ಸಮಾಜದ ವ್ಯವಸ್ಥೆ ,ಮೌಢ್ಯ ಧಿಕ್ಕರಿಸುವ 
ಡ್‌ಲೈನ್ ಕತೆಗಳು’

 ‘ಡೆಡ್‌ಲೈನ್ ಕತೆಗಳು’ ಇದು ಉತ್ತಮ ಕಥಾಹಂದರವನ್ನು ಹೊಂದಿರುವ ಹೊಸತನ ಕಥೆಗಳ ಸಂಕಲನ. ಯುವ ಲೇಖಕ, ಪತ್ರಕರ್ತ ಸಂದೀಪ್ ಚಿತ್ರದುರ್ಗ ಇದರ ಕರ್ತೃ. ಅವರ ಚೊಚ್ಚಲ ಕೃತಿಯಾದ ಇದರಲ್ಲಿ ವಿವಿಧ ಕಥಾ ಸ್ಪಧೆಗಳಲ್ಲಿ ಬಹುಮಾನಿತ ಅಥವಾ ಮೆಚ್ಚುಗೆ ಪಡೆದ ೯ ಕಥೆಗಳಿವೆ. ಯಾವುದೇ ಜಾತಿ- ಮತ, ಪಂಥಗಳ ಹಂಗಿಲ್ಲದ ಸ್ವತಂತ್ರ ಕಥೆಗಳು. ಸಮಾಜದ ವ್ಯವಸ್ಥೆ ಮತ್ತು ಮೌಢ್ಯವನ್ನು ಧಿಕ್ಕರಿಸುವ ಇಲ್ಲಿನ ಘಟನೆಗಳು ನಮ್ಮ ಕಣ್ಣೆದುರೇ ನಡೆದ ಅನುಭವವಾಗುತ್ತದೆ. ಅವುಗಳನ್ನು ರಸವತ್ತಾಗಿ ವರ್ಣಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.  

ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಚುರುಕಾಗಿ ಇಲ್ಲಿ ಬಳಸಿದ್ದಾರೆ. ಹೆಚ್ಚಾಗಿ ಬಯಲುಸೀಮೆಯ ಪ್ರದೇಶಗಳು, ಅಲ್ಲಿಯ ವಾತಾವರಣ, ಊರಿನಲ್ಲಿ ಕಂಡುಂಡ ಅನುಭವಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಇದರಲ್ಲಿ ಕೆಲವು ಸತ್ಯಾಧಾರಿತವಾದರೆ, ಇನ್ನೂ ಕೆಲವು ಕಾಲ್ಪನಿಕ ಕಥೆಗಳು.ಭಾಷೆಯೂ ಅಲ್ಲಿಯದೇ ಇದೆ. ಆದರೆ ಅಲ್ಲಿನ ಬಯ್ಗುಳ ಶಬ್ದಗಳನ್ನು ಸಹ ಧಾರಾಳವಾಗಿ ಬಳಸಿದ್ದಾರೆ. ಇದು ಸಹ್ಯ ಎನಿಸುವುದಿಲ್ಲ. ಆದರೂ ಕಥೆಯೊಡನೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಪುಸ್ತಕಕ್ಕೆ ‘ಡೆಡ್‌ಲೈನ್ ಕಥೆಗಳು’ ಎಂಬ ಹೆಸರನ್ನಿಡಲು ಕಾರಣವನ್ನೂ ವಿವರಿಸಿದ್ದಾರೆ. ವಿವಿಧ ಸ್ಪರ್ಧೆಗಳಿಗೆ ಬರೆದ ಕಥೆಗಳಿವು. ನಿಗದಿತ ಸಮಯದಲ್ಲಿ, ಸೂಚಿತ ಪದಗಳ ಸಂಖ್ಯೆಯಲ್ಲಿ ಬರೆಯಬೇಕಾಗಿದ್ದರಿಂದ ಈ ಹೆಸರನ್ನಿಟ್ಟಿದ್ದಾಗಿ ಹೇಳಕೊಂಡಿದ್ದಾರೆ.      

