ಎಲ್ಲರಿಗೂ ಇಷ್ಟವಾಗುವ
ಇಷ್ಟಾರ್ಥ ಮತ್ತು  ಇತರ ನಾಟಕಗಳು


‘ಇಷ್ಟಾರ್ಥ ಮತ್ತು  ಇತರ ನಾಟಕಗಳು’ ಈ ನಾಟಕದ ಕೃತಿಯನ್ನು ಬರೆದವರು ‘ಪರ್ವತವಾಣಿ’ ಕಾವ್ಯನಾಮದ ಪಿ. ನರಸಿಂಗರಾವ್ ಅವರು. ಇದನ್ನು ಸಂಪಾದಿಸಿದವರು ಅವರ ಸೊಸೆ ಕೆ. ಎಂ.ವಿಜಯಲಕ್ಷ್ಮೀ. ಇದರಲ್ಲಿ ಇಷ್ಟಾರ್ಥದ ಜೊತೆಗೆ ಮುಕುತಿ- ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಸೇರಿದಂತೆ ಒಟ್ಟು ನಾಲ್ಕು ನಾಟಕಗಳಿವೆ. ಅತ್ಯಂತ ಸುಂದರವಾದ ಕಿರು ನಾಟಕಗಳಿವು. ಶಾಲಾ- ಕಾಲೇಜಿನಲ್ಲಿ ಮಕ್ಕಳು ಆಡಲು ಉತ್ತಮ ಆಗಿವೆ.

‘ಇಷ್ಟಾರ್ಥ’ ನಾಟಕದಲ್ಲಿ  ಜಪಮಣಿಯೊಂದು ಇಷ್ಟಾರ್ಥ ಈಡೇರಿಸುತ್ತದೆ ಎಂದು ನಂಬಿ ಅದರಿಂದ ದುರಾಸೆಗೆ ಬಿದ್ದ  ಕುಟುಂಬವೊಂದು ದುರಂತ ಕಂಡ ಕಥೆ ಇದೆ. ‘ಮುಕುತಿ-ಮೂಗುತಿ’ಯಲ್ಲಿ ಮೋಕ್ಷ ತೋರಿಸಲು ವೃದ್ಧ ಬ್ರಾಹ್ಮಣ ಮತ್ತು ವಟು ರೂಪದಲ್ಲಿ ಬಂದ ಪಾಂಡುರಂಗ ವಿಠಲನನ್ನು ಅವಮಾನಿಸಿ, ನಿಂದಿಸಿದ ಆಭರಣ ವ್ಯಾಪಾರಿ ನಂತರ ಅವರ ನೈಜ ರೂಪ ಗೊತ್ತಾದಾಗ ಪಶ್ಚಾತ್ತಾಪಪಟ್ಟು ಹರಿದಾಸನಾಗುವ ಕಥೆ ಇದೆ. ‘ಆಶೀರ್ವಾದ’ ಹಾಸ್ಯ ನಾಟಕವಾಗಿದ್ದು, ಗಂಭೀರವಲ್ಲದ ಜಗಳದ ಮಧ್ಯೆಯೇ ಯವತಿ-ಯುವಕ ಮದುವೆಯಾಗುವುದರ ಬಗ್ಗೆ ಇದೆ. ‘ಸತಿ ಸಾವಿತ್ರಿ’ ನಾಟಕವು ಯಮನನ್ನೇ ಸೋಲಿಸಿ ತನ್ನ ಗಂಡ ಸತ್ಯವಾನನನ್ನು ಉಳಿಸಿಕೊಂಡ ಸಾವಿತ್ರಿಯ ಕುರಿತಾದ್ದು.

 ಅತಿ ಸರಳವಾದ, ಸುಲಭದಲ್ಲಿ ಅರ್ಥವಾಗುವ ಈ ನಾಟಕಗಳು ಓದುತ್ತ ಹೋದಂತೆ ಕುತೂಹಲ ಹುಟ್ಟಿಸುತ್ತವೆ. ನಾಟಕ ಓದು ಮುಗಿದ ಮೇಲೆ ಅದರ ನೆನೆಪು ಸದಾ ನಮ್ಮಲ್ಲಿ ಉಳಿಯುವಂತಹ ವಿಶೇಷತೆ ಇದರಲ್ಲಿದೆ.


