ಹೃದಯವನ್ನು ತಟ್ಟುವ
‘ಜುಮುರು ಮಳೆ’
‘ಜುಮುರು ಮಳೆ’ ಇದು ಪ್ರಬುದ್ಧ ಕಥೆಗಾರ್ತಿ ಸುಮಂಗಲಾ ಅವರ ಕಥಾಸಂಕಲನ. ಇಲ್ಲಿನ ಕಥೆಗಳಲ್ಲಿ ವಿಶಿಷ್ಟ ಧ್ವನಿ ಇದೆ. ಪಾತ್ರಗಳ ಸೃಷಿಯಲ್ಲೂ ಲವಲವಿಕೆ ಇದೆ. ತಮ್ಮ ಅನುಭವಗಳನ್ನೆಲ್ಲ ಆಕರ್ಷಕ ಕಥೆಯನ್ನಾಗಿ ಹೆಣೆಯುವ ಕಲೆಯನ್ನು ಇಲ್ಲಿ ಕಾಣಬಹುದು. ಕೃತಿಯನ್ನು ಓದಿದಾಗ ಸುಂದರ ಕತೆಗಳು ನಮ್ಮನ್ನು ತಟ್ಟುತ್ತವೆ. ಇಲ್ಲಿನ ಕಥೆಗಳಲ್ಲಿ ಬಯಲುಸೀಮೆ, ಮಲೆನಾಡಿನ ಚಿತ್ರಣ, ಭಾಷೆಗಳು ಬರುತ್ತವೆ.
ಸಹಜ, ಅಬ್ಬರ, ಆಡಂಬರವಿಲ್ಲದ, ಮನಸೆಳೆಯುವ ರೂಪಕಗಳ ಮೂಲಕ ಕತೆಗಳನ್ನು ಹೆಣೆಯುವುದರಲ್ಲಿ ಸುಮಂಗಲಾ ಸಿದ್ಧಹಸ್ತರು. ಇವರ ಕಥೆಗಳಲ್ಲಿ ಮೆಲುದನಿ ಇದೆ. ಕುಶಲಕರ್ಮಿಯಂತೆ ಕಥೆ ಕಟ್ಟುವುದರಲ್ಲಿ ನಿಸ್ಸೀಮರು. ಇವರ ಕಥೆಗಳು ವಿಶಿಷ್ಟವಾದವು. ಏಕೆಂದರೆ ಇದರಲ್ಲಿ ಸೂಕ್ಷ್ಮಜ್ಞತೆ ಮತ್ತು ಕಥೆ ಹೆಣೆಯುವ ಕೌಶಲ್ಯ, ಪ್ರಯೋಗಶೀಲತೆ ಢಾಳಾಗಿದೆ. ಕಥೆಗಳಿಗೆ ಕಾವ್ಯಾತ್ಮಕ ಸ್ಪರ್ಶ ನೀಡಿದ್ದಾರೆ.
‘ಜುಮುರು ಮಳೆ’ಯಲ್ಲಿ ೧೨ ಕಥೆಗಳ ಗುಚ್ಛವಿದೆ. ಇವೆಲ್ಲವೂ ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಂತಹವು. ಕನ್ನಡ ಕಥಾಲೋಕದಲ್ಲಿ ಈಗಾಗಲೇ ಚಿರಪರಿಚಿತರಾಗಿರುವ ಸುಮಂಗಲಾ, ಹಲವು ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಮೂಲತಃ ಸಾಗರದವರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೊದಲ ಕಥೆ ‘ಚೌಕಟ್ಟಿನಿಂದ ಹೊರಬಂದ ಚಿತ್ರ’ದಲ್ಲಿ ವಸುಧಾಳಿಗೆ ಕಾಲೇಜಿಗೆ ಹೋಗುವಾಗ ಹಳೆಬಾವಿಗಳನ್ನು ಹುಡುಕುವ ಹುಚ್ಚಿರುತ್ತದೆ. ಉತ್ತರ ಕರ್ನಾಟಕದಲ್ಲಿರುವ ಇವರು, ಆ ಭಾಗದ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಾರೆ. ಸ್ಥಳೀಯರ ಸಹಕಾರದಿಂದ ವಿವಿಧೆಡೆ ತೆರಳಿ ಅಲ್ಲಿನ ಬಾವಿಗಳ ಪರಿಸ್ಥಿತಿಯನ್ನು ಗಮನಿಸುತ್ತಾರೆ. ಇಲ್ಲಿ ಬದುಕಿನ ಚಿಲುಮೆಯನ್ನು ಕಾಣುತ್ತಾಳೆ. ಇದರಲ್ಲಿ ತಾನೂ ಒಂದು ಭಾಗವಾಗಿರುವಂತೆ, ತನಗೂ ಆ ದೃಶ್ಯಕ್ಕೂ ಅವಿನಾಭಾವ ಸಂಬಂಧವಿದ್ದಂತೆ ಅವರಿಗೆ ಕಾಣುತ್ತದೆ. ಆ ಬಾವಿಗಳ ಚಿತ್ರದಲ್ಲಿ ತಾನು ಬಿಡುಗಡೆಯನ್ನು ಅನುಭವಿಸುತ್ತಿರುವಂತೆ, ನಿಸರ್ಗದ ಚಿಕ್ಕ ಪುಟ್ಟ ಖುಷಿಯನ್ನು ಅನುಭವಿಸುತ್ತಿರುವಂತೆ ಕಾಣುತ್ತಾರೆ.
