ಸಮೃದ್ಧ ವಿಷಯಗಳ ಜೀವಾಳ 
‘ಕತೆ ಡಬ್ಬಿ’


ರಂಜನಿ ರಾಘವನ್  ಹೆಸರು ಕೇಳದವರು ವಿರಾಳಾತಿವಿರಳ.  ’ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ  ಜನಮನದಲ್ಲಿ ನೆಲೆ ನಿಂತ   ರಂಜನಿ  ‘ಕನ್ನಡತಿ’ ಧಾರಾವಾಹಿ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿದವರು.  ‘ಕತೆ ಡಬ್ಬಿ’ ರಂಜನಿ ಅವರ ಚೊಚ್ಚಲ ಕೃತಿ. ಹೆಸರೇ ಹೇಳುವಂತೆ ಮನ ಸೂರೆಗೊಳ್ಳುವ  ಕತೆಗಳಿಂದಲೇ ಡಬ್ಬಿ ತುಂಬಿದೆ. ಇದರಲ್ಲಿ  ೧೪ ಅತ್ಯದ್ಭುತ ಕತೆಗಳಿವೆ. ಈ ಕೃತಿಯ ಮೂಲಕ ಪುಸ್ತಕ ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಅಷ್ಟೇ ಅಲ್ಲ,  ತಿಂಡಿ ಡಬ್ಬದ ಮೇಲೆ ಮನೆಯಲ್ಲಿ ಸದಾ ಕಣ್ಣು ನೆಟ್ಟಿರುವಂತೆ,  ಕತೆ ಡಬ್ಬಿಯ ಮೇಲೆಯೂ ಈಗ ಓದುಗರ ಕಣ್ಣಿ ನೆಟ್ಟಿದೆ. ಈ ಡಬ್ಬಿಯಲ್ಲಿ  ವಿಶೇಷ ಎನ್ನಿಸುವ, ನಮ್ಮೆದುರೇ ದಿನನಿತ್ಯ ನಡೆಯುವ ಸಣ್ಣ ಘಟನೆಗಳನ್ನೇ ಸುಂದರವಾದ ಕತೆಗಳನ್ನಾಗಿ ನಾಜೂಕಾಗಿ ಹೆಣೆದಿದ್ದಾರೆ.  ಅವರು  ಕತೆ ಹೇಳುವ ಬಗೆ ಸಹೃದಯ ಓದುಗರನ್ನು ಅತ್ಯಾಪ್ತವಾಗಿ ಆಕರ್ಷಿಸುತ್ತದೆ.

 ೨೦೨೧ರಲ್ಲಿ ಪ್ರಕಟವಾದ ಈ ಕಥಾ ಸಂಕಲನ ಕೇವಲ ಮೂರೇ ಮೂರು  ವರ್ಷದಲ್ಲಿ ೨೩ ಬಾರಿ ಪ್ರಕಟಣೆ ಕಂಡಿದೆ ಎಂದರೆ ಇದರ ಆಕರ್ಷಣೆ, ಕತೆಯ ವೈಶಿಷ್ಟ್ಯ,  ಅದರ ಚುಂಬಕ ಶಕ್ತಿ, ಅವರ ಬರವಣಿಗೆಯ ಕೌಶಲ ಹೇಗಿದೆ ಎನ್ನುವುದನ್ನು ಊಹಿಸಬಹುದು. 

