ಸ್ಥಾಪಿತ ಸಂಪ್ರದಾಯದ ಸವಾಲು ಎತ್ತಿ ತೋರಿಸುವ
‘ತಲೆದಂಡ’





 ‘ತಲೆದಂಡ’ ಇದು ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಹೆಸರಾಂತ ನಾಟಕ ಕೃತಿ.  ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ, ಆ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿಯೇ ಇದರ ಕಥಾ ವಸ್ತು.  ೧೨ ನೇ ಶತಮಾನದಲ್ಲಿನ ಒಂದು ಕ್ರಾಂತಿಕಾರಿ ಚಳುವಳಿಯು ಕಠಿಣ ಜಾತಿ ವ್ಯವಸ್ಥೆಯನ್ನು ನಾಟಕ ಪ್ರಶ್ನಿಸುತ್ತದೆ. ಇದು ನಂಬಿಕೆ, ಸಾಮಾಜಿಕ ನ್ಯಾಯ ಮತ್ತು ಉತ್ತಮ ಪ್ರಪಂಚಕ್ಕಾಗಿ ಹೋರಾಟದ ಬಗ್ಗೆ ಒಂದು ಪ್ರಬಲ ಕಥೆಯಾಗಿದೆ. ಜೊತೆಗೆ ಇಂದಿಗೂ ಪ್ರತಿಧ್ವನಿಸುತ್ತ್ತಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಕ್ರಾಂತಿಕಾರಿ ನಾಯಕ. ಆತ ವರ್ಚಸ್ವಿ ಮತ್ತು ಆಧ್ಯಾತ್ಮಿಕ ವ್ಯಕ್ತಿ. ಅವನ ಕಥೆ ಇಂದಿಗೂ ಬದಲಾವಣೆ ಮತ್ತು ಭರವಸೆಯನ್ನು ಪ್ರೇರೇಪಿಸುತ್ತದೆ.

ನಾಟಕದ ವಿಷಯ:

೧೨ ನೇ ಶತಮಾನದ ಕರ್ನಾಟಕದ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಘಟನೆಗಳೇ ಇಲ್ಲಿನ ವಿಷಯ. ಜಾತಿ ಮತ್ತು ಪೂರ್ವಾಗ್ರಹದ ಸಂಕೋಲೆಗಳಿಂದ ಮುಕ್ತವಾದ ಸಮಾಜವನ್ನು ಸೃಷ್ಟಿಸುವ ಕನಸು ಕಾಣುವ ದಾರ್ಶನಿಕ ನಾಯಕ ಭಕ್ತಿ ಭಂಡಾರ ಬಸವಣ್ಣ ಇಲ್ಲಿ ದೊರೆ ಕಳಚೂರ್‍ಯ ವಂಶದ ಅಂದರೆ ಕ್ಷೌರಿಕ ವಂಶದ ಬಿಜ್ಜಳನಿಗಿಂತ ಉನ್ನತ ಸ್ಥಾನದಲ್ಲಿ ಕಾಣುತ್ತಾನೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಭಂಡಾರದ ಪ್ರಧಾನಿ.

ಬಿಜ್ಜಳನ ಮಗ ಯುವರಾಜ ಸೋವಿದೇವ ಬಸವಣ್ಣನಿಲ್ಲದ ಸಂದರ್ಭದಲ್ಲಿ ಭಂಡಾರದ ಬಾಗಿಲು ತೆರೆಸಲೆತ್ನಿಸುವಲ್ಲಿಂದ ನಾಟಕ ಆರಂಭವಾಗುತ್ತದೆ. ಬಸವಣ್ಣ ತನ್ನ ಯಾತ್ರೆ ಮುಗಿಸಿ ಬರುತ್ತಾನೆ. ಯುವರಾಜನಿಗೆ ‘ಭಂಡಾರ ಮುಟ್ಟಲು ಅಪ್ಪಣೆ ಕೊಟ್ಟವರಾರು’ ಎಂದು ಪ್ರಶ್ನಿಸುತ್ತಾನೆ.  ಒಂದೆಡೆ ಶರಣರು ಮುತ್ತಿಗೆ ಹಾಕಿದ್ದಾರೆ. ಬಸವಣ್ಣನ  ಕಂಡಕೂಡಲೇ ಯುವರಾಜ ಹೊರಡಲು ಅನುವಾಗುತ್ತಾನೆ. ‘ಇವನ ಎಳಕೊಂಡು ಹೋಗಿ ಒಳಗಿಂದ ಕೀಲಿ ಹಾಕಿಸ್ತೇನೆ. ಲೆಕ್ಕ ಮುಗಿದ ಮೇಲೆ ಮನೆಗೆ ಹೋಗೋಕೆ ಬಿಡ್ತೇನೆ. ಬಸವಣ್ಣ ಜಾತಿಯ ಹಂಗಿಲ್ಲದೆ ನನ್ನನ್ನು ನೋಡಿದ್ದಾನೆ’ ಎನ್ನುತ್ತಾನೆ ಬಿಜ್ಜಳ.

