ಸಾಮಾನ್ಯ ಘಟನೆಗಳೇ ಕಥೆಯಾಗಿ ಮೈದಳೆದ
‘ಅಮ್ಮಚ್ಚಿಯೆಂಬ ನೆನಪು’
ಬಹಳ ಅಪರೂಪದ ಅನುಭವಗಳನ್ನು ವಿಭಿನ್ನ ಶೈಲಿಯಲ್ಲಿ ಸಾಹಿತ್ಯ ಮಾಧ್ಯಮದ ಮೂಲಕ ತೆರೆದಿಡುವ ವೈದೇಹಿ, ಮಹಿಳೆಯರ ವಿಶಿಷ್ಟ ಒಳತೋಟಿಯನ್ನು ಅಂತಃಕರಣ ತುಂಬಿದ ವಿಚಾರಗಳನ್ನು , ಸ್ತ್ರೀವಾದಿ ನಿಲುವುಗಳನ್ನು ಯಾವುದೇ ಅಬ್ಬರವಿಲ್ಲದೆ ಅನಾವರಣಗೊಳಿಸುತ್ತ್ತಾರೆ. ಇವರ ಕಥೆಗಳಲ್ಲಿ ಅಂತಃಕರಣ ತುಂಬಿದ ಮಿಡಿಯುವ ಭಾವನೆಗಳಿವೆ. ಪ್ರಸ್ತುತ ‘ಮ್ಮಚ್ಚಿಯೆಂಬ ನೆನಪು’ ಕಥಾ ಸಂಕಲನದಲ್ಲೂ ಇವರ ಸಾಹಿತ್ಯದ ಹರವನ್ನು ನಾವು ಕಾಣಬಹುದು.
ಇಲ್ಲಿನ ಎಲ್ಲಾ ಕಥಗಳಲ್ಲಿ ಅವುಗಳ ಎಳೆಗಳು ಹಾರುತ್ತಾ ಬಂದು ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಥೆಗಳನ್ನು ಓದಿ ಮುಗಿಸಿದ ನಂತರ ಗುಂಯ್ ಗುಡುತ್ತಲೇ ಇರುತ್ತವೆ. ಅಷ್ಟೊಂದು ಆಪ್ತವಾಗಿ ಅವು ನಮ್ಮನ್ನಾವರಿಸಿ ಬಿಡುತ್ತವೆ. ಸಾಮಾನ್ಯವಾಗಿ ನಾವು ಕಂಡುಂಡ ಗ್ರಾಮೀಣ ಅನುಭವಗಳು ಇಲ್ಲಿವೆ. ಎಲ್ಲ ಕಥೆಗಳು ಒಂದಕ್ಕಿಂತ ಒಂದು ಹೆಚ್ಚೆನಿಸುತ್ತವೆ. ಕೆಲವು ಕಥೆಗಳ ಆಕರ್ಷಣೆ ಎಂದರೆ ಲೇಖಕಿ ಬಳಸಿದ ಭಾಷೆ. ಕೆಲವು ಕುಂದಾಪುರ ಕನ್ನಡವಾದರೆ ಇನ್ನೂ ಕೆಲವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಕನ್ನಡ ಭಾಷೆ. ಓದುತ್ತಾ ಹೋದಂತೆ ಇವು ಇಷ್ಟವಾಗುತ್ತವೆ.
ಇಲ್ಲಿನ ೬ ಕಥೆಗಳ ಬಗ್ಗೆಯೂ ಪುಟಗಟ್ಟಲೆ ಬರೆಯಬಹುದಾದರೂ ನನ್ನ ಕಾಡಿದ ಕಥೆ ‘ಅಮ್ಮಚ್ಚಿಯೆಂಬ ನೆನಪು’ ಕಥೆ. ಇದೇ ಕಥೆಯ ತಲೆಬರಹವನ್ನೇ ಕೃತಿಗೆ ನೀಡಿದ್ದಾರೆ.
