ಮುಳುಗಡೆ ಸಂತ್ರಸ್ತರ ಸಂಕಟ ಬಿಚ್ಚಿಡುವ
‘ದ್ವೀಪ’
‘ದ್ವೀಪ’ ಇದು ತಣ್ಣಗೆ ಮೈಯಲ್ಲಿ ಕುಳಿತಿದ್ದ ತನ್ನದೇ ಲಯ ಮತ್ತು ಗತಿ ನಿರ್ಮಿಸಿಕೊಂಡಿದ್ದ ಮಲೆನಾಡಿನ ಒಂದು ಹಳ್ಳಿಯ ಜನರ ಜೀವನದಲ್ಲಿ ನಿರ್ಮಾಣವಾಗುವ ಹಾಗೂ ಮತ್ತೊಂದು ಜಗತ್ತಿನ ಬೇಡಿಕೆ ಉಂಟುಮಾಡುವ ಅಲೆಗಳನ್ನು ಕುರಿತಾದ ಸರಳ ಕಾದಂಬರಿ. ನಾ. ಡಿಸೋಜಾ ಇದರ ಲೇಖಕರು. ಈ ಕಾದಂಬರಿ ಅತ್ಯಂತ ಪ್ರಸಿದ್ಧವಾದುದು, ಸಿನಿಮಾವಾಗಿ ನಿರ್ಮಾಣವಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ, ಸ್ವರ್ಣಪದಕ ಗಳಿಸಿದೆ.
‘ದ್ವೀಪ’ದ ಕಥಾ ವಸ್ತು ಸಾಗರ ತಾಲೂಕು ತಾಳಗುಪ್ಪ ಹೋಬಳಿಯ ಅರಳಗೋಡು ಗ್ರಾಮದ ಹೊಸಮನೆಹಳ್ಳಿಯದು. ಈ ಗ್ರಾಮ ಲಿಂಗನಮಕ್ಕಿ ಡ್ಯಾಮ್ ತಲೆ ಎತ್ತಿದ ಸಂದರ್ಭದಲ್ಲಿ ಮುಳುಗಡೆ ಪ್ರದೇಶವಾಗುತ್ತದೆ. ಆ ಊರಿನಲ್ಲಿ ಇರುವುದು ೫ ಮನೆ ಮಾತ್ರ. ೪ ಮನೆಯವರಿಗೆ ಮಾತ್ರ ಪರಿಹಾರ ದೊರೆತು ಊರನ್ನು ಬಿಟ್ಟು ಸರಕಾರ ಬೇರೆಡೆ ಕೊಟ್ಟ ಸ್ಥಳಕ್ಕೆ ತೆರಳುತ್ತಾರೆ. ಮನೆಯನ್ನು ಬಿಡುವುದು ಅನಿವಾರ್ಯವಾದರೂ ತಮಗೆ ಪರಿಹಾರ ಬರದೇ ಇರುವ ಕಾರಣಕ್ಕೆ ಮತ್ತು ಇರುವ ಜಮೀನನ್ನು ಹೇಗಾದರೂ ಉಳಿಸಿಕೊಳ್ಳುವ ಸಂಬಂಧ ಗಣಪಯ್ಯ ಮತ್ತು ಅವರ ಪತ್ನಿ ನಾಗವೇಣಿಯ ಕುಟುಂಬ ಅಲ್ಲಿಯೇ ಉಳಿಯುತ್ತಾರೆ. ಇದರ ಜೊತೆಗೆ ಆ ನೆಲದ ಬಂಧ ಅವರನ್ನು ಕಟ್ಟಿಹಾಕುತ್ತದೆ. ಮುಳುಗಡೆ ಪರಿಹಾರ ಕಚೇರಿಯವರ ದಿವ್ಯ ನಿರ್ಲಕ್ಷದಿಂದ ಇಡೀ ಕುಟುಂಬ ತೊಂದರೆ ಪಡುವಂತಾಗುತ್ತದೆ.
ಮಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕುವ, ಡ್ಯಾಮಿನ ನೀರು ಉಕ್ಕೇರಿ ಊರೊಳಗೆ ನುಗ್ಗಿ ಹೊಲ-ಗದ್ದೆ ನಾಶವಾಗಿ, ಪ್ರವಾಹದಲ್ಲಿ ಹೆಂಡತಿ ಮತ್ತು ಕೆಲಸದವನನ್ನು ಕಳೆದುಕೊಂಡು ತಾನು ಹುಲಿಗೆ ಆಹಾರವಾಗುವ ಸನ್ನಿವೇಶವನ್ನು ಕಟ್ಟಿಕೊಡುವ ಮೂಲಕ ನಮ್ಮ ಭ್ರಷ್ಟ ವ್ಯವಸ್ಥೆಯ ಚಿತ್ರಣವನ್ನು ಅತ್ಯಂತ ಸುಂದರವಾಗಿ ಲೇಖಕರು ಇದರಲ್ಲಿ ಚಿತ್ರಿಸಿದ್ದಾರೆ.
ಹೊಸಹಳ್ಳಿಯ ಗಣಪಯ್ಯನ ಮನೆಯ ಸುತ್ತ ನೀರು ನಿಂತು ಅದೊಂದು ದ್ವೀಪವಾಗುತ್ತದೆ. ಭೀಕರ ಮಳೆಯ ಹೊಡೆತಕ್ಕೆ ನೀರು ಒಂದೊಂದೇ ಭಾಗವನ್ನು ಮುಳುಗಿಸುತ್ತ ಬಂದಂತೆ ಆ ಭಾಗದಲ್ಲಿದ್ದ ಕಾಡು, ಪ್ರಾಣಿಗಳೆಲ್ಲ ಗಣಪಯ್ಯನ ಮನೆಯ ಸುತ್ತಮುತ್ತ ಬರುತ್ತವೆ. ಇಲ್ಲಿಯೇ ಉಳಿಯಬೇಕೆಂಬ ತನ್ನ ನಿಶ್ಚಿತವಾದ ನಿರ್ಧಾರದೊಂದಿಗೆ ತನ್ನನ್ನೇ ತಾನು ದುರಂತದತ್ತ ತಳ್ಳಿಕೊಳ್ಳುವುದನ್ನು ಇಲ್ಲಿ ಕಾಣಬಹುದು.
ಈ ಕಥೆಯು ನಿರೀಕ್ಷಿತವಾಗಿ ಊಹಿಸಬಲ್ಲ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಮುಳುಗಡೆ ಆಗಲಿರುವ ಪ್ರದೇಶದಲ್ಲಿ ಎಲ್ಲರಿಗೂ ಪರಿಹಾರ ಸಿಕ್ಕಿದರೂ ಗಣಪಯ್ಯನ ಕುಟುಂಬದವರಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ ಎನ್ನುವ ವಿಷಯದಿಂದ ಈ ಕಾದಂಬರಿ ಆರಂಭವಾಗುತ್ತದೆ. ಗಣಪಯ್ಯ ಮತ್ತು ಅವನ ಸಮಾಜದ ನಡುವಿನ ಸಂಬಂಧ ಹೇಗಿತ್ತು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ತಾನು ಕೂಡ ಉಳಿದವರಷ್ಟೇ ಪ್ರಾಮುಖ್ಯತೆ ಹೊಂದಿದ್ದರೂ ತನಗೇಕೆ ಪರಿಹಾರ ಕೊಟ್ಟಿಲ್ಲ ಎಂದು ಆತ ಯೋಚಿಸುತ್ತಾನೆ.
