ಭರವಸೆಯ ಬೆಳಕು ಚೆಲ್ಲುವ
"‘ಗೆಲುವು ಸಾಧಿಸುವ ಮುನ್ನ’*
ಇಂದಿನ ಒತ್ತಡದ ಯುಗದಲ್ಲಿ ಮನುಷ್ಯ ಗೊಂದಲದ ಗೂಡಲ್ಲಿ ಹತಾಶನಾಗಿ ಕುಳಿತಿದ್ದಾನೆ. ಜೀವನೋತ್ಸಾಹ ಕಳೆದುಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆಯನ್ನು ಹೇಗೆ ಬೆಳೆಸಿಕೊಳ್ಳಬೇಕು, ಬದುಕಿನಲ್ಲಿ ಹೇಗೆ ಆನಂದವನ್ನು ಸೃಷ್ಟಿಸಿಕೊಳ್ಳಬೇಕು ಎನ್ನುವ ಉಪಾಯವನ್ನು ಸೂಚಿಸುತ್ತಾ, ನೊಂದ ಮನಗಳಿಗೆ ಗೆದ್ದೇ ಗೆಲ್ಲಬೇಕೆನ್ನುವ ಛಲದ ಕಿಡಿ ಹೊತ್ತಿಸುವ ಭರವಸೆಯ ಲೇಖನಗಳ ಸಂಕಲನ ಇದಾಗಿದೆ.
‘ಗೆಲುವು ಸಾಧಿಸುವ ಮುನ್ನ’ ಇದರ ಲೇಖಕಿ ಪ್ರಜ್ವಲಾ ಶೆಣೈ. ಮಂಗಳೂರು ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಇವರು, ಬರವಣಿಗೆಯಲ್ಲೂ ಹೆಜ್ಜೆ ಗುರುತು ಮೂಡಿಸಿ ಸಾಧನೆ ಮಾಡಿದವರು. ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಕರೂ ಹೌದು. ಇದು ಅವರ ಮೂರನೆಯ ಕೃತಿ. ಇಲ್ಲಿ ಅತ್ಯಂತ ಸಣ್ಣ ಬರಹಗಳು ಸುಲಭ ಹಾಗೂ ಸರಳ ಭಾಷೆಯಲ್ಲಿ ನಮ್ಮನ್ನು ಸೆರೆಹಿಡಿಯುತ್ತವೆ. ಇಲ್ಲಿನ ಲೇಖನಗಳೆಲ್ಲ ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತವಾದವು.
ಸುಮಾರು ೪೨ ಕಿರು ಲೇಖನಗಳು ಇಲ್ಲಿವೆ. ಕೃತಿಯನ್ನು ಓದುವಾಗ ಲೇಖನಗಳು ಮನೋವಿಜ್ಞಾನಿಕ ಲೇಖನಗಳಂತೆ ಕಂಡುಬರುತ್ತವೆ. ಹತಾಶ ಬದುಕು ಆಸೆ ಹುಟ್ಟಿಸುವುದು, ಜೀವನ ಉತ್ಸಾಹ ಪುಟಿಯುವಂತೆ ಮಾಡುವುದು, ಬದುಕಿನ ಸೂಕ್ಷ್ಮತೆಯನ್ನು ತಿಳಿಸಿ ಕೊಡುವುದು, ನಮ್ಮ ಬದುಕಿಗೆ ನಾವೇ ಹೇಗೆ ಆದರ್ಶವಾಗಬೇಕು, ಮನಃಸ್ಥಿತಿ ಹೇಗೆ ಬದಲಾಯಿಸಿಕೊಳ್ಳಬೇಕು, ಸವಾಲು ಎದುರಿಸಿ ಮುನ್ನುಗ್ಗುವುದು ಹೇಗೆ ಮುಂತಾದ ವಿಚಾರಗಳನ್ನು ಉದಾಹರಣೆ ಮತ್ತು ನಿದರ್ಶನಗಳೊಂದಿಗೆ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಕೃತಿಯಲ್ಲಿ ಹೊಸ ವಿಷಯಗಳನ್ನು ಬಹಳ ಸುಂದರವಾಗಿ ಹೇಗೆ ಮನಮುಟ್ಟುವಂತೆ ನಿರೂಪಿಸಬಹುದೆನ್ನುವುದನ್ನು ಲೇಖಕಿ ತೋರಿಸಿಕೊಟ್ಟಿದ್ದಾರೆ. ಅವರ ಬರಹದ ಕೌಶಲ್ಯ, ವಿಷಯದ ಆಳ ಮತ್ತು ಪ್ರಬುದ್ಧತೆಯನ್ನು ನಾವಿಲ್ಲಿ ಕಾಣಬಹುದು. ಬದುಕಿನ ಬೊಗಸೆಯಲ್ಲಿ ಹಿಡಿದಿಟ್ಟಿರುವ ಖುಷಿ ಸೋರಿ ಹೋಗದಂತೆ ಹೇಗೆ ನಮ್ಮದಾಗಿಸಿಕೊಳ್ಳಬೇಕೆನ್ನುವುದರ ಜೊತೆಗೆ ಅರಿತು ಬಾಳಿದರೆ ಬದುಕು ಸುಂದರ ಎನ್ನುವ ಸಂದೇಶವನ್ನು ಈ ಕೃತಿ ಬಿಂಬಿಸುತ್ತದೆ. ಇಂತಹ ಜಾಣ್ಮೆಯ ಬರಹಗಳು ಇಲ್ಲಿನ ಆಕರ್ಷಣೆಗಳಾಗಿವೆ. ಮನುಷ್ಯನ ವಿವಿಧ ಮುಖಗಳನ್ನು ಮನೋಜ್ಞವಾಗಿ ಚಿತ್ರಿಸುತ್ತ ಸಾಹಿತ್ಯ ವಲಯದಲ್ಲಿ ಈ ಕೃತಿ ಒಂದು ಹೊಸ ಭರವಸೆಯನ್ನು ಮೂಡಿಸುವಂತೆ ಮಾಡಿದ್ದಾರೆ.