ಇಷ್ಟಾರ್ಥ


ಇದು ದುರಂತ ನಾಟಕ. ಜಪಮಣಿಯು ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಎಂದು ನಂಬಿ ಅದರಿಂದ ದುರಂತ ಕಂಡ ಕುಟುಂಬದ ಕಥೆ ಇದು.

 ಶಂಕರಪ್ಪನ ಮನೆಗೆ ಆತನ ಮಿತ್ರ ಶ್ಯಾಮ ಬರುತ್ತಾನೆ. ಆತ ತಾನು ಮಲೆಯಾಳಿ  ರಾಜ್ಯಕ್ಕೆ ಹೋದಾಗ ಮುದುಕಿಯೊಬ್ಬಳು  ಜಪಮಣಿಯನ್ನು ಕೊಟ್ಟಿದ್ದನ್ನು ಕಿಸೆಯಲ್ಲಿಟ್ಟಕೊಂಡು ಬರುತ್ತಾನೆ. ಆ ಮಣಿಯನ್ನು ಒಬ್ಬ ಸನ್ಯಾಸಿ ವೃದ್ಧೆಗೆ ಕೊಡುತ್ತಾ ಮೂರು  ಇಷ್ಟಾರ್ಥಗಳು ಇದರಿಂದ ಈಡೇರುತ್ತವೆ ಎಂದಿದ್ದನಂತೆ ಎನ್ನುತ್ತಾನೆ. ಶಂಕರನ ಮಗ ಸುಬ್ಬು ಮಣಿ ಕಿಸೆಯಲ್ಲಿದ್ದುದನ್ನು ಗಮನಿಸಿ ತೋರಿಸು  ಎಂದರೂ ಶ್ಯಾಮ ತೆಗೆಯುವುದಿಲ್ಲ, ಅದರಿಂದ ದೂರ ಇರು ಎನ್ನುತ್ತಾನೆ. ಈ ಮಣಿ  ಇಟ್ಟುಕೊಳ್ಳುವುದು ಎಂದರೆ ಬೀದಿಲಿ ಹೋಗೋ ಮಾರಿಯನ್ನು ಮನೆಗೆ ಕರೆತಂದಂತೆ. ಇದನ್ನು ಕಣ್ಣಾರೆ ಕಂಡಿದ್ದೇನೆ. ಹೆಸರಷ್ಟೇ ಚಿಂತಾಮಣಿ. ಇದು ಕಾಮಧೇನು, ಕಲ್ಪವೃಕ್ಷವಲ್ಲ, ‘ಚಿಂತಾಗಣಿ’ ಇದು. ಮನೆ ಬೆಳೆಸುವುದಲ್ಲ. ಮನೆ ಮುಳುಗಿಸುವ ಮಣಿ.  ನಾನು ಮನೆ ಕಟ್ಟಿದೆ. ಅದು ಮುರಿಯಿತು ಎಂದು ಅದರ ಬಗ್ಗೆ ಶ್ಯಾಮ ವಿವರಿಸುತ್ತಾನೆ. ಆದರೂ ಶಂಕರ ಅವನಿಂದ ತೆಗೆದುಕೊಳ್ಳುತ್ತಾನೆ. ಇತ್ತ ಶ್ಯಾಮ ಮನೆಗೆ ಹೋಗುತ್ತಾನೆ.

