ಜೀವಭಾವಗಳ ಸಂಗಮದ
‘ಅರ್ಥವಾಗದವರು’
‘ಅರ್ಥವಾಗದವರು’ ಇದು ಬೆಳ್ತಂಗಡಿಯಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತರಾದ ಲಲಿತಾ ಮುದ್ರಾಡಿಯವರ ಚೊಚ್ಚಲ ಕೃತಿ. ತಂದೆ ದಿವಂಗತ ಅಂಬಾತನಯ ಮುದ್ರಾಡಿ (ಸಾಹಿತಿ, ಯಕ್ಷಗಾನ ವಿದ್ವಾಂಸ, ಹರಿದಾಸ) ಅವರ ನೆರಳಲ್ಲಿ ಬೆಳೆದು ಸಾಹಿತ್ಯ, ಕಲೆ, ಭಾಷೆ ಮುಂತಾದವುಗಳಲ್ಲಿ ಆಸಕ್ತರಾಗಿ ಈಗ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕವನ ಸಂಕಲನದಲ್ಲಿ ೪೫ ಸುಂದರವಾದ ಕವನಗಳ ಗೊನೆಯನ್ನು ನಮ್ಮ ಮುಂದಿರಿಸಿದ್ದಾರೆ. ಇಲ್ಲಿನ ಕವನಗಳು ವೈವಿಧ್ಯಮಯವಾಗಿದ್ದರೂ ಬದುಕು ಕಟ್ಟಿಕೊಳ್ಳುವ ಕೌಶಲಗಳತ್ತ ಹೆಚ್ಚಿನ ಬೆಳಕನ್ನು ಇವು ಚೆಲ್ಲುತ್ತಿವೆ.
ಕವಯತ್ರಿಯ ಭಾಷಾ ಕೌಶಲ ಮೆಚ್ಚುವಂತದ್ದು. ಸಾಹಿತ್ಯಿಕವಾಗಿರುವ ಎಲ್ಲಾ ಕವನಗಳನ್ನೂ ಆಡಂಬರವಿಲ್ಲದೆ ಸರಳ ಶಬ್ದಗಳ ಮೂಲಕ ಪೋಣಿಸಿದ್ದಾರೆ. ಕವಿತೆಗೆ ವಿಷಯವನ್ನು ಕೂಡ ನಮ್ಮ ಸುತ್ತಮುತ್ತಲಿನವನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಇದರಿಂದ ಕವನದ ಒಳಹೂರಣ ನಮಗೆ ಆಪ್ತವಾಗುತ್ತದೆ. ಅವರ ವೃತ್ತಿ ಅನುಭವದ ಆಂತರ್ಯಭಾವ ಕವನಗಳಲ್ಲಿ ವ್ಯಕ್ತವಾಗಿದೆ. ಶೈಕ್ಷಣಿಕ ಸೇವಾಬದುಕು ಮತ್ತು ಜೀವನಾನುಭವ ಒಂದಕ್ಕೊಂದು ಬೆರೆತು ಪಕ್ವವಾದ ಬಳಿಕ ಹೊರಹೊಮ್ಮುವ ಅಭಿವ್ಯಕ್ತಿ ಹೆಚ್ಚು ಸುಗಂಧಮಯವಾಗಿರುತ್ತದೆ, ಸಮೃದ್ಧವಾಗಿರುತ್ತದೆ. ಇದರ ಪರಿಣಾಮ ಅತ್ಯಂತ ನವಿರು ಭಾಷೆಯ ಶ್ರೀಮಂತ ಬರವಣಿಗೆಯ ಕವನ ಸಂಕಲನವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಹೊತ್ತಗೆಯ ಹೆಸರು ‘ಅರ್ಥವಾಗದವರು’ ಎಂದಿದ್ದರೂ ಓದುಗರಿಗೆ ಸುಲಭದಲ್ಲಿ ಅರ್ಥವಾಗುವಂತಿದೆ.
ಕೃತಿಯಲ್ಲಿ ಮೊದಲ ಕವನ ‘ಗುರು ನಮನ’ದೊಂದಿಗೆ ಆರಂಭವಾಗುತ್ತದೆ. ಇದರಲ್ಲಿ ಗುರುವಿನ ಮಹತ್ವವನ್ನು ಹೀಗೆ ವಿವರಿಸಿದ್ದಾರೆ.
ಗುರುಸ್ಥಾನವೆಂಬುದು ಬರಿಯ ವೃತ್ತಿಯು ಅಲ್ಲ
ಅದನರಿತು ನಡೆದಲ್ಲಿ ಯಶವು ತಪ್ಪುವುದಿಲ್ಲ
ಸಾಧಕನೆ ಶೋಧಕನು, ಶೋಧಕನೆ ಬೋಧಕನು
ಎಂದರಿತು ನಡೆದಾಗ ಜಗಕೆ ಬೆಳಕಾಗುವನು.
