ಜೀವಾತ್ಮಕತೆಯ ರೂಪದ, ತಿಳಿಹಾಸ್ಯದ
‘ನೆನಪು ಗರಿ ಬಿಚ್ಚಿದಾಗ ’
‘ನೆನಪು ಗರಿ ಬಿಚ್ಚಿದಾಗ’ ಇದರಲ್ಲಿ ಹತ್ತಾರು ವಸ್ತು ವೈವಿಧ್ಯತೆಯುಳ್ಳ, ಜೀವಾತ್ಮಕತೆಯ ರೂಪದ ನೆನಪುಗಳು ಗರಿ ಬಿಚ್ಚಿಕೊಂಡಿವೆ. ಬರಹಗಾರ್ತಿ ವಿದ್ಯಾ ಶಿರಹಟ್ಟಿಯವರ ಚೊಚ್ಚಲ ಕೃತಿ ಇದು. ಜೀವನದ ವಿವಿಧ ಮುಖಗಳನ್ನು ಹತ್ತಾರು ದೃಷ್ಟಿಕೋನದ ಮೂಲಕ ಇಲ್ಲಿ ಚಿತ್ರಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕನ್ನಡದಲ್ಲಿ ಇರುವ ಈ ಲೇಖನಗಳನ್ನು ಓದುತ್ತ ಹೋದಂತೆ ನಮ್ಮ ಜೀವನದಲ್ಲಿ ನಡೆದ ಹಾಗೂ ಇತರರಿಂದ ಕೇಳಿದ ಅನೇಕ ಘಟನೆಗಳ ನೆನಪಾಗುತ್ತವೆ. ಪ್ರತಿ ಲೇಖನಕ್ಕೂ ತಿಳಿಹಾಸ್ಯದ ನಂಟಿದೆ.
ಫೇಸ್ಬುಕ್‌ನಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ಮಿತ್ರರ ಒತ್ತಾಸೆಯ ಮೇರೆಗೆ ವಿದ್ಯಾ ಅವರು ಕೃತಿಯನ್ನು ರೂಪಿಸಿದ್ದಾರೆ. ೨೫ ಲೇಖನಗಳ ಗುಚ್ಛ ಇದು.
ಅತಿ ಸರಳ ಭಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ, ಸುಲಭದಲ್ಲಿ ಅರ್ಥವಾಗುವಂತಿದೆ. ಈ ಲೇಖನಗಳು ನೈಜ ವಿಷಯವನ್ನು ಹೊಂದಿದ್ದರೂ ಲೇಖಕಿ ಅದನ್ನು ಓದುಗರಿಗೆ ಇಷ್ಟವಾಗುವಂತೆ ನಿರೂಪಿಸಿದ್ದಾರೆ. ಬರಹ ಮನಮುಟ್ಟುವಂತೆ ಕೆಲವಡೆ ಹಿಗ್ಗಿಸಿದ್ದಾರೆ.
ಬರಹಗಳನ್ನು ಗಮನಿಸುವುದಾದರೆ. ಬಾಲ್ಯದಲ್ಲಿ, ಯೌವ್ವನದಲ್ಲಿ ಮತ್ತು ಮದುವೆಯಾದ ನಂತರ ವಿವಿಧ ಬಗೆಯಲ್ಲಿ ಗಣಪತಿಯನ್ನು ಚವತಿಯಲ್ಲಿ ಕೂಡಿಸುವ ಪದ್ಧತಿಯನ್ನು ಒಂದೊಂದು ಊರಲ್ಲಿ ಒಂದೊಂದು ರೀತಿಯಲ್ಲಿ ಇರುವುದನ್ನು ವಿಶ್ಲೇಷಿಸಿದ್ದಾರೆ. ಅನುಭವ ಬೇರೆ ಆದರೂ ಎಲ್ಲವೂ ಸುಂದರ ಎನ್ನುತ್ತಾ ಗಣಪತಿ ಹಬ್ಬದ ಸಂಭ್ರಮ, ಸಂತೋಷವನ್ನು ಮೊದಲನೆಯ ಲೇಖನ ‘ಪುಡಕಿ ಗಣಪ’ದಲ್ಲಿ ವಿವರಿಸಿದ್ದಾರೆ. ‘ಭಾವನೆಗಳ ಬೇವು ಬೆಲ್ಲ’ದಲ್ಲಿ ಬೆಲ್ಲದ ಸಿಹಿ ಕೆಲವು ಕ್ಷಣಗಳು ಮಾತ್ರ. ಬೇವಿನ ಕಹಿ ಉಳಿಯುವುದು ಹಲವಾರು ನಿಮಿಷಗಳವರೆಗೆ. ಅದು ನಾಲಿಗೆ ರುಚಿಯನ್ನೇ ಕೆಡಿಸಿಬಿಡುತ್ತದೆ. ಹಾಗೆ ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಕಹಿಯಾಗಿರುವುದನ್ನು ವಿವರಿಸಿದ್ದಾರೆ. ಸಿಹಿ- ಕಹಿ ಭಾವನೆಗಳು ಜೀವನದಲ್ಲಿ ಸಾಮಾನ್ಯ. ಜೀವನದ ಸತ್ವಪೂರ್ಣವಾಗಿಸುವ ಟಾನಿಕ್‌ಗಳು. ಬೇವು- ಬೆಲ್ಲಗಳನ್ನು ಸಮಾನವಾಗಿ ಸ್ವೀಕರಿಸಿ ಒಂದೇ ರೀತಿಯಲ್ಲಿ ಸ್ಪಂದಿಸಬೇಕು ಎನ್ನುತ್ತಾರೆ.
‘ಚೌಕಾಶಿ ನನ್ನ ಜನ್ಮ ಸಿದ್ಧ ಹಕ್ಕು’ ಎಂಬಲ್ಲಿ ಚೌಕಾಶಿ ಮಾಡುವುದರಲ್ಲಿ ಒಂದು ನಮೂನೆಯ ಆನಂದವಿದೆ. ನಾವು ಹೆಚ್ಚು ಚಾಣಾಕ್ಷರು ಎಂದು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿಕೊಡಬೇಕು ಎನ್ನುವ ಲೇಖಕಿ ಚೌಕಾಸಿಯ ಹಲವು ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ. ಚಪ್ಪಲಿ, ಬೆಡ್‌ಶೀಟ್ ಕೊಳ್ಳುವಾಗ, ಹೈದರಾಬಾದ್‌ನಲ್ಲಿ ಶಾಪಿಂಗ್ ಮಾಡುವಾಗ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ‘ಕೇಶಿರಾಯೋಪಾಖ್ಯಾನ’ ಎಂಬ ಲೇಖನದಲ್ಲಿ ಕೂದಲು ಉದುರುವ ಮತ್ತು ಬೊಕ್ಕ ತಲೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ತಲೆ ಕೂದಲು ಉದುರುವುದನ್ನು ತಡೆಯಲು ಒರಿಜಿನಲ್ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು ಎಂಬ ಜಾಹೀರಾತು ಒಂದೇ ತಿಂಗಳಲ್ಲಿ ವಿಫಲವಾದದ್ದನ್ನು, ಕೇಶ ರಾಶಿ ಪಡೆಯಲು ತರಿಸಿದ ಈರುಳ್ಳಿ ಶಾಂಪೂ, ಅಲೊವೆರಾ ಕಂಡೀಶನರ್, ಇತರೆ ಎಣ್ಣೆಗಳು ಕಪಾಟನ್ನು ಚಂದವಾಗಿ ಅಲಂಕರಿಸಿದರೂ ಅದರಿಂದ ಏನೂ ಪ್ರಯೋಜನವಾಗದೆ ಸಂಕಟಪಟ್ಟಿದ್ದನ್ನು ಲಘುಹಾಸ್ಯದಲ್ಲಿ ಚಿತ್ರ್ರಿಸಿದ್ದಾರೆ.
‘ಅಡುಗೆಮನೆಯಿಂದ ಅಮೆರಿಕ’ ಎಂಬ ಬರಹದಲ್ಲಿ ತನ್ನ ಮಾಮಿ ೮೫ರ ವೃದ್ಧೆಯೊಬ್ಬಳು ಅಮೆರಿಕಕ್ಕೆ ಹೋಗಿ ಕಾಲ ಕಳೆದು ಬಂದಿದ್ದನ್ನು ವರ್ಣಿಸಿದ್ದಾರೆ. ಅಮೆರಿಕದಲ್ಲಿ ಇದ್ದಷ್ಟು ದಿನ ಹಪ್ಪಳ- ಸಂಡಿಗೆ -ಆಂಟಿನುಂಡೆ ಮಾಡಿದ್ದು, ಧಾರವಾಡ ಪದ್ಧತಿಯ ಕಚ್ಚೆ ಸೀರೆ ಉಟ್ಟು ನಯಾಗಾರ ಫಾಲ್ಸ್ ನೋಡಿ ಬಂದಿದ್ದು, ಕಟ್ಟಡದ ಮೇಲೆ ನಿಂತು ದಾರಿಹೋಕರನ್ನು ನೋಡುತ್ತಾ ನಿಂತಾಗ ಅವರು ಟಾಟಾ ಮಾಡಿದ್ದು, ತಿರುಗಿ ತಾನೂ ಟಾಟಾ ಟಾಟಾ ಮಾಡಿದ್ದು, ಊರಿಂದ ಸಬೀನಾ ಪೌಡರನ್ನು ಒಯ್ದು ಎಲೆಕ್ಟ್ರಿಕಲ್ ಒಲೆಯನ್ನು ತೊಳೆದು ಪಳಪಳ ಮಾಡಿದ್ದು... ಹೀಗೆ ವಿವಿಧ ವಿಷಯಗಳನ್ನು ನಗೆಬರಿಸುವಂತೆ ಮೂಡಿಸಿದ್ದಾರೆ. ಮಾಮಿಯವರ ಜೀವನೋತ್ಸಾಹ, ದೈಹಿಕ ಶಕ್ತಿ, ಪಾಕ ಕಲೆಯ ಪ್ರತಿಭೆಗಳನ್ನು ಪರಿಚಯ ಮಾಡಿಕೊಡುತ್ತಾ ಈ ಪ್ರವಾಸ ಹೊಸ ಸತ್ಯದರ್ಶನ ಮಾಡಿತು. ಮನುಷ್ಯನಲ್ಲಿ ಪರಿವರ್ತನಶೀಲ ಮನಸ್ಸು ಬೇಕು ಎಂಬ ಸಂದೇಶವನ್ನು ಬಿತ್ತಿದ್ದಾರೆ.
‘ಅಹಿರು (ಪ್ರೆಸೆಂಟೇಷನ್) ಏನು ಕೊಟ್ಟಿರಿ’ ಎಂಬ ಬರಹದಲ್ಲಿ ಪ್ರತಿ ಮದುವೆ- ಉಪನಯನ ಮೊದಲಾದ ಕಾರ್ಯಕ್ರಮಗಳಿಗೆ ಹೋದಾಗ ಪ್ರೆಸೆಂಟೇಷನ್ ಕೊಡುವ ಬಗ್ಗೆ ಇಲ್ಲಿ ಬರೆದಿದ್ದಾರೆ. ಉಡುಗೊರೆಯನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದನ್ನು ನಿಲ್ಲಿಸುವ ಕಾಯ್ದೆ ಬರಬೇಕು. ಆದರೆ ಉಡುಗೊರೆ ಕಾರ್ಯಕ್ರಮ ಇಲ್ಲ ಎಂದರೆ ಸಮಾರಂಭದ ಸಂಭ್ರಮವೇ ಹೋಗಿ ಬಿಡುತ್ತದೆ ಎನ್ನುವ ಲೇಖಕಿ, ಉಡುಗೊರೆಯ ನಿಜವಾದ ಅರ್ಥ ಆನಂದವನ್ನು, ಹಾರೈಕೆಗಳನ್ನು ಹಂಚಿಕೊಳ್ಳುವುದು ಎನ್ನುತ್ತಾ ಉಡುಗೊರೆ ಆಡಂಬರದ ಚಿಹ್ನೆ ಆಗಬಾರದು ಎಂದು ಸೂಚಿಸುತ್ತಾರೆ.
