ಸ್ತ್ರೀ ಸಂವೇದನೆಯ
‘ಮೌನ ಮನದ ಮಾತುಗಳು’ 



‘ಮೌನ ಮನದ ಮಾತುಗಳು’  ಇದು ನೆಲಮಂಗಲ ಸರಕರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ  ಫsರ್ಹಾನಾಜ್ ಮಸ್ಕಿ ಅವರ  ಚೊಚ್ಚಲ ಕವನ ಸಂಕಲನ. ಈ ಕೃತಿಯಲ್ಲಿ ಒಟ್ಟು ೪೪ ಕವಿತೆಗಳಿವೆ. ಹೆಣ್ಣು ಹೇಗಿರಬೇಕೆಂದು ತಿಳಿಸುವುದರ ಶೋಷಣೆ, ಜೊತೆಗೆ ಸಾಮಾಜಿಕ ಅನಿಷ್ಟ ಪಿಡುಗುಗಳು, ಪ್ರೀತಿ, ಪ್ರೇಮ, ಬಾಲ್ಯ, ಯೌವ್ವನ, ನಿರೀಕ್ಷೆ... ಹೀಗೆ ಹತ್ತು ಹಲವು ವಿಷಯಗಳಲ್ಲಿ ಸ್ತ್ರೀಯರ ಅಂತರಾಳವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನವನ್ನು  ಮಾಡಿದ್ದಾರೆ.

ಇಲ್ಲಿನ ಕವಿತೆಗಳಲ್ಲಿ ಸಮಾಜದ ಕಲ್ಯಾಣ, ಸಾಮಾಜಿಕ ನ್ಯಾಯ, ಸ್ತ್ರೀ ಸಬಲೀಕರಣ, ಸಾಮಾಜಿಕ ಕಳಕಳಿ ಇದೆ.  ಸಮಾಜದ ಮನದಾಳದ ಮಾತುಗಳನ್ನು ಮೌನವಾಗಿ ಆಲಿಸಿ ಮೌನ ಮನದ ಮಾತನ್ನಾಗಿಸಿ ಈ ಕೃತಿಯನ್ನು ರಚಿಸಿದ್ದಾರೆ. ವಿಶೇಷವಾಗಿ ಸ್ತ್ರೀ ಸಂವೇದನೆಗೆ ಆದ್ಯತೆ ಕೊಟ್ಟಿದ್ದಾರೆ. ಇಲ್ಲಿ ಸಾಮಾಜಿಕ ನ್ಯಾಯವೂ ಇದೆ, ಇಲ್ಲದವರ ಬಗೆಗಿನ ಕಾಳಜಿಯೂ ಇದೆ. ಸಮಾಜದ ಅನಿಷ್ಠಗಳೂ ಇವೆ.

ಸಂಕಲನದ ಬಹುತೇಕ ಕವನಗಳು ಮಹಿಳೆಯರ ಬಗ್ಗೆಯೇ ಇವೆ. ಅಂತಿಮ ಕವನದವರೆಗೂ ಓದಿಸಿಕೊಂಡು ಹೋಗುವ ಶಕ್ತಿ ಈ ಕೃತಿಗೆ ಇದೆ. ಅತ್ಯುತ್ತಮ ಸಂದೇಶ ಸಾರುವ ಕವನಗಳ ಮೂಲಕ ಸಾಹಿತ್ಯಿಕ ಪ್ರಪಂಚದಲ್ಲಿ ತಮ್ಮ ಹೆಸರನ್ನು ಸ್ಥಾಪಿಸುವ ಎಲ್ಲಾ ಲಕ್ಷಣಗಳನ್ನು ಇಲ್ಲಿ ಕವಯತ್ರಿ ಪ್ರಕಟಿಸಿದ್ದಾರೆ.

