ಅಲೆಮಾರಿಗಳ ಭಯಾನಕ ಬದುಕು ಬಿಚ್ಚಿಡುವ

‘ಅರಣ್ಯ ಕಾಂಡ’



‘ಅರಣ್ಯ ಕಾಂಡ’ ಈ ಕಾದಂಬರಿಯ ಲೇಖಕರು ಕಾರವಾರದ ಮಹಾಬಲೇಶ್ವರ ಸೈಲ್.  ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ, ನಂತರ ಪೊಲೀಸ್, ಅರಣ್ಯ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಮಡಗಾಂವ್‌ನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಬದುಕು ಮತ್ತು ಪ್ರಕೃತಿ ಪರಿಸರವನ್ನು ಅನುಭವಿಸಿ, ಅದನ್ನೇ ತಮ್ಮ ಕೃತಿಗಳಲ್ಲಿ ಬಿಂಬಿಸುವುದು ಅವರ ಕೃತಿಗಳ ವೈಶಿಷ್ಟ್ಯ. ಈ ಕೃತಿಯ ಮೂಲ ಕೊಂಕಣಿ. ಕನ್ನಡಕ್ಕೆ ಬೆಂಗಳೂರಿನ ಸಾಹಿತಿ, ಅನುವಾದಕಿ ಗೀತಾ ಶೆಣೈ ಭಾಷಾಂತರಿಸಿದ್ದಾರೆ.  

‘ಬೆಂಕಿಯಿಂದ ಬಾಣಲೆಗೆ ಬಿದ್ದರು’ ಎನ್ನುವುದೊಂದು ಗಾದೆ ಮಾತು. ಇದೇ ಈ ಅರಣ್ಯ ಕಾಂಡ ಕಾದಂಬರಿಯ ಕಥೆ.  ಬಡತನ, ನಿರುದ್ಯೋಗದಲ್ಲಿರುವ ಕಷ್ಟಜೀವಿಗಳನ್ನು ದಲ್ಲಾಳಿಗಳು  ದುರುಪಯೋಗಪಡಿಸಿಕೊಂಡು ಕಲ್ಲುಕ್ವಾರಿಯಲ್ಲಿ ಜೀತದಾಳುಗಳನ್ನಾಗಿ ಮಾಡಿ ಶೋಷಿಸುವುದು, ಅವರ ಕಪಿಮುಷ್ಠಿಯಿಂದ    ಪಾರಾಗುವುದು, ಊರಿಗೆ ಮರಳಲು ಕಾಡಿನಲ್ಲಿ ದಾರಿ ತಪ್ಪಿ ಪಡುವ ಪಾಡನ್ನು ಈ ಕಾದಂಬರಿಯಲ್ಲಿ ಲೇಖಕರು ಸುಂದರವಾಗಿ ನೇಯ್ದಿದ್ದಾರೆ. ಇಲ್ಲಿನ  ಕಥೆ ಓದುವಾಗ ಈ ಅಲೆಮಾರಿಗಳು ಎದುರಿಸಿದ ಸಂಕಟ, ನೋವು ನಮ್ಮ ಹೃದಯವನ್ನು ಕರಗಿಸುತ್ತದೆ.

