ಕತೆ ಪುಸ್ತಕ
ಲೇಖಕರು- ಜೋಗಿ
ಪ್ರಸ್ತುತ ಕೃತಿ ಜೋಗಿಯವರ ಸಣ್ಣ ಕಥೆಗಳ ಸಂಕಲನಾಗಿದೆ. ಇದರಲ್ಲಿ ಒಟ್ಟೂ ೧೧ ಕಥೆಗಳಿವೆ. ತೀರಾ ಆಪ್ತ ಶೈಲಿಯಲ್ಲಿ, ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನೇ ಇಲ್ಲಿ ಕಥೆಯಾಗಿಸಿದ್ದಾರೆ. ಆದ್ದರಿಂದ ಇವು ನಮ್ಮನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಜೊತೆಗೆ ಕಥಾಲೋಕದಲ್ಲಿ ಮುಳುಗಿಸುವ ಶಕ್ತಿಯನ್ನು ಹೊಂದಿವೆ. ಸಣ್ಣಕಥೆಗಳ ಜಗತ್ತು ಅಸಂಖ್ಯಾತ ಸಾಧ್ಯತೆಗಳ ಪ್ರಯೋಗಶಾಲೆಯಾಗಿದೆ ಎನ್ನುವ ಮೂಲಕ ತಮಗೆ ತೋಚಿದ ಪ್ರಯೋಗಗಳನ್ನೆಲ್ಲಾ ಇಲ್ಲಿ ಲೇಖಕರು ಮಾಡಿದ್ದಾರೆ. ಈ ಕಥೆಗಳು ತಮಗೆ ಸಂತೋಷ ಕೊಟ್ಟಂತಹವು ಎಂದು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ.
ಸದಾಶಿವ ಲವ್ಸ್ ನೂತನ್
ಅಪಾರ್ಟ್ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದ ೭೫ರ ಹರಯದ ಸದಾಶಿವನಿಗೆ ಹುಟ್ಟಿದ ದಿನದ ನಿಮಿತ್ತ ಅಪರಿಚಿತರಾರೋ ಬೆಕ್ಕಿನ ಮರಿಯುಳ್ಳ ಪಾರ್ಸೆಲ್ ಕಳಿಸಿದ್ದನ್ನು ಪ್ರೀತಿಯಿಂದ ಸಾಕುತ್ತಿದ್ದಾಗ ವಾಸಸ್ಥಳದ ಮಾಲೀಕ ಅದನ್ನು ಹೊರಹಾಕುವಂತೆ ಸೂಚಿಸುತ್ತಾನೆ. ಈ ಬೆಕ್ಕಿಗೆ ತನ್ನ ಪ್ರೀತಿಯ ನಟಿ ನೂತನ ಹೆಸರನ್ನು ಸದಾಶಿವ ಇಟ್ಟಿರುತ್ತಾನೆ. ಬೆಕ್ಕಿನ ಮರಿಯನ್ನು ಅಪಾರ್ಟ್ಮೆಂಟ್‌ನಿಂದ ಹಾಕಲು ಸದಾಶಿವ ಸಿದ್ಧ್ದನಿರುವುದಿಲ್ಲ. ಅಟ್ಲಾಂಟಾದಲ್ಲಿರುವ ಸದಾಶಿವನ ಮಗ ವಿನಯ ಚಂದ್ರನಿಗೆ ಮಾಲೀಕ ಶ್ರೀನಿವಾಸಯ್ಯ ಕರೆ ಮಾಡಿ ಒಂದೋ ಬೆಕ್ಕಿನಮರಿಯನ್ನು ಹೊರಹಾಕಬೇಕು. ಇಲ್ಲವೇ ಸದಾಶಿವ ಮನೆ ಖಾಲಿ ಮಾಡಬೇಕೆಂದು ತಂದೆಗೆ ಹೇಳುವಂತೆ ಸೂಚಿಸುತ್ತಾನೆ. ಒಂದು ಬೆಕ್ಕು ಅಕಸ್ಮಿಕವಾಗಿ ಬಂದು ನನ್ನನ್ನು ಕಂಗಾಲು ಮಾಡಬಹುದೆಂದುಕೊಂಡಿರಲಿಲ್ಲ ಎಂದು ಸದಾಶಿವ ಅಂದುಕೊಳ್ಳುತ್ತಾನೆ.
‘ಕೆಟ್ಟ ಕವಿತೆಯ ಕಡೆಯ ಸಾಲು’
ನಲ್ಲಿ ಫ್ಲಾಟ್‌ನಲ್ಲಿ ಒಬ್ಬಳೇ ಇರುವ ಮಾಳವಿಕಾಗೆ ಒಂದೂವರೆ ನಿಮಿಷ ಕಣ್ಮುಚ್ಚಿ ನಿಂತರೆ ತಾನು ಕಳೆದು ಹೋದಂತೆ ಭಾಸವಾಗುತ್ತಿತ್ತು. ಈಕೆ ಕವಿತೆಯನ್ನು ಬರೆಯುತ್ತಿದ್ದಳು. ನಾಲ್ಕು ಸಾಲು ಕವಿತೆ ಬರೆಯುತ್ತಿದ್ದಂತೆ ತಾನೊಂದು ಪ್ರಪಾತದ ಅಂಚಿನಲ್ಲಿ ಇದ್ದೇನೆ, ಬರೆಯುತ್ತಾ ಬರೆಯುತ್ತಾ ಆ ಕತ್ತಲೆ ಕಣಿವೆಯ ಆಳಕ್ಕೆ ಬಿದ್ದುಬಿಟ್ಟೆ ಎನಿಸುತ್ತಿತ್ತು. ಅರೆಬರೆ ಬರೆದ ಕವಿತೆಗಳೇ ಮನೆ ತುಂಬಾ ಚೆಲ್ಲಾಡುತ್ತಿದ್ದವು. ಹೀಗಿರುವಾಗ ಒಮ್ಮೆ ಈ ಬಗ್ಗೆ ಮನಃಶಾಸ್ತ್ರರನ್ನು ಜ್ಞಾನ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸುತ್ತಾಳೆ. ಮನಃಶಾಸ್ತ್ರಜ್ಞರಲ್ಲಿ ಹೋದಾಗ ಆಕೆಗೆ ‘ಮೆಟ್ರೋಫೋಬಿಯ’ (ಕಾವ್ಯ ಭಯ) ಇದೆ ಎನ್ನುತ್ತಾರೆ. ಕವಿತೆ ಓದದೆ ಇರುವುದು, ಇಲ್ಲವೇ ಓದಿ ಭಯ ನೀಗಿಕೊಳ್ಳುವುದು ಎರಡೇ ಇದಕ್ಕೆ ದಾರಿ ಎಂದು ಸಲಹೆ ಕೊಡುತ್ತಾರೆ. ಒಂದು ದಿನ ಈಕೆಗೆ ಪಾರ್ಸೆಲ್ ಬರುತ್ತದೆ. ಅದನ್ನು ಬಿಚ್ಚಿ ನೋಡಿದಾಗ ೫ ಪುಸ್ತಕಗಳಿದ್ದವು. ನನ್ನ ಅರೆಬರೆ ಕವನಗಳೆನ್ನೆಲ್ಲ ಪೂರ್ತಿಗೊಳಿಸಿ ಯಾರು ಕವನ ಸಂಕಲನ ಮಾಡಿ ಅದನ್ನು ಕಳಿಸಿಕೊಟ್ಟಿದ್ದರು ಎಂದು ಯೋಚಿಸುತ್ತಾಳೆ. ಪ್ರತಿ ಕವನದ ಕೊನೆಗೆ ಅವರು ಸೇರಿಸಿದ ಕೊನೆಯ ೪ ಸಾಲು ಓದಲು ಭಯವಾಗಿ ಕೊನೆಗೂ ಅವಳು ಕಣ್ಣು ಮುಚ್ಚಿಕೊಳ್ಳುತ್ತಾಳೆ.
ಕವಿತೆ ಮತ್ತು ಆತ್ಮಹತ್ಯೆ
ಕಾವ್ಯದ ಹುಚ್ಚಿನ ನಿರಾಮಯಾಳನ್ನು ಶಶಿಧರ ಪ್ರೀತಿಸುತ್ತಿದ್ದ. ಒಮ್ಮೆ ನಿರಾಮಯ ನಿರೂಪಕನ ಮನೆಗೆ ಬಂದಿದ್ದಳು. ಅದೇ ಸಂದರ್ಭದಲ್ಲಿ ಶಶಿಧರ ಸಹ ಆ ಮನೆಗೆ ಬರುತ್ತಾನೆ. ತನ್ನ ಜೊತೆ ಬರುವಂತೆ ಒತ್ತಾಯಿಸುತ್ತಾನೆ. ಆಕೆ ಬರುವುದಿಲ್ಲ ಎಂದಾಗ ಇಬ್ಬರೂ ಬೈದಾಡಿಕೊಳ್ಳುತ್ತಾರೆ. ನಂತರ ಗೋಪಾಲಕೃಷ್ಣ ಅಡಿಗರ ಕವನವನ್ನು ಓದಿದ ನಂತರ ಆತನಿಗೆ ‘ನಿನಗೆ ಪ್ರೀತಿ ಬೇರೆ ಕೇಡು. ಕಾವ್ಯ ಗೊತ್ತಿಲ್ಲ’ ಎಂದು ಹೇಳುತ್ತಾ ‘ನೀನು ಗಂಡಸು ಎಂದು ಸಾಬೀತು ಮಾಡು’ ಎಂದು ಆಕೆಯಿಂದ ಬೈಸಿಕೊಂಡು ಹೋಗುತ್ತಾನೆ. ಅದೇ ದಿನ ರಾತ್ರಿ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಾನು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಅಡಿಗರ ಕಾವ್ಯ ಅರ್ಥ ಆಗಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡನೋ, ಅಥವಾ ಬೇರೆ ಕಾರಣ ಇರಬಹುದೇ ಎನ್ನುವುದನ್ನು ಪತ್ತೆ ಮಾಡಬೇಕಿದೆ ಎಂದು ಎಂದು ನಿರೂಪಕ ಯೋಚಿಸುತ್ತಾನೆ.
‘ಇಷ್ಟು ದಿನ ಈ ವೈಕುಂಠ’
ಈ ಕತೆಯಲ್ಲಿ ಶ್ರೀನಿವಾಸ ಶ್ರೇಷ್ಠಿ ಎನ್ನುವ ತುಮಕೂರಿನ ಶೇಂಗಾ ಎಣ್ಣೆ ವ್ಯಾಪಾರಿ ನಿಧನದ ನಂತರ ವೈಕುಂಠಕ್ಕೆ ಹೋಗಿದ್ದಾರೆ ಎಂದು ನಂಬಿದ ಅವರ ಮಗ ಶ್ರೀಪತಿ ಅವರನ್ನು ಕಾಣಲು ಹೋದ ಬಗ್ಗೆ ಇದೆ. ಶ್ರೇಷ್ಠಿ ಜೀವಿತಾವಧಿಯಲ್ಲಿ ಮಗನೊಂದಿಗೆ ಹಲವು ಸಲ ತಿರುಪತಿಗೆ ಹೋಗಿ ಬಂದಿದ್ದರು. ತಿರುಮಲ ಬೆಟ್ಟದ ಮೇಲೇರಿ ಬರುತ್ತಿದ್ದನು.ಈ ಸಲ ತನ್ನನ್ನು ಕರೆದುಕೊಂಡು ಬಿಡಪ್ಪ ಎಂದು ವೆಂಕಟರಮಣದಲ್ಲಿ ಅಲ್ಲಿ ಬೇಡಿಕೊಳ್ಳುತ್ತಿದ್ದರು. ಅಪ್ಪನ ನಿಧನಾನಂತರ ತಿರುಪತಿಯಲ್ಲಿ ಶ್ರೀಪತಿಗೆ ರಾಜಮರ್ಯಾದೆ ಸಿಗುತ್ತಿತ್ತು. ಅನೇಕ ಬಾರಿ ಈತನೂ ದರ್ಶನ ಮಾಡಿ ಬಂದಿದ್ದನು ಈ ಹೊತ್ತಲ್ಲಿ ಒಂದು ದಿನ ರಾತ್ರಿ ಮಲಗಿದ ಶ್ರೀಪತಿಗೆ ಸುಮ್ಮನೆ ತೇಲಾಡಿದ ಅನುಭವವಾಯಿತು. ಬಿಸಿ, ತಂಪಿನ ಸ್ಪರ್ಶ ಇರಲಿಲ್ಲ. ಅಪ್ಪನನ್ನು ಹುಡುಕಿಕೊಂಡು ಸ್ವರ್ಗಕ್ಕೆ ಹೋಗಿದ್ದೇನೆ ಎಂದುಕೊಂಡಿದ್ದ. ಅಲ್ಲೇ ಅಪ್ಪನನ್ನು ಹುಡುಕತೊಡಗಿದ. ವಿಷ್ಣು ಚಕ್ರವ್ಯೂಹ ಹಿಡಿದು ಬಾಗಿಲ್ಲಿ ನಿಂತಿದ್ದ. ಶ್ರೀನಿವಾಸ ಶ್ರೇಷ್ಠಿ ಬೆವರುತ್ತ ಕಣ್ಣು ಕತ್ತಲೆ ಬಂದವರ ಹಾಗೆ ತೂರಾಡುತ್ತ ಸಾವರಿಸಿಕೊಳ್ಳುತ್ತಾ ಅಲ್ಲಿ ತಿರುಪತಿಯ ಮೆಟ್ಟಿಲು ಹತ್ತುತ್ತಿದ್ದರು. ಶ್ರೀಪತಿ ವಿಷ್ಣುವಿನಲ್ಲಿ ಕೇಳಿದ-ಅಪ್ಪ ಇನ್ನೂ ವೈಕುಂಠ ತಲುಪಿಲ್ಲವೇ, ಯಾಕೆ ಬೆಟ್ಟ ಹತ್ತುತ್ತಿದ್ದಾರೆ ಎಂದು. ವಿಷ್ಣು ಹೇಳಿದ- ಅದೇ ಅವರ ವೈಕುಂಠ. ಅದೇ ಅವರ ಸ್ವರ್ಗ. ಅದೇ ಅವರ ಪ್ರಾಪ್ತಿ.
‘ಜಗತ್ತಿನ ೬೦ ಅತ್ಯುತ್ತಮ ಕಥೆಗಳು’
ಈ ಕಥೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾದ ಮಾವಿನಕಟ್ಟೆ ಅನಂತಪದ್ಮನಾಭ ಅವರ ಯೋಜನೆ ಕನ್ನಡ ವಿಶ್ವ ಯೋಜನೆ ರೂಪಿಸುತ್ತಾನೆ. ಇದಕ್ಕಾಗಿ ವಿಶ್ವದ ೬೦ ಅತ್ಯುತ್ತಮ ಕಥೆಗಳನ್ನು ಆಯ್ದು ಒಂದು ಉತ್ತಮ ಕೃತಿ ಹೊರ ತರುವುದಾಗಿತ್ತು. ಇದಕ್ಕಾಗಿ ತನ್ನ ಮಿತ್ರ ಕೇಶವಮೂರ್ತಿಗೆ ಈ ಕೆಲಸವನ್ನು ವಹಿಸಿದ್ದರು. ಅವರು ಹುಡುಕಿ ಹುಡುಕಿ ಉತ್ತಮವಾದ ೫೯ ಕಥೆಗಳನ್ನು ತೆಗೆದಿದ್ದರು. ೬೦ನೇ ಕತೆಯಾಗಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೀಡಾಗಿದ್ದರು. ಕೊನೆಗೆ ತನ್ನದೇ ಕಥೆಯನ್ನು ಸೇರಿಸಲು ಯೋಚಿಸಿದ್ದರು. ಆದರೆ ನೈತಿಕತೆ ಅಡ್ಡಬಂದಿತ್ತು. ಇದೇ ವೇಳೆ ಅನಂತಪದ್ಮನಾಭ ತನ್ನನ್ನು ಬಂದು ನೋಡುವಂತೆ ತಿಳಿಸುತ್ತಾನೆ. ಅಲ್ಲಿಗೆ ಹೋದಾಗ ಮಾತನಾಡುತ್ತ ಅದು ಮುಗಿದ ನಂತರ ಹೊರಡುವಾಗ ೬೦ನೇ ಕತೆಯಾಗಿ ತನ್ನದೇ ಒಂದು ಕಥೆ ಸೇರಿಸು ಎಂದು ಕೊಡುತ್ತಾರೆ. ಅಕಾಡೆಮಿಗಳಲ್ಲೂ ಸ್ವಾರ್ಥ ತುಂಬಿರುವುದನ್ನು ಇಲ್ಲಿ ಲೇಖಕರು ಈ ಉದಾಹರಣೆ ಮೂಲಕ ಚಿತ್ರಿಸಿದ್ದಾರೆ.
