ಗತಬಾಳ ಚಿತ್ರ ಬಿಚ್ಚಿಡುವ
‘ಚಲನೆ’


‘ಚಲನೆ’ ಈ ಕವನಸಂಕಲನವನ್ನು ಪ್ರೊ. ಎಸ್ ಜಿ ಜೈನಾಪುರ ರಚಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಜೈನಾಪುರ ಸಾಹಿತಿಯೂ ಹೌದು. ಈ ಕೃತಿಯಲ್ಲಿ ಅವರು ಒಂದು ತೀವ್ರ ಭಾವಕ್ಕೆ ಸ್ಪಷ್ಟವಾದ ಅಭಿವ್ಯಕ್ತಿಯನ್ನು ಕೊಟ್ಟಿದ್ದಾರೆ. ಇಲ್ಲಿನ ಕವನಗಳು ತೀರಾ ಸರಳವಾದವು. ಕವಿಯ ಮನಸ್ಸು ಹಲವು ಸ್ಥಳಗಳಲ್ಲಿ ಇಲ್ಲಿ ಕೆಲಸ ಮಾಡಿರುವುದನ್ನು ಕಾಣಬಹುದು.

 ಅಮೂರ್ತದ ಕಡೆಗೆ ಇಲ್ಲಿನ ಕವನಗಳು ಕೈಚಾಚಿವೆ. ಇಲ್ಲಿನ ಕಾವ್ಯಗಳಲ್ಲಿ  ಸಂಕೀರ್ಣತೆ ಇಲ್ಲ, ಆದರೆ ತಾತ್ವಿಕತೆ ಇದೆ. ಚಿಂತನೆ ಇರುವುದನ್ನು ಕಾಣಬಹುದು.   ಸಂಕಲನದಲ್ಲಿ ಕವಿಯು ಕವನಗಳನ್ನು ಆರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಅವುಗಳೆಂದರೆ, ಪ್ರೇಮ ಕವನಗಳು, ಕೌಟುಂಬಿಕ ಕವನಗಳು, ವ್ಯಕ್ತಿ ವಿಶ್ಲೇಷಣ ಕವನಗಳು, ಸಾಂದರ್ಭಿಕ ಕವನಗಳು, ಚಿಂತನ ಪರ ಕವನಗಳು ಮತ್ತು ಅನುವಾದಿತ ಕವನಗಳು. ಒಟ್ಟು ೫೨ ಕವನಗಳನ್ನು ಈ ಸಂಕಲನ ಒಳಗೊಂಡಿದೆ.  

ಇಲ್ಲಿನ ಪ್ರೇಮ ಕವನಗಳು ಒಂದು ಉದಾತ್ತ ಕಲ್ಪನೆಯನ್ನು ಹೊಂದಿವೆ, ಮಾಗಿದ ಪ್ರೇಮದ ದರ್ಶನವಿದೆ. ಯೌವ್ವನದ ಪ್ರೇಮ ಬೆರೆತಿದೆ. ಕೌಟುಂಬಿಕ ಕವನಗಳಲ್ಲಿಯೂ ಆತ್ಮೀಯತೆ ಇದೆ, ಪ್ರೀತಿ ಬದುಕಿಗೆ ಆಧಾರ ಎನ್ನುವ ಅರಿವಿದೆ. ಪ್ರೀತಿ ಬದುಕನ್ನು ಪಾವನಗೊಳಿಸುತ್ತದೆ ಎಂಬ ಭಾವ ಇದೆ. ಸಾರ್ಥಕಕಂಡ ಜೀವಕ್ಕೆ ಪೂಜ್ಯ ಭಾವನೆ ಇದೆ, ಅನುಭವದ ನೆಲದಲ್ಲಿ, ಪ್ರೀತಿಯ ಗಾಳಿಯಲ್ಲಿ, ಆದರ್ಶದ ಬೆಳಕಿನಲ್ಲಿ ಬೆಳೆದ ಚೇತನ ಇಲ್ಲಿ ನಿರಾಡಂಬರವಾದ ಜೀವನದೃಶವನ್ನು ಕಂಡುಕೊಳ್ಳುವಂತೆ ಮಾಡಿದೆ .