 ಇಷ್ಟಾರ್ಥ ಕೇಳುವವರು ದಕ್ಷಿಣಾಭಿಮುಖವಾಗಿ ಮಂಡಿ ಮೇಲೆ ಕುಳಿತುಕೊಳ್ಳಬೇಕು. ತಲೆ ಮೇಲೆತ್ತಿ ಗಟ್ಟಿಯಾಗಿ ಇಷ್ಟಾರ್ಥ ಕೇಳಬೇಕೆಂದಿರುತ್ತಾನೆ ಶ್ಯಾಮ . ಶ್ಯಾಮ  ಜನ್ಮದಲ್ಲಿ ಯಾವತ್ತೂ ನಿಜ ಹೇಳಿದವನಲ್ಲ ಎನ್ನುತ್ತಾ ಸುಬ್ಬು ತನ್ನ ಕಾರ್ಖಾನೆ ಕೆಲಸಕ್ಕೆ ಹೊರಟುಹೋಗುತ್ತಾನೆ. ಮನೆಯಲ್ಲಿ ಶಂಕರ ಮತ್ತು ಆತನ ಮಡದಿ ಪಾತು (ಪಾರ್ವತಮ್ಮ) ಇಬ್ಬರೇ ಇದ್ದಾಗ ಪಾತು, ಮಣಿ ಉಸಾಬರಿ ಏಕೆ, ಸುಮ್ಮನೆ ಬಿಸಾಕಿ. ಅದರ ದುಸ್ಸಾಹಸ ಬೇಡ ಎಂದರೂ ಶಂಕರ ಏನಾದರೂ ಕೇಳಿ ನೋಡೋಣ ಎನ್ನುತ್ತಾ ದುರಾಸೆ ತೋರಿದಾಗ ಪರಮೇಶ್ವರ ಕೊಟ್ಟಿದ್ದರಲ್ಲೇ ತೃಪ್ತಿ ಪಡೆಯೋಣ ಎಂದರೂ  ಶಂಕರನು ಸುಬ್ಬುನಿಗೆ ಮದ್ವೆ ಮಾಡಬೇಕು, ಮನೆ ಚಿಕ್ಕದಿದೆ. ಆತನಿಗೊಂದು ಕೋಣೆ ಕಟ್ಟಿಸಬೇಕು. ಒಂದು ಸಾವಿರ ರೂ. ಬೇಕು. ಅದನ್ನೇ ಪಡೆಯೋಣ ಬರಲಿ ಎನ್ನುತ್ತಾ ಕೈ ಮೇಲೆತ್ತಿ ಬೇಡಿಕೊಳ್ಳುತ್ತಿರುವಂತೆಯೇ ಸಿಡಿಲು ಬಡಿದು ಮನೆಯ ದೀಪ ಆರುತ್ತದೆ. ಶಂಕರನ ಕೈಲಿದ್ದ ಮಣಿ ಕೈಯಿಂದ ಹಾರಿದಂತಾಗಿ ಅದರಿಂದ ಬೆಂಕಿ ಹೊತ್ತಿಕೊಂಡ ಅನುಭವವಾಗುತ್ತದೆ.

 ಆಗ ಪಾತು ಸಾವಿರ ಸಲ ಹೇಳಿದರೂ ಕೇಳಲಿಲ್ಲ, ಬಿಸಾಡಿ ಅದನ್ನು ಎಂದು ಬಯ್ಯುತ್ತಾಳೆ. ಮಾರನೆಯ ದಿನ ಬೆಳಗ್ಗೆ  ಮನೆ ಎದುರು ಅನಂತಯ್ಯ ಎನ್ನುವವ  ಇವರ ಮನೆ ಹುಡುಕುತ್ತಾ ಬರುತ್ತಾನೆ. ಶಂಕರಪ್ಪನವರು ನೀವೇನಾ ಎನ್ನುತ್ತಾನೆ. ಹೌದು ಎಂದಾಗ ಸುಬ್ಬುನ ನೋಡಬೇಕಾಗಿತ್ತಾ ಎಂದು ಮರುಪ್ರಶ್ನಿಸುತ್ತಾನೆ ಶಂಕರಪ್ಪ.  ಇಲ್ಲ, ನಾನು ಅದೇ ಫ್ಯಾಕ್ಟರಿಯಿದ ಬಂದೆ ಎಂದಾಗ ಏನಾದರೂ ಕೆಟ್ಟ ಸುದ್ದಿ ತಂದ್ರಾ, ಧೈರ್‍ಯವಾಗಿ ಹೇಳಿ ಎನ್ನುತ್ತಾನೆ ಶಂಕರ.