ಅನ್‌ಲೆಸ್
ಕಥೆ ಬರೆಯುವಾಗ ನಾವೇ ಪಾತ್ರವಾಗದ ಹೊರತು ಯಾರ ಕಥೆಯನ್ನೂ ಬರೆಯಬಾರದು ಎನ್ನುವುದನ್ನು ಶ್ಯಾಮಸುಂದರ್ ಮತ್ತು ರಾಧಿಕಾ ಎಂಬುವರ ಪ್ರೇಮದ ಘಟನೆಯ ಮೂಲಕ ಇಲ್ಲಿ ವಿವರಿಸಿದ್ದಾರೆ. ನಾವೇ ನಾಯಕನಾಗದೆ ಹೋದರೆ ಇನ್ನೊಬ್ಬರಿಗೆ ಕಥೆ ಹೇಳಿಯೂ ಪ್ರಯೋಜನವಿಲ್ಲ ಎನ್ನುವುದನ್ನು ವಿವರಿಸಿದ್ದಾರೆ.
ವಾರುಣಿಯ ಮುಸ್ಸಂಜೆ
ಸಂಬಂಧ, ಮದುವೆ, ಜೀವನದ ನೆಲೆಯನ್ನು ಈ ಕಥೆಯಲ್ಲಿ ಲೇಖಕ ತೆರೆದಿಟ್ಟಿದ್ದಾರೆ. ಜೊತೆಗೆ ವಿಜ್ಞಾನದ ಉದ್ದೇಶ ಒಳ್ಳೆಯದೇ ಇರುತ್ತದೆ ಎನ್ನುವುದನ್ನೂ ಚಿತ್ರಿಸಿದ್ದಾರೆ. ಮನೋವಿಜ್ಞಾನದ ಬಗ್ಗೆ ನ್ಯೂ ಜಸ್ಟಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ನೀರಂಬಳ್ಳಿ ಲಕ್ಷ್ಮಿನಾರಾಯಣ ಬೆಂಗಳೂರಿಗೆ ಬಂದಾಗ ಗೆಳೆಯರ ಜೊತೆ ಪಾರ್ಟಿ ಮಾಡುವುದು, ಚರ್ಚಿಸುವುದು, ಮನೋವಿಜ್ಞಾನದ ಬಗ್ಗೆ ಮಾತನಾಡುವುದು ನಡೆಯುತ್ತದೆ. ಇದರಲ್ಲಿ ವಾರುಣಿ ಎನ್ನುವವರು ಸೆಕ್ಯೂರಿಟಿ ಕೆಲಸ ಮಾಡುವ ಪ್ರಾಣೇಶ್‌ನನ್ನು ವಿವಾಹವಾಗಿರುತ್ತಾರೆ. ಆದರೆ ಇಬ್ಬರ ಮಧ್ಯೆ ಸಂಬಂಧ ಚೆನ್ನಾಗಿರುವುದಿಲ್ಲ. ಪ್ರಾಣೇಶನ ವರ್ತನೆ ಬದಲಾಗುತ್ತದೆ. ಇದನ್ನು ನೀರಂಬಳ್ಳಿ ಅವರಲ್ಲಿ ಆಕೆ ವಿವರಿಸಿದಾಗ, ಮನೋವಿಜ್ಞಾನದ ಪ್ರಕಾರ ಭಾರತದಲ್ಲಿ ಹೆಣ್ಣು ಮಕ್ಕಳು ಮದುವೆಯಾದ ನಂತರ ಗಂಡನೇ ಸರ್ವಸ್ವ ಎಂದು ನಂಬುತ್ತಾರೆ. ಅವನನ್ನು ಯಾವತ್ತೂ ಬಿಟ್ಟು ಬರಲು ಯೋಚಿಸುವುದಿಲ್ಲ. ಅವನನ್ನು ಬಿಟ್ಟುಬಿಡು ಎಂದು ಹೇಳುತ್ತಾರೆ. ಏಕೆಂದರೆ ಅದಕ್ಕೆ ಕಾರಣ ವ್ಯವಸ್ಥೆಯಲ್ಲ. ನಿನಗೆ ಮತ್ತೆ ಪ್ರೀತಿ ಹುಟ್ಟುವ ಅವಕಾಶವನ್ನು ಮದುವೆ ಕಿತ್ತುಕೊಂಡಿದೆ ಅನ್ನೋದನ್ನು ಯಾರೂ ಮರೆಯಬಾರದು. ಜೀವನದಲ್ಲಿ ಒಂದೇ ಸಲ ಪ್ರೀತಿಸಬೇಕು ಅನ್ನೋದನ್ನು ಯಾರೂ ಒಪ್ಪಬಾರದು ಎಂದು ಅವರು ಹೇಳುತ್ತಾರೆ.
