ಕಟುಸತ್ಯಗಳನ್ನು ತುಂಬಿಕೊಂಡಿರುವ
‘ಮಂಕ್ರಿ’
ಮೌಢ್ಯದ ಜಾಡ್ಯದಿಂದ ಹೊರಬಂದು ಹೊಸತನದ ಕನಸು ಕಟ್ಟಿಕೊಳ್ಳಲು ಹಂಬಲಿಸುವ, ಮನುಷ್ಯ ನೆಲೆಯ ಚಿಂತನೆಗಳಿಂದ ಕೂಡಿದ, ಐಕ್ಯತೆಯ ಆಶಯ ಚಿತ್ರಿಸುವ, ಸಾರ್ವಕಾಲಿಕ ಕಾಳಜಿ ಹೊಂದಿರುವ, ಅಮರ ಅನುಭವಗಳ ಕವನ ಸಂಕಲನ ‘ಮಂಕ್ರಿ’. ಇದು ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿರುವ ಫರ್ಹಾನಾಜ್ ಮಸ್ಕಿಯವರ ಎರಡನೆಯ ಕೃತಿ.
ಈ ಕವನ ಸಂಕಲನ ಜನವರಿಯಲ್ಲಿ ಬಿಡುಗಡೆಯಾಗಿದೆ. ಇವರ ಕವಿತೆಗಳಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶವನ್ನು, ಯುದ್ಧದ ನಿರಾಕರಣೆಯನ್ನು, ಪ್ರೀತಿ- ಪ್ರೇಮದ ವಿರಹ ಭಾವಗಳನ್ನು, ಬದುಕಿನ ಸಂಘರ್ಷಗಳನ್ನು, ಶೋಷಿತ ಸಮುದಾಯದ ಸಂಕಟಗಳನ್ನು ಕಾಣಬಹುದು. ಮೂಲಭೂತವಾದದ ವಿಡಂಬನೆ, ವ್ಯವಸ್ಥೆಯ ಮತ್ತು ಅವಕಾಶವಾದಿಗಳ ಹುನ್ನಾರ, ಕುಚೋದ್ಯ ರಾಜಕೀಯ ದೊಂಬರಾಟವನ್ನು ಕವಿತೆಯಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ.
ಪ್ರತೀ ಕವನಗಳು ವಿಭಿನ್ನವಾದ ಆಲೋಚನಾ ಕ್ರಮದಿಂದ ಕೂಡಿವೆ. ಸಮಾಜಕ್ಕೆ ಅಂಟಿರುವ ಜಾತಿ, ಮತ, ಪಂಥ, ವರ್ಣ, ವರ್ಗಗಳನ್ನು ಒಡೆದಾಳುವ ನೀತಿಯ ಒಳಗಿನ ಹೂರಣವನ್ನು ಮನಸೆಳೆಯುವಂತೆ ತೆರೆದಿಟ್ಟಿದ್ದಾರೆ. ಸಮಸಮಾಜದ ಆಶಯ ಹೇಗಿರಬೇಕೆನ್ನುವುದನ್ನು ಬಹಳ ಮನೋಜ್ಞವಾಗಿ ಈ ಕವನ ಸಂಕಲನ ಕಟ್ಟಿಕೊಡುತ್ತದೆ. ದಾರಿ ತಪ್ಪುತ್ತಿರುವ ಇಂದಿನ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದ್ದಾರೆ, ತವಕ- ತಲ್ಲಣಗಳನ್ನು ಕಾವ್ಯರೂಪದ ಮೂಲಕ ಉಣಬಡಿಸಿದ್ದಾರೆ, ಪ್ರಸ್ತುತ ವರ್ತಮಾನಕ್ಕೆ ಬೆಳಕು ಚೆಲ್ಲಿದ್ದಾರೆ.
