ಮಕ್ಕಳೊಡನೆ ಕಲಿಯುತ್ತಾ ಬದುಕುವ ಅನುಭವಗಳ ಹೂರಣ
‘ಮಿಸ್ಸಿನ ಡೈರಿ’
“ಮಿಸ್ಸಿನ ಡೈರಿ” ಶಿಕ್ಷಕಿ ಮೇದಿನಿ ಕೆಸವಿನಮನೆ ಅವರ ಅಪರೂಪದ ಅನುಭವಗಳ, ವಿಶಿಷ್ಟ ಶೈಲಿಯ, ಧನಾತ್ಮಕ ಚಿಂತನೆಗಳೆಡೆ ಮುಖಮಾಡಿರುವ ಬರಹಗಳ ಕೃತಿ. ಶಿಕ್ಷಕರಾದವರು ತಮ್ಮ ಅನುಭವಗಳನ್ನು ಹೇಗೆ ಕಟ್ಟಿಕೊಡಬಹುದೆನ್ನುವುದಕ್ಕ ಇದು ಉದಾಹರಣೆ. ಮಕ್ಕಳ ಪ್ರೀತಿ- ಮುಗ್ಧತೆ, ಅವರೊಡನೆ ಕಳೆದ ಕಾಲ, ಕಾಡಿದ ಪರಿ, ಕಲಿಸಿದ ಪಾಠ, ಕಲಿತ ಪಾಠಗಳೊಂದಿಗೆ ಸವಿಯಾಗಿ ಬರಹರೂಪಕ್ಕಿಳಿಸಿದವರು ವಿರಳಾತಿ ವಿರಳ. ಅವರ ಕುತೂಹಲಕ್ಕೆ ಕಿವಿಯಾಗಿ, ಆಸಕ್ತಿಗೆ ದನಿಯಾಗಿ, ತಾಳ್ಮೆಯಿಂದ ಅವರೊಡನೆ ಬೆರೆಯುವ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಅತ್ಯಂತ ಕುಗ್ರಾಮದ ಸರಕಾರಿ ಶಾಲೆಯಲ್ಲಿ ಟೀಚರ್ ಆಗಿ, ಮಕ್ಕಳ ಪಾಲಿನ ಮಿಸ್, ಗೆಳತಿ, ತಾಯಿಯಾಗಿ, ಪ್ರೀತಿ- ಶಿಕ್ಷೆ- ಭಯದೊಂದಿಗೆ ಅವರನ್ನು ಮಕ್ಕಳಂತೆ ಬೆಳೆಸುವ ಜವಾಬ್ದಾರಿ ಹೊತ್ತ ಶಿಕ್ಷಕಿ ಬಾಲ್ಯವೆನ್ನುವುದು ಸಮೃದ್ಧವಾಗಿದ್ದರೆ ಬದುಕಿನಲ್ಲಿ ಭಾವ ಎಂದೂ ಬತ್ತುವುದಿಲ್ಲ ಎಂಬ ವಿಶ್ವಾಸ ಹೊಂದಿದವರು.