ಧನಾತ್ಮಕ ಚಿಂತನೆ ಮನುಷ್ಯನಲ್ಲಿ ಎಷ್ಟು ಅವಶ್ಯಕತೆ ಎಂದು ಹೇಳುತ್ತಾ, ಭಾವನೆಗಳ ಹೊಯ್ದಾಟ, ಮನದ ತಳಮಳ, ಮಾನಸಿಕ ತಲ್ಲಣಗಳನ್ನು ಮೀರಿ ನಿಂತು ಹೇಗೆ ಬದುಕನ್ನು ಎದುರಿಸಬೇಕು ಎನ್ನುವುದು ಓದುಗರ ಹೃದಯ ಮುಟ್ಟುವಂತೆ ವಿವರಿಸಿದ್ದಾರೆ. ವಿಶೇಷವಾಗಿ, ‘ಗೆಲುವು ನಮ್ಮದೇ’ ಎನ್ನುವ ಮೊದಲ ಲೇಖನದಲ್ಲಿ ಸೋಲಿಗೆ ಅಂಜಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾಧನೆಯ ಮೂಲಕವೇ ನಾವು ಉತ್ತರಿಸಬೇಕು ಎನ್ನುತ್ತಾರೆ. ‘ಯಶಸ್ಸು ನಮ್ಮೊಳಗಿನ ತಪಸು’ ಎಂಬ ಬರಹದಲ್ಲಿ ಅವಕಾಶಗಳನ್ನು ಪಡೆಯುವವನು ಅದೃಷ್ಟವಂತ. ಆಶಾವಾದಿಗಳಿಗೆ ಮಾತ್ರ ಅವಕಾಶದ ದಾರಿ ಕಾಣಿಸುತ್ತದೆ ಎನ್ನುತ್ತಾರೆ. ಧನಾತ್ಮಕತೆಯನ್ನು ಅಳವಡಿಸಿಕೊಂಡರೆ ಅದ್ಭುತವನ್ನು ಸಾಧಿಸಬಹುದು. ಋಣಾತ್ಮಕ ಭಾವವನ್ನು ತೊಡೆದು ಹಾಕುವ ಕೆಲಸ ನಮ್ಮಿಂದಾಗಬೇಕು ಎನ್ನುವ ಸಂದೇಶವನ್ನು ‘ಓ ಮನಸೇ ನೀ ಕುಗ್ಗದಿರು’ ನೀಡುತ್ತದೆ. ‘ಯಥಾ ದೃಷ್ಟಿ ತಥಾ ಸೃಷ್ಟಿ’ ಯು ಬದುಕನ್ನು ನಾವು ನೋಡುವ ರೀತಿ ಬದಲಾದರೆ ಸೃಷ್ಟಿಯೂ ಬದಲಾದೀತು ಎನ್ನುವ ಲೇಖಕಿ, ‘ಕಾಡದಿರು ನೆನಪೇ ನೀ ಮತ್ತೆ ಮತ್ತೆ’ ಎಂಬಲ್ಲಿ ಸಂತೋಷದಿಂದ ಪ್ರತಿಕ್ಷಣವನ್ನು ಕಳೆಯಬೇಕು ಎಂದು ಸಲಹೆ ನೀಡುತ್ತಾರೆ.
