ಅನುಭವದ ಬುತ್ತಿಯ
 ‘ಹಲೋ ಟೀಚರ್’*


‘ಹಲೋ ಟೀಚರ್’ ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕ ವರ್ಗದಲ್ಲಿ ಚೈತನ್ಯದ ಚಿಲುಮೆಯನ್ನು ತುಂಬುವ ಕೃತಿಯಾಗಿದೆ. ಇದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ  ಸರಕಾರಿ ಶಾಲೆಯೊಂದರ  ಶಿಕ್ಷಕಿ ಅನುಸೂಯ ಯತೀಶ್ ಅವರ ಕೃತಿ. ಇದರಲ್ಲಿ ೨೦ ಬರಹಗಳಿವೆ. ಸರಳ ನಿರೂಪಣೆಯೊಂದಿಗೆ ಮಕ್ಕಳ ಜೊತೆಗಿನ ಒಡನಾಟವನ್ನು ವಿವಿಧ ಘಟನೆಗಳ ಮೂಲಕ ಇಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಸೃಜನಶೀಲ ಶಿಕ್ಷಕಿ ತಮ್ಮ ಅನುಭವಗಳನ್ನು ಇಷ್ಟೊಂದು ಚೆನ್ನಾಗಿ, ಬಹುಕಾಲ ಭಾವಕೋಶವನ್ನು ಆವರಿಸಿಕೊಳ್ಳುವಷ್ಟು ಶಕ್ತಿಶಾಲಿಯಾಗಿ, ಅಷ್ಟೇ ಕಾಳಜಿಯುತವಾಗಿ ಬರೆದಿದ್ದಾರೆ.

 ಇಂತಹ ಲೋಕೋಪಯೋಗಿ ಬರಹಗಳು ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಈ ಕೃತಿಯಲ್ಲಿ ಶಿಕ್ಷಕಿ ಅಂತಃಕರಣ, ಸಹನೆ, ತಾಳ್ಮೆ, ಆಲೋಚನಾಲಹರಿ, ಮಕ್ಕಳ ಮನೋಲೋಕ, ಸತ್ಯ- ಮಿಥ್ಯಗಳ ಪರಾಮರ್ಶೆ, ತಪ್ಪುಗಳನ್ನು ತಾನು ತಿದ್ದಿ ಅವರಿಗೆ ಶೈಕ್ಷಣಿಕ ಮಾರ್ಗವನ್ನು ಸುಗಮಗೊಳಿಸಿದ್ದನ್ನು ಸೂಕ್ಷ್ಮಮತಿಯಾಗಿ ವಿವರಿಸಿದ್ದಾರೆ. ಈ ಕೃತಿ ಶಿಕ್ಷಕಿಯ ಭಾವಲೋಕದ ಅನಾವರಣ ಮಾಡುವುದರ ಜೊತೆಗೆ ಸ್ವಂತಿಕೆಯನ್ನು ಪ್ರದರ್ಶನ ಮಾಡಿದೆ.

 ತಮ್ಮ ಸ್ವಂತ ಅನುಭವವನ್ನು ಶಿಕ್ಷಕಿ ಇಲ್ಲಿ ಕಟ್ಟಿಕೊಟ್ಟಿರುವುದರಿಂದ ಇಲ್ಲಿನ ಎಲ್ಲಾ ಲೇಖನಗಳು ಹೊಳಪು ಪಡೆದು ಹೊರಬಂದಿವೆ. ಶಾಲಾ ಪರಿಸರ, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಪೋಷಕರು, ಕುಟುಂಬ, ಶಿಕ್ಷಣ ಇಲಾಖೆ, ಸಾಮಾಜಿಕ ಪರಿಸರ, ವ್ಯವಸ್ಥೆ ಹೀಗೆ ಎಲ್ಲವನ್ನೂ ಒಳಗೊಳಿಸಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಲೇಖನಗಳನ್ನು ಓದಿದರೆ ಎಂತಹ ವಿದ್ಯಾರ್ಥಿಯ  ಮನವೂ ಪರಿವರ್ತನೆಯಾಗುತ್ತದೆ. ಲೇಖಕಿ  ಲೀಲಾಜಾಲವಾಗಿ ಕಣ್ಣಿಗೆ ಕಟ್ಟುವಂತೆ ಪ್ರತಿಯೊಂದು ಬರಹವನ್ನು ಬರೆದಿದ್ದಾರೆ. ಆದ್ದರಿಂದ ಈ ಕೃತಿಯನ್ನು ಅನುಭವದ ಬುತ್ತಿ ಎಂದು ಕರೆಯಬಹುದಾಗಿದೆ.

