ಬದುಕನ್ನು ಆಳವಾಗಿ ತಟ್ಟಿದ
‘ಕಡಲು ನೋಡಲು ಹೋದವಳು’
ಇದು ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧದ ಕೃತಿ. ಇಲ್ಲಿನ ಬರಹಗಳೆಲ್ಲಾ ಲೇಖಕಿಗೆ ಆಳವಾಗಿ ತಟ್ಟಿದವು, ಹಲವು ಪಾಠ ಕಲಿಸಿದವು, ಅಂತರಂಗದ ಕಣ್ಣು ತೆರೆಸಲು ನೆರವಾದವು, ಸಹಜ ಸೌಹಾರ್ದವನ್ನು ಯಾವ ಆಡಂಬರವಿಲ್ಲದ ಮೈಗೂಡಿಸಿಕೊಳ್ಳಲು ನೆರವಾದ ಘಟನೆಗಳೇ ಆಗಿವೆ. ಹೀಗಾಗಿ ಈ ಪುಸ್ತಕ ಓದುಗರಿಗೆ ಆಪ್ತವಾಗುತ್ತದೆ. ಕೃತಿಯಲ್ಲಿರುವ ಘಟನೆಗಳೆಲ್ಲಾ ನಮ್ಮ ಜೀವನದಲ್ಲಿ ಹಾದುಹೋದವೇ ಆಗಿವೆ. ಗ್ರಾಮೀಣ ಪರಿಸರದವರಿಗೆ ಬಾಲ್ಯದಿಂದ ಹಿಡಿದು, ನೌಕರಿ ಹಿಡಿಯುವವರೆಗೆ ಅಲ್ಲಿ ಕಂಡುಂಡ, ಅನುಭವಿಸಿದ ವಿವಿಧ ಘಟನೆಗಳನ್ನು ಇಲ್ಲಿ ಸವಿಯಾಗಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿನ ಪ್ರಬಂಧಗಳಲ್ಲಿ ರುಚಿಗೆ ತಕ್ಕಷ್ಟು ಹಾಸ್ಯವಿದೆ. ಸಾಲುಗಳೆಲ್ಲ ಆಪ್ತವಾಗುತ್ತವೆ, ಮಲೆನಾಡಿನ, ಕರಾವಳಿಯ ಪ್ರಕೃತಿ ಸೌಂದರ್ಯ, ಇಲ್ಲಿ ಒಂದೇ ಸಮನೆ ಬೀಳುವ ಮಳೆ, ಯ ವರ್ಣನೆ, ತಿಂಡಿಗಳು, ಜನಜೀವನ ತುಂಬಾ ಇಷ್ಟವಾಗುತ್ತದೆ. ಈ ಕೃತಿಯ ಬರಹಗಳೆಲ್ಲಾ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವು. ಪ್ರಬಂಧಗಳನ್ನು ಓದುತ್ತ ಹೋದಂತೆ ಇಡಿ ಪುಸ್ತಕವನ್ನೇ ಓದಿಸಿಬಿಡುತ್ತವೆ. ಸರಳ ಶೈಲಿಯ ಅದರಲ್ಲೂ ವಿಶೇಷವಾಗಿ ತುಳುನಾಡಿನ ಅನುಭವಗಳನ್ನು ಹೊತ್ತ ಕೃತಿ ಇದಾಗಿದೆ. ಪ್ರಬಂಧಗಳ ಶೀರ್ಷಿಕೆಯೂ ಸಹ ನಮ್ಮನ್ನು ಸೆಳೆಯುತ್ತವೆ.