ಅಮ್ಮಚ್ಚಿ, ಲೇಖಕಿಯ ಹಿರಿಯ ಗೆಳತಿ. ವಯಸ್ಸು, ಅಂತಸ್ತು, ಜಾತಿ- ಎಲ್ಲವನ್ನೂ ಮೀರಿ ಇವರಿಬ್ಬರ ಸ್ನೇಹ. ಅಕ್ಕಪಕ್ಕದ ಯಾರೊಬ್ಬರಿಗೂ ಅಮ್ಮಚ್ಚಿಯೊಂದಿಗೆ ಸ್ನೇಹ- ಸಲುಗೆ ಇಲ್ಲವೆಂದರೂ ಲೇಖಕಿಗೆ ಮಾತ್ರ ಅಮ್ಮಚ್ಚಿಯೆಂದರೆ ಅಚ್ಚುಮೆಚ್ಚು. ಸೀತತ್ತೆಯ ಒಬ್ಬಳೇ ಮಗಳು ಅಮ್ಮಚ್ಚಿ. ಅಮ್ಮಚ್ಚಿಗೆ ಆರು ತಿಂಗಳಿರುವಾಗಲೇ ಅವಳಪ್ಪ ತೀರಿಕೊಂಡಿದ್ದ. ಗಂಡುದಿಕ್ಕಿಲ್ಲದ ಮನೆಗೆ, ೧೨ ವರ್ಷದ ವೆಂಕಪ್ಪನೇ ಗಂಡುದಿಕ್ಕಾದ. ಮುಂದೆ ಬೆಳೆದು ವೆಂಕಪ್ಪಯ್ಯನಾದ. ಆತ ಮನೆಯ ಯಜಮಾನಿಕೆಗೂ ಮುಂದಾದ. ಸೀತತ್ತೆಯ ಮುಂದೆ- ನಿಮಗೆ ಮಗಳ ಚಿಂತೆ ಬೇಡ; ನಾನೇ ಮದುವೆಯಾಗುತ್ತೇನೆ ಎಂದ. ಇಷ್ಟಕ್ಕೇ ಸಮಾಧಾನಗೊಳ್ಳದೆ ಊರತುಂಬೆಲ್ಲ ಅಮ್ಮಚ್ಚಿಗೆ ಯಜಮಾನನಾಗುವವ ಎಂದು ಡಂಗುರ ಸಾರಿದ. ಅಮ್ಮಚ್ಚಿಗೋ...? ವೆಂಕಪ್ಪಯ್ಯನೆಂದರೆ ಅಸಹ್ಯ, ವಾಕರಿಕೆ. ‘ಈ ಬಡ್ಡನಿಗಿಂತ ಗದ್ದೆ ಉಳುವ ಕೋಣ ಆದರೂ ಬೇಕು’ ಎನ್ನುವುದು ಅಮ್ಮಚ್ಚಿಯ ಚಟಾಕಿ.
