ವಿಸ್ಮಯ ಹುಟ್ಟಿಸುವ
 ‘ಪ್ರೇಮ ಪತ್ರದ ಆಫೀಸು ಮತ್ತು ಅವಳು’


 



‘ಪ್ರೇಮ ಪತ್ರದ ಆಫೀಸು ಮತ್ತು ಅವಳು’ ಇದು ಶಿವಕುಮಾರ್ ಮಾವಲಿ ಅವರ ಕಥಾ ಸಂಕಲನ. ಶಿವಕುಮಾರ್ ಪ್ರಸ್ತುತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆನ್ನೈನಲ್ಲಿ ಲ್ಯಾಂಗ್ವೇಜ್ ಎಕ್ಸ್ಪರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

 ಈ ಕೃತಿಯಲ್ಲಿ ಪ್ರೇಮದ ವಿರಹದ ಸಂಬಂಧದ ತಾಕಲಾಟಗಳ ಸಂದಿಗ್ಧದ ಕಥೆ ಇದೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಪ್ರತಿ ಕಥೆಗಳು ಓದುಗರಲ್ಲಿ ವಿಸ್ಮಯ ಹುಟ್ಟಿಸುತ್ತವೆ ಮತ್ತು ನಮ್ಮ ಹಳೆಯ ಕೆಲವು ನೆನಪುಗಳನ್ನು ಮರಳಿಸುತ್ತವೆ. ಕಥೆಗಳು ನಮ್ಮ ಅಂತರಾಳಕ್ಕಿಳಿದು ಹೊಸ ಆಲೋಚನೆಗಳಿಗೆ ಕಾರಣವಾಗುತ್ತವೆ.

  ಇದರಲ್ಲಿ ಸುಮಾರು ೨೫ ಚಿಕ್ಕ ಕಥೆಗಳಿವೆ. ಇವೆಲ್ಲ  ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊತೆಗೆ ನಮ್ಮ ಒಳವನ್ನು  ಪ್ರಶ್ನಿಸುತ್ತವೆ. ವಿಶೇಷ ಅನುಭವವನ್ನು ಕಟ್ಟಿಕೊಡುತ್ತವೆ. ಈ ಓದಿಸಿಕೊಂಡು ಹೋಗುವ ಗುಣದ ಹಿಂದೆ ಕತೆಗಾರನ ಕತೆ ಕಟ್ಟುವ ತಂತ್ರವೂ ಯಶಸ್ವಿಯಾಗಿ ಕೆಲಸ ಮಾಡಿದೆ. ಇಲ್ಲಿನ ಕತೆಗಳನ್ನು ಓದಿದ ನಂತರ ಮರೆಯದೆ ನಮ್ಮಲ್ಲಿ ಉಳಿಯುತ್ತವೆ. ಬಹುತೇಕ ಕತೆಗಳ ಪಾತ್ರಕ್ಕೆ ಹೆಸರಿಲ್ಲ. ನಾನು, ನೀನು, ಅವಳು ಎಂಬ ಮೂಲಕವೇ ಸಾಗುತ್ತವೆ. ಒಟ್ಟಿನಲ್ಲಿ ಸಂವೇದನೆಗೆ ಒಳಪಡಿಸುವ  ಕತೆಗಳು ಇವಾಗಿವೆ.    

  ‘ಪ್ರೇಮ ಪತ್ರದ ಆಫೀಸು ಮತ್ತು ಅವಳು’ ಎನ್ನುವ ಕಥೆಯೊಂದಿಗೆ ಆರಂಭವಾಗುವ ಕತೆಯಲ್ಲಿ  ಪ್ರೇಮಪತ್ರಗಳನ್ನು ಬರೆದು ಕೊಡಲಾಗುತ್ತದೆ ಎಂದು ಬೋರ್ಡ್ ಹಾಕಿಕೊಂಡು ಕುಳಿತವನಿಗೆ ತಿಂಗಳಾದರೂ ಗಿರಾಕಿಗಳು ಬರುವುದಿಲ್ಲ. ಜೊತೆಗೆ ಆತನಿಗೆ ಯಾವ ಪ್ರೇಮಿಯೂ ಇರುವುದಿಲ್ಲ. ಪ್ರೇಮಿ ಇರುವವರಿಗೆ ಪ್ರೇಮಪತ್ರ ಬರೆಯಲು ಬರುವುದಿಲ್ಲ. ಅದಕ್ಕಾಗಿಯೇ ಅವನಲ್ಲಿಗೆ ಬರುತ್ತಾರೆ. ಎಷ್ಟೊಂದು ಪ್ರೇಮ ಪತ್ರ ಬರೆದರೂ ಆತನಿಗೆ ಪ್ರೇಮವೇ ಹುಟ್ಟಿರುವುದಿಲ್ಲ. ಇದೆಂತಹ ವೈಚಿತ್ರವೋ ತಿಳಿಯದು ಎನ್ನುತ್ತಾರೆ ಲೇಖಕರು. ‘ಅಪರೂಪದ ರೂಪದರ್ಶಿ’ ಎಂಬ ಕತೆಯಲ್ಲಿ  ಕಲಾವಿದನ ಕುಂಚದಲ್ಲಿ ಹುಟ್ಟುವ ಚಿತ್ರಗಳು ಮತ್ತು ಅಭಿಮಾನಿಯ ಮನಸೂರೆಗೊಂಡ ಚಿತ್ರಗಳು ಒಂದೇ ಆಗಿರುವುದಿಲ್ಲ ಏಕೆ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.

