ಸ್ಫೂರ್ತಿ, ಆತ್ಮವಿಶ್ವ್ವಾಸ ತುಂಬುವ
‘ಬುತ್ತಿ’
‘ಬುತ್ತಿ’ ಈ ಕೃತಿಯಲ್ಲಿ ಇರುವುದು ಬುದ್ಧಿಯ ಊಟಕ್ಕೆ ಸಿದ್ಧಪಡಿಸಿದ ಬುತ್ತಿ. ಬುದ್ಧಿಯ ಹಸಿವನು ನೀಗಿಸಲು ಕಟ್ಟಿಟ್ಟ ಅರಿವಿನ ಬುತ್ತಿ. ಇದರಲ್ಲಿ ತುಂಬಿರುವುದು ಅಮೃತಸದೃಶ ಜ್ಞಾನಫಲಗಳು, ಜೀವಸತ್ವವಾಗಿ ಪರಿವರ್ತಿತವಾದ ರಸಾಯನ. ಅರಿವಿನ ಉಣಿಸುಗಳು, ವಿಷಯ ವೈವಿಧ್ಯದ ಚಿಂತನೆ, ಬೆಳಗುವ ಹೊಸ ಸಾಲು ದೀಪಗಳು ಇಲ್ಲಿವೆ. ಹಣತೆಗಳಾದರೂ ಹಳತಾಗಿರಬಹುದು, ಆದರೆ ದೀಪಗಳ ಬೆಳಕಂತೂ ಹೊಸತಾಗಿದೆ. ಕತ್ತಲೆಯ ಮಸ್ತ್ತಕಕ್ಕನುಸಾರವಾಗಿ ಬೆಳಕಿನ ಪ್ರಭಾವ, ಅಜ್ಞಾನದ ಮಟ್ಟಕ್ಕನುಸಾರವಾಗಿ ಜ್ಞಾನದೀಪದ ಪ್ರಭಾವ ಇಲ್ಲಿ ಬೆಳಗಿರುವುದನ್ನು ಕಾಣಬಹುದು.
ಈ ಕೃತಿಯ ಕರ್ತೃ ದಿ. ಅಂಬಾತನಯ ಮುದ್ರಾಡಿ. ಉಡುಪಿ ಜಿಲ್ಲೆ ಹೆಬ್ರಿ ಸಮೀಪದ ಮುದ್ರಾಡಿಯವರಾದ ಇವರು, ವೃತ್ತಿಯಿಂದ ಮುಖ್ಯ ಶಿಕ್ಷಕರಾಗಿ ನಿವೃತ್ತರು. ಬಹುಮುಖ ಪ್ರತಿಭೆ, ಹರಿಕೀರ್ತನೆಕಾರರು, ಯಕ್ಷಗಾನ ಕಲಾವಿದರು, ವಿದ್ವಾಂಸರು, ಹತ್ತುಹಲವು ಕ್ಷೇತ್ರಗಳಲ್ಲಿ ಪ್ರತಿಭೆಯ ಹರಹನ್ನು ಹೊಂದಿದವರಾಗಿದ್ದರು. ಈ ಕೃತಿಯಲ್ಲಿ ಒಟ್ಟು ೫೪ ಚಿಂತನಗಳಿವೆ. ಇವೆಲ್ಲ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಚಿಂತನ ಬರಹಗಳಾಗಿವೆ.