 ಬಸವಣ್ಣ ಮಹಾಮನೆಗೆ ಬರುತ್ತಾನೆ. ‘ಭಂಡಾರ ರಾಜವಂಶದ ಸೊತ್ತಲ್ಲ. ಜನರ ಸೊತ್ತು. ರಾಜನ ಮನೆಯವರಿಗೆ ಅಲ್ಲಿ ಪ್ರವೇಶ ಇಲ್ಲ (ಪುಟ ೨೨) ಯುವರಾಜನಿಗೆ ಪಟ್ಟ ಕಟ್ಟಿದ್ದು ನನಗೆ ಗೊತ್ತಿಲ’ ಎಂದಾಗ ‘ಪಟ್ಟ ಕಟ್ಟಿಲ್ಲ’ ಎನ್ನುತ್ತಾನೆ ಬಿಜ್ಜಳ. ‘ಯುವರಾಜ ಅನ್ನುವವನಿಗೆ ಹೊಣೆಗಾರಿಕೆ ಇರಬೇಕು. ಅದು ಹುಟ್ಟುತ್ತಾ ಬರುವುದಿಲ್ಲ. ಅದನ್ನು ಮಾಡುವ ಅಧಿಕಾರ ಗಳಿಸಿಕೊಳ್ಳಬೇಕು’ (ಪುಟ-೨೩) ಎನ್ನುತ್ತಾ ಬಿಜ್ಜಳನಿಗೆ ಭಂಡಾರದ ಕೀಲಿಯನ್ನು ಕೊಡುತ್ತಾ ‘ನನಗೆ ಈಗ ಈ ಕೆಲಸ ಭಾರ ಎನಿಸ್ತಿದೆ, ಮರಳಿ ತೆಗೆದುಕೊಳ್ಳಿ’ ಎನ್ನುತ್ತಾನೆ. ‘ನೀವು ಕೀಲಿ ತೆಗೆದುಕೊಳ್ಳದಿದ್ದರೆ ಅರಮನೆಯ ಶಿವಲಿಂಗಕ್ಕೆ ಅರ್ಪಿಸಿ ಹೋಗುವೆ’ ಎನ್ನುತ್ತಾ ಕೀಲಿ ಇಟ್ಟು ಬಸವಣ್ಣ ಅಗ್ರಹಾರಕ್ಕೆ ಬರುತ್ತಾನೆ.

ಇತ್ತ ಚಮ್ಮಾರ ಸಮಾಜದ ಹರಳಯ್ಯನ ಮಗ ಶೀಲನಿಗೂ ಮಧುವರಸನ ಮಗಳು ಕಲಾವತಿಗೂ ವಿವಾಹ ನಿಶ್ಚಯವಾಗುತ್ತದೆ. ಆದರೆ ಇದಕ್ಕೆ ಜಾತಿಯ ವಿರೋಧ ಎದುರಾಗುತ್ತದೆ. ಬಿಜ್ಜಳನು ‘ಈ ಮದುವೆಯಾದರೆ ಲಗ್ನಮಂಟಪ ರಣರಂಗವಾಗುತ್ತದೆ. ಕಲ್ಯಾಣದ ಬೀದಿಯಲ್ಲಿ ಹೆಣ ಬೀಳುತ್ತದೆ. ಲಗ್ನ ಆಗತಕ್ಕದ್ದಲ್ಲ’ ಎಂದಾಗ ಬಸವಣ್ಣ ‘ನೀವು ಹೀಗೆ ಹೇಳಿದರೆ ಅರಮನೆಯಲ್ಲಿ ಧರಣಿ ಮಾಡುವೆ’ ಎಂದು ಎಚ್ಚರಿಸುತ್ತಾನೆ. ‘ಧರಣಿ ಮಾಡು. ನಿನ್ನ ಹಿಂದೆ ಶರಣರು ಬಂದರೆ ತಗಣಿ ಒರೆದ ಹಾಗೆ ಒರೆಯುತ್ತೇನೆ’ ಎಂದು ಎದುರೇಟು ಹಾಕುತ್ತಾನೆ ಬಿಜ್ಜಳ. ಕೊನಗೆ ‘ಲಗ್ನ ಮಾಡಿ ವೈದಿಕರು ಮತ್ತು ನೀವು ಹೊಡೆದಾಡಿಕೊಳ್ಳಿ. ನಾನು ದೂರದ ಸೀಮೆಗೆ ಹೋಗುತ್ತೇನೆ’ ಎನ್ನುತ್ತಾನೆ.  

