ಅಂದದ ನೇಕಾರಿಕೆಯ
‘ಗಾಂಧಿ ನೇಯ್ದಿಟ್ಟ ಬಟ್ಟೆ’
ಬಾಲ್ಯದ ಬದುಕಿನಲ್ಲಿ ಪುಸ್ತಕ ಮತ್ತು ಬದುಕಿನ ಅನುಭವಗಳು ಅನುರಣಿಸಿದರೆ ಅದೊಂದು ಕಾವ್ಯವಾಗಿ ಹೇಗೆ ಪ್ರಕಟವಾಗುತ್ತದೆ ಎನ್ನುವುದಕ್ಕೆ ‘ಗಾಂಧಿ ನೇಯ್ದಿಟ್ಟ ಬಟ್ಟೆ’ ಕವಿತೆಗಳ ಸಂಕಲನ ಉದಾಹರಣೆಯಾಗಿದೆ. ಇದು ಹುಬ್ಬಳ್ಳಿಯ ರಾಯಸಾಬ್ ಎನ್. ದರ್ಗಾದವರ ಅವರ ಚೊಚ್ಚಲ ಕೃತಿ. ಕರ್ನಾಟಕ ಸರ್ಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನಸಹಾಯದಿಂದ ಪ್ರಕಟವಾಗಿದೆ.
ರಾಯಸಾಬ್ ಅವರು ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಹುಟ್ಟಿಕೊಂಡ ಸಾಹಿತ್ಯದ ಒಲವನ್ನು ಅಲ್ಪಸಮಯದಲ್ಲಿಯೇ ಕವಿತೆಗಳ ಮೂಲಕ ಪ್ರಕಟಪಡಿಸಿದ್ದಾರೆ. ಕವಿಯು ತನ್ನ ಕಾವಾತ್ಮಕತೆಯನ್ನು ಜನರು ಮೆಚ್ಚುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ. ಭರವಸೆಯ ಕವಿತೆಗಳಿರುವ ಈ ಸಂಕಲನದಲ್ಲಿ ಬಹುತೇಕ ಕವಿತೆಗಳು ಸಮಾಜಕ್ಕೆ ಹಿಡಿದ ಕನ್ನಡಿಗಳಾಗಿವೆ. ನಂತರ ಪ್ರೀತಿ ಪ್ರೇಮದ ತುಡಿತವಿದೆ, ನಶಿಸುತ್ತಿರುವ ಹಳೆಯ ಲೋಕ, ಹೆಚ್ಚುತ್ತಿರುವ ಕ್ರೌರ್ಯ, ಧರ್ಮದ ಹೆಸರಿನಲ್ಲಿನ ಜಗಳ, ಜಾತಿಗಳ ಕಲಹ, ಬಡತನ ಮೊದಲಾದ ವಿಷಯಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಒಂದು ಭಿನ್ನ ಸಂದೇಶವಿದೆ. ಇಲ್ಲಿನ ಕವಿತೆಗಳು ಗಟ್ಟಿಯಾಗಿ ನಿಲ್ಲುವ ಸೂಚನೆ ಕೊಡುತ್ತವೆ. ಜೊತೆಗೆ ಬಳಸಿದ ಉಪಮೆ ಮತ್ತು ನುಡಿಗಟ್ಟುಗಳು ಗಮನ ಸೆಳೆಯುತ್ತವೆ. ಯುವಕವಿಯು ಭರವಸೆಯ ಕವಿಯಾಗುವ ಲಕ್ಷಣ ಕಂಡುಬರುತ್ತದೆ.
ಸಂಕಲನದಲ್ಲಿ ಒಟ್ಟೂ ೪೦ ಕವನಗಳಿವೆ. ಮೊದಲ ಕವಿತೆ ‘ಬಿಟ್ಟು ಹೋದವರ ಚರಮಗೀತೆ’ಯಲ್ಲಿ ತನ್ನ ಬಡತನವನ್ನು ವಿವರಿಸಿದರೆ, ‘ ದೀಪವಿಲ್ಲದ ಕೋಣೆಯೊಳಗೆ’ ಇದರಲ್ಲಿ ಬೆಲೆವೆಣ್ಣುಗಳಾಗಿ ಬದುಕುತ್ತಿರುವವರ ಬದುಕಿನ ಅಸಹಾಯಕತೆಯನ್ನು, ‘ಬೀದಿಗೆ ಬಿದ್ದವಳು’ ಕವನದಲ್ಲಿ ಹೆಣ್ಣು ಜೀವವೊಂದರ ಬದುಕಿನ ಪಡಿಪಾಟಲನ್ನು ತೆರೆದಿಡುತ್ತಾರೆ.
ಕವಿತೆಯ ಬಗ್ಗೆಯೇ ಐದು ಕವಿತೆಗಳು ಈ ಕೃತಿಯಲ್ಲಿವೆ.