 ಮಕ್ಕಳ ಮನೋವಿಶ್ಲೇಷಣಾತ್ಮಕ ನೋಟಗಳು ಈ ಕೃತಿಯಲ್ಲಿ ಜೀವದ್ರವ್ಯವಾಗಿ ತುಂಬಿ ಹರಿದಿವೆ. ಕಲಿಸಿ, ಕಲಿಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರಿಗೆ ಇರಬೇಕಾದ ಅನೇಕ ಸೂಕ್ಷ್ಮತೆಗಳನ್ನು ಪ್ರಬುದ್ಧವಾಗಿ ಇಲ್ಲಿ ಮಂಡಿಸಿದ್ದಾರೆ. ಶಿಕ್ಷಕ ವೃತ್ತಿ ಪವಿತ್ರ ಮತ್ತು ಮೌಲ್ಯಯುತವಾದದ್ದು. ಇದನ್ನು ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಮತ್ತು ಸಮಾಜಮುಖಿಯಾಗಿ ಮಾಡಬೇಕು ಎನ್ನುವ ಲೇಖಕಿ, ಮಕ್ಕಳಲ್ಲಿರುವ ಭಯ, ಆತಂಕ, ಹಿಂಜರಿಕೆ, ಕೀಳರಿಮೆ, ಹೋಗಲಾಡಿಸಿ ಸಮಾನ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು, ಜ್ಞಾನವನ್ನು ಹೊರಸೂಸಲು ಅವಕಾಶ ಮಾಡಿಕೊಡುವಲ್ಲಿ ಶ್ರಮಿಸಿರುವುದನ್ನು ಕೃತಿಯಲ್ಲಿ ಕಾಣಬಹುದು.  ಇದರಿಂದ ನಿಜಕ್ಕೂ ಉತ್ತಮ ಕಲಿಕೆ ಮತ್ತು ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಕೊಡುತ್ತಾರೆ.

