ಮನಸ್ಸಿನ ದಿಗಂತ ವಿಸ್ತರಿಸುವ
‘ಅಜ್ಜಿ ಕರೆದ ಹಾಗಾಯಿತು’
‘ಅಜ್ಜಿ ಕರೆದ ಹಾಗಾಯಿತು’ ಇದು ಕವಯತ್ರಿ, ಕಥೆಗಾರ್ತಿ ಸವಿತಾ ನಾಗಭೂಷಣ ಅವರ ಕೃತಿ. ಇಲ್ಲಿ ಒಟ್ಟು ೩೦ ಚಿಕ್ಕ ಕಥೆಗಳಿವೆ. ಪ್ರತೀ ಕತೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ವಸ್ತು, ವಿಚಾರ, ವಿನ್ಯಾಸಗಳು ಬೇರೆ ಬೇರೆಯಾಗಿವೆ. ಕೆಲವು ಕಥೆಗಳು ಅರ್ಧಪುಟದಷ್ಟಿದ್ದರೆ, ಇನ್ನೂ ಕೆಲವು ಒಂದು- ಎರಡು ಪುಟದಷ್ಟಿವೆ. ಒಂದು ಸಂದೇಶವನ್ನು ಸಮಾಜಕ್ಕೆ ನೀಡುವ ಕಥೆಗಳು ಇವಾಗಿವೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಓದಿದ ನಂತರ ಕಥೆ ಎನಿಸುವುದೇ ಇಲ್ಲ. ಅಷ್ಟೊಂದು ಚಿರಪರಿಚಿತ ವಿಷಯವನ್ನು ನಾಜೂಕಾಗಿ, ತೀರಾ ಸರಳ ರೀತಿಯಲ್ಲಿ ಹೆಣೆದಿದ್ದಾರೆ.
ಈ ಕಥೆಗಳ ನಿರೂಪಣೆ ಸಹ ಮನಸೆಳೆಯುವಂತಿದೆ. ಕಥೆಗಳು ಹಳ್ಳಿಯ ಸಂಸ್ಕೃತಿ, ಪೇಟೆಯ ಸಂಸ್ಕೃತಿ, ಕೋಮುವಾದ, ಮಹಿಳಾ ದಿನಾಚರಣೆ, ಮಳೆ ಇಲ್ಲದೆ ತಲ್ಲಣಿಸುವುದು, ಸಂಬಂಧಗಳು, ಅಹಿಂಸೆ, ಶಾಂತಿ ಮೊದಲಾದ ವಸ್ತು ವಿಷಯಗಳನ್ನು ಹೊಂದಿವೆ. ಆದ್ದರಿಂದ ಇವು ಎಲ್ಲರನ್ನೂ ಆಕರ್ಷಿಸುತ್ತವೆ.
‘ಬರವಣಿಗೆ’ ಎಂಬ ಮೊದಲ ಕಥೆ ಗ್ರಾಮೀಣ ಪ್ರದೇಶದ ಜನರಲ್ಲಿ ಶಿಕ್ಷಣ, ಆಧುನಿಕ ಜ್ಞಾನದ ಕೊರತೆ ಇರುವ ಬಗ್ಗೆ ಇದೆ. ವಿದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವನಿಗೆ ಊರಲ್ಲಿ ಮಾಡುವ ಸನ್ಮಾನ ಮಾಡುವ ಬಗ್ಗೆ ಹಿರಿಯರೊಬ್ಬರು ‘ರಾಮಾಯಣ ಮಹಾಭಾರತಕ್ಕಿಂತ ದೊಡ್ಡದು ಬರೆದಿದ್ದಾನಾ’ ಎಂದು ಪ್ರಶ್ನಿಸುತ್ತಾರೆ. ‘ದರುಶನ’ ಎಂಬ ಇನ್ನೊಂದು ಕಥೆಯಲ್ಲಿ ಊರಿಂದ ಸ್ವಲ್ಪ ದೂರದಲ್ಲಿರುವ ಸಿದ್ದರಗುಡ್ಡದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡುತ್ತಿದ್ದ ಪೂಜಾರಿ ತನ್ನ ಮಗಳನ್ನು ಕಳೆದುಕೊಂಡಿರುತ್ತಾನೆ. ಆ ಗುಡ್ಡಕ್ಕೆ ಕಟ್ಟಿಗೆ ಹೆಕ್ಕಲು ಶಾಲೆಯ ರಜಾ ದಿನ ಇಬ್ಬರು ಕಳೆಕಳೆಯಾದ ಮೊಗದ ಬಾಲೆಯರು ಹೋದಾಗ ಆತ ಎದುರಾಗುತ್ತಾನೆ. ಅವರಲ್ಲಿ ಪೂಜಾರಿ ತನ್ನ ಮಗಳನ್ನು ಕಾಣುತ್ತಾನೆ. ದೇವರಿಗೆ ಪೂಜೆ ಅರ್ಪಿಸಲು ಹೊರಟ್ಟಿದ್ದರೂ ಬಾಲೆಯರಿಗೆ ಕೈ ಮುಗಿದು ನನ್ನನ್ನು ಹರಸಿ ಎಂದು ಕೇಳುತ್ತಾನೆ ಈ ಮೂಲಕ ತನ್ನ ಮಗಳ ದರುಶನವನ್ನು ಅವನು ಪಡೆಯುವುದನ್ನು ಕಾಣಬಹುದು.