  ಬಸವಣ್ಣ ತಾನು ಹುಟ್ಟುಹಾಕಿದ ಕ್ರಾಂತಿ ಒಂದಲ್ಲ ಒಂದು ದಿನ ಯಶಸ್ವಿಯಾಗುತ್ತದೆ ಎಂದು ನಂಬಿರುತ್ತಾನೆ. ‘ಒಂದು ದಿವಸ ಈ ವರ್ಣಾಶ್ರಮದ ಧರ್ಮ, ಈ ಜಾತಿ ವ್ಯವಸ್ಥೆಯನ್ನು ನಾಡಿನಿಂದ ಸವರಿ ಬಿಡುತ್ತೇನೆ. ವರ್ಣಾಶ್ರಮ ಧರ್ಮ ಬೇರು ಸಹಿತ ಕಿತ್ತು ಹಾಕುತ್ತೇನೆ’ (ಪುಟ ೧೭) ಎನ್ನುತ್ತಾನೆ. ‘ನಿನಗೆ ಗೆಳೆತನ, ಪ್ರೀತಿ, ನಿಷ್ಠೆ, ಬೇಕಿಲ್ಲ. ಜಂಗಮರು ಮಾತ್ರ ಬೇಕು. ನಮ್ಮಿಬ್ಬರ ಗೆಳೆತನ ಹರಿಯಿತು’ ಎನ್ನುತಾನೆ ಬಿಜ್ಜಳ . ಇತ್ತ ಬ್ರಾಹ್ಮಣರೂ ಈ ಮದುವೆಗೆ ವಿರೋಧ ಮಾಡುತ್ತಾರೆ. ಆದರೂ ಮದುವೆ ನಡೆಯುತ್ತದೆ.    

ನಂತರ ಶರಣ ಜಗದೇವ ಎನ್ನುವವನು ಬಿಜ್ಜಳನನ್ನು ಇರಿದು ಕೊಲ್ಲುತ್ತಾನೆ. ಬಸವಣ್ಣ ಮಹಾಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾನೆ. ಗರ್ಭಗುಡಿಯ ಶಿವಲಿಂಗದ ಹತ್ತಿರ ಬಂದು ‘ನಿನ್ನ ಜ್ಯೋತಿಯ ಕುಡಿಯಲ್ಲಿ ಈ ಗುಡಿಯನ್ನು ಹೀರು ತಂದೆ, ಬೆಳಗಿನೊಳಗೆ ಬೆಳಗು, ಮಹಾಬೆಳಗು’ ಎನ್ನುತ್ತಾನೆ. ಇವಿಷ್ಟು ಕಥಾ ವಿಷಯ.  ಇಲ್ಲಿನ ಸಂಭಾಷಣೆಗಳು ಮನಸೆಳೆಯುತ್ತವೆ. ಬಸವಣ್ಣ ಮತ್ತು ಬಿಜ್ಜಳನ ಚಾಟಿಯಂತಹ ಮಾತುಗಳು ಸ್ಮರಣೀಯ.  

