ರಕ್ತಿ, ವಿರಕ್ತಿ ತುಂಬಿರುವ
‘ಅಕ್ಕನಂತೊಬ್ಬಳು ಅನುರಕ್ತೆ’
ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನಲ್ಲಿ ಅನುರಕ್ತಿಯಾದುದು ಆಧ್ಯಾತ್ಮಿಕ ಸ್ಥರದ್ದು. ಆದರೆ ಇಲ್ಲಿ ‘ನೀಲ’ ಕವಯತ್ರಿಯ ಆರಾಧ್ಯದವನಾಗಿದ್ದು ಅವನಲ್ಲಿ ಲೇಖಕಿಯ ಅನುರಕ್ತಿಯು ಲೌಕಿಕ ಮತ್ತು ಸಾಂಸಾರಿಕ ಸ್ಥರದ್ದು. ಪ್ರೇಮಿಯಾಗಿಯೂ, ಗೃಹಿಣಿಯಾಗಿಯೂ ಏಕಕಾಲದಲ್ಲಿ ತಮ್ಮೆಲ್ಲ ಉತ್ಕಟತೆ, ಸಂದಿಗ್ಧತೆ, ಸಂಕಟ ಮತ್ತು ತಲ್ಲಣಗಳೊಂದಿಗೆ ಸಮಕಾಲೀನ ಸಮಾಜ ಮತ್ತು ಸಂದರ್ಭವನ್ನು ಮನೋಹರವಾಗಿ ‘ಅಕ್ಕನಂತೊಬ್ಬಳು ಅನುರಕ್ತೆ’ ಕವನ ಸಂಕಲನದಲ್ಲಿ ಚಿತ್ರಿಸಲಾಗಿದೆ.
ಈ ಕೃತಿಯ ಲೇಖಕರು ಪೂರ್ಣಿಮಾ ಸುರೇಶ್. ಇವರು ಉಡುಪಿ ಸಮೀಪದ ಹಿರಿಯಡ್ಕದವರು. ಪ್ರತಿಭಾನ್ವಿತೆ. ತಮ್ಮ ಸೃಜನಶೀಲ, ಸಂಶೋಧನಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡ ನಾಡು-ನುಡಿಯ ಸೇವೆಯಲ್ಲಿ ತೊಡಗಿದ್ದಾರೆ.
ಕವನ ಸಂಕಲನದಲ್ಲಿ ತಮ್ಮ ಅಂತರಂಗದ ಎಲ್ಲ ಭಾವಗಳನ್ನು ಹರವುತ್ತ ಹೋಗಿದ್ದಾರೆ. ಒಳದನಿಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮನಸ್ಸನ್ನು ಪ್ರವರ್ತಿಸಿಕೊಂಡಿದ್ದಾರೆ. ಒಳಬಾಳಿನ ಸೂಕ್ಷ್ಮ ಇಲ್ಲಿ ಅಭಿವ್ಯಕ್ತಿಗೊಂಡಿದೆ. ಕವಯತ್ರಿಯ ಭಾಷಾ ವೈವಿಧ್ಯ ಮತ್ತು ಭಾಷಾ ಸಂಪತ್ತನ್ನು ಇಲ್ಲಿ ಕಾಣಬಹುದು. ಇಲ್ಲಿನ ಕವಿತೆಗಳು ಅಂತರಂಗಕ್ಕೆ ಕಚ್ಚಿಕೊಂಡು ಬಿಡುತ್ತವೆ. ಈ ಕೃತಿಯ ವಿಶೇಷವೆಂದರೆ ಕವಯತ್ರಿಗೆ ‘ನೀಲ’ ಇಲ್ಲಿ ಕಾವ್ಯದ ಕೇಂದ್ರ ಪ್ರತಿಮೆ. ಅವನನ್ನು ಇಲ್ಲಿ ಕಂಡಿದ್ದಾರೆ. ಅವನಿಗಾಗಿ ಅವರ ಮನಸ್ಸು ಸದಾ ಹಂಬಲಿಸುತ್ತದೆ. ಈ ಹಂಬಲ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನಿಗಾಗಿ ಹಂಬಲಿಸುವ ತೀವ್ರತೆಗೆ ಸಮನಾದುದು. ರಕ್ತಿ ಮತ್ತು ವಿರಕ್ತಿ ಈ ಕವನ ಸಂಕಲನದ ಉದ್ದಗಲಕ್ಕೂ ಕಂಡುಬರುತ್ತದೆ.
