ವರದಾ ತೀರದ ಕಥೆಗಳು’




‘ವರದಾ ತೀರದ ಕಥೆಗಳು’ ಇದು ಕಥಾ ಸಂಕಲನ. ಪತ್ರಕರ್ತ ರವೀಂದ್ರ ಮುದ್ದಿ ಇದರ ಲೇಖಕರು. ಕೃತಿಯಲ್ಲಿ ಲೇಖಕರು ಬಾಲ್ಯದಲ್ಲಿ ತಾನು ತನ್ನೂರಿನಲ್ಲಿ ಕಂಡವರನ್ನು ಕಥೆಯ ರೂಪದಲ್ಲಿ ದಾಖಲು ಮಾಡಿದ್ದಾರೆ ಇಲ್ಲಿನ ಬರಹಗಳಲ್ಲಿ ಕೆಲವು ಕಥೆಗಳಾದರೆ, ಇನ್ನು ಕೆಲವು ವ್ಯಕ್ತಿ ಚಿತ್ರಗಳಾಗಿವೆ. ಮತ್ತೆ ಕೆಲವು ಅಕ್ಕರೆಯ ಟಿಪ್ಪಣಿಗಳಂತೆ ಕಾಣುತ್ತವೆ. ಆದರೆ ಎಲ್ಲವನ್ನೂ ಒಟ್ಟುಗೂಡಿಸಿ ನೋಡಿದಾಗ ಲೇಖಕರ ಜೀವನ ಪ್ರೀತಿ, ತಾನು ಕಂಡ ವ್ಯಕ್ತಿಗಳನ್ನು ದಾಖಲಿಸುವುದಕ್ಕೆ ಮುಖ್ಯ ಕಾರಣವಾಗಿರುವುದು ಕಂಡುಬರುತ್ತದೆ.

 ಈ ಕೃತಿಯಲ್ಲಿ ಬರುವ ವ್ಯಕ್ತಿಗಳೆಲ್ಲ ಲೇಖಕರ ಮೇಲೆ ಪ್ರಭಾವ ಬೀರಿದವರಾಗಿದ್ದಾರೆ ಈ ಕೃತಿಯ ವಿಷಯ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಅವರ ಹುಟ್ಟೂರು ಹಾವೇರಿ  ಜಿಲ್ಲೆಯ ವರದಾ ನದಿಯ ಅಂಚಿನಲ್ಲಿರುವ ಹಾಲಗಿ ಗ್ರಾಮ. ಇಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಕೆಲವು ಸಂಗತಿಗಳು ಮನಸ್ಸಿಗೆ ತಂಪೆರೆಯುತ್ತವೆ ಮತ್ತೆ ಕೆಲವು ಕಚಗುಳಿ ಇಟ್ಟರೆ ಇನ್ನೂ ಕೆಲವು ಕಾಡುತ್ತಲೇ ಇರುತ್ತವೆ.  ಕೃತಿಯಲ್ಲಿ ಒಟ್ಟು ೧೨ ವಿವಿಧ ಕಥೆಗಳಿವೆ. ಇವೆಲ್ಲವೂ ನಮ್ಮನ್ನು ಒಂದರ ಹಿಂದೆ ಒಂದರಂತೆ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತವೆ. ಧಾರವಾಡ ಕನ್ನಡದ ಮಾತುಗಳು ಓದುವಾಗ ಖುಷಿಕೊಡುತ್ತವೆ.