ಮೊದಲ ಕಥೆ ‘ಗುಲ್ಕಮ್ಮ’ ಇದು ಸಂಪ್ರದಾಯದ ಹೆಸರಲ್ಲಿ  ಜೀವವಿರುವ ಮನುಷ್ಯನನ್ನು ಬೆತ್ತಲೆ ಮೆರವಣಿಗೆ ಮಾಡುವ ಅನಾಗರಿಕ ಕೆಲಸಕ್ಕೆ ಸಂಬಂಧಿಸಿದ್ದು. ಅದಕ್ಕೆ ದೇವರನ್ನು ಬಳಸಿಕೊಳ್ಳುವುದರ ಬಗ್ಗೆ ಇದೆ.  ಮಳೆ ಬೀಳದ  ಊರಿನಲ್ಲಿ ಎಂದೂ ನೋಡದ ಬರಗಾಲ ಬಂದಾಗ ಸುಡುಗಾಡು ಸಿದ್ದನೊಬ್ಬ ಹೇಳಿದ ಮಾತನ್ನು ನಂಬಿ  ಗುಲ್ಕಮ್ಮ ಎನ್ನುವ ದೇವರನ್ನು ಸಂತೃಪ್ತಡಿಸಲು ಅಮಾವಾಸ್ಯೆಯ ರಾತ್ರಿ ಕುರಿಮರಿಯನ್ನು ಬಲಿ ಕೊಡುವುದು, ಹುಡುಗರನ್ನು ಬೆತ್ತಲೆಗೊಳಿಸಿ ಊರ ತುಂಬಾ ಮೆರವಣಿಗೆ ಮಾಡುವುದು, ಮೆರವಣಿಗೆಯ  ಗುಂಪಿನಿಂದ ಒಬ್ಬ ರಾತ್ರಿಯೇ  ನಾಪತ್ತೆಯಾಗುವುದು, ಅವರಪ್ಪ ಹಳ್ಳದ ಏರಿ ಮೇಲೆ ನೇಣು ಹಾಕಿಕೊಳ್ಳುವುದರ ಬಗ್ಗೆ ಇದೆ. ಇಷ್ಟಾದರೂ ಊರಿನವರು ಮಳೆ ಹಾಗೂ ಮಳೆಗಾಗಿ ಬೆತ್ತಲೆಯಾದ ಊರು ಬಿಟ್ಟವನು ಮಳೆ ಹನಿಗಳ ಜೊತೆ ಮತ್ತೆ ಬರಬಹುದು ಎಂದು ಕಾಯುತ್ತಿರುವುದನ್ನು ಹೆಣೆದಿದ್ದಾರೆ.  

‘ ಕಥಾನಾಯಕ’ ಎಂಬ ಕತೆಯಲ್ಲಿ ಪ್ರಕಾಶಕರು ಮತ್ತು ಹಿರಿಯ ಸಾಹಿತಿಗಳು ಯುವ ಬರಹಗಾರರನ್ನು ಹೇಗೆ ನೋಯಿಸುತ್ತಾರೆ, ಅವರಿಗೆ ಹೇಗೆ ಮುಳ್ಳಾಗುತ್ತಾರೆ ಎನ್ನುವುದನ್ನು ಚಿತ್ರಿಸುತ್ತಾ, ಬರವಣಿಗೆಯ ಸ್ವಂತ ಶಕ್ತಿಯಿಂದ ಮೇಲೆ ಬರಬೇಕು ಎಂಬ ಸಂದೇಶ ಸಾರಿದ್ದಾರೆ. ಸಾಹಿತ್ಯಾನಂದ ಎಂಬ ಹಿರಿಯ ಸಾಹಿತಿ ಮತ್ತು ಪ್ರಕಾಶಕನೊಬ್ಬ ಯುವ ಬರಹಗಾರನನ್ನು ಅವಮಾನಿಸುವುದು, ಅವನ ಕನಸಿನ ಗೋಪುರ ಕುಸಿದುಬೀಳುವಂತೆ ಮಾಡುವುದು, ಪತ್ರಿಕೆಗಳು ಬರೆದವನ ಹೆಸರು ನೋಡಿ ಕಥೆ ಪ್ರಕಟಿಸುವುದನ್ನು ವಿವರಿಸಿದ್ದಾರೆ. ಕೊನೆಯಲ್ಲಿ ಸಾಹಿತ್ಯಾನಂದನ ಅಂಕಣ ಪ್ರಕಟಿಸುತ್ತಿದ್ದ  ವಾರಪತ್ರಿಕೆಯೇ ಆ ಅಂಕಣದ ಜಾಗದಲ್ಲಿ ಈ ಕಥನಾಯಕನ ಕಥೆ ಪ್ರಕಟಿಸುತ್ತದೆ. ಅಂದರೆ ಬರೆಯುವವನು ತಲೆ ಎತ್ತುವಂತೆ, ಅವನ ಕನಸು ನನಸಾಗುವಂತೆ ಪತ್ರಿಕೆ ಮಾಡುತ್ತದೆ.