‘ರಾಜ ಮತ್ತು ಮುದುಕಿ’ ಎಂಬ ಕತೆಯಲ್ಲಿ ಕಾಡಿನಲ್ಲಿ ಹೇಗೋ ಜೀವನ ಮಾಡಿಕೊಂಡಿರುವ ಮುದುಕಿ ತನ್ನ ಮನೆಗೆ ರಾಜ ಬಂದರೂ ಆತನಿಗೆ ಗೆಡ್ಡೆಗೆಣಸು ಬೇಯಿಸಿಕೊಟ್ಟಳೇ ವಿನಾ ರಾಜ, ಆತನ ಆಳ್ವಿಕೆ, ರಾಜ್ಯದ ಬಗ್ಗೆ ಏನೂ ಗೊತ್ತಿರದೆ ಜೀವನ ಸಾಗಿಸುವುದನ್ನು ವಿವರಿಸಲಾಗಿದೆ. ‘ಅಜ್ಜಿ ಕರೆದ ಹಾಗಾಯಿತು’ ಇಲ್ಲಿ ಹಳೆಯ ನೆನಪುಗಳು ಹಿರಿಯರನ್ನು ಹೇಗೆ ಕಾಡುತ್ತವೆ ಎನ್ನುವುದನ್ನು ಮರೆವಿನ ಕಾಯಿಲೆಯ ತಮ್ಮಣ್ಣ ಎನ್ನುವವನ ಮೂಲಕ ಚಿತ್ರಿಸಿದರೆ, ಇಂದಿನ ದಿನಮಾನಗಳಲ್ಲಿ ಗಂಡ- ಹೆಂಡತಿ ಸಂಬಂಧಗಳು ಎಷ್ಟು ಸೂಕ್ಷ್ಮವಾಗಿವೆ. ಗಂಡ ಮೊಬೈಲ್ ಬಿಸಾಡಿ ಪುಡಿ ಮಾಡಿದ ಸಣ್ಣ ವಿಚಾರ ಡೈವರ್ಸ್ ಮಟ್ಟಕ್ಕೆ ಹೋಗುತ್ತಿರುವುದನ್ನು ‘ಸಂಬಂಧಗಳು’ ಎನ್ನುವ ಕಥೆಯಲ್ಲಿ ಸಂಜನಾ- ಯತೀಶ್ ಎನ್ನುವವರ ಮೂಲಕ ಮನಮುಟ್ಟುವಂತೆ ಚಿತ್ರಿಸಿದ್ದಾರೆ
‘ವೇಗ’ ಎಂಬ ಕಥೆಯಲ್ಲಿ ಗಾರೆ ಕೆಲಸದ ಮಂಜ ಎನ್ನುವವನು ತನ್ನ ಕೆಲಸದ ಮೂಲಕ ಎಲ್ಲರಿಗೂ ಬೇಕಾದವನಾಗಿ ನಂತರ ಶಾಸಕನ ಮನೆಯ ನೀರಿನ ಪೈಪನ್ನು ದುರಸ್ತಿ ಮಾಡಿದ್ದಕ್ಕಾಗಿ ಅವರಿಗೆ ಆಪ್ತನಾಗುತ್ತಾನೆ. ಸೈಕಲ್ ಹೋಗಿ ಬೈಕ್ ಬರುತ್ತದೆ. ಸಿಮೆಂಟ್ ಧೂಳಿನ ಮಧ್ಯೆ ಇದ್ದ ಮನೆಯನ್ನು ಚಂದದ ಮನೆಗೆ ಸ್ಥಳಾಂತರಿಸುತ್ತಾ. ಶಾಸಕರ ಕಾರು ಓಡಿಸುವವನಾಗುತ್ತಾನೆ. ಮಂಜ ಅಲ್ಲಿಂದ ಮಂಜಣ್ಣನಾಗಿದ್ದಲ್ಲದೆ ಕೈ-ಮೈ ತುಂಬ ಬಂಗಾರ ಧರಿಸಿ ಬೆಂಗಳೂರು ವಾಸಿಯಾಗುತ್ತಾನೆ. ಮುಂದಿನ ಚುನಾವಣೆಗೆ ಟಿಕೆಟ್ ಪಡೆಯುವ ಮಟ್ಟಕ್ಕೆ ‘ವೇಗ’ವಾಗಿ ಬೆಳೆಯುವ ಕಥೆ ಇದೆ. ‘ಮದ್ದು’ ಕಥೆಯಲ್ಲಿ ಎಂಬಲ್ಲಿ ಅಸ್ಪೃಶ್ಯತೆ, ಕೋಮುವಾದ, ಭಾಷೆಯ ಮೇಲರಿಮೆ, ಜಾತಿ, ಅಹಂಕಾರಗಳಿಗೆಲ್ಲ ಮದ್ದಿಲ್ಲ ಎನ್ನುವುದನ್ನು ಇಬ್ಬರು ಪ್ರಾಧ್ಯಾಪಕರು ಚಹಾ ಕುಡಿಯುತ್ತ ಕುಳಿತಾಗ ನಡೆದ ಪ್ರತಿಭಟನೆಯ ಮೂಲಕ ಚಿತ್ರಿಸಿದ್ದಾರೆ.
‘ಗಾಂಧಿ’ ಕಥೆಯಲ್ಲಿ ಜನರಿಂದ ಹೋರಾಟಕ್ಕೆ ನೆರವು ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟ. ಮೋಸ ಮಾಡಲಿಲ್ಲ ಎನ್ನುವ ಮಾತು ನಮ್ಮನ್ನು ಹೆಚ್ಚು ಆಕರ್ಷಿಸುತ್ತದೆ. ಗಾಂಧಿವಾದಿ ಗುಲಾಬಿ ಎನ್ನುವವಳು ಗಾಂಧಿ ಮಂಗಳೂರಿಗೆ ಬಂದಾಗ ತನ್ನ ಚಿನ್ನದ ಒಡವೆಯನ್ನು ಅವರಿಗೆ ಕೊಡುತ್ತಾಳೆ. ಸ್ವಾತಂತ್ರ್ಯ ಬಂದ ದಿನ ಪಾಯಸ ಮಾಡಿ ಮನೆಯವರಿಗೆ ಬಡಿಸುತ್ತಾಳೆ. ಇದು ಈ ಕೃತಿಯ ಮನಸೆಳೆಯುವ ಕಥೆಯಾಗಿದೆ. ‘ಒಂದು ಹಳೆಯ ಕೊಡ’ದಲ್ಲಿ ತೂತಾದ ಕೊಡವನ್ನು ಅಜ್ಜಿ ಗುಜರಿಯವನಿಗೆ ಕೊಟ್ಟಾಗ ಆತ ಅದರಲ್ಲಿರುವ ತೂತನ್ನು ಗಮನಿಸಿ ಅದಕ್ಕೆ ಬೆಸುಗೆ ಹಾಕಿ ಫsಳಫಳ ಹೊಳೆಯುವಂತೆ ಮಾಡಿ ಮರಳಿ ಕೊಟ್ಟಾಗ ಆಕೆಗೆ ತನ್ನ ಬಾಲ್ಯದ ನೆನೆಪಾಗುತ್ತದೆ. ಆ ಕೊಡದಿಂದ ನೀರು ಸೇದಿದ್ದು, ಅದರೊಂದಿಗಿನ ಬಾಂಧವ್ಯವನ್ನು ನೆನೆಯುತ್ತಾಳೆ. ‘ಯಾತಕ್ಕೆ ಮಳೆ ಹೋದವೋ’ ಎಂಬ ಕಥೆ ರೈಲಿನಲ್ಲಿ ಹೋಗುವಾಗ ಪಕ್ಕದವನೊಬ್ಬ ಮೊಬೈಲಿನಲ್ಲಿ ಇನ್ನೊಬ್ಬನ ಜೊತೆ ಮಳೆ ಇಲ್ಲದ ಬಗ್ಗೆ ಮಾತನಾಡುವುದರ ಕುರಿತಾಗಿದೆ. ಬೆಳೆದವನಿಗೂ ಬೆಳೆದ ಆ ಬೆಳೆಯ ಉಣ್ಣುವವನಿಗೂ ಸಂಬಂಧವೇ ಇಲ್ಲದ ಸ್ಥಿತಿಯ ಬಗ್ಗೆ ಚಿತ್ರಿಸಲಾಗಿದೆ.
