್ನು ಮಾತನಾಡಿಕೊಳ್ಳುವುದನ್ನು ವಿವರಿಸಿದ್ದಾರೆ.
ಸ್ನೇಹ ದೇಗುಲ
ಸಿನಿಮಾ ನಿರ್ಮಾಪಕನೊಬ್ಬ ವೇಶ್ಯೆಯನ್ನು ಭೇಟಿ ಮಾಡಿ ಅವಳ ಕಥೆಯನ್ನು ಸಿನಿಮಾ ಮಾಡುವ ಕುರಿತ ಕಥೆ ಇದು. ಚಿಕ್ಕವಳಿರುವಾಗಲೇ ತಾಯಿಯನ್ನು ಕಳೆದುಕೊಂಡ ಸುನೀತಾಳನ್ನು ಅವಳ ಚಿಕ್ಕಪ್ಪ ತನ್ನ ಜೊತೆ ಬೆಂಗಳೂರಿಗೆ ಕರೆದುಕೊಂಡು ಬಂದು ಮದುವೆಯಾಗುವ ಹುಡುಗನನ್ನು ತೋರಿಸಿ ಅವನ ಜೊತೆ ಕಳಿಸುವುದು, ಅವನು ಜ್ಯೂಸಿನಲ್ಲಿ ಏನೋ ಬೆರೆಸಿಕೊಟ್ಟು ಅತ್ಯಾಚಾರ ಎಸಗುವುದು, ಆಕೆ ವೇಶ್ಯೆಯಾಗುವುದು, ಚಿಕ್ಕಪ್ಪ ಮತ್ತು ಗಂಡ ಆಗಬೇಕಾದ ವ್ಯಕ್ತಿ ದುಡ್ಡಿನಾಸೆಗೆ ಆಕೆಯನ್ನು ಮಾರುವ ಕಥೆ ಇದು. ಸೋಮು ಎನ್ನುವ ಹಳ್ಳಿ ಹುಡುಗ ಸಿನಿಮಾ ನಿರ್ಮಾಣಕ್ಕಾಗಿ ಬೆಂಗಳೂರಿಗೆ ಬಂದು ಈಕೆಯ ಕಥೆಯನ್ನು ಸಿನಿಮಾ ಮಾಡಲು ಭೇಟಿಯಾಗಿ ನಡೆದ ಕಥೆಯನ್ನೆಲ್ಲ ತಿಳಿದುಕೊಂಡು ಸಿನಿಮಾ ಮಾಡುತ್ತಾನೆ.
ಟ್ಯಾಗ್
ಫೇಸ್ಬುಕ್‌ನ ಮಾಯಾಜಾಲದ ಮೋಸಕ್ಕೆ ಸಿಕ್ಕು ಬಲಿಯಾದವರು ಅದೆಷ್ಟ್ಟೋ ಜನ. ಪ್ರೀತಿಯ ಒಂದು ಟ್ಯಾಗ್ ನಮ್ಮನ್ನು ಕುಣಿಕೆಯವರೆಗೂ, ಕೈ ಕೊಯ್ದುಕೊಳ್ಳುವವರೆಗೂ, ಊರು ಬಿಟ್ಟು ಓಡಿ ಹೋಗುವರೆಗೂ, ಸಂಬಂಧವನ್ನು ಛಿದ್ರ ಮಾಡುವವರೆಗೂ ಮುಂದುವರೆಯುತ್ತದೆ ಎನ್ನುವುದನ್ನು ಅನುಷಾ ಎನ್ನುವ ಹುಡುಗಿಯ ಮೂಲಕ ಲೇಖಕರು ಚಿತ್ರಿಸಿದ್ದಾರೆ. ವಿರಾಟ್ ಮತ್ತು ಅಮೃತ್ ಎನ್ನುವವರ ಫೇಸ್ಬುಕ್ ಬಲೆಯಲ್ಲಿ ಬಿದ್ದ ಅನುಷಾಳ ವಿಚಾರ ತಂದೆ -ತಾಯಿಗೆ ಗೊತ್ತಾದಾಗ ಮನೆಯಲ್ಲಿ ಕೂಡಿಹಾಕಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಘಟನೆ ಸಾಗುತ್ತದೆ.
