ಹೃದಯದಲ್ಲಿ ನೆಲೆ ನಿಲ್ಲುವ
‘ಮೌನ ಧ್ವನಿಸಿತು’
ಪ್ರಸ್ತುತ ಕಾದಂಬರಿ ‘ಮೌನ ಧ್ವನಿಸಿತು’ ವೇಶ್ಯೆಯೊಬ್ಬಳ ದುರಂತ ಕಥೆ. ಆಕೆಯ ಮಗಳು ತಾಯಿಯ ಒತ್ತಡಕ್ಕೆ ಸಿಲುಕಿದರೂ ವೇಶ್ಯೆಯಾಗದೆ ಸುಂದರ ಬಾಳನ್ನು ಕಟ್ಟಿಕೊಂಡ ಮತ್ತು ಮುಖವಾಡ ಹಾಕಿಕೊಂಡು ಬದುಕುವ ಕೆಲವು ಗಂಡಸರ ಕಥೆ ಇಲ್ಲಿದೆ. ಇದರ ಲೇಖಕರು ದಿವ್ಯಾ ಶ್ರೀಧರರಾವ್. ಮೂಲತಃ ಕುಂದಾಪುರ ತಾಲೂಕು ಸಿದ್ದಾಪುರದವರಾದ ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ದಿವ್ಯಾ ಅವರ ಎರಡನೆಯ ಹೆರಿಗೆಯೇ ‘ಮೌನ ಧ್ವನಿಸಿತು’
ಇಲ್ಲಿನ ಕಥೆ ಹೆಣ್ಣಿನ ಕಣ್ಣೀರಿನ ಕಥೆ. ಸಮಾಜಕ್ಕೆ ಹಿಡಿದ ಕನ್ನಡಿ. ಇಲ್ಲಿ ಮೌನವೇ ಕಣ್ಣೀರು. ಮೌನ ಮಾತಿಗೆ ಮೀರಿದ್ದನ್ನು ಹೇಳುತ್ತದೆ. ಇಲ್ಲಿ ಮೌನ ಧ್ವನಿಸುವುದು ದುಖವನ್ನು ಮತ್ತು ಉಸಿರುಗಟ್ಟುವ ವಾತಾವರಣವನ್ನು. ಹೆಂಗಸನ್ನು ಆಮಿಷ ಒಡ್ಡಿ ಮುಂಬೈನ ಕೆಂಪುದ್ವೀಪಕ್ಕೆ ಕಳುಹಿಸುವ ಚಿತ್ರಣವಿದೆ. ಅಂತಹ ಕಥೆಯೊಂದಕ್ಕೆ ಬಲಿಯಾದವಳು ಸುಂದರಿ ಎನ್ನುವ ಹೆಂಗಸು. ಆಕೆಯ ಮಗಳೇ ಸೌಮ್ಯಾ. ಈ ಇಬ್ಬರು ಕಥೆಯ ಕೇಂದ್ರಬಿಂದು.