‘ಮಹಿಳಾ ದಿನಾಚರಣೆ: ಮನೆಮನೆ ಕಥೆ’ಯಲ್ಲಿ ಸಾಧಕರ ಮಹಿಳೆಯರ ಬಗ್ಗೆ ಮಾತ್ರವಲ್ಲ, ಪ್ರತಿನಿತ್ಯ ಮನೆಯ ಕೆಲಸವನ್ನೆಲ್ಲ ಬಿಡುವಿಲ್ಲದೆ ನಿಭಾಯಿಸುವ ಮಹಿಳೆಯರನ್ನು ಸಹ ಸಾಮಾನ್ಯ ಮಹಿಳೆಯರಿಗೂ ಗೌರವ, ಪ್ರೀತಿ ಸಿಗಬೇಕೆನ್ನುವುದನ್ನು ಚಿತ್ರಿಸಿದ್ದಾರೆ. ಹೀಗೆ ಕೃತಿಯ ಇತರೇ ಕಥೆಗಳು (ರೊಟ್ಟಿ ಮತ್ತು ಬೆಣ್ಣೆ, ಒಂದು ತುಂಡು ಭೂಮಿಗಾಗಿ, ಅಂತ್ಯ, ಬಾಂಬು, ಉಸಿರಿನ ಪರಿಮಳ, ಸಿಡಿಲು ಬಡಿದ ಮರ, ಬೆವರು, ಒಂದು ದಿನ, ನೀರು, ಗೀಳು....ಸಹ ಉತ್ತಮವಾಗಿವೆ. ಇಲ್ಲಿರುವ ಎಲ್ಲಾ ಕಥೆಗಳು ಚಿಕ್ಕದಾಗಿದ್ದರೂ ಮಹತ್ತರ ಸಂದೇಶವನ್ನು ಹೊತ್ತು ನಿಂತಿವೆ. ಇದು ಓದುಗರ ಮನಸೆಳೆಯುತ್ತದೆ. ದೊಡ್ಡದಾಗಿ ಈ ಕಥೆಗಳನ್ನೆಲ್ಲ ಬರೆಯಬಹುದಾಗಿತ್ತ್ತಾದರೂ, ಕೆಲವೇ ಸಾಲಿನಲ್ಲಿ ಹೇಳಿ, ಜನರನ್ನು ರಂಜಿಸುವ, ಓದುಗರನ್ನು ಸೆಳೆಯುವ ಕೌಶಲವನ್ನು ಮೆಚ್ಚಲೇಬೇಕು. ಚುಟುಕು ಕಥೆ,ಮಿನಿ ಕಥೆ ಅಥವಾ ಕಿರುಗಥೆಗಳ ಸಾಲಿನಲ್ಲಿ ಇಲ್ಲಿನ ಬಹುತೇಕ ಕಥೆಗಳು ನಿಲ್ಲುವಂತವು. ಇತ್ತೀಚೆಗೆ ಇಂತಹ ಕಥೆಗಳು ಜನಪ್ರಿಯವಾಗುತ್ತಿವೆ. ಆದರೆ ಮೂರು ವರ್ಷದ ಹಿಂದೆಯೇ ಇಂತಹ ಆಪ್ತ ಪ್ರಯೋಗವನ್ನು ಲೇಖಕಿ ಮಾಡಿ ಜನಮನ ಗೆದ್ದಿದ್ದಾರೆ.
Published by Dattareya M Hegde on Apri, 26-2025
...........................

Comments
Post a Comment