ಅನುಭವದ ಪಾಠಕ್ಕೆ ನಗೆಯ ಒಗ್ಗರಣೆ
‘ನನ್ನ ಪೇಶಂಟ್ ಹಾಗೂ ಇತರ ಪ್ರಸಂಗಗಳು’
ನೋವಿನ ದುಗುಡವನ್ನು ಹೊತ್ತುಕೊಂಡು ಬರುವ ರೋಗಿಗಳ ಮಾತಿನಲ್ಲಿ, ಜೀವನದ ಮಜಲುಗಳಲ್ಲಿ, ಭೇಟಿಯಾದ ಜನರ ಜೊತೆಗಿನ ಘಟನೆಗಳನ್ನು ಚಂದದ ನಗುವಿನ ಪಸೆಯೊಂದಿಗೆ, ಹಾಸ್ಯದ ಹಸೆಯನ್ನು ಬಿಡಿಸಿ ಅದಕ್ಕೆ ಬಣ್ಣ ತುಂಬಿ ಆ ಕ್ಷಣಗಳನ್ನು ನಮ್ಮ ಕಣ್ಣೆದುರು ತಂದಿರುವ ಪುಸ್ತಕವೇ “ನನ್ನ ಪೇಶಂಟ್ ಮತ್ತು ಇತರ ಪ್ರಸಂಗಗಳು”. ಇದರಲ್ಲಿ ಲೇಖಕಿ ಡಾ|| ನಾಗರತ್ನಾ ಜಿ. ರಾವ್ ವೈದ್ಯಲೋಕದಲ್ಲಿನ ಸಂಗತಿಗಳನ್ನು ತಮ್ಮ ಅನುಭವಗಳ ಪಾಠಕ್ಕೆ ನಗೆಯ ಒಗ್ಗರಣೆ ಕೊಟ್ಟು ನಮಗೆಲ್ಲ ಉಣಬಡಿಸಿದ್ದಾರೆ.
ಒಂದು ಆಪಲ್ ತಿಂದರೂ ರೋಗವನ್ನು ದೂರವಿಡಬಹುದು ಎಂಬ ಆಂಗ್ಲ ಗಾದೆ ಇದೆ. ಆದರೆ ಈ ಕೃತಿಯ ಪುಟಪುಟದಲ್ಲೂ ನಗೆಯ ಗುಳಿಗೆ ತುಂಬಿಸಿ ರೋಗಿಗಳು ಓದಿದರೂ ಸಹ ಗುಣಮುಖರಾಗಬಹುದಾದಷ್ಟು ಚಿಕಿತ್ಸೆಯನ್ನು ನಗುವಿನ ಮೂಲಕ ಲೇಖಕಿ ನೀಡಿದ್ದಾರೆ. ವೈದ್ಯ ಮತ್ತು ರೋಗಿಗಳ ರಸಮಯ ಪ್ರಸಂಗಗಳನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮನ್ನೇ ತಾವು ಹಾಸ್ಯಕ್ಕೆ ಗುರಿ ಮಾಡಿಕೊಂಡಿದ್ದಾರೆ. ಪೇಶಂಟ್‌ಗಳನ್ನು ವಿಧವಿಧವಾಗಿ ಪರಿಚಯಿಸಿ ಅವರ ಮುಗ್ಧತೆ, ಮುದ್ದುತನ, ಭಂಡತನ, ಜಗಳಗಂಟತನ ಇವೆಲ್ಲವನ್ನೂ ನಮ್ಮೆದುರು ಬಹಳ ಪ್ರಾಮಾಣಿಕವಾಗಿ ರಸಮಯವಾಗಿ ಬಿಚ್ಚಿಟ್ಟಿದ್ದಾರೆ.
ಇವುಗಳನ್ನು ಓದುತ್ತಾ ಹೋದಂತೆ ಇವರ ಪೇಶಂಟ್‌ಗಳು ಸಹ ನಮಗೆ ಆಪ್ತರಾಗಿಬಿಡುತ್ತಾರೆ. ವೈದ್ಯರು ಬರೆಯುವುದೇ ಅಪರೂಪ. ಅಂತಹುದರಲ್ಲಿ ತಮ್ಮ ಅನುಭವವನ್ನು ಹಾಸ್ಯಮಯವಾಗಿ ಬರೆಯುವ ಮೂಲಕ ಲೇಖಕಿ ವಿಶೇಷ ಎನಿಸುತ್ತಾರೆ. ಕೃತಿಯಲ್ಲಿ ನೂರಾರು ಚಿಕ್ಕ ಚಿಕ್ಕ ಹಾಸ್ಯಗಳನ್ನು ಕಟ್ಟಿಕೊಟ್ಟಿದ್ದಲ್ಲದೆ, ಇದರ ಜೊತೆಗೆ ಕೆಲವು ಇತರೆ ಪ್ರಸಂಗಗಳನ್ನು ಬಹು ಸೊಗಸಾಗಿ ನಿರೂಪಿಸಿದ್ದಾರೆ.