 ಅಲ್ಲಿ ಅವರು ಪಡುವ ಯಮಯಾತನೆಯ ಜೀವನ, ಮಾಲೀಕ ಮತ್ತು ಮೇಲ್ವಿಚಾರಕನ ದರ್ಪ, ಅಹಂಕಾರ, ಕಾರ್ಮಿರನ್ನು ಕತ್ತೆಯಂತೆ ದುಡಿಸಿಕೊಳ್ಳುವುದು,   ಇದರಿಂದ ಹೇಗಾದರೂ ಪಾರಾಗಬೇಕೆಂದು ನಿರ್ಧರಿಸಿ ಊರಿಗೆ ಮರಳಲು ರಾತ್ರೋರಾತ್ರಿ ಅಲ್ಲಿಂದ ಹೊರಡುವುದು, ಕಾಡಿನಲ್ಲಿ ದಾರಿ ತಪ್ಪುವುದನ್ನು ಎಳೆಎಳೆಯಾಗಿ ಚಿತ್ರಿಸಿದ್ದಾರೆ. ‘ದಾರಿ ತಪ್ಪಿದರೆ ಊರು ತಪ್ಪಿ ಹೋಗುವುದು’ ಎಂಬ ಗಾದೆ ಮಾತಿನಂತೆ ಇವರಿಗೆ ದಿಕ್ಕೇ ತಪ್ಪಿಹೋಗುತ್ತದೆ. ೪೮ ಗಂಟೆಗಳ ಕಾಲ ದಟ್ಟಾರಣ್ಯದಲ್ಲಿ ಆಹಾರ, ನೀರು ಸಿಗದೆ ಬಳಲುವುದು, ನಡೆದು ಸುಸ್ತಾಗಿ ಬೀಳುವುದು, ಹಸಿವು, ಬಾಯಾರಿಕೆಯಿಂದ ಗುಂಪಿನಲ್ಲಿದ್ದ ಹಲವರು ಸಾಯುವ ರುದ್ರಭಯಾನಕ ಚಿತ್ರಣವಿದೆ. ಇದೊಂದು ರೀತಿಯಲ್ಲಿ ಅರಣ್ಯ ರೋದನ. ಅರಣ್ಯದಲ್ಲಿ ಹಗಲು- ರಾತ್ರಿ ಎನ್ನದೆ ಅಲೆದಾಡುವ ಎರಡು ದಿನದ ಕಥೆಯೇ ಅರಣ್ಯಕಾಂಡ.

 ಬಸವನನ್ನು (ಎತ್ತನ್ನು) ಮನೆ, ಮನೆಗೆ ಸುತ್ತ್ತಾಡಿಸುತ್ತಾ, ಬೇಡುತ್ತಾ ಅದರಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪಾರಂಪರಿಕ ಅಲೆಮಾರಿ ಜನರ ಗುಂಪು ಊರಿನಲ್ಲಿ ಮಳೆ-ಬೆಳೆ ಇಲ್ಲದ ಕಾರಣ  ಆಹಾರ, ನೀರಿಗೆ ಪರದಾಡುತ್ತಿದ್ದ ಸಂದರ್ಭದಲ್ಲಿ ಮಧ್ಯವರ್ತಿಯೊಬ್ಬ ಇದರ ಲಾಭ ಪಡೆದು ಅವರನ್ನೆಲ್ಲ ಜೀತದಾಳುಗಳನ್ನಾಗಿ ಮಾಡುವ  ಕಥಾ ಹಂದರ ಇಲ್ಲಿದೆ. ಊರಿನಲ್ಲಿನ ಬರಗಾಲದಿಂದ ಇದ್ದ ದನ-ಕರುಗಳನ್ನೆಲ್ಲ ಈ ಅಲೆಮಾರಿ ಕುಟುಂಬ ಮಾರಾಟ ಮಾಡುವ ಸ್ಥಿತಿ ಎದುರಾಗುತ್ತದೆ.  ಕುಡಿಯುವ ನೀರನ್ನೂ ಪಕ್ಕದೂರಿಗೆ ಹೋಗಿ ಕೈಲಿ ಕೊಡ ಹಿಡಿದು ಭಿಕ್ಷೆಯಂತೆ ಕೇಳುವ ಸ್ಥಿತಿ ಎದುರಾಗುತ್ತದೆ. ಗಂಟುಮೂಟೆ ಕಟ್ಟಿಕೊಂಡು ನೀರು-ಅನ್ನಕ್ಕಾಗಿ  ಎಲ್ಲಿಯಾದರೂ ಹೋಗೋಣ ಎಂದು ಆ ಗುಂಪಿನ ಹಿರಿಯರು ಹೇಳುತ್ತಾರೆ.