 ಮೊದಲ ಅಧ್ಯಾಯ ‘ಶಿಕ್ಷಕ ವೃತ್ತಿ ಕಲಿಸಿದ ಮೊದಲ ಪಾಠ’ ಇದರಲ್ಲಿ ನಾಗವೇಣಿ ಎಂಬ ಬಾಲಕಿ ಅತ್ಯುತ್ಸಾಹದಲ್ಲಿ ಒಂದು ಲಕ್ಷವನ್ನು  ಅಂಕೆಯ ಮೂಲಕ ನ ಬರೆಯಲು ಹೋಗಿ ಕರಿಬೋರ್ಡಿನ ತುಂಬಾ ಸೊನ್ನೆ ಸುತ್ತುತ್ತಾಳೆ. ಇದರಿಂದ ಶಿಕ್ಷಕಿ ಕೋಪಗೊಳ್ಳ್ಳುತ್ತಾರೆ. ಆದರೆ ತಕ್ಷಣ ಮಗುವನ್ನು ತಬ್ಬಿಕೊಂಡು ಇದರಲ್ಲಿ ನಿನ್ನದೇನು ತಪ್ಪಿಲ್ಲ ಎಂದಾಗ ಮಗು, ನೀವು ಸಾರಿ ಕೇಳಬೇಡಿ ಮಿಸ್ ಎನ್ನುತ್ತಾಳೆ. ಇದು ಓದುಗರ ಕಂಗಳನ್ನು ತುಂಬಿಸುತ್ತದೆ ಆಗ ಶಿಕ್ಷಕಿ ಶಿಕ್ಷಕರ ಜವಾಬ್ದಾರಿಯನ್ನು ವಿವರಿಸುತಾ, ಪಾಠ ಮಾಡಲು ಹೋಗಿ ಹೇಗೆ ತಾನು ಪಾಠ ಕಲಿತೆ ಎನ್ನುವುದನ್ನು ವಿವರಿಸಿದ್ದಾರೆ. ಎರಡನೆಯ ಅಧ್ಯಾಯ ‘ಪ್ರೀತಿಗೆ ಕರಗಿ ಹೋಗುವ ಮಂಜಿನಂತ ಮಂಜ’ ಇದರಲ್ಲಿ ಶಿಕ್ಷಕರು ಮಕ್ಕಳಿಗೆ ಮಾನವೀಯ ಮೌಲ್ಯವನ್ನು ಹೇಗೆ ಕಲಿಸಬೇಕು ಎನ್ನುವುದನ್ನು  ತಿಳಿಸುತ್ತಾರೆ. ಕ್ಲಾಸಿನಲ್ಲಿದ್ದ  ಮಂಜ ವಿದ್ಯಾರ್ಥಿಗಳ ಬಾಯಲ್ಲಿ ‘ತಿಕ್ಕಲು ಮಂಜ’ನಾಗಿದ್ದ. ಬುದ್ಧಿಮಾಂದ್ಯನಾದ  ಆತನನ್ನು ಶಿಕ್ಷಕಿ ವಿಶೇಷವಾಗಿ ಹಚ್ಚಿಕೊಂಡಿರುತ್ತಾರೆ. ಮಕ್ಕಳ ಪಾಲಿಗೆ ಈತ ವ್ಯಂಗ್ಯದ ವ್ಯಕ್ತಿ ಆಗಿರುತ್ತಾನೆ. ಜೊತೆಗೆ ಆತನೂ ತನ್ನನ್ನು ವ್ಯಂಗ್ಯವಾಗಿಯೇ ಕಾಣುತ್ತಾನೆ.  ಆದರೆ ಶಿಕ್ಷಕಿ ಈತನ ಮನೆಯ ಪರಿಸ್ಥಿತಿ ನೆನೆದು ತುಂಬಾ  ನೊಂದುಕೊಳ್ಳುತ್ತಾರೆ. ಶಾಲೆಯಲ್ಲಿ ಸದಾ ಶಿಕ್ಷಕಿಯ ಸುತ್ತವೇ ಸುತ್ತುತ್ತಾನೆ. ಈತ ತನಗೆ ಆರಾಮ ಇಲ್ಲದಿದ್ದಾಗ ಶಿಕ್ಷಕಿಯೂ ತನ್ನೊಟ್ಟಿಗೆ ಆಸ್ಪತ್ರೆಗೆ ಬರುವಂತೆ ಮಾಡುತ್ತಾನೆ. ಕೊರೊನಾ ಕಾಲದಲ್ಲಿ ಆತ ತೀರಿ ಹೋಗಿದ್ದನ್ನು ಹೇಳುತ್ತಾ ಭಾವುಕರಾಗುತ್ತಾರೆ. ಈ ಕಥೆ ಮನಸ್ಸನ್ನು ಹಿಂಡಿಬಿಡುತ್ತದೆ. ಜೊತೆಗೆ ಇಲ್ಲಿ ಅಂತಃಕರಣ ಕಟ್ಟಿಕೊಡುವ ಅನುಭೂತಿ ಸಹ ವಿಶಿಷ್ಟವಾದುದು. ಆತ ನಮ್ಮೊಳಗೆ ಇದ್ದಾನೆ ಎನ್ನುವ ಅವರ ಕಣ್ಣಾಲಿಗಳು ಮಂಜಾಗಿ ಅಭಿಮಾನ ಹುಟ್ಟುತ್ತದೆ ಈ ಮೂಲಕ ಮಂಜನ  ಜೀವನ ಪ್ರತಿಬಿಂಬಿಸುತ್ತಾರೆ. ಕೃತಿಯಲ್ಲಿ ಅತ್ಯಂತ ಹೆಚ್ಚು ಇಷ್ಟವಾಗುವ ಬರಹ ಇದು.

