ಅಂತರಂಗದ ದೀಪಗಳಂತಿರುವ
‘ಪೂರ್ಣ ಕುಂಭ’
ಸಮಾಜದಲ್ಲಿ ಪರಂಪರಾನುಗತವಾಗಿ ಬೇರೂರಿರುವ ಅರ್ಥವಿಲ್ಲದ ಆಚರಣೆಗಳನ್ನು ಕಾಂತಿಯಿಂದ ಪಡಿಮೂಡಿಸುತ್ತಾ ಕ್ರಾಂತಿಯ ಕಡೆಗೂ ಅಡಿ ಇಡುವ ಚೌಪದಿಗಳ ಸಂಗ್ರಹವೇ ‘ಪೂರ್ಣ ಕುಂಭ’. ಹಿರಿಯ ಲೇಖಕಿ ಪ್ರೇಮಾ ಭಟ್ ಅವರ ೫೦೧ ಚೌಪದಿಗಳುಳ್ಳ ಈ ಕೃತಿ ಓದುಗರನ್ನು ಪೂರ್ಣತ್ವದ ಕಡೆಗೆ ಕೊಂಡೊಯ್ಯುವಂತದ್ದು. ನಿಜವಾದ ಮನುಷ್ಯತ್ವದ ಕಡೆ ಮುಖ ಮಾಡಿ ನಮ್ಮನ್ನು ನಿಲ್ಲಿಸಿ ಬಿಡುವ, ಚುರುಕು ಮುಟ್ಟಿಸುವ ಹನಿಗಳಿಂದ ಲೇಖಕಿ ಶಾಕ್ ಟ್ರೀಟ್ಮೆಂಟ್ ಕೊಡುತ್ತಾರೆ. ಪ್ರತಿ ಚೌಪದಿಗಳ ಕೊನೆಗೆ ‘ಪ್ರೇಮಿ’ ಎಂಬ ಕಾವ್ಯನಾಮವನ್ನು ಇಲ್ಲಿ ಕಾಣಬಹುದು.
ಇಲ್ಲಿನ ಎಲ್ಲಾ ರಚನೆಗಳು ಸರಳವಾದ, ಎಂತಹವರಿಗೂ ಅರ್ಥವಾಗುವ, ಸಾಮಾಜಿಕ ವಿಷಯಗಳ ಮುಕ್ತವಾದ ಬಿಡಿ ಚೌಪದಿಗಳಾಗಿವೆ. ಎಲ್ಲಿದ್ದರೂ ಬೇಕು ಎಲ್ಲಾ ಕಾಲಕ್ಕೂ ಬೇಕು ಇಲ್ಲಿನ ಸುವಿಚಾರಗಳು. ಮಾನವನ ಬದುಕಿಗೆ ಆಧಾರ ಸ್ತಂಭಗಳು. ಇಲ್ಲಿನ ಒಂದೊಂದು ಚೌಪದಿಯನ್ನೂ ಸಾವಕಾಶವಾಗಿ ಕುಳಿತು ಬಿಡಿಬಿಡಿಯಾಗಿ ಓದಿ ಚಪ್ಪರಿಸಿದಾಗ ಮಾತ್ರ ಅದರ ಸ್ವಾದವನ್ನು ಪಡೆಯಲು ಸಾಧ್ಯ. ಕೃತಿಯನ್ನು ಪೂರ್ಣವಾಗಿ ಓದಿದಾಗ ರುಚಿಕರ ಚೌಪದಿಯ ಕಾಳು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ.
ನಾವು ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನನ್ನು ಕಂಡರೂ ಬಾಹ್ಯಕಣ್ಣಿನಿಂದ ವೀಕ್ಷಿಸಿದರೆ ಸಾಲದು. ಅಂತರಂಗದ ಕಣ್ಣನ್ನು ತೆರೆದು ನೋಡಿದರೆ ಮಾತ್ರ ಸತ್ಯ ದರ್ಶನವಾಗಲು ಸಾಧ್ಯ. ಆದ್ದರಿಂದ ಈ ಕೃತಿಯನ್ನು ಬಾಹ್ಯರೂಪದಿಂದ ಮೇಲ್ನೋಟಕ್ಕೆ ಕಣ್ಣಾಡಿಸುವುದರಿಂದ ಪ್ರಯೋಜನವಿಲ್ಲ. ಅಂತರಂಗದ ಪುಟದಲ್ಲಿರುವ ಸಂಗತಿಗಳನ್ನು ಅವಲೋಕನ ಮಾಡಿದಾಗ ಮಾತ್ರ ನಮಗೆ ಪಂಚಾಮೃತ ಲಭ್ಯವಾಗುತ್ತದೆ. ಅಂತರಂಗದ ದೀಪಗಳು ಮತ್ತು ಅವುಗಳ ಕಿರಣಗಳು ಕಂಡುಬರುತ್ತವೆ ಇಂತಹ ಅಮೃತ ಮಂಥನ ‘ಪೂರ್ಣ ಕುಂಭs’ದಲ್ಲಿದೆ.