ನಾಯಕರ ಮೂರ್ತಿ
ಕಾರ್ಕಳದ ಶಾಸಕರಾದ ಗೋಪಾಲಕೃಷ್ಣ ನಾಯಕರು ಮುಖ್ಯಮಂತ್ರಿಯಾದಾಗ ಅವರ ವಿಗ್ರಹವನ್ನು ಬಸ್ಟ್ಯಾಂಡ್ ಹಿಂಬದಿಯ ವೃತ್ತದಲ್ಲಿ ಸ್ಥಾಪಿಸಲು ಊರಿನ ಸಮಸ್ತರು ನಿರ್ಧರಿಸಿ ಊರಿನ ಗಣ್ಯ ವಿಗ್ರಹ ಕೆಲಸಗಾರ ಚಂದ್ರಾಚಾರಿ ಅವರಲ್ಲಿ ನಾಯಕರು ಮೂರ್ತಿಯನ್ನು ಕಿತ್ತುವಂತೆ ಕೇಳಿಕೊಳ್ಳುತ್ತಾರೆ. ಆದರೆ ಚಂದ್ರಚಾರಿ ನಾನು ಮನುಷ್ಯರ ವಿಗ್ರಹ ಕೆತ್ತುವುದಿಲ್ಲ ಎನ್ನುತ್ತಾನೆ. ಎಷ್ಟು ಹೇಳಿದರೂ, ಒಂದು ವರ್ಷದ ಗಡುವು ಕೊಟ್ಟರೂ ಒಪ್ಪುವುದಿಲ್ಲ. ಈ ಮಧ್ಯೆ ನಾಯಕರ ಆರೋಗ್ಯ ಹದಗೆಡತ್ತದೆ. ನಂತರ ಸಮಿತಿಯವರು ಒಂದು ದಿನ ವಿಗ್ರಹದ ಕೆತ್ತನೆ ಗಮನಿಸಲು ತೆರಳುತ್ತಾರೆ. ಅಲ್ಲಿ ಒಂದು ಮೂರ್ತಿಯನ್ನು ಮಲಗಿಸಿಡಲಾಗಿತ್ತು. ಅದಕ್ಕೊಂದು ಬಿಳಿ ಬಟ್ಟೆ ಹೊದಿಸಲಾಗಿತ್ತು. ಇದೇ ವಿಗ್ರಹ ಇರಬೇಕೆಂದು ಸಂತೃಪ್ತ ಭಾವದಿಂದ ಅದರ ಮುಖದ ಮೇಲಿನ ಬಟ್ಟೆಯನ್ನು ಸರಿಸಿದರು. ಇತ್ತ ಚಿಕಿತ್ಸೆಗೆ ಆಸ್ಪತ್ರೆ ಸೇರಿದ ನಾಯಕರ ಶವವನ್ನು ಡಾಕ್ಟರ್ ಕಿಶೋರ್ ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯನ್ನು ನೋಡಿ ‘ಇನ್ನು ನೀವು ಅನೌನ್ಸ್ ಮಾಡಬಹುದು’ ಎನ್ನುತ್ತಾರೆ.
ಲಾಲ್ ಕಿತಾಬ್
ಅವಿಭಕ್ತ ಮಾರ್ವಾಡಿ ಕುಟುಂಬವೊದಂರ ಕಥೆ ಇದು. ಎಲ್ಲರೂ ಮದುವೆಯಾಗಿ ಅವರವರ ಬಿಸಿನೆಸ್ನಲ್ಲಿ ತಲ್ಲೀನರಾಗುವುದು, ಹೆಂಡತಿಯರ ಬಗ್ಗೆ ಕಾಳಜಿ ಇಲ್ಲದಿರುವುದು, ಮನೆಯಲ್ಲಿ ಪರಸ್ಪರ ಅಕ್ಕತಂಗಿಯರು (ಸೊಸೆಯಂದಿರು) ದ್ವೇಷ, ಜಗಳ, ಒಬ್ಬರನ್ನು ಕಂಡರೆ ಮತ್ತ್ತೊಬ್ಬರಿಗಾಗದ ಸ್ಥಿತಿಯಲ್ಲಿರುವುದು, ಇದು ಗಂಡಂದಿರಿಗೆ ಗೊತ್ತಾದರೂ ಅವರು ಮೌನದಿಂದಿರುವುದು, ಒಬ್ಬ ಮಗ ಹೆಂಡತಿ ಇದ್ದರೂ ಯುವತಿಯ ಪ್ರೀತಿಯ ಬಲೆಯಲ್ಲಿ ಬೀಳುವುದು, ಆಗ ಸೊಸೆಯಂದಿರೆಲ್ಲ ಒಟ್ಟಾಗುವುದು, ಪ್ರೀತಿಸಿದ ಹುಡುಗಿಯಿಂದಾಗಿ ಈತ ಹೆಂಡತಿ ಬಿಡುವುದು, ನಂತರ ಯುವತಿ ಕೈಕೊಟ್ಟು ಈತ ಏಕಾಂಗಿಯಾಗುವುದರ ಕಥೆ ಇದೆ.