‘ಅಡ್ಡ ಹೆಸರಿನ ಅವಾಂತರಗಳು’ ಎಂಬ ಬರಹದಲ್ಲಿ ಶಾಲಾ ವಿದ್ಯಾರ್ಥಿಗಳ ಮನಪರಿವರ್ತನೆ ಪ್ರಸಂಗವನ್ನು ತುಂಬಾ ಚೆನ್ನಾಗಿ ವಿವರಿಸುತ್ತಾರೆ. ಶಿಕ್ಷಕರಿಗೆ ಮತ್ತು  ವಿದ್ಯಾರ್ಥಿಗಳಿಗೆ ಅಡ್ಡ ಹೆಸರು ಮೂಲಕ ಕೆಲವು ಮಕ್ಕಳು ಕರೆಯುತ್ತಿದ್ದನ್ನು ಗಮನಿಸಿದ ಶಿಕ್ಷಕಿ ಆತಂಕಗೊಂಡು ಹೆಡ್‌ಮಾಸ್ಟರ್‌ವರೆಗೆ ವಿಷಯ ತಿಳಿಸಿದಾಗ, ಅವರು ಮಾಡಿದ ಒಂದು ಉಪಾಯ ‘ನಾಮಕರಣ ಕಾರ್ಯಕ್ರಮ’ ಮೂಲಕ ವಿದ್ಯಾರ್ಥಿಗಳ ಮನಪರಿವರ್ತನೆಯನ್ನು ಸೊಗಸಾಗಿ  ಕಟ್ಟಿಕೊಟ್ಟಿದ್ದಾರೆ. ‘ಪ್ರವಾಸವೆಂಬ ವಿಸ್ಮಯ ಲೋಕ’ದಲ್ಲಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದಾಗ ತಾನು ಎದುರಿಸಿದ ಹಲವಾರು ಸವಾಲುಗಳನ್ನು ವಿವರಿಸಿದ್ದಾರೆ ವಾಂತಿ ಮಾಡಿದ ಕವರನ್ನು ಪಕ್ಕದಲ್ಲಿ ಹೋಗುತ್ತಿದ್ದ ಕಾರ್ ಮೇಲೆ ಎಸೆದು ಅವರಿಂದ ಹೇಳಿಸಿಕೊಂಡಿದ್ದು, ಪ್ರವಾಸಕ್ಕೆ ಬಂದ ಬೇರೆ ಶಾಲೆಯ ಮಕ್ಕಳು ಈ ಶಿಕ್ಷಕಿ ಹೆಸರಲ್ಲಿ ಟೋಪಿ ಖರೀದಿ ಮಾಡಿ ಓಡಿಹೋಗಿದ್ದು, ಕೆಆರ್‌ಎಸ್‌ನಲ್ಲಿ  ವಿದ್ಯಾರ್ಥಿಗಳು ಮಾಡಿದ ತಪ್ಪಿಗಾಗಿ ತಾನು ಸೆಕ್ಯೂರಿಟಿ ಗಾರ್ಡ್‌ನಿಂದ ಬೈಸಿಕೊಂಡಿದ್ದು, ಈ ಅನುಭವಗಳೆಲ್ಲ ತನಗೆ ದೊಡ್ಡ ಬಂಡವಾಳ ಎನ್ನುತ್ತಾರೆ. ತಾಳ್ಮೆ ಕಳೆದುಕೊಳ್ಳದೆ ವರ್ತಿಸಿದರೆ ಏನೆಲ್ಲವನ್ನೂ ಸಾಧಿಸಬಹುದು ಎನ್ನುವುದನ್ನು ಸುಂದರವಾಗಿ ಹೇಳುತ್ತಾರೆ.

 ‘ಲಿಂಗ ತಾರತಮ್ಯ ತೊಡೆಯೋಣ’ ಎಂಬ ಬರದಲ್ಲಿ ಸಮಾನತೆಯ ಮಹತ್ವವನ್ನು ಶಿಕ್ಷಕಿ ವಿವರಿಸಿದ್ದಾರೆ. ಮಹಿಳಾ ದಿನಾಚರಣೆಯ ಮೂಲಕ ಪೋಷಕರಲ್ಲಿದ್ದ ಗಂಡು ಹೆಣ್ಣಿನ ಬಗೆಗಿನ ಲಿಂಗತಾರಮ್ಯವನ್ನು ಅರ್ಥ ಮಾಡಿಸಿದ್ದನ್ನು ಮತ್ತು ಊರಲ್ಲಿ ಧನಾತ್ಮಕ ಚಿಂತನೆ ಮೂಡಿಸಿದ್ದನ್ನು ವಿವರಿಸುತ್ತಾರೆ. ಅತಿಯಾದ ಮುದ್ದು ಜ್ಞಾನಕ್ಕೆ ಕೊಡುವುದು ಗುದ್ದು’ ಎಂಬಲ್ಲಿ ರಾಜು ಎಂಬ ವಿಕಲ ಬಾಲಕನನ್ನು ಪಾಲಕರು ಅತಿ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸಿ ಆತನ ಬದುಕಿನ ಮೇಲೆ ಅದು ಹೇಗೆ ದುಷ್ಪರಿಣಾಮ ತುಂಬಾ ಚೆನ್ನಾಗಿ ವಿವರಿಸಿದ್ದಾರೆ.  

ಈ ಕೃತಿಯಲ್ಲಿ ಇನ್ನೊಂದು ಗಮನಸೆಳೆಯುವ ಬರಹವೆಂದರೆ ‘ಶಹಬಾಸ್‌ಗಿರಿ ಎಂಬ ಕಲಿಕಾ ಅಸ್ತ್ರ’.  ಇದರಲ್ಲಿ ಹೊಗಳಿಕೆ, ಶಹಭಾಸ್‌ಗಿರಿ ಮತ್ತು ಪ್ರೋತ್ಸಾಹ ಎಂಬ ಮಾಯಾದಂಡದಿಂದ ಅತಿ ದಡ್ಡ ಹುಡುಗರನ್ನೂ ಸಹ ಹೇಗೆ ಜಾಣರನ್ನಾಗಿ ಮಾಡಬಹುದು, ಕಲಿಕೆಗೆ ಇದೊಂದು ಆಸ್ತಿ ಇದ್ದಂತೆ ಎನ್ನುವುದನ್ನು ಉದಾಹರಣೆಗಳ ಮೂಲಕ ಬಿಂಬಿಸಿದ್ದಾರೆ. ಇನ್ನೊಂದು ಕುತೂಹಲದ ಲೇಖನವೆಂದರೆ ‘ಸಾಕುಪ್ರಾಣಿಗಳು ಶಾಲೆಗೆ ಬರುತ್ತವೆ’ ಎನ್ನುವುದು. ಹಳ್ಳಿಯ ಶಾಲೆಯಾಗಿದ್ದರಿಂದ ಇಲ್ಲಿ ಮಕ್ಕಳು ಮನೆಯಲ್ಲಿನ ಸಾಕುಪ್ರಾಣಿಗಳನ್ನು ಶಾಲೆಗೆ ತಂದು ಇಟ್ಟುಕೊಳ್ಳುತ್ತಿದ್ದರ ಬಗ್ಗೆ ವಿವರಿಸಿದ್ದಾರೆ ಮನೆಯಲ್ಲಿ ಇವುಗಳ ರಕ್ಷಣೆಗೆ ಯಾರೂ ಇಲ್ಲದ ಕಾರಣ ಕೋಳಿ ಮರಿಗಳನ್ನು ಬುಟ್ಟಿ ಸಹಿತ ತಂದು ಶಾಲೆಯ ವರಾಂಡದಲ್ಲಿ ವಿದ್ಯಾರ್ಥಿ ಒಬ್ಬ ಮುಚ್ಚಿಟ್ಟಿದ್ದನು. ಆಗ ಶಿಕ್ಷಕಿ ಕೋಳಿಗಾಗಿ ಶಾಲೆಗೆ ರಜೆ ಹಾಕದೆ ಶಿಕ್ಷಣದ ಮೇಲೆ ಆಸಕ್ತಿ ವಹಿಸಿ  ಶಾಲೆಗೆ ಬಂದಿದ್ದಾನೆ ಎಂದು ಅಭಿಮಾನದ ಮಾತುಗಳನ್ನು ಆಡಿದ್ದರಿಂದ ಮಾರನೇ ದಿನ ಇನ್ನಷ್ಟು ಮಕ್ಕಳು ಬೆಕ್ಕು- ನಾಯಿಮರಿಗಳನ್ನು ಕರೆದುಕೊಂಡು ಬಂದಿದ್ದರು. ಆಗ ಸಂದಿಗ್ಧ  ಮತ್ತು ಸವಾಲುಗಳ ಮಧ್ಯೆ ಸಿಲುಕಿದ ಶಿಕ್ಷಕಿ ಉದಾರತೆಯಿಂದ ಅವರನ್ನು ಕ್ಷಮಿಸುತ್ತಾರೆ. ಕೆಲವು  ಪರಿಸ್ಥಿತಿಗಳು ಶಿಕ್ಷಕರನ್ನು ಹೇಗೆ ಕಾಡುತ್ತವೆ ಎನ್ನುವುದನ್ನು ಇಲ್ಲಿ ಹೇಳುತ್ತಾರೆ.