ಪ್ರತಿಯೊಂದು ಚೌಪದವು ಒಂದೊಂದು ನೀತಿ ಬೋಧೆಯನ್ನು ನೀಡುವಂತದ್ದು. ಸೋಲು, ಗೆಲುವು, ಸಂಬಂಧ, ಪ್ರೇಮ, ಪ್ರೀತಿ, ಬದುಕು, ಭೂಮಿ, ಆಸೆ, ಹೆಣ್ಣು, ಪ್ರಶಸ್ತಿ, ವಿಜ್ಞಾನ, ಪ್ರತಿಭೆ, ಋಣ, ಭ್ರಷ್ಟತನ, ಹಣಗಳಿಸುವುದು, ಪಶುಹಿಂಸೆ, ಶಾಂತಿ, ಕೋಮುವಾದ, ದ್ವೇಷ, ಸಾವು, ಬದುಕು... ಹೀಗೆ ನೂರಾರು ವಿಚಾರಗಳ ಬಗ್ಗೆ ಇಲ್ಲಿ ಬರೆದಿದ್ದಾರೆ.
ಕೆಲವು ಚೌಪದಿಗಳ ಸಾಲನ್ನು ಗಮನಿಸಿ:
ಸೋತಾಗ ಹೆದರದೆ ಎದುರಿಸಿ ಬಾಳು/ ಸೋಲು ಗೆಲುವುಗಳು ಸೋದರ ಸಂಬಂಧಿಗಳು/ (೬೬)
ದೇವನೆಲ್ಲಿಹನು ಎಂಬರು ಕೆಲವರು/ ಆತ್ಮ ಶುದ್ಧಿಯಲ್ಲಿ ಅಡಗಿಹನು/ (೧೦೮)
ಹೊಳೆದಾಟಿ ದಡ ಸೇರಬಹುದು ಅಂಬಿಗನಿರಲು/ ಬದುಕ ಗಡಿ ದಾಟಿ ಬರುವುದು ಒಂದೇ ದಿನ/ (೧೪೪).
ಹೀಗೆ ಮೆದುಳಿಗೆ ಗ್ರಾಸ ಒದಗಿಸುವ, ನಮ್ಮ ಮನಸ್ಸನ್ನು ರಿಪೇರಿಗೊಳಿಸಿಕೊಳ್ಳಬಲ್ಲ, ಸತ್ಯದರ್ಶನ ಮಾಡಿಸಬಲ್ಲ ಸಾಲುಗಳಿವು.
ಕಣ್ಣು ತೆರೆಸಬಲ್ಲ ಕೆಲವು ಚೌಪದಿಗಳು ಹೀಗಿವೆ.
ಅಚ್ಚರಿಯ ಸಂಗತಿಗಳು ಅಡಗಿವೆ ಪ್ರಕೃತಿಯೊಳಗೆ/ ನಿಗೂಢವಾದವನ್ನು ಕೆದಕಿ ನೋಡುವ ಧೈರ್ಯ ಬೇಕು/(೩೫೮) ಎನ್ನುತ್ತಾರೆ. ಕೊಳವೆ ಬಾವಿಗಳಿಂದಾಗಿ ಬತ್ತುತಿದೆ ಅಂತರ್ಜಲ/ ಕೊಳಕು ನಾರುತಿದೆ ಜಗವೆಲ್ಲ ಇಂದು ಮಲಿನತೆ ತುಂಬಿ/ (೩). ಅರ್ಥಶಾಸ್ತ್ರವನ್ನು ವ್ಯರ್ಥವಾಗಿ ಕೊರೆದರೇನು ಬಂತು ಫಲ/ ತತ್ವತಶಾಸ್ತ್ರವನು ಮೊದಲರಿತುಕೊಂಡರೆ ಲೇಸು/ (೫). ಮಣ್ಣು, ಹೆಣ್ಣು ಎರಡೂ ಇದ್ದರೆ ಮಾತ್ರ ಬದುಕು, ಇದನರಿಯದೇ ಹೋದರೆ ಹೊಣೆಗೇಡಿಯಾಗುವೆ ನೀನು/ (೪೫). ಸಾವಿನ ಬಗ್ಗೆ ಇರುವ ಒಂದು ಚೌಪದಿ- ಬೆನ್ನಲಿ ಸಾವಕಟ್ಟಿಕೊಂಡು ಅಡ್ಡಾಡುವಾತ ನೀನು/ ಕಾಯುವವರು ಬೇಕೆಂಬ ಅಳಲೇಕೋ ಕಾಣೆ/ ಕಾಯಬಹುದು