ಎಂದೂ ಮರೆಯದ ವ್ಯಕ್ತಿತ್ವದ
‘ಇದ್ದರಿಂಥವರೆಮ್ಮ ನಡುವಲಿ’
‘ಇದ್ದರಿಂಥವರೆಮ್ಮ ನಡುವಲಿ’ ಈ ಕೃತಿ ಕೆಲವು ಸಾಧಕ ವ್ಯಕ್ತಿಗಳ ಜೀವನದ ವ್ಯಕ್ತಿತ್ವದ ನೋಟವನ್ನು ಕಟ್ಟಿಕೊಡುವಂಥದ್ದು. ಕೆಲವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಉಳಿಸಿ ಹೋಗುತ್ತಾರೆ. ಅಂತಹವರ ಕುರಿತಾಗಿ ಲೇಖಕ ವಿಶ್ವಾಸ್ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಹದಿನಾಲ್ಕು ವ್ಯಕ್ತಿ ಚಿತ್ರಣವಿದೆ. ಇಲ್ಲಿನ ವ್ಯಕ್ತಿಗಳಲ್ಲಿ ತಾವು ಕಂಡ ಪ್ರತಿಯೊಂದು ಒಳ್ಳೆಯ ಅಂಶಗಳನ್ನು ಲೇಖಕರು ದಾಖಲಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದವರು. ಅವರ ಹೊರತಾಗಿಯೂ ಕೆಲವರನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಾಧಕರ ಅನುಭವಗಳನ್ನು ಮತ್ತು ಅವರೊಂದಿಗೆ ಒಡನಾಡಿದ ದಿನಗಳ್ನು ಲೇಖಕರನ್ನು ಆಕರ್ಷಿಸಿದ್ದರಿಂದ ಸಾರ್ವಜನಿಕರಿಗೂ ಒಂದಷ್ಟು ಪ್ರೇರಣೆಯಾಗಬಹುದು ಎನ್ನುವ ಉದ್ದೇಶದಿಂದ ಅವರ ಬಗ್ಗೆ ಕೃತಿ ರಚಿಸಿದ್ದಾರೆ.
ಮೊದಲನೆಯದಾಗಿ, ‘ವಾಮನರೂಪಿ ತ್ರಿವಿಕ್ರಮ’ ಯಾದವ್‌ರಾವ್ ಜೋಶಿ. ಇವರು ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರರ ಸಂಪರ್ಕಕ್ಕೆ ಬಂದು ಸ್ವಯಂಸೇವಕರಾದವರು. ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದರೂ ದೇಶಕ್ಕಾಗಿ ಅದೆಲ್ಲವನ್ನು ಬಿಟ್ಟು ಬಂದವರು. ಎಲ್ ಎಲ್ ಬಿ ಓದಿದ್ದರೂ ಆರ್ ಎಸ್ ಎಸ್ ಪ್ರಚಾರ ಕಾರ್ಯವನ್ನು ಆರಂಭಿಸಿ ಕರ್ನಾಟಕದಲ್ಲಿ ಅದನ್ನು ಕಟ್ಟಿ ಬೆಳೆಸಿದವರು. ಸಂಸ್ಕೃತದ ಬಗ್ಗೆ ಅವರ ಪ್ರೀತಿ ಅಸದೃಶವಾಗಿತ್ತು. ಸಂಸ್ಕೃತದ ಅದೆಷ್ಟೋ ಉಕ್ತಿಗಳು, ಸುಭಾಷಿತಗಳು ಅವರಿಗೆ ಕಂಠಸ್ಥವಾಗಿದ್ದವು. ಎರಡನೆಯದಾಗಿ, ‘ಧ್ಯೇಯತಪಸ್ವಿ ಹೊ ವೆ ಶೇಷಾದ್ರಿ’. ಇವರು ಮೂಲತಃ ಬೆಂಗಳೂರಿನವರು. ಪ್ರಚಾರಕರಾಗಿ ದೀರ್ಘಕಾಲ ಸೇವೆಗೈದವರು. ಲೇಖಕರಾಗಿ ಪ್ರಸಿದ್ಧರಾದವರು. ಇವರ ‘ಯುಗಾವತಾರ’ ಕೃತಿ ಪ್ರಸಿದ್ಧವಾದುದು. ಜೊತೆಗೆ ಇನ್ನೂ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ. ಚಿಂತಕರಾಗಿ, ಲೇಖಕರಾಗಿ ವಿಚಾರವಾದಿಯಾಗಿ, ಸ್ವಯಂಸೇವಕರಾಗಿ, ದಾರ್ಶನಿಕರಾಗಿ ಯಾವುದೇ ನೆಲೆಯಿಂದ ನೋಡಿದರೂ ಒಳಗಿನಿಂದ ಕಾಣಿಸುವುದು ಒಂದೇ ರೂಪ. ಅದು ಧ್ಯೇಯತಪಸ್ವಿ.