  ‘ಡೆವಿಡ್ ಮತ್ತು ದಿಶಾ’ ಎಂಬ ಕತೆ ಹೆಚ್ಚು ಗಮನಸೆಳೆಯುತ್ತದೆ. ಇಬ್ಬರ ಮನೆಯಲ್ಲಿರುವ ಗಿಡಗಳೆರಡರ ಮಧ್ಯೆ ಪ್ರೀತಿ ಹುಟ್ಟಿ ಅದು ಮರವಾಗಿ ಬೆಳೆಯುತ್ತದೆ. ಈ ಮಧ್ಯೆ ಎರಡೂ ಮನೆಯವರ ಮಧ್ಯೆಯ ಜಾಗದಲ್ಲಿ ಗೋಡೆ ಕಟ್ಟುತ್ತಾರೆ. ಆದರೂ ಮರಗಳು  ಎತ್ತರಕ್ಕೆ ಬೆಳೆಯುತ್ತವೆ. ಲೇಖಕ ಇಲ್ಲಿ ಹೇಳುತ್ತಾನೆ- ಬೆಳೆದ ಮರಗಳಿಗೆ ಕಾಪೌಂಡ್ ಅಡ್ಡಿಯಾಗಿಲ್ಲ. ಆದರೆ ಕಾಂಪೌಂಡ್‌ಗಿಂತ ಎತ್ತರ ಬೆಳೆಯಲು ಡೆವಿಡ್ ಮತ್ತು ದಿಶಾ ಎಂಬ ಮನುಷ್ಯರಿಗೆ ಮಾತ್ರ  ಸಾಧ್ಯವಾಗಿಲ್ಲ ಎಂದು ಸೂಚ್ಯವಾಗಿ ಹೇಳುತ್ತಾ ಮನುಷ್ಯರ ಹಿತ್ತಲಲ್ಲಿ  ಪ್ರೀತಿ ಸ್ವಚ್ಛ್ಛಂದವಾಗಿ ಬೆಳೆಯಲಾರದೆನ್ನುವುದನ್ನು ಸೊಗಸಾಗಿ ನಿರೂಪಿಸಿದ್ದಾರೆ.

‘ಸುಂದರಿಗಿದ್ದ ಶಾಪ’ದಲ್ಲಿ ಅರಸನ ಪ್ರಾಮಾಣಿಕತೆ, ‘ಬಾಲ್ಕನಿಯ ಬೆಡಗಿ’ಯಲ್ಲಿ ತನ್ನ ಹಾಡನ್ನು ಎದುರುಮನೆಯ ಹುಡುಗ ತನ್ಮಯನಾಗಿ ಕೇಳುತ್ತಿದ್ದ, ಆನಂದಿಸುತ್ತಿದ್ದ  ಹುಡುಗ ಕಿವುಡ ಎನ್ನುವುದನ್ನು ಅರಿಯದೇ ದಿನನಿತ್ಯ ಆಕೆ  ಹಾಡುವುದು,  

‘ಕವಿಗೆ ಖರ್ಚುಗಳಿರುತ್ತವೆ’ ಎನ್ನುವುದು ಹಾಸ್ಯ ಎಂಬಂತೆ ಕಂಡರೂ ಗಮನಸೆಳೆವ ಕತೆ. ಇದರಲ್ಲಿ ಕವಿಯೊಬ್ಬ ಬ್ಯಾಂಕಿಗೆ ಹೋಗಿ ಮ್ಯಾನೇಜರ್ ಬಳಿ ಕವಿತೆ ಬರೆಯಲು ಖರ್ಚುಗಳಿವೆ, ಸಾಲ ಕೊಡಿ ಎಂದು ಕೇಳುವುದು, ಅದು ಸಾಧ್ಯವಿಲ್ಲ ಎನ್ನುವುದು, ಇಬ್ಬರ ಮಧ್ಯೆಯ ಚರ್ಚೆಯ ನಂತರ ಮ್ಯಾನೇಜರ್ ಒಪ್ಪಿ ಸಾಲ ಕೊಡುವುದು, ಅಡವಿಡಲು ತನ್ನ ಬಳಿ ಕವಿತೆ ಮಾತ್ರ ಇದೆ ಎನ್ನುವುದು, ಕವನಗಳನ್ನು ಅಡವಿಟ್ಟು  ಸಾಲ ಪಡೆದ ಮೊದಲ ಕವಿಯಾಗುವುದು, ಸಾಲ ಕೊಟ್ಟ ಮೊದಲ ಮ್ಯಾನೇಜರ್ ಆಗುವುದು, ಹೊಸ ಬ್ಯಾಂಕಿಂಗ್ ಪಾಲಿಸಿಗೆ ನಾಂದಿ ಹಾಡಿದ್ದನ್ನು ಮನೋಹರವಾಗಿ ಚಿತ್ರಿಸಿದ್ದಾರೆ.  