ಹಳ್ಳಿಯ ಮುಗ್ಧ ಮಕ್ಕಳ ದೈನಂದಿನ ಆಡುಮಾತುಗಳನ್ನು ಅವರದೇ ಧಾಟಿಯಲ್ಲಿ ನಿರೂಪಿಸುತ್ತಾ, ಶಾಲೆಯಲ್ಲಿ ನಡೆಯುವ ಸಣ್ಣ ಘಟನೆಗಳನ್ನೂ ಮನಸೆಳೆಯುವ ರೀತಿಯಲ್ಲಿ “ಮಿಸ್ಸಿನ ಡೈರಿ”ಇದೆ. ಅತ್ಯಂತ ಸರಳ ಮತ್ತು ಆಕರ್ಷಕ ಭಾಷೆಯಲ್ಲಿ ಇಲ್ಲಿನ ಬರಹಗಳನ್ನು ಕಟ್ಟಿಕೊಡುವ ಲೇಖಕಿ, ಬಾಲ್ಯದ ಮುಗ್ಧತೆಯನ್ನೂ, ಸಾಮಾಜಿಕ ಜವಾಬ್ದಾರಿಯನ್ನೂ ಜೊತೆಜೊತೆಗೇ ಸವಿಯುತ್ತ ಅದನ್ನು ಕೃತಿರೂಪಕ್ಕ್ಕಿಳಿಸಿದ್ದಾರೆ. ಮಕ್ಕಳೊಂದಿಗೆ ಮಕ್ಕಳಂತಾಗುವುದು, ಅವರೊಡನೆ ಅಪಾರ ಪ್ರೀತಿ, ಆತ್ಮೀಯತೆಯನ್ನಿಟ್ಟುಕೊಂಡು ತಿದ್ದುತ್ತಾ ಸಾಗುವುದು, ಮಕ್ಕಳ ಬಾಲ್ಯದಲ್ಲಿ ತನ್ನ ಬಾಲ್ಯವನ್ನು ಕಂಡು, ನೆನೆಪಿಸಿಕೊಳ್ಳುವುದು, ಶಿಕ್ಷಕಿಯೊಬ್ಬರು ಮಕ್ಕಳ ಪಾಲಿಗೆ ಗೆಳತಿ, ತಾಯಿ, ಗುರು, ಎಲ್ಲವೂ ಆಗುವುದು, ಅವರಿಂದಲೇ ಕಲಿಯುತ್ತಾ ಬದುಕುವ ಅವಿಸ್ಮರಣೀಯ ಅನುಭವಗಳ ಮೊತ್ತವೇ ಮಿಸ್ಸಿನ ಡೈರಿ.
ಪ್ರತಿಯೊಂದು ವಿಷಯವನ್ನೂ ಅತ್ಯಂತ ಸರಳವಾಗಿ ಅದರಲ್ಲೂ ಮಲೆನಾಡಿನ ಸುಂದರವಾದ ಭಾಷಾ ಸೊಗಡಿನೊಂದಿಗೆ ವಿವರಣೆ ನೀಡಿ ದಾಖಲಿಸಿರುವ ರೀತಿ ಓದುಗರನ್ನು ವಿಶಿಷ್ಟ ರೀತಿಯಲ್ಲಿ ಹಿಡಿಯುತ್ತದೆ. ಕೃತಿಯು ಓದಿನುದ್ದಕ್ಕೂ ಓದುಗನನ್ನು ಆವರಿಸಿ ತನ್ನೊಡನೆ ಹೊತ್ತೊಯ್ಯುತ್ತದೆ. ಭಾವಗಳಿಗೆ ಮಾತ್ರ ದಕ್ಕುವ, ಮುಗ್ಧ ಮನಸ್ಸುಗಳ ಒಡನಾಟ ಕೃತಿಯ ವಿಶೇಷತೆ.
ಈ ಕೃತಿಯಲ್ಲಿ ಒಟ್ಟೂ ೩೨ ಬರಹಗಳಿವೆ. ಇವು ಒಂದಕ್ಕಿಂತ ಒಂದು ಚಂದವಾಗಿವೆ. ವಿಭಿನ್ನ ವಿಷಯಗಳನ್ನು ಹೊಂದಿದ್ದರೂ ಎಲ್ಲವೂ ಮಕ್ಕಳಿಗೆ ಕಲಿಸಿದ ಪಾಠಗಳಾಗಿವೆ. ಇಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕಲಿಸುವುದಿದೆ, ಸಾಮಾನ್ಯ ಜ್ಞಾನವಿದೆ, ಬಾಲ್ಯದ ಅನುಭವಗಳಿವೆ. ಪರಿಸರ , ಹಳ್ಳಿಗಾಡಿನ ಜೀವನ, ಸಂಸ್ಕೃತಿ, ಹಬ್ಬ-ಹರಿದಿನ, ತಿಂಡಿ ತಿನಿಸುಗಳ ವೈವಿಧ್ಯತೆ, ಶಿಸ್ತು, ಶಿಕ್ಷೆ, ವಿವಿಧ ಆಟ, ಮಕ್ಕಳ ತುಂಟಾಟ, ಪ್ರವಾಸದ ಸಂಭ್ರಮಗಳಿವೆ. ಶಾಲೆಯಲ್ಲಿ ಸರಪಳಿ ಇಲ್ಲದೆ ಬಂಧಿಯಾಗುವ ಮಕ್ಕಳು, ಆಡದೇ ಉಳಿಯುವ ಮಾತುಗಳು, ಈಡೇರದ ಕಸನುಗಳ ಬಗ್ಗೆ ಶಿಕ್ಷಕರು ಯೋಚಿಸಬೇಕು. ಬಂಧಮುಕ್ತ ವಾತವರಣವನ್ನು ಮಕ್ಕಳಿಗೆ ಕೊಟ್ಟಾಗ ಮಾತ್ರ ಅವರ ಮನಸ್ಸು ವಿಶಾಲವಾಗಿ ಅರಳುತ್ತದೆ. ವಿಕಸನಗೊಳ್ಳುತ್ತದೆ ಎನ್ನುವುದನ್ನು ತನ್ನ ಮೇಲೆ ಅಪಾರ ಪ್ರಭಾವ ಬೀರಿದ ತೊತ್ತೋಚಾನ್ ಎಂಬ ಪುಸ್ತಕದಲ್ಲಿರುವುದನ್ನು ಲೇಖಕಿ ವಿವರಿಸಿದ್ದಾರೆ.