ಇಲ್ಲಿ ಸೌಮ್ಯಾ ಕಥಾನಾಯಕಿ. ಆಕೆಗೆ ತಾಯಿ ಸುಂದರಿ ದೂರದಲ್ಲಿದ್ದು ದುಡಿದು ತನ್ನನ್ನು ಸಾಕುತ್ತಿದ್ದಾಳೆ ಎಂದಷ್ಟೇ ಗೊತ್ತಿತ್ತು. ಆದರೆ ಅವಳು ಮಾಡುವ ಕೆಲಸವೇನು ಎಂದು ಸಾಕಷ್ಟು ಸಲ ಅಜ್ಜಿ ರುಕ್ಮಿಣಿಯಲ್ಲಿ ಕೇಳಿದ್ದರೂ ಉತ್ತರ ಸಿಕ್ಕಿರಲಿಲ್ಲ. ಅಜ್ಜಿಯ ಗಾಢಪ್ರೀತಿಯಲ್ಲಿ ಬೆಳೆದರೂ ಶಾಲೆಯಲ್ಲಿ ನಿನ್ನ ಅಪ್ಪನಾರು. ಅಮ್ಮ ಎಲ್ಲಿದ್ದಾಳೆಂದು ಶಿಕ್ಷಕಿ ಮತ್ತು ಮಕ್ಕಳು ಕೇಳುವ ಪ್ರಶ್ನೆಗಳು ಇವಳ ನೆಮ್ಮದಿ ಕೆಡಿಸುತ್ತಾ ಘಾಸಿಗೊಳಿಸುತ್ತಿದ್ದವು. ನಿನ್ನ ಅಮ್ಮನಿಗೆ ಗಂಡನಿದ್ದರೆ ತಾನೇ ನಿನಗೆ ಅಪ್ಪನಿರುವುದು ಎಂದು ಶಾಲೆಯಲ್ಲಿ ಮಕ್ಕಳು ಹೇಳುವುದು, ಅವಳನ್ನು ಅಧೀರರನ್ನಾಗಿಸುತ್ತದೆ. ಅಮ್ಮ ತನಗಾಗಿ ಸಾಕಷ್ಟು ಹಣ ಕಳುಹಿಸುವುದು, ಬಟ್ಟೆ, ಗೆಜ್ಜೆ ತಂದುಕೊಡುತ್ತಿದ್ದುದರಿಂದ ಅದನ್ನುಟ್ಟು ನಲಿಯುತ್ತ, ತಣಿಯುತ್ತ ಇದ್ದ ಮುಗ್ಧೆ ಬಾಲಕಿಗೆ ಮಕ್ಕಳ ಮಾತಿನರ್ಥದ ಅರಿವಿರಲಿಲ್ಲ.
ನಾಲ್ಕು ವರ್ಷದ ನಂತರ ಊರಿಗೆ ತಾಯಿ ಸುಂದರಿ ಮರಳಿದಾಗ ಸಂತಸಪಡುತ್ತಾಳೆ. ಆಕೆ ಇರುವಷ್ಟು ದಿನ ಪ್ರೀತಿಯಿಂದ ಮಗಳನ್ನು ಕಾಣುತ್ತಾಳೆ. ಮರಳಿ ಸುಂದರಿ ಹೋಗುವಾಗ ಇನ್ನು ಕೆಲಸಕ್ಕೆ ಬರುವುದಿಲ್ಲ. ಮಗಳೊಡನೆ ಊರಿನಲ್ಲಿಯೇ ನೆಲೆಸುವೆ ಎಂದು ತಿಳಿಸಿ ಬಾ ಎನ್ನುತ್ತಾಳೆ. ಕೆಲವೇ ದಿನದಲ್ಲಿ ಸೌಮ್ಯಾ ಮೈನೆರೆಯುತ್ತಾಳೆ. ಇದನ್ನು ಸುಂದರಿಗೆ ತಿಳಿಸಿದಾಗ ಅಲ್ಲಿ ತನ್ನೊಂದಿಗೆ ಸದಾ ಮೈಸುಖ ಅನುಭವಿಸುವ, ಸಾಕಷ್ಟು ಹಣ ಚೆಲ್ಲುವ ಜಗ್ಗ ಎನ್ನುವವನಿಗೆ ವಿಷಯ ತಿಳಿಸುತ್ತಾಳೆ. ಅವನು ಸೌಮ್ಯಾಳನ್ನು ಇಲ್ಲಿಗೆ ಕರದುಕೊಂಡು ಬಾ. ನಿನಗೆ ಕೊಡುವ ಹಣಕ್ಕಿಂತ ಹತ್ತು ಪಟ್ಟು ಹಣವನ್ನು ಆಕೆಗೆ ಕೊಡುತ್ತೇನೆಂದು ಹೇಳಿದಾಗ ಕಪಾಳಕ್ಕೆ ಹೊಡೆದು ಬಯ್ಯುತ್ತಾಳೆ. ವೇಶ್ಯಾವಾಟಿಕೆಯ ಮಾಲಕಿಯೂ ಸೌಮ್ಯಾಳಿಗೆ ಗೆಜ್ಜ್ಗೆಪೂಜೆ ಮಾಡಿಸಲು ಸೂಚಿಸುತ್ತಾಳೆ.