ಕೆಲವು ಹಾಸ್ಯ ತುಣುಗಳನ್ನು ಗಮನಿಸಿ:
ಎರಡು ಹೊತ್ತು ಅರ್ಧ ಲೋಟ ಹಾಲು ಕುಡಿಯಿರಿ ಎಂದರೆ ಅರ್ಧ ಲೀಟರ್ ಹಾಲು ಕುಡಿದ ರೋಗಿ, ಚಿಕಿತ್ಸೆಯ ಬಿಲ್ ಕೊಡಲು ಸಾಧ್ಯವಾಗದೆ ದೊಡ್ಡ ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡು ಬಂದು ಇಟ್ಟು ಇದರಲ್ಲಿ ನಿಮ್ಮ ಫೀಸನ್ನು ತೆಗೆದುಕೊಳ್ಳಿ. ಉಳಿದ ಹಣವನ್ನು ನನಗೆ ವಾಪಸ್ ಕೊಡಿ ಎಂದು ಕೇಳಿದ ಎರಡನೆಯ ರೋಗಿ, ಕಾಲು ನೋವು ಎನ್ನುತ್ತಾ ಚಪ್ಪಲಿಯನ್ನು ಎತ್ತಿ ತೋರಿಸಿದ ಮೂರನೆಯ ರೋಗಿ, ಬೆರಳು ಕೊಯ್ದಿದ್ದಕ್ಕೆ ಅಮೃತಾಂಜನ ಮತ್ತು ಸುಣ್ಣದ ನೀರನ್ನು ಹಾಕಿಕೊಂಡು ಬಂದ ಮತ್ತೊಬ್ಬ ರೋಗಿ, ಈ ತರಹದ ನೂರಾರು ಹಾಸ್ಯಮಯ ಘಟನೆಗಳನ್ನು ನಮ್ಮೆದುರು ತೆರೆದಿಟ್ಟಿದ್ದಾರೆ.
ಪದವೀಧರೆ ಮೂರ್ಖ ರೋಗಿಯೊಬ್ಬಳು ಕೆನ್ನೆಯ ಕೆಳಗೆ ಗದಕಟ್ಟು ಆಗಿದ್ದನ್ನು ವೈದ್ಯರಿಗೆ ತೋರಿಸದೆ ಪಕ್ಕದ ಮನೆಯವಳು ಹೇಳಿದಳು ಅಂತ ದೇವರಿಗೆ ಪೂಜೆ ಮಾಡಿ, ಧೂಪ ಹಾಕಿ ಮಂಗಳಾರತಿ ಮಾಡಿದ್ದು, ಗಂಡನಿಗೆ ಏನೂ ಕೆಲಸ ಇಲ್ಲ. ಅದಕ್ಕೆ ಮಗು ಮಾಡಿಕೊಳ್ಳೋಣ ಅಂತ ಇದ್ದೀನಿ ಎನ್ನುವ ಮತ್ತೊಬ್ಬ ಮಹಿಳೆ, ಮೈಕೈ ನೋವು ಪರೀಕ್ಷಿಸುವ ಎಲ್ಲಾ ಡಾಕ್ಟರ್‌ಗಳು ತೀರಿ ಹೋದರು. ನಿಮ್ಮಲ್ಲೂ ಒಮ್ಮೆ ತೋರಿಸಿ ನಮ್ಮನ್ನು ತೀರಿಸಿ ಬಿಡುವಾ ಅಂತ ಬಂದೆ ಎಂದು ಹೇಳಿ ವೈದ್ಯೆ ಬೆಕ್ಕಸ ಬೆರಗಾಗುವಂತೆ ಮಾಡಿದ ಮತ್ತೊಬ್ಬ ಗೃಹಿಣಿ, ನಾಲ್ಕು ತಿಂಗಳಿಂದ ಬೇರೆಯವರಿಗೆ ಕೊಟ್ಟ ಜ್ವರದ ಮಾತ್ರೆಯನ್ನು ತಾನು ತೆಗೆದುಕೊಂಡು ಜ್ವರ ಕಡಿಮೆಯಾಗಿಲ್ಲ ಅಂತ ಬಂದ ಮಗದೊಬ್ಬ ರೋಗಿ... ಹೀಗೆ ಹತ್ತು ಹಲವು ನಗೆ ಉಕ್ಕಿಸುವ ಹಾಸ್ಯಗಳನ್ನು ಇಲ್ಲಿ ಚಿತ್ರಿಸಿದ್ದಾರೆ.