ಕೃತಿಯಲ್ಲಿ ೫೨ ಕವನಗಳ ಗುಚ್ಛವಿದೆ. ಮೊದಲ ಕವನ ‘ಅವನೆಂದರೆ’. ಇದರಲ್ಲಿ ತನ್ನ ಮಗ, ಅಜ್ಜ-ಅಜ್ಜಿ ಮತ್ತು ಗೆಳೆಯನನ್ನು ಕಂಡಿದ್ದಾರೆ. ಅಮ್ಮ ಎಂಬ ಚೊಚ್ಚಲ ನಾದದ ಮಕರಂದ ಸವಿಸಿದ ಹೂ ಕಂದ/ ಅವನು ನನ್ನ ಪಾಲಿನ ಕ್ರಾಂತಿ, ಅನವರತ ತವಕಿಸುವ ಸಂಭ್ರಮ/ ಎಂದು ಮಗನನ್ನು ಕುರಿತು ಹೇಳುತ್ತಾರೆ. ತಮ್ಮ ಅಜ್ಜನಲ್ಲಿ ಪುರುಷೋತ್ತಮನ ಹೊಳಹನ್ನು ಇಲ್ಲಿ ಕಂಡಿದ್ದಾರೆ. ಹಸುಳೆ ಕಣ್ಣ ಎಳೆಎಳೆಯಾಗಿ ಲಕಲಕಿಸುವ ಹೊಳಪು ಎನ್ನುತ್ತಾ ಹಲ್ಲಿರದ ಹಣ್ಣುಹಣ್ಣು ಜೀವ ನನ್ನಜ್ಜಿಯ ತನ್ಮಯಕರ ಬಿಸುವು ಎಂದು ವರ್ಣಿಸುತ್ತಾರೆ. ಗಂಡಿನ ಬಗ್ಗೆ ಮೂಡುವ ಎಲ್ಲಾ ಬಗೆಯ ಮಿಶ್ರಭಾವಗಳ ನಡುವೆಯೂ ತನ್ನ ಒಲವನ್ನು ಪುರುಷನಿಗೆ ಧಾರೆ ಎರೆಯಲು ಹಿಂಜರಿಯದ ಜಟಿಲವಾದ ಮನೋಧರ್ಮ ಈ ಪದ್ಯದಲ್ಲಿ ಕಂಡುಬರುತ್ತದೆ.
ಈ ಸಮಾಜ ನಮ್ಮನ್ನು ಮೀನ್ಮನೆಯಲ್ಲಿರುವ ಮೀನಿನಂತೆ ಕಾಣುತ್ತದೆ. ಕಟ್ಟಿಕೊಟ್ಟ ಚೌಕಟ್ಟಿನಲ್ಲಿ ಒಂದು ಹನಿಪ್ರೀತಿಗೆ ಬಾಯಗಲಿಸಿ ಕಾಯಬೇಕು. ಹೊರಗಿದ್ದವರು ಇದರ ಅಂದ ನೋಡುತ್ತಾರೆ ಎನ್ನುವುದನ್ನು ‘ಮೀನ್ಮನೆ’ ಕವನದಲ್ಲಿ ಚಿತ್ರಿಸಿದರೆ, ಪ್ರೇಮಿಗಳಿಬ್ಬರು ಉದ್ಯಾನದಲಿ ಎದುರು ಬದುರು ಕುಳಿತರೂ ತುಟಿಯ ಬಿಚ್ಚದೆ/ಬರಿ ಮೌನವನೆ ಮೆದ್ದರು/ ಅವನು ಅವಳನ್ನು ಅವಳು ಅವನನ್ನು/ ತುಂಬಿಕೊಳುತ/ ಎಂದು ಸುಮನೋಹರವಾಗಿ ಚಿತ್ರಿಸುತ್ತಾ ತುಟಿಪಿಟಕ್ಕೆನ್ನದೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥವಾಗದವರಂತೆ ಕುಳಿತಿದ್ದನ್ನು ವಿವರಿಸುತ್ತಾರೆ.