ಇತ್ತ ಊರಿನಲ್ಲಿ ಸೌಮ್ಯಾ ಮೈ ಕೈ ತುಂಬಿಕೊಂಡು ಚೆನ್ನಾಗಿ ಕಾಣಲಾರಂಭಿಸಿದ್ದರಿಂದ ಊರ ಕೆಲವು ರಸಿಕರು ಮೈ ಮುಟ್ಟುವುದು, ಕೆನ್ನೆ ಚಿವುಟುವುದು, ಮುತ್ತು ಕೊಡಲು ಮುಂದಾಗುವುದು, ಹೆಗಲ ಮೇಲೆ ಕೈಹಾಕಬಯಸುವುದಕ್ಕೆ ಮುಂದಾಗುತ್ತಾರೆ. ಅವರು ಕಾಣುವ, ಮಾತನಾಡುವ ದೃಷ್ಟಿ ಆಕೆಗೆ ಅರ್ಥವಾಗತೊಡಗುತ್ತದೆ. ಪ್ರತಿಭಟಿಸಿದಾಗ ‘ನಿನ್ನಮ್ಮ ಮೊದಲು ಹೀಗೆಯೇ ಮಾಡುತ್ತಿದ್ದಳು. ನಂತರ ದಾರಿಗೆ ಬಂದಳು’ ಎಂದು ಆಡುತ್ತಿದ್ದರು. ಸೌಮ್ಯಾಳಿಗೆ ತನ್ನಮ್ಮ ಮೊದಲು ಇಲ್ಲಿ ಏನು ಮಾಡಿಕೊಂಡಿದ್ದಳು ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ಅಜ್ಜಿ, ಸೋದರ ಮಾವ ಶಂಕರನಲ್ಲಿ ಕೇಳಿದರೂ ಉತ್ತರ ಸಿಗುವುದಿಲ್ಲ.. ಮತ್ತೊಮ್ಮೆ ತಾಯಿ ಮರಳಿದಾಗ ಇದೇ ಪ್ರಶ್ನೆ ಮುಂದಿಟ್ಟಾಗ ಆಕೆ ‘ಸಮಾಜ ಸೇವೆ’ ಮಾಡುತ್ತಿದ್ದೇನೆಂಬ ಉತ್ತರ ಕೊಡುತ್ತಾಳೆ. ಮತ್ತೆ ಮಗಳನ್ನು ತನ್ನೊಟ್ಟಿಗೆ ಬರಲು ಕರೆಯತ್ತಾಳೆ. ಓದು ಮುಗಿಸಿದ ನಂತರ ಬರುವುದಾಗಿ ಉತ್ತರಿಸುತ್ತಾಳೆ.