‘ಮನಿಗೊಂದು ಹಿತ್ತಿಲು ಬೇಕ್ರಿ’ ಎಂಬಲ್ಲಿ ಮನೆಯ ಹಿಂದಿನ ಜಾಗ ಅಂದರೆ ಹಿತ್ತಿಲು ಇದ್ದರೆ ಮನೆಯ ವಾತಾವರಣವೇ ಬದಲಾಗಿರುತ್ತದೆ. ಉತ್ತಮವಾಗಿ ಬಳಕೆಯಾಗುತ್ತದೆ. ಕೆಲವು ಗಂಡಸರು ಕದ್ದು ಸಿಗರೇಟ್ ಸೇದಲಿಕ್ಕೆ, ಕದ್ದು ಮೊಬೈಲ್‌ನಲ್ಲಿ ಮಾತನಾಡಲಿಕ್ಕೆ ಬಳಕೆಯಾಗುತ್ತದೆ. ಒಬ್ಬರೇ ದುಃಖತೋಡಿಕೊಳ್ಳುವ, ಬಟ್ಟೆ ತೊಳೆಯಲು, ಸಂಜೆ ಕುಳಿತುಕೊಳ್ಳಲು, ಮಕ್ಕಳು ಓದಲು ಅತಿ ಮುಖ್ಯ ಜಾಗ ಹಿತ್ತಿಲು ಎನ್ನುತ್ತಾ ತಾನು ಅಲ್ಲಿಯೇ ಓದಿದ್ದನ್ನು ಸ್ಮರಿಸುತ್ತ್ತಾ ನಿಕಟವಾಗುವಂತೆ ಕಟ್ಟಿಕೊಟ್ಟಿದ್ದಾರೆ.
ಮೊಬೈಲ್ ಬಂತು ಏನೆಲ್ಲ ಹೋತು’ ಎಂಬ ಲೇಖನ ತಮಾಷೆಯಾಗಿದ್ದರೂ ಸತ್ಯವನ್ನು ಬಿಂಬಿಸಿದೆ. ಸಂದೇಶವನ್ನು ಹರಡಿದೆ. ಮೊಬೈಲ್ ಇಂದು ಹೇಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ಒಳ್ಳೆಯದು ಮತ್ತು ಕೆಡುಕು ಏನು ಎನ್ನುವುದನ್ನು ಚಂದವಾಗಿ ವಿವರಿಸಿದ್ದಾರೆ. ಮೊಬೈಲ್ ಬಂದಮೇಲೆ ಜೀವನದ ಶೈಲಿ ಬದಲಾಗಿದೆ. ಭಾವನೆಗಳು ಕರಗಿ ಹೋಗುತ್ತಿವೆ. ಸ್ಪರ್ಧೆಗಳು ಹೆಚ್ಚುತ್ತಿವೆ. ಮಹತ್ವಾಕಾಂಕ್ಷೆ ಹೆಚ್ಚುತ್ತಿದೆ. ಪ್ರವಾಸ ಮರೆತುಹೋಗಿದೆ. ಕುಟುಂಬದವರು ಸೇರಿ ಕಲೆಯುವುದು ಬಿಟ್ಟು ಹೋಗಿದೆ. ಕಲಾತ್ಮಕ ಸೌಂದರ್ಯ ನೋಡುವ ಕಣ್ಣುಗಳನ್ನು ಕಳೆದುಕೊಂಡಿದ್ದೇವೆ ಎನ್ನುವ ಲೇಖಕಿ, ಚಹಾ ಮಾಡುವಾಗಲೂ ಕೈಯಲ್ಲಿ ಮೊಬೈಲ್ ಇರಲೇಬೇಕು ಎನ್ನುವಂತಹ ಕಾಲ ಬಂದಿದೆ. ಬೆಳಗ್ಗೆ ಎದ್ದು ಪೇಪರ್ ಓದುವುದನ್ನು ಮರೆತುಬಿಟ್ಟಿದ್ದೇವೆ. ಮಾನವೀಯ ಮತ್ತು ಸ್ನೇಹ ಸಂಬಂಧಗಳು ಕಳೆದು ಹೋಗುತ್ತಿವೆ. ರಕ್ತ ಸಂಬಂಧಗಳು ತೆಳುವಾಗುತ್ತಾ, ಸ್ನೇಹ ಸಂಬಂಧ ಮೆತ್ತಗಾಗುತ್ತಿದೆ. ಆದರೂ ವಿದೇಶದಲ್ಲಿ ನೆಲೆಸಿರುವ ಕುಟುಂಬದವರನ್ನು, ದೂರದೂರಿನಲ್ಲಿರುವವರನ್ನು ಸಂಪರ್ಕಿಸಲು ಅವಶ್ಯ. ದೂರ ಇದ್ದವರನ್ನು ಪಕ್ಕದಲ್ಲಿಯೇ ತಂದು ಬಿಟ್ಟಿದ್ದೇವೆ. ಇಷ್ಟೆಲ್ಲಾ ಆದರೂ ನಮ್ಮ ಅನುಕೂಲದ ಪ್ರಕಾರ ಉಪಯೋಗ ಮಾಡಿಕೊಂಡು ಸಂತೋಷಪಡುವುದು ಒಳ್ಳೆಯದೆಂಬ ಸಲಹೆ ಕೊಡುತ್ತಾರೆ ಲೇಖಕಿ.