ಈ ಮಧ್ಯೆ ಒಂದು ದಿನ ದಲ್ಲಾಳಿಯೊಬ್ಬನ ಆಗಮನವಾಗಿ ಘಟ್ಟದ ಆಚೆಬದಿಯಲ್ಲಿ ಕೆಲಸವಿದೆ. ಅಲ್ಲಿ ಎಲ್ಲ ವ್ಯವಸ್ಥೆ ಇದೆ. ನೀವು ಇಲ್ಲಿ ಮಾಡಿರುವ ಎಲ್ಲ ಸಾಲ ತೀರಿಸಿ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾ ಊರಿನ ಜನರ ಬಳಿ ಇದ್ದ ಅವರ ಸಾಲವನ್ನೆಲ್ಲ ತೀರಿಸುತ್ತಾನೆ. ಕೆಲವು ದಾಖಲೆ ಪತ್ರಗಳಿಗೆ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಾನೆ. ಆದರೆ ಸಾಲಗಾರರು ನೀವು ಸಾಲದ ಹಣವನ್ನು ಮಾತ್ರ ಕೊಟ್ಟಿದ್ದೀರಿ, ಬಡ್ಡಿಯನ್ನಲ್ಲ. ಇಲ್ಲಿಯೇ ಇದ್ದುಬಿಡಿ, ದಲ್ಲಾಳಿಯನ್ನು ಓಡಿಸಿಬಿಡಿ ಎನ್ನುತ್ತ್ತಾರೆ. ನೀರು, ಆಹಾರಕ್ಕಾಗಿ ಪರದಾಡುವ ಇವರೆಲ್ಲ ಕೆಲಸಕ್ಕಾಗಿ ಗೊತ್ತುಗುರಿಯಿಲ್ಲದೆ ಆತನ ಹಿಂದೆ ಹೊರಡಲು ಅಣಿಯಾಗುತ್ತಾರೆ. ಸಾಲಗಾರರ ಕಾಟ ತಪ್ಪಲಿಲ್ಲ ಎಂದು ಹೆದರುತ್ತಾ ದಲ್ಲಾಳಿಯ, ಊರಿನವರ ಮಧ್ಯೆ ಇಕ್ಕಟ್ಟಿಗೆ ಸಿಲುಕುತ್ತಾರೆ. ಅಲ್ಲಿ ಕಲ್ಲುಕ್ವಾರಿಯಲ್ಲಿ ಕೆಲಸ ಎಂದು ಅವರಿಗೆ ಆತ ವಿವರಿಸಿ ಎಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ.

ಅಲ್ಲಿಗೆ ತಲುಪಿದ ನಂತರ ಇವರಿಗೆ ಕ್ವಾರಿ ಮಾಲಕನ ವಂಚನೆ, ದುಷ್ಟಬುದ್ಧಿ, ಹಿಂಸೆಯ ಅರಿವಾಗುತ್ತದೆ. ಈ ಹಿಂದೆ ಅಲ್ಲಿದ್ದವರೆಲ್ಲ ರಾತ್ರೋರಾತ್ರಿ ಓಡಿಹೋಗಿದ್ದೇಕೆ ಎಂಬೆಲ್ಲ ವಿಚಾರದ ಅರಿವಾಗುತ್ತದೆ. ಆಗ ತಾವು ಇಲ್ಲಿಗೆ ಬಂದು ಬೇಕೆಂತಲೇ ಇನ್ನಷ್ಟು ಕಷ್ಟಕ್ಕೆ ಸಿಕ್ಕಿಹಾಕಿಕೊಂಡ ಬಗ್ಗೆ ದುಃಖಪಡುತ್ತಾರೆ. ಒಂದೆಡೆ ಕ್ರಶರ್ ಮೇಲ್ವಿಚಾರಕನ ಅಟ್ಟಹಾಸ, ಬೈಗುಳ, ಇನ್ನೊಂದೆಡೆ ಸಂಬಳವಿಲ್ಲದೆ ಕೇವಲ ದಿನಸಿ ಮೂಲಕ ಮಾತ್ರ ಜಿವನ ಸಾಗಿಸುವ ಸ್ಥಿತಿ, ಮತ್ತೊಂದೆಡೆ   ಪದೇ ಪದೇ ಹೆದರಿಸಿ ಹೆಚ್ಚಿನ ದುಡಿಮೆ ಮಾಡಿಸಿಕೊಳ್ಳುವುದು. ಇದರಿಂದ ಅತ್ತ ವಾಪಸ್ ಹೋಗಲಾಗದೆ, ಇಲ್ಲಿ ಇರಲೂ ಆಗದೆ ‘ಅತ್ತ ದರಿ, ಇತ್ತ ಪುಲಿ’ ಎಂಬಂತೆ ಉಭಯಸಂಕಟಕ್ಕೆ ಸಿಲುಕುತ್ತಾರೆ.  