ಈ ಮಧ್ಯೆ ಗುಬ್ಬಿ ಎಂಬ ಪೆದ್ದಿಯ ಗೆಳೆತನ ಹೆಚ್ಚುತ್ತದೆ. ಆಕೆಯೂ ಪ್ರತಿದಿನ ರಾತ್ರಿ ಸೆರಗು ಹಾಸುವವಳು. ಶಾಲೆಯ ವರಾಂಡಾದಲ್ಲಿ ಮಲಗುವವಳು. ಆದರೆ ಇದನ್ನರಿಯದ ಸೌಮ್ಯಾ ಹೆಚ್ಚಿನ ಕಾಲವನ್ನು ಆಕೆಯೊಡನೆ ಕಳೆಯುತ್ತಾಳೆ. ಆಕೆಗೂ ಸೌಮ್ಯಾ ಮೇಲೆ ಏನೋ ಭರವಸೆ. ಬಿಟ್ಟಿರಲಾರದ ನಂಟು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ‘ನನ್ನ ಅಪ್ಪನ್ಯಾರು, ಈ ಊರಲ್ಲಿ ಮೊದಲು ಅಮ್ಮ ಏನು ಕೆಲಸ ಮಾಡುತ್ತಿದಳು’ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಪರಿತಪಿಸುತ್ತಾಳೆ. ಇದೇ ವೇಳೆ ಮಗಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಲು ಸುಂದರಿ ತವರಿಗೆ ಮರಳುತ್ತಾಳೆ. ಪ್ರತಿಬಾರಿ ತಾಯಿ ಸುಂದರಿ ಬಂದಾಗ ಕಾಲ್ಗೆಜ್ಜೆ ತಂದಿಲ್ಲವೇ ಎಂದು ಸೌಮ್ಯಾ ಪ್ರಶ್ನಿಸುತ್ತಾಳೆ. ಮುಂದಿನ ಬಾರಿ ತರುವುದಾಗಿ ತಾಯಿ ಉತ್ತರಿಸುತ್ತಾಳೆ. ಮತ್ತೆ ಮಗಳಿಗೆ ತನ್ನೊಡನೆ ಬರುವಂತೆ ಒಪ್ಪಿಸುತ್ತಾಳೆ. ತಾನು ದಿನನಿತ್ಯ ಹೋಗಿರಬರುವ ಊರಿನ ಶಾಂತಮ್ಮಳ ಮನೆಗೆ ಬಂದ ಸೌಮ್ಯಾ ಅವಳಲ್ಲಿ ‘ನಾನು ಸಮಾಜಸೇವೆ ಮಾಡಲಿಕ್ಕೆ ಮುಂಬೈಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಗೆಜ್ಜೆ ಕಟ್ಟುವ ಶಾಸ್ತ್ರ ಮಾಡುತ್ತ್ತಾರಂತೆ’ ಎಂದಾಗ ಶಾಂತಮ್ಮ, ‘ನಿನಗಿನ್ನೂ ವಯಸ್ಸಾಗಿಲ್ಲ, ಓದು ಮುಖ್ಯ. ಓದದಿದ್ದರೆ ಗದ್ದೆ-ತೋಟ ಎಂದು ಓಡಾಡಿಕೊಂಡಿರಬೇಕಾಗುತ್ತದೆ’ ಎಂದು ತಲೆನೇವರಿಸುತ್ತಾ, ಪ್ರೀತಿ ತೋರುತ್ತಾ ಗೆಜ್ಜೆ ಕಟ್ಟುವುದೆಂದರೇನೆಂದು ವಿವರಿಸುತ್ತಾಳೆ. ಹೇಳುವ ಮಾತು ಸೌಮ್ಯಾಳ ಮೇಲೆ ಪರಿಣಾಮ ಬೀರಿ ತಾನು ಸದ್ಯ ನಿನ್ನೊಡನೆ ಬರುವುದಿಲ್ಲ ಎಂದು ತಾಯಿಗೆ ನುಡಿಯುತ್ತಾಳೆ.