ಬೇನಜೀರಳ ಮುಗುಳುನಗೆ
ಈ ಕಥೆಯಲ್ಲಿ ಸುಂದರ ಯುವತಿ ಬೇನಜೀರ್‌ಗೆ ಜುಮುಕಿ ಹಾಕಿದ ಮತ್ತು ಮುಗುಳ್ನಗುತ್ತಿರುವ ಆಕೆಯ ಜಾಹೀರಾತು ಬೋರ್ಡಿನ ಚಿತ್ರವನ್ನು ನಿರಂಜನ ಎಂಬ ಯುವಕ ನೋಡುತ್ತ ಮಾರುಹೋದ ಬಗ್ಗೆ ಇದೆ. ಪ್ರತಿದಿನ ಕೆಲಸಕ್ಕೆ ಹೋಗಿ ಬರುವಾಗ ಅವಳನ್ನು ನೋಡುತ್ತಾ ಸಿಗ್ನಲ್‌ನಲ್ಲಿ ನಿಲ್ಲುತ್ತಾನೆ. ಏನೇನನ್ನೋ ಕಲ್ಪಿಸಿಕೊಳ್ಳುತ್ತಾನೆ. ನಿರಂಜನನ್ನು ಆತ ಕೆಲಸ ಮಾಡುವ ಕಂಪನಿ ಮಲೇಶಿಯಾಕ್ಕೆ ವರ್ಗಾಯಿಸುತ್ತದೆ. ಒಂದೂವರೆ ವರ್ಷ ಅಲ್ಲಿದ್ದು ಮತ್ತೆ ಮರಳುತ್ತಾನೆ. ಬಂದ ಬಳಿಕವೂ ಅಲ್ಲಿದ್ದ ಬೇನಜಿರಳ ಚಿತ್ರ ಹಾಗೆಯೇ ಇರುತ್ತದೆ. ಅವಳ ನೋಟ ಸದಾ ತನ್ನತ್ತಲೇ ಇದೆ ಎಂದು ಆ ರಸ್ತೆಯಲ್ಲ್ಲಿ ಓಡಾಡುವಾಗೆಲ್ಲಾ ಯೋಚಿಸುತ್ತಾನೆ.
ದೇಸಾಯಿಯ ಭಗವದ್ಗೀತೆ
ಗೀತಾ ಯೋಜನೆ ಮಾಡಿಸುವ ಸ್ವಾಮೀಜಿಗಳು ೧೦೦೮ ಬಾರಿ ಭಗವದ್ಗೀತೆಯನ್ನು ಬರೆದುಕೊಂಡು ಬರಲು ಹೇಳುತ್ತಾರೆ. ದೇಸಾಯಿ ಎನ್ನುವವರು ಇದನ್ನು ಬರೆದುಕೊಂಡು ಮಠಕ್ಕೆ ತರುತ್ತಾರೆ. ಮಠದಲ್ಲಿ ಅದನ್ನು ಪಡೆದುಕೊಂಡು ಕೋಣೆಯೊದಂಕ್ಕೆ ಬಿಸಾಡುವುದು ದೇಸಾಯಿಗೆ ಕಂಡುಬರುತ್ತದೆ. ಬರೆದು ತಂದವರಿಂದ ಪಡೆದು ಇಂತಹ ನೂರಾರು ಭಗವದ್ಗೀತೆ ಕಟ್ಟುಗಳು ಧೂಳು ಹಿಡಿದು ಕೋಣೆಯಲ್ಲಿ ಬಿದ್ದಿರುವುದನ್ನು ಕಾಣುತ್ತಾರೆ.
,,,,,,,,,,,,,,,,,,,,

Comments
Post a Comment