‘ಅರ್ಧ ಹೆಣೆದ ಗುಲಾಬಿ ಕಾಲು ಚೀಲ’ ಎಂಬ ಕತೆಯಲ್ಲಿ ಅವಿವಾಹಿತೆ ಶೀಲಾ ಮೇಡಮ್ ಎಂಬವರ ಬದುಕಿನ ತಳಮಳ, ತಲ್ಲಣ ಕಂಡುಬರುತ್ತದೆ. ವೇಣಿ ತನ್ನ ಅಕ್ಕನಲ್ಲಿದ್ದ ಮೇಡಮ್‌ರ ಪುಸ್ತಕ ಕೊಡಲು ಅವರ ಮನೆಗೆ ತೆರಳುತ್ತಾಳೆ. ಮನೆಯಲ್ಲೆಲ್ಲ ಅಸ್ತ್ಯವ್ಯಸ್ತವಾಗಿ ಬಿದ್ದಿದ್ದ ಬಟ್ಟೆಗಳು, ಹಾಲ್ ಗೋಡೆಯ ಶೆಲ್ಫ್‌ನಲ್ಲಿ ಹಳೆ ಬಟ್ಟೆಗಳ ಗಂಟಿನ ಮೂಲೆಯಿಂದ ಮಾಸಿದ ತಿಳಿಗುಲಾಬಿಯ ಅರ್ಧ ಹೆಣೆದು ಹಾಗೆ ಬಿಟ್ಟಿದ್ದ ಪುಟ್ಟ ಉಣ್ಣೆಯ ಕಾಲು ಚೀಲ ಕಾಣುತ್ತಾಳೆ. ಎಲ್ಲವೂ ಅರ್ಧಂಬರ್ಧ ಎನ್ನುವುದರ ಪ್ರತೀಕವಾಗಿ ಇಲ್ಲಿ ಎರಡು ಉಣ್ಣೆಯ ಎಳೆಗಳು ಹಾಗೆಯೇ ತೂಗಾಡುತ್ತಿರುತ್ತದೆ. ಅವರ ಬದುಕಿನ ನೋವಿಗೆ ಸಾಕ್ಷಿಯೆಂಬಂತೆ, ಅನಂತ ವ್ಯಾಕುಲತೆಯನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಂತೆ ಹಳೆಯ ಬಟ್ಟೆ ಗಂಟಿನಿಂದ ಅರ್ಧ ಹೆಣೆದ ಕಾಲುಚೀಲ ಕಂಡುಬರುತ್ತದೆ.