‘ಅಕ್ಕನಂತೊಬ್ಬಳು ಅನುರಕ್ತೆ’ ಎಂಬ ಕವನದಲ್ಲಿ ತಾನು ಸಹ ಅಕ್ಕನಂತೆ ಚಿಂತೆಯಲ್ಲಿ ಸಾಗುತ್ತಾ ‘ನಿನ್ನನ್ನೇ ಹುಡುಕಿ ಪಡೆಯುವ ಬಯಕೆ ನನ್ನ ಗುರಿ’ ಎನ್ನುತ್ತಾ ಸಾಗುತ್ತಾರೆ. ನಾನು ನನ್ನತನವೆಂಬುದನ್ನು/ಆಗಸದ ಉದ್ದಗಲ ಆದಷ್ಟು ಮಲಗಿದ್ದಾನೆ./ ಚೆಲುವ ನೀಲ-ಭಾಮಿನಿಯರೆದೆ ಚೋರ/ನಾನು ಅವನ ಬಾಹುಗಳಲ್ಲಿ ಸೆರೆಯಾಗಬೇಕು/ ಬಿಟ್ಟುಬಿಡಿ ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ/ ಎನ್ನುತ್ತಾರೆ. ಇಲ್ಲಿ ಕವಯಿತ್ರಿ ತಾನು ಆರಾಧಿಸುವ ನೀಲನಲ್ಲಿ ಅನುರಕ್ತ್ತಿಯನ್ನು ತೋರಿಸುತ್ತಾರೆ. ಈ ಕವನ ಕವಯತ್ರಿಯ ಸೃಜನಶೀಲತೆಗೆ ಸಾಕ್ಷಿಯಾಗಿದೆ. ‘ಚಹಾಯಣ’ ಎಂಬ ಕವನದಲ್ಲಿ ಪ್ರೀತಿ ಹೇಗೆ ಮನುಷ್ಯನನ್ನು ಕಾಡುತ್ತದೆ, ಅದನ್ನು ಹತ್ತಿಕ್ಕಲಾಗದೆ ಆತ ಹೇಗೆ ಪರಿತಪಿಸುತ್ತಾನೆ ಎನ್ನುವುದನ್ನು ಚಹಾದ ಉದಾರಣೆಯೊಂದಿಗೆ ಸುಂದರವಾಗಿ ನೀಡಿದ್ದಾರೆ. ಚಹಾ ಹೆಸರಿನ ಅಮೃತ ನನ್ನ ಬೆನ್ನು ಹತ್ತಿ ಭಾವನೆಗಳ ಮುಕ್ತಿ ಅದಕ್ಕಾಗಿ ಆ ದೊರೆಯುವ ಬಯಕೆಯನ್ನು ಬಿತ್ತಿ ಎನ್ನುವ ಮೂಲಕ ಮೈಮನ ನೆಮ್ಮದಿಯನ್ನು ಮರಳಿ ಪಡೆಯಲು ಕಾರಣವಾಗುತ್ತದೆಯೋ ಹಾಗೆ ಗೆಳೆಯನು ಕಪ್ಪಿನಲ್ಲಿ ತುಂಬಿರುವ ಬಿಸಿ ಚಹಾ ಎಂಬ ಸುಂದರವಾದ ವರ್ಣನೆಯನ್ನು ಚಿತ್ರಿಸಿದ್ದಾರೆ.
