ಮಕ್ಕಳ  ಮನಸ್ಸನ್ನಾಕರ್ಷಿಸುವ
‘ತುಂಟ ಗಣಪತಿ’ 


 ಇದು ಹೆಸರೇ ಹೇಳುವಂತೆ ಮಕ್ಕಳಿಗಾಗಿ  ಬರೆದ ಕಿರು ಕೃತಿ. ಜಿ.ಪಿ. ರಾಜರತ್ನ ಇದರ ಲೇಖಕರು. ಅವರ ಶಿಶು ಸಾಹಿತ್ಯ, ಪದ್ಯ, ಕತೆಗಳು, ಹಾಡುಗಳು, ಅಭಿನಯ ಗೀತೆಗಳು, ಗದ್ಯ ಕತೆಗಳು ಇಂದಿಗೂ ಪ್ರಸಿದ್ಧ.  ಇವುಗಳ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳು ಮಕ್ಕಳ ಸಂವೇದನೆಯಲ್ಲಿ ಸೇರುವ ಹಾಗೆ ನೋಡಿಕೊಂಡವರು. ಮಕ್ಕಳ ಮನಸ್ಸನ್ನು ಬೆಳೆಸಿದವರು. ರಾಜರತ್ನಂ ಶಿಶುವಿಹಾರದಲ್ಲಿ ಮತ್ತು ಮಿಡ್ಲ್‌ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾಗ ಮಕ್ಕಳ ಸಹವಾಸದಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸಿದವರು. 

ಕಥೆ ಕೇಳುವುದು ಮತ್ತು ಪದ್ಯ ಹಾಡುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಅದಕ್ಕಾಗಿ ರಾಜರತ್ನಂ ಅವರು ನೂರಾರು ಕಥೆಗಳನ್ನು ಸರಳವಾಗಿ, ಆಕರ್ಷಕವಾಗಿ ಬರೆದಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರು  ಪಾಠದ ನಡುವೆ ಈ ಹಾಡು-ಕಥೆಗಳನ್ನು ಸಮಯಾನುಸಾರವಾಗಿ ಉಪಯೋಗಿಸಿದರೆ ಮಕ್ಕಳ ಮನಸ್ಸನ್ನು ಉಲ್ಲಾಸಭರಿತವಾಗಿರಬಹುದು. ಅವರಿಗೆ ಎಚ್ಚರಿಕೆ ಮತ್ತು ಸ್ಫೂರ್ತಿ ಹಾಗೂ ಅವರ ಬದುಕಿಗೊಂದು ಅರ್ಥವನ್ನು ಕೊಡಲು ಸಹ ಇದು ಸಾಧ್ಯವಾಗುತ್ತದೆ. ರಾಜರತ್ನಂ ಅವರ ಶಿಶು ಸಾಹಿತ್ಯ ಮತ್ತು ಬಾಲ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳಾಗುವುದಕ್ಕೆ ನೆರವಾಗಲಿದೆ. 

 ಪ್ರಸ್ತುತ ಕೃತಿ ‘ತುಂಟ ಗಣಪತಿ’ ಇದರಲ್ಲಿ ೫ ಕವನಗಳಿವೆ. ಅವುಗಳೆಂದರೆ- ಗಣೇಶ ಬಂದ, ತುಂಟ ಗಣಪತಿ,  ಗಣಪತಿ ಶಿವನೇ ನಂಜುಂಡ, ಚಂದ್ರನ ಚೇಷ್ಟೆ, ಭಗ್ನದಂತ ಗಣಪತಿ. ಗಣಪತಿಯ ತುಂಟತನವನ್ನು ಮಕ್ಕಳು ಅವನನ್ನು ನೋಡುವ ರೀತಿಯನ್ನು ಗಣಪತಿಯ ಕುರಿತಾಗಿ ಇರುವ ಅತಿ ಸುಲಭದ ಸದಾ ಜನರ ಬಾಯಲ್ಲಿ ಜಪಿಸಲ್ಪಡುವ ಸ್ತೋತ್ರಗಳನ್ನು ಇದರಲ್ಲಿ ನೀಡಿದ್ದಾರೆ. ಈ ಸ್ತೋತ್ರಗಳು ಚಿಕ್ಕವರಿಗೆ ಹೇಗೋ ದೊಡ್ಡವರಿಗೂ ಹಾಗೆಯೇ ಪ್ರಿಯವಾಗುತ್ತದೆ ಅತಿ ಸುಲಭದಲ್ಲಿ, ರಂಜನೀಯವಾಗಿ  ಕನ್ನಡದ ಪದ್ಯ ರೂಪದಲ್ಲಿ ಈ ಪದ್ಯ ಇದೆ.