‘ನೀರಿಲ್ಲದ ನದಿಯ ಊರಿಂದ ನಡೆದು ಬಂದವರು’ ಎಂಬ ಕತೆಯಲ್ಲಿ ಲೇಖಕರು  ಬರಗಾಲದಿಂದಾಗಿ ಕೂಲಿ ಕೆಲಸಕ್ಕೆಂದು ಕಾಫಿ ತೋಟಗಳಿಗೆ ಹೋದ ಅಮಾಯಕರು ಹೇಗೆ ನೋಟಿನ ಮತ್ತು ಶ್ರೀಮಂತರ ಕಾಮದಾಹಕ್ಕೆ ಬಲಿಯಾಗುತ್ತಾರೆ ಎನ್ನುವುದನ್ನು ಸೂಜಿ ಸೂರಣ್ಣ  ಎನ್ನುವವನ ಕುಟುಂಬದ ಮೂಲಕ ಕಟ್ಟಿಕೊಡುತ್ತಾರೆ. ಸೂರಣ್ಣನ ಮಗಳು ಸೂಜಿಯಕ್ಕ ಇದ್ದಕ್ಕಿದ್ದಂತೆ  ಮಾಯವಾಗುವುದು, ಎಸ್ಟೇಟ್ ಮಾಲೀಕರ ಮಗ ಮತ್ತು ಸೂಜಿಯ ಅಣ್ಣ ಸುರೇಶ್  ಮದ್ಯ ಮತ್ತು ಹಣದಾಸೆಗಾಗಿ ಕೆಲವರ ಮೂಲಕ ಅವಳನ್ನು ಅತ್ಯಾಚಾರ ಮಾಡಿಸುವುದು, ವಿಷಯ ತಿಳಿದ ಸೂರಣ್ಣ  ಬಂದು ಮಗಳ ಬಗ್ಗೆ ತಿಳಿದು ಮಗ ಸುರೇಶನಿಗೆ ಗುಂಡಿಟ್ಟು ಸಾಯಿಸುವುದು. ಇದನ್ನು ನೋಡಿ ಸೂಜಿಯೂ ಕಣ್ಮುಚ್ಚುವುದು, ಸೂರಣ್ಣ ಊರಿಗೆ ಬಂದು ನದಿಗೆ ಹಾರಿ  ಆತ್ಮಹತ್ಯೆ ಮಾಡಿಕೊಳ್ಳುವುದರ ಜೊತೆಗೆ ಕುಟುಂಬ ಸರ್ವನಾಶವಾದುದನ್ನು ಚಿತ್ರಿಸಿದ್ದಾರೆ.