‘ಭಾಗ್ಯದ ಬಾಗಿಲು ತೆರೆದಾಗ’ ದಲ್ಲಿ ನಿರಂತರ ಪರಿಶ್ರಮ, ಬದ್ಧತೆ, ಪ್ರಯತ್ನವಿದ್ದರೆ ಗೆಲುವಿನ ಮೆಟ್ಟಿಲನ್ನು ಏರಬಹುದು ಎನ್ನುತ್ತಾ, ‘ಬಿದ್ದವರೇ ಎದ್ದವರು’ ಎನ್ನುವ ಇನ್ನೊಂದು ಮಹತ್ವದ ಬರಹದಲ್ಲಿ, ಸೋಲು ಛಲವಾಗಿ ಬದಲಾಗಬೇಕು. ಸೋಲು ನಮ್ಮನ್ನು ಸುಡುವ ಬೆಂಕಿಯಲ್ಲ. ಅದು ನಮ್ಮ ಗೆಲುವಿನ ದಾರಿಯಲ್ಲಿ ಹಚ್ಚಿಟ್ಟ ಬೆಳಕಿಂಡಿ ಎಂಬ ಉತ್ತಮ ಮಾರ್ಗದರ್ಶನದ ಮಾತನ್ನಾಡುತ್ತಾರೆ. ‘ಬಯಸದೇ ಬಂದ ಭಾಗ್ಯ’ ದಲ್ಲಿ ಜೀವನದ ಪ್ರತಿ ಕ್ಷಣವನ್ನು ಇನ್ನಿಲ್ಲದಂತೆ ಪ್ರೀತಿಸಬೇಕು ಎಂದರೆ, ‘ಗೆದ್ದೆತ್ತಿನ ಬಾಲ ಹಿಡಿದರೆ ಗೆಲುವು ಸಿಕ್ಕಿತೇ’ ಎಂಬಲ್ಲಿ ಗೆದ್ದವನು ಬರಿ ಗೆಲ್ಲುತ್ತಾನೆ. ಆದರೆ ಸೋತವನು ಗೆದ್ದು ಇತಿಹಾಸ ಸೃಷ್ಟಿಸುತ್ತಾನೆ ಎನ್ನುವ ನಾಣ್ಣುಡಿಯನ್ನು ನೆನೆಪಿಸುತ್ತಾರೆ.
‘ಹೊಸ್ತಿಲಿನಿಂದಾಚೆ ಹೊಸ ಹೆಜ್ಜೆ’ಯಲ್ಲಿ ಹೊಸತನಕ್ಕೆ ತೆರೆದುಕೊಂಡಾಗ ಮಾತ್ರ ಹಳೆ ಬೇರು ಚಿಗುರಲು ಸಾಧ್ಯ ಎನ್ನುವ ಮೂಲಕ ‘ಓ ಮನಸೇ ನೀ ಕುಗ್ಗದಿರು’ ಎನ್ನುವಲ್ಲಿ ಸೋತಿರುವ ಮನಸ್ಸಿಗೆ ಸಾಂತ್ವನದ ಮುಲಾಮನ್ನು ಹಚ್ಚುತ್ತಾರೆ. ‘ಓ ಮನವೇ ನೀ ಮಾತಾಡು’ ಎಂಬ ಬರಹದಲ್ಲಿ ಮಾತಿನ ಮಹತ್ವವನ್ನು ತೋರಿಸುತ್ತಾರೆ. ‘ಮೌನವೇ ಮಾತಿನ ಶಕ್ತಿ’ ಎಂಬಲ್ಲಿ ಮೌನದ ಹಿಂದಿನ ಮಾತನ್ನು ಅರ್ಥೈಸಿಕೊಂಡು ಹೋಗುವವನೇ ನಿಜವಾದ ಸಾಧಕ ಎನ್ನುತ್ತಾರೆ.
ಹೀಗೆ ಈ ಕೃತಿಯಲ್ಲಿನ ಎಲ್ಲಾ ಬರಹಗಳು ಬದುಕಿಗೆ ಚೈತನ್ಯವನ್ನು ತುಂಬುವಂತವಾಗಿವೆ. ಸ್ವಾವಲಂಬನೆಯ ಅನಿವಾರ್ಯತೆಯನ್ನು ತೋರಿಸಿಕೊಡುತ್ತವೆ. ಸವಾಲು ಎದುರಿಸಿ ಹೇಗೆ ಮುನ್ನುಗ್ಗಬೇಕು, ಸಕಾರಾತ್ಮಕ ದೃಷ್ಟಿಕೋನವನ್ನು ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬಹುದು ಎನ್ನುವ ಸಂದೇಶವನ್ನು ಕೃತಿ ಕಟ್ಟಿಕೊಡುತ್ತದೆ.
ಒಟ್ಟಿನಲ್ಲಿ ಕೃತಿಯು ಅದರ ಅಡಿಬರಹ ‘ಸ್ಫ್ಪೂರ್ತಿದಾಯಕ ಭಾವ ಬರಹಗಳ ಸಂಕಲನ’ ಎನ್ನುವುದನ್ನು ಸಾಬೀತುಪಡಿಸಿದೆ. ಜೀವನವನ್ನು ಪ್ರೀತಿಸುವವರು, ಜೀವನಕ್ಕೆ ಉತ್ತಮ ಮುನ್ನುಡಿ ಹಾಕಿಕೊಳ್ಳಬೇಕೆನ್ನುವವರು ಓದಲೇಬೇಕಾದ ಕೃತಿ ಇದು.
16. 4. 2025
Dattatrey Hegde

Comments
Post a Comment