ಒಬ್ಬ ವ್ಯಕ್ತಿ ಅಥವಾ ಕುಟುಂಬವನ್ನು ಹೊರಗೆ ನಿಂತು ನೋಡುವಾಗ ಆತನ ಜೀವನವನ್ನು ನಿರ್ಲಕ್ಷಿಸಿ ಲೆಕ್ಕಾಚಾರದಲ್ಲಿ ಗ್ರಹಿಸಬಹುದು. ಆದರೆ, ಒಬ್ಬ ವ್ಯಕ್ತಿಗೆ ಅಲ್ಲಿನ ಜೀವ ಜಂತುಗಳು, ಮರ- ಗಿಡ, ಗುಡ್ಡ -ಬೆಟ್ಟ, ಆಚಾರ- ವಿಚಾರ ಎಲ್ಲವೂ ಸುತ್ತಿಕೊಂಡಿರುತ್ತದೆ. ಪರಿಹಾರ ಕೊಡುವಾಗ ಇವ್ಯಾವುವೂ ಲೆಕ್ಕಕ್ಕೆ ಬರುವುದಿಲ್ಲ. ಎಷ್ಟೋ ತಲೆಮಾರುಗಳಿಂದ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ಸಾಂಪ್ರದಾಯಿಕ ರೀತಿಯಲ್ಲಿ ಜೀವನ ಕಳೆಯುತ್ತಾ ಬಂದ ಕುಟುಂಬಗಳ ನಡುವೆ ಅಣೆಕಟ್ಟು ತಲೆಯೆತ್ತಿ ಜೀವನವನ್ನು ಎರಡು ಭಾಗವನ್ನಾಗಿ ವಿಂಗಡಿಸಿ ಬಿಡುವುದನ್ನು ಇಲ್ಲಿ ಕಾಣಬಹುದು. ಪರಿಹಾರ ಪಡೆದು ಬೇರೊಂದು ರೀತಿಯ ಜೀವನ ನಡೆಸಲು ನದಿ ದಾಟಿ ಹೋಗಬಹುದಿತ್ತು. ಆದರೆ ಮಳೆ, ಪ್ರವಾಹದಲ್ಲೇ ನಿಂತು ಜೀವನ ಸಾಗಿಸುವುದು ಇನ್ನೊಂದು ಪ್ರಪಂಚ. ಪರಿಹಾರ ಸಿಗದೆ ನದಿಯ ಈಚೆಯೇ ನಿಂತ ಗಣಪಯ್ಯನ ಪ್ರಪಂಚದಲ್ಲಿ ಕಾಲ ಹಿಂದಕ್ಕೆ ಸರಿಯುತ್ತದೆ.
ಸಮಾಜದಲ್ಲಿ ಮಧುರ ಸಂಬಂಧಗಳಿಗೆ ಬೆಲೆ ಇಲ್ಲ ಎನ್ನುವುದನ್ನರಿತ ಆತನಲ್ಲಿ ಕೀಳರಿಮೆ ಬೆಳೆಯುತ್ತದೆ. ಜೀವನವನ್ನು ಕಲಕಿಸಿಕೊಳ್ಳುತ್ತಾನೆ. ಪತ್ನಿಯ ಬಗ್ಗೆ ಸದಾ ಉದ್ವಿಗ್ನನಾಗಿ ಆಕ್ರೋಶ ಹೊಂದುತ್ತಾನೆ, ಸಂಶಯಿತನಾಗುತ್ತಾನೆ, ಕಥೆಯ ಕೊನೆಯ ಭಾಗದಲ್ಲಿ ಹೆಂಡತಿಯ ಬಗ್ಗೆ ಕುತ್ಸಿತ ಭಾವನೆಯನ್ನು ಹೊಂದಿ ಮನೆ ಕೆಲಸದವನಾಗಿ ಬಂದಿದ್ದ ಕೃಷ್ಣ ಮತ್ತು ಆ ಮೂಲಕ ಇತರರು ತನಗಿಂತ ಉತ್ತಮ ಇರಬಹುದೇ ಎಂಬ ಅಳುಕು ಆತನಲ್ಲಿ ಬರುತ್ತದೆ. ಹತಾಶನಾಗುತ್ತಾನೆ.