ಮಗಳನ್ನು ಕರೆದೊಯ್ಯದೆ ಸುಂದರಿ ಮರಳುತ್ತಾಳೆ. ಆದರೆ ವೇಶ್ಯಾವಾಟಿಕೆ ಕೇಂದ್ರದ ಮಾಲಕಿ ರಾಣಿ ಸುಂದರಿ ಬರಿಗೈಲಿ ಬಂದಿದ್ದರಿಂದ ಆಕ್ರೋಶಿತಳಾಗಿ ಆಕೆಯನ್ನು ತಿರಸ್ಕರಿಸುತ್ತಾಳೆ. ಗಿರಾಕಿ ಕಳುಹಿಸದೆ ಕೆಲವು ದಿನ ಸತಾಯಿಸುತ್ತಾಳೆ. ಸುಂದರಿಗೆ ದೇಹದ ಬಯಕೆ ಹೆಚ್ಚಾಗತೊಡಗುತ್ತದೆ. ‘ಒಂದಿಬ್ಬರು ದಾಂಢಿಗರೊಡನೆ ಹೋಗಿ ಮಗಳನ್ನು ಕರೆ ತಾ’ ಎಂದು ಆದೇಶಿಸುತ್ತಾಳೆ. ಆ ಪ್ರಕಾರ ದಾಂಢಿಗರೊಂದಿಗೆ ಊರಿಗೆ ಬಂದರೆ ಸೌಮ್ಯಾ ಅವಳನ್ನು ತಿರಸ್ಕರಿಸುತ್ತಾಳೆ. ಮಾರನೆಯ ದಿನ ಗೌಡರ ಮನೆಕೆಲಸಕ್ಕೆ ಹೋಗಲು ಸೌಮ್ಯಾ ತಯಾರಿ ನಡೆಸುತ್ತಾಳೆ. ಆದರೆ ಸುಂದರಿ, ‘ನಾಳೆ ಸಂಜೆ ನನ್ನೊಂದಿಗೆ ಬರಲು ತಯಾರಾಗು’ ಎಂದು ನುಡಿಯುತ್ತಾಳೆ. ‘ನೀನು ಹೋಗಿ ಬಾ. ಬೇಡ ಬರಬೇಡ. ತೊಲಗು. ಈ ಊರಿನಿಂದ ನನ್ನ ಕಣ್ಣಿನಿಂದ ದೂರ ತೊಲಗು’ ಎಂದು ಆವೇಶಭರಿತಳಾಗಿ ಮರುನುಡಿಯುತ್ತಾಳೆ.
‘ಮನಸ್ಸಿಲ್ಲದಿದ್ದರೆ ಮುಂಬೈಗೆ ಹೋಗಬೇಡ. ಬಲವಂತದಿಂದ ಆಕೆಗೆ ಗೆಜ್ಜೆ ಕಟಟ್ಬೇಡ. ನಿನ್ನ ಜೀವನದಂತೆ ಆ ಮಗುವಿನ ಬಾಳು ಹಾಳಾಗದಿರಲಿ’ ಎಂದು ರುಕ್ಮಿಣಿ ಹೇಳುತ್ತಾಳೆ. ಅಮ್ಮನ ಪಾದ ಹಿಡಿದು ಗೋಗರೆಯುವ ಸೌಮ್ಯಾಳ ಪರ ಊರಿನವರು ಧಾವಿಸಿ ನಿಲ್ಲುತ್ತರಾರೆ. ಅವಳು ಪ್ರೀತಿಸುತ್ತಿದ್ದ ಸಂತೋಷ ಸಹ ಕತ್ತಿ ಹಿಡಿದು ಬರುತ್ತಾನೆ. ಕರೆದೊಯ್ಯಲು ಬಂದಿದ್ದ ದಢೂತಿಗಳಿಬ್ಬರ ಕಣ್ಣಲ್ಲಿ ನೀರು ಜಿನುಗುತ್ತದೆ. ಎಲ್ಲರೂ ಸುಂದರಿಗೆ ಬೈದು ಸೌಮ್ಯಾಳನ್ನು ಉಳಿಸಿಕೊಳ್ಳುತ್ತಾರೆ.
