ಜೀವನೋತ್ಸಾಹ, ಜೀವನ ಪ್ರೀತಿಯ
‘ಭಾವನಾಗಮ್ಯ’
,,,,,,,,,,,,,,,,,,,,,,
‘ಭಾವನಾಗಮ್ಯ’ ಇದೊಂದು ಪ್ರೇಮ, ಗೆಳೆತನ ಆಧಾರಿತ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನಾಧಾರಿತ ಕಾದಂಬರಿ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆ ಅಥವಾ ಇಲ್ಲಿಗೆ ಸಂಬಂಧಿಸಿದ್ದು ಎನ್ನುವುದು ಓದಿದ ನಂತರ ಗೊತ್ತಾಗುತ್ತದೆ. ಆದರೆ ಇಲ್ಲಿ ಬಳಸಿದ ಭಾಷೆ ಮಲೆನಾಡಿನದ್ದಲ್ಲ, ಯಾವುದೇ ಒಂದು ಪ್ರಾಂತ್ಯಕ್ಕೆ ಸೀಮಿತವಾಗದ ಸಾಹಿತ್ಯಿಕ ಭಾಷೆ. (ಕೆಲವು ಸಾಲುಗಳು ಮಾತ್ರ ಮಲೆನಾಡಿನ ಭಾಷೆಯಲ್ಲಿವೆ) ಇದರ ಲೇಖಕರು ವಿದ್ಯಾ ದತ್ತಾತ್ರಿ ಹೊಸಕೊಪ್ಪ. ಇವರು ಸಹ ಮಲೆನಾಡಿನ ಸೊರಬದವರಾಗಿರುವುದರಿಂದ ಇಲ್ಲಿನ ಪ್ರಕೃತಿ, ಸಂಪ್ರದಾಯ, ಧಾರ್ಮಿಕ ಪದ್ಧ್ದತಿಗಳೆಲ್ಲಾ ಚೆನ್ನಾಗಿ ಮೂಡಿಬಂದಿವೆ.
ಪ್ರಸ್ತುತ ಕಾದಂಬರಿಯಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಇಲ್ಲಿನ ಕಥೆಯಲ್ಲಿ ಎರಡೇ ಪಾತ್ರಗಳು ಕಾಣಿಸುತ್ತವೆ. ಉಳಿದಂತೆ ನಾಯಕ ಮತ್ತು ನಾಯಕಿಯ ಕುಟುಂಬ, ಬಳಗ, ಹಳ್ಳಿ, ಅವರ ವೃತ್ತಿ ಜೀವನದ ಬಗ್ಗೆ ಇದೆ. ಚೆಂದದ ಕಥೆ ಎಲ್ಲಿಯೂ ದಾರಿತಪ್ಪದಂತೆ ನಿರೂಪಿಸಿರುವ ಲೇಖಕಿಯ ಕೌಶಲ್ಯವನ್ನು ಇಲ್ಲಿ ಮೆಚ್ಚಲೇಬೇಕು. ಜೀವನ ಪ್ರೀತಿ ಮತ್ತು ಜೀವನ ದೃಷ್ಟಿ ಇದರಲ್ಲಿ ಮಿಳಿತವಾಗಿದೆ.
ಹಳ್ಳಿಯ ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ಕೊಡಿಸಿದರೆ ಅವರು ನೌಕರಿಗಾಗಿ ಬೆಂಗಳೂರು, ದೆಹಲಿಯಂತಹ ನಗರ ಸೇರುವುದು, ಮದುವೆಯಾಗುವ ವಯಸ್ಸಿಗೂ ಮದುವೆಯಾಗದೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡಿದರೆ ಅದನ್ನು ಮುಂದೆ ಹಾಕುತ್ತಾ ಹೋಗುವುದು, ಸಾಯುವುದರೊಳಗೆ ಮಕ್ಕಳಿಗೆ ಮದುವೆ ಮಾಡಬೇಕೆಂಬ ಆಸೆ ಹೊತ್ತಿರುವ ತಂದೆ-ತಾಯಂದಿರ ಕನಸು ಈಡೇರದೆ ಅವರು ಜೀವ ಬಿಡುವುದು ಈಗ ಸಾಮಾನ್ಯವಾಗಿದೆ. ನಂತರ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗುವುದು, ಮಕ್ಕಳಾಗುವ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಲಿಚ್ಛಿಸದೆ ಕಾಲ ನೂಕುವುದು. ಪ್ರಸ್ತುತ ‘ಭಾವನಾಗಮ್ಯ’ ಕಾದಂಬರಿಯ ನಾಯಕಿ ಕವಿತಾಳದ್ದೂ ಇದೇ ಕತೆ.
