ಕಾಡುವ ಮಲೆನಾಡಿನ ನೆನಪುಗಳ 

‘ಅಂಗೈ ಅಗಲದ ಆಕಾಶ’

............................................


‘ಅಂಗೈ  ಅಗಲದ ಆಕಾಶ’ ಇದು ತೀರ್ಥಹಳ್ಳಿಯ ನಿವೃತ್ತ ಪ್ರಾಚಾರ್ಯೆ ಎಲ್ ಸಿ ಸುಮಿತ್ರಾ ಅವರ ಸ್ಮೃತಿ ಚಿತ್ರಗಳ ಕೃತಿ.  ಅವರು ಹುಟ್ಟಿ ಬೆಳೆದ, ಮಲೆನಾಡಿನ ಆಪ್ತತೆ ಮತ್ತು ರಮ್ಯತೆ, ಗಾಢವಾಗಿ ಬಾಧಿಸಿದ ಜೀವನ ಪ್ರೀತಿ, ಮಾನವ ಸಂಬಂಧ, ಹೆಣ್ಣು-ಗಂಡಿನ ದುಡಿಮೆಯ ಘನತೆಯ ಸೂಕ್ಷ್ಮತೆಯನ್ನು ಮಲೆನಾಡಿನ ದಟ್ಟ ಅರಣ್ಯಗಳಂತೆ ಕಟ್ಟಿಕೊಟ್ಟಿದ್ದಾರೆ. ಮಲೆನಾಡಿಗರು ಈ ಕೃತಿಯನ್ನು ಓದಿದಾಗ ಲೇಖಕಿ ಹೇಳಿದ ಅನುಭವ ಕಾಡುತ್ತದೆ. ಅದೇ ಬಾಲ್ಯ,  ಅದೇ ಪರಿಸರ,  ಅದೇ ನದಿ-ತೊರೆ,  ಅದೇ ಕೃಷಿ, ಅದೇ ಹುಡುಗಾಟ,  ಅದೇ ಅಜ್ಜಿಮನೆ. ಈ ಪುಸ್ತಕ ಓದುವಾಗ ಅವೆಲ್ಲ  ಕಣ್ಣೆದುರು ಹಾದುಹೋಗುತ್ತವೆ.

  ಆಧುನಿಕತೆ ಭರಾಟೆಯಲ್ಲಿ ಅಂದಿನ ತಮ್ಮ ಬಾಲ್ಯ ಜೀವನ ಈಗ ಕಂಡುಬಾರದೆ ಇರುವುದು, ಹಿಂದಿನ ಪರಿಸರ ಮಾಯವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತ್ತಪಡಿಸುತ್ತಾ, ಗ್ರ್ರಾಮ ಭಾರತ ಹೊರಜಗತ್ತಿಗೆ ಬೆಸೆಯುತ್ತಿರುವುದನ್ನು ಹೇಳುತ್ತಾರೆ. ಸ್ಥಳೀಯ ಆಚಾರ, ಆಹಾರ, ತಿಂಡಿ, ಆಚರಣೆ, ಸಂಪ್ರದಾಯಗಳನ್ನು ನೆನಪಿಸುತ್ತಾರೆ.

