ಭಿನ್ನಸಾಧ್ಯತೆಗಳ ಮೂಲಕ ಕಥೆ ಹೇಳುವ
‘ಮದನಿಕೆ’
ಇದೊಂದು ಐತಿಹಾಸಿಕ ಕಾದಂಬರಿ. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ ಸುಂದರ ಕಥಾಹಂದರವನ್ನು ಕಟ್ಟಿಕೊಟ್ಟಿದೆ. ಇದರ ಲೇಖಕರು ಪ್ರಸ್ತುತ ಬೆಂಗಳೂರಿನಲ್ಲಿ ಎಂಎನ್‌ಸಿಯಲ್ಲಿ ವೃತ್ತಿಯಲ್ಲಿರುವ ರಮೇಶ್ ಶೆಟ್ಟಿಗಾರ್ ಮಂಜೇಶ್ವರ್. ಕಾದಂಬರಿಯ ಕಥೆಯಲ್ಲಿ ಚರಿತ್ರೆ ಕೇವಲ ಒಂದು ತುಣುಕಷ್ಟೆ. ಅದಕ್ಕೆ ಉತ್ತಮ ಸನ್ನಿವೇಶಗಳನ್ನು ಹೆಣೆದು ಸುಂದರ ಸಿನಿಮಾ ಮಾಡುವ ಕತೆಯನ್ನು ತಯಾರಿಸಿದ್ದಾರೆ. ಇದು ಅವರ ಚೊಚ್ಚಲ ಕಾದಂಬರಿಯೂ ಹೌದು.
‘ಮದನಿಕೆ’ ಕಾದಂಬರಿಗೆ ದಿ ಲಾಸ್ಟ್ ಸೀನ್ ಎಂಬ ಅಡಿಬರಹ ಹಾಕಲಾಗಿದೆ. ಈ ಅಡಿಬರಹವೇ ಕಾದಂಬರಿಯ ಜೀವಾಳ ಮತ್ತು ಕಥಾ ವಸ್ತು. ಅತ್ಯಂತ ಸುಂದರ ಮತ್ತು ಸರಳ ನಿರೂಪಣೆ, ಮಧ್ಯೆ ಕೆಲವೆಡೆ ಲಘುಹಾಸ್ಯ ರಸಾಯನ, ಗ್ರಾಮಾಂತರದ ಜೀವನವೂ ಇಲ್ಲಿ ಇಣುಕಿದೆ. ಇವು ಓದುಗ ಒಂದೇ ಕಥೆಯನ್ನು ಓದಿ ಬೇಸರಗೊಳ್ಳದಂತೆ ಮಾಡಲು ಅನುಕೂಲವೂ ಹೌದು. ಹಾಗಂತ ಇಲ್ಲಿನ ಕಥೆ ಬೇಸರ ತರುವಂತದಲ್ಲ. ನಮ್ಮೆಲ್ಲರಿಗೂ ಗೊತ್ತಿರುವ ಬೇಲೂರಿನ ನಾಟ್ಯರಾಣಿ ಶಾಂತಲೆಯ ಕುರಿತಾದದ್ದು. ಇದನ್ನು ಇನ್ನಷ್ಟು ಹಿಗ್ಗಿಸಿದ್ದಾರೆ, ಇತಿಹಾಸಕ್ಕೆ ಕುಂದುಂಟಾಗದಂತೆ ರಂಜನೀಯವಾಗಿಯೂ ನೇಯ್ದಿದ್ದಾರೆ.
ವಿದೇಶಿ ನಿರ್ಮಾಪಕ ಸ್ಯಾಮ್ಸ್‌ನ್ ಪ್ರಸಿದ್ಧ ಬೇಲೂರು ನೋಡಲು ಬಂದು ಅಲ್ಲಿನ ಗೈಡ್ ಕಮ್ ಭರತನಾಟ್ಯ ಕಲಾವಿದೆ ಶಾಂತಲಕ್ಷ್ಮೀ ನಾಟ್ಯಕ್ಕೆ ಮನಸೋತು, ಬೇಲೂರು ಕುರಿತಾಗಿ ತಾನು ಮಾಡಲಿರುವ ಡಾಕಮೆಂಟರಿ ಸಿನಿಮಾದಲ್ಲಿ ಆಕೆಗೆ ಶಾಂತಲಾ ಪಾತ್ರ ಕೊಡಲು ನಿಧsರಿಸುತ್ತಾನೆ. ಶಾಂತಲಕ್ಷ್ಮೀಯಾದರೋ ತಾನೇ ಶಾಂತಲೆ ಎಂಬ ಚಿತ್ತಭ್ರಮೆ ಹೊಂದಿರುತ್ತಾಳೆ. ಅಲ್ಲಿನ ಮದನಿಕೆಯರೆದುರು ನಿಂತು ವಿವಿಧ ಭಂಗಿಗಳಲ್ಲಿ ನೃತ್ಯ ಮಾಡುತ್ತಾಳೆ.