‘ಕಲರ್ ಕಲರ್ ಬಲೂನ್’ ಎಂಬ ಕತೆಯನ್ನು ಸೊಂಚ ಎನ್ನುವ ಬಾಲಕನ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಸದ ತೊಟ್ಟಿಯಲ್ಲಿ ಸಿಕ್ಕ ಪುಟ್ಟ  ಮಗು ಸೊಂಚ ಕುಲಗೋತ್ರ ಇಲ್ಲದೆ ಬೆಳೆದು ಜಾತ್ರೆ, ಸಂತೆಯಲ್ಲಿ ಬಲೂನು ಮಾರುತ್ತಾ ಬಾಲ್ಯ ಕಳೆಯುವುದು, ಶಾಲೆಗೆ ಹೋಗಬೇಕೆಂಬ ಕನಸಿದ್ದರೂ ಈ ಮುಗ್ಧನಿಗೆ ಅದು ಈಡೇರದಂತೆ ಮಲತಾಯಿ ಮಾಡುವುದು, ಬಲೂನು ಅಲ್ಲದಿದ್ದರೆ ಭಿಕ್ಷೆ ಬೇಡಿ ಜೀವನ ಸಾಗಿಸುವಂತೆ ಮಾಡುವುದು, ಅಮಾಯಕ ಸೊಂಚ  ಸಿಕ್ಕವರ ಹತ್ತಿರ ದೇವರ ಹತ್ತಿರ ಹೇಗೆ ಹೋಗುವುದು, ನಮ್ಮಪ್ಪ ದೇವರ ಹತ್ತಿರ ಇದ್ದಾನೆ, ಅವನು ನನ್ನನ್ನು ಶಾಲೆಗೆ ಸೇರಿಸುತ್ತಾನೆ ಎನ್ನುವುದು ಹೃದಯವನ್ನು ತಟ್ಟುತ್ತದೆ.   ಒಂದು ಕಡೆ ಜಾತ್ರೆಯ ಸಂಭ್ರಮ ತೇಲುತ್ತಿರುವುದು, ಇನ್ನೊಂದೆಡೆ, ಜನರನ್ನು, ಅವರ ಸಡಗರವನ್ನು  ಭಿಕ್ಷುಕರು, ಬಲೂನು ಮಾರುವವರು ನೋಡುತ್ತಾ ಕುಳಿತುಕೊಳ್ಳುವುದಷ್ಟೇ ಸಮಾಜದ ವ್ಯವಸ್ಥೆಯಾಗಿದೆ ಎಂದು ವರ್ಣಿಸುತ್ತಾರೆ.

‘ದ್ಯಾಮಜ್ಜಿ ಪುರಾಣ’ ದಲ್ಲಿ ತಮ್ಮ ರಾಜಕೀಯದ ಆಸೆಗಾಗಿ ಮುಗ್ಧ ಬಡಜನರನ್ನು ಆಮಿಷಕ್ಕೆ ಒಡ್ಡಿ ಮತಗಿಟ್ಟಿಸಿ ಗೆದ್ದ ನಂತರ ಅದನ್ನು ಈಡೇರಿಸದೆ ಅವರ ಬಗ್ಗೆ ಕೆಟ್ಟ ಮಾತನಾಡುವುದು ಹಾಗೂ ಅವರ ಬೇಡಿಕೆಯನ್ನು ಈಡೇರಿಸುವಂತೆ ಕೇಳಲು ಹೋದಾಗ ನೋಟನ್ನು ಕೊಟ್ಟು ಸಾಗಹಾಕುವುದು, ಮತದಾರರ ಆಕ್ರೋಶಕ್ಕೆ ಜನಪ್ರತಿನಿಧಿ ತುತ್ತಾಗುವುದು, ಜೊತೆಗೆ ಇಂತಹ ಬಡವರನ್ನು ಊರಿನ ಗೌಡರು ಹೇಗೆ ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಟ್ಟಿಕೊಟ್ಟಿದ್ದಾರೆ.    

‘ಸ್ತ್ರೀ ಕಹಾನಿ’ ಯಲ್ಲಿ  ಹೆಣ್ಣಾಗಿ ಹುಟ್ಟುವುದು ಮತ್ತು ಬಡತನದಲ್ಲಿ ಬೆಳೆಯುವುದು ಈ ಎರಡನ್ನೂ ಶಾಪವಾಗಿ ಪಡೆದ ಮೂವರು ಗೆಳತಿಯರು ಇದಕ್ಕೇ ಬಲಿಯಾದುದನ್ನು ಮಾಲಿನಿ, ಲಚ್ಚಿ ಮತ್ತು ಕಮಲಿ ಎಂಬ ಮೂವರು ಗೆಳತಿಯರ ಮೂಲಕ ವಿವರಿಸಿದ್ದಾರೆ. ಇದರಲ್ಲಿ ಲಚ್ಚಿ ಜೋಗತಿಯಾಗಿ, ಮಾಲಿನಿ ಗಂಡನ ಚಟ, ದುರ್ನಡತೆಗೆ ತುತ್ತಾಗಿ ಜೀವಬಿಡುತ್ತಾಳೆ. ಕಮಲಿ ಕೆಲಸ ನಂಬಿ ಬೆಂಗಳೂರಿಗೆ ಹೋದಾಗ ಅವಳನ್ನು ವೇಶ್ಯಾವಾಟಿಕೆಗೆ ನೂಕುವುದು, ಕೆಲವು ದಿನಗಳ ನಂತರ ಅಲ್ಲಿಗೆ ಬಂದ ಹೆಂಗಸೊಬ್ಬಳು ಕಮಲಿಯ ಕಥೆಗಳನ್ನು ಕೇಳಿ  ಅವಳನ್ನು ಹೊರತಂದು ಬದುಕಲು ದಾರಿಮಾಡಿಕೊಡುವುದರ ಕುರಿತಾಗಿದೆ. ಕಮಲಿ ತನ್ನ ದೇವರ ಕೋಣೆಯಲ್ಲಿ ರಕ್ಷಿಸಿದ ಹೆಂಗಸಿನ ಫೋಟೋ ಇಟ್ಟು ಪೂಜೆ ಮಾಡುತ್ತಾಳೆ. ಆ ಹೆಂಗಸು ವರದಿಗಾರ್ತಿಯ ಸಂಪಾದಕಿಯಾಗಿರುತ್ತಾಳೆ.