ಇವರೆಲ್ಲ ಅಲ್ಲಿ ಎಷ್ಟೊಂದು ಬಳಲಿದ್ದರೆಂದರೆ, ಊರಿನಲ್ಲಿ ಮಳೆಬೆಳೆ ಇಲ್ಲದೆ ಒದ್ದಾಡಿ ಸತ್ತರೂ ಚಿಂತೆ ಇಲ್ಲ,  ಜೀವ ತಿನ್ನುತ್ತಿರುವ ಕಲ್ಲುಗಳು ಮಾತ್ರ ಬೇಡ ಎನ್ನುತ್ತಿದ್ದರು. ನಿಜಕ್ಕೂ ಕ್ರಶರ್ ಇವರ ಜೀವ ತಿಂದಿತ್ತು. ಪ್ರತಿಯೊಬ್ಬರು ಕ್ರಶರ್‌ಗೆ ಹಾಕಿದ ಹಾಗೆ ಹಿಂಡಿಹೋಗಿದ್ದರು. ಹೊಟ್ಟೆ ಬೆನ್ನಿಗಂಟಿತ್ತು, ಪಕ್ಕೆಲುವುಗಳು ಸ್ಪಷ್ಟವಾಗಿ ಕಾಣುತ್ತಿದ್ದವು, ಚರ್ಮಗಳು ಜೋತುಬಿದ್ದ್ದಿದ್ದವು. ಒಟ್ಟಿನಲ್ಲಿ,  ಇವರ ಜೀವ ಸೋತು ಹೋಗಿತ್ತು.  