‘ಹಂಪಿಯ ಸುತ್ತು ಸುಳಿದು’ ಎಂಬ ಕವನದಲ್ಲಿ ಹಾಳು ಹಂಪಿ ಅವರ ಅಂತರಂಗವನ್ನು ತುಂಬಿಕೊಳ್ಳುತ್ತದೆ. ಗರ್ಭಗುಡಿಯಲ್ಲಿ ಭಗ್ನವಾಗಿರುವ ದೇವಮೂರ್ತಿಗಳು ಅವರ ಮನೋಗರ್ಭವನ್ನು ತಲ್ಲಣಗೊಳಿಸುತ್ತವೆ. ಪದ್ಯದ ಕೊನೆಯಲ್ಲಿ ಹಾಳುಹಂಪಿ ಅತ್ಯಾಚಾರಕ್ಕೊಳಗಾದ ಒಬ್ಬ ಹೆಣ್ಣುಮಗಳ ಶರೀರವಾಗಿ ಅವರಿಗೆ ಗೋಚರವಾಗುತ್ತದೆ. ನೀಲ, ಗರ್ಭಗಡಿಯಲ್ಲಿ ಮೆರೆದಿರುವ/ ನಿನಗೆ ತ್ರಿಕಾಲಪೂಜೆ/ ಅತ್ಯಾಚಾರಕ್ಕೊಳಗಾಗುವ ಮನ/ ಆಗದಿರಲಿ ಈ ಹಾಳುಹಂಪಿಯಂತೆ/ ಎನ್ನುವ ಮೂಲಕ ಆ ದೇವಾಲಯದ ಪಾವಿತ್ರ್ಯ ಮತ್ತು ಘನತೆಯನ್ನು ಹಾಳುಗೆಡವಬೇಡಿ ಎಂದು ಸೂಚಿಸುತ್ತಾರೆ. ಇದು ನಮ್ಮ ಮನಸ್ಸಲ್ಲಿ ಮರೆಯಾಗದೆ ಸ್ಮರಣೆಯಾಗಿ ಉಳಿದುಬಿಡುತ್ತದೆ.
ಮಹಿಳೆ ಪುರುಷನಿಗೆ ಪತಿಯಾಗಿ ದಕ್ಕಬೇಕೋ ಅಥವಾ ಪ್ರಿಯತಮೆಯಾಗಿ ದಕ್ಕಬೇಕೋ ಎಂಬ ಪ್ರಶ್ನೆಯನ್ನು ಕವಯಿತ್ರಿ ಮುಂದಿಡುವ ಕವನ ‘ಪ್ರೇಯಸಿ ಆಗುವುದೆಂದರೆ’. ಮಡದಿಯ ಪಟ್ಟ ನಿಭಾಯಿಸುವುದು ಕಷ್ಟ/ ಅವನ ಉಪಚಾರ ಪದೇ ಪದೇ ದೇಖಬಾಲಿ/ ಪ್ರೇಯಸಿಯಾಗುವುದೆಂದರೆ ಎಂತಹ ಖುಷಿ/ ಬಣ್ಣಿಸಲು ಅಸದಳ ಅದರ ರುಚಿ/ ಮಡದಿಯ ಪಟ್ಟ ತಂದೊಡ್ಡುವುದು ಕಷ್ಟ/ ನೆರವೇರದು ಯಾವುದೇ ಮನಸ್ಸಿನಿಷ್ಟ/ ಎನ್ನುತ್ತಾರೆ. ಮಡದಿಯಾಗುವುದೆಂದರೆ ಸ್ವಂತ ಬದುಕನ್ನು ಒತ್ತೆ ಇಟ್ಟಂತೆ/ ಆದರೆ ಪ್ರೇಯಸಿಯ ಪದವಿ ಮುತ್ತು ಕೊಟ್ಟಂತೆ/ ಆತ್ಮೀಯ ಬದುಕು ಕಾತರ, ತವಕ- ತಲ್ಲಣಗಳಲ್ಲಿ ಜೀವ ಸವೆಸುವಂತದ್ದು ಆಕೆ ತನ್ನೊಳಗನ್ನೇ ಮರೆಯುತ್ತಾಳೆ. ಆದ್ದರಿಂದ ಇದೇ ಆಕೆಯ ಬದುಕಾಗಿದೆ ಎನ್ನುತ್ತಾ ಮಡದಿಯಾಗಬಾರದು ಎಂಬ ತೀರ್ಪು ಕೊಡುತ್ತಾರೆ.