ಎನ್ನುತ್ತ ಹರಿ ಮತ್ತು ಗುರುವಿಗೆ ಕೈಮುಗಿದು ನಮಿಸಬೇಕೆನ್ನುತ್ತಾರೆ.
‘ಅರ್ಥವಾಗದವರು’ ಈ ಸಂಕಲನದ ಮಹತ್ವದ ಕವನ. ಅದನ್ನೇ ಕೃತಿಗೆ ಹೆಸರಿಸಲಾಗಿದೆ. ಇದು ರಾಜಕಾರಣಿಗಳ ಭ್ರಷ್ಟತೆಯನ್ನು ವಿವಿಧ ಮುಖಗಳಲ್ಲಿ ತೋರಿಸುತ್ತದೆ. ರಾಜಕೀಯದವರು ಮತದಾರರಿಂದ ಮತ ಪಡೆದ ನಂತರ ಹೇಗೆ ಅದೃಶ್ಯರಾಗುತ್ತಾರೆ ಅಥವಾ ಜನರ ಗೋಳಿಗೆ ಸ್ಪಂದಿಸದೆ, ಪಕ್ಷನಿಷ್ಠೆ ಇಲ್ಲದೆ, ಪ್ರಜಾತಂತ್ರಕ್ಕೆ ಕಳಂಕ ತರುವ ರೀತಿಯನ್ನು ಎಳೆಎಳೆಯಾಗಿ ಚಿತ್ರ್ರಿಸಿ, ಇದರ ಬಗ್ಗೆ ಆಕ್ರೋಶದಿಂದ ಅಭಿವ್ಯಕ್ತಿಸುತ್ತಾರೆ. ಅವರಿಗೆ ತಮ್ಮ ಹಿತವೇ ಮುಖ್ಯವಾಗುತ್ತದೆ. ಅಧಿಕಾರ ಲಾಲಸೆ ಹುಟ್ಟುವುದರಿಂದ ಜನರ ಹಿತ ಬಯಸುವರೆನ್ನುವುದು ಬರಿ ಕನಸು ಮಾತ್ರ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಣ, ಆಸ್ತಿ ಗಳಿಸುವುದು, ಕುಟುಂಬ ರಾಜಕೀಯ ಮಾಡುವುದು, ಪಕ್ಷಾಂತರ ಮೊದಲಾದ ಕೃತ್ಯಗಳಿಂದ ಹೇಗೆ ಜನರನ್ನು ದಾರಿ ತಪ್ಪಿಸುತ್ತಾರೆ ಎನ್ನುವುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.
ಕೃತಿಯಲ್ಲಿ ಗಮನ ಸೆಳೆಯುವ ಇನ್ನೊಂದು ಕವನ ಎಂದರೆ ‘ಮಹಾತ್ಮಾ’ ಮಹಾತ್ಮಾ ಗಾಂಧಿಯನ್ನು ಇಂದಿನ ಪರಿಸ್ಥಿತಿಯಲ್ಲಿ ವಿಮರ್ಶಿಸುತ್ತಾರೆ. ಗಾಂಧಿ ಅನುಯಾಯಿಗಳೆಂದುಕೊಂಡವರು ಮಾಡುತ್ತಿರುವ ಆಸ್ತಿ ಸಂಪಾದನೆ, ಸ್ವಹಿತಾಸಕ್ತಿ, ಅಧಿಕಾರದಾಸೆಯನ್ನು ಬಿಚ್ಚಿಡುತ್ತಾರೆ. ಮಹಾತ್ಮಾ ಗಾಂಧಿ ಇಂದು ಬದುಕುಳಿದಿದ್ದರೆ ಇದನ್ನು ನೋಡುತ್ತಾ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸುವ ಕವಯತ್ರಿ,
ಕಾಣದ ಲೋಕದಲ್ಲಿದ್ದರೂ ಗ್ರಹಿಸಲು ಸಮರ್ಥ ನೀನು
ಕನಸಲ್ಲಾದರೂ ಬಂದು ಎಚ್ಚರಿಸಲಾರೆಯಾ ಅವರನ್ನು
ಅಷ್ಟಾದರೂ ಮಾಡು ಮಹಾತ್ಮಾ
ಎಂದು ಕೋರುತ್ತಾರೆ.