ಕೃತಿಯಲ್ಲಿ ಒಳ್ಳೊಳ್ಳೆಯ ಕಥೆಗಳ ಮೂಲಕ  ಓದುಗರಿಗೆ ರಸದೌತಣವನ್ನು  ಉಣಬಡಿಸಿದ್ದಾರೆ. ಅವರ ಅನುಭವಕ್ಕೆ ಬಂದ ವಿಷಯವೆಲ್ಲ ಇಲ್ಲಿ ಕಥೆಯಾಗಿ ತೆರೆದುಕೊಂಡಿದೆ. ಅಷ್ಟೊಂದು ನಾಜೂಕಾದ ಕಸೂತಿ ಮೂಲಕ ಕಥೆಗಳನ್ನು ಹೆಣೆದಿದ್ದಾರೆ. ಇಲ್ಲಿನ ಅಷ್ಟೂ  ಕಥೆಗಳು  ವಸ್ತು ವಿಷಯದಲ್ಲಿ ಭಿನ್ನವಾಗಿವೆ. ಇದು ಅವರ ಸೃಜನಶೀಲತೆಗೆ ಹಿಡಿದ ಕೈಗನ್ನಡಿ!  ಕತೆ ಕಟ್ಟುವ ಕಸುವು ಅವರಿಗೆ ಕರಗತವಾಗಿದೆ  ಎನ್ನುವಷ್ಟು ಇಲ್ಲಿನ ಕತೆಗಳು  ರಂಜನೀಯವಾಗಿವೆ.  ಇಲ್ಲಿನ ಕಥೆಗಳಲ್ಲಿ ಕುಟುಂಬಗಳ ನಡುವಿನ  ಸಂಬಂಧಗಳ ಸಂಕೀರ್ಣತೆ, ಮನುಷ್ಯನ ಸ್ವಾರ್ಥ, ಪ್ರಕೃತಿಯ ನಿರ್ಮಲತೆ, ಪ್ರಾಣಿಗಳ ಮೇಲಿನ ಪ್ರೀತಿ, ಜೀವನ ಪ್ರೀತಿ ಅನಾವರಣಗೊಂಡಿದೆ. ಸರಳ ಭಾಷೆ,  ಸರಳ ನಿರೂಪಣೆಯ ಮೂಲಕ ಅಭಿವ್ಯಕ್ತಗೊಂಡಿದೆ. ಸರಳ ಸರಾಗವಾಗಿ ಓದಿಸಿಕೊಂಡು ಹೋಗುವುದು ಈ ಕಥೆಗಳ ವೈಶಿಷ್ಟ್ಯ.

 ಅಲ್ಲಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಉಕ್ತಿಗಳನ್ನು ಹಿಡಿದಿಟ್ಟಿದ್ದಾರೆ.

 ಇಲ್ಲಿನ ಎಲ್ಲ ಕತೆಗಳ ಶೀರ್ಷಿಕೆಗಳೇಬಹು ಅರ್ಥಗರ್ಭಿತ: ಬಹು ಸುಂದರ!  ಕೆಲವು ಅರ್ಧ ಇಂಗ್ಲಿಷ್, ಅರ್ಧ ಕನ್ನಡದ ಶೀರ್ಷಿಕೆಗಳಾದರೆ,  ಇನ್ನು ಕೆಲವು ಜಾಹೀರಾತಿನ ತಲೆಬರೆಹದಂತಿವೆ.ಅವೂ ಬಹು ಆಕರ್ಷಕ! ಮತ್ತೆ ಮತ್ತೆ ಓದಬೇಕೆನ್ನುವಷ್ಟು, ಮೆಲುಕು ಹಾಕಬೇಕೆನ್ನುವಷ್ಟು  ಮೋಹಕವಾದ ತಲೆಬರೆಹಗಳು! ಈ ರೀತಿ ಎಲ್ಲ ವಿಚಾರಗಳಲ್ಲೂ ವೈಶಿಷ್ಟ್ಯವನ್ನು ಕಾಪಾಡಿಕೊಂಡ, ಆಪ್ತವೆನಿಸುವ ಕೃತಿಯಿದು.    

ಮೊದಲ ಕಥೆ ‘ಕ್ಯಾಬ್ ವಿ ಮೆಟ್’ ನಲ್ಲಿ  ಒಂದೇ ರೀತಿಯ ಕಷ ನಷ್ಟ ಅನುಭವಿಸಿದ ಇಬ್ಬರು ಅಪರಿಚಿತರು ಹೇಗೆ ಆತ್ಮೀಯರಾಗುತ್ತಾರೆ, ಇಬ್ಬರಲ್ಲೂ ಎಷ್ಟು ಗಾಢವಾದ ವಿಶ್ವಾಸ ಮೂಡುತ್ತದೆ ಎನ್ನುವುದನ್ನು ಸ್ಪಂದನಾ ಎನ್ನುವ ಎಂಎಸ್ ಮಾಡಲು ನ್ಯೂಜೆರ್ಸಿಗೆ ಹೊರಟ ಯುವತಿ ಮತ್ತು ಆಕೆಯನ್ನು ಡ್ರಾಪ್ ಮಾಡಲು ಹೊರಟ ತಿಮ್ಮೇಶ್ ಎಂಬ ಕ್ಯಾಬ್ ಚಾಲಕನ ಮೂಲಕ ವಿವರಿಸಿದ್ದಾರೆ. ‘ಅಪ್ಪನ ಮನೆ ಮಾರಾಟಕ್ಕಿದೆ’ ಎಂಬಲ್ಲಿ  ಇಂದಿನ ಯುವಜನಾಂಗ ಹುಟ್ಟಿದ ಹಳ್ಳಿಯನ್ನು ಮರೆತು  ದೊಡ್ಡ ನಗರಗಳಿಗೆ ಹೋಗಿ ಸೇರಿ ಮೂಲಮನೆಯನ್ನು ಹಿರಿಯರ ನಿರ್ಧಾರಕ್ಕೆ ವಿರುದ್ಧವಾಗಿ ಮಾರಾಟ ಮಾಡುವುದನ್ನು, ಒಪ್ಪಿಗೆ ಇಲ್ಲದಿದ್ದರೂ ಮಕ್ಕಳೊಂದಿಗೆ ಹಿರಿಯರು ತೆರಳುವ ಸಂದರ್ಭ ಎದುರಾಗುವುದು, ನಂತರ ತಂದೆಯ ಮನಃಸ್ಥಿತಿ ಅರಿತು ಮನೆ ಮಾರಾಟ ಬೇಡ ಎಂದು ನಿರ್ಧರಿಸುವುದನ್ನು  ಕಣ್ಣಿಗೆ ಕಟ್ಟುವ ಹಾಗೆ ಮೇಷ್ಟ್ರು ನಂಜುಂಡಯ್ಯ ಅವರ ಕತೆಯ ಮೂಲಕ ಕಥೆಗಾರ್ತಿ ತೆರೆದಿಡುತ್ತಾರೆ. 