 ಮೊದಲ ಕಥೆ ‘ಕ್ರಿಕೆಟ್ ಕೊಟ್ರೇಶಿ’. ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಬಾಲ್‌ಗೆ ಫೋರ್ ಹೊಡೆದು ಊರಿನ  ಕಲ್ಲೇಶ್ವರ ಕ್ರಿಕೆಟ್ ಕ್ಲಬ್  ತಂಡಕ್ಕೆ ಪ್ರಶಸ್ತಿ ಕೊಡಿಸಿದ ಕೊಟ್ರೇಶಿಯನ್ನು ಊರವರು ದ್ರ್ರಾವಿಡ್ ಅಲಿಯಾಸ್ ಕೊಟ್ರೇಶಿ ಎಂದು ಕರೆಯುತ್ತಿದ್ದರು. ಆದರೆ ಮನೆಯವರಿಗೆ ಇವನ ಬಗ್ಗೆ ಕೋಪ ಇತ್ತು. ಏಕೆಂದರೆ ಮನೆ ಕೆಲಸ ಬಿಟ್ಟು ಕ್ರಿಕೆಟ್ ಆಡುತ್ತಾನೆ ಎಂದು. ಆದರೆ ಹುಡುಗರಿಗೆಲ್ಲ ಕ್ರಿಕೆಟ್ ಪಾಠವನ್ನು ಮಾಡುತ್ತಿದ್ದ ಕೊಟ್ರೇಶಿ ಬದುಕಿನಲ್ಲಿ ಬಂದ ವೈಡ್, ನೋಬಾಲ್ ಮತ್ತು ಬೌನ್ಸರ್‌ಗಳಿಗೆ ಉತ್ತರಿಸಲಾಗದೆ ಕಕ್ಕಾವಿಕಿಯಾಗಿ ಹೋಗಿದ್ದನ್ನು ವಿವರಿಸುತ್ತಾ, ಕೊಟ್ರೇಶಿಗೆ ರಾಹುಲ್ ದ್ರಾವಿಡ್‌ನನನ್ನು ನೋಡಬೇಕೆಂಬ ಕನಸು ನನಸಾಗದ ಬಗ್ಗೆ, ಕೊಟ್ರೇಶಿ ನಂತರ ಊರಿನಲ್ಲಿ ಕ್ರಿಕೆಟ್ ಸೊರಗಿ ಹೋಗಿದ್ದರ ಬಗ್ಗೆ ಬೇಸರಿಸುತ್ತಾರೆ.

ಎರಡನೇ ಕಥೆ ಗಟ್ಟಿಗಿತ್ತಿ ‘ಗುಂಡಮ್ಮ’ ಮದುವೆಯಾಗಿ ಗಂಡನ ಮನೆಗೆ ಬರುವಾಗ ಎಂತಹುದೇ ಸಂದರ್ಭ ಎದುರಾದರೂ ತವರಿಗೆ ವಾಪಸಾಗುವುದಿಲ್ಲ ಎಂದು ಮಾತುಕೊಟ್ಟು ಬಂದಿದ್ದ ಗುಂಡವ್ವ ಊರಲ್ಲಿ ಗಟ್ಟಿಗಿತ್ತಿ ಎಂದೇ ಹೆಸರಾಗಿದ್ದಳು. ಜೀವನದಲ್ಲಿ ಎದುರಾದ ಕಷ್ಟನಷ್ಟಗಳನ್ನು ಎದುರಿಸಿ, ಗಂಡನಿಂದ ದೂರವಾಗಿ ಊರ ಹೊರಗೆ ಏಕಾಂಗಿಯಾಗಿ  ಬದುಕುತ್ತಿದ್ದಳು  ಮತ್ತು ಸಂತೆಯಲ್ಲಿ ಹಣ್ಣು ಮಾರಿ ಜೀವನ ನಡೆಸುತ್ತಿದ್ದಳು.. ಜನರೂ ಹಿಟ್ಟು, ದವಸ- ಧಾನ್ಯ ಕೊಡುತ್ತಿದ್ದರು  ಹೀಗೆ ಬದುಕು ಸಾಗಿಸುತ್ತದೆ ಪ್ರತಿದಿನ ಪ್ರತಿಕ್ಷಣ ಹೋರಾಡುತ್ತ  ಬುಕು ಕಟ್ಟಿಕೊಂಡ ಊರಿನ ವೀರ ವನಿತೆ ಆಗುತ್ತಾಳೆ.

  ಬೆಳಿಗ್ಗೆ ಕೋಳಿ ಕೂಗುವ ಸಮಯಕ್ಕೆ ಸರಿಯಾಗಿ ಚಾದಂಗಡಿ ತೆಗೆದು, ಒಗ್ಗರಣೆ ಮಿರ್ಚಿವ, ಸ್ಪೆಶಲ್ ಚಹಾ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದ ವಾಸಪ್ಪ ಎಲ್ಲರಿಗೂ ವಿಕಿಪೀಡಿಯಾದಂತಿದ್ದ. ಸಂಜೆಯಾಯಿತೆಂದರೆ ಹೆಂಡದ ಅಂಗಡಿಗೆ ಕಾಲಿಡುತ್ತಿದ್ದನು. ಏಳುತ್ತಾ, ಬೀಳುತ್ತಾ ರಾತ್ರಿ ಮನೆ ಸೇರುತ್ತಿದ್ದ. ಆದರೆ ಹತ್ತು ಹಲವು ವಿಸ್ಮಯಗಳನ್ನು ಬಿಟ್ಟು ಹೋದ ಕತೆ ‘ಚಾದಂಗಡಿ ವಾಸಪ್ಪ’ ದಲ್ಲಿದೆ. ಗ್ರಾಮದಲ್ಲಿ ನಡೆಯುವ ಉರೂಸ್‌ಗೆ ಪ್ರತಿವರ್ಷ ನಾಟಕ ಆಡಿಸುವುದು ಪದ್ಧತಿ. ಈ ನಾಟಕಕ್ಕೆ ಹೊರ ಜಿಲ್ಲೆಯ ನಾಯಕಿಯನ್ನು ಕರೆಸಲಾಗುತ್ತಿತ್ತು. ಸಂಗ್ಯಾ ಬಾಳ್ಯಾ ನಾಟಕಕ್ಕ್ಕೆ ನಾಯಕಿಯಾಗಿ ಸೇವಂತಿ ಎನ್ನುವವಳನ್ನು ಕರಸಿದಾಗ ಬಾಳ್ಯಾನ ಪಾತ್ರ ಮಾಡಿದ್ದ ಪರಶ್ಯಾನ ಜೊತೆ ನಾಟಕ ಮುಗಿದ ನಂತರ ಮಲಗಿದ್ದವಳು ಬೆಳಗಾಗುವುದರೊಳಗೆ ನಾಪತ್ತೆಯಾದ ಕಥೆ ಯನ್ನು ಸುಂದರಾಗಿ ‘ನಾಟಕ ಮತ್ತು ನಾಟಕಮಣಿಗಳು’ ಇದರಲ್ಲಿ ಬಿಚ್ಚಿಟ್ಟಿದ್ದಾರೆ.