ಮೂರನೆಯವರು, ‘ಇಹದ ಸೂರು ಕಳಚಿ ನಡೆದ ಸೂರು’ (ಕೃ.ಸೂರ್ಯನಾರಾಯಣ ರಾವ್). ಇವರು ವಿದ್ಯಾರ್ಥಿ ಜೀವನದಲ್ಲಿ ಸಂಘದ ಸಂಪರ್ಕಕ್ಕೆ ಬಂದವರು. ಮೂಲತಃ ಬೆಂಗಳೂರಿನ ಇವರು ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ, ಕ್ಷೇತ್ರಿಯ ಪ್ರಚಾರಕರಾಗಿ, ಅಖಿಲ ಭಾರತ ಸೇವಾ ಪ್ರಮುಖರಾಗಿ ಅನೇಕ ವರ್ಷಗಳವರೆಗೆ ಮಾರ್ಗದರ್ಶನ ಮಾಡಿ ಸಂಸ್ಕೃತ ಭಾರತೀಯ ಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸಂಸ್ಕೃತ ವಿದ್ವಾಂಸರಲ್ಲದಿದ್ದರೂ ಸೂರ್ಯನಾರಾಯಣರವರು ಸಂಸ್ಕೃತ ಭಾರತಿಯ ಅಖಿಲ ಭಾರತ ಅಧ್ಯಕ್ಷರಾಗಿದ್ದರು. ಭಗವದ್ಗೀತೆಯ ಬಗ್ಗೆ ಅವರದು ಗಾಢವಾದ ಅಧ್ಯಯನವಿತ್ತು. ಪ್ರತಿದಿನವೂ ಗೀತೆಯ ಒಂದು ಅಧ್ಯಾಯವನ್ನು ತಪ್ಪದೇ ಪಾರಾಯಣ ಮಾಡುತ್ತಿದ್ದರು. ನೂರಾರು ದೀಪಗಳನ್ನು ಹೊತ್ತಿಸಿದ ಕೀರ್ತಿ ಅವರದು.
ನಾಲ್ಕನೆಯವರು ‘ಕೋಟಿಗೊಬ್ಬ ಕೃಷ್ಣಪ್ಪ’. ಮೈಸೂರಿನವರಾದ ನ. ಕೃಷ್ಣಪ್ಪ, ಕರ್ನಾಟಕ ಪ್ರಾಂತ ಪ್ರಚಾರಕರಾಗಿ ಕುಟುಂಬ ಪ್ರಬೋಧನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಸಾಹಿತ್ಯ, ಕಲೆ, ಸಿನಿಮಾ ಕ್ಷೇತ್ರಗಳಲ್ಲಿ ಅನೇಕ ಅಭಿಮಾನಿಗಳನ್ನು ಅವರು ಗಳಿಸಿಕೊಂಡಿದ್ದರು. ಆದರ್ಶ ಕುಟುಂಬವನ್ನು ಹೇಗೆ ನಡೆಸಬೇಕೆಂದು ಸಾವಿರಾರು ಕುಟುಂಬಗಳ ಗೃಹಸ್ಥರಿಗೂ, ಗೃಹಿಣಿಯರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅಂತರಂಗದಲ್ಲೂ ಬಹಿರಂಗದಲ್ಲೂ ನಿರ್ಮೂಲತೆಗೆ ಮತ್ತೊಂದು ಹೆಸರು ಕೃಷ್ಣಪ್ಪ. ಸದಾ ಕ್ರಿಯಾಶೀಲರಾಗಿದ್ದರು, ಪರಿಚಯಸ್ಥರ ಹೆಗಲ ಮೇಲೆ ಕೈ ಹಾಕಿಯೇ ಮಾತನಾಡುತ್ತಿದ್ದರು.