ಕವನ ಸಂಕಲನದಲ್ಲಿ ಒಟ್ಟು ೫೫ ಕವಿತೆಗಳಿವೆ. ಇವೆಲ್ಲ ಬೆಳಕಿನಂತೆ ಸ್ಫುರಿಸುವ ಕವನಗಳಾಗಿವೆ. ಆತ್ಮೀಯವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಓದುಗರ ಮನಮುಟ್ಟುವಂತೆ ಕಲಾತ್ಮಕವಾಗಿ ಕವಿತೆಯನ್ನು ಕಟ್ಟುವ ಕವಯಿತ್ರಿ ಫರ್ಹಾನಾಜ್ ಅವರ ಶೈಲಿ ಮೆಚ್ಚುವಂತದ್ದು. ಅತಿ ಸಲೀಸಾಗಿ ವಿಚಾರವನ್ನು ವಿವರಿಸುವ ಜಾಣ್ಮೆ, ಕೌಶಲ ಅವರಲ್ಲಿರುವುದನ್ನು ಈ ಸಂಕಲನ ತೋರಿಸುತ್ತದೆ. ವಿಶೇಷವಾಗಿ ಮಹಿಳೆಯರ ದುಃಖದುಮ್ಮಾನ ಮತ್ತು ಮಹಿಳೆಯ ಬಗ್ಗೆ ಇಂದಿನ ಸಮಾಜದ ಮನಃಸ್ಥಿತಿಯನ್ನು ವಿವರಿಸಿದ್ದಾರೆ. ಇವೆಲ್ಲ ಆದ್ರವಾಗಿ ಹೃದಯತಟ್ಟುತ್ತವೆ.
ಎಲ್ಲರ ಮನಸ್ಸಿನ ಕದ ತೆರೆಯುವ ಮತ್ತು ಬದುಕಿನಲ್ಲಿನ ನಿತ್ಯ, ಸತ್ಯ ಘಟನೆಗಳನ್ನು ಕವಿತೆಯ ರಸಗಂಗೆಯ ಮುಖಾಂತರ ಪ್ರಾಧ್ಯಾಪಕಿ ಒಬ್ಬರು ಇಲ್ಲಿ ಹರಿಸಿದ್ದಾರೆ. ಸಾಮಾಜಿಕ ಕಳಕಳಿಯೇ ಹೆಚ್ಚಿನ ಕವಿತೆಗಳಲ್ಲಿ ಕಂಡುಬರುತ್ತದೆ.
ಈ ಸಂಕಲನದಲ್ಲಿ ನಮ್ಮನ್ನಾಕರ್ಷಿಸುವ ಕೆಲವು ಪ್ರಮುಖ ಕವಿತೆಗಳಲ್ಲಿ ‘ಬಾವುಟ’ ಒಂದು. ನನ್ನ ಗುಡಿಸಲು ಬೀಳಿಸಬಾರದೆಂದು ಬಾವುಟ ಕಟ್ಟಿರುತ್ತೇನೆ ಎನ್ನುತ್ತಾ ಬದುಕಬೇಕೆಂದರೆ ಇಂದು ತಮಗೆ ಇಷ್ಟವಿಲ್ಲದಿದ್ದರೂ ಯಾವುದಾದರೂ ಒಂದು ಸಂಘಟನೆಯ ಭಾಗವಾಗಬೇಕು. ದೇಶಭಕ್ತಿ ಎನ್ನುವುದು ಪ್ರದರ್ಶನವಾಗಿದೆ. ದೇವರ ಹೆಸರು ಹೇಳಿದರೆ ಭಯಸೃಷ್ಟಿಯಾಗುವ ವಾತಾವರಣವಿದೆ ಎಂದು ಆತಂಕದಿಂದ ಹೇಳುತ್ತಾರೆ ‘ಹುಟ್ಟು ಇಲ್ಲದಿದ್ದರೂ ಹರಿಯೋಣ’ ಎಂಬ ಕವಿತೆಯಲ್ಲಿ ಬಹುತ್ವದ ಬಂಧನ, ಬಾಂಧವ್ಯ ಬೆಸೆಯುವ ಅವಶ್ಯಕತೆ ಇದೆ ಎನ್ನುತ್ತಾ ಹಳೆಯ ಪ್ರೇಮನದಿಯಲ್ಲೇ ಹುಟ್ಟು ಇಲ್ಲದಿದ್ದರೂ ಹರಿಯೋಣ ಎಂಬ ಸಂದೇಶವನ್ನು ಹರಿಬಿಡುತ್ತಾ, ‘ಕಟ್ಟ್ಟುವೆವು- ಕೆಡಹುವೆವು’ ಇನ್ನೊಂದು ಪದ್ಯದಲ್ಲಿ ವಿಷಬೀಜ ಬಿತ್ತಿದವರೆಲ್ಲ ವಿಳಾಸವಿಲ್ಲದೆ ಹೋಗಿದ್ದಾರೆ ಎಂಬ ಸಾರ್ವಕಾಲಿಕ ಸತ್ಯ ತೆರೆದಿಡುತ್ತಾರೆ.