ಈ ಮಧ್ಯೆ ಆ ತಂಡಲ್ಲಿದ್ದ ೧೯ರ ಹುಡುಗ ನರಸು ಮತ್ತು ಹರಯ ಉಕ್ಕುತ್ತಿದ್ದ ಹುಡುಗಿ ರೇಣುವಿನ ಸರಸ-ಪ್ರಣಯ ಶುರುವಾಗುತ್ತದೆ. ಹೀಗೆ ಸಾಗಿರುವಾಗ ದಷ್ಟಪುಷ್ಟ  ತರುಣಿ ರೇಣುವಿನ ಮೇಲೆ ಕ್ವ್ವಾರಿಯ ಮಾಲಕನಿಗೆ ಕಣ್ಣು ಬೀಳುತ್ತದೆ. ರಾತ್ರಿ ಸೇವೆಗೆ ಆಕೆಯನ್ನು ಕಳಿಸಿಕೊಡು ಎಂದು ಆಕೆಯ ತಂದೆಗೆ ಮನೆಯಾಳುಗಳ ಮೂಲಕ ಸೂಚಿಸುತ್ತಾನೆ. ಇದರಿಂದ ಇಡೀ ಕುಟುಂಬದವರು ದುಃಖಿತರಾಗಿ ಉಮ್ಮಳಿಸುತ್ತಾರೆ. ವಿಷಯ ಅರಿತ ಆಕೆಯ ಪ್ರೇಮಿ ನರಸು ಕತ್ತಲಾಗುತ್ತಿದ್ದಂತೆಯೇ ಮಾಲಕನ ಮನೆಯ ಹತ್ತಿರ ಹೋಗಿ ಅಡಗಿ ಕುಳಿತು ಗಿಡಮರಗಳ ಸಂದಿಯಿಂದ  ಮಾಲಕನ ತಲೆಗೆ ಕಲ್ಲು ಎಸೆದು ಆತ ಆಸ್ಪತ್ರೆ ಸೇರುವಂತೆ ಮಾಡುತ್ತಾನೆ. ಇದರಿಂದ ಕೆರಳಿದ ಆತನ ಮನೆಯಾಳುಗಳು ಕಲ್ಲು ಹೊಡೆದವರಾರು ಎನ್ನುತ್ತಾ  ಬಂದು ಕೂಲಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಕೆಲವರು ಕತ್ತಲಲ್ಲಿ ಅಡಗಿ ಕುಳಿತು ಬಚಾವಾಗುತ್ತರೆ. ಇಲ್ಲಿಯೇ ಇದ್ದರೆ ಸಾವು ನಿಶ್ಚಿತ, ನಮ್ಮನ್ನು ಹೂತು ಹಾಕುತ್ತಾರೆ ಎನ್ನುತ್ತಾ ಟೆಂಟ್ ಖಾಲಿ ಮಾಡಲು ಅಂದೇ ತೀರ್ಮಾನಿಸುತ್ತಾರೆ. ಆ ಪ್ರಕಾರ ಗಂಟುಮೂಟೆ ಕಟ್ಟಿ ಅನಾಮಿಕ ತಂಡವಾಗಿ ರಾತ್ರೋರಾತ್ರಿ ಕಾಡು ಪ್ರವೇಶಿಸಿ ಊರಿಗೆ ತೆರಳಲು ಹೊರಡುತ್ತ್ತಾರೆ.

ಇಲ್ಲಿಂದ ಅವರ ಊರಿನ ಪಯಣ ಆರಂಭವಾಗುತ್ತದೆ. ಊರು ತಲುಪುತ್ತವೆ ಎಂಬ ಶಕ್ತಿಯನ್ನು ಒಗ್ಗೂಡಿಸಿ ಹೊರಡುತ್ತಾರೆ. ೬೦ ಮೈಲು ಚಾಚಿಕೊಂಡಿರುವ ಭೀಕರ ಕಾಡಿನಲ್ಲಿ ದಾರಿ ತಪ್ಪಿ ಹಗಲು- ರಾತ್ರಿ ಎನ್ನದೆರಡು ದಿನ ಹಾದಿ ಸವೆಸಿ, ನೀರು-ಆಹಾರ ಸಿಗದೆ ಬಳಲುವ, ಪ್ರಜ್ಞೆ ತಪ್ಪಿ ಬೀಳುವ, ತಂಡದಲ್ಲಿದ್ದ ೨೧ ಜನರಲ್ಲಿ ೯ ಜನ ಮಾತ್ರ ಬದುಕುಳಿದ, ಕ್ಷಣಕ್ಷಣಕ್ಕೂ ಸಾವಿನ ಕಡೆ ಹೊರಳುತ್ತಿದ್ದ ಜೀವ ಮತು ಸಾವಿನ ದರ್ಶನದ ಚಿತ್ರಣವನ್ನು ಲೇಖಕರು ಇಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಈ ಅಲೆಮಾರಿಗಳು ಆಡುವ ಮಾತು- ದೇವರೇ, ಇಷ್ಟು ನಿಷ್ಠುರನಾಗಬೇಡ,  ನಮ್ಮ ಮಕ್ಕಳುಮರಿಗಳನ್ನು ಕಾಪಾಡು. ಎಲ್ಲಿಯಾದರೂ ನೀರಿನ ತಡಿಗೆ ನಮ್ಮನ್ನು ಸೇರಿಸು ಎನ್ನುವುದು ನಮ್ಮ ಹೃದಯವನ್ನು ಕಲಕುತ್ತದೆ.