ಬಯಲ ತೊರೆದ ಹಾಡು
ಮೀನಿಗೆ ಪ್ರಸಿದ್ಧವಾಗಿದ್ದ ಗ್ರಾಮದ ಕೆರೆಯನ್ನು ಊರಿನ ಮುಖ್ಯಸ್ಥ ಮಾದಪ್ಪಗೌಡ ಊರಗೆಳೆಯರ ಕಣ್ಣಿಗೆ ಮಣ್ಣೆರಚಿ ತನ್ನದಾಗಿಸಿಕೊಳ್ಳುವುದು, ಕೆರೆಯಲ್ಲಿ ಮಣ್ಣು ತೆಗೆಸಿ ಹೆಚ್ಚಿನ ನೀರು ಮತ್ತು ಮೀನು ಸಂಗ್ರಹವಾಗುವಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟು ನಂತರ ಕೆರೆಯ ಮೀನನ್ನು ತಾನೇ ಮಾರಾಟ ಮಾಡುವುದು, ಮೀನಿನ ವ್ಯಾಪಾರ ಹೆಚ್ಚಿದಂತೆ ಗೌಡ ಸಿರಿವಂತನಾಗುವುದು, ಊರಿನವರು ಪೊಲೀಸರಿಗೆ ಗೋಮಾಳ ಜಮೀನಿನ ಒತ್ತುವರಿಯ ಬಗ್ಗೆ ದೂರು ಕೊಡುವುದು, ಗೌಡ ಹೆಂಡತಿ ಮಕ್ಕಳೊಂದಿಗೆ ರಾತ್ರಿ ಊರು ಬಿಡುವುದು, ಗೌಡನ ಕೆಲಸಕ್ಕೆ ಬಂದಿದ್ದ ಕಂಠಿ ಎನ್ನುವವನು ನೇಣು ಹಾಕಿಕೊಳ್ಳುವುದು, ಮೀನು ಹಿಡಿಯುವ ಕೆಲಸದವರು ಸಿಟ್ಟಿನಿಂದ ಕೆರೆಯ ಕೋಡಿಯನ್ನು ಒಡೆದು ಹಾಕಿ ಊರು ಬಿಟ್ಟು ಹೋಗುವುದು... ಇದು ಈ ಕಥೆಯ ತಿರುಳು.
ಸರದಿ
೭೦ ವರ್ಷದ ತಮ್ಮಣ್ಣ ಕುಟುಂಬದ ಜೊತೆ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗಾಗಿ ಸಣ್ಣ ಸರ್ಕಸ್ ಕಂಪನಿಯೊಂದನ್ನು ನಡೆಸುತ್ತಾನೆ. ವಿವಿಧ ಆಟಗಳೊಂದಿಗೆ ಊರ ಜನರ ಗಮನ ಸೆಳೆದು ಅವರು ಕೊಡುವ ಅಲ್ಪ ಹಣದಿಂದ ಜೀವನ ಸಾಗಿಸುತ್ತಾನೆ. ತಮ್ಮಣ್ಣ ಜೀವಂತ ಸಮಾಧಿಯಾಗುವ ಸರ್ಕಸ್ ವಿಶೇಷವಾಗಿತ್ತು. ೬೪ನೇ ಬಾರಿ ಸಮಾಧಿಯಾದಾಗ ಆತ ಸಮಾಧಿಯಿಂದ ಹೊರಬರದೆ ಪ್ರಜ್ಞಾಹೀನನಾಗಿ ಸತ್ತುಮಲಗುತ್ತಾನೆ. ಅವನನ್ನು ನಂಬಿದ ಉಳಿದ ಕಲಾವಿದರು ಸುತ್ತುವರೆದು ನಿಂತು ಕಣ್ಣೀರುಗರೆಯುತ್ತಾರೆ.
ಎದೆಯೊಳಗಿನ ಯಾಶಿಗೊಂದು ಕ್ಷಮಾಪತ್ರ
ಪ್ರೀತಿಸುವ ಹೆಣ್ಣನ್ನು ತನ್ನ ಮುಷ್ಠಿಯಲ್ಲಿರಿಸಿಕೊಳ್ಳಲೆತ್ನಿಸಿದರೆ, ಪರಸ್ಪರ ನಿಬಂಧನೆಗಳನ್ನು ಹೇರಿದರೆ, ಪ್ರೀತಿ ಮಿತಿಮೀರಿದರೆ ಅದು ತನ್ನಿಂತಾನಾಗಿಯೇ ಸಾಕೆನಿಸುತ್ತದೆ ಎನ್ನುವುದು ಅನುಭsವಕ್ಕೆ ಬಂದೊಡನೆ ಇನ್ನೊಬ್ಬ ಯುವತಿಯ ಮೂಲಕ ಮೊದಲಿನವಳನ್ನು ಮತ್ತೆ ತನ್ನವಳನ್ನಾಗಿ ಮಾಡಿಕೊಳ್ಳುವ ಯತ್ನ ನಡೆಸುವುದರ ಕುರಿತಾದ ಕಥೆ ಇದು.