‘ವೀಕೆಂಡ್  ಸ್ವಯಂವರ’ ಎನ್ನುವ ಇನ್ನೊಂದು ಕಥಾನಕ ಎಲ್ಲರನ್ನು ಸೆಳೆಯುವಂಥಾದ್ದು. ಮಾಲ್‌ಗಳು ಪ್ರೀತಿಯಲ್ಲಿ ಬಿದ್ದವರ, ಮದುವೆಯಾಗುವವರ ಭೇಟಿ ಮಾಡುವ ತಾಣ ಎನ್ನುವುದನ್ನು ವಿವರಿಸುತ್ತಾರೆ. ಇನ್ನೊಬ್ಬನ ಜೊತೆ ಮದುವೆಯೆಂದು ನಿಶ್ಚಿತವಾಗಿದ್ದರೂ,  ಪ್ರೀತಿಸಿದವನೊಡನೆ ಮಾಲ್‌ನಲ್ಲಿ  ಹೇಗೆ ಕಾಲಯಾಪನೆ ಮಾಡುವುದನ್ನು, ಎರಡು ಮನಸ್ಸುಗಳ ನಿರ್ಧಾರದ ನಡುವೆ ಉಯ್ಯಾಲೆಯಾಟ ಶುರುವಾದಾಗ  ಸತ್ಯ ಹೇಳುವ ಮೂಲಕ ಪ್ರೇಮಿಯ ಮನ ಗೆಲ್ಲುವುದನ್ನು ಆಪ್ತವಾಗಿ ಈ ಕಥೆ ಚಿತ್ರಿಸುತ್ತದೆ.

’ಚುಚ್ಚುಮುದ್ದಿನ ಸೈಡ್ ಎಫೆಕ್ಟ್’ ಎನ್ನುವ ಕಥೆ  - ಹಾಸಿಗೆ ಹಿಡಿದ ನರಹರಿ ಶಾಸ್ತ್ರಿಗೆ ತಾನು ಪರಿಸರಕ್ಕೆ ಮಾಡಿದ ಅಪಚಾರವನ್ನು ನೆನಪಿಸುವುದಾಗಿದೆ. ಪರಿಸರದ ಮಹತ್ವವನ್ನು ಇದು ಸಾರುತ್ತದೆ. ಜೊತೆಗೆ ಪ್ರಾಯಶ್ಚಿತವಾಗಿ ಕೊನೆಗಾಲದಲ್ಲಿ  ಬ್ಯಾಂಕಿನಲ್ಲಿದ್ದ ತನ್ನೆಲ್ಲ  ಹಣವನ್ನು ಪರಿಸರ ಸಂರಕ್ಷಣೆಯ ಕೆಲಸಕ್ಕೆ ವನಶಕ್ತಿ ಎಂಬ ಸಂಸ್ಥೆಗೆ ಸಂದಾಯ ಮಾಡುವುದನ್ನು ವಿವರಿಸಿದ್ದಾರೆ.   ‘ಉಪ್ಪಿಲ್ಲದ ಸತ್ಯಾಗ್ರಹ’ ಇನ್ನೂ ರೋಚಕವಾದ ಕಥೆಯಾಗಿದೆ.  ಎದುರು ಮನೆಯ ದಂಪತಿ ಚೆನ್ನಾಗಿರುವುದನ್ನು ನೋಡಿದ  ಮತ್ತು  ಮೊಬೈಲ್‌ಗೆ ಅಂಟಿಕೊಂಡಿದ್ದ ಮನೆಯೊಡತಿಯಿಂದಾದ ಅನಾಹುತವನ್ನು ಇದು ವಿವರಿಸುತ್ತದೆ.  ಸಂತೋಷ   ಎನ್ನುವುದು ಇನ್ನೊಬ್ಬರನ್ನು ನೋಡಿ ಬರುವುದಲ್ಲ, ಮೊಬೈಲಿನಿಂದ ಸಿಗುವುದಲ್ಲ. ಅದು ನಮಗೆ ನಾವೇ  ಕಂಡುಕೊಳ್ಳಬೇಕಾದ ಮಾನಸಿಕ ಹದ ಎಂಬ ಎನ್ನುವ ಸಂದೇಶವನ್ನು ನೀಡುತ್ತಾರೆ.