ಈ ಸಿನಿಮಾ ಪ್ರೀತಿ ಮತ್ತು ತ್ಯಾಗಕ್ಕೆ ಸಂಬಂಧಿಸಿದ್ದಾಗಿದೆ. ತಾನು ಹೀರೊ ವಿಷ್ಣುವರ್ಧನ್ ಪಾತ್ರ ವಹಿಸುತ್ತಾನೆ ಸ್ಯಾಮ್ಸ್‌ನ್. ಬೇಲೂರಿನಲ್ಲಿ ಶೂಟಿಂಗ್ ನಡೆಸಿ ತುಮಕೂರು ಸಮೀಪದ ಶಿವಗಂಗಾ ಬೆಟ್ಟದಲ್ಲಿ ಶಾಂತಲೆಯು ಬೆಟ್ಟದಿಂದ ಬಿದ್ದು ಪ್ರ್ರಾಣಬಿಡುವಲ್ಲಿಗೆ ಕಥೆ ಮುಕ್ತಾಯಗೊಳ್ಳುತ್ತದೆ. ಆದರೆ ಸಿನಿಮಾ ಮನಸೆಳೆಯುವುದೇ ಶಿವಗಂಗಾದಲ್ಲಿ ಶೂಟಿಂಗ್ ನಡೆಯುವಾಗ. ಅಂದರೆ ಸಿನಿಮಾದ ಕೊನೆಯ ದೃಶ್ಯದಲ್ಲಿ. ಅಲ್ಲಿ ಆಕೆಯ ಬೆಟ್ಟದ ತುದಿಯಿಂದ ಜಾರಿಬೀಳುತ್ತಾಳೆ. ಇದು ದೊಡ್ಡ ವಿವಾದವಾಗುತ್ತದೆ. ಶಾಂತಲಾ ಬೆಟ್ಟದಿಂದ ಏಕೆ ಬಿದ್ದಳು, ಇದು ಹೇಗಾಯಿತೆನ್ನುವುದೇ ಇಲ್ಲಿನ ಕಥೆಯ ಜೀವಾಳ.
ಇಲ್ಲಿ ಎಲ್ಲ ಕಾದಂಬರಿಗಳಲ್ಲಿ ಇರುವಂತೆ ಎರಡು ಕಥೆಗಳಿವೆ. ಒಂದು ಶಾಂತಲಕ್ಷ್ಮೀಯ ಕೌಟುಂಬಿಕ ಕಥೆಯಾದರೆ ಇನ್ನೊಂದು ಸ್ಯಾಮ್ಸ್‌ನ್ ಮತ್ತು ಸಿನಿಮಾ ಚಿತ್ರೀಕರಣದ ಕಥೆ. ಕೌಟುಂಬಿಕ ವಿಚಾರದಿಂದಾಗಿ ತೊಂದರೆಗೆ ಸಿಲುಕುವ ಶಾಂತಲಕ್ಷ್ಮೀ ಸಿನಿಮಾದ ಕೊನೆಯ ದೃಶ್ಯದ ಚಿತ್ರೀಕರಣ ಅಂದರೆ ಕೊನೆಯ ದಿನ ದ ಶೂಟಿಂಗ್‌ನಲ್ಲಿ ಭಾಗವಹಿಸದಂತೆ ಆಕೆಯನ್ನು ಮದುವೆ ಆಗಬೇಕೆಂದುಕೊಂಡ ಆಕೆಯ ಸ್ವಂತ ಅಕ್ಕನ ಗಂಡ , ಸೋದರ ಮಾವ, ರೌಡಿ ಶೀಟರ್, ಜೈಲಿಗೆ ಹೋಗಿ ಬಂದಿದ್ದ ಕರಿಚೇಳು ರವಿಕಾಂತ ತಡೆಯುವುದು, ಮನೆಯವರೆನ್ನೆಲ್ಲ ಹೆದರಿಸಿ ಆಕೆಯ ಹೊರಹೋಗದಂತೆ ಕೂಡಿಹಾಕುವುದು., ಆಕೆ ಆತ್ಮಹತ್ಯೆಗೆ ನಿರ್ಧsರಿಸುವುದು, ಸಿನಿಮಾ ಶೂಟಿಂಗ್ ಮಾಡಿ ಮುಗಿಸಲೇಬೇಕೆಂದು ಪಣ ತೊಟ್ಟು ಉಪಾಯದಿಂದ ಕಾರು ಚಾಲಕ ಗೋವರ್ಧನ್ ಮತ್ತು ಸ್ಯಾಮ್ಸನ್ ಆಕೆಯನ್ನು ಸಮಾಧಾನಿಸುವುದು ಇಲ್ಲಿ ಗಮನ ಸೆಳೆಯುವ ವಿಚಾರ.