ಒಂದು ಇಡಿ ತಲೆಮಾರನ್ನು ಬೆಸೆದಿದ್ದ, ಗಟ್ಟಿಗೊಳಿಸಿದ್ದ ಅನ್ಯಾಯವನ್ನು ಪ್ರತಿರೋಧಿಸಲು ಕಲಿಸಿದ್ದ, ಭಾವನಾತ್ಮಕ ಕೊಂಡುಕೊಳ್ಳುವಿಕೆಯೊಂದು ಆ ಹಿಂದಿನ ತಲೆಮಾರಿಗೆ ಮುಗಿದುಹೋಗುತ್ತದೆಯೇ? ಹೊಡೆದಾಡಿ ರಕ್ತ ಹರಿಸಿ ಅನಾಥ ಹೆಣವಾಗುವ ಆತಂಕವನ್ನು ಲೇಖಕಿ ಮೊದಲ ಪ್ರಬಂಧ ‘ಉನ್ಮತ್ತ ಕುರುಕ್ಷೇತ್ರವೂ, ಬೃಂದಾವನದ ಕೊಳಲೂ’ ಇದರಲ್ಲಿ ವ್ಯಕ್ತಪಡಿಸುತ್ತಾರೆ. ಲೇಖಕಿಯ ಮನೆಯ ಆತ್ಮೀಯರಾಗಿದ್ದ ಚೆನ್ನಪ್ಪಜ್ಜನ ಮೊಮ್ಮಗಳು ಗೌರಿ ಲೇಖಕಿಯ ಗೆಳತಿ. ಅವಳ ಅಣ್ಣ ಮುಸ್ಲಿಮರ ಬಗ್ಗೆ ಅನುಮಾನ ಬರುವಂತಹ ಮಾತು ಹೇಳಿ ಅವಳ ಮನದಲ್ಲಿ ವಿಷ ಬೀಜ ಬಿತ್ತಿದ್ದರಿಂದ ಆಕೆ ಲೇಖಕಿ ಜೊತೆ ನಿಂತು ಹೆಚ್ಚಿನ ಮಾತನಾಡದೆ ಹೋಗುವಂತಾಗಿದ್ದಳು. ಲೇಖಕಿ ಗೌರಿಯ ಮನೆಗೆ ಹೋಗಿ ಆಕೆಯ ಮನಸ್ಸನ್ನು ಸರಿಪಡಿಸಿ ಮನೆಗೆ ಬರುವ ಹೊತ್ತಿಗೆ ಆಕೆಯ ಅಣ್ಣ ಮೆಸೇಜ್ ಇನ್‌ಬಾಕ್ಸ್‌ನಲ್ಲಿ ‘ಐ ಯಾಮ್ ಸಾರಿ’ ಎಂಬ ಸಂದೇಶವನ್ನು ಹಾಕುತ್ತಾನೆ. ಹೀಗೆ ಅಮಾಯಕನ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುತ್ತಿರುವ ಕೆಲವರ ಬಗ್ಗೆ ಬರೆಯುತ್ತ ಅರ್ಥವತ್ತಾದ ತಲೆಬರಹವನ್ನು ಇದಕ್ಕೆ ನೀಡಿದ್ದಾರೆ. ‘ನನ್ನುಪ್ಪಾಪನ ಕೆಂಪಿ’ ಎನ್ನುವ ಪ್ರಬಂಧದಲ್ಲಿ ಚನ್ನಪ್ಪಜ್ಜ ಕೊಟ್ಟಿದ್ದ ಕೆಂಪಿ ಎಂಬ ಆಕಳು ಒಂದು ದಿನ ಮಳೆ ಅಬ್ಬರಕ್ಕೆ ಮೈಮೇಲೆ ಮರ ಬಿದ್ದು ಸತ್ತು ಹೋಗುತ್ತದೆ. ಅವಳ ನೆನಪು ಎಂದಿಗೂ ಕಾಡುತ್ತಿದೆ. ಅದು ನಮ್ಮ ಮನಯೆ ಸದಸ್ಯನೇ ಆಗಿತ್ತು ಎನ್ನುತ್ತಾ ಮನೆಯವರಿಗೆ ಆ ದನದೊಂದಿಗೆ ಇದ್ದ ಆತ್ಮೀಯತೆಯನ್ನು ಬಿಚ್ಚಿಡುತ್ತಾರೆ.