ಕವಿತೆಗಳು ಎಂದೆಂದಿಗೂ ಸಾಯುವುದಿಲ್ಲ,
ಬದಲಾಗಿ ಬಸಿರಾಗುತ್ತವೆ,
ಹಗಲು ರಾತ್ರಿ ಎನ್ನದೆ ಹುಟ್ಟುತ್ತಲೇ ಇರುತ್ತವೆ (ಕವಿತೆಯ ಬಸಿರು)
ಕೊರೆಯುವ ಚಳಿಗೂ ಕವಿತೆ
ಚಿಗುರುವುದನ್ನು ಕಂಡಿದ್ದೇನೆ.
ಕವಿತೆ ಸಾಯುವುದುಂಟೇ (ಕವಿತೆಯ ಚಿಗುರು)
ಎಂದು ಕಾವ್ಯಮಯವಾಗಿ ಪ್ರಶ್ನಿಸುತ್ತಾರೆ. ‘ಕವಿತೆಗೇನು ಕೆಲಸ’ದಲ್ಲಿ ಕವಿತೆ ಸದಾ ವಿಸ್ತರಿಸುತ್ತಲೇ ಇರುತ್ತದೆ ಎನ್ನುತ್ತ್ತಾರೆ.
ಇಲ್ಲಿನ ಸುಮಾರು ೭-೮ ಪ್ರೇಮಕವನಗಳಲ್ಲಿ ಗಮನ ಸೆಳೆಯುವುದೆಂದರೆ, ‘ನಮ್ಮಿಬ್ಬರ ಇತಿಹಾಸ’. ಇದರಲ್ಲಿ ನನ್ನನ್ನು ನಾನೇ ಸಂತೈಸಿಕೊಳ್ಳಲು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ. ನನ್ನ ಗಾಯಗೊಂಡ ಹೃದಯವನ್ನು ಆರೈಕೆಗೊಳಿಸಲು ನನ್ನನ್ನು ನಾನೇ ಸಂತೈಸಿಕೊಳ್ಳುತ್ತೇನೆ ಎನ್ನುತ್ತಾರೆ. ‘ಆ ಸಂಜೆ’ ಕವನದಲ್ಲಿ ಪ್ರೇಮಕ್ಕೆ ಧರ್ಮದ ಲೇಬಲ್, ಜಾತಿಯ ಬಣ್ಣ ಹಚ್ಚುವುದನ್ನು, ಪ್ರೇಮ ತಾತ್ವ್ವಿಕವಾದಷ್ಟು ಮನುಷ್ಯರು ನೀತಿಗೆಟ್ಟವರಾಗುವುದನ್ನು ಮನೋಜ್ಞವಾಗಿ ಚಿತ್ರಿಸುತ್ತ್ತಾ, ಪ್ರೇಮವಾದರೂ ತೇಲಾಡಲಿ ಉತ್ತುಂಗದಲ್ಲಿ ಎಂದು ಹಾರೈಸುತ್ತ್ತಾರೆ. ‘ನಗ್ನ ಸತ್ಯ’ದಲ್ಲ್ಲಿ ಮನುಷ್ಯರಂತೆ ಕಾಣುವ ನಾವು ಮನುಷ್ಯರಲ್ಲ ಮತ್ತು ಮನುಷ್ಯರೂ ಹೌದು ಎನ್ನುವ ಎರಡೂ ಸತ್ಯವನ್ನು ತೆರದಿಡುತ್ತಾರೆ. ‘ಸುಳ್ಳು ಸಾಕ್ಷಿ’, ‘ ರೆಕ್ಕೆಗಳು’ ಸಹ ಪ್ರೇಮದ ಕುರಿತು ಮಾತನಾಡುತ್ತವೆ.
‘ಗಾಂಧಿ ನೇಯ್ದ ಬಟ್ಟೆ’ ಎಂಬ ಕವನ ವಿಶೇಷವಾದುದು. ಇಂದಿನ ಸಮಾಜದ ಪರಿಸ್ಥಿತಿಯನ್ನು ನೇರವಾಗಿ ತೆರೆದಿಡುವ ಕವನ ಇದು. ಬಣ್ಣಗಳಿಗೆ ಜಾತಿಯ ಸೂತಕ ಹೇಗೆ ಅಂಟುತ್ತಿದೆ, ಜಾತಿ ಸೂಚಕವಾಗಿ ಸಮಾಜವನ್ನು ಹೇಗೆ ಒಡೆಯುತ್ತಿದೆ ಎನ್ನುವುದನ್ನು ಚಿತ್ರಿಸಿದ್ದಾರೆ
ಗಾಂಧಿ ನೇಯ್ದಿಟ್ಟ ಬಿಳಿ ಬಟ್ಟೆಗೂ
ಬಣ್ಣ ಬಂದು ಬಿಟ್ಟಿದೆ.
ಭಕ್ತಿಗಾಗಿ ಬಳಿಯುತ್ತಿದ್ದ ತಿಲಕವೀಗ
ಪಕ್ಷಪಾತ ಮೆರೆದಿದೆ.