  ಹೌದು, ಹೇಗೆ ಹೇಳಲಿ,  ನಿನ್ನೆ ರಾತ್ರಿ ಚಿಂತಾಮಣಿ ಕತೆ ಹೇಳುತ್ತಾ ಸುಬ್ಬು ಕೆಲಸ ಮಾಡುವಾಗ ಸಿಡಿಲು ಹೊಡೆದು  ಗಾಬರಿಯಲ್ಲಿ  ಮಷಿನಿಗೆ ಬಿದ್ದು ಸಿಕ್ಕಿಹಾಕಿಕೊಂಡ ಎನ್ನುತ್ತಾನೆ ಕಾರ್ಖಾನೆಯ ವೆಲ್ಫೇರ್ ಆಫೀಸರ್  ಅನಂತಯ್ಯ. ಪತಿ-ಪತ್ನಿ ಇಬ್ಬರೂ ಕುಸಿದು ಬೀಳುತ್ತಾರೆ. ಸತ್ತವನಿಗೆ ಪರಿಹಾರವಾಗಿ ಕಾರ್ಖಾನೆಯಿಂದ ಒಂದು ಸಾವಿರ ರೂ. ಪರಿಹಾರ ಕೊಡೋಣ ಅಂತ ಬಂದೆ ಎನ್ನುತ್ತಾ ಚೆಕ್ ಕೊಡುತ್ತಾನೆ.  ಗಂಡ- ಹೆಂಡತಿ ಸಮಾಧಾನ ಮಾಡಿಕೊಂಡು, ಈ  ಚಿಂತಾಮಣಿಯಿಂದ ಮಗನ ಕಳಕೊಂಡ್ವಿ. ಹಾಳಾದ್ದು ಈ ಮಣಿ ಎಂದಾಗ ಪಾತು ಇನ್ನೊಂದು ಇಷ್ಟಾರ್ಥ ಅದೇನೆಂದರೆ-   ಹೇಗಾದರೂ ಸುಬ್ಬು ಮರಳಿ ಬರಲಿ ಎಂದು ಕೇಳಿ ಎನ್ನುತ್ತಾಳೆ. ಶಂಕರ ಕೈ ಮೇಲೆತ್ತುತ್ತಾ ಸುಬ್ಬು ಬದುಕಿ ಬಾ ಎನ್ನುತ್ತಾನೆ.  ಸುಬ್ಬು ಬರಲಿಲ್ಲ. ಮತ್ತೆ  ಗಾಳಿ ಶುರುವಾಗುತ್ತದೆ. ಯಾರೋ ಬಾಗಿಲು ಬಡಿದ ಅನುಭವವಾಗುತ್ತದೆ. ಬಾಗಿಲು ತೆಗೆದ ಪಾತು ಆತನನ್ನು ತಬ್ಬಿಕೊಳ್ಳಲು ಕೈ  ಚಾಚಿದಾಗ ಏನೂ ಇಲ್ಲದಿರುವುದನ್ನು ಕಂಡು ಕುಸಿದುಬೀಳುತ್ತಾಳೆ.



ಮುಕುತಿ- ಮೂಗುತಿ


ಒಡವೆ ಅಂಗಡಿ ಮಾಲಕ ಸೀನಪ್ಪನಾಯಕನಲ್ಲಿ  ವಿಷ್ಣು ಮತ್ತು ಕೃಷ್ಣನ ಅವತಾರ ಎಂದೇ ಹೇಳಲಾಗುವ ಪಾಂಡುರಂಗ ವಿಠಲನು ಬಡ ಬ್ರಾಹ್ಮಣ ಮತ್ತು ಮಗು ವೇಷದಲ್ಲಿ ಭಿಕ್ಷೆಗೆ ಬಂದಾಗ ಆತನನ್ನು ನಿಂದಿಸಿ, ಭಿಕ್ಷೆ ಹಾಕದೆ ಚಿಲ್ಲರೆ ಕಾಸನ್ನು ಕೊಡುವುದು, ಆನಂತರ ಆತನ ಮನೆಗೆ ಹೋಗಿ ಪತ್ನಿಯಲ್ಲಿ ದೇವನು ಬೇಡುವುದು, ಆಕೆ ದೈವಭಕ್ತೆಯಾದುದರಿಂದ ಮನೆಯಲ್ಲಿ ದಾನ ಮಾಡಲು ಏನೂ ಇಲ್ಲದ ಕಾರಣ ತನ್ನ ಮೂಗುಬೊಟ್ಟನ್ನೇ ದಾನ ಮಾಡುವುದು, ಅದೇ ಮೂಗುಬೊಟ್ಟನ್ನು  ತಂದು ಆತನು  ಅವಳ ಗಂಡನ ಅಂಗಡಿಯಲ್ಲಿ ಮಾರಾಟ ಮಾಡಿ ಆತನಿಂದ ಹಣ ಪಡೆಯುವುದು, ಅದನ್ನು ಸಾಧಾರಣ ಮೂಗುತಿಯಲ್ಲ, ಮುಕುತಿ ಮೂಗುತಿ ಎನ್ನುವುದು, ಮಾರಾಟ ಮಾಡಲು ಬಂದಾಗಲೂ ಆ ವೃದ್ಧನನ್ನು ಟೀಕಿಸುವುದು ಮತ್ತು ನಿಂದಿಸುವುದು ನಂತರ ಆತ ಪಾಂಡುರಂಗ ವಿಠಲ ಎಂದು ಅರಿತ ಮೇಲೆ ಪಶ್ಚಾತ್ತಾಪಟ್ಟು ತಾನು ಹರಿದಾಸನಾಗಲು ನಿಶಯಿಸಿ ಆಸ್ತಿ- ಐಶರ್ಯವನ್ನೆಲ್ಲ ಮಾರಾಟ ಮಾಡಿ ಹರಿದಾಸನಾಗುವುದು ಈ ನಾಟಕದ ವಿಷಯ.