ಮಾರನೆಯ ದಿನ ಬೇಲೂರು ದೇವಸ್ಥಾನದಲ್ಲಿ ರೌಡಿಯು ಶಾಂತಲಕ್ಷ್ಮೀಯನ್ನು ಮದುವೆಯಾಗಲು ಮನೆಯವರ ಸಹಾಯದಿಂದ ಕರೆತರುವುದು, ಮದುವೆಗೆ ಸಿದ್ಧಳಾಗಿ ಆಕೆಯನ್ನು ಕರೆತಂದಾಗ ಅಲ್ಲಿಂದ ಉಪಾಯ ಹೂಡಿ ಆಕೆ ತಪ್ಪಿಸಿಕೊಳ್ಳುವಂತೆ ಮಾಡಿ ಶಿವಗಂಗಾ ಬೆಟ್ಟಕ್ಕೆ ಚಾಲಕ ಕರೆದೊಯ್ಯುತ್ತಾನೆ. ಇದನ್ನರಿತ ರವಿಕಾಂತ ಆಕ್ರೋಶಭರಿತನಾಗಿ ತನ್ನ ತಂಡದೊಂದಿಗೆ ಅಲ್ಲಿಗೆ ಧಾವಿಸಿ ರೋಷಾವೇಶದಿಂದ ಮಚು ಬೀಸುತ್ತ ಧಾವಿಸಿದಾಗ ಶೂಟಿಂಗ್‌ನಲ್ಲಿದ್ದ ಶಾಂತಲಕ್ಷ್ಮೀ ಭಯಗ್ರಸ್ತಳಾಗಿ ಅವನಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ಜೀವದಾಸೆಯನ್ನೇ ತೊರೆಯುತ್ತಾಳೆ. ಅಂದರೆ ಬೆಟ್ಟದ ತುದಿಯಿಂದ ಕೆಳಕ್ಕೆ ಬೀಳುತ್ತಾಳೆ.
ಅಂತ್ಯದಲ್ಲಿ ಬೆಟ್ಟದ ತುದಿಯಿಂದ ಬಿದ್ದು ಶಾಂತಲೆ ಸಾಯುವುದನ್ನು ಚಾನೆಲ್ ಒಂದು ವಿಶೇಷ ಸಂಚಿಕೆಯಲ್ಲಿ ಈ ಬಗ್ಗೆ ಪ್ರಸಾರ ಮಾಡುತ್ತದೆ. ಆದರೆ ಇದಕ್ಕೆ ಕಾರಣ ನಿರ್ಮಾಪಕನೋ, ಆಕೆಗಿದ್ದ ಹೈಟ್ ಫೋಬಿಯಾ (ಅಂದರೆ ಅತ್ಯಂತ ಎತ್ತರದ ಸ್ಥಳದಿಂದ ಕೆಳಕ್ಕೆ ನೋಡಿದಾಗ ಹೆದರುವುದು), ಶೂಟಿಂಗ್ ಜಾಗ ಅಪಾಯಕಾರಿ ಎಂದು ತಿಳಿದಿದ್ದರೂ ಶೂಟಿಂಗ್ ನಡೆಸಿರುವುದು ತಪ್ಪು ಎಂಬ ಕಾರಣವನ್ನು ಚಾನಲ್ ತೆರೆದಿಡುತ್ತದೆ. ಈ ಎಲ್ಲವನ್ನು ಅರಿತಿದ್ದವನು ಅಲ್ಲಿದ್ದ ಚಾಲಕ ಗೋವರ್ಧನ ಮತ್ತು ತಂಡದವರು ಮಾತ್ರ. ಗೋವರ್ಧನ್ ಇದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾನೆ. ನಂತರ ಆ ಚಾನೆಲ್ ಸಂಪಾದಕನನ್ನು ಕಂಡು ನಡೆದ ವಿಷಯವನ್ನೆಲ್ಲ ವಿವರಿಸಿ ಆಕೆಯ ಸಾವಿಗೆ ಮದುವೆಯಾಗಲು ತಯಾರಾಗಿ ಬಂದಿದ್ದ ರವಿಕಾಂತ್ ಕಾರಣ ಎನ್ನುವುದನ್ನು ತೋರಿಸುತ್ತಾನೆ. ಪೊಲೀಸರಿಗೆ ಚಾನಲ್‌ನ ಸಂಪಾದಕ ಈ ಬಗ್ಗೆ ಮಾಹಿತಿ ನೀಡುತ್ತಾನೆ. ಇನ್ನೊಂದೆಡೆ ಸ್ಯಾಮ್ಸನ್ ಆಕೆಯ ನೆನಪಲ್ಲೇ ಬೇಲೂರಿನಲ್ಲಿ ಸನ್ಯಾಸಿಯಾಗಿ ನಿರ್ಲಿಪ್ತನಂತೆ ಇದ್ದು ಅನಿವಾಸಿ ಭಾರತೀಯರಿಗೆ ಬೇಲೂರಿನ ಬಗ್ಗೆ ಗೈಡ್ ಮಾಡುವ ಕೆಲಸ ನಿರತನಾಗುತ್ತಾನೆ. ಶಾಂತಲಕ್ಷ್ಮೀಯೂ ಇದೇ ವೃತ್ತಿಯ ಜೊತೆ ದೇವಸ್ಥಾನದಲ್ಲಿ ಭರತನಾಟ್ಯ ಪ್ರದರ್ಶನ ಕೊಡುತ್ತಿದ್ದರಿಂದ ಅವಳ ನೆನಪಲ್ಲಿ ಸ್ಯಾಮ್ಸನ್ ಅಲ್ಲಿಯೇ ಬದುಕುತ್ತಾನೆ. ಪ್ರೀತಿ ಮತ್ತು ತ್ಯಾಗಕ್ಕೆ ಉದಾಹರಣೆಯಾದ ಬೇಲೂರಿನ ಐತಿಹಾಸಿಕ ಕಥೆಯಂತೆಯೇ ಸ್ಯಾಮ್ಸನ್ ಆಗುತ್ತಾನೆ.
ಈ ಕಥೆಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಕಾರು ಓಡಿಸುವ ಕಂಪನಿಯ ಚಾಲಕ ಗೋರ್ವಧನ್ ಪಾತ್ರ ಅತಿ ಪ್ರಮುಖವಾಗಿದೆ ಮತ್ತು ಗಮನಸೆಳೆಯುತ್ತದೆ. ಇಡೀ ಕಥೆಯನ್ನು ಆತ ಆವರಿಸುತ್ತಾನೆ. ಆರಂಭದಿಂದ ಅಂತ್ಯದವರೆಗೆ ಇರುವ ವ್ಯಕ್ತಿಯೂ ಹೌದು. ಇಲ್ಲಿ ಸ್ಯಾಮ್ಸ್‌ಸನ್‌ನ ಮಾನವೀಯ ಗುಣಗಳೂ ಪ್ರಕಟವಾಗಿವೆ. ಆತ ಬೇಲೂರು ದಾರಿಯಲ್ಲಿ ಚಾಲಕನ ಮನೆಗೆ ಹೋದಾಗ ಅವನ ಮಗಳಿಗೆ ಇಂಗ್ಲೀಷ್ ಮಿಡಿಯಮ್ ಓದು ಎಂದು ಹೇಳಿ ಆಕೆಯ ಖಾತೆಗೆ ಹಣ ಕಳಿಸುತ್ತಾನೆ. ವಿದೇಶಿಯನಾದರೂ ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಮೆಚ್ಚಿಕೊಂಡವನು. ಸರಳ ಮತ್ತು ಅತ್ಯಂತ ಬುದ್ಧಿವಂತ ವ್ಯಕ್ತಿ. ವಿಷ್ಣುವರ್ಧನ್ ಪಾತ್ರದ ನಿರ್ವಹಣೆಯನ್ನು ಅದ್ಭುತವಾಗಿ ಮಾಡುತ್ತಾನೆ. ಶಾಂತಲಾ ಮತ್ತು ವಿಷ್ಣುವರ್ಧನ್ ಅವರ ಪಾತ್ರದ ಚಿತ್ರೀಕರಣ ಬೇಲೂರು ಚೆನ್ನಕೇಶವ ದೇವಸ್ಥಾನದಲ್ಲಿ ನಡೆದಾಗ ಅವರಲ್ಲಿನ ಅತಿಮಧುರ ಸಂಭಾಷಣೆ, ಅವರ ನೋಟ, ಹಾವ-ಭಾವ, ಆಂಗಿಕ ಅಭಿನಯ ಇವೆಲ್ಲ ಅತ್ಯಂತ ಮನೋಜ್ಞವಾಗಿ ಮೂಡಿಬಂದಿರುತ್ತದೆ. ಇದರಿಂದ ಆತ ಆಕೆಯಲ್ಲಿ ಅನುರಕ್ತನಾಗುತ್ತಾನೆ.