‘ಖಾಲಿ ಸೈಟಿನ ಬೆಲೆ’,  ‘ಕಾಣೆಯಾಗಿದ್ದಾರೆ- ಹುಡುಕಿಕೊಡಬೇಡಿ’, ‘ವ್ಯಾಲಂಟೈನ್ ಇನ್ ದ ಟೈಮ್ ಆಫ್ ಕ್ವಾರಂಟೈನ್’,  ‘ಅರಸನ ಆತ್ಮಹತ್ಯೆ’

 ‘ಹೆಂಗಸರಿಲ್ಲದ ಊರು, ‘ಅಪ್ಪ-ಮಗಳ ಪ್ರವಾಸ ಕಥನ’ಗಳು ಸಹ ಓದಗರನ್ನು ಆಕರ್ಷಿಸುತ್ತವೆ.  

‘ಪ್ರೇಮ ಕವಿಯ ಕಾಲ್ಪನಿಕ ಸಂದರ್ಶನ’ದಲ್ಲಿ ಸಂದರ್ಶಕ ಪ್ರೇಮಕವಿಗೆ ನಿಮ್ಮ ಸಹಸ್ರಾರು ಪ್ರೇಮಕಥೆಗಳಿಗೆ ಶಕ್ತಿಯಾಗಿರುವ ಆ ಸ್ಫೂರ್ತಿಯ ಚಿಲುಮೆಯ ಸುಂದರಿಯನ್ನು ನನಗೆ ನೋಡುವಾಸೆ ಎನ್ನುತ್ತಾನೆ. ಅದಕ್ಕೆ ಕವಿ, ನನ್ನ ಪ್ರೇಮಿಯನ್ನು ಹುಡುಕುತ್ತಿದ್ದೇನೆ. ಅವಳು ಸಿಕ್ಕ ಮೇಲೆ ನಿಮಗೆ ಖಂಡಿತಾ ಹೇಳುತ್ತೇನೆ ಎಂದಾಗ ಸಂದರ್ಶಕ ಮರು ಪ್ರಶ್ನೆ ಕೇಳದೆ ಎದ್ದು ಹೋಗುತ್ತಾನೆ.  

‘ನಿವೃತ್ತ ಅಪ್ಪನಿಗೆ ಮಗ ಓದಿಸಿದ ವರದಿಗಳು’ ಎಂಬ ಕಥೆಯಲ್ಲಿ ೨೦ ವರ್ಷ ಮಾತನಾಡದೆ ಕಾಲಕಳೆದ ಗಂಡ-ಹೆಂಡತಿಯ ಬಗ್ಗೆ, ವಿಧವೆ ಸೊಸೆಗೆ ಮಾವನೇ ಮುಂದೆ ನಿಂತು ಮದುವೆ ಮಾಡಿಸಿದ್ದು,  ಪ್ರೀತಿ ಮಾಡಿ ಮದುವೆಯಾದರೆಂದು ಯುವಕ-ಯುವತಿಯನ್ನು ಊರಿನಿಂದ ಬಹಿಷ್ಕರಿಸಿದ್ದು, ನಂತರ ಯುವತಿ ತಹಶೀಲ್ದಾರ್ ಆಗಿ ಅದೇ ಊರಿಗೆ ಬಂದಾಗ ಬಹಿಷ್ಕರಿಸಿದ್ದ ಪಂಚನೇ ಮುಂದೆ ನಿಂತು  ಪುಷ್ಪ ಗುಚ್ಛ ಹಿಡಿದು ಸ್ವಾಗತಿಸಿದ ವರದಿಗಳನ್ನು ಓದುತ್ತಾನೆ. ಆಗ ಮನೆಯಲ್ಲಿದ್ದ ಅತ್ತೆ-ಸೊಸೆ ಮತ್ತು ಅಪ್ಪ ಜೀವನದಲ್ಲಿ ತಮ್ಮ ಅನುಭವ ಇದೇ ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ, ಕೆಲವು ಕತೆಗಳು ಸ್ವಲ್ಪ ವಿಚಿತ್ರವಾಗಿ ಕಂಡರೂ,  ಓದುಗರನ್ನು ಸೆರೆಹಿಡಿಯುವಲ್ಲಿ ಕೃತಿ ಯಶಸ್ವಿಯಾಗಿದೆ.

Dattareye hegde 16.4.2025


Comments

Popular posts from this blog