 ಮೊದಲ ಕವಿತೆ ‘ಚಹಾ ಅವಳು’ ಇದರಲ್ಲಿ ಲೇಖಕಿ ಚಹಾವನ್ನು ಸ್ತ್ರೀಯಾಗಿ ಕಂಡಿದ್ದಾರೆ. ಹೆಣ್ಣನ್ನು ತನಗೆ ಬೇಕಾದಂತೆ ಬಳಸಿ ಬಿಸಾಡುವುದು, ಬಣ್ಣ ನೋಡಿ ನಿರ್ಧರಿಸುವುದು, ತಮ್ಮ ಇಷ್ಟದಂತೆ ಏನೇನೋ ಬೆರೆಸಿ ಸ್ತ್ರೀಯನ್ನು ಬದಲಾಯಿಸಿ ಬಿಡುವುದು, ಅವಳ ನೋವಿಗೆ ನಿಂಬೆಹಣ್ಣು ಬೆರೆಸುವುದು, ಆಮೇಲೆ ಜೇನುತುಪ್ಪದ ಸವಿ ಎನ್ನುವ ಮೂಲಕ ಸ್ತ್ರೀ ಶೋಷಣೆಯ ಮಜಲನ್ನು ತೆರೆದಿಟ್ಟಿದ್ದಾರೆ. ಚಹಾ (ಸ್ತ್ರೀ)ವಿಲ್ಲದೆ ಉಳಿವು ಸಾಧ್ಯವಿಲ್ಲ ಎನ್ನುವುದನ್ನು ತಿಳಿಯಿರಿ ಎಂದು ಎಚ್ಚರಿಸುತ್ತಾರೆ. 

 ಎರಡನೇ ಕವನ ‘ಡೋರ್ ಬೆಲ್ಲು’ ಇದರಲ್ಲೂ ಸಹ ಹೆಣ್ಣನ್ನು ಡೋರ್ ಬೆಲ್ ಆಗಿ ಕಾಣುತ್ತಾರೆ. ಬಳಸಿ ಬಳಸಿ ಕೆಡವಿದರೂ /ಹಳೆಯದಾದರೂ ಹಿಯಾಳಿಸುವರು/ ಹೊಡೆಯಿತು ಕರೆಂಟು/ ಸುಮ್ಮನೆ ಸಹಿಸಿರುವ ಅಷ್ಟೊಂದು ನೋವು/ ಈಗ ಯಾರ ತೊಂದರೆ ಇಲ್ಲ/  ಮಹಿಳೆ ನೋವು ಅನುಭವಿಸಿ ತನ್ನ ನಿಜರೂಪ ತೋರಿಸಿದರೆ ನೆಮ್ಮದಿಯಾಗಿ ಬಾಳಬಹುದು. ಡೋರ್ ಬೆಲ್ಲು ಸಹ ಎಷ್ಟೊಂದು ನೋವನ್ನು ಕೊಟ್ಟರೂ ಸಹ ಸ್ತ್ರೀಯಂತೆ ತುಂಬಾನೇ ಸಹಿಸಿಕೊಳ್ಳುತ್ತದೆ. ಆದರೆ ಒಮ್ಮೆ ತಿರುಗಿ ನಿಂತರೆ ಅಂದರೆ ಶಾಕ್ ಹೊಡೆದರೆ ಯಾರೂ ಉಳಿಯುವುದಿಲ್ಲ ಎನ್ನುವ ಮೂಲಕ  ಸ್ತ್ರೀಶಕ್ತಿಯ ಬಲಿಷ್ಠತೆಯನ್ನು ಚೆನ್ನಾಗಿ ವರ್ಣಿಸಿದ್ದಾರೆ.

 ‘ಹೆಣ್ಣು ಹುಟ್ಟಿದಾಗ’ಎಂಬ ಕವನದಲ್ಲಿ, ನಾ ಹುಟ್ಟಿದ ಆ ದಿನ /ಅಜ್ಜಿಯ ಮುಖವಾಗಿತ್ತು ಕುಂಬಳಕಾಯಿ/ ಅಜ್ಜನ ಕೈಯಿಂದ ಬಿತ್ತು ಮಿಠಾಯಿ/ ಎನ್ನುವ ಮೂಲಕ ಹೆಣ್ಣು ಹುಟ್ಟಿದಾಗ ಕಾಣುವ ಅಭಿಪ್ರಾಯಗಳನ್ನು, ಜನರ ಮನಸ್ಸಿನಲ್ಲಿರುವ ಚಹರೆಗಳನ್ನು ವಿವರಿಸಿದ್ದಾರೆ ನಾನು ಹೆಣ್ಣೆಂದು/ ಉಸಿರಾಡಲು ಗಾಳಿ ತೊಂದರೆ ಕೊಟ್ಟಿಲ್ಲ/ ಹೊಟ್ಟೆ ತುಂಬಿಸಲು ಹಾಲು ನಿರಾಕರಿಸಲಿಲ್ಲ/ ಹೊಂದಿಕೊಳ್ಳಲು ಈ ಪರಿಸರ ತಿರಸ್ಕರಿಸಲಿಲ್ಲ/ ಆದರೆ ಸಂತಸ ಮಾತ್ರ ನಾ ಕಾಣಲೇ ಇಲ್ಲ/ ಎಂದು ಸುಂದರವಾಗಿ ನೇಯ್ದಿದ್ದಾರೆ. ಈ ಪರಿಸರ ಮತ್ತು ಪ್ರಕೃತಿ ಹೆಣ್ಣನ್ನು ಎಷ್ಟೊಂದು ಸಹಿಸಿಕೊಂಡರೂ ಮನುಷ್ಯ ಮಾತ್ರ ಆಕೆಯನ್ನು ಸಹಿಸಿಕೊಳ್ಳುವುದಿಲ್ಲ. ಅವಳಿಗೆ ಸಂತಸವನ್ನು ಕೊಡುವುದೇ ಇಲ್ಲ ಎನ್ನುವುದನ್ನು ವಿವರಿಸಿದ್ದಾರೆ.

