ಸಮಾಜದ ಸ್ಥಿತಿ ಬಿಚ್ಚಿಡುವ
‘ಹೊಳೆ ದಂಡೆ’
‘ಹೊಳೆ ದಂಡೆ- ಅಂಕಣ ಮಾಲೆ ನೋಟ-೧’ ಪ್ರಸ್ತುತ ಕೃತಿಯು ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಹಾಯ್ ಬೆಂಗಳೂರು’ ವಾರಪತ್ರಿಕೆಗೆ ಬರೆದ ೩೦ ಅಂಕಣಗಳನ್ನು ಈ ಕೃತಿಯಲ್ಲಿ ಪ್ರಕಟ ಮಾಡಿದ್ದಾರೆ. ಇದರಲ್ಲಿ ರಾಜಕೀಯವಿದೆ, ಕೃಷಿ ಇದೆ, ಸಾಂಸ್ಕೃತಿಕ ಚಟುವಟಿಕೆ ಇದೆ, ನೆಲ ಸಂಸ್ಕೃತಿಯ ಬಗ್ಗೆ ಇದೆ, ವ್ಯಕ್ತಿ ದರ್ಶನವಿದೆ. ಸಾಧಕರಿದ್ದಾರೆ. ಯುವಜನತೆ ಬಗ್ಗೆ ಇದೆ. ಪ್ರಸ್ತುತ ಕೃತಿಯಲ್ಲಿ ನಾಗತಿಹಳ್ಳಿಯವರ ಬಹುಮುಖ್ಯ ಚಿಂತನೆಗಳನ್ನು ಇಲ್ಲಿನ ಅಂಕಣಗಳು ಹರಿಸಿವೆ. ಸ್ಪಂದನ ಮತ್ತು ಪ್ರತಿಸ್ಪ್ಪಂದನ, ಖಾಸಗಿ ಮತ್ತು ಸಾರ್ವಜನಿಕ ಚಿಂತನೆಗಳು ಪ್ರಸ್ತುತ ಮತ್ತು ಹಳೆಯ ವಿಶ್ಲೇಷಣೆಗಳು ಆವಿಯಾಗದೆ ಒಂದೆಡೆ ದಾಖಲಾಗುವಂತೆ ಈ ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ. ಸಮಸ್ತ ವಿಷಯವು ಓದುಗರಿಗೆ ಇಲ್ಲಿ ಸಿಕ್ಕಂತಾಗಿದೆ.
ಕೃತಿಯ ಮೊದಲ ಅಂಕಣ ‘ಜೀವವೈವಿಧ್ಯದ ಅನಂತ ವಿಸ್ತಾರಗಳ ಕಡೆಗೆ’ ಇದರಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡದೆ ಕವಡೆ ಕಟ್ಟಿಕೊಂಡು ದುಡಿಯುವ ಜೀತದಾಳಗಳು ಐಟಿಯಲ್ಲಿ ಅಸಂಖ್ಯ. ಪ್ರಾಜೆಕ್ಟ್ ಮೇಲೆ ವಿದೇಶಕ್ಕೆ ಹೋಗಬಹುದು ಎನ್ನುವುದು ಕೆಲವರ ಆಸೆ. ಐಟಿ ಉದ್ಯಮ ಪ್ರತಿಭಾ ಪಲಾಯನಕ್ಕೆ ಸೋಪಾನ ಎನ್ನುವ ಲೇಖಕರು, ಭಾರತದಲ್ಲಿ ಕಸುಬಿನ ಜೊತೆ ಗುರುತಿಸಿಕೊಳ್ಳಲು ಹಿಂಜರಿಕೆ ಇದೆ. ಭಾರತೀಯ ಮತ್ತು ಕನ್ನಡದ ತರುಣ ಮನಸ್ಸುಗಳು ಐಟಿಯಿಂದ ಹೊರಗೆ ಬಂದು ವೈವಿಧ್ಯಮಯವಾದ ಹಲವಾರು ಖಾಸಗಿ, ಅರೆ ಖಾಸಗಿ, ಸರ್ಕಾರಿ ಒಡೆತನದ ಉದ್ಯಮಗಳನ್ನು ಆವಾಹಿಸಿಕೊಳ್ಳಬೇಕಿದೆ. ಸೂಡೋ ಸೋಗಿನಿಂದ ಹೊರಬೇಕು. ಮಹತ್ವವಾದ ವ್ಯಕ್ತಿ ಸಾಧ್ಯತೆಗಳು ಸಾಕಷ್ಟಿವೆ. ಅವುಗಳನ್ನು ಬಳಸಿಕೊಳ್ಳಬೇಕೆಂದು ಹೇಳುತ್ತಾರೆ.