‘ಆಲಿಕಲ್ಲು’ ತುಂಬಾ ಇಷ್ಟವಾಗುವ ಕಥೆ. ಎಸ್ಟಿಡಿ ಬೂತಿನ ಲತ್ಯಾ ಮಾಮು ಎನ್ನುವವನ ಮಾನವಿಯತೆ ಮತ್ತು ಅನುಕಂಪದ ಚಿತ್ರಣ ಇದರಲ್ಲಿದೆ. ಎದುರು ಕುಳಿತು ತರಕಾರಿ ಮಾರುವ ಕಮಲವ್ವ, ಅವಳು ಬಾರದಿದ್ದಾಗ ಹುಡುಕಿಕೊಂಡು ಹೋದಾಗ ಏಶಿಯನ್ ಪೇಂಟ್ಸ್‌ನ ಜಾಹೀರಾತು ಬರೆದಿದ್ದ ಹುಡುಗ ಅಲ್ಲೇ ಬಿಸಾಡಿದ್ದ ಬ್ರಶ್, ಬಣ್ಣದ ಡಬ್ಬಿ ಕಂಡುಬರುತ್ತದೆ. ಬ್ರಶ್ ಎತ್ತಿಕೊಳ್ಳುತ್ತಾನೆ. ಇದೇ ವೇಳೆ ಆಲಿಕಲ್ಲು ಸಹಿತ ಮುಂಗಾರು ಮಳೆ ಶುರುವಾಗುತ್ತದೆ. ಆಲಿಕಲ್ಲು ಎಂದರೆ ಮಾಮುಗೆ ಇಷ್ಟ. ಅದನ್ನು ಹೆಕ್ಕಲು ಮುಂದಾದಾಗ ಆತನಲ್ಲಿದ್ದ ಬ್ರಶ್ ಕೆಳಗೆ ಬಿದ್ದು, ಆ ನೀರಿನಲ್ಲಿ ಕಮಲವ್ವ, ಬೂತ್‌ಗೆ ಬರುತ್ತಿದ್ದ ಅಪರಿಚಿತ ಹೆಂಗಸು, ಮಳೆಯಲ್ಲಿ ತೋಯುತ್ತ ನಿಂತ ಮಾಮು ಎಲ್ಲರ ಚಿತ್ರ ಬೆರೆತು ಒಂದಾದ ದೃಶ್ಯ ಆತನ ಕಣ್ಮುಂದೆ ಬರುತ್ತದೆ.
‘ ಎದೆಯಲೊಂದು ಬಳೆ ಚೂರು’ ಇದರಲ್ಲಿ ಪಾನ್ ಶಾಪವನ್ನು ಇಟ್ಟುಕೊಂಡಿದ್ದ ದಿವಾಕರ ಎನ್ನುವ ವ್ಯಕ್ತಿಯ ಶುಷ್ಕ ಜೀವನದಲ್ಲಿ ಅನಾಥ ಹೆಣ್ಣಿನ ಪ್ರವೇಶದಿಂದ ಒಂದು ಆತ್ಮೀಯ ಸೆಲೆ ಹುಟ್ಟಿಕೊಳ್ಳುವುದನ್ನು ಅನನ್ಯವಾಗಿ ಚಿತ್ರಿಸಿದ್ದಾರೆ. ಮನೆಗೆಲಸಕ್ಕೆ ಬರುವ ಜೆಲ್ಲಿ ಎಂಬ ಹೆಂಗಸಿನದ ಒಂದು ಪಾತ್ರವಾದರೆ, ಆಕೆಯ ಪರಿಚಿತೆ ಹೆಂಗಸೊಬ್ಬಳು ಯಾರದ್ದೋ ಬಲಾತ್ಕ್ಕಾರದಿಂದ ಗರ್ಭಿಣಿಯಾದಾಗ ಜೆಲ್ಲಿ ಆಸ್ಪತ್ರೆ ಸೇರಿಸುವುದು, ಜೆಲ್ಲಿ ಕೆಲಸಕ್ಕೆ ಬಾರದೆ ಆಸ್ಪತ್ರೆಯಲ್ಲಿ ಅವಳ ಸೇವೆಗೆ ನಿಲ್ಲುವುದು, ಅಲ್ಲಿಗೆ ದಿವಾಕರ ಹೋಗಿ ಅವಳ ಸ್ಥಿತಿ ಗಮನಿಸಿ ಸಹಾಯ ಮಾಡುವುದು, ಹೆರಿಗೆಯವರೆಗೆ ತಂದೆಯಂತೆ ನಿಲ್ಲುವುದರ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ತನ್ನ ಅಮ್ಮ ಸಂಕದಿಂದ ಜಾರಿಬಿದ್ದಾಗ ಬಳೆಗಳು ಒಡೆದು ತನ್ನ ಎದೆಗೆ ನೆಟ್ಟಿದ್ದು ನೆನಪಾಗುತ್ತದೆ. ಈ ಮಗುವಿನ ಎದೆಯಲ್ಲಿ ಎಂದೂ ನೆಡದಿರಲಿ ಬಳೆ ಚೂರು ಎಂದು ಆಶಿಸುತ್ತಾನೆ.