ಭಾರತೀಯ ವಾಯುಸೇನೆಗೆ ಸೇರುವುದರಿಂದ ಆರಂಭವಾಗಿ ೧೦ ವರ್ಷ ಸೇವೆ ಸಲ್ಲಿಸಿ ನಿವೃತ್ತಳಾದ ನಂತರ ಆರಂಭದಿಂದಲೂ ಪ್ರಿಯಕರ, ಗೆಳೆಯನಾಗಿದ್ದ ಪ್ರತೀಕ್‌ನನ್ನು ಕವಿತಾ ಮದುವೆಯಾಗುತ್ತಾಳೆ. ಈ ಮಧ್ಯೆ ಪ್ರತೀಕ್ ಮತ್ತು ಕವಿತಾಳ ಪ್ರೀತಿ -ಪ್ರೇಮ- ಹುಡುಗಾಟ, ಕವಿತಾಳ ಊರು ತೀರ್ಥಹಳ್ಳಿಯ ಸಮೀಪದ ಗ್ರಾಮದ ಪ್ರಕೃತಿ, ಅಲ್ಲಿನ ಸಂಪ್ರದಾಯ, ಕಾಲೇಜು, ಎನ್‌ಸಿಸಿ ಭೇಟಿ, ವರ್ಷಕ್ಕೊಮ್ಮೆ ಊರಿಗೆ ಬರುವುದು, ಅವಳ ತಂದೆಗೆ ಮಿದುಳಿನ ಕಾಯಿಲೆ ತಗಲುವುದು, ಮಣಿಪಾಲಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡುವುದು, ಆದರೆ ಕಾಯಿಲೆಯಿಂದ ಕೆಲವೇ ದಿನಗಳಲ್ಲಿ ತಂದೆ ಸಾಯುವುದು ಕಾದಂಬರಿಯ ಪ್ರಮುಖ ಆಂಶಗಳು.
ಈ ಕೃತಿಯು ಒಂದೆಡೆ ಕವಿತಾ- ಪ್ರತೀಕ್ ಅವರ ಆತ್ಮೀಯತೆಯ ಪ್ರೀತಿ -ಪ್ರೇಮದ ಚಿತ್ರಣವನ್ನು ತೆರೆದಿಟ್ಟರೂ ಇನ್ನೊಂದೆಡೆ, ಅವರಿಬ್ಬರೂ ದೂರವಿರುವುದರಿಂದಲೋ ಏನೋ ಮದುವೆಯಾಗದೆ ಕಾಲ ತಳ್ಳುತ್ತಾರೆ. ಈ ಮಧ್ಯೆ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಪ್ರತೀಕ್ ಡಿಪ್ರೆಶನ್‌ಗೆ ಹೋಗುತ್ತಾನೆ. ಒಮ್ಮೆ ಆತ್ಮಹತ್ಯೆಗೂ ಮುಂದಾಗುತ್ತಾನೆ. ಜೀವನೋತ್ಸಾಹ ಕಳೆದುಕೊಳ್ಳುತ್ತಾನೆ. ಡಾಕ್ಟರ್ ಬಳಿ ಹೋದಾಗ ಧ್ಯಾನ, ಪ್ರಾಣಾಯಾಮ ಮಾಡುವಂತೆ ಸಲಹೆ ಕೊಟ್ಟರೂ ಅದು ಆತನಿಂದ ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಕವಿತಾಳನ್ನು ಮರೆತು ಬೇರೆ ಮದುವೆಯಾಗುವ ಬಗ್ಗೆ ಯೋಚಿಸುತ್ತಾನೆ. ಇನ್ನೊಂದೆಡೆ ಮನೆಯವರಿಂದ ಮದುವೆಗೆ ಒತ್ತಡ. ತಾನು ‘ಆಲ್‌ರೆಡಿ ಎಂಗೇಜ್ಡ್’ ಎಂದು ಗೊತ್ತಿದ್ದರೂ ಒತ್ತಾಯಿಸುವ ಬಗ್ಗೆ ಬೇಸರಪಟ್ಟುಕೊಳ್ಳುತ್ತಾನೆ. ಇದೇ ವೇಳೆ ಕವಿತಾ ತಂದೆಯ ಕಾಯಿಲೆ ‘ಸರೆಬ್ರಲ್ ಅನೆಯಾನಿಸಂ’ ಬಗ್ಗೆ ಅರಿತು ಬೇಸರದಲ್ಲಿರುತ್ತಾಳೆ. ಹೆಸರೇ ಕೇಳಿರದ ಈ ಕಾಯಿಲೆಯ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾಳೆ. ಅದರಲ್ಲಿ ಈ ಕಾಯಿಲೆ ತಗುಲಿದವರು ೩ರಿಂದ ೬ ತಿಂಗಳಷ್ಟೇ ಬದುಕಬಹುದೆನ್ನುವ ಮಾಹಿತಿ ನೋಡಿ ಕುಸಿದುಹೋಗುತ್ತಾಳೆ.