ವಿಸರ್ಜನೆ
ಈ ಕಥೆಯಲ್ಲಿ ಕಾರ್ಪೊರೇಷನ್ ಕಸದ ಲಾರಿಯ ಚಾಲಕ ಪಾಪಣ್ಣ ಎನ್ನುವವನು ತನ್ನ ರೋಗಪೀಡಿತ ಮಗು ಮಯೂರನ ಆಸೆಯಂತೆ ಗಣಪತಿ ವಿಸರ್ಜನೆ ಯಂದು ಡ್ರಮ್ಮುಗಳಲ್ಲಿ ವಿಸರ್ಜಿಸಿದ ಗಣಪತಿ ಒಂದನ್ನು ತೆಗೆದುಕೊಂಡು ಹೋಗಿ ಕೊಡುತ್ತಾನೆ. ಆದರೆ ಕಸ ಹೆಕ್ಕುವ ಮತ್ತು ವಿಂಗಡಿಸುವ ಹೆಂಗಸಿನ ಮಗಳೊಬ್ಬಳು ತನ್ನ ಪ್ರೀತಿಯನ್ನು ಅಮ್ಮನಿಗೆ ಪಾಪಣ್ಣ ತಿಳಿಸುತ್ತಾನೆಂದು ಗಣಪತಿಯ ಪ್ರಸಾದದಲ್ಲಿ ಸಿರಪ್ ಬೆರೆಸಿ ಪಾಪಣ್ಣನಿಗೆ ಕೊಡುತ್ತಾಳೆ. ಇದನ್ನು ತಿಂದ ಪಾಪಣ್ಣ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಹೋಗುವಾಗ ಅದು ಅಪಘಾತಕ್ಕೀಡಾಗ್ಕಿ ಸಾಯುತ್ತಾನೆ. ಪಾಪಣ್ಣನ ಶವವನ್ನು ಮನೆಗೆ ಒಯ್ಯುವ ವೇಳೆ ಎದುರಾಗಿ ಮಕ್ಕಳ ಗುಂಪೊಂದು ಗಣೇಶ ವಿಗ್ರಹವನ್ನು ಹೊತ್ತುಕೊಂಡು ‘ಗಣಪತಿ ಬಪ್ಪ ಮೋರೆಯಾ’ ಎಂದು ಕೂಗುತ್ತಾ ಎದುರಾಗುತ್ತದೆ. ಆ ಗುಂಪಿನಲ್ಲಿ ಪಾಪಣ್ಣನ ಮಗ ಮಯೂರನೂ ಇರುತ್ತಾನೆ.
ಊರಿಗೆ ಬಂದ ಬೋರೆಗೌಡ
ಹಳ್ಳಿಯ ಹುಡುಗ ಬೆಂಗಳೂರಿಗೆ ಓದಲು ಬಂದು ಅಲ್ಲಿ ಬೆಟ್ಟಿಂಗ್ ಚಟಕ್ಕೆ ಅಂಟಿಕೊಳ್ಳುವುದು, ಇದಕ್ಕಾಗಿ ಸಾಲ ಮಾಡುವುದು, ಸಾಲ ಕೊಟ್ಟವನು ವಾಪಸಾತಿಗಾಗಿ ಆಗ್ರಹಿಸುವುದು, ಆತ ಜೈಲು ಸೇರುವುದು, ಬೆಟ್ಟಿಂಗ್‌ನಲ್ಲಿ ಯುವಕ ಸೋಲುವುದು, ಸೆಮಿಸ್ಟರ್ ಪರೀಕ್ಷೆಗಳಲ್ಲಿ ಫೇಲಾಗುವುದು, ಸಾಲ ಕೊಟ್ಟವನು ಜೈಲಿನಿಂದ ವಾಪಸು ಬಂದ ನಂತರ ವಾಪಸ್ ಸಾಲ ಮರಳಿಸುವಂತೆ ಆಗ್ರಹಿಸುವುದು, ಈ ವೇಳೆ ಆತನನ್ನು ಯಾರೋ ಕೊಲೆ ಮಾಡುವುದನ್ನು ಕನಸು ಕಾಣುವ ಯುವಕನ ಕಥೆ ಇದು.
ಪುಟ್ಕತೆಗಳು
ಇದರಲ್ಲಿ ಹತ್ತು ಪುಟ್ಟ ಕತೆಗಳಿವೆ.
ಕಷ್ಟ ಹೇಳಿಕೊಂಡು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರ್ರೆಗೆ ಬರುವ ರೋಗಿಗಳನ್ನು ವೈದ್ಯರು ಕಸದ ಹಾಗೆ ಕಾಣುವ ಬಗ್ಗೆ ಮೊದಲ ಕಥೆ ‘ನಾಳೆ ಬಾ’ ವಿವರಿಸಿದರೆ, ಗುರುಗಳು ಶಿಷ್ಯಂದಿರಿಗೆ ಮಾರ್ಗದರ್ಶಿಕರಾಗಿರಬೇಕೇ ಹೊರತು ನಡೆಯುವ ಹಾದಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಸೂಚಿಸಬಾರದು ಎನ್ನುವುದನ್ನು ‘ಪರ್ಫೆಕ್ಷನ್’ ಕಥೆ ವಿವರಿಸುತ್ತದೆ.