ಲೇಖಕಿ ತನ್ನನ್ನೇ ತಾನು ಹಾಸ್ಯವಾಗಿಸಿಕೊಂಡ ಕೆಲವು ಸಂದರ್ಭ ಗಮನಿಸಿ:
ಕಾಲಿನ ಕಜ್ಜಿ ಕಡಿಯುತ್ತೆ ಅಂತ ಡಾಕ್ಟರ್ ಕೊಟ್ಟ ಆಯಿಂಟ್‌ಮೆಂಟ್‌ಗಿಂತ ಉಗುರಲ್ಲೇ ಕೆರ್ಕೊಂಡ್ರೆ ಹಾಯಾಗಿರುತ್ತೆ ಎಂದು ಒಬ್ಬಳು ಹೇಳಿದರೆ, ಮತ್ತೊಬ್ಬ ರೋಗಿ ಬಾಚಣಿಗೆ ಉಪಯೋಗಿಸು ಇನ್ನೂ ಹಿತವಾಗಿರುತ್ತದೆ ಎನ್ನುವುದು, ಆಗ ಮೂರನೆಯವಳು ಟೂತ್ ಬ್ರಷ್ ಕೂಡ ಖುಷಿ ಕೊಡುತ್ತೆ ಎನ್ನುತ್ತಾ ಮೂವರು ತಪಾಸಣೆ ಮಾಡಿಸಿಕೊಂಡು ಫೀಸ್ ಕೊಡದೆ ಎದ್ದು ಹೋದಾಗ ಬಾಡಿಗೆ, ಕರೆಂಟ್ ಬಿಲ್, ಮೆಡಿಸಿನ್... ನನಗೆ ಬೆವರು ತರಿಸಿ ಬೆನ್ನು ನವೆ ಶುರುವಾಗಿದೆ. ಇವರಿಗೆ ಬಯ್ಯಲು ಬಾರದ ನಾನು ತುಂಬಾ ಪಾಪ ಎನ್ನುವ ಲೇಖಕಿ, ಇನ್ನೊಂದು ಘಟನೆಯಲ್ಲಿ ಹೊರಗೆ ನಿಂತ ರೋಗಿ ಹೊಟ್ಟೆನೋವು ಎಂದಾಗ ಒಳಕರೆದು ತಪಾಸಿಸಿ ಮಾತ್ರ ಬರೆದುಕೊಟ್ರೆ ಫೀ ಕೊಡದೆ ಹೋದ. ಕೇಳಿದರೆ ನಾ ಹೊರಗೆ ನಿಂತು ಕೇಳಿದ್ದು, ನೀವೇ ತಾನೇ ಒಳಗೆ ಕರೆದಿದ್ದು ಎಂದು ಹೇಳಿ ತನ್ನನ್ನೇ ಬೆಪ್ಪನಾಗಿಸಿದ ಘಟನೆಯನ್ನು ಮನೋಜ್ಞವಾಗಿ ವಿವರಿಸಿದ್ದಾರೆ.