ಇತ್ತ ಮನೆಯವರ ಒತ್ತಡಕ್ಕೆ ಸಿಲುಕಿದ ಪ್ರತೀಕ್ ಜಾತಕ ಸರಿಹೊಂದುವುದರಿಂದ ಅಪರ್ಣಾ ಎನ್ನುವವಳೊಡನೆ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ. ಈ ವೇಳೆ ಆಕೆಯ ತಂದೆ ಸಾವಿಗೀಡಾಗಿರುತ್ತಾರೆ. ಕೆಲವು ದಿನದ ನಂತರ ಕವಿತಾ ಕರೆ ಮಾಡಿದಾಗ ನಿಶ್ಚಿತಾರ್ಥದ ವಿಷಯ ತಿಳಿಸುತ್ತಾನೆ. ಇದನ್ನು ಕೇಳಿದ ಅವಳು ‘ಜೀವನದಲ್ಲಿ ಯಾರು ಯಾರಿಗೂ ಅನಿವಾರ್ಯವಿಲ್ಲ’ ಎಂದುಕೊಳ್ಳುತ್ತಾಳೆ. ಆದರೂ ಕವಿತಾಳ ನೆನಪಲ್ಲಿ ಅಥವಾ ತನಗಾಗಿ ಅವಳು ಕಾಯುತ್ತಿರುವುದರಿಂದ ಅವಳಿಗೆ ಅನ್ಯಾಯ ಮಾಡಬಾರದೆಂಬ ಕಾರಣದಿಂದ ನಿಶ್ಚಿತಾರ್ಥವನ್ನು ರದ್ದುಗೊಳಿಸುತ್ತಾನೆ. ಇದನ್ನು ಹುಡುಗಿಯ ಕಡೆಯವರು ‘ಋಣಾನುಬಂಧ ಇಲ್ಲ ಎಂದರೆ ಏನು ಮಾಡಲು ಸಾಧ್ಯ’ ಎಂದು ಹೇಳುತ್ತಾರೆ.
ಕವಿತಾಳ ಮತ್ತೆ ವಾಪಸ್ ದೆಹಲಿಗೆ ಹೋಗುತ್ತಾಳೆ. ಕೆಲವೇ ತಿಂಗಳಲ್ಲಿ ಅವಳ ಸೇವಾವಧಿ ಮುಗಿಯುತ್ತದೆ. ಈ ಮಧ್ಯೆ ಆಕೆಯನ್ನು ಸಂಪರ್ಕ ಮಾಡಿ ಮದುವೆ ರದ್ದಾದ ಬಗ್ಗೆ ಹೇಳುತ್ತಾನೆ. ಅಪ್ಪ ಇರುವಾಗ ಮದುವೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ನಿನಗೆ ಬೇರೆ ಹುಡುಗಿ ಗೊತ್ತಾಗಿದೆ ಅಂತ ನಾನು ಅಪ್ಪನಿಗೆ ಹೇಳಿರಲಿಲ್ಲ ಎಂದು ಕವಿತಾ ಹೇಳುತ್ತಾಳೆ.
ಇದರ ಮಧ್ಯೆ ಕೆಲವು ತಮಾಷೆಯ ಪ್ರಸಂಗಗಳನ್ನು ಕಾದಂಬರಿಯ ಕೃರ್ತ ಚೆನ್ನಾಗಿ ಹೆಣೆದಿದ್ದಾರೆ. ‘ಅಪ್ಲಿಕೇಶನ್ ಅನಲಿಸ್ಟ್ ಲೀಕೇಜ್ ಅನಲಿಸ್ಟ್ ಆದದ್ದು’ ಎಂಬ ಅಧ್ಯಾಯದಲ್ಲಿ ತನ್ನ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡು ಅಪಾರ್ಟ್‌ಮೆಂಟಿನ ಎಲ್ಲಾ ಸಮಸ್ಯೆಗಳನ್ನು ಅರಿತುಕೊಂಡು ಪರಿಹರಿಸುತ್ತಾನೆ. ಇದನ್ನು ಕವಿತಾಗೆ ಹೇಳಿದಾಗ ‘ಒಂಟಿಯಾಗಿರೋ ಜಂಟಿ ಕಾರ್ಯದರ್ಶಿ’ ಎಂದು ಕಿಚಾಯಿಸುತ್ತಾಳೆ. ಅಲ್ಲಿ ಸೋರುವ ನೀರಿನ ಪೈಪ್‌ಗಳನ್ನು ಪತ್ತೆ ಮಾಡಿ ಅವುಗಳಿಗೆ ಬದಲಿಸುವುದು, ಲಿಫ್ಟ್ ಹಾಳಾದರೆ ಸರಿಪಡಿಸುವುದು ಮಾಡುತ್ತಾನೆ. ಆಗ ತಾನೇ ‘ಅಪ್ಲಿಕೇಶನ್ ಅನಲಿಸ್ಟ್ ಲೀಕೇಜ್ ಸ್ಪೆಶಲಿಸ್ಟ್ ಆದೆ ಎಂದು ಹಾಸ್ಯವಾಗಿ ಹೇಳಿಕೊಳ್ಳುತ್ತಾನೆ.