 ಗಣೇಶ ಬಂದ/ ಹೊಟ್ಟೆ ಮೇಲೆ ಗಂಧ/ ಕಾಯಿ ಕಡುಬು ತಿಂದ/ ಚಿಕ್‌ಕೆರೇಲಿ ಬಿದ್ದ/ ದೊಡ್‌ಕೆರೇಲಿ ಎದ್ದ/. ಇದು ನಮ್ಮ ಕನ್ನಡ ನಾಡಿನ ಮಕ್ಕಳಿಗೆ ಗಣಪತಿಯ ಬಗ್ಗೆ ಕಿವಿಯ ಮೇಲೆ ಬೀಳುವ ಮೊದಲನೆಯ ಕನ್ನಡ ಪದ್ಯ. ಇದಾದ ಮೇಲೆ ಅವರ ಬಾಯಿಗೆ ಬರುವುದು ಒಂದೆರಡು ಸುಲಭವಾದ ಸಂಸ್ಕೃತ ಸ್ತೋತ್ರ. ಅದರಲ್ಲಿ ಒಂದು ಅಗಜಾನನ ಪದ್ಮಾರ್ಕಂ/ ಗಜಾನನ ಮಹರ್ನಿಷಮ್/ ಅನೇಕದಂತಂ ಭಕ್ತನಾಂ/  ಏಕದಂತಂ ಉಪಾಸ್ಮಹೇ/ ಇದಾದ ಬಳಿಕ ಇನ್ನೊಂದು ಶ್ಲೋಕ ಮಕ್ಕಳಿಗೆಲ್ಲ ಗೊತ್ತಿರುವುದೆಂದರೆ  ಗಜಾನನಂ ಭೂತ ಗಣಾಧಿ ಸೇವಿತಂ ಮತ್ತು ವಕ್ರತುಂಡ ಮಹಾಕಾಯ.

 ತುಂಟ ಗಣಪತಿ ಬಗ್ಗೆ ಜಿ ಪಿ ರಾಜರತ್ನಂ ಅವರ ಒಂದು ಕವನ ತುಣುಕು. 

ಬಾಲಕೃಷ್ಣನ ತುಂಟತನಗಳನ್ನು ಕೆಲವರು ಕೊಂಡಾಡಿರುವ ಹಾಗೆ ಇನ್ನೂ ಕೆಲವರು ಬಾಲ ಗಣಪತಿಯ ತುಂಟತನಗಳನ್ನು ಕುರಿತು ಬರೆದಿದ್ದಾರೆ. ಒಂದು ಸಲ ಗಣಪತಿಯ ಹಣೆಗೆನ್ನೆಯ ಮೇಲೆ ಒಂದೇ ಸಮಯದಲ್ಲಿ ಮುತ್ತು ಕೊಡಬೇಕೆಂದು ಅವನ ತಂದೆ ತಾಯಿಯಾದ ಪರಮೇಶ್ವರ ಮತ್ತು ಪಾರ್ವತಿಯರಿಗೆ ಆಸೆ ಆಯ್ತಂತೆ, ಹೇರಂಭ ಎನಿಸಿದ ಗಣಪತಿ ಅವರ ಆಸೆಯನ್ನು ಅರಿತು ಅವರಿಬ್ಬರಿಗೂ ಅದನ್ನು ಈಡೇರಿಸಲು ಕೋರುತ್ತಾನೆ. ಅವರಿಬ್ಬರ ಮುಖಗಳನ್ನು ಒಟ್ಟುಗೂಡಿಸಿದರೆ ಹೇಗೆ ಇರುವುದು ನೋಡೋಣ ಎಂದು ಆತನಿಗೂ ಬಯಕೆ ಆಯ್ತಂತೆ, ಅದಕ್ಕೆ ಆ ತುಂಟ ಏನು ಮಾಡಿದ ಗೊತ್ತೇ? ಇಬ್ಬರೂ ಮುತ್ತು ಕೊಡಲು ಬಂದಾಗ ಮೆಲ್ಲಗೆ ತನ್ನ ಮುಖವನ್ನು ಹಿಂದಕ್ಕೆ ತೆಗೆದನಂತೆ. ಅದರ ಪರಿಣಾಮವನ್ನು ಹೇಳಬೇಕೇ? ಗಣಪತಿ ತಾಯಿ- ತಂದೆಯ ಮುಖ ಒಂದರೊಡನೆ ಒಂದು ಸೇರಿದ್ದನ್ನು ಕಂಡು ಫಕ್ಕನೆ ನಗಲಾರಂಭಿಸಿದನಂತೆ.