‘ಮಾತುಗಾರರಿದ್ದಾರೆ ಎಚ್ಚರಿಕೆ’ ಎಂಬ ಕತೆ ಎಲ್ಲರಲ್ಲೂ ಸಹಾಯ ಮಾಡುವ ಗುಣ ಇರುವುದಿಲ್ಲ.  ದೇಶದ ಬಗ್ಗೆ  ದೊಡ್ಡ ದೊಡ್ಡ ಮಾತಾಡುವವರೇ ಜಾಸ್ತಿ, ಜನರಿಗೆ ಭರವಸೆ ಕೊಡುವವರೇ ಜಾಸ್ತಿ, ಉಪಕಾರ, ಸಹಾಯಕ್ಕೆ  ಯಾರೂ ಬರೊಲ್ಲ  ಎನ್ನುವುದನ್ನು ವಿದೇಶದಿಂದ ಊರಿಗೆ ಬಂದು ಪುಂಖಾನುಪುಂಖವಾಗಿ  ಆದರ್ಶದ ಮಾತುಗಳನ್ನಾಡುವ  ನಿರಂಜನ ಎನ್ನುವವನ ಮೂಲಕ ತೋರಿಸಿ ಕೊಡುತ್ತಾರೆ.

  ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂಬ ಕತೆಯಲ್ಲಿ ಕೋತಿ ಮತ್ತು ಅದರ ಮರಿ, ನಾಯಿಯೊಂದರ ಪ್ರೀತಿಯ ಕುರಿತಾಗಿದೆ. ‘ಕಾಣದ ಕಡಲಿಗೆ’ ಎಂಬಲ್ಲಿ  ಕಲ್ಪನಾ ಲೋಕ ನಿಜ ಜೀವನಕ್ಕಿಂತ ಸುಂದರವಿರುತ್ತದೆ. ಕನಸು ಸುಂದರ. ಆದರೆ ನಿಜ ಜೀವನ ಹಾಗಿರುವುದಿಲ್ಲ.  ಬದಲಾಗಿ ಅದು ವಾಸ್ತವದ ಕ್ರೂರತೆ ಎನ್ನುವುದನ್ನು ಈ ಕಥೆ ಕಟ್ಟಿಕೊಡುತ್ತದೆ. ಅಂಧೆ, ಸಂಗೀತ ಶಿಕ್ಷಕಿ  ಶ್ರೀದೇವಿಯ ಬಾಳಿನಲ್ಲಾದ ಕಥೆಯ ಮೂಲಕ ಮನಮುಟ್ಟುವಂತೆ,   ಹೃದಯ ತಟ್ಟುವಂತೆ  ನಿರೂಪಿಸುತ್ತಾರೆ.

‘ ಇಂಗ್ಲೀಷ್ ಕೃಷ್ಣ’ ಎಂಬ ಕಥೆ ಬಹು ರೋಚಕವಾದುದು. ಮಾಧ್ಯಮದವರು ಏಕಾಏಕಿ ಒಬ್ಬ ವ್ಯಕ್ತಿಗೆ ಸಿಕ್ಕಾಪಟ್ಟೆ ಪ್ರಚಾರ ನೀಡಿ ನಂತರ ಎಲ್ಲಾ ಸಹಾಯ ಮಾಡುವುದಾಗಿ ಹೇಳಿ ಹೇಗೆ  ಹಳ್ಳಕ್ಕೆ ತಳ್ಳುತ್ತಾರೆನ್ನುವುದನ್ನು ಕಟ್ಟುತ್ತಿದ್ದ ಕಟ್ಟಡದ ಎದುರು ಮರಳ ರಾಶಿಯ ಮೇಲೆ ಸದಾ ಆಟವಾಡುತ್ತ ಕುಳಿತಿದ್ದ ಉತ್ತರ ಕರ್ನಾಟಕದ ಮಲ್ಲೇಶ್ ಎಂಬ ಬಾಲಕನ ಮೂಲಕ  ವಿವರಿಸುತ್ತಾರೆ ಲೇಖಕಿ.