ಪ್ರಸ್ತುತ ಕೃತಿಯಲ್ಲಿ ಒಟ್ಟು ೧೭ ಬರಹಗಳಿವೆ.  ಅಂದು ಬಾಲ್ಯದಲ್ಲಿ ಧರಿಸುತ್ತಿದ್ದ ಲಂಗದಿಂದ ಆರಂಭಿಸಿ ಅವುಗಳನ್ನು ಧರಿಸಿದಾಗ ಸಿಗುತ್ತಿದ್ದ ಆನಂದ, ವಿವಿಧ ನಮೂನೆಯ ಲಂಗಗಳ ವರ್ಣನೆ, ಅನುಭವವನ್ನು ಅಥವಾ ನೆನಪನ್ನು ದಾಖಲಿಸಿದ್ದಾರೆ. ‘ಕಾಫಿ ಆಯ್ತಾ’ ಎನ್ನುವ ಬರಹದಲ್ಲಿ ಮಲೆನಾಡಿಗರಿಗೆ ಬೆಳಗಾಗುವುದೇ ಕಾಫಿಯ ಜೊತೆಗೆ. ಹಳ್ಳಿಯಲ್ಲಿ ಕಾಫಿ ಚರಿಗೆ ದಿನವಿಡೀ ಇರುತ್ತಿದ್ದುದು, ಬೆಲ್ಲ ಹಾಕಿ ಮಾಡುವುದು, ಮಲೆನಾಡ ಕಾಫಿಯ ವೈಭವವಿದೆ. ‘ಪುಂಡಿಕೋಲಿನ ದೀಪಾವಳಿ’ ಯಲ್ಲಿ ದೀಪಾವಳಿಯಲ್ಲಿ ಪುಂಡಿಕೋಲಿನ ಬಳಕೆ, ಪಚ್ಚೆತೆನೆ, ಅಂಟಿಗೆ -ಪಂಟಿಗೆಯ ಸಂಪ್ರದಾಯ, ಹಬ್ಬದ ವೈಭವವನ್ನು ಹೇಳುತ್ತಾ, ಹೊಲ ಮತ್ತು ತೋಟಗಳಲ್ಲಿ ಪುಂಡಿಕೊಲಿನ ದೀಪ ನೆಡುವುದನ್ನು ನೆನಪಿಸುತ್ತಾರೆ. ಆದರೆ  ಈಗ ಇರುವ ತೋಟ-ಗದ್ದೆಗಳೆಲ್ಲ ಸೈಟುಗಳಾಗಿವೆ. ಪ್ರಕೃತಿ ವಿರುದ್ಧ್ದವಾಗಿ ನಡೆದುಕೊಳ್ಳುತ್ತಿರುವುದನ್ನು ವಿವರಿಸುತ್ತಾರೆ.