ಅಂತ್ಯದಲ್ಲಿ ಒಂದು ಗುಡಿಸಲು, ಬಾವಿ ಕಂಡುಬರುತ್ತದೆ.  ಆ ಬಾವಿಯಲ್ಲಿ ಜೀವಜಲ ತುಂಬಿತ್ತು. ಇವರೆಲ್ಲ  ಎಷ್ಟೊಂದು ಬಳಲಿದ್ದರೆಂದರೆ ತುಟಿ ಮುಂದೆ ಮಾಡಿ, ನಾಲಗೆ ಚಾಚಿ ಆ ನೀಲಿ ನೀರನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾರೆ. ಕೊಡವನ್ನು ಬಾವಿಗೆ ಇಳಿಸಿ ನೀರನ್ನು ಪಡೆಯಬೇಕೆಂಬ ಗಮನ ಸಹ ಇರಲಿಲ್ಲ ಎಂಬ ಸುಂದರ ವರ್ಣನೆಯನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಗುಡಿಸಲಿನವರು ಇವರನ್ನು ನೆಂಟರನ್ನಾಗಿ ಆಹ್ವಾನಿಸುತ್ತಾರೆ. ಆದರೆ  ತಂಡದಲ್ಲಿದ್ದವರೆಲ್ಲ ಹಸಿವು, ಆಯಾಸದಿಂದ ಒಬ್ಬೊಬ್ಬರಾಗಿ ಸಾಯುತ್ತಿದ್ದುದರಿಂದ ಅವರೆಲ್ಲ ಬಾವಿಯ  ಹತ್ತಿರ ಬಂದು ಕಾಡು ನೋಡುತ್ತ್ತಾ ತಲೆಮೇಲೆ ಕೈ ಹೊತ್ತು ಸತ್ತವರ ಬಗ್ಗೆ ಯೋಚಿಸುತ್ತಾರೆ.

ಒಟ್ಟಿನಲ್ಲಿ, ಈ ಕಾದಂಬರಿಯಲ್ಲಿ ಒಂದೆಡೆ ಅಲೆಮಾರಿಗಳ ದುರಂತ ಜೀವನ, ಇನ್ನೊಂದೆಡೆ ಹಣದ ಮದದಲ್ಲಿರುವ ಕ್ವ್ವಾರಿ ಮಾಲಕ ಹೆಣ್ಣಿನ ಆಸೆಗೆ ಬಿದ್ದು  ಬೆಲೆತೆರುವುದು, ಊರು ತಲುಪಲು ಹೋಗಿ ದಾರಿ ತಪ್ಪಿದ ತಂಡಗಳ ವರ್ಣನೆ ನಮ್ಮನ್ನು ಸೆರೆಹಿಡಿಯುತ್ತದೆ. ಕೆಲವು ದೃಶ್ಯಗಳು ಭೀಕರತೆಯನ್ನು ತೋರಿಸುತ್ತವೆ. ಕಾದಂಬರಿಕಾರ ಈ ಎಲ್ಲ ಸನ್ನಿವೇಶಗಳನ್ನು ಚಾಕಚ್ಯತೆಯಿಂದ ನಿರೂಪಿಸಿ ಓದುಗನ ಮನದಾಳಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

- ದತ್ತಾತ್ರೇಯ ಹೆಗಡೆ

3.6.2025

....................


Comments

Popular posts from this blog