ಕೌಟುಂಬಿಕ ಕವನಗಳಲ್ಲಿ ವೈಯಕ್ತಿಕತೆಯು ಸಾರ್ವತ್ರಿಕ ಸಮಸ್ಯೆ, ತತ್ವದತ್ತ ಎಳೆದು ತಂದಿರುವುದನ್ನು ಕಾಣಬಹುದು. ವಿದೇಶ ಪ್ರವಾಸದಲ್ಲಿ ಮತ್ತು ಅಲ್ಲಿನ ವಾಸ್ತವ್ಯದಲ್ಲಿ ಕವಿ ಮನಸ್ಸು ತನ್ನದೇ ಆದ ಸಾಂದರ್ಭಿಕ ತತ್ವ ಅನ್ವೇಷಣೆಯನ್ನು ಅನುಸಂಧಾನವನ್ನು ನಡೆಸಿರುವುದನ್ನು ಮನೋಹರವಾಗಿ ಇಲ್ಲಿ ಚಿತ್ರಿಸಿದ್ದಾರೆ. ಒಟ್ಟಿನಲಿ, ಇಲ್ಲಿನ ಕವನಗಳು ಸದಾ ಸೌಂದರ್ಯವನ್ನು, ಕಲೆಯನ್ನು ಆರಾಧಿಸುವ ಸುಸಂಸ್ಕೃತ ಮನಸ್ಸು ಹತ್ತು ಮುಖಗಳಲ್ಲಿ ಸ್ಪಂದಿಸಿರುವುದನ್ನು ಕಾಣಬಹುದು.

ಪ್ರೇಮ ಕವನಗಳಲ್ಲಿ ‘ಪ್ರೇಮ’ ಎನ್ನುವ ಕವನದಲ್ಲಿ ಎರಡು ಆತ್ಮಗಳ ಅಮರ ಮಿಲನ. ಅದು ಪರಸ್ಪರರ ಬಂಧನವಲ್ಲ. ಏಕತ್ವದ ಸಂಭ್ರಮ ಅಲ್ಲ. ವಿಧಾತನ ವಿಧಾನ ಎನ್ನುವುದನ್ನು ಸಾರಿದ್ದಾರೆ. ‘ಅಭೂತ’ ದಲ್ಲಿ ಪ್ರಾಯದ ಮನಸ್ಸಿನ ಚಿತ್ರಣವಿದೆ. ಕಣ್ಣುಗಳ ತಾಳಕ್ಕೆ ಹುಚ್ಚನಾಗುವ ಮನುಷ್ಯ ಮೃದು ಮತ್ತು ಮಧುರ ನಗೆಯ   ಅಮಲು ಹೊಂದುತ್ತಾನೆ. ಎದೆಗೆ ಬಿಗಿದ ಸರಪಳಿ ಬಿಚ್ಚಿದಾಗ ಹುಚ್ಚುಚ್ಚಾಗಿ ಹಾರಾಡುತ್ತಾನೆ. ಮನದಲ್ಲಿನ ತುಡಿತದಿಂದ ಸಿಡಿತ ಉಂಟಾಗುತ್ತದೆ. ತಿಳಿಯದೆ ಇವುಗಳನ್ನೆಲ್ಲ ಮಾಡಿದಾಗ ಆತನಿಗೆ ವಿದ್ಯುತ್ತಿನ ಶಾಕ್ ಹೊಡೆದಂತಾಗುತ್ತದೆ ಎನ್ನುವುದನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

 ‘ಬಾಳ ಪ್ರೇಮ’ ಎಂಬ ಪ್ರೇಮದಾಂಪತ್ಯದ ಕವನದಲ್ಲಿ ಮನದ ಸೌಂದರ್ಯ/ ದೇಹ ಕಾಂತಿಗಿಂತ/ ಮಿಗಿಲು/ ಜೀವಿಸಲು ಪ್ರತಿಕ್ಷಣವ/ ನಮ್ಮ ಚೈತನ್ಯದ/ ಮುಗಿಲು/ ಎನ್ನುತ್ತಾ ಬಾಳಿನಲ್ಲಿ ಅರ್ಥಹೀನತೆಯ ದಾಳಿ ಆಕ್ರಮಿಸಿದರೆ ಬಿರುಗಾಳಿ ಏಳುತ್ತದೆ. ಆದರೆ ದಂಪತಿಗಳು ಸತ್ಯವನ್ನು ನೆನೆಸಿಕೊಂಡಾಗ ಅದು ವಿರಹವನ್ನು ಮರೆಸಿ ಹೊಸ ಚೈತನ್ಯವನ್ನು ಕೊಡುತ್ತ ಬದುಕಬೇಕೆಂಬ ಛಲವನ್ನು ಹುಟ್ಟಿಸುತ್ತದೆ. ಹೀಗೆ ದಾಂಪತ್ಯ ಸುಖದ ಬುಗ್ಗೆ, ಸ್ವರ್ಗದ ಸರೋವರವಾಗಲಿ ಎಂದು ಹಾರೈಸುತ್ತಾರೆ.

