ಅಪೂರ್ವ ಲೋಕ ತೆರೆದಿಡುವ
‘ಧ್ವನಿಗಳು ಎದೆಯಾಳದಿಂದ’
‘ಧ್ವನಿಗಳು ಎದೆಯಾಳದಿಂದ’ ಈ ಕವನ ಸಂಕಲನದ ಮೂಲ ಲೇಖಕರು ದಿವಂಗತ ಎಸ್ ಬಿ ಶಿವಸ್ವಾಮಿ ಸೋಮಲಾಪುರ. ಇದನ್ನು ಸಂಪಾದಿಸಿದವರು ಕೆ ಎಂ ರೂಪಕಲಾ. ಮೂಲತಃ ಕೊಪ್ಪ ತಾಲೂಕಿನವರಾದ ಎಸ್ ಬಿ ಶಿವಸ್ವಾಮಿ ತಾವು ಕಂಡುಂಡ ವಿದ್ಯಮಾನಗಳನ್ನು ಸೂಕ್ತವಾಗಿ ಅವಲೋಕಿಸಿ ವಸ್ತು ವಿಷಯಕ್ಕೆ ಸೂಕ್ತ ಶಬ್ದಗಳನ್ನು ಆಯ್ದು ಕವನ ಕಟ್ಟಿದ್ದಾರೆ. ಅವರ ಸಹೃದಯತೆಯ ಇಲ್ಲಿನ ಕವನಗಳು ಸಶಕ್ತವಾಗಿವೆ.
ಇಲ್ಲಿನ ಕವನಗಳೆಲ್ಲ ಸರಸ-ವಿರಸ, ಪ್ರೀತಿ -ಪ್ರೇಮ, ಸಂಬಂಧ, ಸಂಸಾರ, ಪ್ರಕೃತಿ, ಸಮಾಜ, ಅನುಸಂಧಾನ, ಬೆಳಕು, ಹಳ್ಳಿ- ಪಟ್ಟಣ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಇವೆ. ಕವಿಯ ಬದುಕಿನ ಏಳು- ಬೀಳುಗಳು, ಸುಖ -ದುಃಖ, ಬಯಕೆ, ಭಯ, ನೋವು- ನಲಿವುಗಳ ನವಿರಾದ ಭಾವನೆಗಳನ್ನು ಈ ಕವನ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೆಲವು ಕವನಗಳು ಪ್ರಬುದ್ಧವಾಗಿವೆ, ಇನ್ನೂ ಕೆಲವು ಕವನಗಳಲ್ಲಿ ಪ್ರಾಸಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಈ ಎಲ್ಲ ಕವನಗಳು ವಿಭಿನ್ನ ಭಾವಗಳನ್ನು ಕಟ್ಟಿಕೊಡುತ್ತವೆ. ಕವಿಯ ಬತ್ತದ ಸಾಹಿತ್ಯದ ಒರತೆಯಲ್ಲಿ ಮುಗಿದಷ್ಟೂ ಕವನಗಳು ಮತ್ತೆ ಹುಟ್ಟಿ ಬರುವ ಅಥವಾ ಹೊಮ್ಮಿ ಬಂದಿದ್ದನ್ನು ಇಲ್ಲಿ ಕಾಣಬಹುದು.
ಮೊದಲ ಕವನ ‘ಮಧ್ಯರಾತ್ರಿಯಲ್ಲಿ’ ನಿನ್ನ ನೆನಪು ನನ್ನ ಬಾಗಿಲು ತಟ್ಟುತಿದೆ ಎನ್ನುತ್ತಾ ಜೀವಸ್ಪಂದನವನ್ನು ವಿವರಿಸಿದ್ದಾರೆ. ಪ್ರೇಮದ ಬೆವರ ಹನಿಯು, ಉಸಿರ ಕಟ್ಟಿಸುವ ಕಣ್ಣೀರ ಹನಿಯೂ ನಿನ್ನ ನೆನಪನ್ನು ತಟ್ಟುತ್ತಿದೆ. ಗಾಯಗೊಂಡ ಮೌನ ಅಳುತ್ತಿದೆ. ಇವು ಹಾಡಿನ ಮಾತುಗಳಲ್ಲ ಎಂದು ಮಧ್ಯರಾತ್ರಿಯ ನೆನಪನ್ನು ಕಟ್ಟಿಕೊಟ್ಟಿದ್ದಾರೆ. ‘ಸಂಸಾರ ಸಾರ’ ಎಂಬ ಕವನದಲ್ಲಿ ನೀನು ಹೇಳಿದಂತೆ ನಾನು ಕೇಳಿ/ ನಾನು ಹೇಳಿದಂತೆ ನೀನು ಕೇಳಿ/ ಒಬ್ಬರನ್ನು ಒಬ್ಬರು ಅರಿತು ಬಾಳಬೇಕು/ ಆಗ ಜೀವನ ಹೂವಿನ ಹಾರ/ ಎನ್ನುವ ಮೂಲಕ ಸಂಸಾರ ಎಂದರೆ ಹೇಗಿರಬೇಕು ಎಂಬುದನ್ನು ತುಂಬಾ ಸರಳವಾಗಿ ವಿವರಿಸಿದ್ದಾರೆ. ತಿಂಗಳಿಗೆ ಬರುವ ಸಂಬಳ ಬರೇ ಒಂದು ನೂರು ರೂಪಾಯಿ ಮಾತ್ರ. ಇದರಿಂದ ನಿನ್ನ ಆಸೆ ಪೂರೈಸಲು ಸಾಧ್ಯವಿಲ್ಲ. ಆದ್ದರಿಂದ ಒಬ್ಬರನ್ನೊಬ್ಬರು ಅರಿತು ಬಾಳ್ವೆ ಮಾಡಬೇಕು ಎನ್ನುವ ಸರಳ ಜೀವನದ ಸೂತ್ರವನ್ನು ಹೇಳುತ್ತಾರೆ.