‘ಆಕೆ ನನ್ನ ರತ್ನಕ್ಕ ಆಗಿರಲಿಲ್ಲ’ ಎಂಬ ಬರಹದಲ್ಲಿ ರತ್ನಕ್ಕ ಲೇಖಕಿಯ ಅಮ್ಮನಿಗೆ ಅಂತರಂಗದ ಶಕ್ತಿ. ಪ್ರತಿದಿನ ಅಮ್ಮನ ಜೊತೆ ಇರುತ್ತಾಳೆ. ವಾಚಾಳಿಯಾದರೂ ಅಂತರಂಗದ ಗೆಳತಿಯ ಬಗ್ಗೆ ತುಂಬಾ ನಂಬಿಕೆ ಹೊಂದಿದ್ದರು. ಬಹಳ ವರ್ಷದ ನಂತರ ರತ್ನಕ್ಕನನ್ನು ಹುಡುಕುತ್ತಾ ಹೊರಟಾಗ ಊರ ಹೊರವಲಯದ ಜಾಗದಲ್ಲಿ ಇದ್ದಾಳೆ ಎಂಬ ಮಾಹಿತಿ ಸಿಗುತ್ತದೆ. ಅಲ್ಲಿಗೆ ಹೋಗಿ ನೋಡಿದಾಗ ಆಕೆ ಪಾರ್ಶ್ವವಾಯುನಿಂದ ಬಳಲುತ್ತಿದ್ದು ಆಕೆ ಮಗ ಚಿಕಿತ್ಸೆ ಮಾಡುತ್ತಿರುತ್ತಾನೆ. ಅವಳೊಂದಿಗೆ ಕಳೆದ ಬಾಲ್ಯ, ನೆನಪುಗಳೊಂದಿಗೆ ಮರಳುತ್ತಾಳೆ. ನಂತರ ಆಕೆ ಸಾಯುತ್ತಾಳೆ. ರತ್ನಕ್ಕನ ಅನಿರೀಕ್ಷಿತ ಭೇಟಿ, ಬುತ್ತಿಯ ಬೆಚ್ಚನೆಯ ಕೈತುತ್ತುಗಳು ಕಾಡುತ್ತವೆ. ರತ್ನಕ್ಕ ಸದಾ ಬಣ್ಣದ ಚಿಟ್ಟೆಯ ರೆಕ್ಕೆಯಾಗಿ ತಾಕುತ್ತಿರುತ್ತಾಳೆ ಎಂದು ವಿವರಿಸುತ್ತಾರೆ.
‘ಮಣಿಕಂಠನ ನಂಬಿದ ಫಕೀರಮ್ಮ’ದಲ್ಲಿ ಫಕೀರಮ್ಮ ಅಯ್ಯಪ್ಪನ ಪರಮ ಭಕ್ತೆ. ಮಡಕೆ ಮಾರುವವಳು. ಮಣಿಕಂಠನ ಹೆಸರಿನ ಹಚ್ಚೆಯನ್ನು ಕುತ್ತಿಗೆ ಕೆಳಗೆ ಹಾಕಿಸಿಕೊಂಡಿರುತ್ತಾಳೆ. ಶುದ್ಧ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದ ಈಕೆ ಗಟ್ಟಿ ದ್ವನಿಯ, ಮರ್ಯಾದೆ, ಕಾಟಾಚಾರಗಳಿಗೆ ಬಲಿಯಾಗದ, ಅನಾಚಾರಗಳನ್ನು, ದೌರ್ಜನ್ಯವನ್ನು ವಿರೋಧಿಸುತ್ತಿದ್ದವಳು. ದುಡಿಮೆ ಸಾಕೆನಿಸಿ ಊರಿಗೆ ತೆರಳುತ್ತಾಳೆ. ಅಲ್ಲಿ ಮಗ ಕುಡಿತಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಬದುಕಿನ ಋಣ ಇಷ್ಟೇ ಎನ್ನುವುದನ್ನು ಲೇಖಕಿ ಇಲ್ಲಿ ವಿವರಿಸಿದ್ದಾರೆ.
‘ಕಡಲು ನೋಡಲು ಹೋದವಳು’ ಇದರಲ್ಲಿ ಪಾಲಕರಿಂದ ದೂರವಿರುವ ಮಕ್ಕಳೆಲ್ಲ ಅಪ್ಪ-ಅಮ್ಮನನ್ನು ಮರೆಯುವುದಿಲ್ಲ ಎಂಬ ಸಂದೇಶವಿದೆ. ವಯಸ್ಸಾದ ದಂಪತಿಗಳು ಕಡಲಂಚಿನಲ್ಲಿ ಇಟ್ಟುಕೊಂಡ ಟೀ, ಕಾಫಿ, ಚುರ್ಮುರಿ ಸ್ಟಾಲ್ ನಡೆಸುತ್ತಿದ್ದು, ಅವರ ಕುಟುಂಬದ ವಿಚಾರ ಕೇಳಿದ ಲೇಖಕಿ ರೆಕ್ಕೆ ಬಲಿತ ಮೇಲೆ ಹಕ್ಕಿಗೆ ಗೂಡು ಮತ್ತು ತುತ್ತು ನೆನಪಾಗುವುದಿಲ್ಲವಂತೆ ಅಲ್ವಾ ಎಂದಾಗ ಮಕ್ಕಳು ನಮ್ಮನ್ನು ದೂರ ಮಾಡಿಲ್ಲ. ಆತ್ಮೀಯರಾಗಿದ್ದಾರೆ. ನಾವೇ ದುಡಿದು ತಿನ್ನುವುದು