 ಕೌಟುಂಬಿಕ ಕವನದಲ್ಲಿನ ‘ಹಕ್ಕಿ ಮತ್ತು ಆಲದ ಮರ’ ದಲ್ಲಿ ಹಕ್ಕಿ ಮರಿಯೊಂದು ಮೊಟ್ಟೆ ಒಡೆದು ಹೊರಗೆ ಬಂದು ಹಾರಲು ಕಲಿಯುವುದು, ಕತ್ತಲೊಡನೆ ಸೆಣೆಸುವುದು, ಮಳೆ -ಬಿರುಗಾಳಿಗಳನ್ನು ಎದುರಿಸಿದ ಸಂದರ್ಭವನ್ನು ಚಿತ್ರಿಸಿದ್ದಾರೆ. ಬಾಲ್ಯದಲ್ಲಿ ಆನಂದವನ್ನು ಮನುಷ್ಯ ಪಡೆಯುತ್ತಾನೆ. ನಂತರ ದೂರ ತೆರಳುತ್ತಾನೆ. ನಂತರ ತಿರುಗಿ ಬಂದಾಗ ತನ್ನ ಬೆಚ್ಚಗಿನ ಗೂಡು ಮಾಯವಾಗಿರುವುದನ್ನು ಕಂಡು ದುಃಖ ಉಮ್ಮಳಿಸಿ ಬರುತ್ತದೆ. ತಾನು ತಬ್ಬಲಿಯಾದ ಅನುಭವವನ್ನು ಹಕ್ಕಿ ಮರಿಯು ಅನುಭವಿಸುವುದನ್ನು ಇಲ್ಲಿ ಉಪಮೇ ಮೂಲಕ ವಿವರಿಸಿದ್ದಾರೆ.

 ವ್ಯಕ್ತಿ ವಿಶ್ಲೇಷಣ ಕವನದ ‘ಬೆಳ್ಳಿಮೋಡ’ ದಲ್ಲಿ ಮಿಂಚಿಹೋದ ಬಾಲ್ಯದ ಸುಖದ ಬಂಧನವನ್ನು ಮೆಲುಕು ಹಾಕುವ ಮನುಷ್ಯನ ಜಾಯಮಾನವನ್ನು ತೋರಿಸಿಕೊಟ್ಟಿದ್ದಾರೆ. ಇಂದು ಅದು ಬರದು ಕನಸು ಮರಳಿ/ ಕಳಕೊಂಡ ಕಾಲ ಗರ್ಭದ ಮುತ್ತುಗಳು/ ಪುನಃ ಪಡೆಯುವ ಆಸೆ- ಕನವರಿಕೆ/ ಬೆಳ್ಳಿಮೋಡ ಬರೆದು ಮತ್ತೆ ಹೊರಳಿ/ ಎನ್ನುತ್ತಾ ಮಿಂಚಿಹೋದ ಬಾಲ್ಯವನ್ನು ಕಟ್ಟಿಕೊಟ್ಟಿದ್ದಾರೆ. ‘ಬಾಳ ಮರ್ಮ’ ಎನ್ನುವ ಕವನದಲ್ಲಿ ತಮ್ಮ ಮಗನು ವಿದೇಶಕ್ಕೆ ತೆರಳಿದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಕಣ್ಣೆದುರು ಬೆಳೆದ ಮಗ ಎರಡು ದಶಕಗಳನ್ನು ಕಳೆದು, ನೋಡನೋಡುತ್ತಿದ್ದಂತೆ ಬೆಳೆದು, ಸಾಧಿಸಬೇಕೆಂಬ ಛಲದಿಂದ ಸಪ್ತಸಾಗರ ದಾಟಿ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವುದನ್ನು ಚಿತ್ರಿಸಿದ್ದಾರೆ. ಕಾಡಿದೆ ಆಗಾಗ ನಿನ್ನ ಬಿಂಬ/  ಜ್ಞಾಪಿಸಿದೆ ನನ್ನ ವಯವ ತುಂಬ/ ಓಡುತಿದೆ ಕಾಲ ನಿರ್ದಯದಿ/ ಎಲ್ಲೇ ಇರು ಸದಾ ಸುಖದಿ/ ಎಂದು ಹಾರೈಸುತ್ತಾರೆ.