‘ಭ್ರೂಣ ಹತ್ಯೆ’   ಎಂಬ ಕವನದಲ್ಲಿ, ಎನ್ನ ಬರುವಿಕೆಯ ಕಂಡು/ ಕೊಂದು ಪಾಪಿಗಳಾಗುತಿಹರು/ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಚಿಕ್ಕ ಬಳ್ಳಿ ಗರ್ಭದಿಂದಲೇ ಕಿತ್ತೊಗೆಯದಿರಿ/ ಸಂಪ್ರದಾಯಗಳ ಸಂಕೋಲೆ ಕಟ್ಟಬೇಡಿ/  ಎಂದು ಮನವಿ ಮಾಡುತ್ತಾರೆ. ಸ್ತ್ರೀ ಭೂಣ ಹತ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ಕವಿತೆ ವಿಶೇಷವಾಗಿ ಎಲ್ಲರ ಮನಸೆಳೆಯುತ್ತದೆ. ಮಹಿಳೆಯನ್ನು ಕುರಿತ ಇನ್ನೊಂದು ಕವನ ‘ಹಾಯಾಗಿರುವುದನ್ನು ಕಲಿತುಬಿಡು’. ಇದರಲ್ಲೂ ಸಹ ಮಹಿಳೆ ನೋವನ್ನು ನುಂಗಿ ಹೇಗೆ ಬದುಕುತ್ತಿದ್ದಾಳೆ ಎನ್ನುವುದನ್ನು ವಿವರಿಸಿದ್ದಾರೆ. ಯಾರಿಗೂ ಹೇಳದಿರು/ ನೋವಿನ ಬದುಕು/ ಹಾಗೂ ಹೀಗೂ ಹೊಂದಿಕೊಂಡಿರು/ ಹೆಣ್ಣಿಗೆ ಇದೆಲ್ಲಾ ಸಹಜ/ ಸುಮ್ಮನಿದ್ದು ಬಿಡು/ ಎಂದು ಕಿವಿಮಾತು ಹೇಳುತ್ತಾರೆ.

 ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳು ಹೊಂದಿಕೊಂಡು ಹೋಗಬೇಕು. ಕ್ಷಮೆ ಕೇಳುತ್ತಿರಬೇಕು. ಸಿಟ್ಟು, ಹೊಡೆತ, ಮೋಸ ಇವೆಲ್ಲ ಗಂಡನ ಮನೆಯಲ್ಲಿ ಸಹಜ. ಪ್ರೀತಿಯ ಕ್ಷಣಗಳನ್ನು  ನೋಡಿ ಇವುಗಳನ್ನೆಲ್ಲ ಮರೆತು ಹಾಯಾಗಿರಬೇಕು. ಹೆಣ್ಣಿಗೆ ಇದೆಲ್ಲ ಸಹಜ ಎಂದು ‘ಹಾಯಾಗಿರುವುದನ್ನು ಕಲಿತು ಬಿಡು’ ಎಂಬ ಕವನದಲ್ಲಿ ಹೇಳುತ್ತಾರೆ. ಎಂದು ವಿವರಿಸುತ್ತಾರೆ.