ಉಳಿದಂತೆ, ‘ಮರೆಯಲಾಗದ ಕ್ಷಣಗಳಲಿ’ ಮಕ್ಕಳ ಮದುವೆಯ ಮರೆಯದ ಸಂಭ್ರಮವಿದೆ. ‘ಚಹಾಯಣ’ದಲ್ಲಿ ಚಹದ ಜೊತೆಗಿನ ನಂಟು ಅಪ್ಯಾಯಮಾನವಾಗಿರುವುದರ ಬಗ್ಗೆ ಇದೆ. ‘ಹೊಸತು ಕಲಿತ ಸಂಭ್ರಮ’ದಲ್ಲಿ ಕೊರೊನಾ ಕಾಲದಲ್ಲಿ ಸೃಜನಾತ್ಮಕ ಮನಸ್ಸು ಹೊರಬರಲು ಡಿಜಿಟಲ್ ಪಯಣದ ಮೂಲಕ ನಾಟಕ ಆಡಿದ್ದು, ‘ಝರಡಿ ಹಿಡಿಯುವ ಮೊರಗಳಲ್ಲಿ’ ಝರಡಿಯಂತೆ ಗಟ್ಟಿತನ ಉಳಿಸಿಕೊಳ್ಳುವ ಅವಶ್ಯಕತೆ ಸಾರಿರುವುದು, ‘ಭಾರತೀಯ: ಭೋಜನಪ್ರಿಯ:’ದಲ್ಲಿ ವಿದೇಶಕ್ಕೆ ಹೋದರೂ ನಾವು ಹುಡುಕುವುದು ಇಂಡಿಯನ್ ರೆಸ್ಟೋರೆಂಟ್‌ಗಳನ್ನು ಎನ್ನುವ ಮೂಲಕ ನಮ್ಮತನ, ಪದ್ಧತಿ ಬಿಡದಿರುವುದರ ಬಗ್ಗೆ ಮನೋಹರವಾಗಿ, ಆಪ್ತವಾಗುವಂತೆ ವಿಷಯ ಉಣಬಡಿಸಿದ್ದಾರೆ.
ಹೀಗೆ ಕಂಡುಂಡ ಅನುಭವವಗಳನ್ನೇ ಲೇಖಕಿ ವಿಷಯವನ್ನಾಗಿಸಿಕೊಂಡು, ಎಲ್ಲ್ಲೂ ಬೇಸರ ಬಾರದ ರೀತಿಯಲ್ಲಿ ಓದುಗರು ಕಿರುನಗೆ ಬೀರುವಂತೆ ಕೃತಿಯನ್ನು ನೇಯ್ದಿದ್ದಾರೆ. ನವಿಲು ಗರಿಬಿಚ್ಚಿ ನಿಂತಾಗ ಅದನ್ನು ನೋಡಿದರೆ ಎಂತಹ ಸಂಭ್ರಮ ನಮಗುಂಟಾಗುವುದೋ ಅದೇ ತರಹದ ವಿವಿಧ ವಿಷಯಗಳ ಗರಿಯನ್ನು ಲೇಖಕಿ ಇಲ್ಲಿ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಮೋಜಿನ ಪದಗಳ ಬಳಕೆ, ಕಲಾತ್ಮಕವಾದ ಭಾಷೆಯ ಚಂದ ಮತ್ತು ಸವಿಯನ್ನು ಓದುಗರು ನಿಜಕ್ಕೂ ಅನುಭವಿಸಬೇಕು.
-ದತ್ತಾತ್ರೇಯ ಹೆಗಡೆ posted on May 8
................................

Comments
Post a Comment