ಕೊನೆಗೂ ಮದುವೆಯ ಕನಸು ಚಿಗುರುತ್ತದೆ. ಕವಿತಾ ಸೇವಾ ನಿವೃತ್ತಿಯಾಗುತ್ತಾಳೆ. ಇಬ್ಬರೂ ಮದುವೆಯಾಗಲು ತೀರ್ಮಾನಿಸುತ್ತಾರೆ ‘೧೨ ವರ್ಷಗಳ ನಮ್ಮ ಪ್ರೀತಿಗೆ ಲೈಸೆನ್ಸ್ ಸಿಕ್ಕಿದೆ. ಈ ೧೨ ವರ್ಷಗಳಲ್ಲಿ ಒಂದು ಬಾರಿ ಪ್ರತೀಕ್ ನನ್ನ ಕೈ ತಪ್ಪ್ಪಿಸಿಕೊಂಡಿದ್ದ, ಮತ್ತೊಂದು ಬಾರಿ ಅವನು ನನ್ನನ್ನು ತಪ್ಪಿಸಿಕೊಳ್ಳುವುದರಲ್ಲಿದ್ದ. ಅದನ್ನೇ ಬಹುಶಃ ದೊಡ್ಡವರು ಹಣೆಯಲ್ಲಿ ಬರೆದಿದ್ದನ್ನು ತಪ್ಪಿಸಲಾಗದು ಎನ್ನುತ್ತಾರೆ’ ಎಂದುಕೊಳ್ಳುತಾಳೆ. ತಡವಾದರೂ ಯಶಸ್ವಿಯಾಗಿಯೇ ಹೊಂಡಕ್ಕೆ ಬಿದ್ದೆ ಎಂದು ಪ್ರತೀಕ್‌ಗೆ ಕಿಚಾಯಿಸುತ್ತಾಳೆ. ಇಬ್ಬರ ಮದುವೆಯು ಯಶಸ್ವಿಯಾಗಿ ನೆರವೇರುತ್ತದೆ.
ಕೊನೆಯಲ್ಲ್ಲಿ ಇಬ್ಬರು ಮದುವೆಯಾಗಿ ಬೆಂಗಳೂರಿನಲ್ಲಿರುವ ಪ್ರತೀಕ್‌ನ ಫ್ಲಾಟ್‌ನಲ್ಲಿ ನೆಲೆಸುತ್ತಾರೆ. ಮನೆಯಲ್ಲಿ ಬಿಡುವಿನ ವೇಳೆ ಹೊರಗಡೆ ಆಕಾಶದಲ್ಲಿ ವಿಮಾನ ಹಾರುವ ಶಬ್ದ ಕೇಳುತ್ತಿದ್ದಂತೆ ಬಾಲ್ಕನಿಗೆ ಬಂದು ನಿಂತು ನೋಡುತ್ತಾಳೆ. ಜಗತ್ತು ನಾವಂದುಕೊಂಡಿರುವುದಕ್ಕಿಂತ ತುಂಬಾ ಸುಂದರವಾಗಿದೆ. ನೋಡಲು ಒಳಗಣ್ಣು ಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಇದೆ ವೇಳೆ ಪಕ್ಕದ ಶಾಲೆಯಲ್ಲಿ ಜನಮನಗಣ ಗೀತೆ ಮೊಳಗುತ್ತದೆ.
ಒಟ್ಟಿನಲ್ಲಿ, ಲೇಖಕಿಯ ಪ್ರಥಮ ಕೃತಿಯಾದ ಈ ಕಾದಂಬರಿ ತನ್ನ ಕಥೆಯ ಮೂಲಕ ಓದಿಸಿಕೊಂಡು ಹೋಗುತ್ತದೆ ಎಲ್ಲಿಯೂ ಬೇಸರ ಬಾರದಂತೆ.
published by Dattatreya Hegde on May 8,2005
...............

Comments
Post a Comment