ಅಮ್ಮಚ್ಚಿಗೊಮ್ಮೆ ಲೇಖಕಿ ಜೊತೆಗೂಡಿ ಪೇಟೆಗೆ ಹೋಗುವೆ, ಅಲ್ಲಿಂದ ದೇವಸ್ಥಾನ, ಅಲ್ಲಿಂದ ಬರಬೇಕಾದರೆ ಮನೆಗೆ ಬೇಕಾಗಿರುವ ವಸ್ತುಗಳನ್ನು ತರಬೇಕೆಂದು ಸಂಭ್ರಮದಿಂದ ಸಿದ್ಧಳಾದಳು. ಜಡೆಬಿಚ್ಚಿ, ಜುಟ್ಟು ಹಾಕಿಕೊಂಡು, ಅದು ರುಮುರುಮು ಹಾರುವುದನ್ನು ಕಂಡು, ತನ್ನನ್ನು ತಾನೇ ಮೆಚ್ಚಿಕೊಳ್ಳುತ್ತಾಳೆ. ಮುಖಕ್ಕೆ ಪೌಡರ್ ಹೊಡೆದುಕೊಂಡು, ಲಾಲ್‌ಗಂಧ ಹಾಕಿ, ಸಣ್ಣ ದುಂಡಗಿನ ಕನ್ನಡಿಯಲ್ಲಿ ಚೂರುಚೂರೇ ತನ್ನನ್ನು ನೋಡಿಕೊಳ್ಳುತ್ತ, ಶಂಭಟ್ಟರ ಕೋಣೆಯಲ್ಲಿರುವಂತಹ ನಿಲುವುಗನ್ನಡಿ, ತನಗಿಲ್ಲವಲ್ಲಾ ಎಂದು ಕರುಬುತ್ತಾಳೆ. ಅಮ್ಮಚ್ಚಿ ವ್ಯಕ್ತಿತ್ವ ಹದಿಹರಯದ ಹೆಣ್ಣುಮಕ್ಕಳ ಕನ್ನಡಿ ಪ್ರೇಮವನ್ನು ಇಲ್ಲಿ ಸಶಕ್ತವಾಗಿ ತೆರೆದಿಡುತ್ತದೆ. ಅದೇ ಹೊತ್ತಿಗೆ ಸರಿಯಾಗಿ ವೆಂಕಪ್ಪಯ್ಯ ಒಕ್ಕರಿಸುವುದು, ಇವರಿಬ್ಬರ ತಿರುಗಾಟಕ್ಕೆ ಅಡ್ಡಗಾಲು ಹಾಕುವುದು, ಸೀತತ್ತೆಯನ್ನು ಮಗಳ ವಿರುದ್ಧವೇ ಎತ್ತಿಕಟ್ಟುವುದು, ಅಮ್ಮಚ್ಚಿ ನಿರಾಶಳಾದರೂ ಅದನ್ನು ತೋರಗೊಡದೆ ಲೇಖಕಿಯೊಂದಿಗೆ ಮಡಲು ಹೆಣೆಯಲು ಅನುವಾಗುವುದು- ವೆಂಕಪ್ಪಯ್ಯ ವಿರುದ್ಧದ ಅಮ್ಮಚ್ಚಿಯ ಪ್ರತಿರೋಧವನ್ನು ಅನಾವರಣಗೊಳಿಸುತ್ತದೆ.
ಸತ್ಯನಾರಾಯಣ ಪೂಜೆಗೆ ವಾರೆ ಬೈತಲೆ ತೆಗೆದು, ಎರಡು ಜಡೆ ಹಾಕಿಕೊಂಡು ಹೊರಡುವ ಅಮ್ಮಚ್ಚಿಯ ಉತ್ಸಾಹದ ಹಿಂದೆ ಅಡಗಿರುವ ಸತ್ಯ-ಪ್ರತಿಯೊಬ್ಬ ಮದುವೆಯಾಗದ ಹುಡುಗಿಗೆ, ಮದುವೆಯಾಗದ ಹುಡುಗನ ಕುರಿತಾಗಿ ಇರುವ ಎಳೆತ- ಸೆಳೆತಗಳನ್ನು, ತಾನು ಇತರರಿಗೆ, ಅದರಲ್ಲೂ ಮದುವೆಯಾಗದ ಹುಡುಗನ ಕಣ್ಣಿಗೆ ‘ಚೆಲುವೆ’ಯಾಗಿ ಕಾಣಿಸಬೇಕು ಎನ್ನುವ ಸಹಜ ಸತ್ಯವನ್ನು ಈ ಕಥೆ ನಮ್ಮ ಮುಂದೆ ತೆರೆದಿಡುತ್ತದೆ.
ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ, ರಮಾ ಟೀಚರ್ ಮನೆಗೆ ಹೋಗಿ ಹಿಂದುಗುಬ್ಬಿ ( ಬ್ಯಾಕ್ ಬಟನ್) ರವಕೆ ಹೊಲಿಯಲು ಹೇಳುವುದು, ವೆಂಕಪ್ಪಯ್ಯನ ