ಸಮಕಾಲೀನ ಘಟನೆಗಳಿಗೆ ಮುಖಾಮುಖಿಯಾಗುವ
‘ದೇವರು ಅರೆಸ್ಟ್ ಆದ’
ಹೊಸ ರೀತಿಯ ನಿರೂಪಣೆ, ಶೈಲಿ ಮತ್ತು ತಂತ್ರಗಳಿಂದ ಭಿನ್ನವಾದ ಕಥಾ ಸಂಕಲವೇ ‘ದೇವರು ಅರೆಸ್ಟ್ ಆದ’. ಇದು ಚೆನ್ನೈನಲ್ಲಿ ಉದ್ಯೋಗಿಯಾಗಿರುವ, ಮೂಲತಃ ಸೊರಬದವರಾದ ಶಿವಕುಮಾರ್ ಮಾವಲಿ ಅವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ೧೬ ಸಣ್ಣ ಮತ್ತು ಆಕರ್ಷಕ ಕಥೆಗಳಿವೆ. ಗ್ರಾಮೀಣ ಹಿನ್ನೆಲೆಯವರಾದರೂ, ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ತಮ್ಮ ಅನುಭವಗಳನ್ನು ಅತ್ಯುತ್ತ್ತಮವಾಗಿ ಬೆಸೆದು ಹಾಗೂ ಯಾರೊಬ್ಬರ ಪ್ರಭಾವಕ್ಕೂ ಒಳಗಾಗದೆ, ಸ್ವಂತಿಕೆಯನ್ನು ಕಾಪಾಡಿಕೊಂಡು ಕಥೆ ಕಟ್ಟಿರುವುದು ಇಲ್ಲಿನ ವಿಶೇಷತೆ.
ಇಲ್ಲಿನ ಪ್ರತಿ ಕಥೆಯೂ ನಮ್ಮ ಅಂತರಂಗವನ್ನು ಶೋಧಿಸಿ, ಓದುಗನ ಅಂತರಾಳಕ್ಕಿಳಿದು, ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಅರ್ಥಪೂರ್ಣ ಮಾತುಕತೆಗಳು ಕಥೆಯ ಜೀವವನ್ನು ಮತ್ತಷ್ಟು ಸಶಕ್ತಗೊಳಿಸಿದರೆ, ಕೆಲವು ಸಂಭಾಷಣೆಗಳು ಮತ್ತಷ್ಟು ಗಟ್ಟಿತನ ತುಂಬಿವೆ. ಬಲು ಸೂಕ್ಷ್ಮವಾಗಿ ಹೇಳಬೇಕಾದ್ದನ್ನು ಹೇಳುವ ನಿರೂಪಣಾ ಶೈಲಿ ಸಹ ಮನಸೆಳೆಯುತ್ತದೆ. ಬರಹಗಾರನ ಸಾಮಾಜಿಕ ಹೊಣೆ ಕೆಲವು ಕಥೆಗಳಲ್ಲಿ ವ್ಯಕ್ತವಾಗಿದೆ.
ಬದುಕಿಗೂ ಬರಹಕ್ಕೂ ಸಂಬಂಧವಿಲ್ಲದೆ ಜಗತ್ತಿಗೆಲ್ಲ ಬುದ್ಧಿ ಹೇಳುವ ಆಷಾಢಭೂತಿಗಳ ಬಣ್ಣವನ್ನು ಲೇಖಕರು ಮೊದಲ ಕಥೆ ‘ದೇವರು ಅರೆಸ್ಟ್ ಆದ’ ಇದರಲ್ಲಿ ಬಯಲು ಮಾಡಿದ್ದಾರೆ. ದೇವರ ಇರುವಿಕೆಯ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ನಾಸ್ತಿಕವಾದ ಮಾಡುವುದು, ದೇವರೊಂದಿಗೆ ನಡೆಯುವ ಮಾತುಕತೆಯನ್ನು ತೋರಿಸಿದ್ದಾರೆ. ಟಿವಿ ಚಾನೆಲ್‌ನ ಚರ್ಚೆಯಲ್ಲಿ ಆನಂದಮೂರ್ತಿ ಎನ್ನುವ ಕಥಾನಾಯಕ ದೇವರ ಬಗ್ಗೆ ಸೋಗಲಾಡಿತನದ ಕಥೆಯನ್ನು ಹೇಳುವಲ್ಲಿಂದ ಕಥೆ ಆರಂಭವಾಗುತ್ತದೆ. ಕೊನೆಯಲ್ಲಿ ಆತ ಮನೆಗೆ ಬಂದಾಗ ಆತನ ಹೆಂಡತಿ ಪೂಜಾಕೋಣೆಯಿಂದ ಆರತಿ ತಟ್ಟೆತರುವುದನ್ನು ತೋರಿಸುವುದರ ಮೂಲಕ ಮುಕ್ತಾಯಗೊಳ್ಳುತ್ತದೆ. ಅಂದರೆ ಬರೆದಂತೆ ಬದುಕಲಾಗದ ಸಂದರ್ಭ ಇರುವುದನ್ನು ಈ ಕಥೆ ಹೇಳುತ್ತದೆ. ಕೊನೆಯ ಸಾಲಿನಲ್ಲಿ ಲೇಖಕರು, ‘ನಮ್ಮ ಮನೆಯಲ್ಲಿ ದೇವರನ್ನು ಪ್ರಾಮಾಣಿಕರಿಸಲು ಸಾಧ್ಯವಾಗದವರು ಇಡೀ ಪ್ರಪಂಚಕ್ಕೆ ಪ್ರವಚನ ಮಾಡಲು ಹೋಗಬಾರದು’ ಎಂದು ಹೇಳುತ್ತಾರೆ.
‘ಮಧ್ಯ ವಯಸ್ಕನ ಮೊನೋಲಾಗ್’ ಎನ್ನುವುದು ಒಂದು ಕುತೂಹಲಕಾರಿಯಾದ ಅಷ್ಟೇ ವಿಶಿಷ್ಟವಾದ ಕೃತಿಯಾಗಿದೆ. ಸಮಾಜಕ್ಕೆ ಹೆದರಿ ಅವ್ಯಕ್ತ ಆಸೆ ಮುಚ್ಚಿಟ್ಟುಕೊಳ್ಳುವುದು, ಅವಕಾಶ ಸಿಕ್ಕಾಗ ಅದನ್ನು ಪಡೆಯುವುದರ ಕುರಿತಾಗಿದೆ. ಅವಿವಾಹಿತ ಮಧ್ಯವಯಸ್ಕ ರಾಜಶೇಖರ್ ಎನ್ನುವನಿಗೆ ಮಾಳವಿಕಾ ಎನ್ನುವ ಹೆಸರಿನಲ್ಲಿ ಪತ್ರ ಬಂದು ಅದು ಆತನ ನೆಮ್ಮದಿಯನ್ನು ಕೆಡಿಸುವುದರ ಕುರಿತಾಗಿದೆ. ಡೈರೆಕ್ಟರಿ ಮೂಲಕ ಮಾಳವಿಕಾ ಎನ್ನುವವಳ ನಂಬರನ್ನು ಪಡೆದು ಆಕೆಗೆ ಕರೆ ಮಾಡಿ ಭೇಟಿ ಮಾಡುತ್ತಾನೆ. ಭೇಟಿ ನಂತರ ಮನೆಗೆ ಬಂದಾಗ ಅದೇ ಹೆಸರಿನಲ್ಲಿ ಮತ್ತೊಂದು ಪತ್ರ ಬಂದಿರುತ್ತದೆ. ಆದರೆ ಎರಡನೇ ಪತ್ರ ಬರೆದ ಮಾಳವಿಕಾ ತಾನು ಭೇಟಿ ಮಾಡಿದವಳಲ್ಲ. ಇವಳು ಬೇರೆ ಎನ್ನುತ್ತಾ ಒಳಹೋದಾಗ ದೂರವಾಣಿ ಕರೆ ಬರುತ್ತದೆ. ನಾನು ಮಾಳವಿಕಾ, ಸೈನ್ಯ ಅಧಿಕಾರಿಯ ಹೆಂಡತಿ ಎನ್ನುವುದು. ಈ ಮೂರು ಮಾಳವಿಕಾರಿಂದ ಆತನ ತಲೆ ಕೆಟ್ಟುಹೋಗುತ್ತದೆ. ರಾತ್ರಿಯಿಡಿ ಚಿಂತಾಕ್ರಾಂತನಾಗುತ್ತಾನೆ. ಇಂದಿರಾನಗರದ ವೇಶ್ಯೆಯರ ಮನೆಗೆ ಹೋಗುತ್ತಾನೆ. ಅಲ್ಲಿ ವೇಶ್ಯೆಯೊಡನೆ ಇರುವಾಗ ಆಕೆಯ ಹೆಸರು ಕೇಳುತ್ತಾನೆ. ಅವಳು ಸಹ ಮಾಳವಿಕಾ ಎನ್ನುತ್ತಾಳೆ. ಇನ್ನಷ್ಟು ಗೊಂದಲಕ್ಕೆ ಬೀಳುತ್ತಾನೆ. ಒಟ್ಟಿನಲ್ಲಿ ಬದುಕಿನಲ್ಲಿ ವಯೋಸಹಜವಾಗಿ ನಡೆಯಬೇಕಾದ ಕ್ರಿಯೆಗಳು ಸಫಲವಾಗದೆ ಇದ್ದ ಸಂದರ್ಭದಲ್ಲಿ ಅದು ಬಹಳಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಈ ಕಥೆಯ ಮೂಲಕ ಬಿಚ್ಚಿಟ್ಟಿದ್ದಾರೆ.