‘ ಪ್ರಾಜಕ್ತಾ ಡೈರಿ ಬರೆಯಲಿಲ’ ಮತ್ತು ‘ಛಂಯ್ಯಾ, ಛಂಯ್ಯಾ’ ಎಂಬ ಕಥೆಗಳು ಭಗ್ನ ದಾಂಪತ್ಯದ ಕುರಿತದಾದ್ದು. ಪ್ರಾಜಕ್ತಾ ಏಕೆ ಡೈರಿ ಬರೆಯುವುದನ್ನು ಬಿಟ್ಟಳೆನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಅದರಂತೆ ‘ಛಂಯ್ಯಾ ಛಂಯ್ಯಾ’ದಲ್ಲಿ ತಾಯಿ ಮತ್ತು ಪುಟ್ಟ ಮಗನ ಪ್ರೀತಿ, ಪ್ರೇಮವಿದೆ. ಇಲ್ಲಿ ಮಗು ತಾಯಿಗೆ ಮುಗ್ಧ ಪ್ರಶ್ನೆಗಳೊಂದಿಗೆ ಗೋಳುಹೊಯ್ದುಕೊಳ್ಳುವುದು, ಆಗ ತಾಯಿಗೆ ತನ್ನ ಸಂಕಟ ನೆನಪಾಗಿ ಕಣ್ಣೀರು ಬರುವುದು, ಗಂಡನಿಲ್ಲದ ಹೆಂಗಸು ಹೊರಜಗತ್ತನ್ನು ಎದುರಿಸುವ ಸಂಕಟವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
‘ಅಂಗಡಿ ಮುಚ್ಚಿದ ನಂತರ’ದಲ್ಲಿ ರಸ್ತೆಯಂಚಿನಲ್ಲಿ ಅಂಗಡಿ ಹಾಕಿಕೊಂಡಿದ್ದ ಟೆಡ್ಡಿಬೇರ್ಸ್ ಮಾರುವವನಲ್ಲಿ ಎಲ್ಲರೂ ಚೌಕಾಸಿ ಮಾಡಿ ಖರೀದಿಸದೆ ಹೋಗುವುದು, ಇಡೀ ದಿನ ವ್ಯಾಪಾರವಾಗದೆ ಬೇಸರದಲ್ಲಿದ್ದಾಗ ಮಳೆ ಬರುವುದು, ಆತ ಅಂಗಡಿ ಮಡಚಿ ಮನೆಗೆ ಹೊರಡುವುದು, ಬಸ್ ನಿಲ್ದಾಣದಲ್ಲಿದ್ದ ಜೀವಂತ ನಾಯಿಮರಿಯೊಂದು ಈತನಲ್ಲಿರುವ ಟೆಡ್ಡಿಬೇರ್‍ಸ್ ನಾಯಿಮರಿ ಗಮನಿಸಿ ಅನುಸರಿಸುವುದು, ತನ್ನಂತೆಯೇ ಈ ನಾಯಿಮರಿ ಚೂರು ಬ್ರೆಡ್, ಚಪಾತಿಗಾಗಿ ಅಲೆದಾಡುತ್ತಿದೆ ಎಂದು ಆತ ತಿಳಿಯುವುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
‘೮೧೩ ನಂಬರ್ ಬಸ್ಸಿನ ಡ್ರೈವರ್ ಸಿಕ್ಕರೆ’ ಕಥೆಯಲ್ಲಿ ಬಸ್ ಚಾಲಕನೊಬ್ಬ ಅಪಘಾತ ಎಸಗಿ ಅಮಾನತಾಗುವುದು, ಎರಡನೇ ಬಾರಿಯೂ ಈ ಘಟನೆ ಮರುಕಳಿಸುವುದು, ಆ ಬಸ್ಸಿನಲ್ಲಿ ದಿನ ಓಡಾಡುವ ವಸುಮತಿ ದಿನನಿತ್ಯ ಬರುವ ಡ್ರೈವರ್ ಬಾರದೆ ಹೊಸ ಡ್ರೈವರ್ ಬಂದಾಗ ಕಂಡಕ್ಟರ್‌ನಲ್ಲಿ ಈ ಬಗ್ಗೆ ಕೇಳುತ್ತಾಳೆ. ಮೊದಲ ಬಾರಿ ಅಮಾನತಾದಾಗ ಮಾರುಕಟ್ಟೆಯಲ್ಲಿ ಸಿಕ್ಕಾಗ ಮಾತನಾಡಿದ್ದು, ಬಸ್ ಹತ್ತುವಾಗ ಸಾವಕಾಶ ಹತ್ತಿ ಎಂದಿದ್ದು, ಆದರೆ ತಾನು ಮುಗುಳ್ನಗೆಯನ್ನೂ ಬೀರದೆ ಬಸ್ ಹತ್ತಿಬಂದಿದ್ದು ನೆನೆಪಾಗುತ್ತದೆ. ಈ ಬಾರಿಯಾದರೂ ಮಾರುಕಟ್ಟೆಯಲ್ಲಿ ಓಡಾಡುವಾಗ, ತರಕಾರಿ ಅಥವಾ ಅಂಗಡಿಯಲ್ಲಿ ಖರೀದಿಸುವಾಗ ಆತ ಕಾಣುತ್ತಾನೇನೊ ಎಂದು ಹುಡುಕುತ್ತಲೇ ಇರುತ್ತಾಳೆ. ಆತ ಸಿಕ್ಕರೆ ಪರಿಚಯದ ಮುಗುಳ್ನಗುವನ್ನಾದರೂ ಅರಳಿಸಬೇಕೆಂದು ತೀರ್ಮಾನಿಸಿ ಆಚೀಚೆ ಕಣ್ಣು ಹಾಯಿಸುತ್ತಲೇ ಇರುತ್ತಾಳೆ.