 ‘ಕಡುಬು ಏನು ಕಡಿಮೆ’ ಎಂಬ ಬರಹದಲ್ಲಿ ಮಲೆನಾಡಿನಲ್ಲಿ ಬೆಳಿಗ್ಗೆ ತಿಂಡಿಗೆ ಮಾಡುವ ಅಕ್ಕಿತರಿಯ ಸರಳವಾದ ತಿಂಡಿಯ ಪರಿಚಯ ಮಾಡಿದ್ದಾರೆ.  ಪಂಚತಾರಾ ಹೋಟೆಲ್‌ನಲ್ಲೂ ಸಿಗದ ಈ ಕಡುಬು  ಹಳ್ಳಿಗಳಲ್ಲಿ ಮಕ್ಕಳಿಂದ ಮುದುಕರವರೆಗೆ ಒಳ್ಳೆಯ ಆಹಾರ ತಿಂಡಿ. ಇದರೊಟ್ಟಿಗೆ ವಿವಿಧ ನಮೂನೆಯ ಕ ಡುಬುಗಳನ್ನು ಚಿತ್ರಿಸುತ್ತ್ತಾ ಬಿಸಿ ಕಡುಬು ಮತ್ತು ಕಾಫಿಯನ್ನು ಸಂತೋಷದಿಂದ ತಿನ್ನುವುದರ ಸಂತೋಷವನ್ನು ವಿವರಿಸಿದ್ದಾರೆ. ‘ಅಸಂಗ್ರಹ’ ಎಂಬ ಬರಹಲ್ಲಿ  ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರಾಗಿದ್ದಾಗ ಪುಸ್ತಕ ಸಂಗ್ರಹದ ಹುಚ್ಚಿರುತ್ತದೆ. ನಿವೃತ್ತಿ ನಂತರವಾಗಿ ಅದು ಅಸಂಗ್ರಹವಾಗುತ್ತದೆ. ಪುಸ್ತಕಗಳು ನಮ್ಮ ಸಂಗಾತಿ. ಜೀವನಕ್ಕೆ ಅರ್ಥ ಮತ್ತು ಬಣ್ಣ ತುಂಬುತ್ತವೆ ಎನ್ನುತ್ತಾರೆ.                                                                                                                                                                                                                                  ‘ಬಾವಿಯ ಆಳದಿಂದ’ ಇದರಲ್ಲಿ ವಿವಿಧ ನಮೂನೆಯ ಬಾವಿಗಳು,  ಬಾವಿ ಸುತ್ತ ಮಕ್ಕಳು ಸುಳಿದಾಡುತ್ತಿದ್ದು, ಹಿರಿಯರಿಂದ ಬೈಸಿಕೊಳ್ಳುವುದು, ನೀರು ಸೇದುವ  ಉಮೇದಇನ ಚಿತ್ರಣ ಕಟ್ಟಿದ್ದಾರೆ. ಈಗ ಬಾವಿಗಳ ಬದಲು ಮನೆಯಲ್ಲೆಲ್ಲ ನಲ್ಲಿ ಬಂದಿದೆ ಎನ್ನುತ್ತಾರೆ. ‘ಮಳೆಯೆಂದರೆ’ ಯಲ್ಲಿ ನಾಲ್ಕು ವರ್ಷದಿಂದ ಮಲೆನಾಡಿನಲ್ಲಿ ಮಳೆಗಾಲದ ಸ್ವಪ್ನವಾಗಿದೆ. ಮೇಘಸ್ಫೋಟದಿಂದ ಮಲೆನಾಡು ತತ್ತರಿಸುತ್ತಿರುವುದನ್ನು ಬಿಚ್ಚಿಟ್ಟಿದ್ದಾರೆ. ‘ಎಲ್ಲಿತ್ತು ಈ ಕಸ’ ಎಂಬ ಬರಹದಲ್ಲಿ ‘ನಮಗೆಲ್ಲ ಅತಿ ಭೋಗ ಹಿಡಿದಿದೆ. ಅದರ ಫಲವೇ ಈ ಕಸ’  ಎಂಬ ಕುವೆಂಪು ಮಾತನ್ನು ಉಲ್ಲೇಖ ಮಾಡುತ್ತಾ,  ಹಿಂದೆ ಯಾವುದನ್ನು ಕಷ್ಟ ಎಂದು ಎಸೆಯುತ್ತಿರಲಿಲ್ಲ. ಅವುಗಳನ್ನೆಲ್ಲ ಗೊಬ್ಬರ ಮಾಡುತ್ತಿದ್ದರು ಎನ್ನುವುದನ್ನು ನೆನೆಪಿಸುತ್ತಾರೆ.

  ಹಿಂದೆ ಯಾರಿಗಾದರೂ ಆರಾಮವಿಲ್ಲದಿದ್ದರೆ ಮಿತ್ರರು, ನೆಂಟರು ಬಂದು ಮಾತನಾಡಿಸಿಕೊಂಡು ಹೋಗುವ ಪದ್ಧತಿ ಇತ್ತು. ಈಗ ಕ್ಷೇಮ ಸಮಾಚಾರವೆಲ್ಲ ಮೊಬೈಲ್‌ನಲ್ಲಿ ಮುಗಿಯುತ್ತಿದೆ. ಸಂಕ್ರಾಂತಿಯು ನೂರೆಂಟು ನೆನಪುಗಳನ್ನು ಹೊತ್ತು ತರುತ್ತಿದೆ. ಕಬ್ಬಿನ ಹಾಲನ್ನು ಕುಡಿಯುವುದು, ಕಬ್ಬು ತಿನ್ನುವುದು, ಶಾಲೆಯಿಂದ ಬರುವಾಗ ಆಲೆಮನೆಗೆ ಹೋಗುವ ನೆನಪು ಕಾಡುತ್ತಿದೆ ಎನ್ನುತ್ತಾರೆ. ಪ್ರತಿ ಸಂಕ್ರಾಂತಿಗೆ ಆಪ್ತರು ಎಳ್ಳು, ಸಕ್ಕರೆ ಅಚ್ಚು, ಸಿಹಿ ತಿಂಡಿಗಳ ಪಾರ್ಸೆಲ್ ಕಳುಹಿಸುತ್ತಿದ್ದರು. ಈಗ ಅದು ಯಾವುದೂ ಇಲ್ಲ. ಹಬ್ಬ, ಆಚರಣೆ ಎಂದರೆ ಬಿರುಕು ಮೂಡಿಸುವ ಸಂಗತಿಗಳು ಆಚರಣೆಗೆ ಬರುತ್ತ್ತಿವೆ ಎನ್ನುವ ಮೂಲಕ ಪ್ರಸ್ತುತದ ಸಂಕೀರ್ಣ ಸ್ಥಿತಿಯನ್ನು ವಿವರಿಸುವುದರ ಜೊತೆಗೆ ಸಂಕ್ರಮಣವನ್ನು ಚಲನಶೀಲ ಸಮಾಜದ ಸಂಕೇತವಾಗಿ ಪರಿಗಣಿಸಬೇಕು ಎಂಬ ಸೂಚನೆ ಕೊಡುತ್ತಾರೆ.