ತಮ್ಮ ಮಗು ಮತ್ತು ತಾತನ ಬಗ್ಗೆ ಕವಯತ್ರಿ ಬರೆದ ಕವನಗಳು ತುಂಬಾ ಆಕರ್ಷಕವಾಗಿವೆ. ತಾತನ ಬದುಕಲ್ಲಿ ಮುಖ್ಯವಾಗಿ ಕಾಣುವುದು ತಾನು ತನಗಾಗಿ ಬದುಕುತ್ತಲೇ ಸುತ್ತಮುತ್ತಲಿನ ಎಲ್ಲರಿಗೂ ತನ್ನ ಪ್ರೀತಿಯ ಮತ್ತು ಸುಖದ, ಕಷ್ಟದ ಕಾವು ದಕ್ಕುವಂತೆ ಬದುಕುವುದಾದರೆ, ಹತ್ತು ಜನರ ಮಧ್ಯೆಯೇ ಓಡಿಬಂದು ಕೆನ್ನೆಗೆ ಮುತ್ತಿಕ್ಕುವ ಮುಗ್ಧ ಮಗ ಬದುಕಿನ ಇನ್ನೊಂದು ಬಗೆಯ ಸ್ವಚ್ಛ ಚೆಲುವಿನ ಪ್ರತೀಕವಾಗುತ್ತಾನೆ.
‘ನೀಲ’ ಕವಯತ್ರಿಯ ಅಂತಂರಗದಲ್ಲಿ ಆವರಿಸಿಬಿಟ್ಟಿರುವುದು, ಅವನ ಪೂರ್ಣ ದರ್ಶನ ಇನ್ನೂ ಅವರಿಗೆ ಸಿಗದಿರುವುದು, ಹುಡುಕಾಟದಲ್ಲ್ಲಿರುತ್ತಲೇ ಅಕ್ಕನಂತೊಬ್ಬಳು ಅನುರಕ್ತೆ ನೆನಪಾಗುತ್ತಾಳೆ. ಆಗ ಅಕ್ಕನಲ್ಲೇ ನೀಲನನ್ನು ಕಾಣುತ್ತಾರೆ.... ಹೀಗೆ ಕವನ ಸಂಕಲನ ಹೊಸ ವಿನ್ಯಾಸದೊಂದಿಗೆ ತೆರೆದುಕೊಂಡಿರುವುದೇ ಇದರ ವೈಶಿಷ್ಟ್ಯ. ಹೀಗೆ ಕವಯತ್ರಿ ಇಡೀ ಕವನ ಸಂಕಲನದಲ್ಲಿ ತನ್ನನ್ನು ಎಲ್ಲಿಯೂ ಬಂಧಿಸಿಕೊಳ್ಳದೆ, ಹಾರುವ ಕ್ಷೇಮವಲಯವನ್ನು ತಿರಸ್ಕರಿಸುತ್ತಾರೆ. ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಾಡುವ ಅಲೌಕಿಕ ತುಡಿತಗಳನ್ನು ತೋರ್ಪಡಿಸುತ್ತಾರೆ. ಕೆಲವು ಕವನಗಳಲ್ಲಿ ತಮ್ಮ ಆತ್ಮಪರೀಕ್ಷೆ ಮಾಡಿಕೊಳ್ಳುವುದನ್ನೂ ತೋರ್ಪಡಿಸಿದ್ದಾರಹೆಗಡೆ
ದತ್ತಾತ್ರೇಯ ಹೆಗಡೆ
೬.೬.೨೦೨೫
........................

Comments
Post a Comment