ಮಿಸ್ಸು ಕೋಳಿ ಸಾಕಬೇಕು ಎನ್ನುವ ಲೇಖನದಲ್ಲಿ ಕೋಳಿಯ ಜೀವಿತಾವಧಿಯ ಬಗ್ಗೆ ಒಬ್ಬೊಬ್ಬ ಮಕ್ಕಳು ಒಂದೊಂದು ರೀತಿಯ ಉತ್ತರ ಕೊಟ್ಟಿದ್ದು ರೋಚಕವೆನಿಸುತ್ತದೆ. ಕೋಳಿ ಬದುಕುಳಿಯಲು ಬಿಡದೆ ಅದನ್ನು ಕುಯ್ಯುತ್ತಾರೆ ಎನ್ನುವಷ್ಟರ ಮಟ್ಟಿಗೆ ಮಕ್ಕಳ ಜ್ಞಾನವಿದೆ. ಮಿಸ್ಸು ಏಕೆ ಕೋಳಿ ಸಾಕಬಾರದೆನ್ನುವ ಮುಗ್ಧ ಪ್ರಶ್ನೆಯೂ ಎದುರಾಗುತ್ತದೆ.
ಮಿಸ್ಸಿನ ಕೈಗೆ ರಾಖಿ ಕಟ್ಟುವ ಸಂಭ್ರಮ, ಆರಿದ್ರಾ ಮಳೆ ಮತ್ತು ಹಲಸಿನ ಕಡುಬು, ಮಿಸ್ಸಿನ ಬ್ಯಾಗಿನ ಮೋಹ, ಪ್ರವಾಸವೆಂಬ ಸಂಭ್ರಮ, ಮಿಸ್ಸು ಬುಗುರಿಬಿಡಲೇಬೇಕು, ಬಣ್ಣದ ಪೆನ್ನು, ಮೆಚ್ಚುಗೆಯ ಮಾಯಾದಂಡ ಮೊದಲಾದವು ತುಂಬಾ ರೋಚಕವಾಗಿವೆ.
ತನ್ನ ಮಕ್ಕಳಿಗೆ ಹೇನು ತೆಗೆಯುವಂತೆ ಮಿಸ್ಸು ಶಾಲಾ ಮಕ್ಕಳ ಹೇನು ತೆಗೆಯುವುದು, ಅವರಿಗೆ ಶುಚಿತ್ವದ ಪಾಠ ಮಾಡುವುದು, ತರಗತಿಯ ಕೊಠಡಿಗಳನ್ನೇ ಪ್ರಯೋಗಾಲಯವನ್ನಾಗಿ ಮಾಡಿರುವುದು, ಅಲ್ಲಿ ಮಕ್ಕಳು ಮಾತ್ರ ಕಲಿಯುವುದಿಲ್ಲ, ಶಿಕ್ಷಕರು ಬಹಳಷ್ಟು ಕಲಿಯುತ್ತಾರೆ. ಅದೇ ನಿಜವಾದ ವಿಕಾಸ ಎನ್ನುವ ಮಾತು ಅರ್ಥಗಭಿತವಾದುದು. ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಏನನ್ನು ಕಲಿಸುತ್ತಾರೋ ಅದೇ ಅವರಿಗೆ ವೇದವಾಕ್ಯವಾಗುತ್ತದೆ. ಅದನ್ನು ಚಾಚೂತಪ್ಪದೆ ಕಲಿತು ನೆನಪಿಟ್ಟುಕೊಳ್ಳುತ್ತಾರೆ. ಆದ್ದರಿಂದ ತರಗತಿಯ ಕಲಿಕೆ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎನ್ನುವುದನ್ನು ವಿವರಿಸುತ್ತಾರೆ.