‘ಅನ್ನದ ತಟ್ಟೆಯಲ್ಲಿ ವಿಷ’ ಎಂಬ ಅಂಕಣದಲ್ಲಿ ಜಾಹೀರಾತಿನ ಯುಗದಲ್ಲಿರುವ ನಮಗೆ ಅಗಾಧವಾದ ಸತ್ಯದರ್ಶನದ ಕೊರತೆ ಇದೆ. ತಟ್ಟೆಯಲ್ಲಿ ವಿಷವಿದ್ದರೂ ಅದು ತಿಳಿಯುತ್ತಿಲ್ಲ. ತಿಳಿದರೂ ಸತ್ಯಶೋಧನೆಯಲ್ಲಿ ಆಸಕ್ತಿ ಇಲ್ಲ. ನಿಸರ್ಗ ಕೊಟ್ಟಿರುವ ಆಹಾರ ಬೆಳೆಗಳನ್ನು ತಮ್ಮ ಸಹಜತೆ ಮತ್ತು ಆರೋಗ್ಯದಾಯಿ ಗುಣಗಳಿಂದ ಮನುಕುಲವನ್ನು ಕಾಪಾಡುತ್ತ ಬಂದಿದೆ. ಮನುಷ್ಯ ಹಣ ಕೊಟ್ಟು ವಿಷ ಉಣ್ಣುತ್ತಿದ್ದಾನೆ. ಜೈವಿಕ ತಂತ್ರಜ್ಞಾನ ಸೃಷ್ಟಿಸುವ ಆಹಾರವನ್ನು ತಿರಸ್ಕರಿಸಬೇಕು. ಸಹಜ ತಳಿ ಬೆಳೆಗಳನ್ನು ಉಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ
‘ಪಾಠ ಒಂದು -ಕೇಳಿಸಿಕೋ’ ಎಂಬ ಅಂಕಣದಲ್ಲಿ ಮನುಷ್ಯನಿಗಿರಬೇಕಾದ ಮೂಲಭೂತ ಶಿಸ್ತಿನಲ್ಲಿ ಕೇಳಿಸಿಕೊಳ್ಳುವುದು ಒಂದು. ನಂತರ ಮಾತನಾಡುವುದು. ಆದರೆ ನಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಹುನ್ನಾರದಲ್ಲಿ ನಾವೇ ದೊಡ್ಡವರೆಂಬ ಅಹಮಿಕೆಯಲ್ಲಿ ಇನ್ನೊಬ್ಬರು ಹೇಳಿದ್ದನ್ನು ತಿಳಿಸಿಕೊಳ್ಳದೆ ನಾವೇ ಮಾತನಾಡುತ್ತಿರುತ್ತೇವೆ ಎನ್ನುವ ಲೇಕಕರು, ‘ಪಾಠ ಎರಡು- ಮಾತನಾಡು’ ಎಂಬ ಅಂಕಣದಲ್ಲಿ ಭಾರತದಲ್ಲಿ ಮಾತನಾಡುವವರು ಹೆಚ್ಚು, ಕೇಳಿಸಿಕೊಳ್ಳುವವರು ಕಡಿಮೆ. ಬರೆಯುವರೇ ಹೆಚು. ಓದುವವರು ಕಡಿಮೆ. ತಿನ್ನುವವರು ಹೆಚ್ಚು, ದುಡಿಯುವವರು ಕಡಿಮೆ ಎಂದು ಹೇಳುತ್ತಾರೆ. ಕೆಲವರಿಗೆ ತಮ್ಮನ್ನು ವಾಕ್‌ಪಟುತ್ವದ ಚಾತುರ್ಯವಿಲ್ಲದ ಪ್ರತಿಭಾಹೀನ ಎಂದು ಮೂಲೆಗುಂಪಾಗಿಸಬಹುದು ಎಂಬ ಭಯವಿದೆ. ನಮ್ಮಲ್ಲಿ ಕೇಳುವ ಕಲೆ ಹಲವರಿಗೆ ಇಲ್ಲ. ಹೇಳುವುದೊಂದನ್ನೇ ತಮ್ಮ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿ ನಿರ್ವಿಘ್ನವಾಗಿ ಆಚರಿಸಿಕೊಂಡು ಬಂದಿದ್ದಾರೆ. ಕಡಿಮೆ ತಿಳಿದವನು ಹೆಚ್ಚು ಮಾತನಾಡುತ್ತಾನೆ ಮತ್ತು ಆಡಿದ್ದನ್ನೇ ಆಡುತ್ತಾನೆ ಎನ್ನುತ್ತಾ, ಮಾತನಾಡುವಾಗ ಎಚ್ಚರದಲ್ಲಿ ನಾವಿರಬೇಕು ಎಂದು ಎಚ್ಚರಿಸುತ್ತಾರೆ
‘ಉಚಿತ-ಅನುಚಿತ’ ಎಂಬ ಅಂಕಣದಲ್ಲಿ ಎಲ್ಲಿ ಯಾವುದು ಪ್ರಸ್ತುತ, ಯಾವುದು ಅಪ್ರಸ್ತುತ ಎಂಬ ಎಚ್ಚರ ಅನೇಕರಿಗೆ ಇಲ್ಲ. ಪರಿಸರಕ್ಕೆ, ಆವರಣಕ್ಕೆ, ಲಹರಿಗೆ ಸಂಬಂಧಪಡದೆ ಇರುವ ನಡವಳಿಕೆ ಪ್ರದರ್ಶಿಸಿ ಬಿಡುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮ ಒಂದರಲ್ಲಿ ರಾಜಕಾರಣಿಯೊಬ್ಬರು ರಾಜಕೀಯ ಪಕ್ಷವನ್ನು ತೆಗಳಿದ್ದನ್ನು ಉದಾಹರಿಸುತ್ತಾ, ಔಚಿತ್ಯಪ್ರಜ್ಞೆ ಇಲ್ಲದವರು ದೇಶ ಆಳಲು ಅನರ್ಹರು. ಹೀಗಾದವರು ನಮ್ಮ ಸಂಸ್ಕೃತಿಯನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂದು ಪ್ರಶ್ನಿಸುತ್ತಾರೆ. ‘ಮರಳಿಹಳ್ಳಿಗೆ ಹೋಗೋಣ’ ಎಂಬ ಅಂಕಣದಲ್ಲಿ ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಆಚರಿಸಲ್ಪಡುವ ನಾಗತಿಹಳ್ಳಿ ಹಬ್ಬದ ಬಗ್ಗೆ ಕರೆಯುತ್ತಾರೆ ಈ ಹಬ್ಬದಲ್ಲಿ ಅದ್ಭುತವಾದ ಶಿಬಿರಗಳಿರುತ್ತವೆ ಚಿತ್ರಕಥೆ ರಚನೆ ಚಿತ್ರಕಲೆ ರಚನೆ, ನಾಟಕ ರಚನೆ, ಗ್ರಾಮೀಣ ಆಟಗಳುವ, ಯಕ್ಷಗಾನ, ಮೆಹಂದಿ ಹಚ್ಚಿಕೊಳ್ಳುವುದು, ಆರೋಗ್ಯ ತಪಾಸಣಾ ಶಿಬಿರ ಮೊದಲಾದವು ಇರುತ್ತವೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಈ ಊರಲ್ಲಿ ಹಣಕ್ಕಾಗಿ ಕಾರ್ಯಕ್ರಮವನ್ನು ಮಾಡದೆ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ ಎನ್ನುತ್ತಾರೆ.