ಐದನೆಯವರು ‘ಅಡೆತಡೆಗಂಜದ ಅಜಿತಕುಮಾರ್’. ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಎರಡು ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ್ದ ಅವರು, ಅವರು ನಿರ್ವಹಿಸಿದ ಕ್ಷೇತ್ರ ಆರ್ ಎಸ್ ಎಸ್ ಕರ್ನಾಟಕದ ಪ್ರಾಂತ್ಯದ ಪ್ರಚಾರಕರಾಗಿ. ಹಿಂದೂ ಸೇವಾ ಪ್ರತಿಷ್ಠಾನವೆಂಬ ವಿನೂತನ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದವರು. ‘ಯೋಗ ಪ್ರವೇಶ’ ಅವರು ಬರೆದ ಅತ್ಯಂತ ಪ್ರಸಿದ್ಧ ಕೃತಿ. ಇದು ಇಂದಿಗೂ ಯೋಗಾಭ್ಯಾಸಿಗಳಿಗೆ ಅತ್ಯಮೂಲ್ಯ ಮಾರ್ಗದರ್ಶಿ. ನಿರಂತರ ಯೋಗಾಭ್ಯಾಸವಾಗಿದ್ದ ಅಜಿತ್‌ಕುಮಾರ್ ಗಂಭೀರ ವ್ಯಕ್ತಿತ್ವದವರಾದರೂ, ಪರನೋಟಕ್ಕೆ ಕಠೋರ ಎನ್ನಿಸಬಹುದಾದ ಸ್ವಭಾವದವರಾದರೂ ಕೋಮಲ ಭಾವನೆಯನ್ನು ಹೊಂದಿದ್ದರು.
ಆರನೆಯವರು ‘ನಿರಂತರ ಕಾರ್ಯಶೀಲ ನಾಗಭೂಷಣ’. ಇವರು ಶಿವಮೊಗ್ಗದವರು. ಆರ್ ಎಸ್ ಎಸ್ ಮುಖ್ಯ ಕಾರ್ಯಾಲಯದ ಪ್ರಮುಖರಾಗಿ ಕೇಶವ ಕೃಪಾದಲ್ಲಿ ಅನೇಕ ವರ್ಷಗಳವರೆಗೆ ಸೇವೆ ಸಲ್ಲಿಸಿ ಹಿಂದೂ ಸೇವಾ ಪ್ರತಿಷ್ಠಾನದ ಸಂಚಾಲಕರಾಗಿಯೂ ಕೆಲಸ ಮಾಡಿದವರು. ನಾಗಭೂಷಣ್ ಎಂದೊಡನೆ ನೆನಪಿಗೆ ಬರುವುದು ಜೀವನ ಉತ್ಸಾಹ. ಸದಾ ಚಟುವಟಿಕೆ ವ್ಯಕ್ತಿ. ನಂತರದವರು ವಿದ್ಯಾನಂದ ಶೆಣೈ. ಶೆಣೈ ಶೃಂಗೇರಿಯವರು. ಅದ್ಭುತ ಮಾತುಗಾರರು. ರಾಷ್ಟ್ರೋತ್ಥಾನ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾಗಿದ್ದರು ಅವರ ‘ಭಾರತ ದರ್ಶನ’ದ ಉಪನ್ಯಾಸ ಅತ್ಯಂತ ಪ್ರಸಿದ್ಧವಾದುದು. ಪ್ರೇರಣಾಪ್ರದವೂ, ಜನಪ್ರಿಯವೂ ಆಗಿತ್ತು. ಅದರ ಧ್ವನಿಸುರುಳಿಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಅವರ ಮಾತಿನ ಮೂಡಿ ಅಷ್ಟೊಂದು ಆಕರ್ಷಕವಾಗಿತ್ತು. ಸ್ಪಷ್ಟ ಉಚ್ಚಾರಣೆ, ಎಲ್ಲಿಯೂ ತಡವರಿಸದ ಅಸ್ಖಲಿತ ವಾಣಿ ಅವರಿಗೆ ಕರಗತವಾಗಿತ್ತು. ಸಾವಿರಾರು ಉಪನ್ಯಾಸವನ್ನು ಅವರು ನೀಡಿದ್ದಾರೆ.
ಚಕ್ರವರ್ತಿ ತಿರುಮಗನ್: ಸಂಸ್ಕಾರ ಭಾರತೀಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಬಾಲ ಗೋಕುಲ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕನ್ನಡದ ಪೂಜಾರಿ ಎಂದೇ ಪ್ರಸಿದ್ಧರಾಗಿರುವ ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ ಅವರ ಸಹೋದರರು.