‘ಪ್ರೀತಿ’ ಎನ್ನುವ ಕವನದಲ್ಲಿ ಪ್ರೀತಿ ಒಂದು ದಿವ್ಯ ಔಷಧಿ. ಮನದ ದುಗುಡ ನಿವಾರಿಸುವ ಮತ್ತು ನೊಂದ ಬಾಳಿಗೆ ಬೆಳಕು ನೀಡುವ ಗುಣವನ್ನು ಹೊಂದಿದೆ ಎನ್ನುತ್ತ ‘ಸಾಮರಸ್ಯ’ದಲ್ಲಿ ಕೂಡಿ ಬಾಳುವುದನ್ನು ಎಲ್ಲಿ ಹುಡುಕಲಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಕಣ್ಮುಂದೆ ಇರುವ ತರುಲತೆಗಳಲ್ಲಿ ಸಹಮತದ ಬದುಕನ್ನು ಕಾಣಬಹುದು ಎನ್ನುತ್ತಾರೆ. ‘ಊಟ -ನೋಟ’ ಎಂಬ ಕವನದಲ್ಲಿ ಅಂತರಂಗದ ಚೆಲುವು ಶಾಶ್ವತ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಮುಖಕ್ಕೆ ಬಣ್ಣ ಹಚ್ಚಿಕೊಂಡರೆ ಅಂದ ಹೆಚ್ಚಿಸಬಹುದು ಎನ್ನುವುದು ಭ್ರಮೆ. ಬಣ್ಣ ಮಾಸಿದ ಮೇಲೆ ಚೆಲುವು ಅಲ್ಲಿರದು ಎನ್ನುತ್ತಾರೆ.
ಕವನ ಸಂಕಲನದಲ್ಲಿ ಮಳೆ, ಮಾವು, ಮಣ್ಣು, ಕಲ್ಪವೃಕ್ಷ, ಗಾಳಿ, ನೀರು, ಅಡಕೆ, ಗೇರುಬೀಜ, ಬಾಳೆ, ಹೂವು, ಅತ್ತಿ ಮರ, ಮೊದಲಾದವುಗಳ ಕವನವಿದೆ. ಇವು ಜೀವ ಮತ್ತು ಮನುಷ್ಯನೊಂದಿಗಿನ ಸಂಬಂಧವನ್ನು ಒತ್ತಿ ಹೇಳುತ್ತಲೇ, ಪ್ರಕೃತಿ ನೀಡಿದ ವಿವಿಧ ಫಲವಸ್ತುಗಳ ಆಕೃತಿ, ಬಣ್ಣ, ಗಾತ್ರ, ಮತ್ತು ಅವು ಸಾರುವ ಸಂದೇಶವನ್ನು ಇಲ್ಲಿ ನಿರೂಪಿಸಿದ್ದಾರೆ. ಮನುಜಕಲಕ್ಕೆ ಅವುಗಳಿಂದಾಗುತ್ತಿರುವ ಉಪಯೋಗವನ್ನು ಸೊಗಸಾಗಿ ವಿವರಿಸಿದ್ದಾರೆ. ಇವುಗಳನ್ನು ಓದುವಾಗ ನೀನಾರಿಗಾದೆಯೋ ಎಲೆ ಮಾನವ ಎನ್ನುವ ಮಾತು ನೆನೆಪಿಗೆ ಬರುತ್ತದೆ.
‘ಮಳೆ’ ಎಂಬ ಮೌಲ್ಯಯುತ ಕವನ ಪರಿಸರದ ಕುರಿತಾದದ್ದು. ಮಳೆ ಏಕೆ ವಿಳಂಬವಾಗುತ್ತಿದೆ, ನೀರಿನ ಕೊರತೆ ಏಕೆ ಉಂಟಾಗುತ್ತಿದೆ, ಮರಗಿಡ ಕಡಿದು ಯಾವ ರೀತಿ ಕಾಂಕ್ರಿಟೀಕರಣ ಮಾಡುತ್ತಿದ್ದೇವೆ, ಸಸ್ಯರಾಶಿ ನುಂಗಿ ಹಾಕಿ ರಸ್ತೆ, ಹೆದ್ದಾರಿ ನಿರ್ಮಿಸುತ್ತಿರುವುದು, ಇದಕ್ಕಾಗಿ ಗುಡ್ಡ ಬಲಿಕೊಡುತ್ತಿರುವುದು, ಮಳೆಗಾಲದಲ್ಲಿ ಗುಡ್ಡ ಕುಸಿಯುವುದನ್ನು ವಿಷಾದದಿಂದ ಹೇಳುತ್ತಾರೆ. ಈ ಮೂಲಕ ನಮ್ಮ ಸ್ವಯಂಕೃತ ಅಪರಾಧದಿಂದ ಪರಿಸರ ನಾಶ ಮಾಡಿ, ನಮಗೆ ನಾವೇ ಅನಾಹುತ ಸೃಷ್ಟಿಸಿಕೊಳ್ಳುತ್ತಿರುವುದನ್ನು ಹೇಳುತ್ತ
ಪ್ರಕೃತಿಯ ಕೊಡುಗೆಯದು
ನಮಗೆ ಮೀಸಲು ಅಲ್ಲ
ನಮ್ಮ ಮುಂದಿನ ಜನಕೆ
ಕಾದಿರಿಸಬೇಕು
ಎಂಬ ಸದಾಶಯ ಇರುವುದನ್ನು ನೆನಪಿಸುತ್ತಾರೆ.