ಇಲ್ಲಿ ಅನೇಕ ಡೈಲಾಗ್‌ಗಳೂ ಸಹ ಸುಂದರವಾಗಿವೆ. ಜೊತೆಗೆ ಗಾದೆಮಾತುಗಳೂ ಸಹ ಸಾಕಷ್ಟು ಬಳಕೆಯಾಗಿವೆ. ಒಟ್ಟಿನಲ್ಲಿ ಶಿಸ್ತಿನ ಕಥೆಯನ್ನು ಮಾಂತ್ರಿಕ ಸ್ಪರ್ಶದೊಂದಿಗೆ ಅತ್ಯುತ್ತಮವಾಗಿ ಹೆಣೆದು ಒಂದು ಐತಿಹಾಸಿಕ ಘಟನೆಯ ಮೂಲಕ ಸಿನಿಮಾ ರೂಪ ಕೊಟ್ಟ ಲೇಖಕರ ಪ್ರತಿಭೆ ಮೆಚ್ಚುವಂತದ್ದು. ಒಂದು ರಹಸ್ಯದ ಸುತ್ತ ವರ್ತಮಾನದಲ್ಲಿ ನಡೆಯುವ ಸಂಶೋಧನೆಯಂತೆ ಕತೆಯನ್ನು ಬೆಳೆಸುತ್ತ, ಓದುಗರನ್ನೂ ಆ ಹುಡುಕಾಟದಲ್ಲಿ ಭಾಗಿಯಾಗಿಸುವುದಿದೆಯಲ್ಲ ಅದು ಬರಹಗಾರನ ಅದ್ಭುತ ಪ್ರತಿಭೆಗೆ ಹಿಡಿದ ಕನ್ನಡಿ.
ನಮ್ಮ ಸುತ್ತವೇ ಇದ್ದರೂ ಯಾರ ಗಮನಕ್ಕೂ ಬಾರದೆ ನಿರ್ಲಕ್ಷ್ಯಗೊಂಡ ಸ್ಥಾವರಗಳಲ್ಲಿ ಅಡಗಿ ಕುಳಿತಿರಬಹುದಾದ ಚಾರಿತ್ರಿಕ ರಹಸ್ಯಗಳನ್ನು ಹೊರೆತೆಗೆದು ಓದುಗರಿಗೆ ಉಣಬಡಿಸುವ ಮತ್ತು ಇತರೇ ರಹಸ್ಯಗಳನ್ನು ಹುಡುಕುವಂತೆ ಪ್ರೇರೇಪಿಸುವ ಕಾದಂಬರಿಗಳು ವಿರಳ. ಆದ್ದರಿಂದಲೇ ಈ ಹೊಸ ಮಾದರಿ ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿ ಮನರಂಜನೆಗಿಂತ ಚಾರಿತ್ರಿಕ ಮಾಹಿತಿಗಳು ಓದುಗರಿಗೆ ಇಷ್ಟವಾಗುತ್ತವೆ, ಅಪ್ಪುತ್ತವೆ. ಶಾಂತಲೆಯ ಸಾವಿನ ಬಗ್ಗೆ ಇರುವ ಸಂಶಯಗಳನ್ನು ತೆರೆದಿಡುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿದ್ದಾರೆ. ಅಂತಹುದೇ ವ್ಯಕ್ತಿಗಳನ್ನು, ಸಂಬಂಧಗಳನ್ನು ಸೃಷ್ಟಿಸಿ ಅವರ ಮೂಲಕವೇ ಚರಿತ್ರೆಯ ಒಂದು ಅನುಮಾನಾಸ್ಪದ ಘಟನೆಯ ಬೆನ್ನೇರಿ ಭಿನ್ನಸಾಧ್ಯತೆಗಳ ಬಗ್ಗೆ ಕಥೆ ಹೇಳಿಸುವುದು ಈ ಕಾದಂಬರಿಯ ಮತ್ತೊಂದು ವಿಶೇಷವಾಗಿದೆ.
- ದತ್ತಾತ್ರೇಯ ಹೆಗಡೆ
3. 6.2025
,,,,,,,,,..........

Comments
Post a Comment