 ಸೀನಪ್ಪ ನಾಯಕ ಅಂಗಡಿ ಬಂದ್ ಮಾಡಿ ಮನೆಗೆ ಮರಳಿದ ನಂತರ ಹೆಂಡತಿ ಸರಸ್ವತಿಬಾಯಿ (ದೈವಭಕ್ತೆ) ಯ ಮೂಗು ಬೊಟ್ಟು ಇಲ್ಲದಿದ್ದನ್ನು ಕಂಡು ಪ್ರಶ್ನಿಸಿದಾಗ ಅದಕ್ಕೆ ಎಣ್ಣೆ ಜಿಡ್ಡು ತಗುಲಿರುವುದರಿಂದ ಅದನ್ನು ತೊಳೆಯಲು ಇಟ್ಟಿದ್ದೇನೆ ಎನ್ನುತ್ತಾಳೆ. ಇದನ್ನು ತನ್ನ ಗಂಡ ನಂಬದಿದ್ದಾಗ ಮಗನ ಉಪನಯನಕ್ಕೆ ಸಹಾಯ ಮಾಡಿ ಎಂದು ಒಬ್ಬ ಬಡ ವೃದ್ಧ  ಮನೆಯ ಬಾಗಿಲಿನಲ್ಲಿ ಸಹಾಯಕ್ಕಾಗಿ ನಿಂತಿದ್ದ.  ಕೊಡಲು ಏನೂ ಇಲ್ಲವೆಂದಾಗ ಮೂಗುತಿ ಕೊಡಬಹುದು. ಅದು ಧರ್ಮವಿರುದ್ಧವಲ್ಲ ಎಂದಿದ್ದಕ್ಕೆ ಹರಿಪ್ರೀತಿಯಾಗಲಿ ಎಂದು ಕೊಟ್ಟೆ ಎನ್ನುತ್ತಾಳೆ. ಆಗ ವ್ಯಾಪಾರಿ ಆತ ನನ್ನನ್ನು ೬ ತಿಂಗಳಿನಿಂದ ಕಾಡುತ್ತಿದ್ದಾನೆ. ನಾನು ಸಹಾಯ ಮಾಡಿಲ್ಲ ಅಂತ ನಿನ್ನ ಮೂಗುತಿ ಪಡದು ನನಗೇ ಮಾರಾಟ ಮಾಡಿ ಹೋಗಿದ್ದಾನೆ ಎಂದಾಗ ಪತ್ನಿ ವಿಷ ಕುಡಿಯಲು ಮುಂದಾಗುತ್ತಾಳೆ. ವಿಷದ ಪಾತ್ರೆ ಎತ್ತಿದಾಗ ಅದರಲ್ಲಿ ಮೂಗುತಿ ಸಿಗುತ್ತದೆ.  