‘ಮುಟ್ಟು’ ಎನ್ನುವ ಕವನದಲ್ಲಿ ಇಂತಹ ದೈಹಿಕ ಬಾಧೆಯನ್ನು ಜನರು ನೋಡುವ ನೋಟವೇ ಬೇರೆ. ಸಂಕಟ, ನೋವು, ಮುಜುಗರವನ್ನು ಹೆಣ್ಣು ಅನುಭವಿಸುವುದನ್ನು ತಮ್ಮ ಬರವಣಿಗೆ ಮೂಲಕ ಧ್ವನಿಸಿದ್ದಾರೆ. ಬರಿ ಹೆಂಗಸಾಗು, ವರದಕ್ಷಿಣೆ ಕಿರುಕುಳ ಮೊದಲಾದ ಕವನದಲ್ಲೂ ಹೆಣ್ಣಿನ ಗೋಳನ್ನು ಬಿಡಿಸಿಟ್ಟಿದ್ದಾರೆ. ‘ಅಪ್ಪನಿಗೊಂದು ಕವಿತೆ’ಯಲ್ಲಿ ಅಪ್ಪನ ಹೆಗಲೇರಿ ನೋಡಿದ್ದ ಈ ಸುಂದರ ಜಗತ್ತು ಈಗ ಎಲ್ಲಿಗೆ ಹೋಗಿದೆ ಎನ್ನುತ್ತಾ, ಅಪ್ಪನ ಸುಂದರ ನೆನಪು ಪರಿಸರದಲ್ಲಿ , ಪ್ರ್ರಾಣಿ-ಪಕ್ಷಿಯಲ್ಲಿ, ಮನೆಯಲ್ಲಿ, ಉಸಿರಲ್ಲಿ, ಹೆಜ್ಜೆಯಲ್ಲಿ ನೆನೆಪಾಗಿ ಕಾಡುತ್ತಿರುವುದನ್ನು ವಿವರಿಸಿದ್ದಾರೆ.
ಜಾಣರೆಲ್ಲ ಸೇರಿ ಮೂರ್ಖರಾಗುತ್ತಿದ್ದಾರೆ. ಗಲಭೆ, ಕ್ಷೋಭೆ ಕಲಿಸುತ್ತಾ ಕೆಸರೆರೆಚುತ್ತಿದ್ದಾರೆ. ಸಾಕ್ಷಿ ಹುಟ್ಟು ಹಾಕಿ ಗತಿಸಿದ ಕುಲವನ್ನೇ ಸೃಷ್ಟಿಸುತ್ತಿದ್ದಾರೆ. ಧ್ವನಿ ದಮನಿಸುವ ಮೂರ್ಖರಾಗುತ್ತಿದ್ದಾರೆ ಜನರು ಎಂದು ‘ಮೂರ್ಖರಾಗುತಿಹರು’ ಎಂಬ ಕವನದಲ್ಲಿ ವಿಷಾದಿಸುತ್ತಾರೆ.