ಮಳೆಗಾಲದಲ್ಲಿ ನೀರು ಏರುತ್ತದೆ. ಹೊಸಮನೆಹಳ್ಳಿ ದ್ವೀಪವಾಗುತ್ತದೆ. ಹಳ್ಳಿಯತ್ತ ಪ್ರಾಣಿವರ್ಗ, ಹುಲಿ, ಹಾವು ಇತ್ಯಾದಿ ವಲಸೆ ಬರುತ್ತವೆ. ಹೀಗೆ ಅವುಗಳ ಮಧ್ಯೆ ಬದುಕುವ ಕಿರಿಕಿರಿಯ ನಡುವೆ ಕೀಳರಿಮೆ, ಅವಮಾನ ಸೇರಿಕೊಂಡು ಗಣಪಯ್ಯ ಪತ್ನಿಯೊಡನೆ ರಂಪ ಮಾಡಿಕೊಳ್ಳುತ್ತಾನೆ. ಪತ್ನಿ ನಾಗವೇಣಿ ಮತ್ತು ಕೆಲಸದ ಕೃಷ್ಣನಲ್ಲಿ ವಿನಾಕಾರಣ ಹೊಟ್ಟೆಕಿಚ್ಚು ತೋರ್ಪಡಿಸುತ್ತಾನೆ. ಅವರಿಬ್ಬರ ಬಳಿ ಸಿಟ್ಟು ಮಾಡುತ್ತಾ ಹೋಗುವ ಅವನ ಪ್ರಪಂಚದಲ್ಲಿ ಕೊನೆಗೆ ಉಳಿಯುವುದು ಪಶುಸಹಜ ಭಾವನೆಗಳು ಮಾತ್ರ.
ಕಾದಂಬರಿಯ ಅಂತ್ಯದಲ್ಲಿ ಪ್ರವಾಹದ ನೀರಿನಲ್ಲಿ ಬಿದ್ದ ಹೆಂಡತಿ ನೀರಿನಲ್ಲಿ ಮುಳುಗುತ್ತಿದ್ದರೂ ಆಕೆಯನ್ನು ಹಿಡಿಯಲಾಗದೆ ಅಸಹಾಯಕನಾಗಿ ನೋಡುತ್ತಿರುತ್ತಾನೆ. ಗಣಪಯ್ಯನ ಈ ಬದಲಾವಣೆಯನ್ನು ಒಂದು ಮಾನಸಿಕ ವಿಕ್ಷಿಪ್ತತೆ ಎಂದು ಗ್ರಹಿಸಬಹುದು. ಹೆಂಡತಿಯ ತವರಿನಿಂದ ಕೆಲಸಕ್ಕಾಗಿ ಎರವಲು ತಂದ ಒಬ್ಬ (ಕೃಷ್ಣ) ಗಣಪಯ್ಯನ ಪತ್ನಿ ನಾಗವೇಣಿಯ ಮಧ್ಯೆ ಬೆಳೆಯುವ ಸಂಬಂಧ ಈತನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ದುರಂತದಲ್ಲಿ ಅಂತ್ಯವಾಗುತ್ತದೆ. ಗಣಪಯ್ಯನೂ ಸಹ ಮನೆಯ ಬಾಗಿಲಿಗೆ ಬಂದ ಹುಲಿಗೆ ಆಹಾರವಾಗುವ ಮೂಲಕ ಒಂದು ಕುಟುಂಬದ ಅಸ್ತಿತ್ವ ನಾಶವಾಗುತ್ತದೆ. ನಮ್ಮ ಭ್ರಷ್ಟ ವ್ಯವಸ್ಥೆಯ ಚಿತ್ರಣವೂ ಇಲ್ಲಿದೆ. ಅದರಿಂದ ಸಂಭವಿಸುವ ಅನಾಹುತ ಎಷ್ಟರಮಟ್ಟಿನದು ಎನ್ನುವುದಕ್ಕೆ ಗಣಪಯ್ಯನ ಕುಟುಂಬ ಸಾಕ್ಷಿಯಾಗುತ್ತದೆ. ಪರಿಹಾರ ಸಿಗದ ಒಂದೇ ಕಾರಣಕ್ಕೆ ಹಳ್ಳಿಯಲ್ಲೇ ಉಳಿದ ಇಡೀ ಕುಟುಂಬ ದುರಂತ ಅಂತ್ಯ ಕಾಣುವುದನ್ನು ನಾ. ಡಿಸೋಜಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ಕಾದಂಬರಿಯಲ್ಲಿ ಎಂತಹ ದುರ್ಬರ ಸನ್ನಿವೇಶನದಲ್ಲೂ ತಲೆ ಎತ್ತಿ ನಿಲ್ಲಬೇಕು ಎನ್ನುವ ಸಾಧ್ಯತೆಯನ್ನು ತೋರ್ಪಡಿಸುವುದು ಕಂಡುಬರುತ್ತದೆ. ನೀರು, ತುಂಬಿ ಉಕ್ಕಿದಾಗ ತಾನು ಮುಳುಗಲಿರುವುದನ್ನು ಮನುಷ್ಯ ಖಚಿತಪಡಿಸಿಕೊಳ್ಳುತ್ತಾನೆ. ಇದನ್ನು ಕಾದಂಬರಿಯೂ ಗುರುತಿಸುತ್ತದೆ.