‘ಸ್ಮರಣೆ’ ಎನ್ನುವ ಕವನದಲ್ಲಿ ತನ್ನ ಪುತ್ರ ವಿಯೋಗ ದಾಖಲಿಸುತ್ತ್ತ, ನಿನ್ನ ಆತ್ಮಕ್ಕೆ ಸದ್ಗತಿಯ ಕೋರುವ ಸ್ಥಿತಿ ನನಗೊದಗಿ ಬಂದಿದೆ ಎಂದು ದುಃಖಿಸುತ್ತಾರೆ. ‘ಅಪ್ಪ’ ಕವನದಲ್ಲಿ, ತನ್ನ ತಂದೆಯ ಪ್ರೀತಿ, ಅವರ ಸಾಹಿತ್ಯ, ಪ್ರೇಮ, ಬರವಣಿಗೆ, ಕೆಲಸದಲ್ಲಿನ ಏಕತಾನತೆ, ಗುರು-ಹಿರಿಯರಲ್ಲಿ ಅವರಿಗಿದ್ದ ಭಕ್ತಿ, ಸಾಧು-ಸಂತರ ಬಗೆಗಿದ್ದ ಗೌರವ, ಕಿರಿಯರನ್ನು ಮುದ್ದಿಸುವುದನ್ನು ವರ್ಣಿಸುತ್ತಾ, ಅವರಲ್ಲಿ ನಿತ್ಯ ನಿರ್ಮಲ ಭಾವವಿತ್ತು, ಶ್ರದ್ಧೆ, ಪ್ರತಿರೂಪವಾಗಿದ್ದರು. ಮೋಸ- ಕಪಟವನರಿಯದವರಾಗಿದ್ದರು ಎಂದು ಸ್ಮರಿಸುತ್ತಾರೆ.
‘ಬದುಕು ಹೇಗಿರಬೇಕು’ ಕವನದಲ್ಲಿ ಸದ್ಗುಣವಿದ್ದು ಕಾಯಕ ಮತ್ತು ಬಯಕೆಯ ಅರಿವಿದ್ದರೆ ಬದುಕು ಆನಂದಮಯವಾಗುತ್ತದೆ ಎನ್ನುತ್ತಾರೆ.
ಹೀಗೆ ಈ ಕೃತಿಯಲ್ಲಿನ ಬಹುತೇಕ ಕವನಗಳು ಮನುಷ್ಯನಿಗೆ ಪಾಠವನ್ನು ಹೇಳುವಂತವಾಗಿವೆ. ಮನುಷ್ಯ ಮತ್ತು ಪ್ರಕೃತಿಯ ಬದುಕು ಹೇಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ ಎನ್ನುವುದನ್ನು ಮನೋಜ್ಞವಾಗಿ ವಿವರಿಸುತ್ತಲೇ ಹೇಗೆ ಬದುಕಬೇಕು, ಬದುಕುವ ಜೊತೆಗೆ ಬಾಳುವ ಪರಿ, ಜೀವನದಲ್ಲಿ ಸಂಬಂಧಗಳು ಹೇಗಿರಬೇಕು, ನಿಸರ್ಗದ ಕೊಡುಗೆಯನ್ನು ವಿವೇಚನೆಯಿಂದ ಬಳಸುವ ಅವಶ್ಯಕತೆ ಮೊದಲಾದವುಗಳ ಕುರಿತು ಸೂಕ್ಷ್ಮವಾಗಿ, ಸೊಗಸಾಗಿ ಅನಾವರಣಗೊಳಿಸಿದ್ದಾರೆ. ತಮ್ಮ ಮೊದಲ ಕವನ ಸಂಕಲನದಲ್ಲೇ ಉತ್ಕೃಷ್ಟ, ಉತ್ತಮ, ಸಶಕ್ತ ಹಾಗೂ ಅರ್ಥಗರ್ಭಿತ ಕವಿತೆಗಳನ್ನು ನೇಯುವ ಮೂಲಕ ಮುಂದೊಂದು ದಿನ ಈ ಕ್ಷೇತ್ರದಲ್ಲಿ ತಾನು ಬಲಿಷ್ಠವಾಗಿ ನಿಲ್ಲುವ ಸೂಚನೆ ಕೊಟ್ಟಿದ್ದಾರೆ.
Published by Dattareya Hegde on April-16,2025
..........................

Comments
Post a Comment