 ಹೀಗೆ ಈ ಕವನ ಸಂಕಲನದಲ್ಲಿ ಬಹುತೇಕ ಕವನಗಳು ಹೆಣ್ಣಿನ ಮೌನ ಮನದ ಮಾತುಗಳಾಗಿ ಓದುಗರನ್ನು ಆಕರ್ಷಿಸುತ್ತವೆ. ‘ಅಪ್ಪ’ ಎನ್ನುವ ಕವಿತೆಯಲ್ಲಿ ಅಪ್ಪನದ್ದು ತಾಯಿಯ ಹೃದಯ, ಮಮತೆ ತೋರಿ ಮಾದರಿಯಾದವನು, ಇರುವುದೆಲ್ಲವನ್ನು ಮಕ್ಕಳಿಗೆ ನೀಡುವವನು, ಅಡುಗೆ ಮಾಡಿ ಉಣಬಡಿಸುವವನು, ತನ್ನ ಕಷ್ಟ ಹೊರಗಿಟ್ಟು ಮನೆಗೆ ಹರುಷದಿಂದ ಬಂದು ಮಕ್ಕಳನ್ನು ಪ್ರೀತಿಯಿಂದ ಸಲಹುವವನು, ಮಕ್ಕಳಿಗೆ ಯಾವುದೇ ತೊಂದರೆ ಆಗಬಾರೆಂದು ಹೆಗಲಿಗೆ ಹೆಗಲು ಕೊಟ್ಟು ಅವರನ್ನು ಸಾಕುತ್ತಾನೆ.  ಅವನದ್ದು ತಾಯಿಯ ಹೃದಯ ಎಂದು ತಂದೆಯ ಬಗ್ಗೆ ಅತ್ಯಂತ ಪ್ರೀತಿಯ ಮಾತನ್ನಾಡುತ್ತಾರೆ. 

  ‘ಗಾಂಧೀಜಿಗೊಂದು ಒಂದು  ಪತ್ರ’ದಲ್ಲಿ ಇಂದಿನ ಸಮಾಜದ ವ್ಯವಸ್ಥೆಯನ್ನು  ಚಿತ್ರಿಸಿದ್ದಾರೆ.  ನೀವು ಹೇಳಿದ ಕನಸಿನ ಭಾರತದ ವಿಳಾಸ ಕೊಡುವಿರಾ, ಎಲ್ಲಿದೆ ಆ ರಾಮರಾಜ್ಯ, ಎಲ್ಲಿದೆ ಹೆಣ್ಣನ್ನು ದೇವಿ ಎಂದು ಪೂಜಿಸುವ ಪರಿಪಾಠ ಎಂದು ಪ್ರಶ್ನಿಸುತ್ತಾರೆ. ಗಾಂಧೀಜಿ ಕಂಡ ಕಾಲ ಈಗಿಲ್ಲ. ಹೆಣ್ಣು ಇನ್ನೂ ಹೋರಾಡಬೇಕಾಗಿದೆ ಸ್ವಾತಂತ್ರ್ಯ ಪಡೆಯಲು ಮತ್ತು ನ್ಯಾಯ ಪಡೆಯಲು. ತಂದೆ- ಅಣ್ಣ -ಗಂಡ- ಯಾರ ಜೊತೆ ಇರಬೇಕು, ಕಣ್ಣೆತ್ತಿ ನೋಡದೆ ತಲೆತಗ್ಗಿ ನಡೆಯಬೇಕಾದ ಕಾಲವಿದು. ಗಾಂಧೀಜಿ ಕಂಡ ರಾಮರಾಜ್ಯದ ಕಾಲ ಈಗಿಲ್ಲ. ಕ್ರೌರ್ಯ ಇಲ್ಲಿ ಮಿತಿಮೀರಿದೆ, ನ್ಯಾಯಕ್ಕಾಗಿ ಕಾದು ಕಾದು ಮಹಿಳೆ ಸುಸ್ತಾಗಿದ್ದಾಳೆ ಎಂದು ಇಂದಿನ ಪರಿಸ್ಥಿತಿಯನ್ನು ಮನಮುಟ್ಟುವಂತೆ ಹೇಳಿದ್ದಾರೆ.