ಬರಿಗೈಲಿ ಮರಳಿದ ಸುಂದರಿಯನ್ನು ಉದ್ಯೋಗದಿಂದ ರಾಣಿ ದೂರವಿಡುತ್ತಾಳೆ. ಆಕೆಯ ಮನಃಸ್ಥಿತಿ ಮತ್ತು ದೇಹಸ್ಥಿತಿ ಹದಗೆಡುತ್ತದೆ. ಆಕೆಯ ರೋಗ ಉಲ್ಬಣಿಸತೊಡಗುತ್ತದೆ. ಸುಂದರಿಯ ಆರೋಗ್ಯ ಹದಗೆಟ್ಟಿದ್ದು ನಿಮ್ಮೂರಿನ ಆಸ್ಪತ್ರ್ರೆಗೆ ಕರೆತರುತ್ತಿದ್ದೇವೆ ಎಂಬ ಟೆಲಿಗ್ರಾಂ ಬರುತ್ತದೆ. ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸುಂದರಿ ಸಾವನ್ನಪ್ಪುತ್ತಾಳೆ. ತಾಯಿ ಮಾಡಿದ್ದು ಹಾದರವಾದರೂ ಇರುವಷ್ಟು ದಿನ ಆಸ್ಪತ್ರೆಯಲ್ಲಿ ಮಾತೃವಾತ್ಯಲ್ಯದಿಂದ ಸೌಮ್ಯಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ.
ಇತ್ತ ಸೌಮ್ಯಾ ತಾನು ಪ್ರೀತಿಸಿದ ಸಂತೋಷನೊಂದಿಗೆ ಮದುವೆಯಾಗಿ ಮಗು ಪಡೆಯುವುದು, ಅವನ ಅಣ್ಣ ಸಮೀರ ತಾನಿದ್ದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಇಬ್ಬರಿಗೂ ಕೆಲಸ ಕೊಡಿಸಿ ಬಾಡಿಗೆ ಮನೆ ಮಾಡಿಕೊಡವುದು, ಆದರೆ ವಿಧಿ ಅವಳ ಬಾಳಲ್ಲಿ ಮತ್ತೆ ಆಟವಾಡುವುದು, ಸಂತೋಷ ಕೆಲಸ ಮಾಡುವಾಗ ಕಟ್ಟಡದ ಕಬ್ಬಿಣ ಮೈಮೇಲೆ ಬಿದ್ದು ಸಾವನ್ನಪ್ಪುವುದು, ಮದುವೆಯಾಗದೆ ಉಳಿದಿದ್ದ ಸಮೀರ ಕೆಲವು ದಿನಗಳ ಬಳಿಕ ಸೌಮ್ಯಾಳಿಗೆ ಬಾಳು ಕೊಡುವುದು, ಮತ್ತೊಂದು ಗಂಡುಮಗು ಹುಟ್ಟುವುದು ಹೀಗೆ ಕಾದಂಬರಿ ಸಾಗುತ್ತದೆ. ಕೊನೆಯಲ್ಲಿ ಗುಬ್ಬಿಗೆ ಅಳ ಆಸೆಯಂತೆ ಗೆಜ್ಜೆ ಖರೀದಿಸಿ ಊರಿಗೆ ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಆಗ ಆಕೆ ಅನಾರೋಗ್ಯದಿಂದ ಮಲಗಿರುತ್ತಾಳೆ. ಅವಳಿಗೆ ಗೆಜ್ಜೆ ತೊಡಿಸುತ್ತಾಳೆ. ಆಗ ಗುಬ್ಬಿ ತಾನು ಜೀವನದಲಿ ಅನುಭವಿಸಿದ, ಸೌಮ್ಯಾಳಿಂದ ಮುಚ್ಚಿಟ್ಟಿದ್ದ ವೃತ್ತಾಂತವನ್ನೆಲ್ಲ ಹೇಳುತ್ತಾಳೆ.