ಪ್ರೇಮಿಗಳ ಸಂಗಮಕ್ಕೆ ದುಂಬಿ ಮತ್ತು ಹೂವು, ಚುಂಬನಕ್ಕೆ ಸಮುದ್ರ ಮತ್ತು ಚಂದ್ರ, ಪ್ರಣಯದಾಹಕ್ಕೆ ಹಗಲು ಮತ್ತು ರಾತ್ರಿ , ಲಲ್ಲೆ ಮಾತಿಗೆ ಹಕ್ಕಿಗಳ ಚಿಲಿಪಿಲಿ, ಹೋಲಿಕೆಗೆ ರಾಧಾ-ಕೃಷ್ಣರು ಏಕೆ ಬೇಕು. ವಸಂತ ಕಾಲವೊಂದೇ ಪ್ರೇಮಿಗಳ ಸಂಭ್ರಮಕ್ಕೆ ಸಾಕು ಎನ್ನುತ್ತಾರೆ ‘ಹೋಲಿಕೆಯ ಮಾಲೆ’ ಕವನದಲ್ಲಿ. ‘ಪ್ರೇಮ’ ಎಂಬ ಕವನದಲ್ಲಿ ಕಾಮ ತೊರೆದ ಪ್ರೇಮ/ ಸ್ವಾರ್ಥ ತೊರೆದ ಚಂದ್ರಮ/ ಅಂತಹ ಪ್ರೇಮ ಎಂದೆಂದೂ ಪಾವನ/ ಎಂದು ವಿವರಿಸುವ ಮೂಲಕ ಪ್ರೇಮದ ಪರಿಶುದ್ಧತೆಯನ್ನು ತೋರಿಸಿಕೊಟ್ಟಿದ್ದಾರೆ. ‘ನಮಗಾಗಿಯೇ’ ಎಂಬ ಕವನದಲ್ಲಿ ದುಃಖದಲ್ಲಿದೆ ನೋಡು/ ಸುಖದ ಬೆಲೆಯು/ ನೋವಿನಲ್ಲಿದೆ ನೋಡು/ ನಲಿವಿನ ಬೆಲೆಯು/ ಎಂಬ ಅದ್ಭುತ ಅರ್ಥದ ಸಾಲಿನ ಮೂಲಕ ಸುಖ -ದುಃಖ, ನೋವು- ನಲಿವು ಎಲ್ಲವೂ ನಮಗಾಗಿಯೇ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
‘ಹೊಸತನ’ ದಲ್ಲಿ ಜೀವನ ಬೆಳ್ಳನೆ ಕಾಗದ ನೋಡು/ ಚಿತ್ತನು ಮಾಡದೆ, ಯೋಚಿಸಿ ಬರೆದರೆ/ ಬರೆದಂತದು ತುಂಬುವುದು/ ಎನ್ನುತ್ತಾರೆ. ಜೀವನದಲ್ಲಿ ಒಂದು ಕಪ್ಪು ಚುಕ್ಕೆಯನ್ನೂ ಅಂಟಿಸಿಕೊಳ್ಳದೆ ಬದುಕಿದರೆ ಅದು ಸಾರ್ಥಕ ಎಂಬ ಸುಂದರ ಸಂದೇಶ ಕೊಡುತ್ತಾ, ತನ್ನನ್ನು ನೋಡಲು ಕರೆಯವುದೇ ಕನ್ನಡಿ?/ ನೀ ಬಳಿ ಹೋಗಲು ನಿನ್ನಂತೆ/ ಹೊಸತನ ಹಿಡಿದು ಕನ್ನಡಿಯಾಗು/ ಹಾಗೂ ಬಾಳ್ವೆಯ ಹೊಸ ಮುಖವನು ತೋರು ಎನ್ನುತ್ತಾರೆ. ಹೊಸತನವನ್ನು ನಾವು ಬೆಳೆಸಿಕೊಳ್ಳಬೇಕು. ಹೊಸ ಬಾಳಿಗೆ ನಾಂದಿ ಹಾಡಬೇಕು. ಇದು ನಮ್ಮ ಬಳಿ ಬರುವುದಿಲ್ಲ. ನಾವೇ ಅದರ ಬಳಿ ಹೋಗಬೇಕೆನ್ನುತ್ತಾರೆ.
