ಸಾಹಸಮಯ ವ್ಯಕ್ತಿತ್ವ ಬೆಳೆಸುವ


‘ಅಂಶು ಮತ್ತು ರೋಬೋ ಸಾಹಸ’


ಇದು ರೋಬೋ ಅಥವಾ ರೋಬೋಟ್ ಯಂತ್ರಮಾನವನ ಜೊತೆ ಕನಸಿನ ಮೂಲಕ ತನ್ನೆಲ್ಲ ಮನಸ್ಸಿನ ಇಚ್ಛೆಯನ್ನು ಪೂರ್ಣಗೊಳಿಸಿಕೊಂಡ ಅಂಶು ಎಂಬ ಬಾಲಕನ ಸುತ್ತ ಹೆಣೆದಿರುವ ಕಥಾ ಸಂಕಲನ.  ಇದರ ಲೇಖಕರು ಮತ್ತೂರು ಸುಬ್ಬಣ್ಣ. ಮೂಲತಃ ಶಿವಮೊಗ್ಗದವರಾದ ಇವರು, ಬೆಂಗಳೂರಿನ ಹಿಲ್ ರಾಕ್ ನ್ಯಾಶನಲ್ ಪಬ್ಲಿಕ್ ಶಾಲೆಯ ನಿವೃತ್ತ ಪ್ರಾಂಶುಪಾಲರು. ಮಕ್ಕಳ ಕಥೆ ಬರೆಯುವುದರಲ್ಲಿ ಸಿದ್ಧಹಸ್ತರು.

 ಕನ್ನಡದಲ್ಲಿ ಮಕ್ಕಳ ಕಥೆಗಳು ಹೇಗಿರಬೇಕು ಎನ್ನುವುದನ್ನು ಇವರ ಕಥೆಗಳ ಮೂಲಕ ಊಹಿಸಬಹುದು. ಕೇವಲ ನೀತಿಬೋಧಕ ಕಥೆ ಬರೆಯುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ವೈಜ್ಞಾನಿಕ ವಿಚಾರಗಳ ಮೇಲೂ ನಕ್ಕಳ ಕಥೆ ಬರೆಯಬಹುದು. ಇದು ಇವತ್ತಿನ ಮಕ್ಕಳಿಗೆ ಅವಶ್ಯಕ. ಮಕ್ಕಳ ಮನದ ಮೇಲೆ  ವಿಮಾನ, ರಾಕೆಟ್, ಉಪಗ್ರಹ, ರೊಬೋಟ್ ಮೊದಲಾದವು ತುಂಬಾ ಪರಿಣಾಮ ಬೀರಬಲ್ಲವು ಎನ್ನುವದನ್ನರಿತು ಅವರ ಭವಿಷ್ಯಕ್ಕೆ  ಸಹಾಯವಾಗುವ ನಿಟ್ಟಿನಲ್ಲಿ ‘ಅಂಶು ಮತ್ತು ರೋಬೊ ಸಾಹಸ’ ಎಂಬ ಕೃತಿಯನ್ನು ರಚಿಸಿದ್ದಾರೆ.

ಮಕ್ಕಳ ಮುಗ್ಧತೆಯನ್ನು ಅರ್ಥ ಮಾಡಿಕೊಂಡು ಹೆಣೆದಿರುವ ಸುಂದರ ಕಥೆಗಳ ಗುಚ್ಛ ಪ್ರಸ್ತುತ ಕೃತಿಯಾಗಿದೆ. ಈ ಕಥಾ ಸಂಕಲನ ಮಕ್ಕಳಿಗೆ ಹೊಸ ಹುರುಪು, ಆಸೆ, ಕನಸು, ಸಾಹಸ, ವೈವಿಧ್ಯಮಯ, ವೈಜ್ಞಾನಿಕ ಆವಿಷ್ಕಾರಗಳ ಪರಿಚಯ ಮಾಡಿಸುತ್ತದೆ. ಮುಂದಿನ ಪೀಳಿಗೆಗೆ ಸಿಗಬಹುದಾದಂತಹ ಯಂತ್ರೋಪಕರಣಗಳು, ಕಂಪ್ಯೂಟರ್ ತಂತ್ರಜ್ಞಾನಗಳನ್ನು ಅನುಭವಿಸುವಂತೆ ಮಾಡುತ್ತದೆ. ಹೊಸದಾದ ಮತ್ತು ದೊಡ್ಡದಾದ ಆಲೋಚನೆಗಳನ್ನು ಮೂಡಿಸುವಂತಿದೆ. ಮಕ್ಕಳು ಈ ಕಥೆಯ ಅನುಭವದಿಂದ ತಾವು ಕೂಡ ಏನಾದರೂ ಸಾಧಿಸುವ ಯೋಚನೆ ಮಾಡಲು ಪ್ರಯತ್ನಿಸಲು ಇದೊಂದು ಮಾರ್ಗವಾಗಿದೆ ಮತ್ತು ಈ ಕಥೆಯಿಂದ ಪ್ರೇರಿತರಾಗಿ ವಿಜ್ಞಾನಿಗಳಾಗುವ ಪ್ರಯತ್ನವನ್ನು ಸಹ ಮಾಡಲು ಇದು ಮೆಟ್ಟಿಲಾಗಲಿದೆ.

 ಈ ಕಥೆಯಲ್ಲಿ ಬರುವ ರೋಬೊ ಮತ್ತು ಅದರ ಸಾಹಸಗಳನ್ನು ಓದಿದಾಗ ರೋಮಾಂಚಕ ಅನುಭವವಾಗುತ್ತದೆ. ಹಲವಾರು ಸಂಶೋಧನೆಗಳನ್ನು ಇಲ್ಲಿ ಅಂಶು ಮತ್ತು ರೋಬೋ ಮಾಡುತ್ತಾರೆ ಅಂಶುವಿನ ತಂದೆ ತನ್ನ ಮಗನಿಗಾಗಿ ದೆಹಲಿಯಿಂದ ತಂದ ರೋಬೊ ಆತನ ಸ್ನೇಹಿತನಾಗುತ್ತದೆ. ರಾಕೆಟ್ ಮೂಲಕ ಅವರ ಸಾಹಸ ಪ್ರಾರಂಭವಾಗುತ್ತದೆ. ಸಮುದ್ರದ ತಳದಲ್ಲಿ, ಅಂತರಿಕ್ಷದಲ್ಲಿ,  ಹಿಮಾಲಯ ಪರ್ವತಗಳಲ್ಲಿ,  ಗೂಢಚಾರಿಗಳ ವಿರುದ್ಧ, ದೈತ್ಯಪ್ರಾಣಿಗಳ ನಡುವೆ, ಭ್ರಷ್ಟರ ಮಧ್ಯೆ,  ದಕ್ಷಿಣ ಗಂಗೋತ್ರಿ ಮುಂತಾದ ಲೋಕಗಳಲ್ಲಿ ಇವರು ಸಹಯಾನ ಮಾಡುತ್ತಾರೆ. ಅಲ್ಲಿ ಎದುರಾಗುವ ಎಲ್ಲಾ ಸಮಸ್ಯೆ ಎದುರಿಸಿ ಗೆದ್ದುಬರುತ್ತಾರೆ. ಆದರೆ ಇವೆಲ್ಲವೂ ಕನಸಿನಲ್ಲಿ ಮಾಡಿದ ಸಾಹಸ ಎನ್ನುವುದು ಕೊನೆಯ ಕಥೆಯಲ್ಲಿ ಗೊತ್ತಾಗುತ್ತದೆ. ಅಲ್ಲಿವರೆಗೆ ರೋಬೋವನ್ನು ತನ್ನ ಬಳಿ ಮಲಗಿಸಿಕೊಂಡು  ನಿದ್ರಾಲೋಕದಲ್ಲಿ ವಿಹರಿಸಿದ ಕಥೆ ಎನ್ನುವುದು ನಮ್ಮ ಅನುಭವಕ್ಕೆ ಬರುವುದಿಲ್ಲ. ನಮ್ಮ ಕಣ್ಣಮುಂದೆಯೇ ನಡೆದಂತೆ ಭಾಸವಾಗುತ್ತದೆ. ಅಷ್ಟೊಂದು ಚೆಂದವಾಗಿ ಕಥೆಯನ್ನು ಲೇಖಕರು  ನಿರೂಪಿಸಿದ್ದಾರೆ.