‘ಐಎಎಸ್ ಎಂಬ ಅವಿವೇಕಿಗಳು’ ಇದರಲ್ಲಿ ಭ್ರಷ್ಟತೆ, ರಾಜಕಾರಣಿಗಳ ಸಮಾಜದ್ರೋಹ, ಮುಖ್ಯಮಂತ್ರಿಯನ್ನೇ ಕುಣಿಸಬಲ್ಲ ಇವರು ಬಕ್ರ್ರಾ ಮಾಡುವವರು. ಹೋದ ಕಡೆ ಎಲ್ಲ ತಂಗಲು ಸರ್ಕಾರಿ ಐಬಿ, ಓಡಾಡಲು ವಾಹನ, ಸಿಬ್ಬಂದಿ ಈ ದೌಲತ್ತುಗಳಿಂದ ಮೆರೆಯುತ್ತಿದ್ದಾರೆ. ಐಎಎಸ್‌ಗಳು ದೇಶಕ್ಕೂ ಮತ್ತು ದೇಶದ ತಾಯಿ ಬೇರಾದ ಹಳ್ಳ್ಳಿಗಳಿಗೂ, ದೇಶದ ಸಂಸ್ಕೃತಿಯ ಭಾಗವಾದ ಭಾಷೆಗೂ ದ್ರೋಹ ಎಸಗುತ್ತಿದ್ದಾರೆ. ಶ್ರೀಮಂತರನ್ನು ರಮಿಸುತ್ತಾರೆ. ರಾಜಕಾರಣಿ ಮತ್ತು ಅಧಿಕಾರಶಾಹಿ ನೇರಗೊಂಡರೆ ಮಾತ್ರ ದೇಶ ಸರಿಯಾಗಲು ಸಾಧ್ಯ ಎಂದು ಸಲಹೆ ನೀಡುತ್ತಾರೆ.
‘ವಿದ್ಯುತ್ ಇಲಾಖೆಯ ವಿಕಾರಿಗಳು’ ಎಂಬಲ್ಲಿ ಅಲ್ಲಿನ ಸಿಬ್ಬಂದಿಗಳು ನೇರವಾಗಿ ಬೆಳೆದಿರುವ ಮರಗಳನ್ನು ಕಡಿಯುವ ಬಗ್ಗೆ ಬರೆದಿದ್ದಾರೆ. ತಂತಿಗಳಿಗೆ ಅಡ್ಡ ಬರುವ ರೆಂಬೆಗಳನ್ನು ಮಾತ್ರ ತೆಗೆಯಬೇಕಾದರು ಕ್ರಮಬದ್ಧತೆ ಇಲ್ಲದೆ ಅದರ ಬುಡವನ್ನೇ ಕಡಿಯುತ್ತಾರೆ ಎನ್ನುತ್ತಾ ತಮ್ಮ ಮನೆಯ ಮುಂದೆ ತಾನು ನೆಟ್ಟ ಮರವನ್ನು ಕಡಿದುದನ್ನು ವಿವರಿಸುತ್ತಾ ತಾಳ್ಮೆ ಎಂಬುದು ಸರ್ಕಾರಿ ಮತ್ತು ಸಾರ್ವಜನಿಕ ಹಣ ತಿನ್ನುವವರಿಗೆ ಇರಬೇಕು ಎಂದು ಸಲಹೆ ಕೊಡುತ್ತಾರೆ. ‘ಹೀಗೊಂದು ರಂಗ ಜಾಗೃತಿ’ ಎಂಬ ಅಂಕಣದಲ್ಲಿ ರಂಗಭೂಮಿಯಲ್ಲಿ, ಚಲನಚಿತ್ರದಲ್ಲಿ ಮರು ಹುಟ್ಟುಗಳು ತಲೆದೋರುತ್ತವೆ. ಸಮುದಾಯವನ್ನು ಜಾಗೃತವಾಗಿಡಲು ಇವು ಯತ್ನಿಸುತ್ತವೆ. ಚಿಂತನೆಯ ದಾರಿಯನ್ನು ಇದು ತೋರಿಸುತ್ತದೆ. ಪ್ರತಿಭಟನೆ ಕಲಿಸಿಕೊಡುತ್ತದೆ. ಸ್ವಾಭಿಮಾನವನ್ನು ಹೇಳಿಕೊಡುತ್ತದೆ. ನಾಟಕ ನಾಲ್ಕು ಜನ ಸೇರಿ ಆಚರಿಸುವ ಕಲಾತ್ಮಕ ಹಬ್ಬ. ಮನುಷ್ಯ ಏನಾದರೂ ಹೊಸತು ಮಾಡುತ್ತಿರಬೇಕು. ಅದಕ್ಕಾಗಿ ನಾಟಕ ರಂಗಭೂಮಿ ಅತ್ಯವಶ್ಯ ಎಂದು ಹೇಳುತ್ತಾರೆ