ವಿಷಯ ಅರಿತ ಊರಿನವರು  ಹೇಗಾದರೂ ಈ ವೃದ್ಧ ಮತ್ತು ಆತನ ಮಗನನ್ನು ಹಿಡಿಯಬೇಕೆಂದು ವಿಠಲ, ಪಾಂಡುರಂಗಾ ಎನ್ನುತ್ತಾ ಹೋಗುತ್ತಾರೆ.  ಆಗ ಅಲ್ಲಿದ್ದವನೊಬ್ಬ ಆ ಬ್ರಾಹ್ಮಣ ಮತ್ತು ಮಗು ವಿಠಲ ಮಂದಿರಕ್ಕೆ ಹೋದವರು ಮರಳಿ ಬರಲಿಲ್ಲ ಎನ್ನುತ್ತಾರೆ. ಆಗ ಎಚ್ಚೆತ್ತ ವ್ಯಾಪಾರಿ ನನಗೆ ಮೋಕ್ಷ ತೋರಿಸಲು ಇವರು ಬಂದಿದ್ದರು. ಆದರೆ ಅಜ್ಞಾನದಿಂದ ಆತನನ್ನು ನಗೆಪಾಟಲಿಗೀಡುಮಾಡಿದೆ.  ಭಿಕ್ಷೆ ಹೇಸಿಗೆ, ಬದುಕಬೇಕೆಂದರೆ ಯಾರ ಮನೆಯ ಬಾಗಿಲನ್ನಾದರೂ ಕಾದು ಬದುಕು ಎಂದು ಬೈದೆ.  ಛೀ, ನನ್ನ ನಾಲಗೆ ಸೀಳಬೇಕು ಎನ್ನುತ್ತಾ ಪಶ್ಚಾತ್ತಾಪಡುತ್ತಾನೆ. ‘ಪಡೆಯುವಾಗ ವರಾಹ ಬೇಕು, ಕೊಡುವಾಗ ಸವಕಲು ನಾಣ್ಯ ಸಾಕು’ ಎನ್ನುವ ಮಾತಿನ ಮೂಲಕ ನನಗೆ ತತ್ವ ಹೇಳಿದ. ನನ್ನ ಮಂಕು ತಲೆಗೆ ಅದು ಅರ್ಥವಾಗಲಿಲ್ಲ. ಇಂದಿನಿಂದ ನಾನು ಹರಿದಾಸನಾಗುವೆ. ಹರಿಯೇ ನಮ್ಮ ಮತ ಎನ್ನುತ್ತಾನೆ. ತನ್ನ ಶಿಷ್ಯ ಸುಬ್ಬಣ್ಣಾಚಾರಿ ಬಳಿ ಸೀನಪ್ಪನಾಯಕ ಸಕಲೈಶ್ವರ್ಯವನ್ನೂ ಸರ್ವರಿಗೂ ದಾನ ಮಾಡುವನು. ಹರಿದಾಸನಾಗುವನು. ದಂಡಿಗೆ ಬೆತ್ತ ಹಿಡಿಯುವನೆಂದು ಊರಿನಲ್ಲಿ ಡಂಗುರ ಹೊಡೆಸುತ್ತಾನೆ.  


ಆಶೀರ್ವಾದ

 

  ಸಂಬಂಧದಲ್ಲಿ ಮಾವನಾಗಬೇಕಿದ್ದ  ಶ್ಯಾಮಣ್ಣ ತನ್ನ ಪಕ್ಕದ ಮನೆಯ ಹುಡುಗ ಪುಟ್ಟನಿಗೆ ತನ್ನ ಮಗಳು ಗೌರಿಯನ್ನು ವಿವಾಹ ಮಾಡಿಕೊಡುವ ಬಗ್ಗೆ ನಡೆಯುವ ಮಾತುಕತೆಯ ವಿಷಯದ ನಾಟಕ ಇದು. ಇದೊಂದು ಹಾಸ್ಯ ನಾಟಕ. ಇಲ್ಲಿನ ಆಸ್ತಿ, ತೋಟ, ಎತ್ತುಗಳ ಬಗೆಗಿನ ಜಗಳವಿದೆ. ಆದರೆ ಗಂಭೀರ ಸ್ವರೂಪದ್ದಲ್ಲ, ತಮಾಷೆಯ ಕಿತ್ತ್ತಾಟ ಎನ್ನಬಹುದು. ಕೊನೆಯಲ್ಲಿ ಹೀಗೆ ಜಗಳವಾಡುತ್ತಾ ಪುಟ್ಟ ಎಚ್ಚರತಪ್ಪಿ ಬೀಳುತ್ತಾನೆ. ಶ್ಯಾಮನು ಹೆದರಿಕೆಯಾಗಿ ಊರಿನ ಔಷಧಿ ಪಂಡಿತರನ್ನು ಕರೆತರುವೆ. ಅಲ್ಲಿಯವರೆಗೆ ಆತನನ್ನು ನಿನ್ನ ಪಕ್ಕದಲ್ಲಿ ಮಲಗಿಸಿ ನೀರು ಕುಡಿಸು ಎಂದು ಗೌರಿಗೆ ಹೇಳುತ್ತಾನೆ. ಆ ವೇಳೆ ಪುಟ್ಟ ಕಣ್ಣು ಬಿಡುತ್ತಾನೆ. ಗೌರಿಯು ಸಂತಸದಿಂದ ಪುಟ್ಟು ನಾನು ಗೌರಿ ಎನ್ನುತ್ತಾಳೆ.