ತಪ್ಪೇ ಎಂದು ಪ್ರಶ್ನಿಸುತ್ತಾ, ಮಕ್ಕಳ ಬಗ್ಗೆ ಈ ರೀತಿ ಯೋಚಿಸುವುದು ಸರಿಯಲ್ಲ ಎನ್ನುತ್ತಾರೆ. ‘ಒಂದು ಮದುವೆಯ ಸಂಭ್ರಮ’ದಲ್ಲಿ ಮಡಿಕೇರಿಗೆ ಕೊಡವ ಗೆಳತಿಯ ಮನೆಗೆ ಮದುವೆಗೆ ಹೋದದ್ದನ್ನು ನೆನಪಿಸಿಕೊಳ್ಳುತ್ತಾರೆ ತಮ್ಮನ್ನೆಲ್ಲ್ಲ ಮತ್ತು ಬಂದವರನ್ನೆಲ್ಲ ಅತಿ ಪ್ರೇಮದಿಂದ ಕಂಡು ಉಪಚರಿಸಿದ್ದ ಅಜ್ಜಿ ಬಸ್ ನಿಲ್ದಾಣದವರೆಗೆ ಬೀಳ್ಕೊಟ್ಟಿದ್ದು, ನಂತರದ ಒಂದೇ ವಾರದಲ್ಲಿ ಅಜ್ಜಿ ಅಪಘಾತದಲ್ಲಿ ತೀರಿಕೊಂಡಿದ್ದನ್ನು ವಿವರಿಸುತ್ತಾ ಇಂದಿಗೂ ಗೆಳತಿಯ ಅಜ್ಜಿಯ ಬಗ್ಗೆ ಕಾಡುತ್ತಿದೆ. ಆಕೆ ತನ್ನನ್ನು ತಾನೇ ಸುಟ್ಟುಕೊಂಡು ಆಕಾಶಪೂರ್ತಿ ಬೆಳಗುವ ನಕ್ಷತ್ರ ಎಂದು ಬಣ್ಣಿಸುತ್ತಾರೆ.
‘ಬೆಳಕು ಸೃಜಿಸುವ ಶಾಪಗ್ರಸ್ತ ದೇವಕನ್ಯೆ’ಯಲ್ಲಿ ಎಂಬಲ್ಲಿ ಅನೀತಿ ವಿರೋಧಿಸುವ ಸುಂದರಿಯು ಮಗಳ ಮದುವೆ ನಂತರ ಆಕೆಯನ್ನು ನೋಡಲು ಅಳಿಯನ ಮನೆಗೆ ಹೋದಾಗ ಮಗಳು ಕೊಟ್ಟಿಗೆಯಲ್ಲಿರುತ್ತಾಳೆ. ಮುಟ್ಟಾದ ಹೆಂಗಸರು ಇಲ್ಲಿರಬೇಕು ಎಂಬ ನಿಯಮ ಇರುವುದನ್ನು ಗಂಡನ ಮನೆಯವರು ಹೇಳುತ್ತಾರೆ. ಎಷ್ಟೇ ತಿಳಿ ಹೇಳಿದರೂ ಅವರು ಕೇಳದಿದ್ದಾಗ ಹೆಣ್ಣುಮಕ್ಕಳಿಗೆ ಗೌರವ ಇರದ ಜಾಗದಲ್ಲಿ ಮಗಳು ಇರುವುದು ಸರಿಯಲ್ಲ ಎಂದು ಮನೆಯವರಿಗೆ ಹೇಳಿ ಆಕೆಯನ್ನು ತನ್ನ ಮನೆಗೆ ಕರೆತರುತ್ತಾಳೆ. ಅನೀತಿ ವಿರೋಧಿಸುವ ಗಟ್ಟಿನಿಲುವಿನ ಸುಂದರಿಯ ಮುಂದೆ ಇಡೀ ಜಗತ್ತಿನ ತಥಾಕಥಿತ ಸ್ತ್ರೀವಾದವನ್ನು ನಿವಾಳಿಸಿ ಎಸೆಯಬೇಕು ಎನಿಸುತ್ತದೆ ಎನ್ನುತ್ತಾರೆ
‘ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ’ ಎಂಬ ಪ್ರಬಂಧದಲ್ಲಿ ತಿಮ್ಮಪ್ಪಣ್ಣ ಕಾಯಕ ಜೀವಿ. ದೊಡ್ಡವರು. ಎಂದು ಲೇಖಕಿ ವಿವರಿಸುತ್ತಾರೆ. ಗದ್ದೆಯಲ್ಲಿ ಕೂಲಿ ಮಾಡುತ್ತ ಸಂಜೆಯ ವೇಳೆ ಶಾಲೆ ಬಿಡುವ ವೇಳೆ ಐಸ್ ಕ್ಯಾಂಡಿ ಮಾರಾಟ ಮಾಡುತ್ತಿದ್ದನು. ಬಹುದಿನದ ನಂತರ ದಿನದ ಆತನ ಮನೆಗೆ ಹೋದಾಗ ಆತನಿಗೆ ಅರಳುಮರುಳುಂಟಾಗಿತ್ತು. ಬಟ್ಟೆ ತರುವುದು, ಕತ್ತರಿಸುವುದು, ಹೊಲಿಯುವುದನ್ನು ಮಾಡುತ್ತಿದ್ದ, ಹೊಸ ಬಟ್ಟೆ ತಂದುಕೊಡು ಎಂದು ಲೇಖಕಿ ಬಳಿ ಹೇಳಿದಾಗ ತಂದುಕೊಟ್ಟಿದ್ದನ್ನು ನೆನಪಿಸುತ್ತಾ ಆತನಿಗಾಗಿ ಮರುಗುತ್ತಾರೆ.