ದೊಡ್ಡವರಾದ ಮೇಲೆ ಏನಾಗುತ್ತಿರಿ ಎಂಬ ಮಿಸ್ಸಿನ ಪ್ರಶ್ನೆಗೆ ಮಕ್ಕಳಿಂದ ಬರುವ ಉತ್ತರ ಅವರವರ ಪರಿಸರ, ಅವರವರ ಆಕರ್ಷಣೆಯ ಕ್ಷೇತ್ರದ್ದೇ ಆಗಿರುತ್ತದೆ. ಡ್ರೈವರ್, ಕಂಡಕ್ಟರ್ ಆಗುತ್ತೇನೆ ಎನ್ನುವುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಮಕ್ಕಳ ಪ್ರವಾಸದ ತಯಾರಿಯನ್ನೂ ಸಹ ಚಂದವಾಗಿ ನಿರೂಪಿಸಿದ್ದಾರೆ. ವರ್ಲ್ಡ್ ಟೂರ್ ಮಾಡುವವರಲ್ಲಿಯೂ ಅಷ್ಟೊಂದು ಎಕ್ಸೈಟ್‌ಮೆಂಟ್ ಇರುವುದಿಲ್ಲ ಎನ್ನುವ ಮಾತು ಅಕ್ಷರಶಃ ಇಲ್ಲಿ ಸತ್ಯ. ಹಿಂದಿನ ದಿನ ರಾತ್ರಿ ನಿದ್ದೆ ಬಾರದಿರುವುದು, ಕಾಲು ನೆಲದ ಮೇಲೆ ನಿಲ್ಲದಿರುವ ತವಕ, ಮಕ್ಕಳ ಸಂಭ್ರಮ, ಅದರಲ್ಲೂ ಪಾಲಕರು ಪ್ರವಾಸಕ್ಕೆ ಹೋಗಲು ರೆಡಿಯಾಗುವುದು, ಹೀಗೆ ಪ್ರತಿ ವಷ ನಮ್ಮನ್ನೂ ಪ್ರವಾಸಕ್ಕೆ ಕರ್ಕೊಂಡು ಹೋಗಿ ಎನ್ನುವ ಗ್ರಾಮದ ಮುಗ್ಧ ಮಹಿಳೆಯರ ಮಾತು ಎಲ್ಲವೂ ನಮ್ಮನ್ನು ಸೆರೆಹಿಯುತ್ತವೆ. ಬಣ್ಣದ ಪೆನ್ನು ಎಂಬ ಬರಹ ಕೂಡ ಆಪ್ತವಾಗುತ್ತದೆ. ಜೀವಂತ ಇರುವವರ ಹೆಸರನ್ನು ರೆಡ್ ಇಂಕಿನಲ್ಲಿ ಬರಿಬಾರ್ದು ಎನ್ನುವ ನಂಬುಗೆ, ಸತ್ತ ಮಹನೀಯರೆಲ್ಲ ಜೀವಂತವಿರುತ್ತ್ತಾರೆಂಬ ಮಿಸ್ಸಿನ ಅಷ್ಟೇ ಸುಲಭದ ಉತ್ತರ, ನೋಟಿನ ಮೇಲೆ ಗಾಂಧೀಜಿ ನಗುತ್ತಿರುವುದೇಕೆ ಎನ್ನುವ ಪ್ರಶ್ನೆಗೆ ಅತ್ತರೆ ನೋಟು ಒದ್ದೆ ಆತದೆ ಎನ್ನುವ ಹುಡುಗಿಯೊಬ್ಬಳ ಥಟ್ಟನೆಯ ಉತ್ತರ, ... ಇವೆಲ್ಲವೂ ನಗುಬರಿಸಿದರೂ ಮಕ್ಕಳ ಚಿಂತನಯನ್ನು ಪದೇ ಪದೇ ತೋರಿಸುತ್ತಾರೆ.