ಇಲ್ಲಿನ ವಿಷಯಗಳು ಬಹುಹಿರಿದಾದವಾಗಿವೆ. ಈ ಚಿಂತನ ಧಾರೆಗಳು ಓದುಗರ ಮನಮುಟ್ಟುವುದರಲ್ಲಿ, ಹೃದಯದ ಕದ ತಟ್ಟುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಅನೇಕ ವಿಶಿಷ್ಟ ಅಂಶಗಳ ಹೊಳಹಿದೆ. ಗೆಳೆಯರಿಗೆ ಪಾಠವಿದೆ, ಹರಯದವರಿಗೆ ಆಪ್ತ ಸಲಹೆ ಇದೆ, ಹಿರಿಯರೊಂದಿಗೆ ಅಭಿಪ್ರಾಯಗಳ ಸಮಕ್ಷಮವಿದೆ. ದಾರಿತಪ್ಪಿದವರಿಗೆ ಮಾರ್ಗದರ್ಶನವಿದೆ, ಬುದ್ಧಿಮಾತುಗಳಿವೆ. ಸಂಸ್ಕಾರ ವಿಮುಖರಿಗೆ ಸದ್ಬೋಧನೆ ಇದೆ. ಶೀಲರಹಿತರಿಗೆ ಸೌಶೀಲ್ಯದ ಹಿತವಚನಗಳಿವೆ. ಬಲ್ಲವರಿಗೆ ಸೊಲ್ಲುವ ನಲ್ನುಡಿಗಳಿವೆ. ಓರಗೆಯವರಿಗೆ ಸರಾಗದ ಮಾತುಗಳಿವೆ. ಒಟ್ಟಿನಲ್ಲಿ, ಸಮಾಜದ ಪ್ರತಿಯೊಬ್ಬರಿಗೂ ಹಿತವಾದ ನುಡಿಮುತ್ತುಗಳನ್ನು ಪೋಣಿಸಿ, ಮಿತವಾದ ಮಾತುಗಳಿಂದ ನಿರೂಪಿಸಿ ಕಟ್ಟಿಕೊಟ್ಟ ಅರಿವಿನ ‘ಬುತ್ತಿ’ ಇದಾಗಿದೆ.
ನಾವು ಜ್ಞಾನ ಆನಂದ, ಸುಖವನ್ನು ಹೊರಗೆ ಅರಸುತ್ತೇವೆ. ಆದರೆ ಅದು ನಮ್ಮೊಳಗೆ ಇದೆ ಎಂಬುದನ್ನು ತಿಳಿಯದೇ ಹೋಗಿದ್ದೇವೆ. ಅಂತರ್ಮುಖರಾದಾಗ ನಿಜವಾದ ಅರಿವು ಸಿಗುತ್ತದೆ ಎಂಬ ಅರಿವೇ ಇಲ್ಲ ಎನ್ನುವುದನ್ನು ‘ಅರಿವು-ಇರವು’ನಲ್ಲಿ ತೋರಿಸಿಕೊಟ್ಟಿದ್ದಾರೆ. ‘ಮುಕ್ಕಣ್ಣ ದರ್ಶನ’ದಲ್ಲಿ ನಾವು ಮುಕ್ಕಣ್ಣರಾಗಬೇಕು. ಅರಿವಿನ ಕಣ್ಣು ತೆರೆಯಬೇಕು. ಅರಿವಿನ ಕಣ್ಣು ತೆರೆಯಬೇಕಾದರೆ ಹೊರಗಿನ ಕಣ್ಣನ್ನು ಮುಚ್ಚಬೇಕು ಎಂಬ ಸಂದೇಶವಿದೆ. ‘ವಿವೇಕ’ದಲ್ಲಿ ವಿವೇಕ ಎಂದರೆ ವಿವೇಚನೆ, ವಿಮರ್ಶೆ, ಪರೀಕ್ಷಿಸುವುದು, ವಿಚಾರ ಮಾಡುವುದು. ಇವು ಮನಸ್ಸಿನಿಂದಲ್ಲ, ಬುದ್ಧಿಯಿಂದ ಮಾಡುವಂಥದ್ದು. ಹೀಗಾಗಿ ಮಾತಿನಲ್ಲಿ ಮತ್ತು ಕೃತಿಯಲ್ಲಿ ಮತಿವಿವೇಕ ಇರಬೇಕು ಎನ್ನುವುದನ್ನು ವಿವರಿಸಿದ್ದಾರೆ. ‘ಆಚಾರ’ದಲ್ಲಿ ಮನುಷ್ಯನಾಗಿ ಗುರುತಿಸಿಕೊಳ್ಳುವುದೇ ತನ್ನ ಆಚಾರದಲ್ಲಿ. ಆಚಾರ ಎಂದರೆ ಆಚರಣೆ, ಒಳ್ಳೆಯ ನಡತೆ. ಆಚಾರವನ್ನು ಸಮಾಜ ಗುರುತಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುತ್ತಾರೆ.