  ‘ಈಶಪ್ಪನ ಶೇಷಲೀಲೆಗಳು’ ಇದರಲ್ಲಿ ಕಬಡ್ಡಿ ಪಟುವಾಗಿದ್ದ ಮತ್ತು ಊರಿನ ತಂಡಕ್ಕೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದ ಶೇಷಪ್ಪ ಜಾತ್ರೆಯಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಗಳಿಸಿದವನು. ಬದುಕಿನಲ್ಲಿ ಪೈಲ್ವಾನನಾಗಿ ಮೆರೆದಿದ್ದನು. ಕಬಡ್ಡಿ ಬೆಳೆಸಿದ ನಂತರ ವೈಯಕ್ತಿಕ ಚಿಂತೆಯಿಂದ ತಣ್ಣಗಾಗಿದ್ದ. ವೈಭವದ ಆತನ ದಿನವನ್ನು ಜನ ಇವತ್ತಿಗೂ ಮೇಲು ಹಾಕುತ್ತಿದ್ದಾರೆ. ಈತನ ವೈಯಕ್ತಿಕ ಜೀವನವು ಮಸುಕಾಗಿತ್ತು ಎಂದು ವಿಷಾದಿಸುತ್ತಾರೆ.

‘ಹೊಳಿದಂಡಿಯಲ್ಲಿ ಬೆಂಕಿ ದೆವ್ವ’ದಲ್ಲಿ  ಹೆಂಡತಿಯ ದುಡ್ಡು ಕದ್ದು ಅದನ್ನು ವಾಪಸ್ ಕೊಡುವ ದೃಷ್ಟಿಯಿಂದ ದುರ್ಗಪ್ಪ ಬೀಡಿ ಸೇದುತ್ತಾ ಮೀನು ಹಿಡಿಯುತ್ತಿದ್ದನು. ಆದರೆ ಊರಿನಲ್ಲಿ ಮಧ್ಯರಾತ್ರಿಯಲ್ಲಿ ಯಾವುದೋ ದೆವ್ವ ಬೆಂಕಿ ಹಿಡಿದುಕೊಂಡು ಹೊಳೆದಂಡೆಯಲ್ಲಿ ಓಡಾಡುತ್ತಿದೆ ಎಂಬ ಸುದ್ದಿ ಹರಡಿತ್ತು. ಹೇಗಾದರೂ ದೆವ್ವ ಹಿಡಿಯಬೇಕೆಂದು ಮುಂದಾಗುತ್ತಾರೆ, ಹಿಡಿಯುತ್ತಾರೆ. ಆದರೆ ಹಿಡಿದಾಗ ಅದು ದೆವ್ವವಾಗದೆ ದುರ್ಗಪ್ಪ ಆಗಿರುತ್ತಾನೆ. ಜನರು ಬೆಂಕಿ ದೆವ್ವ ಎಂದು ಬೇಸ್ತುಬಿದ್ದ ಬಗ್ಗೆ ಇದರಲ್ಲಿದೆ.