   ಇಲ್ಲಿನ ಲೇಖನಗಳೆಲ್ಲ ಆಪ್ತವಾಗಿವೆ ಮತ್ತು ವಿವಿಧ ಸಂಗತಿಗಳನ್ನು ಕಟ್ಟಿಕೊಡುತ್ತವೆ. ಈ ಕೃತಿ ಶೈಕ್ಷಣಿಕ ಕ್ಷೇತ್ರದ ಒಳಹೊರ ನೋಟವನ್ನು ಅನಾವರಣಗೊಳಿಸುವುದರ ಜೊತೆಗೆ, ಶಾಲೆ ಎನ್ನುವುದು ಅಪರಿಮಿತ ಅನುಭವಗಳ ಆಗರ. ಇದನ್ನು ತಿಳಿದುಕೊಳ್ಳಲು ನಮ್ಮ ಒಳ ಹೊರಗನ್ನು ಶಿಕ್ಷಕರಷ್ಟೇ ಪಾಲಕರೂ ಕೂಡ  ತಿಳಿದುಕೊಳ್ಳಬೇಕು. ಆಗ ಮಾತ್ರ ಅದೆಷ್ಟೋ ಬದಲಾವಣೆಗಳಿಗೆ ಮುನ್ನುಡಿ ಬರೆಯಲು ಸಾಧ್ಯ ಎಂದು ಹೇಳುತ್ತಾರೆ.

 ಒಟ್ಟಿನಲಿ, ಇದೊಂದು ಅಮೂಲ್ಯ ಕೃತಿ. ಶಿಕ್ಷಕಿಯಾದವಳು ಮಕ್ಕಳ ಜೊತೆಗಿನ ಒಡನಾಟವನ್ನು ಎಷ್ಟೊಂದು ಪ್ರೀತಿ -ಮಮತೆಯಿಂದ ಹಂಚಿಕೊಳ್ಳುತ್ತಿದ್ದರು, ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ತಾನು ಶಾಲೆಯಲ್ಲಿ ಕಲಿಸುತ್ತಿರುವ ಮಕ್ಕಳು ಇಬ್ಬರೂ ಸಮಾನ ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಕೃತಿಯ ಅಡಿಬರಹ ಹೇಳುವಂತೆ ‘ಶಿಕ್ಷಕಿ- ಮಕ್ಕಳ ಒಡನಾಟದ ಬುತ್ತಿ’ ಇದಾಗಿದೆ. ಅದರಲ್ಲೂ, ವಿದ್ಯಾರ್ಥಿಗಳ ಹೃದಯವನ್ನು ತಟ್ಟುವ ಕೃತಿ ಇದು.

Published by dattatreya Hegde on April 16,2025

..........................


Comments

Popular posts from this blog