ಕಳ್ಳಕಾಕರಿಂದಲ್ಲದೆ ಸಾವಿನಿಂದಲ್ಲ/ ಕಾಯಬಹುದು ಮನೆ ಬಾಗಿಲನ್ನು ಕಾವಲಿದ್ದು, (೪೨). ಇಂದಿನ ತಂದೆ ತಾಯಿಯನ್ನು ಯುವಜನತೆ ನಿರ್ಲಕ್ಷಿಸಿ ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವ ಬಗ್ಗೆ ಹೀಗೆನ್ನುತ್ತಾರೆ. ವೃದ್ಧರ ಬಗ್ಗೆ ಕರುಣೆ ಇರಬೇಕು ಎಲ್ಲರಿಗೂ/ ಮುಂದೊಂದು ದಿನ ವೃದ್ಧರಾಗುವವರೇ ಎಲ್ಲ/ ವೃದ್ಧಾಶ್ರಮವ ಕಟ್ಟಿ ನೀನಲ್ಲಿಟ್ಟರೆ ವೃದ್ಧರನು/ ಮುಂದೊಂದು ದಿನ ನಿನಗೂ ಅದೇ ಗತಿ ಬಂದೀತು/(೫೬).
ಇಂದು ಜಗತ್ತಿನಾದ್ಯಂತ ಹೆಚ್ಚುತ್ತಿರುವ ಕೋಮುವಾದದ ಬಗ್ಗೆ ಲೇಖಕಿ ಹೇಳಿರುವ ಒಂದು ಚಂದದ ಚೌಪದಿ - ದ್ವೇಷದೋಷಗಳು ಪಾಶವಾಗಿ ಪರಿಣಮಿಸಬಹುದು/ ಮೋಹದಿಂದನು ತ್ವರೆ ಮಾಡಿ ಗೆದ್ದುಕೊಳ್ಳೋ/ ಎಲ್ಲೆಲ್ಲೂ ಹೊಗೆಯಾಡುತಿಹುದು ದ್ವೇಷದೋಷಗಳಿಂದು/ ಕೋಮುವಾದಿಗಳು ಹುಟ್ಟು ಹಾಕುತಿಹರು ದ್ವೇಷ ಭಾವ/ (೮೨). ಇದಕ್ಕೆ ಪ್ರತಿ ಉತ್ತರವಾಗಿ ನಾವು ಶಾಂತಿಯನ್ನು ಅರಸುವ ಬಗ್ಗೆ ಹೀಗೆ ಹೇಳುತ್ತಾರೆ -ಶಾಂತಿ ಕಾಡು ಮೇಡುಗಳನು ಅಲೆದರೆ ಸಿಗುವಂತದ್ದಲ್ಲ/ ಮನದಾಳದಲ್ಲಿರುವ ಧೀ ಶಕ್ತಿಯನು ಅರಸುತ್ತ ಹೊರಡು/(೯೩)ಎನ್ನುತ್ತಾರೆ. ಭ್ರಷ್ಟತನದ ಬಗ್ಗೆ - ಬಂದದ್ದು ಬಂದಂತೆ ಕರಗುವುದೆಂದರೇನು?/ ಕರಗಿದ್ದು ನಿನ್ನ ಭ್ರಷ್ಟತನದ ಗಳಿಕೆಯ ಹಣ/ ಕರಗದೆಂದು ನಿನ್ನ ನಿಷ್ಠೆಯ ದುಡಿಮೆಯ ಫಲ/ ಕೈ ಮಲಿನವಾದರೆ ಕಳೆದು ಹೋಗುವುದೆಲ್ಲ/ (೧೦೧) ಹೆಣ್ಣು ಹುಟ್ಟಿತೆಂದು ಬೇಸರಿಸುವವರಿಗೆ- ಹುಟ್ಟಿದ್ದು ಹೆಣ್ಣೆಂದು ಹಲುಬದಿರು/ಅವಳುದ್ದ ಹಣತೆತ್ತರೂ ಸಿಗಳು ನಿನಗೆ ಭಾಗ್ಯಲಕ್ಷ್ಮಿ/ ಅವಳೆದೆಯಲ್ಲಿ ಹರಿಯುವುದು ಅಮೃತ ಜಲ/ ಕಷ್ಟ ಬಂದಾಗ ಕರೆಯದೆ ಬರುವಳು ನಿನ್ನ ಸೇವೆಗೆ/ (೨೧೬).