‘ಇಂಗ್ಲೀಷ್ ಜಮಾಲಣ್ಣ’ ಎಂಬ ಕಥಾನಕದಲ್ಲಿ ಊರಿನಲ್ಲಿ ವಿಚಿತ್ರ ಪ್ರಸಂಗಗಳಿಗೆ ಸಾಕ್ಷಿಯಾಗಿದ್ದ ಜಮಾಲ ಬಿಎ ಓದಿದವನು. ಇಂಗ್ಲಿಷ್‌ನಲ್ಲಿ ನಿಪುಣ. ಊರಿನ ಮಕ್ಕಳಿಗೂ ಸಹ ಆತ ಇಂಗ್ಲಿಷ್ ಪಾಠಗಳನ್ನು ಹೇಳಿಕೊಡುತ್ತಿದ್ದನು. ಆದ್ದರಿಂದ ಇಂಗ್ಲೀಷ್ ಜಮಾಲ ಎಂಬ ಹೆಸರು ಬಂದಿತ್ತು. ಆದರೆ ಕಾಲೇಜಿನಲ್ಲಿ ಓದುವಾಗ ಡಾಕ್ಟರ್ ಮಗಳೊಂದಿಗೆ ಲವ್ ಮಾಡಿದ್ದ. ಆದರೆ ಆಕೆ ಇವನನ್ನು ಮದುವೆಯಾಗಲಿಲ್ಲ. ಇದರಿಂದ ಮಾನಸಿಕವಾಗಿ ಆಘಾತವಾಗಿ ವಿಚಿತ್ರವಾಗಿ ವರ್ತಿಸುತ್ತಿದ್ದವನು ಒಂದು ದಿನ ಯಾರಿಗೂ ಹೇಳದೆ ಹೊಸ ಬಟ್ಟೆ ಧರಿಸಿ, ಶಿಸ್ತಿನಲ್ಲಿ ತಯಾರಾಗಿ ಬಸ್ ಹತ್ತಿ ಊರನ್ನು ಬಿಟ್ಟು ಹೋದ ಎಂಬುದಾಗಿ ವಿವರಿಸಿದ್ದಾರೆ.

‘ಮೂರು ಕಾಸಿನ ಕುದುರೆ’ ಯಲ್ಲಿ ಊರಿನ ದಾವಲ್‌ಸಾಬ್ ೧೫ ವರ್ಷದ ಹಿಂದೆ ಕುದುg ಮದಕರಿಯನ್ನು ತಂದು ತನ್ನ ಮಗನಂತೆ ನೋಡಿಕೊಂಡಿದ್ದನು. ಊರವರಲ್ಲಿ ಮದಕರಿ ಬಗ್ಗೆ ಪ್ರೀತಿ ತುಂಬಿತ್ತು. ಊರಿನವರಲ್ಲಿ ತೊಂದರೆ ಎದುರಾದಾಗ ರಾತ್ರಿ  ಕುರೆ ಏರಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಒಂದು ದಿನ ರಾತ್ರಿ ತಪ್ಪಿಸಿಕೊಂಡು ಹೋಗಿ ರಸ್ತೆಯಲ್ಲಿ ವಾಹನಕ್ಕೆ ಸಿಲುಕಿ ಸಾವನ್ನಪ್ಪಿತ್ತು. ಇದರಿದಂ ತತ್ತರಿಸಿ ಹೋದ ದಾವಲ್‌ಸಾಬ್‌ನ ಕಷ್ಟ ನೋಡಲಾಗದೆ  ಊರವರೇ ಹಣ ಹಾಕಿ ಮತ್ತೊಂದು ಕುದುರೆ ತಂದು ಕೊಟ್ಟಿದ್ದರ ವಿವರಣೆ ಇದೆ.

‘ ನಿಧಿಯ ಬೆನ್ನು ಹತ್ತಿ’ ಎಂಬ ಕಥಾನಕದಲ್ಲಿ ನಿಧಿಯ ಆಸೆಗೆ ಬಲಿ ಬಿದ್ದು ತನ್ನ ಹೆಂಡತಿಯ ಬಂಗಾರವನ್ನು ಪಡೆದು, ಮನೆಯಿಂದ ಪಡೆದು ಮನೆಯ ಆಸ್ತಿ ಪತ್ರವನ್ನು ಅಡವಿಟ್ಟು ಸಾಲ ಮಾಡಿ ಮೋಸಹೋದ ಕರಿಯಪ್ಪ ದುರಾಸೆ ಬಿಟ್ಟು ತನ್ನ ಹೊಲದಲ್ಲೇ ದುಡಿಯವ ಹಾಗಾದ, ‘ಸಾವಂತ್ರವ್ವಳ ಎಮ್ಮಿ’ ಎಂಬ ಕತೆಯಲ್ಲಿ ವರದೆಯ ಪ್ರವಾಹದಲ್ಲಿ ಸಾವಂತ್ರವ್ವ ಸಾಕಿದ್ದ ಎಮ್ಮೆ ಕೊಚ್ಚಿಕೊಂಡು ಹೋದಾಗ ಆಕೆ ಹೊಳೆದಂಡೆಯಲ್ಲಿ ಕುಳಿತು ಗೋಳಾಡಿದ್ದು, ಇದೇ ವೇಳೆ  ಅವಳ ಮನೆಯೂ ವರದೆಯ ಪಾಲಾಗಿದ್ದನ್ನು ಚಿತ್ರ್ರಿಸಿದ್ದಾರೆ.