ಇಲ್ಲಿನ ಇನ್ನೊಂದು ವಿಶೇಷವೆಂದರೆ, ಕೃಷಿಕರು ಮಳೆ ನಕ್ಷತ್ರಗಳ ಮೂಲಕ ಪ್ರಕೃತಿಯ ನಡೆಯನ್ನು ಅಳೆಯುವುದನ್ನು ಕೃತಿಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಕೃಷಿಕ ಸಮಾಜದಲ್ಲಿ ಇದು ಇಂದಿಗೂ ಬೆಳೆದು ಬಂದಿದೆ. ಕೃಷಿ ಚಟುವಟಿಕೆಗಳನ್ನು ಈ ನಕ್ಷತ್ರಗಳ ಮೂಲಕವೇ ಅಂದರೆ ಆ ನಕ್ಷತ್ರಗಳಲ್ಲಿ ಬೀಳುವ ಮಳೆ ಪ್ರಮಾಣ ಅವರಿಗೆ ಗೊತ್ತಿರುತ್ತದೆ. ಅದರ ಆಧಾರದಲ್ಲಿ ಕೃಷಿ ಕೆಲಸ ರೂಪಿಸಿಕೊಂಡಿರುತ್ತಾರೆ. ಒಂದೊಂದು ನಕ್ಷತ್ರಕ್ಕ್ಕೂ ಮಳೆಯ ಲೆಕ್ಕವಿದೆ. ಈ ನಕ್ಷತ್ರಗಳು ನೀರಿನ ಮಟ್ಟ ಏರುವುದನ್ನು ಮತ್ತು ತಾವು ಎಷ್ಟು ಪ್ರಮಾಣದಲ್ಲಿ ಮಳೆ ಹೊಯ್ಯಿಸುತ್ತೇವೆ ಎನ್ನುವುದನ್ನು ತೋರಿಸುವ ಸಾಧನಗಳಾಗಿವೆ. ಪ್ರಸ್ತುತ ಕೃತಿಯಲ್ಲಿ ಅಧ್ಯಾಯಗಳನ್ನು ನಕ್ಷತ್ರಗಳ ಹೆಸರಿನಲ್ಲಿ ತೋರಿಸಿದ್ದಾರೆ.
ಒಟ್ಟಿನಲ್ಲಿ, ಇದೊಂದು ಮುಳುಗಡೆ ಪ್ರದೇಶದವರು ದುರಂತದ ಜೀವನವನ್ನು ಎದುರಿಸುವುದನ್ನು, ಮುಳುಗಡೆ ಪರಿಹಾರ ಕಚೇರಿಯ ಅಧಿಕಾರಿಗಳ ಅಮಾನವಿಯ ನಡೆಯನ್ನು ಎತ್ತಿತೋರಿಸುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
,,,,,,,,,,,,,,,,,,,,,,,,,,,,

Comments
Post a Comment