 ಶ್ಯಾಮನು ಬಂದು ‘ನೀನು ನಿನ್ನ ಹೆಂಡತಿಯ ಪಕ್ಕದಲ್ಲೇ ಮಲಗಿರುವೆ. ನೀವು ಹೀಗೆ ತೋಟ- ಎತ್ತುಗಳ ಬಗ್ಗೆ ಕಚ್ಚಾಡುತ್ತಾ ಸಾವಿರ ವರ್ಷ ಸಂಸಾರ ಮಾಡಿಕೊಂಡು  ಸುಖವಾಗಿರಿ. ಇದೇ ನನ್ನ ಆಶೀರ್ವಾದ ಎನ್ನುತ್ತಾನೆ.


 ಸತಿ ಸಾವಿತ್ರಿ


ಸತ್ಯವಾನ- ಸಾವಿತ್ರಿ ವನದಿಂದ ಬರುತ್ತ್ತಾರೆ. ಸಾವಿತ್ರಿ ಕಟ್ಟಿಗೆ ಹೊರೆ ಹೊತ್ತಿರುವಳು. ಇಬ್ಬರೂ ವಿಶ್ರಮಿಸುವರು. ಸಾವಿತ್ರಿಯ ತೊಡೆಯ ಮೇಲೆ ಸತ್ಯವಾನ ಮಲಗಿರುತ್ತಾನೆ. ಸಾವಿತ್ರಿ ಅಶ್ವಪಥಿ ರಾಜನ ಮಗಳು. ಸತ್ಯವಾನ ದ್ಯುಮತ್ಸೇನ ಮಹಾರಾಜನ ಮಗ. ಇತ್ತ ಈ ವೇಳೆ ಯಮ ಆಗಮಿಸಿ ಸತ್ಯವಾನನ ಪ್ರಾಣ ಹಿಡಿದಿಟ್ಟುಕೊಂಡು ಸಾವಿತ್ರಿಯಲ್ಲಿ  ‘ಸತ್ಯವಾನ ಆಯಸ್ಸು ಮುಗಿಯಿತು’ ಎನ್ನುತ್ತಾನೆ. ಸಾವಿತ್ರಿಯು ಯಮನಲ್ಲಿ ನಿನ್ನ ಬೆನ್ನತ್ತಿ ಬಂದಿದ್ದೇನೆ ಎಂದಾಗ ನೀನು ಹಠಮಾರಿ  ಅಹಂಕಾರಿ,  ಎಲ್ಲ ಸತಿಯರಿಗಿಂತ ಉತ್ತಮ ಎನಿಸಿಕೊಳ್ಳಬೇಕಿದೆ. ಮುತ್ತೈದೆ ಎನಿಸಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡುತ್ತಾನೆ. ನನಗೆ ಯಾವ ಆಶೆಯೂ ಇಲ್ಲ.  ನನ್ನ ಕರ್ತವ್ಯ ಮಾಡಲು ಬಿಡು. ನಿನ್ನ ಪಾಶದಿಂದ ಸತ್ಯವಾನನನ್ನು  ಬಿಡು, ನಾನು ಅಸಾಧಾರಣ ಸ್ತ್ರೀ. ನನಗೆ ಭಯವಿಲ್ಲ, ದುಃಖವಿಲ್ಲ.  ಪತಿ ಮೇಲೆ ಪ್ರೇಮ ಅಧಿಕ ಅಷ್ಟೆ  ಎನ್ನುತ್ತಾಳೆ.