‘ಹಾಡು ಬಾ’ ಎಂಬ ಕವನದಲ್ಲಿ ಹಕ್ಕಿಗೆ ಕವಿ ಹೇಳುವ ಮಾತು ಏನೆಂದರೆ-ನನ್ನೆದೆಯ ಕೊರಗು ಕೊಳೆಯುವುದಾದರೆ/ ನನ್ನ ಬದುಕು ಮತ್ತೊಮ್ಮೆ ಚಿಗುರುವುದಾದರೆ/ ಬಂದು ಹಾಡು/ ನನ್ನ ಉರಿಯುವ ತೊಳೆಯುವುದಾದರೆ/ ನನ್ನ ಎದೆಯ ಗಾಯ ಮಾಯುವುದಾದರೆ/ ಸ್ಪಂದಿಸುವ ರಾಗವನ್ನು ಹಾಡು/ ಇಲ್ಲವೇ ಇಲ್ಲಿಂದ ಹಾರಿಹೋಗು ಎನ್ನುತ್ತಾರೆ. ಎಷ್ಟೊಂದು ಕಾವ್ಯಾತ್ಮಕವಾಗಿ ಇಲ್ಲಿನ ಸಾಲುಗಳು ಅರ್ಥವತ್ತಾಗಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ‘ಕೊಡೆಗಳು’ ಎಂಬ ಕವನ ಅತ್ಯಂತ ಸುಂದರವಾಗಿದೆ. ಮಳೆಗಾಲದಲ್ಲಿ ಮಾತ್ರ ತೆರೆಯುವ ಕೊಡೆ ಉಳಿದ ದಿನಗಳಲ್ಲಿ ಕನಸನ್ನು ಹೆಣೆಯುತ್ತಾ ಮೂಲೆಯಲ್ಲಿ ಮುದುಡಿಕೊಳ್ಳುತ್ತದೆ. ನಮಗೆ ಬೇಡವಾದವರ ಮುಖ ನೋಡಬಾರದೆಂದರೆ ಕೊಡೆಯನ್ನು ಬಿಡಿಸಿ ಹಿಡಿದುಕೊಳ್ಳಬಹುದು. ಮಳೆ ಬಂದರೆ ಸ್ನೇಹಿತನಾಗುತ್ತದೆ, ತಂಪಾಗಿಡುತ್ತದೆ, ಆಗ ಅದನ್ನು ಮುದ್ದಿಸುವ ನಾವು ಮಳೆಗಾಲ ಮುಗಿದೊಡನೆ ಮತ್ತೆ ಮೂಲೆಗಟ್ಟುತ್ತೇವೆ ಅನ್ನುವ ಮೂಲಕ ಬೇಕಾದಾಗ ಮಾತ್ರ ಬಳಸಿಕೊಳ್ಳುವುದು ನಮ್ಮ ಪ್ರವೃತ್ತಿ ಎನ್ನುತ್ತಾರೆ.
ಪೇಟೆಯಲ್ಲಿರುವ ನಮ್ಮನ್ನು ಭೋಗ ಸಂಸತಿ ಆವರಿಸಿಕೊಂಡಿದೆ. ಅದಕ್ಕಾಗಿ ಹಳ್ಳಿಯವರಲ್ಲಿ ಹಳ್ಳಿಯಲ್ಲೇನುಂಟು ಎಂದು ಪ್ರಶ್ನಿಸುತ್ತೇವೆ. ಅವರು ನಮ್ಮನ್ನು ಕೇಳಿದರೆ- ಹೆಜ್ಜೆ ಹೆಜ್ಜೆಗೆ ಹೆಂಡವಿದೆ/ ಹೆಂಡತಿ ಬಿಟ್ಟರೆ ಮಿಂಡತಿ ಇದೆ/ ದಿನಕ್ಕೆ ನಾಲ್ಕು ಸಿನಿಮಾ ಇದೆ/ ಗಲ್ಲಿಗೆ ಎಂಟು ಬಾರುಗಳಿವೆ/ ಕ್ಯಾಬರೆಗಳಿವೆ, ಘೋಷಣೆ, ಗದ್ದಲ, ದೊಂಬಿಗಳಿವೆ/ಶಾಂತಿಯ ಮಂತ್ರಕ್ಕೆ ಬಾಟಲಿಗಳಿವೆ ಎನ್ನುತ್ತಾರೆ. ಈ ಕವನ ನಮ್ಮ ಕಣ್ತೆರಸುವಂತಿದೆ. ಆಚಾರಕ್ಕೆ ಬದ್ಧ್ದರಾಗಿರಬೇಕೆನ್ನುವುದನ್ನು ಸಾರುತ್ತದೆ.