ಮಾರನೆಯ ದಿನ ಸೌಮ್ಯಾ ಜಾತ್ರೆಗೆಂದು ಹೊರಡುವ ವೇಳೆ ಗುಬ್ಬಿಯ ಹದಗೆಟ್ಟ ಅರೋಗ್ಯದ ವಾರ್ತೆ ಬರುತ್ತದೆ. ಅಲ್ಲಿಗೆ ಧಾವಿಸಿದಾಗ ಆಕೆ ಸಾವನ್ನಪ್ಪಿರುತ್ತಾಳೆ. ಒಂದು ದಿನವಾದರೂ ತಾನು ಕೊಟ್ಟ ಗೆಜ್ಜೆ ಧರಿಸಿ ಆಕೆ ಓಡಾಡಬೇಕಿತ್ತು ಎನಿಸುತ್ತದೆ ಸೌಮ್ಯಾಳಿಗೆ. ಗುಬ್ಬಿಯ ನೋವಿಗೆ ಮರುಗುತ್ತಾಳೆ. ಜೀವನದಲ್ಲಿ ಎಲ್ಲರನ್ನೂ ಕಳಕೊಂಡ ತನ್ನ ನೋವಿಗೆ ಸಮೀರ ಮಾತ್ರ ಉತ್ತರವಾಗಿದ್ದಾನೆ ಎಂದುಕೊಳ್ಳುತ್ತಾಳೆ.
ಈ ಕಾದಂಬರಿಯಾದ್ಯಂತ ಗೆಜ್ಜೆಯಷ್ಟೇ ಸೌಮ್ಯಾಳ ನೋವೂ ಸಹ ಧ್ವನಿಸುತ್ತದೆ. ಗೆಜ್ಜೆ ಇಲ್ಲಿ ಇಬ್ಬರ ಮೂಲಕ ಬಳಕೆಯಾಗಿದೆ. ಒಂದು ಗುಬ್ಬಿಯ ಆಸೆ ಕಾಲ್ಗೆಜ್ಜೆ ಹಾಕಿಕೊಂಡು ಓಡಾಡಬೇಕೆನ್ನುವುದಾದರೆ, ಇನ್ನೊಂದೆಡೆ ಸೌಮ್ಯಾಳಿಗೆ ಗೆಜ್ಜೆ ಕಟ್ಟುವುದು. ಅಂದರೆ ಅವಳನ್ನು ವೇಶ್ಯೆಯಾಗಿಸಬೇಕೆಂಬ ತಾಯಿಯ ಬಯಕೆ. ಆಕೆಯೂ ವೇಶ್ಯೆಯೇ ಆಗಿರುತ್ತಾಳೆ. ಗುಬ್ಬಿಯೂ ಅದೇ ಕೆಲಸದವಳು. ಆದರೆ ಗೆಜ್ಜೆ ಪೂಜೆ ಇಬ್ಬರಿಗೂ ಆಗುವುದೇ ಇಲ್ಲ. ಗುಬ್ಬಿ ಸಾಯುವ ಮುನ್ನಾದಿನ ಗೆಜ್ಜೆ ಯನ್ನು ಸೌಮ್ಯಾಳಿಂದ ಪಡೆಯುತ್ತಾಳೆ. ಆದರೆ ಸೌಮ್ಯಾ ಗೆಜ್ಜೆಪೂಜೆ ಮಾಡಿಸಿಕೊಳ್ಳದೆ ಹಾಗೆಯೇ ನೆಮ್ಮದಿಯ ಜೀವನ ಕಾಣುತ್ತಾಳೆ. ಕೃತಿಯಲ್ಲಿ ಪ್ರತಿ ಹಂತದಲ್ಲೂ ಸೌಮ್ಯಾಳ ನೋವಿನ ಮೌನ ಧ್ವನಿಸುತ್ತದೆ.
ಒಟ್ಟಿನಲ್ಲಿ, ಒಂದು ಕಲಾತ್ಮಕ ಕಾದಂಬರಿಯಾಗಿ ಓದುಗರ ಹೃದಯದಲ್ಲಿ ಇದು ನಮ್ಮೆದುರು ನಿಲ್ಲುತ್ತದೆ. ಲೇಖಕಿ ಕಥೆಯನ್ನು ಹೆಣೆದ ಕೌಶಲ ಮತ್ತು ಉದಾತ್ತ ಪಾತ್ರ ಚಿತ್ರ್ರಣ ಸಚೇತನ ಶಿಲ್ಪದಂತೆ ಮನಸೆಳೆಯುತ್ತದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
9.೬..೨೦೨೫
...............................

Comments
Post a Comment