‘ರೊಟ್ಟಿ ಬಸಪ್ಪನ ಪುರಾಣ’ ದಲ್ಲಿ ಕಂಡವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ, ಹೆಂಡ್ತಿ ಬಿಟ್ಟು ಎಷ್ಟೋ ವರ್ಷಗಳಾಗಿದ್ದ ಬಸಪ್ಪ ಊರಿನ ದೇವಸ್ಥಾನದಲ್ಲಿ ಮಲಗಿದ್ದಾಗ ಗಾಂಜಾ ಸೇದಿದ್ದಕ್ಕೆ ಪೊಲೀಸರು ಕರೆದುಕೊಂಡು ಹೋಗಿ  ನಾಲ್ಕು ದಿನ ವಿಚಾರಣೆ ನಡೆಸಿದ್ದು, ನಂತರ ಹೊಟೆಲ್ ಪೀರ್‌ಸಾಬ್ ಆತನನ್ನು ಬಿಡಿಸಿ ಕರೆತಂದಿದ್ದರ ಬಗ್ಗೆ ಇದೆ. ‘ಮಮತೆಯ ಕರೆಯೋಲೆ’ಯಲ್ಲಿ ಮನೆ ಬಿಟ್ಟು ಬಂದ,  ಅಪರಿಚಿತನಾಗಿದ್ದರೂ ವಿಜಯಕುಮಾರ್ ಮನೆಯ ಸದಸ್ಯನಂತಾದ ಗಿದ್ದು, ನಂಬಿಕಸ್ಥನಾಗಿ ಮನೆಯ ವ್ಯಾಪಾರ ವಹಿವಾಟು ಮಾಡುತ್ತಾ, ತಾನು ನಂತರ  ಕೆಲಸಕ್ಕಿದ್ದ ಮನೆ ಬಿಟ್ಟು ಊರಿಗೆ ಮರಳಿದರೂ ಕೊಡಬೇಕಾದ ವ್ಯಾಪಾರದ ೧೭ ಸಾವಿರ ರೂಪಾಯಿಯನ್ನು ತನ್ನ ತಂದೆಯ ಮೂಲಕ ಕೊಟ್ಟು ಕಳಿಸಿ ವಿಶ್ವಾಸಿಗನಾಗಿ ಉಳಿದಿದ್ದಲ್ಲದೆ, ತನ್ನ ಸಹೋದರಿಯ ಮದುವೆಗ ಆಮಂತ್ರಣ ಕೊಟ್ಟಿದ್ದನ್ನು ಸ್ಮರಿಸಿದ್ದಾರೆ.

ಹೀಗೆ ಈ ಕೃತಿಯ ಕಥೆಗಳೆಲ್ಲವೂ  ನಮ್ಮ ಕಣ್ಣೆದುರೇ ಅಥವಾ ನಮ್ಮ ಸುತ್ತಮುತ್ತಲೇ ನಡೆದಂತೆ ಭಾಸವಾಗುತ್ತದೆ. ಸರಳ ಮತ್ತು ಸುಂದರ ಭಾಷೆಯಲ್ಲಿ  ಸಶಕ್ತವಾಗಿ, ಊರಿನಲ್ಲಿ ತಾನು ಕಂಡುಂಡಿದ್ದನ್ನೆಲ್ಲ ಕಟ್ಟಿಕೊಟ್ಟಿದ್ದಲ್ಲದೆ, ಬೆಂಗಳೂರು ವಾಸಿಯಾದರೂ ಹುಟ್ಟಿದೂರಿನ ಬಗ್ಗೆ ಮಮಕಾರ ಇಟ್ಟುಕೊಂಡು ಅಲ್ಲಿನ ಸಂಸ್ಕೃತಿ, ಜನಜೀವನ, ಕೃಷಿ, ಅವರು ಪಡುತ್ತಿರುವ ಕಷ್ಟ ಕೋಟಲೆಗಳನ್ನು ಸುಂದರವಾಗಿ  ನಿರೂಪಿಸಿದ್ದಾರೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ    

.......................



 


Comments

Popular posts from this blog