 ಇನ್ನೊಂದು ತುಂಟ ಕವನ ಹೀಗಿದೆ:  ಏ ಗಣಪ! ಏನಮ್ಮ ಏಕಳುವೆ?/ ಕಿವಿಯೆಳೆವನೀ ಷಣ್ಮುಖ/ ಸ್ಕಂದ, ಏಕೀ ಚೇಷ್ಟೆ?/ ಅವನೇ ಮೊದಲೆನ್ನ ಕಂಗಳನೆಣಿಸಿದ/ ಉಚಿತವಲ್ಲೀ ನಡತೆ, ಗಜಮುಖನೆ/ ಮೊದಲೆನ್ನ ಮೂಗನೆಳೆದ/ಇದಕೇನು ತೋಚದೆಯೆ ನಸುನಕ್ಕಳು ಶಿವೆ/ ಹೀಗೆ ಗಣಪತಿಯ ಚೇಷ್ಟೆ- ಕಿತಾಪತಿಗಳು ಅಪರಿಮಿತವಾದವು.

 ಬಸವನನ್ನು ಗಣಪತಿ ಗೋಳುಹೊಯ್ದುಕೊಂಡ ಕಥೆ  

 ಒಂದು ದಿನ ಬಸವ ಶಿವ ಮತ್ತು ಪಾರ್ವತಿಯ ಹತ್ತಿರ ಬಂದು ಗಣಪತಿ ಕೊಡುತ್ತಿರುವ ಗೋಳನ್ನು ತೋಡಿಕೊಳ್ಳುತ್ತಾನೆ. ಗುಟ್ಟ ಹೇಳುವೆನೆಂದು ಕಿವಿ ಹತ್ತಿರ ಬಂದು ನೀರು ಪೂತ್ಕರಿಸುತ್ತಾನೆ. ಇನ್ನೊಮ್ಮೆ ಬಾಲದಲ್ಲಿ ಕೈ ಆಡಿಸಿ ಥಟ್ಟನೆಳೆದು ಕೊಂಬಿಗೆ ಜೋಡಿಸಿ ಕಟ್ಟುಬಿಡುತ್ತಾನೆ. ಮಲಗಿದರೆ ಶಿವನಾಣೆ ಎನ್ನುತ್ತಾನೆ. ಹುಲ್ಲು ತಿನ್ನಲು ಬಿಡುತ್ತಿಲ್ಲ, ಗಲ್ಲವನ್ನು ಬಿಗಿಹಿಡಿಯುತ್ತಾನೆ. ನಿದ್ದೆ ಮಾಡಲು ಕಣ್ಮುಚ್ಚಲು ಬಿಡುವುದಿಲ್ಲ, ಎರಡು ಕಣ್ಣನ್ನು ತೆರೆದಿಡುವನು. ಇವನ ಕಾಟ ಒಂದೆರಡಲ್ಲ. ತನ್ನದು ನಾಯಿಪಾಡಾಯಿತು. ಈ ಬಾಲಕನ್ನು ಸ್ವಲ್ಪ ಬೆದರಿಸಿ ಎನ್ನುತ್ತಾನೆ.