ಮೂರು ಬಣ್ಣಕ್ಕೆ ನಮಿಸುತ್ತಿದ್ದವರಿಗೆಲ್ಲ
ಒಂದೇ ಬಣ್ಣ ಸಾಕೆನಿಸಿದೆ.
ದೇವರು ನಮ್ಮನ್ನು ಕಾಯುವ ಕಾಲವೊಂದಿತ್ತ್ತು
ಈಗ ದೇವರನ್ನೇ ಕಾಯಲು ಮೊಂಡು
ಆಯುಧಗಳು ಸಾಣೆಕಲ್ಲು ಬೇಡಿವೆ.
ಇದು ಇಂದಿನ ಸ್ಥಿತಿಯೂ ಹೌದು. ಹೀಗೆ ಇಂದಿನ ಸಮಾಜದ ಪರಿಸ್ಥಿತಿಯನ್ನು ವಿಶಿಷ್ಟವಾಗಿ ಅವಲೋಕನ ಮಾಡುವಲ್ಲಿ ಈ ಕವನ ಯಶಸ್ವಿಯಾಗಿದೆ.
‘ಈ ದೇಶಕ್ಕ ಏನಿದ್ದರೇನು’ ಎಂಬ ಕವನದಲ್ಲಿ ನಾವು ಗಾಂಧೀಜಿಯವರನ್ನು ಈಗ ಹೇಗೆ ಕಾಣುತ್ತಿದ್ದೇವೆ, ಅವರ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಚಿತ್ರಿಸಿದ್ದಾರೆ.
ಈ ದೇಶಕ್ಕೆ ಏನಿದ್ದ್ದರೇನು
ನೀನೇ ಇಲ್ಲವಲ್ಲ ಗಾಂಧಿ
ಕೋರ್ಟು, ಕಚೇರಿಗಳಲ್ಲಿ
ನಿನ್ನ ಭಾವಚಿತ್ರವೊಂದು
ಮೊಳೆಯೇರಿ ಕುಳಿತಿದೆ.
ಅದು ನಗುವ ಬೀರಿದೆ.
ನಿನ್ನ ಸಿದ್ಧಾಂತದ ಹೊತ್ತಿಗೆ ಹೊತ್ತಿ ಕರಕಲಾಗಿದೆ
ನಿನ್ನ ಬೇಡಿಕೆ ಅಪಾರವಾಗಿದೆ
ಎನ್ನುತ್ತಾರೆ.
ಈ ಕೃತಿಯಲ್ಲಿ ಬರುವ ಮತೊಂದಿಷ್ಟು ಕಾಡುವ ಸಾಲುಗಳು ಹೀಗಿವೆ:
ಕನಸುಗಳನ್ನು ಮುದ್ರಿಸುವಂತಿದ್ದರೆ
ಪ್ರತಿಪುಟದಲ್ಲೂ ನಿನ್ನನ್ನೇ ಕಾಣಬಹುದಿತ್ತು
ಟಾರು ಕಿತ್ತ ರೋಡಿನೊಂದಿಗೆ
ವಾದಕ್ಕಿಳಿಯಬೇಡ. ಅದನ್ನೂ
ಸಹ ಅತ್ಯಾಚಾರಗೈಯ್ಯಲಾಗಿದೆ (ಜೇಡರ ಬಲೆಯ ದಿಗ್ಬಂಧನ)
ದ್ವೇಷಿಸುವವರನ್ನು ಪ್ರೀತಿಸಬೇಕೆಂದಿದ್ದೇನೆ
ಅವರೂ ಯೋಗ್ಯವಾದವರು ಸಿಗುತ್ತಿಲ್ಲ
ಹಾರುತ್ತೇವೆ ಎಂದು ರೆಕ್ಕೆ ಕತ್ತರಿಸಬೇಡಿ
ಈಗ ಮೈಮುರಿದು ಈಜುವುದನ್ನೂ ಕಲಿತಿದ್ದೇನೆ
ಮುಂತಾದ ಅದ್ಭುತ ಸಾಲುಗಳನ್ನು ತಮ್ಮ ಚೊಚ್ಚಲ ಕೃತಿಯಲ್ಲಿ ಅಂದ-ಚೆಂದದಿಂದ ನೇಯ್ದಿದ್ದಾರೆ. ಒಟ್ಟಿನಲ್ಲಿ, ಈ ಕೃತಿಯು ಭರವಸೆಯನ್ನು ಹುಟ್ಟಿಸುತ್ತದೆ. ಅರ್ಥಪೂರ್ಣ ರಚನೆಗಳ ಮೂಲಕ ಉತ್ತಮ ಗುಣಮಟ್ಟದ ಫಸಲನ್ನು ತೆಗೆದಿದ್ದಾರೆ ಎಂದು ಹೇಳಬಹುದು.
-Dattareye Hegde 16,4,2025
.........................

Comments
Post a Comment