ನಾವು ಹೊರಗಿನ ಶುಚಿಯನ್ನು ಮೊದಲು ಸಾಧಿಸಬೇಕು. ಇದನ್ನು ಬಹಿರಂಗದ ಶುದ್ಧಿ ಎನ್ನಲಾಗುತ್ತದೆ. ಈ ಶುದ್ಧಿಯ ನಂತರವೇ ಅಂತರಂಗದ ಶುದ್ಧಿಗೆ ಮುಂದಾಗಬೇಕು ಎನ್ನುವ ಸಲಹೆಯನ್ನು ‘ಅಂತರಂಗಶುದ್ಧಿ- ಬಹಿರಂಗ ಶುದ್ಧಿ’ಯಲ್ಲಿ ನೀಡುತ್ತಾರೆ. ‘ಹಿತವಚನ-ಪ್ರಿಯವಚನ’ದಲ್ಲಿ ನಮ್ಮಲ್ಲಿ ಜನರಿಗೆ ಪ್ರಿಯವಚನ ಮಾತ್ರ ಬೇಕಾಗಿದೆ. ಇದರಿಂದಾಗಿ ಹಿತವಚನ ಹೇಳುವವರು ಮೌನವಾಗುಳಿದಿದ್ದಾರೆ ಎನ್ನುತ್ತಾ, ‘ಸ್ನೇಹಸಂಪತ್ತು’ ನಲ್ಲಿ ಮನಸ್ಸು-ಮನಸ್ಸು ಒಂದಾದರೆ ಸಾಲದು, ಹೃದಯಗಳು ಒಂದಾದಾಗ ಸ್ನೇಹ ಎಂದಿಗೂ ಮುರಿದು ಬೀಳುವುದಿಲ್ಲ. ಈ ಎಚ್ಚರ ಸ್ನೇಹ ಸಂಪಾದನೆಗೆ ಬೇಕು ಎಂಬ ಕಿವಿಮಾತು ಹೇಳುತ್ತಾರೆ.
‘ಅಮ್ಮ -ಅಮೃತ’ ದಲ್ಲಿ ಅಮ್ಮ ಎಂದರೆ ಅಮೃತ. ಅಮ್ಮನೆದೆಯ ಹಾಲು ಮಗುವಿಗೆ ಅಮೃತ. ಇದನ್ನು ತುಂಬಿಟ್ಟವನು ಭಗವಂತ. ಈ ಹಾಲನ್ನು ಕುಡಿದು ಅಮೃತರಾಗಿ ಎಂಬುದು ಈ ಚಿಂತನೆಯ ತಾತ್ಪರ್ಯ. ‘ಅಪ್ಪ ಮಗ’ ಎನ್ನುವಲ್ಲಿ ಮಗನ ಬದುಕು ರೂಪಿಸುವಲ್ಲಿ ತಂದೆಯ ಪಾತ್ರ ದೊಡ್ಡದು. ಈ ಎಚ್ಚರ ತಂದೆಗೂ ಬೇಕು, ಮಗನಿಗೂ ಬೇಕು ಎನ್ನುತ್ತಾರೆ. ಶಕ್ತಿಪಾತದಿಂದ ಶಿಷ್ಯನನ್ನು ಗುರು ಅನುಗ್ರಹಿಸುತ್ತಾನೆ. ಆಧ್ಯಾತ್ಮಿಕ ಸಾಧನೆಯಲ್ಲಿ ಗುರುವಿನ ಸಾನಿಧ್ಯ, ಮಾರ್ಗದರ್ಶನ ತೀರಾ ಅನಿವಾರ್ಯ. ಸಾಧನೆ ಸಿದ್ಧಿಸುವುದೇ ಗುರುವಿನ ಅನುಗ್ರಹದಿಂದ. ಗುರು ಮೊದಲು ತನ್ನನ್ನು ತುಂಬಿಕೊಳ್ಳಬೇಕು. ನಂತರ ಶಿಷ್ಯನನ್ನು ತುಂಬಬೇಕೆಂಬ ಸಂದೇಶವನ್ನು ‘ಗುರುಪಾರಮ್ಯದಲ್ಲಿ ನೀಡಿದ್ದಾರೆ.