  ಗಣಪ ಮತ್ತು ಷಣ್ಮುಖನ ಕಿತ್ತಾಟವನ್ನು ಶಿವ ಪಾರ್ವತಿಯರು ಬಗೆಹರಿಸಿದ ಬಗೆ 

 ಅಣ್ಣ ಕುಮಾರ ತನ್ನ ಕಿವಿಯನ್ನು ಹಿಡಿದು ಎಳೆದು ಕೆಂಪಗಾಗುವಂತೆ ಮಾಡಿದ್ದಾನೆ. ಮೊದಲೇ ಸಣ್ಣ ಕಿವಿ. ಅದನ್ನು ಹಿಡಿದು ನನಗೆ ಕೋಪ ಬರುವಂತೆ ಮಾಡಿದ್ದಾನೆ ಎನ್ನುತ್ತಾನೆ ಗಣಪ. ಆಗ ಪಾರ್ವತಿ ಅಣ್ಣನನ್ನು ಕರೆ ಎಂದಾಗ ಷಣ್ಮುಖ ಬರುತ್ತಾನೆ. ಬಂದಾಗ, ಅವನಿಗೆ ಏನು ಮಾಡಿದೆ ಎಂದು ಕೇಳುತ್ತಾಳೆ. ನನ್ನಷ್ಟಕ್ಕೆ ನಾನು ಎರಡು ಒಂದ್ಲೆ ಎರಡು ಮಗ್ಗಿ ಹೇಳುತ್ತಿದ್ದೆ. ಎರಡಾರಲೆ ಎಂದೊಡನೆ ಥಟ್ಟನೆ ನುಗ್ಗಿ ನನ್ನ ಕಿವಿ ಹಿಡಿದೆಳೆದ. ಎಡ ಕಿವಿ ಅಗಲವಾಯಿತು ಎಂದ.  ಆಗ ಗೌರಿ ಗಣಪನಿಗೆ, ಹೀಗೆಲ್ಲ ಮಾಡುವುದೇ ? ಎಂದಳು. ಒಂದು ಮುಖಕ್ಕೆ ಎರಡು ಕಣ್ಣು, ಆರು ಮುಖಕ್ಕೆ ಎಷ್ಟು ಆಯಿತು, ನಿನಗೆ ಏಕೆ ಇಷ್ಟೊಂದು ಎಂದು ತಮಾಷೆ ಮಾಡುತ್ತಾನೆ ಎಂದು ಷಣ್ಮುಖ ತನ್ನ ಗೋಳನ್ನು ಹೇಳುತ್ತಾನೆ. ತಾಯಿ ಬಯ್ವಳೆಂದು ಅವಳ ಮಡಿಲನ್ನೇರಿ ಕುಳಿತುಬಿಡುತ್ತಾನೆ ಗಣಪ.

ಶಿವನೇ ನಂಜುಂಡ: 

ಇದರಲ್ಲಿ ಶಿವ ನಂಜುಂಡನಾದುದು, ಶಿವನ ಸಂಸಾರದ ಫಜೀತಿ,  ಸಂಸಾರದಲ್ಲಿ ಬೇಸರ ಬರುವುದು, ಹೆಂಡತಿಯರಾದ ಗಂಗೆಗೂ-ಗಿರಿಜೆಗೂ ಸವತಿ ಮತ್ಸರ,  ಚಂದ್ರನಿಗೂ ಹಣೆಯ ಬೆಂಕಿಗೂ ನಿತ್ಯ ಅಸೂಯೆ ಬಗ್ಗೆ ಕಥೆ,  ಮಕ್ಕಳಿಬ್ಬರ ದಿನದ ಕದನ, ಮನೆಯಲ್ಲಿರುವ ನಾಲ್ಕು ವಾಹನಗಳಾದ ಗೂಳಿ, ಸಿಂಹ, ಇಲಿ, ನವಿಲಿನ ದ್ವೇಷ,  ಮನೆಯಲ್ಲಿ ಮತ್ತು ಮೈಮೇಲೆ  ಹಾವುಗಳ ಹಾವಳಿ ಬಗ್ಗೆ ರಸವತ್ತಾಗಿ ಚಿತ್ರಿಸಿದ್ದಾರೆ. 