 ಈ ನಾಟಕದಲ್ಲಿ ಬಸವಣ್ಣ ಮತ್ತು ಅವರ ಅನುಯಾಯಿಗಳು ಆದರ್ಶ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿರುವಾಗ, ಅವರು ಸ್ಥಾಪಿತ ಅಧಿಕಾರ ರಚನೆಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಾರೆ. ತನ್ನ ಸ್ಥಾನಮಾನ ಮತ್ತು ಸವಲತ್ತುಗಳ ನಷ್ಟದಿಂದ ಬೆದರಿಕೆಗೆ ಒಳಗಾದ ಕಟ್ಟುನಿಟ್ಟಿನ ಬ್ರಾಹ್ಮಣ ವ್ಯವಸ್ಥೆಯು ಲಿಂಗಾಯತರ ವಿರುದ್ಧ ಕೆಟ್ಟ ಅಭಿಯಾನವನ್ನು ಪ್ರಾರಂಭಿಸುತ್ತದೆ. ಹೆಚ್ಚುತ್ತಿರುವ ವಿರೋಧದ ಹೊರತಾಗಿಯೂ, ಬಸವಣ್ಣ ಮತ್ತು ಅವರ ಶಿಷ್ಯರು ತಮ್ಮ ನಂಬಿಕೆಗಳಲ್ಲಿ ದೃಢವಾಗಿರುತ್ತಾರೆ. ಸಮಾನತೆ, ಪ್ರೀತಿ ಮತ್ತು ಕೆಲಸದ ತತ್ವಗಳ ಆಧಾರದ ಮೇಲೆ ಅಭಿವೃದ್ಧಿ ಹೊಂದುತ್ತಿರುವ ಸಮುದಾಯವನ್ನು ಸ್ಥಾಪಿಸುತ್ತಾರೆ. ಆದರೆ ಅವರ ಹಾದಿಯು ಸಾಮಾಜಿಕ ಬಹಿಷ್ಕಾರದಿಂದ ಹಿಡಿದು ಹಿಂಸಾಚಾರದವರೆಗೆ ಸವಾಲುಗಳಿಂದ ತುಂಬುತ್ತದೆ.

 ನಂಬಿಕೆ, ಸಂಪ್ರದಾಯ ಮತ್ತು ಸ್ವಾತಂತ್ರ್ಯದ ನಿಜವಾದ ಅರ್ಥದ ಪ್ರಶ್ನೆಗಳೊಂದಿಗೆ ನಾವು ಸೆಣಸಾಡಬೇಕಾಗುತ್ತದೆ.  ಸಾಮಾಜಿಕ ಸುಧಾರಣೆಯ ಸಂಕೀರ್ಣತೆಗಳು ಮತ್ತು ಸಮಾನತೆಗಾಗಿ ನಿರಂತರ ಹೋರಾಟದ ಬಗ್ಗೆ  ಇದೆ. ಬ್ರ್ರಾಹ್ಮಣರು, ಲಿಂಗಾಯತರು ತಮ್ಮ ಜಾತಿಯನ್ನು ತಿರಸ್ಕರಿಸುವುದನ್ನು   ತೀವ್ರವಾಗಿ ವಿರೋಧಿಸುತ್ತಾರೆ. ಈ ಸಂಘರ್ಷವು ತಲೆದಂಡದಲ್ಲಿ  ಉದ್ವಿಗ್ನತೆಯನ್ನು ರೂಪಿಸುತ್ತದೆ, ಇದು ಸ್ಥಾಪಿತ ಸಂಪ್ರದಾಯದ ಮುಖಾಂತರ ಸಮಾಜ ಸುಧಾರಕರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಒಟ್ಟಿನಲ್ಲಿ ಈ ನಾಟಕವು,  ಸಾಮಾಜಿಕ ನ್ಯಾಯ, ನಂಬಿಕೆ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟದ ವಿಷಯಗಳನ್ನು ಅನ್ವೇಷಿಸುತ್ತಾ, ಇತಿಹಾಸದ ಒಂದು ಪ್ರಮುಖ ಕ್ಷಣಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಬದಲಾವಣೆಗಾಗಿ ನಿರಂತರ ಹೋರಾಟವನ್ನು ನಮಗೆ ನೆನಪಿಸುತ್ತದೆ. ಇದು ಶಾಶ್ವತವಾದ ಪ್ರಭಾವ ಬೀರುತ್ತದೆ.ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರೆಸಲು ನಮಗೆ ಸ್ಫೂರ್ತಿ ನೀಡುತ್ತದೆ.  

dattarey hegde 

.........................


Comments

Popular posts from this blog