ಶೀಲವಂತನು ಯಾವ ಕಾಲದಲ್ಲೂ ಕಂಗೆಡುವುದಿಲ್ಲ. ಶೀಲವನ್ನು ಕಾಪಾಡುವುದು ಸುಲಭದ ಮಾತಲ್ಲ ಎನ್ನುವುದನ್ನು ‘ಶೀಲಪಾರಮ್ಯ’ ಹೇಳಿದರೆ, ‘ಸ್ವಪ್ರಶಂಸೆ’ ಯಲ್ಲಿ ನಮ್ಮನ್ನು ನಾವು ಹೊಗಳಿಕೊಳ್ಳಬಾರದು. ಕೀರ್ತಿಗಾಗಲಿ ಅಲೆಯಬಾರದು ಎಂಬ ಸಂದೇಶವಿದೆ. ಅಪರಾಧ ಮಾಡಿದವರನ್ನು ಕ್ಷಮಿಸಬಾರದು. ಅವರ ಪಾಲಿಗೆ ಅವರನ್ನು ಬಿಟ್ಟುಬಿಡಬೇಕು ಕಾಲವೇ ಅವರಿಗೆ ಬುದ್ಧಿ ಕಲಿಸುತ್ತದೆ ಎನ್ನುತ್ತಾರೆ ‘ಕ್ಷಮಾಗುಣ’ದಲ್ಲಿ . ನಮಗೆ ಸತ್ಯ ಬೇರೆಯಲ್ಲ. ದೇವರು ಬೇರೆಯಲ್ಲ, ಯಾವುದು ಜೀವಿಗಳ ಆತ್ಯಂತಿಕ ಹಿತಕ್ಕೆ ಕಾರಣವಾಗುತ್ತದೆಯೋ ಅದೇ ಸತ್ಯ ಎನ್ನುವುದನ್ನು ‘ಸತ್ಯಮೇವ ಜಯತೇ’ ಸಾರುತ್ತದೆ.
ಕೃತಿಯಲ್ಲಿ ಪ್ರತಿ ಚಿಂತನಗಳನ್ನು ‘ಕಿರಿದರೊಳ್ ಪಿರಿದರ್ಥಂ’ ಎನ್ನುವಂತೆ ಚಿಕ್ಕಚೊಕ್ಕ ವಾಕ್ಯಗಳಲ್ಲಿ, ಸುಪುಷ್ಟ ಪದಪುಂಜಗಳಲ್ಲಿ ಒಂದೆರಡು ಪುಟಗಳಲ್ಲಿ ಅಡಕಗೊಳಿಸಿದ್ದಾರೆ. ವಿಶೇಷವೆಂದರೆ, ಪ್ರತಿ ಚಿಂತನವೂ ಆರಂಭವಾಗುವುದು ಕವಿವಾಣಿ ಅಥವಾ ಪದ್ಯದ ತುಣುಕಿನಿಂದ.
ಹೀಗೆ ಈ ಕೃತಿಯು ರುಚಿಸುವ, ಉಂಡಮೇಲೂ ಮಿಗುವ, ಉಣ್ಣುತ್ತ್ತಾ ಹೋದಂತೆ ಹೊಸ ಹೊಸ ರುಚಿಯ ಅನುಭವವಾಗುವ ಪದ ಮತ್ತು ಅರ್ಥಗಳನ್ನು ಒಳಗೊಂಡಿದೆ. ಇಂದು ಸಮಾಜಕ್ಕೆ ಮತ್ತು ಜ್ಞಾನಕ್ಕೆ ಇಂತಹ ಜ್ಞಾನ ಬುತ್ತಿಗಳ ಅವಶ್ಯಕತೆ ಇದೆ. ಅಬಾಲವೃದ್ಧರಾದಿಯಾಗಿ ಜ್ಞಾನದ ಪಯಣದಲ್ಲಿ ಇಲ್ಲಿನ ಚಿಂತನೆಗಳು ಉಪಯೋಗಕ್ಕೆ ಬರುವಂತಹವು. ಬದುಕಿನಲ್ಲಿ ಸ್ಫೂರ್ತಿ, ಆತ್ಮವಿಶ್ವ್ವಾಸ ತುಂಬುವಂತಹವು.
..........................

Comments
Post a Comment