‘ಹುಟ್ಟು- ಸಾವು’ ಕವನದಲ್ಲಿ’ ಬಾಳ ಪಯಣದಿ/ ಸಾವೊಂದು/ ಕೊನೆಯ ನಿಲ್ದಾಣ/ ಹುಟ್ಟು ಮೊದಲ ನಿಲ್ದಾಣ/ ಎನ್ನುವ ಕವಿ, ನಾವು ಈ ಪಯಣದಲ್ಲಿ ಜ್ಞಾನ, ಅನುಭವದ ಮೂಲಕ ಸಾಗಬೇಕು. ಏಕಾಂಗಿಯಾಗಿ ಭೂಮಿಗೆ ಬಂದು ಏಕಾಂಗಿಯಾಗಿ ನಿರ್ಗಮಿಸುತ್ತೇವೆ. ಈ ಮಧ್ಯದ ನಾಟಕವು ಜೀವನವಾಗಿದೆ ಎಂದು ವಿವರಿಸುತ್ತಾರೆ. ‘ಅರಿವು’ ಎಂಬ ಕವನದಲ್ಲಿ  ನಮ್ಮ ಅಂತರಂಗವನ್ನು ತೆರೆದಾಗ ಮಾತ್ರ ನಮ್ಮ ಬಿಂಬ ಕಾಣುತ್ತದೆ. ದಿವ್ಯಜ್ಯೋತಿಯ ಬೆಳಕು ಕಂಡುಬರುತ್ತದೆ. ನಮ್ಮಲ್ಲಿ ತುಂಬಿರುವ ಭ್ರಮೆ ಕಳಚಿ ಹೋಗುತ್ತದೆ. ಬಾಳಪಥದ ದರ್ಶನವಾಗುತ್ತದೆ ಎಂಬ ಜೀವನ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.

 ‘ಚಲನೆ’ ಈ ಕೃತಿಯ ಹೆಸರು. ಚಲನೆ ಎಂಬ ಕವನದಲ್ಲಿ ಗತಬಾಳ ಚಿತ್ರ ಬಿಚ್ಚಿತು ಸುರುಳಿ/ ತಿಳಿಯದೆ ಮಂಜು ಪ್ರಜ್ಞೆಯ ನುಸುಳಿ/ ಮಿಂಚಿದ ಕಾಲ -ರಥದ ಗಾಲಿ/ ಇಂದು ನಾಳೆಯ ಕದವ ಮೆಟ್ಟಿ/ ವಸಂತಗಳುರುಳಿ ಉರುಳಿ/ ಎನ್ನುತ್ತಾ ಚಲನೆ ಬಾಳಿನ ಲಕ್ಷಣ. ಬಾಳ ಪಯಣದಲ್ಲಿ ಆಗಾಗ ಚಿಂತನೆಯನ್ನು ಮಾಡಿಕೊಳ್ಳಬೇಕು ಎನ್ನುವುದನ್ನು ಸೂಚಿಸುತ್ತಾರೆ.

ಒಟ್ಟಾರೆಯಾಗಿ,  ಈ ಕವನ ಸಂಕಲನದಲ್ಲಿನ ಎಲ್ಲಾ ಕವನಗಳು ನಮ್ಮ ಬದುಕು, ಚಿಂತನೆಯತ್ತ್ತಲೇ ಹೆಚ್ಚಾಗಿ ಹೊರಳಿರುವುದನ್ನು ಕಾಣಬಹುದು. ಅತ್ಯಂತ ಸುಧಾರಿತ ಭಾಷೆಯಲ್ಲಿ ಜೀವನ ಮರ್ಮವನ್ನು ಕಟ್ಟಿಕೊಟ್ಟಿದ್ದಾರೆ, ದಿಗ್ಭ್ರಮೆಗೊಳಿಸುವ ಅನುಭವ, ಮಾಗಿದ ಅನುಭವ ಎರಡೂ ಇಲ್ಲಿದೆ. ಇವುಗಳನ್ನು ಎದುರಿಸಿ ತಿಳುವಳಿಕೆ ಕಂಡುಕೊಳ್ಳಬೇಕೆನ್ನುವುದನ್ನು ವಿಶೇಷವಾಗಿ ಈ ಕವನ ಸಂಕಲನ ಸಾರುತ್ತದೆ. ಬದುಕನ್ನು ಗಂಭೀರವಾಗಿ ತೆಗೆದುಕೊಂಡಾಗ ಸಿಕ್ಕ ಸಿಹಿ -ಕಹಿಗಳು ಇಲ್ಲಿವೆ. ಬಾಳ ಚಿಂತನೆಯಿಂದ ಒಂದು ನೆಲೆಯನ್ನು ಕಂಡ, ಪ್ರೀತಿ ಸ್ನೇಹಗಳನ್ನು ಗೌರವಿಸುವ ಕೃತಿ ಇದಾಗಿದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

............................                                                                                                                                                                                                                                                                                                                                                    


Comments

Popular posts from this blog