 ಅಂಶು ಮತ್ತು ರೋಬೋ ಸಾಹದ ಈ ಕಥಾನಕದಲ್ಲಿ ಗಗನಯಾನ ಚೆನ್ನಾಗಿ ಮೂಡಿ ಬಂದಿದೆ. ಮೋಡಗಳನ್ನು ಸೇರಿಕೊಂಡು ನೀಲಿಗಗನದಲ್ಲಿ ಹಾರಾಡುವ ಅಲ್ಲಿನ ಅನುಭವವನ್ನು ವರ್ಣಿಸಲಾಗಿದೆ. ಸಮುದ್ರ ತಳದಲ್ಲಿನ ಕಥೆಯಲ್ಲಿ ಅಲ್ಲಿನ ವಿಶಿಷ್ಟತೆ ಅನುಭವಿಸುವುದು, ತಿಮಿಂಗಿಲ ಇವರಿಬ್ಬರನ್ನು ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವ ಘಟನೆಯನ್ನು ಚಿತ್ರಿಸಲಾಗಿದೆ. ಧೂಮಕೇತುಗಳ, ಅನ್ಯಗ್ರಹ ಜೀವಿಗಳ ಜೊತೆ ಸಂಭಾಷಣೆ ನಡೆಸಿದ್ದನ್ನು ತೋರಿಸಿದ್ದಾರೆ. ಹಿಮಾಲಯದಲ್ಲಿ ಪರ್ವತಾರೋಹಿಗಳು ಎಂಬ ಕತೆಯಲ್ಲಿ ಹಿಮಕರಡಿ ಮತ್ತು ಎಪಿ ಎಂಬ ಪ್ರಾಣಿ ಎದುರಾಗುವುದು, ಅವುಗಳನ್ನೆದುರಿಸುವುದು ಇದೆ. ಪುಂಡರ ತಂಡವೊಂದರ  ಬೆನ್ನು ಹತ್ತಿದ ಅಂಶು, ರೋಬೋ ಅವರಿಂದ ಮಗು ಅಪಹರಣವಾಗಿದ್ದನ್ನು ಪತ್ತೆ ಹಚ್ಚುವುದನ್ನು ಓದುತ್ತಿರುವಾಗ ಸಿನಿಮಾ ನೋಡಿದ ಅನುಭವವಾಗುತ್ತದೆ. ಕಿವಿ ಬೇನೆಯ ವೃತ್ತಾಂತ ಎಂಬ ಕತೆಯಲ್ಲಿ  ಸಮಯೋಚಿತ ಬುದ್ಧಿವಂತಿಕೆಯಿಂದ ಭ್ರಷ್ಟಾಚಾರ, ಮೋಸ, ಕೊಲೆ, ಸುಲಿಗೆಯಿಂದ ಪಾರಾಗಬಹುದು. ಹಣವೇ ಸರ್ವಸ್ವ ಎಂದುಕೊಂಡ ಸಮಾಜಘಾತುಕರಿಗೆ ಪಾಠ ಕಲಿಸುವ ರೀತಿ ಸುಂದರವಾಗಿ ಮೂಡಿಬಂದಿದೆ.

 ಇಲ್ಲಿನ ಕಥೆಗಳಲ್ಲಿ ಕಲ್ಪನೆ ಮತ್ತು ಯೋಜನೆಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಭವಿಷ್ಯದ ವೈಜ್ಞಾನಿಕ ಜಗತ್ತಿಗೆ ಇದು ಉತ್ತಮವಾಗಿದೆ. ಇಲ್ಲಿನ ಸರಳ ಭಾಷೆಗಳು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿವೆ. ಇಂತಹ ವೈಜ್ಞಾನಿಕ ವಿಚಾರಗಳನ್ನು ಅವರ ತಲೆಯಲ್ಲಿ ತುಂಬಿದರೆ ಮುಂದೆ ಅವರ ಭವಿಷ್ಯ ಉತ್ತಮ ಆಗುವುದರಲ್ಲಿ ಸಂದೇಹವಿಲ್ಲ. ವಿಜ್ಞಾನದ ಕುತೂಹಲದ ವಿಷಯಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿದ ಹಾಗೂ ಅದನ್ನು ಕಣ್ಣಾರೆ ನೋಡಿದ ಅದ್ಭುತ ಅನುಭವವನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಹೀಗೆ ಇಲ್ಲಿನ ಪ್ರತಿಯೊಂದು ಕಥೆಯು ವಿವಿಧ ತರಹದಲ್ಲಿ ಮಕ್ಕಳ ಮನೆ ಗೆಲ್ಲುವಂತಿದೆ. ಮಕ್ಕಳ ಹೃದಯಕ್ಕೆ ಹತ್ತಿರವಾಗುವ ಸೃಜನಶೀಲವಾದ ಈ ಕಥಾ ಸಂಕಲನ ಓದಿದಾಗ ‘ದೃಷ್ಟಿಯ ವೇಗಕ್ಕಿಂತ ಮನಸ್ಸಿನ ವೇಗ ಹೆಚ್ಚು’ ಎನ್ನುವ ಮಾತಿಗೆ ಹೆಚ್ಚಿನ ಪುಷ್ಠಿ ಬರುತ್ತದೆ. ಒಟ್ಟಿನಲ್ಲಿ, ಇಲ್ಲಿನ ಕಥೆಗಳೆಲ್ಲ ವಿಶಿಷ್ಟವಾದುವು ಮತ್ತು ವಿಸ್ಮಯಕಾರಿಯಾದವು. ಮಕ್ಕಳ ಬುದ್ಧಿ ಸಾರ್ಮರ್ಥ್ಯ, ಸೂಕ್ಷ್ಮತೆಗೆ ಇಂತಹ ಕಥೆ ಅತ್ಯವಶ. ಮಕ್ಕಳಲ್ಲಿ ಹೊಸ, ಆಸೆ, ಕನಸು, ಹುರುಪು, ಸಾಹಸಮಯ ವ್ಯಕ್ತಿತ್ವ ಬೆಳೆಸುವಲ್ಲಿ ಈ ಕಥಾಸಂಕಲನ ನಿಶ್ಚಿತವಾಗಿ ನೆರವಾಗುತ್ತದೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

13,6.2025

...........................


Comments

Popular posts from this blog