ಇತರೆ ಪ್ರಸಂಗಗಳಲಿ, ಲಿಪ್ ಕಿಸ್ ಮಾಡಿ ಸಹಪಾಠಿಯಿಂದ ಪ್ರೆಗ್ನೆಂಟ್ ಆದೆ ಎಂದು ತಿಳಿದು ಡಿಪ್ರೆಶನ್‌ಗೆ ಹೋದ ವಿದ್ಯಾರ್ಥಿನಿಯ ವಿಚಾರ ಸೊಗಸಾಗಿದೆ. ಮೊಬೈಲ್‌ನಲ್ಲಿ ಗೂಗಲ್ ಸರ್ಚ್ ಮಾಡಿಯೇ ಎಲ್ಲವನ್ನೂ ತಿಳಿದುಕೊಂಡ ಈ ವಿದ್ಯಾರ್ಥಿನಿಯನ್ನು ಡಿಪ್ರೆಶನ್‌ನಿಂದ ಹೊರತಂದಿದ್ದು, ಇನ್ನೊಂದು ಪ್ರಸಂಗ ‘ನಾ ಹೇಳಿದ ಸುಳ್ಳು’ ನಲ್ಲಿ ಮಗ ಸತ್ತ ಸುದ್ದಿಯನ್ನು ತಾಯಿಗೆ ಪುರಾಣದ ಕತೆ ಮೂಲಕ ಹೇಳಿ ಅವಳ ಮನ ಬದಲಾಯಿಸಿ ಸತ್ಯ ಹೇಳಿದ್ದು, ಮಗದೊಂದು ‘ಬಿಬಿಎಂಪಿ ಮಾಡಿದ ಎಡವಟ್ಟು’ ಎಂಬುದರಲ್ಲಿ
ಅದು ನೀಡಿದ ಪರವಾನಿಗೆ ಪತ್ರದಲ್ಲಿ ನಾಗರತ್ನಾ ರಾವ್ ಬದುಕಿರುತ್ತಾರೆ, ಮೂರು ವರ್ಷದವರೆಗೆ ಊರ್ಜಿತ ಎಂದು ಬರೆದು ನಗೆಗೀಡಾಗುವಂತೆ ಮಾಡಿದ್ದನ್ನು ಸುಂದರವಾಗಿ ನಿರೂಪಿಸಿದ್ದಾರೆ. ಇಂತಹ ಪ್ರಸಂಗಗಳನ್ನು ಓದಿದಾಗ ನಗೆಯು ಉಕ್ಕುತ್ತದೆ.
‘ಕೀಳರಿಮೆ ಮತ್ತು ವಯಸ್ಸು’ ಎಂಬ ಪ್ರಸಂಗದಲ್ಲಿ ವಯಸ್ಸಾಯ್ತು, ವೃದ್ಧರಾಗ್ತಿದ್ದೀವಿ ಎಂದು ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳದ ಜನರು ಸಿಗುವ ಎಲ್ಲ ಸವಲತ್ತನ್ನು ಮಾತ್ರ ಪಡೆಯುತ್ತಾರೆ. ಆದರೆ ಇನ್ನೊಬ್ಬರು ಮಾತ್ರ ಅವರಿಗೆ ವಯಸ್ಸಾಯಿತು ಎಂದು ಹೇಳಬಾರದು. ಇಂತಹ ಕೀಳರಿಮೆ ಏಕೆ ಎಂದು ಪ್ರಶ್ನಿಸುತ್ತಾ, ಮಗದೊಂದು ಪ್ರಸಂಗದಲ್ಲಿ ಮುಂದಾಳತ್ವ ತರುವ ಮುಜುಗರವನ್ನು ಸೋದಾಹರಣವಾಗಿ ತೆರೆದಿಡುತ್ತಾ, ಇದು ಎಂತಹ ಇಕ್ಕಟ್ಟು ತರುತ್ತದೆ ಎನ್ನುವುದು ಅದನ್ನು ಅನುಭವಿಸಿದವರಿಗೇ ಗೊತ್ತು ಎನ್ನುತ್ತ್ತಾರೆ.
ಹೀಗೆ ಇಡಿ ಕೃತಿ ತುಂಬಾ ನಗೆಬುಗ್ಗೆ ಹರಿಯುತ್ತಿದೆ. ಇದರಲ್ಲಿ ತಿಳಿದುಕೊಳ್ಳುವಂತಹ ಸಾಕಷ್ಟು ವಿಷಯಗಳು ಇವೆ. ಕೆಲವನ್ನು ಚುಚ್ಚುಮದ್ದು ರೂಪದಲ್ಲಿ ಓದುಗರಿಗೆ ನೀಡಿದ್ದಾರೆ. ಈ ರಸಭರಿತ ಬರಹಗಳ ಒಳನೋಟ ರಸಪಾಕವನ್ನೇ ಪಸರಿಸಿದೆ.
ಒಟ್ಟಿನಲ್ಲಿ, ಕೃತಿಯ ಪ್ರತಿಪುಟದಲ್ಲೂ ನಗೆಯ ಗುಳಿಗೆ, ಸಿರಪ್ಪು, ಮುಲಾಮಿನ ಚಿಕಿತ್ಸೆ ತುಂಬಿಸಿ, ಪುಸ್ತಕವನ್ನು ಕೈಯ್ಯಲ್ಲಿ ಹಿಡಿದರೆ ನಗಲಾರದೆ ಓದಲು ಸಾಧ್ಯವೇ ಇಲ್ಲ್ಲ ಎನ್ನುವಂತೆ ಮಾಡಿಬಿಟ್ಟಿದ್ದಾರೆ.
published on June 28
........................

Comments
Post a Comment