ನಮ್ಮ ಬದುಕು ಸಹ್ಯತೆ, ಸಂಪತ್ತಿನಿಂದ ಕೂಡಿಬಾಳುವ, ನಲಿದು ಆನಂದಿಸುವ ವಾತಾವರಣವನ್ನು ನಿರ್ಮಿಸಬೇಕೆನ್ನುವ ಸಂದೇಶವನ್ನು ‘ಜಗಜ್ಯೋತಿ’ ಎಂಬ ಕವನದಲ್ಲಿ ಈ ರೀತಿ ಬಿತ್ತರಿಸಿದ್ದಾರೆ. ಕಣಕಣದಲಿ ಭಾವೈಕ್ಯವು ಹೊಮ್ಮಲಿ/ಎದೆಎದೆಯಲಿ ಮನುಜ ಪ್ರೇಮ ಚಿಮ್ಮಲಿ/ ಸಮಭಾವವು ಬೆಳೆಬೆಳೆದು ಬೆಳಗಲಿ/ ವಿಶ ಪಥದಿ ಶಾಂತಿ ರಥವು ಮೆರೆಯಲಿ ಎಂದು ಆಶಿಸುತ್ತಾರೆ. ಪರಿಸರದ ಕುರಿತು ಕವಿಗೆ ಇರುವ ಅನನ್ಯ ಭಾವವನ್ನು ಆಕಾಂಕ್ಷೆ ಎಂಬ ಕವನದಲ್ಲಿ ಹೀಗೆ ಕಾಣಬಹುದು. ನನ್ನ ಅಂದ ನೋಡಿ/ ಎಲ್ಲರೂ ಕರಗಬೇಕು/ ಕರಗಿದರೆ ಸಾಲದು/ ಕವನ ಬರೆಯಬೇಕು/ ಅದನು ಹಾಡಬೇಕು/ ಹಾಡನು ಎಲ್ಲರೂ ಕೇಳಬೇಕು/ ಎಷ್ಟೊಂದು ಸುಂದರ ಸಾಲುಗಳಿವು. ತನ್ನ ಊರಾದ ಮಲೆನಾಡಿನ ಸುಂದರ ಪರಿಸರದ ಬಗ್ಗೆಯೂ ಕವಿ ಎಷ್ಟೊಂದು ಚಂದದ ಸಾಲು ರಚಿಸಿದ್ದಾರೆ
ಒಟ್ಟಿನಲ್ಲಿ, ಈ ಸಂಕಲನದ ಕವನಗಳೆಲ್ಲ ಆಕರ್ಷಣೀಯವಾದವು. ಓದುತ್ತಾ ಹೋದಂತೆ ನಮ್ಮನ್ನು ಸೆರೆಹಿಡಿಯುತ್ತವೆ. ಕವಿತೆಗಳ ಒಳಪದರವು ಸಹ ಹೋಲಿಕೆ, ಕಾವ್ಯಮಯ ಬಣ್ಣನೆ ಮೂಲಕ ಅಪೂರ್ವ ಲೋಕವನ್ನು ತೆರೆದಿಡುತ್ತವೆ. ಸಂಕಲನದಲ್ಲಿ ಕವನ ರಚನಾ ಶೈಲಿ, ವಿಶಿಷ್ಟ ಪದಪುಂಜದ ಮೂಲಕ ಸಾಕಷ್ಟು ವಿಷಯದ ಬಗ್ಗೆ ಬೆಳಕನ್ನು ಕವಿ ಚೆಲ್ಲಿದ್ದಾರೆ. ಕೆಲವು ಸಾಲುಗಳೇ ಆ ಕವನವು ಗೆಲ್ಲುವಂತೆ ಮಾಡಿವೆ. ಇಂತಹ ಗುಣಗಳಿಂದಾಗಿ ಇಲ್ಲಿನ ಕವಿತೆಗಳು ವಿಭಿನ್ನ ಎನಿಸುತ್ತವೆ.
-ದತ್ತಾತ್ರೇಯ ಹೆಗಡೆ , ಶಿವಮೊಗ್ಗ
..........................

Comments
Post a Comment