ಎಷ್ಟೇ ಸಿರಿ-ಸಂಪತ್ತು ಒಟ್ಟುಗೂಡಿಸಿ ಗುಡ್ಡೆ ಹಾಕಿದರೂ ತಿನ್ನಲು ಅನ್ನ ಬೇಕು. ಆದರೆ ಅಕ್ಕಿ ಬೆಳೆಯುವುದನ್ನು ಮರೆತಿದ್ದೇವೆ. ಭೂಮಿಯನ್ನು ಮರೆಯುತ್ತಿದ್ದೇವೆ. ಸಂಪತ್ತು ಅಧಿಕಾರದಿಂದ ಯಾವ ಬದುಕಿಗೂ ತೃಪ್ತಿ ಸಿಗದು ಎನ್ನುವುದನ್ನು ‘ಕೊನೆಯ ಮನುಷ್ಯ’ ಎನ್ನುವ ಕತೆಯಲ್ಲಿ ಬಿಂಬಿಸಿದ್ದಾರೆ. ತಾನೇ ಕಳೆದು ಹೋದ ಮನುಷ್ಯ. ತನ್ನನ್ನು ಮೊದಲು ಹುಡುಕಿಕೊಳ್ಳಬೇಕು. ಆಮೇಲೆ ಮನೆಯಲ್ಲಿ ಕಳೆದು ಹೋಗಿವೆ ಎಂದು ತಿಳಿದುಕೊಂಡ ವಸ್ತುಗಳನ್ನು ಹುಡುಕಬೇಕು. ತಾನೇ ಕಳೆದು ಹೋಗಿ ಬೇರೆಯವರ ಹೆಸರಿನಲ್ಲಿ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟ ಕಥೆ ಇನ್ನೊಂದು ‘ಕೇಸ್ ನಂಬರ್ ೪೨೦’.
‘ಮುಗಿಯದ ಪಯಣ’ ಎನ್ನುವಲ್ಲಿ ಕಥಾನಾಯಕನು ಬಸ್ಸಿನಲ್ಲಿ ಪತ್ನಿಯೊಂದಿಗೆ ಬೆಂಗಳೂರಿಗೆ ಸಂಚರಿಸುವಾಗ ಅರಸಿಕರೆಯಲ್ಲಿ ಬಸ್ ನಿಂತಾಗ ಕೆಳಗಿಳಿದು ಹೋದ ಆಕೆ ಕಾಣೆಯಾಗುತ್ತಾಳೆ. ಅವಳನ್ನು ಹುಡುಕುವುದಕ್ಕಾಗಿ ಅದೇ ಬಸ್‌ನಲ್ಲಿ ಪ್ರತಿದಿನ ಬೆಂಗಳೂರಿಗೆ ಸಂಚರಿಸುವುದು, ಒಂದಲ್ಲ ಒಂದು ದಿನ ಅದೇ ಬಸ್ಸಿನಲ್ಲಿ ಸಿಗುತ್ತಾಳೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುವುದರ ಬಗ್ಗೆ ಇದೆ. ‘ ಜೀವನ ಪ್ರಯಾಣದಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋದವಳು ಬಸ್ ಪ್ರಯಾಣದಲ್ಲಿ ಮತ್ತೆ ಸಿಗಬಹುದು ಎಂಬ ನಂಬಿಕೆ ನಾಯಕನದ್ದಾಗಿರುತ್ತದೆ.