ವಿದ್ವಾನ್ ರಂಗನಾಥ ಶರ್ಮಾ: ಸೊರಬ ತಾಲೂಕಿನ ನಡಹಳ್ಳಿಯವರಾದ ಇವರು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. ಸಂಪೂರ್ಣ ವಾಲ್ಮೀಕಿ ರಾಮಾಯಣವನ್ನು ತಿಳಿಗನ್ನಡದಲ್ಲಿ ಅನುವಾದ ಮಾಡಿ ಡಿ ವಿ ಗುಂಡಪ್ಪನವರಿಂದ ಪ್ರಶಂಸೆಗೆ ಒಳಗಾದವರು ರಾಷ್ಟ್ರಪ್ರಶಸ್ತಿ ಸಹ ಪಡೆದವರು. ಅವರ ಭಾಷಾ ಪ್ರೌಢಿಮೆ ಅದ್ವಿತೀಯವಾದುದು. ಅವರ ಅನುವಾದಗಳು ಉತ್ಕೃಷ್ಟವಾಗಿರುತ್ತಿದ್ದವು.
ಪ್ರೊ. ಜಿ ಎಸ್ ಮುಡಂಬಡಿತ್ತಾಯ: ದಕ್ಷಿಣ ಕನ್ನqದವರಾದ ಇವರು, ಬನಾರಸ್ ಹಿಂದು ವಿವಿಯಲ್ಲಿ ಎಂ ಎ ಪದವಿಯನ್ನು ಗಳಿಸಿ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿ, ನಂತರ ಪಿಯು ಮಂಡಳಿ ನಿರ್ದೇಶಕರಾಗಿ ನಿವೃತ್ತರಾದವರು. ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ವಿಶೇಷ ಪ್ರತಿಭೆ ಹೊಂದಿದ್ದರು. ಹಲವಾರು ಕೃತಿಗಳನ್ನು ಅವರು ಇಂಗ್ಲೀಷಿನಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.
ಜಿ ವಿ ಅಯ್ಯರ್ : ನಂಜನಗೂಡಿನಲ್ಲಿ ಜನಿಸಿದ ಜಿ. ವಿ. ಅಯ್ಯರ್ ಎಂಟು ವರ್ಷದವರಿರುವಾಗಲೇ ಗುಬ್ಬಿ ನಾಟಕ ಕಂಪನಿ ಸೇರಿದವರು. ‘ರಾಧಾ ರಮಣ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದವರು. ‘ವಂಶವೃಕ್ಷ’ ಚಿತ್ರದ ಮೂಲಕ ನಿರ್ಮಾಪಕರಾದರು. ಮೊದಲ ಬಾರಿಗೆ ಸಂಸ್ಕೃತ ಭಾಷೆಯಲ್ಲಿ ಚಲನಚಿತ್ರವನ್ನು ನಿರ್ಮಿಸಿದ ಹೆಗ್ಗಳಿಕೆ ಅವರದು. ಆದಿ ಶಂಕರಚಾರ್ಯ ಮತ್ತು ಭಗವದ್ಗೀತೆ ಈ ಎರಡು ಸಂಸ್ಕೃತ ಸಿನಿಮಾಗಳಿಗೆ ಸ್ವರ್ಣಕಮಲ ಪ್ರಶಸ್ತಿಯನ್ನು ಅವರು ಗಳಿಸಿಕೊಂಡವರು. ತಮ್ಮ ಸಾಧನೆ ಮತ್ತು ವ್ಯಕ್ತಿತ್ವದ ಮೂಲಕ ಸದಾ ನೆನಪಾಗುವ ವ್ಯಕ್ತಿ. ವಾಲ್ಮೀಕಿ ರಾಮಾಯಣಕ್ಕೆ ಯಾರೂ ಊಹಿಸದ ಭಾಷ್ಯವನ್ನು ಅವರು ಬರೆದಿದ್ದಾರೆ. ಅವರ ಜೀವನದ ಕೊನೆಯ ಹಂಬಲ ಈ ಸಿನಿಮಾವನ್ನು ಮಾಡುವುದಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಅಯ್ಯರ್ ಎಂದೂ ಮಾಸದ ನೆನಪು.
ಹೀಗೆ ಎಂದೂ ಮರೆಯದ ವ್ಯಕ್ತಿತ್ವದವರ ಗುಣಗಾನದ ಜೊತೆಗೆ , ಅವರ ಸಾಧನೆಯನ್ನು ಲೇಖಕರು ಸರಳವಾಗಿ, ಸದಾ ನೆನಪಿನಲ್ಲಿರುವಂತೆ ಕಟ್ಟಿಕೊಟ್ಟಿದ್ದಾರೆ.
- ದತ್ತಾತ್ರೇಯ ಹೆಗಡೆ
............................

Comments
Post a Comment