‘ಬಾಪು’ ಎಂಬ ಕವಿತೆಯಲ್ಲಿ
ಮರಳಿ ನೀ ಎಂದೂ ಮತ್ತೆ ಬಾರದಿರು ಬಾಪು
ಸಮಯಸಾಧಕರಿಗೆ ಮಾತ್ರ ಈಗೀಗ ನಿನ್ನ ನೆನಪು
ಎನ್ನುವ ಮೂಲಕ ಗಾಂಧಿ ವಿಚಾರಧಾರೆಯನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಇದೇ ರೀತಿ ‘ಗಾಂಧಿಯೊಂದು ಛಲ’ ಕವಿತೆಯಲ್ಲಿ ಅವರ ಚಿಂತನೆ, ಆಲೋಚನೆ, ಲಹರಿಯನ್ನು ಕೊಲ್ಲಲಾಗಿದೆ. ಸ್ವಂತದವರಿಂದಲೇ ಗಾಂಧಿ ಸತ್ತು ಹೋದರು. ಆದರೂ ಅವರ ಸಿದ್ಧಾಂತ ಮರೆಯಾಗಿಲ್ಲ. ಗಾಂಧಿ ಎಂದರೆ ಛಲ, ಆತ್ಮಬಲ ಎಂದು ಹೇಳುತ್ತಾರೆ. ‘ಬುದ್ಧನಾಗು’ ಇದರಲ್ಲಿ ಬದಲಾವಣೆ ತರಲು ಬುದ್ಧನಾಗಬೇಕೆಂಬ ಆಸೆ ಇದೆ ಎಂದು ಹೇಳುತ್ತಾರೆ. ‘ಮತ್ತೆ ಬರುವಂತಾಗಲಿ’ ಎಂಬ ಕವಿತೆಯಲ್ಲಿ
ಬೀಳಿಸುವವರ ಮುಂದೆ ಎದ್ದು ನಿಲ್ಲಬೇಕು.
ಹೊಡೆದು ಬಡಿದು ಕುಗ್ಗಿಸುತ್ತಿರುವಾಗ
ಕಡೆತನಕ ಕಾಣಿಸಿಕೊಳ್ಳಬೇಕು.
ಹೆದರಿಕೆ ಬೆದರಿಕೆ ಸಹಿಸಿ ಏನು ಸಾಧನೆ ಮಾಡುವುದು
ಎಂದು ಪ್ರಶ್ನಿಸುತ್ತಾರೆ. ಶರೀಫ, ಕಬೀರ, ಬಸವ, ಅಕ್ಕ, ಭೀಮ ಮತ್ತೆ ಬರುವಂತಾಗಬಹುದು ಎನ್ನುತ್ತಾರೆ.
ಮನುಷ್ಯರ ನಡುವೆ ಪ್ರೀತಿ ಎಷ್ಟೊಂದು ಕಡಿಮೆಯಾಗಿದೆ ಎನ್ನುವುದಕ್ಕೆ ‘ನೀ ಕೊಟ್ಟ ಗುಲಾಬಿ’ಯಲ್ಲಿ ಸೌಂದರ್ಯವೂ ಇಲ್ಲ, ಭಾವನೆಗಳು ಮೊದಲೇ ನೆನಪಿಲ್ಲ, ಭರವಸೆ ಬಾಡಿ ಹೋಗಿದೆ, ನಂಬಿಕೆ ಇಲ್ಲವೇ ಇಲ್ಲ, ಎಲ್ಲೆಡೆ ಬೀದಿ ಬೀದಿಯಲ್ಲಿ ಅದು ಚೆಲ್ಲಿ ಹೋಗಿದೆ ಎಂದು ವ್ಯಥೆಪಡುತ್ತಾರೆ.