  ಚಂದ್ರನ ಚೇಷ್ಟೆ:

ಬಾಲಕ ಗಣಪ ತಂದೆಯ ತಲೆ ಮೇಲೆ ಚಿಮ್ಮುತ್ತಿರುವ ಜಲರಾಶಿಯನ್ನು ಮತ್ತು ಅಲ್ಲಿರುವ ಚಂದ್ರನನ್ನು ಕಂಡು ಅದು ಬೇಕೆಂದು ಕೈ ಚಾಚಿದ. ಆಗ ಹಣೆಯ ಬೆಂಕಿ ತಗುಲಿ ಕೈ ಸುಟ್ಟಿತಂತೆ. ಗಂಗೆಯ ನೀರು ಕುಡಿಯಬೇಕೆಂದು ಬಯಸಿ ಕೈ ಚಾಚಿದರೆ ಕೊರಳಿಗಿದ್ದ ಹಾವು ಹೆಡೆಬಿಚ್ಚಿ ಭುಸ್ ಎಂದು ಹೆದರಿಸಿತಂತೆ. ಆಗ ಪಾರ್ವತಿ ಈಚೆಗೆ ಕರೆದು ಅಲ್ಲಿಗೆ ಹೋಗಬೇಡ ಎಂದಳಂತೆ.

ಚಂದ್ರ ಕೊಡುವನು! ಕೊಡಿಸುವೆನು ನಾನು/ ಚಿಂತೆ ಬೇಡ! ಬಾ, ಬಾ, ಕಂದ/ ಎಂದರೆ, ಚಂದ್ರನು ಬೆಳ್ಳನೆ ನಕ್ಕು/ ಅಮೃತವಿದೆಕೋ ತಿನ್, ಕುಡಿ ಎಂದ/

ಗಣಪ ಹಿಗ್ಗಿದ! ಮರೆತನು ಉರಿಯ/ಮರೆತನು ಹಾವಿನ ಭುಸ್ ಭುಸ್/ ಅಮೃತವೊಂದನೇ ಮೊಗೆಮೊಗೆದುಂಡನು/ ಸುರಿಯುತ, ತೇಗುತ/

ಭಗ್ನದಂತ ಗಣಪತಿ :

 ಇದರಲ್ಲಿನ ಒಂದು ಕವನ ಹೀಗಿದೆ: ಇದ್ದುದೊಂದೆ ಗಟ್ಟಿಹಲ್ಲು/ ಅದೂ ಮುರಿದುಹೋಯಿತೇ?/ ಚೂರು ಚಿಕ್ಕದೊಂದು ನಿಂತು/ ದವಡೆ ಊದಿ ನೋಯಿತೇ?/

ಹೋಯಿತಲ್ಲೊ ಹಲ್ಲು, ಹರಾ!/ ದಂತವೈದ್ಯರೆಲ್ಲಪಾ?/ ವಿಘ್ನರಾಜನೇಕದಂತ /ಭಗ್ನವಾಯಿತಲ್ಲಪಾ? 

ಹೀಗೆ ವಿನೋದಾತ್ಮಕವಾಗಿ, ಅಷ್ಟೇ ಅರ್ಥಗರ್ಭಿತವಾಗಿ, ಮನೋಜ್ಞವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ, ಅವರನ್ನಾಕರ್ಷಿಸುವಂತೆ ರಾಜರತ್ನಂ ಈ ಕೃತಿ ರಚಿಸಿದ್ದಾರೆ. 

.............................


Comments

Popular posts from this blog