‘ವೃದ್ಧಾಶ್ರಮ’ ಎಂಬ ಕತೆ ಅಪ್ಪನ ದುಡ್ಡಲ್ಲಿ ಕಟ್ಟಿಸಿದ ವೃದ್ಧಾಶ್ರಮಕ್ಕೆ ಅಪ್ಪನನ್ನೇ ಶ್ರೀಮಂತ ಮಗ ಕಳುಹಿಸಿದ್ದರ ಕುರಿತಾಗಿದೆ. ಸಮಾಜ ಸೇವೆ ಎನ್ನುವುದು ಒಂದು ಫ್ಯಾಶನ್ ಆಗಿದೆ. ಹೆಸರಿಗಾಗಿ, ಹಣ, ಪ್ರತಿಷ್ಠೆಗಾಗಿ ನಮ್ಮತನವನ್ನು ಅಡವಿಡುತ್ತಾರೆ. ಸಮಾಜ ಸೇವೆ ಮಾಡುವವನು ಕೆಲವು ಸೂಕ್ಷ್ಮಗಳನ್ನು ತಿಳಿದಿರಬೇಕು ಎನ್ನುವುದನ್ನು ಈ ಕಥೆ ಮೂಲಕ ತೋರಿಸಿಕೊಟ್ಟಿದ್ದಾರೆ. ‘ನಾಯಿ ಇದೆ ಎಚ್ಚರಿಕೆ’ ಎಂಬಲ್ಲಿ ಊರಗೌಡ ಜರ್ಮನ್ ಶೆಫರ್ಡ್ ನಾಯಿ ಸಾಕಿದ್ದು, ಅದು ಊರಿನವರೆಲ್ಲ ರಸ್ತೆಯಲ್ಲಿ ಸಂಚರಿಸುವಾಗ ಹೆದರಿಸುವುದು, ಇದರಿಂದ ಬೇಸತ್ತ ಜನರು ಅದನ್ನು ಹೇಗೋ ಹೊರತಂದು ಹೊಡೆದು, ಊರ ನಾಯಿಗಳಿಂದ ಕಚ್ಚಿಸಿ ಸಾಯುವಂತೆ ಮಾಡುವುದರ ಕುರಿತಾಗಿದೆ. ಆ ಗೌಡನಿಗೆ ನಾಯಿ ಗೌಡ ಎಂಬ ಅಡ್ಡ ಹೆಸರು ಬಂದ ಬಗೆಯನ್ನು ಚಿತ್ರಿಸಿದ್ದಾರೆ.
‘ಒಂದು ವಿಚಿತ್ರ ಕಾಯಿಲೆ’ ಎಂಬಲ್ಲಿ ಎರಡು ಕುಟುಂಬಗಳ ಹಗೆ, ಅಮಾನುಷತೆ, ದೇಹ -ಮನಸ್ಸನ್ನು ಹೊಕ್ಕಿದರೆ ಮನುಷ್ಯನನ್ನು ಇಬ್ಭಾಗ ಮಾಡುತ್ತದೆ ಎನ್ನುವ ಸಂದೇಶವನ್ನು ಒಳಗೊಂಡಿದೆ. ‘ಒಂದು ಮೌನದ ಕಥೆ’ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವುದನ್ನು ಸಾರುತ್ತದೆ. ಒಂದು ದಿನ ಮೌನವಾಗಿದ್ದ ಉಪನ್ಯಾಸಕನ ಕಥೆ ಇದು. ಮೌನವಾಗಿದ್ದರೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದಾದರೆ ನಾವೇಕೆ ಎಲ್ಲರೂ ಮಾತನಾಡಬೇಕು, ಮಾತಿನಿಂದ ಪ್ರಯೋಜನ ಏನು? ನಿಶ್ಯಬ್ದತೆ, ಮೌನ ಮುಖ್ಯ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.