ಅಕ್ಕನಂತೆ, ಬಸವಣ್ಣ, ಅಂಬೇಡ್ಕರ್ ಮೊದಲಾದ ಕವನದಲ್ಲಿ ಜಾತಿ ಧರ್ಮದ ತರತಮವಿಲ್ಲದೆ ಗಂಡು ಹೆಣ್ಣು ಸಮನಾಗಿಸಲು ಯಾವಾಗ ಬರುವಿರಿ ಎಂದು ಪ್ರಶ್ನಿಸುತ್ತಾರೆ. ಚುನಾವಣೆ, ಇಂದಿನ ಪರಿಸ್ಥಿತಿ, ಕೊನೆ ಎಲ್ಲಿ ಮೊದಲಾದ ಕವನಗಳೆಲ್ಲ ಅರ್ಥಪೂರ್ಣವಾಗಿ ಇಂದಿನ ಸ್ಥಿತಿಯನ್ನು ವಿವರಿಸುತ್ತವೆ.
‘ಯುದ್ಧ’ ಎಂಬ ಕವಿತೆ ಇಂದಿನ ಉನ್ಮಾದವನ್ನು ಬಿಂಬಿಸುವ ಉತ್ಕೃಷ್ಟ ಕವಿತೆಯಾಗಿದೆ.
ಟಿವಿ ಪರದೆಗೆಲ್ಲಾ
ನೆತ್ತರು, ಧೂಳು ಮೆತ್ತಿಕೊಂಡಿದೆ
ಕವಿತೆಗಳೆಲ್ಲಾ ಸತ್ತು ಹೋಗುತ್ತಿವೆ
ನಾ ಯಾರಿಗೆ ಏನೆಂದು ಬರೆಯಲಿ
ಎಂದು ಹಳಹಳಿಸುತ್ತಾ, ಇಂದಿನ ದೃಶ್ಯ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ವಾಮಮಾರ್ಗ ಹಿಡಿಯುತ್ತಿರುವ ಮತ್ತು ಒಂದಲ್ಲ ಒಂದು ರೀತಿಯ ಯುದ್ಧಗಳಿಗೆ ಕಾರಣರಾಗುತ್ತಿರುವುದನ್ನು ವಿವರಿಸುತ್ತಾರೆ. ನಮ್ಮೆಲ್ಲ ನಂಬಿಕೆಗಳು ಸಾಯುತ್ತಿವೆ ಎಂದು ನೋವಿನಿಂದ ಹೇಳುತ್ತಾರೆ.
ಒಟ್ಟಿನಲ್ಲಿ ‘ಮಂಕ್ರಿ’ ಯಲ್ಲಿ ವಿವಿಧ ರೀತಿಯ ಅನುಭವಗಳನ್ನು ತುಂಬಿ ಕೊಡುವ ಪ್ರಯತ್ನವನ್ನು ಕವಯಿತ್ರಿ ಮಾಡಿದ್ದಾರೆ. ಇಲ್ಲಿ ಕಾವ್ಯದ ಕುಸುರಿ ಕೆಲಸವನ್ನು ಚೆನ್ನಾಗಿ ನಡೆಸಿದ್ದಾರೆ. ಸ್ತ್ರೀಯರ ಬಗ್ಗೆ ಮಾತ್ರವಲ್ಲದೆ ಪುರುಷರ ಬಗ್ಗೆಯೂ ತಮ್ಮ ಅಂತರಾಳವನ್ನು ತೆರೆದಿಟ್ಟಿದ್ದಾರೆ. ತನಗೆ ದಕ್ಕಿದ ಹಾಗೆ ಸುಲಲಿತವಾಗಿ ಕವನವನ್ನು ಕಟ್ಟಿಕೊಟ್ಟು ಅದರ ಚೆಲುವಿಗೆ ಕಾರಣರಾಗಿದ್ದಾರೆ. ಚಿಂತನೆಗಳಿಂದ ಕೂಡಿದ, ಆಶಯ ಬಿತ್ತರಿಸುವ ಮತ್ತು ಕಾಳಜಿ ಹೊಂದುವ ಈ ಸಂಕಲನ ಎಲ್ಲಾ ರೀತಿಯಿಂದಲೂ ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
Published by Dattatreya Hegde on April 2,2025
................................

Comments
Post a Comment