 ಸತ್ಯವಾನನ ಪ್ರಾಣ ಹಾರುತ್ತದೆ. ಆಗ ಯಮನು ನಿನ್ನನ್ನು ನಾನು ನನ್ನ ಲೋಕಕ್ಕೆ ಒಯ್ಯಲಾರೆ. ಸತ್ಯವಾನನ ಪ್ರಾಣವನ್ನೂ ಹಿಂದಿರುಗಿಸಲಾರೆ. ನೀನು ಆತನನ್ನು ಬಿಟ್ಟು ಹೋಗಲಾರೆ ಎನ್ನುತ್ತಾ ಈ ಸಮಸ್ಯೆಯನ್ನು ಹೇಗೆ ಬಿಡಿಸುತ್ತೀಯೇ ಎಂದು ಪ್ರಶ್ನಿಸುತ್ತಾನೆ. ಈ ಗಂಟನ್ನು ಬಿಡಿಸುವುದು ಗೊತ್ತು. ಬ್ರಹ್ಮಲೋಕಕ್ಕೆ ಬಾ. ಬ್ರಹ್ಮ ಈ ಗಂಟನ್ನು ಬಿಡಿಸುತ್ತಾನೆ ಎನ್ನುತ್ತಾಳೆ. ಇಬ್ಬರೂ  ಬ್ರಹ್ಮಲೋಕಕ್ಕೆ ಬರುತ್ತ್ತಾರೆ. ಅಲ್ಲಿ ಯಮನು ಬ್ರಹ್ಮನಲ್ಲಿ  ನನ್ನ ಸಮಸ್ಯೆ ಪರಿಹರಿಸಿ ಉಪಕರಿಸಿ ಎನ್ನುತ್ತಾನೆ. ವಿಷಯ ಅರಿತ ಬಹ್ಮ ಸಾವಿತ್ರಿಯನ್ನು ಕುರಿತು ‘ಪತಿಯ ಪ್ರಾಣ ಬಿಟ್ಟು ನಿನಗೇನು ವರ ಬೇಕು ಕೇಳು. ನಿನ್ನ ಅಂಧ ಮಾವನಿಗೆ ಕಣ್ಣು ಕೊಡಲೇ? ಎಂದಾಗ ಅದು ವರವೇ? ನನಗೆ ಸತ್ಯವಾನನೊಬ್ಬನೇ ವರ, ಕೊಟ್ಟರೆ ಅವನನ್ನು ಕೊಡು ಎನ್ನುತ್ತಾಳೆ. ಆಗ ಬ್ರಹ್ಮ  ಯಾವ ಪರೀಕ್ಷೆಯಲ್ಲೂ ನಿನಗೆ ಸೋಲಿಲ್ಲ. ಸಾವಿತ್ರಿ ಎಂತಹ ಪವಿತ್ರಳು ಎನ್ನುವುದು ಸಾಬೀತಾಯಿತು. ಸತಿಪತಿಯರ ಆದರ್ಶ ತೋರಿಸಲೆಂದೇ ಸಾವಿತ್ರಿಯನ್ನು ಸೃಷ್ಟಿಸಿದೆ. ಎಲ್ಲ ಸತಿಯರಿಗಿಂತ ನಾನು ಉತ್ತಮಳು ಮತ್ತು ಮುತ್ತೈದೆ ಸಾವಿತ್ರಿ ಎನ್ನಿಸಿಕೊಳ್ಳಬೇಕು ಎಂದು ಈ ಹಿಂದೆ ನನ್ನಲ್ಲಿ ಹೇಳಿದ್ದೆ. ಈಗ ನಿನ್ನ ಮಾತಿನಂತೆಯೇ  ಆಗಲಿ. ಮುತ್ತೈದೆಯರೆಲ್ಲ ಸಾವಿತ್ರಿಯರೆನಿಸಿಕೊಳ್ಳಲಿ ಎನ್ನುತ್ತಾನೆ. ಸಾವಿತ್ರಿಯು ಅವರ ಚಿತ್ರದ ಜೊತೆ ನಿನ್ನ ಚಿತ್ರವೂ ಇರಲಿ ಎಂದಾಗ,  ನೀನಿನ್ನು ಸತ್ಯವಾನನೊಡನೆ ಹೊರಡು ಎನ್ನುತ್ತಾನೆ ಬ್ರಹ್ಮ.

 ಸಾವಿತ್ರಿ ಸತ್ಯವಾನನೊಡನೆ ಹೊರಡುವಳು.  ‘ಆಶ್ರಮಕ್ಕೆ ಹೋಗಿ. ನಿಮ್ಮ ಮಾವ ದ್ಯುಮತ್ಸೇನನಿಗೂ ಕಣ್ಣು ಬಂದಿದೆ. ಅವರು ನೀವು ಬರುತ್ತೀರೆಂದು ಕಾದಿರುತ್ತಾರೆ  ಹೋಗಿ ಬನ್ನಿ ಎಂದು ಹೇಳುವನು.

 ..............................


Comments

Popular posts from this blog