‘ಮೈಗಳ್ಳ ಮಹಾತ್ಮೆ’ ಎಂಬ ಅಂಕಣದಲ್ಲಿ ದುಡಿಮೆ ಎಂಬುದು ದಡ್ಡರಿಗೆ ಎಂಬ ಕಲ್ಪನೆ ಬೆಳೆಯುತ್ತಿದೆ. ಮೈಗಳ್ಳತನವೇ ಮೌಲ್ಯವಾಗುತ್ತಿದೆ. ಇಂತಹ ಅಪಾಯಗಳಿಂದ ವ್ಯಕ್ತಿ ಮತ್ತು ದೇಶ ನಾಶವಾಗುತ್ತದೆ. ದುಡಿಮೆಯನ್ನು ಪ್ರೀತಿಸದವನು ತನ್ನನ್ನು ತಾನು ಪ್ರೀತಿಸಿಕೊಳ್ಳದವನಾಗಿರುತ್ತಾನೆ. ಹಳ್ಳಿಗಳಲ್ಲಿ ಉಳಲು, ಬೆಳೆಯಲು, ಕಟಾವು ಮಾಡಲು ಕಾರ್ಮಿಕರಿಲ್ಲ, ಜಮೀನಿದ್ದವನೂ ಎಲ್ಲವನ್ನೂ ಬಿಟ್ಟು ಸಿಟಿ ಸೇರಿಕೊಂಡಿದ್ದಾನೆ. ಕಾರ್ಮಿಕರಾದವರು ಸಿಟಿಯಲ್ಲಿ ನೊಣ ಹೊಡೆಯುವ ಸೆಕ್ಯೂರಿಟಿ ಕೆಲಸವನ್ನು ಮಾಡಲಾರಂಭಿಸಿದ್ದಾರೆ. ಆಲಸ್ಯ ಎಂಬ ಕಸ ಬೇಜವಾಬ್ದಾರಿಯಾದುದು. ಆತ್ಮ ವಂಚನೆಯದು ಎಂದು ಹೇಳುತ್ತಾರೆ.
ಹೀಗೆ ಚಿಂತನಾತ್ಮಕ ಮತ್ತು ಸಮಾಜದಲ್ಲಿ ದುರಸ್ತಿಯಾಗದಷ್ಟು ಕೆಟ್ಟಿರುವ ವ್ಯವಸ್ಥೆಯನ್ನು ಈ ಅಂಕಣಮಾಲೆಯಲ್ಲಿ ಚಿತ್ರಿಸಿದ್ದಾರೆ. ಇದನ್ನು ಓದಿದಾಗ ನಾವು ಎದುರಿಸುತ್ತಿರುವ ಇಂದಿನ ಸ್ಥಿತಿ ಕಣ್ಣೆದುರು ಬಂದು ನಿಲ್ಲುತ್ತದೆ.
ಈ ಕೃತಿಯಲ್ಲಿ ಬೆಸಗರಹಳ್ಳಿ ರಾಮಣ್ಣ, ಬರಹಗಾರ, ಪತ್ರಕರ್ತ ಜೋಗಿ, ಮಂಗಳೂರಿನ ಪ್ರೊ. ದಾಮೋದರ್ ಶೆಟ್ಟಿ, ದೇಹದಾನಿ ಶಂಕರನಾರಾಯಣ ಗೌಡ, ಪಾಂಡವಪುರದ ಮಾಜಿ ಶಾಸಕ ಕೃಷ್ಣಪ್ಪ , ತಾಯಿಯಂಥ ವೈದ್ಯ ಡಾ|| ಸಿ ಎನ್ ಮಂಜುನಾಥ, ಮದ್ದೂರಿನ ಕೃಷಿ ಪರಿಣಿತೆ ಎ.ಎಲ್. ಸೋಮಲಾ ಮುಂತಾದವರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಹೀಗೆ ತುಂಬಾ ಆಪ್ತವಾಗುವ ವಿಷಯಗಳನ್ನು, ವ್ಯಕ್ತಿಗಳನ್ನು ಈ ಕೃತಿಯ ಮೂಲಕ ನಾವು ಕಾಣಬಹುದು.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
20.6.2025

Comments
Post a Comment