ಒಟ್ಟಾರೆ, ಮಕ್ಕಳ ಕ್ರಿಯಾಶೀಲತೆಗೆ ನಿಯಂತ್ರಿತ ಪೋಷಣೆ ಸಿಕ್ಕಾಗ ಮಾತ್ರ ಪ್ರತಿಭೆಗೆ ಒರೆ ಹಚ್ಚಿದಂತಾಗುತ್ತದೆ. ಚಂದ ಹಾಡುವ, ಕ್ರಾಫ್ಟ್ ಹವ್ಯಾಸ ಇರುವ , ಕತೆ-ಕವಿತೆ ಬರೆಯುವ, ತುಂಬ ಓದುವ ಮತ್ತು ಉತ್ಸಾಹಿ ಶಿಕ್ಷಕರು ಸಿಕ್ಕರೆ ಮಕ್ಕಳು ನಿಜಕ್ಕೂ ಅದೃಷ್ಟವಂತರು. ಪಾಠದ ಜೊತೆಗೆ ಜೊತೆಗೆ ಇನ್ನೊಂದಿಷ್ಟು ವಿಚಾರಗಳ ಬಗೆಗೂ ಪ್ರಚೋದಿಸುವುದು, ಚೋದಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದನ್ನು ಈ ಕೃತಿಯಲ್ಲಿ ಕಾಣಬಹುದು.
ಮಕ್ಕಳ ಪ್ರೀತಿಯ ಘಮ ಹೇಗಿರುತ್ತದೆ, ಕಲಿಕೆಯಲ್ಲಿ ಶಿಕ್ಷಕರು ಏನೇನು ತಂತ್ರಗಳನ್ನು ಬಳಸಬಹುದು, ಅವು ಯಾವ ಪರಿಣಾಮ ಬೀರುತ್ತವೆ?, ಮಕ್ಕಳ ಮಾತನ್ನು ಆಲಿಸುವುದು ಎಷ್ಟು ಮುಖ್ಯ, ಮಕ್ಕಳ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು, ಒಬ್ಬ ಶಿಕ್ಷಕ- ಶಿಕ್ಷಕಿಯ ವ್ಯಕ್ತಿತ್ವ ಮಕ್ಕಳಿಗೆ ಹೇಗೆ ಮಾದರಿಯಾಗುತ್ತದೆ ಎನ್ನುವುದಕ್ಕೆಲ್ಲಾ ಈ ಕೃತಿಯಲ್ಲಿ ಉತ್ತರವಿದೆ. ಕೃತಿಯಲ್ಲಿನ ಬರಹಗಳು ತುಂಬಾ ಅರ್ಥಗರ್ಭಿತವಾಗಿದ್ದು ಅವುಗಳಲ್ಲಿ ಕೆಲವು ವಾಕ್ಯಗಳು ಸದಾ ನೆನಪಿಡುವಂತಿವೆ. ಮನಸ್ಸಿಗೆ ತುಂಬಾ ಇಷ್ಟವಾಗುತ್ತವೆ. ಇವು ಲೇಖಕರ ಬರವಣಿಗೆಯಲ್ಲಿನ ಪ್ರಬುದ್ಧತೆಯನ್ನು ತೋರಿಸುತ್ತವೆ. ಪುಸ್ತಕ ಓದುತ್ತಾ ಹೋದಂತೆ ನಮ್ಮ ಬಾಲ್ಯವೇ ಕಣ್ಣೆದುರು ಬರುತ್ತದೆ.
ಮಕ್ಕಳಿಂದ ಪ್ರೀತಿಸಲ್ಪಡದ, ಪಾಲಕರಿಂದ ಮನ್ನಣೆ ಪಡೆಯಲಾಗದ ಶಿಕ್ಷಕರು ನಿಜಕ್ಕೂ ಓದಲೇಬೇಕಾದ ಪುಸ್ತಕ "ಮಿಸ್ಸಿನ ಡೈರಿ".
ಕಲಿಸುವುದು ಶಿಕ್ಷಕರು ಮಾತ್ರವೇ?
ಮಕ್ಕಳು ಕಲಿಯಲು ಮಾತ್ರಾ ಬರುತ್ತಾರೆಯೇ?
ಉಲ್ಟಾ ಕೂಡಾ ಆಗಬಹುದಲ್ಲವೇ?
ಎನ್ನುವುದಕ್ಕೆ ಉತ್ತರ ಮಿಸ್ಸಿನ ಡೈರಿಯಲ್ಲಿದೆ.
..............................

Comments
Post a Comment