‘ಉದ್ಭವ ಸೇತುವೆ’ ಕಥೆಯಲ್ಲಿ ತುಂಗಭದ್ರೆಯ ಬರಿದಾದ ಮಡಿಲಲ್ಲಿ  ಕಂಡಿದ್ದ ಸೇತುವೆ ಜನರ ಬಾಯಲ್ಲಿ ಉದ್ಭವ ಸೇತುವೆಯಾಗಿ ನಂತರ ಬಿದ್ದ ಭಾರಿ ಮಳೆಯಿಂದ ಮತ್ತೆ ಮುಳುಗಿ ಹೋದುದರ ಬಗ್ಗೆ ಇದೆ. ಇದರ ಮಧ್ಯೆ ಅಲ್ಲಿ ಸೇತುವೆಯ ಬಗ್ಗೆ ಅಂತೆಕಂತೆಗಳ ಕಥೆ, ಪ್ರವಾಸಿಗರು ಅಂಸಖ್ಯಾತವಾಗಿ ಬರುವಂತೆ ಮಾಡಿ ಅವರಿಂದ ಲಾs ಪಡೆಯುವುದು, ಇದಕ್ಕೆ ಟ್ರಸ್ಟ್ ರಚಿಸಿ ಹಣ ಲಪಟಾಯಿಸುವ ಸ್ಥಳೀಯರು, ಸರಕಾರಿ ಅಧಿಕಾರಿಗಳು ಸೇತುವೆ ವಿಷಯ ಸಂಶೋಧನೆಗೆ ಬಂದಾಗ ಅವರನ್ನು ಬೆದರಿಸಿ ಓಡಿಸುವುದರ ಕುರಿತಾಗಿದೆ.

‘ನಿಗೂಢ ಜಾಲ’ ದಲ್ಲಿ  ಊರಿನ ಗರ್ಭದಲ್ಲಿದ್ದ ಶಿಲಾಯುಗದ ಕಾಲದ ಸಮಾಧಿಯ ಬಗ್ಗೆ ಅಧ್ಯಯನ ಮಾಡಲು ಬಂದ ಅಧಿಕಾರಿ ಎನ್ನುವ ಕರ್ಣ ಅಂತರರಾಷ್ಟ್ರೀಯ ಸ್ಮಗ್ಲರ್ ಆಗಿರುತ್ತಾನೆ. ಊರಿನವರು ಇದರ ಅರಿವಿರದೆ ಈತನ ಮಾತನ್ನು ನಂಬಿ ಸಹಾಯ ಮಾಡುತ್ತಾರೆ. ಆತ ಸಮಾಧಿ ಬಳಿಯ ಗುಹೆ ಯಲ್ಲಿ ಸ್ಥಳೀಯ ಕಳ್ಳರ ಜಾಲ ಸಂಗ್ರಹಿಸಿಟ್ಟಿದ್ದ ಲೋಡ್‌ಗಟ್ಟಲೆ ಜಿಂಕೆ ಚರ್ಮ ಸಾಗಿಸಲು ಬಂದಿರುತ್ತಾನೆ. ಆ ಜಾಲದವನು ಇದನ್ನು ಕಂಡು ಕರ್ಣನನ್ನು ಸಾಯಿಸುತ್ತಾನೆ. ನಂತರ ಈತ  ಇಲಾಖೆಯವನಲ್ಲ. ಮೋಸ್ಟ್ ವಾಂಟೆಡ್ ಆಂಟಿಕ್ ಕಳ್ಳ ಎನ್ನುತ್ತಾರೆ ಪ್ರಾಚ್ಯವಸ್ತು ಇಲಾಖೆಯವರು. ಜನರು ಇದ್ಯಾವುದೂ ಅರ್ಥವಾಗದೆ ಜಾಲದವರು ತಮ್ಮನ್ನು ನಂಬಿಸಿದಂತೆ ಗುಹೆಯಲ್ಲಿ ಇರುವ ಏಳು ಹೆಡೆಯ ಸರ್ಪ ಕಚ್ಚಿ ಈತ ಸತ್ತ ಎಂದೇ ನಂಬಿದ್ದರು.