‘ಫಾತಿಮಾಗೆ ಮಳೆ ಎಂದರೆ ಇಷ್ಟ’ ಎಂಬ ಕತೆ ಸರಳ ಹಾಗೂ ಮನವನ್ನು ತಟ್ಟುವಂಥದ್ದು. ಇದರಲ್ಲಿ ಫಾತಿಮಾಳ ಜೀವಂತಿಕೆಯನ್ನು ತುಂಬಲಾಗಿದೆ. ಮಳೆ ಎಂದರೆ ಜೀವಂತಿಕೆ ಎಂಬ ಅರ್ಥದಲ್ಲಿ ಕಥೆ ಇದೆ. ‘ಆಯಿ ಬರೆದ ಭಾಷ್ಯ’ ಸುಂದರ ಕಥೆ. ಇದರಲ್ಲಿ ಮನುಷ್ಯ ಸಂಬಂಧಗಳ ಹಿಂದಿನ ನೋವಿನ ಕಥೆ ಇದೆ. ಮರಾಠಿ ಮೂಲದ ತನ್ನ ಮಗಳು ಮನಿಷಾ ಕನ್ನಡಿಗನೊಬ್ಬನನ್ನು ಪ್ರೀತಿಸಿ ಮದುವೆಯಾಗುವುದನ್ನು ತಾಯಿ (ಆಯಿ) ಹಠ ಹಿಡಿದು ವಿರೋಧಿಸುತ್ತಾಳೆ. ಪೂರ್ವಾಗ್ರಹ ಭಾವದಿಂದ ಇಬ್ಬರ ನಡುವಿನ ಸಂಬಂಧಕ್ಕೆ ಅವಳ ಆಯಿ ಭಾಷ್ಯ ಬರೆದು ಬಿಟ್ಟಿದ್ದಳು. ಅದನ್ನು ಒಪ್ಪಿ ನಡೆದರೂ ಅದಕ್ಕೊಂದು ಬೇರೆ ರೂಪವನ್ನು ಅವಳ ಪ್ರಿಯಕರ ವಿಕ್ರಂ ಕೊಟ್ಟಿದ್ದನ್ನು ಸೊಗಸಾಗಿ ತೆರೆದಿಟ್ಟಿದ್ದಾರೆ.
ಒಟ್ಟಿನಲ್ಲಿ, ಈ ಕೃತಿಯಲ್ಲಿರುವ ಎಲ್ಲಾ ಕತೆಗಳನ್ನು ‘ಮೆಲುದನಿಯ ವಿಷಾದ ರಾಗಗಳು’ ಎಂದಿರುವ ಮುನ್ನುಡಿ ಬರೆದ ಜಿ ಎಸ್ ಸದಾಶಿವ, ಕನ್ನಡ ಕಥೆಗಳ ಹೊಸಲೋಕದಲ್ಲೊಂದು ನವ್ಯದ ಪ್ರಭಾವ ಇನ್ನೂ ಉಳಿದುಕೊಂಡಿದೆ ಎನ್ನುವುದನ್ನು ಸುಮಂಗಲಾ ಅವರ ಕಥೆಗಳು ತೋರುತ್ತವೆ. ಮನಸ್ಸಿನ ಆಳಕ್ಕಿಳಿಯುವ, ಅನುಭವದ ಎಳೆಗಳನ್ನು ಶೋಧಿಸುವ ಹಾಗೂ ಬಾಹ್ಯ ಜಗತ್ತಿಗೆ ಅದನ್ನು ಸಂಬಂಧೀಕರಿಸುವಲ್ಲಿನ ಸೂಕ್ಷ್ಮತೆ, ಅಭಿವ್ಯಕ್ತಗೊಳ್ಳುವ ಗುಣ ಇವರ ಕಥೆಗಳಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Published by Dattatreya Hegde on 2 April, 2025
...........................

Comments
Post a Comment