 ‘ದೇವರು ಕಾಣೆಯಾಗಿದ್ದಾರೆ’ ಎಂಬ ಕೊನೆಯ ಕಥೆಯಂತೂ  ದಿನವಿಡೀ ಪೂಜೆ, ಪುನಸ್ಕಾರದಲ್ಲಿ ತೊಡಗಿದರೂ ಸಮಸ್ಯೆಯಿಂದ ಮುಕ್ತರಾಗದವರ, ನೆಮ್ಮದಿ ಕಳೆದುಕೊಂಡು ಪರಿತಪಿಸುವವರ ಕುರಿತು ಪ್ರಸ್ತಾಪಿಸಿ, ದೇವರನ್ನು ರಸ್ತೆಯಲ್ಲಿ ಹುಡುಕದೆ ಅಂತರಂಗದಲ್ಲಿ ಕಾಣಬೇಕು. ಆದರೆ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ದೇವರ ಜೊತೆ ಸಂಬಂಧ ಏರ್ಪಾಟು ಮಾಡಿಕೊಂಡಿದ್ದೇವೆ ಎನ್ನುವುದನ್ನು ಜ್ಯುವೆಲರಿ ಅಂಗಡಿ ಮಾಲಕ ದೇವರನ್ನು ಹುಡುಕುವುದರ ಮೂಲಕ ತೋರಿಸಿಕೊಟ್ಟಿದ್ದಾರೆ.  

‘ಯಾರು’ ಎಂಬ ಕಥೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಸಾಲ ಕೊಡದ ಕಾರಣ- ಒಬ್ಬ ಮನೆಗೆ ಕಲ್ಲು ಹೊಡೆದು ಗ್ಲಾಸನ್ನು ಒಡೆದಿದ್ದನ್ನೇ ನೆಪ ಮಾಡಿ ಕಳ್ಳತನ ಸಂಭವಿಸಿದೆ ಎಂದು ದೂರು ಕೊಟ್ಟು, ಕೊನೆಗೆ ತಾನೇ ಕಳ್ಳತನದ ನಾಟಕವಾಡಿದ ಮ್ಯಾನೇಜರ್ ನ ಮುಖವಾಡದ ಅನಾವರಣವಿದೆ . ಇಲ್ಲಿ  ಕಳ್ಳನನ್ನು ಹಿಡಿಯಲು  ಸಬ್ ಇನ್ಸ್‌ಪೆಕ್ಟರ್  ಗಿರಿಧರ ಪಟ್ಟ ಧರ್ಮಸಂಕಟ ಎಂತಹವರನ್ನೂ ಕಾಡುತ್ತದೆ. ‘ಹಂಗ್ರಿ ಮ್ಯಾನ್’ ಎಂಬ ಕತೆಯಲ್ಲಿ ಎಲ್ಲವೂ ತನಗೆ ಬೇಕೆಂಬ ಆಸೆಯ ಹಸಿವನ್ನು ಬಿಟ್ಟರೆ- ಮುಕ್ತಿ, ನೆಮ್ಮದಿ ಸಾಧ್ಯ ಎಂಬ ಸಂದೇಶವನ್ನು  ದೇವರು, ವರ ಮೂಲಕ ವಿವರಿಸಿದ್ದಾರೆ.

ಒಟ್ಟಿನಲಿ, ಕೃತಿ  ಆರಂಭದಿಂದ ಕೊನೆಯವರೆಗೂ ಓದುಗನನ್ನು ಸೂಜಿಗಲ್ಲಿನಂತೆ ಸೆಳೆದು  ಸೆರೆಹಿಡಿಯುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವವೆನ್ನಿಸುವ ಕೃತಿಯಿದು ಎನ್ನುವುದರಲ್ಲಿ ಎರಡು ಮಾತಿಲ್ಲ.

Published by dattareya Hegde on 2, Aprill,2025

...........................


Comments

Popular posts from this blog