  ‘ಮಳೆಯೊಂದು ನಿಂತ ಮೇಲೆ’ ಎಂಬ ಕೊನೆಯ ಕಥೆಯಲ್ಲಿ ಮಳೆ ಬರುವಾಗ ಕೊಡೆಯ ನೇರವನ್ನು ಪಡೆದಿದ್ದ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯ  ಗೆಳೆತನವಾಗಿ ಆಕೆಯ ನಂಬರ್ ಅನ್ನು ಪಡೆದ ಕಥಾನಾಯಕ  ಆಕೆಯನ್ನೂ, ಅವಳ ನಂಬರನ್ನೂ ಕಳೆದುಕೊಂಡ ಕುರಿತಾಗಿದೆ. ಮಳೆಯ ಕಾರಣ ಕಾಲೇಜಿಗೆ ಒಂದು ವಾರ ರಜೆ ಘೋಷಣೆಯಾಗುತ್ತದೆ. ಅವಳ ನಂಬರ್ ಬರೆದುಕೊಂಡಿದ್ದ ಪುಸ್ತಕ ಲೈಬ್ರರಿಯದ್ದಾದ್ದರಿಂದ ಅದನ್ನು ವಾಪಸ್ ಕೊಟ್ಟು ಊರಿಗೆ ಮರಳುತ್ತಾನೆ. ಮತ್ತೆ ಕಾಲೇಜಿಗೆ ವಾರದ ನಂತರ ಬಂದಾಗ ನೋಟೀಸ್ ಬೋರ್ಡ್ ಬಳಿ ‘ಧಾರಾಕಾರ ಮಳೆಯಿಂದ ಹುಡುಗಿ ಗುಡ್ಡ ಕುಸಿದು ತೀರಿ ಹೋದಳು’ ಎಂಬ ವಿಷಯ ಗೊತ್ತಾಗುತ್ತದೆ. ಅವಳು ನೆನಪು ಮಾತ್ರವಾದಳು. ಮಳೆ ಬಂದಂತೆ ಬಂದು ಹೋದಳು ಎಂದು ಆತ ದುಃಖಿಸುತ್ತಾನೆ.

ಹೀಗೆ ವಿವಿಧ ವಿಷಯಗಳಿಂದ ನಮ್ಮನ್ನು ಓದಿಸಿಕೊಂಡು ಹೋಗುವ ಕಥಾ ಸಂಕಲನ ಇದಾಗಿದೆ. ಉತ್ತಮ ಕಥನ ಶಕ್ತಿ ಲೇಖಕನಲ್ಲಿರುವುದು, ಸಿದ್ಧ ಸೂತ್ರಕ್ಕೆ ಜೋತುಬೀಳದೆ, ತನ್ನದೇ ಆದ ಭಾಷೆ, ವಿವರಣೆ ಮೂಲಕ ಗಮನ ಸೆಳೆಯುವ ಕಥೆ ಬರೆದಿರುವುದು ನಮ್ಮರಿವಿಗೆ ಬರುತ್ತದೆ.


-ದತ್ತಾತ್ರೇಯ ಹೆಗಡೆ potes on May 8,2025

Comments