ಶಿಕ್ಷೆಗೊಳಗಾದವನೊಬ್ಬನ ಖರ್ಚನ್ನು ಭರಿಸಲು ಚಿಕ್ಕಪಟ್ಟಣವೊಂದರ ರಾಜ ಕಷ್ಟಪಟ್ಟ ಬಗ್ಗೆ ‘ಕಾಸ್ಟ್ಲಿ ಖೈದಿ’ ಯಲ್ಲಿದೆ. ಈ ಜಗತ್ತಿನಲ್ಲಿ ಏನೆಲ್ಲಾ ಸಂಶೋಧನೆ ಮಾಡಿದ್ದಾರೆ. ಆದರೆ ಮನೆಯಲ್ಲಿ ಮಾತನಾಡಲು ಯಾರೂ ಇಲ್ಲ. ಮನುಷ್ಯ ಒಬ್ಬಂಟಿಯಾಗಿದ್ದಾನೆ. ಆತನ ಭಾವನೆಗಳನ್ನು ಕೇಳುವವರಿಲ್ಲ, ನೋವು ನಲಿವುಗಳನ್ನು ಹಂಚಿಕೊಳ್ಳುವವರಿಲ್ಲ, ಆಲಿಸುವವರಿಲ್ಲ. ನೆಮ್ಮದಿ ಕಳೆದುಕೊಂಡು ಮನುಷ್ಯ ಯಾಂತ್ರಿಕ ಬದುಕನ್ನು ಕೃತಿ ಮತ್ತೆ ಬದುಕನ್ನು ಸಾಗಿಸುತ್ತಿದ್ದಾನೆ ಎನ್ನುವುದನ್ನು ಮನೋಜ್ಞವಾಗಿ ‘ಮೌನದ ಮನೆ’ ಯಲ್ಲಿ ಚಿತ್ರಿಸಿದ್ದಾರೆ.
‘ಸತ್ತವರ ಸಂಭಾಷಣೆ’ ಯಲ್ಲಿ ಮನುಷ್ಯನಿಗೆ ಗಾಳಿ, ನೀರು, ಆಹಾರದಂತೆ ಸ್ವತಂತ್ರ ಬದುಕು ಮುಖ್ಯ. ಅವನಿಗೆ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಆದರೆ ಗುಲಾಮಗಿರಿಯಲ್ಲೇ ಸಾರ್ಥಕತೆಯನ್ನು ಕಂಡು ಅದನ್ನು ಚಟವಾಗಿಸಿಕೊಂಡಿದ್ದಾನೆ. ಸಾವಿನಲ್ಲಿ ಮತ್ತು ಹುಟ್ಟಿನಲ್ಲಿ ಎಲ್ಲರೂ ಸಮಾನರು. ಹಾಗಾಗಿ ಎಲ್ಲರೂ ಸಮಾನರಾಗಿ ಬದುಕಬೇಕು ಎಂದರೆ, ಕೊನೆಯ ಕತೆ’ಯಲ್ಲಿ ನಾವು ಬರೆದ ಕಥೆಗಳು ಯಾರನ್ನೂ ತಲುಪದೆಯೂ ಅದಕ್ಕೆ ಅಕಾಡೆಮಿ ಪ್ರಶಸ್ತಿಗಳು ಬರುವುದಾದರೆ ಅದರಿಂದ ಲಾಭವೇನು ಎಂದು ಪ್ರಶ್ನಿಸುವ ಲೇಖಕರು, ಸಾಹಿತ್ಯ ಒಂದು ಸಮಾಜೋದ್ಧಾರಕ ಚಳವಳಿ ಎಂಬ ಡಾಂಭಿಕತೆಯನ್ನು ಬಿತ್ತಲಾಗುತ್ತಿದೆ. ಆದರೆ ಸಾಹಿತ್ಯ ಕೇವಲ ಕಣ್ತೆರೆಸುತ್ತದೆ ಅಷ್ಟೆ ಎನ್ನುತ್ತಾರೆ.
ಇಲ್ಲಿನ ಕಥೆಗಳೆಲ್ಲ ಹೃದಯವನ್ನು ತಟ್ಟುವಂತಹವು, ಸತ್ವಯುತ ಭಾಷೆಯವು. ಕತೆಗಳ ಕುಸುರಿ ಮೆಚ್ಚುವಂತದ್ದು. ಕಥಾವಸ್ತು ಸಮಕಾಲೀನ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ಹೊಸದನ್ನು ಹೇಳುವ ಜಾಣ್ಮೆ ಇಲ್ಲಿನ ವಿಶೇಷ. ಕಥೆಯ ಪಾತ್ರಗಳೆಲ್ಲ ನಮ್ಮ ಸುತ್ತಮುತ್ತಲಿನ ಜಗತ್ತಿನೊಳಗಿನವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಕಥಾ ಸಂಕಲನ ಓದುಗನನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
- ದತ್ತಾತ್ರೇಯ ಹೆಗಡೆ.
...................................

Comments
Post a Comment