‘ರಂಜಾನ್ ಉಪವಾಸವು, ಗೋಧಿ ಮಣ್ಣಿಯೂ’ ಎಂಬ ಪ್ರಬಂಧದಲ್ಲಿ ಮಣ್ಣಿ ಮಾಡುವುದಕ್ಕೆ ತಾಳ್ಮೆ ಬೇಕು. ಅಜ್ಜಿ ಮಾಡಿದ ಮಣ್ಣಿ ಬಹಳ ರುಚಿಕರವಾಗುತ್ತಿತ್ತು. ಮಣ್ಣಿಗಿಂತ ಅದರ ಪಾತ್ರೆಯ ಅಂಟಿಕೊಂಡಿದ್ದವೇ ರುಚಿಕರವಾಗಿದ್ದವು ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ‘ಖುದಾನಿಗೊಂದು ಕೃತಜ್ಞತೆ ಹೇಳಬೇಕು’ ಎಂಬ ಬರಹದಲ್ಲಿ ತನ್ನ ಅಮ್ಮನಿಗೆ ಕ್ಯಾನ್ಸರ್ ತಗುಲಿದ್ದನ್ನು ವಿವರಿಸುತ್ತ ಜೀವನದ ಗೋಜಲುಗಳಿಂದ ತಪ್ಪಿಸಿಕೊಂಡು ಹೊರಬಂದರೆ ಬದುಕು ಸರಳ ಎನ್ನುವ ಅಮ್ಮನ ಮಾತನ್ನು ನೆನೆಯುತ್ತಾರೆ .‘ಎಲ್ಲಿಂದಲೋ ಬಂದ ಬೇಬಿಯಣ್ಣ’ ಎಂಬಲ್ಲಿ ಮನೆಯ ನಂಬಿಕಸ್ಥನಾಗಿ, ರುಚಿಕರ ಅಡುಗೆಯವನಾಗಿ, ಅಚ್ಚುಮೆಚ್ಚಿನವನಾದದ್ದನ್ನು , ಮುಖೇಶನ ನೆನಪು, ಗೀತಕ್ಕನ ನೆನಪು, ಚಾಂದಜ್ಜ್ಜಿಯ ನೆನೆಪು, ಜೀವದ ಗೆಳತಿಯ ಬದುಕಲ್ಲಿ ಪ್ರೇಮ ಹಲವು ಬಾರಿ ಬ್ರೇಕಪ್ ಆಗಿದ್ದನ್ನು ಪ್ರಬಂಧಗಳಲ್ಲಿ ಆಕರ್ಷಕವಾಗಿ ನೇಯ್ದಿದ್ದಾರೆ.
ಓದಿದ ಮೇಲೆ ಸದಾ ಕಾಲ ನೆನಪಿನಲ್ಲಿರುವ ಪಾತ್ರಗಳು, ಘಟನೆಗಳು ಇದರಲ್ಲಿವೆ. ಕೃತಿಯ ಆರಂಭದಿಂದಲೇ ಇರುವ ಅದರ ಘಮವನ್ನು ಕೊನೆಯವರೆಗೆ ಉಳಿಸಿಕೊಂಡು ಹೋಗುವಲ್ಲಿ ಲೇಖಕಿ ಚಾತುರ್‍ಯ ಮೆರೆದಿದ್ದಾರೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
28.6.2025
.........................

Comments
Post a Comment