‘ಹೆಣ್ಣೆಂದರೆ ಅಷ್ಟೇ ಸಾಕೇ?’ಯಲ್ಲಿ ಪ್ರತಿ ಹೆಣ್ಣಿನಲ್ಲೂ ವೀರ ವನಿತೆಯರಂತೆ ಹೋರಾಡುವ ಸೈನಿಕರು ಇರುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಅವರು ಹೊರಬರುತ್ತಾರೆ ಎನ್ನುವುದನ್ನು ತೋರಿಸಿಕೊಡುತ್ತದೆ. ‘ಡ್ರೈ ಫ್ರೂಟ್ಸ್ ದೆವ್ವ’ ದಲ್ಲಿ ದೆವ್ವವನ್ನು ನೋಡಲು ಹೋದ ಯುವಕ ಸ್ಮಶಾನದಲ್ಲಿ ದೆವ್ವವನ್ನು ಕಂಡ ಬಗ್ಗೆ ವಿವರಿಸಿದರೆ, ‘ಎಡವಟ್ಟು’ ಕಥೆಯಲ್ಲಿ ಅಂಟು ರೋಗ ರಾಜ್ಯಕ್ಕೆ ಬಂದಿದ್ದರಿಂದ ರಾಜ ಎಲ್ಲರೂ ಅಟ್ಟಿಯಲ್ಲಿರಬೇಕೆಂದು ಕಾನೂನು ಮಾಡಿದಾಗ ಸೋಂಕಿದ ವ್ಯಕ್ತಿ ಒಬ್ಬ ಮಾರುವೇಷದಲ್ಲಿ ಬಂದು ರಾಜನ ಕೈಕುಲುಕುವುದು, ಇದರ ಬೇನೆಯಿಂದ ರಾಜಬಳಲುವಂತಾಗುವುದನ್ನು ಚಿತ್ರಿಸಲಾಗಿದೆ.
‘ಪ್ರಾರ್ಥನೆ’ಯಲ್ಲಿ ಅನುವಂಶಿಯಾಗಿ ಬಂದ ಕ್ಯಾನ್ಸರ್‌ಗೆ ಕಲಾವಿದೆ ಯುವತಿ ಒಬ್ಬಳು ತನ್ನ ಗಂಟಲು, ಕಂಠ, ಮಾತು ಕಳೆದುಕೊಂಡು ಕೊನೆಗೆ ಕುಣಿಯಲಿಕ್ಕಾದರೂ ತನಗೆ ಸ್ವಾತಂತ್ರ್ಯ ಸಿಗಲಿ ಎಂದು ದೇವರಲ್ಲಿ ದಿನನಿತ್ಯ ಪ್ರಾರ್ಥಿಸುವ ಕಥೆ ಇದೆ. ‘ಕಾಲ್ಗೆಜ್ಜೆ’ ಯಲ್ಲಿ ಹುಡುಗಿಯ ಹೃದಯ ಕದಿಯುವ ಬದಲು ಕಾಲ್ಗೆಜ್ಜೆ ಕದ್ದು, ಗೆಜ್ಜೆಯಿಂದಲೇ ಗಾಯಗೊಂಡವನ ಕಥೆ ಇದೆ. ‘ಅವಳಲ್ಲ, ಅವನು’ ಕಥೆಯಲ್ಲಿ ಮೋಜು, ಮಸ್ತಿ ಮಾಡುತ್ತಿದ್ದವನೊಬ್ಬ ಹೆಂಗಸಿನ ಹಿಂದೆ ಬಿದ್ದು ಆಕೆಯಲ್ಲಿ ರೇಟು ಕೇಳಿದ್ದ. ಮಗನ ವಿಷಯ ಅರಿತ ತಂದೆ ಅವಳನ್ನೇ ಮನೆಗೆ ಕರೆತಂದು ಇನ್ಮುಂದೆ ಇವಳೇ ನಿನ್ನ ಅಮ್ಮ ಎಂದಾಗ ಹೊಸ ತಾಯಿಗೆ ತನ್ನ ಮುಖವನ್ನು ತೋರಿಸಲು ಮಗ ಒದ್ದಾಡಿದ ಬಗ್ಗೆ ಇದೆ.
,,,,,,,,,,,,,,,,,,

Comments
Post a Comment