ಶಾಲೆಯಿಂದ ಬರುವಾಗ ವಿವಿಧ ರೀತಿಯ ಮರಗಳನ್ನು ಹಣ್ಣನ್ನು ಕಿತ್ತು ತಿನ್ನುವುದು, ಅಜ್ಜಿ ಮನೆ ಮತ್ತು ದೊಡ್ಡಮ್ಮನ ಮನೆ, ಶಾಲೆಯಿಂದ ಬರುವಾಗ  ಅಲ್ಲಿರುವ ಮರಗಳನ್ನು ಹತ್ತಿ ಹಣ್ಣು ಕೀಳುವುದು, ಹೂವುಗಳು ಬಿದ್ದುದನ್ನು ತಂದು ಮಾಲೆ ಮಾಡುವುದು, ಅಂಗೈ ಅಗಲದ ಜಾಗದಲ್ಲೇ ಸಾಕಷ್ಟು ಗಿಡಗಳನ್ನು ಬೆಳೆಸುತ್ತಿರುವುದು, ನಮ್ಮ ಅಗತ್ಯಕ್ಕೆ ತಕ್ಕಂತೆ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳಬೇಕು ಎನ್ನುತ್ತಾರೆ.

ಒಟ್ಟಿನಲ್ಲಿ,  ಊರಿನ, ಬಾಲ್ಯದ  ನೆನಪುಗಳು, ತಾನು ಕಲಿತ ಶಾಲೆ  ಪರಿಸರ, ಅಲ್ಲಿನ ಕೆಲವು ಶಿಕ್ಷಕರ ವರ್ತನೆ, ಕಷ್ಟಪಟ್ಟು ಶಾಲೆಗೆ ಹೋಗುತ್ತಿದ್ದ ದಿನ ನೆನಪಿಸಿಕೊಳ್ಳುತ್ತಾ, ಮಲೆನಾಡಿನ ಸುಂದರ ಚಿತ್ರಣವನ್ನು ಈ ಕೃತಿಯಲ್ಲಿ ನೇಯ್ದಿದ್ದಾರೆ. ಒಂದು ಕಾಲದ ಜೀವನಶೈಲಿಯ ಜೀವಂತ ಚಿತ್ರಣವನ್ನು ಹೇಳುವುದರ ಜೊತೆಗೆ ಈಗ ನಮ್ಮ ಜೀವನದೃಷ್ಟಿ ಹೇಗಾಗಿದೆ ಎನ್ನುವುದನ್ನೂ ತಿಳಿಸಿಕೊಟ್ಟಿದ್ದಾರೆ. ಮಲೆನಾಡಿನ ನೆನಪಿನ ಚಿತ್ರಗಳ ಕೃತಿ ಇದಾಗಿದೆ.

,,,,,,,,,,,,,,,,,,,,,,,,,,


Comments

Popular posts from this blog