‘ಬಾಲ ಕಾರ್ಮಿಕ’ ಎಂಬ ಕವನದಲ್ಲಿ ಕನಸುಗಳನ್ನು ಸುಟ್ಟು/ ಪುಟ್ಟ ಅಂಗಿಯ ಪುಟ್ಟ ಜೇಬಿನಲ್ಲಿ / ಬಚ್ಚಿಟ್ಟಿದ್ದೇನೆ/  ಎಳೆಯ ತೋಳ ಮೇಲೆ/ ಬದುಕಿನ ಕಾಳಗ/ ನಡೆಯುತ್ತಿದೆ ಎಂದು ವರ್ಣಿಸುತ್ತಾರೆ. ‘ಒಟ್ಟಿಗೆ ಬಾಳಲು  ಒಳ್ಳೆಯವರು ಬೇಕಾಗಿದ್ದಾರೆ’ ಎಂಬ ಕವನದಲ್ಲಿ ಇಂದು ಜೊತೆಯಾಗಿದ್ದವರೇ ಬೆನ್ನಿಗೆ ಚೂರಿ ಹಾಕುತ್ತಾರೆ. ದ್ವೇಷ -ಅಸೂಯೆ, ಕೋಪ -ಮುನಿಸು ತೋರಿಸುತ್ತಾರೆ. ಜೊತೆಯಲ್ಲಿ ಜೊತೆಯಾಗಿ/ ನಮ್ಮವರಾಗಿ ಒಟ್ಟಿಗೆ ಬಾಳಲು/ ಒಳ್ಳೆಯವರು ಬೇಕಾಗಿದ್ದಾರೆ ಎಂದು ಇಂದಿನ ಮನುಷ್ಯನ ಸ್ವಭಾವವನ್ನು ಚಿತ್ರಿಸಿದ್ದಾರೆ.

‘ಮೊದಲು ನೀ ಮಾನವನಾಗು’ ಎಂಬಲ್ಲಿ   ದ್ವೇಷ ಉಗುಳಬೇಡ, ಮದ-ಮತ್ಸರ-ಅಹಂಕಾರ ತೋರಬೇಡ, ಜಾತಿ-ಧರ್ಮದ ಕೆಂಡದಡಿ ಮಾನ ಹೀರಬೇಡ, ಮಾನವೀಯತೆಯನು ಮೂಲೆಗ ತಳ್ಳಬೇಡ. ಬದಲಾಗಿ,  ಅನುರಾಗದ ಪಾಠ ಕಲಿತು/ ಸಹಬಾಳ್ವೆ ಸಾರಿ ಬದುಕು/ ಪ್ರೀತಿ, ಪ್ರೇಮ, ಮಮತೆ  ಅರಿತು/ ಮೊದಲು ನೀ ಮಾನವನಾಗು/ ಎಂದು ಬುದ್ಧಿ ಹೇಳುತ್ತಾರೆ. ಕೊನೆಯ ಕವನ ‘ನಿರೀಕ್ಷೆಯಲಿ’ ಇದರಲ್ಲಿ, ನಂಬಿಕೆಗಳ ಗೆರೆಯನು/ ಎನ್ನ ಭಾವನೆಗಳು/ ದಡ ಸೇರಿಸುವೆಯಾ/ ಕೋಮಲ ಮನದಲಿ/ ಅವಿತಿಹವು ನೂರು ಆಸೆಗಳು/ ಸಹಕರಿಸು ಬಾಳು/ ಬಂಗಾರವಾಗಲು/ ಎಂದು ಕೋರುತ್ತಾರೆ.

ಹೀಗೆ ಸಮಾಜದ ವ್ಯವಸ್ಥೆ, ಹೋರಾಟದ ಬದುಕು,   ಅಸಹನೀಯವಾದ ಮಹಿಳೆಯರ ಬದುಕು, ಮೇರೆ ಮೀರುತ್ತಿರುವ ಶೋಷಣೆ, ದೌರ್ಜನ್ಯ, ಹೆಣ್ಣನ್ನು ಹೀಗಳೆಯುವ, ತಮ್ಮ ಚಪಲಕ್ಕೆ ಬಳಸಿಕೊಳ್ಳುವ  ವಿವಿಧ ವಿಷಯಗಳ ಬಗ್ಗೆ ಮನೋಜ್ಞವಾಗಿ ಕವಿತೆ ಹೆಣೆದಿದ್ದಾರೆ. ಸ್ತ್ರೀವಾದಿ ಕವಯತ್ರಿ ಫsರ್ಹಾನಾಜ್ ಮಹಿಳೆಯರ ಮೇಲಿನ ದೌರ್ಜನ್ಯ, ಆಕೆಯ ಇಂದಿನ ಸ್ಥಿತಿಗತಿಯನ್ನು ಬಹಿರಂಗವಾಗಿ ಕವಿತೆ ಮೂಲಕ ಧ್ವನಿ ಎತ್ತಿದ್ದಾರೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ.

.................



Comments

Popular posts from this blog