ಕನ್ನಡದ ಬಗ್ಗೆ ಹೇಳುತ್ತಾ, ಕನ್ನಡಕೆ ಮನ್ನಣೆ ಬಂದುದೇ ಕವಿಪುಂಗವರಿಂದ/ ನೆನೆ ನೀನೊಮ್ಮ ಕುವೆಂಪು ವಿರಚಿತ ರಾಮಾಯಣ/ಓದು ಮಂಕುತಿಮ್ಮನ ಕಗ್ಗವನೊಮ್ಮೆ ಬೇಕಿಲ್ಲ ಗೀತೆ ಪಾಠ/ (೩೮೯). ಅಕ್ಕಪಕ್ಕದ ಮನೆಯವರು ಹೇಗಿರಬೇಕೆನ್ನುವುದಕ್ಕೊಂದು ಚೌಪದಿ- ಆಚೆಮನೆ ಈಚೆಮನೆಯವರಲಿ ವಿಶ್ವ್ವಾಸ ಉಳಿಯಬೇಕಾದಲ್ಲಿ/ ಉಸಿರೆತ್ತದೆ ಇರು ನೀನು, ಕಂಡ ಸತ್ಯವನು ಮರೆಮಾಚುತ/ಹೆಚ್ಚು ಹಚ್ಚಿಕೊಂಡರೆ ಹಳಸುವುದು ಸಂಬಂಧ/ ಅಜೀರ್ಣಕೆ ದಾರಿಯೂ ಆದೀತು/. ಕೃಷ್ಣ ಬೆಣ್ಣೆ ಕದ್ದ ವಿಷಯ ಎಲ್ಲರಿಗೂ ಗೊತ್ತು. ಅದನ್ನೇ ಇಲ್ಲಿ ಹೇಳಿದ ಧಾಟಿ ಹೇಗಿದೆ ನೋಡಿ- ಬೆಣ್ಣೆ ಕದಿಯುತ್ತಿದ್ದಾನೆಂದು ದೂರು ಹೊತ್ತ ಕೃಷ್ಣ/ ಕದ್ದ ಬೆಣ್ಣೆಯ ಒಬ್ಬನೇ ಕೂತು ಉಣಲಿಲ್ಲ/ ಕೊಟ್ಟು ಗೆಳೆಯರಿಗೆ ಉಂಡ ಕೃಷ್ಣ /ಜಗತ್ತಿಗೆ ಕಲಿಸಿದ ಪಾಠ ಕೊಟ್ಟು ಉಂಬುವದ ಕಲಿ/. ಎಷ್ಟೊಂದು ಅರ್ಥಗರ್ಭಿತದ ಮಾತನ್ನೂ ಚುಟುಕಲ್ಲಿ ಹೇಳುವುದು ಒಂದು ಕಲೆ. ನಾಲ್ಕೇ ಸಾಲಿನಲ್ಲಿ ಕೊಡುವ ಸಂದೇಶದ ಇಂತಹ ಚೌಪದಿಗಳು ಮನಸೆಳೆಯುತ್ತವೆ. ಇಡೀ ಕೃತಿ ಇದೇ ತರಹದ ಜೀವನಕ್ಕೆ ಬೆಳಕಾಗುವ ನುಡಿಮುತ್ತುಗಳನ್ನು ಪೋಣಿಸಿದ ಕೃತಿ ಇದಾಗಿದೆ.
ಇಂದಿನ ಸಮಾಜದ ಹಲವು ರೋಗಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳು ಇವೆಲ್ಲ. ನಿಜಕ್ಕ್ಕೂ ಸಂಪೂರ್ಣ ಕೃತಿಯನ್ನು ಓದಿದಾಗ ಔಷಧ ಇಲ್ಲದೆ ಇರುವ ಸಾಮಾಜಿಕ ರೋಗಗಳನ್ನೂ ನಾವು ಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಗುಣಪಡಿಸಬಹುದು ಎನ್ನುವುದನ್ನು ಲೇಖಕಿ ಇಲ್ಲಿ ತೋರಿಸಿಕೊಟ್ಟಿದ್ದಾರೆ.
- ದತ್ತಾತ್ರೇಯ ಹೆಗಡೆ- ೯೪೮೧೦೯೧೦೩೧published on 26-4.2025
..........................

Comments
Post a Comment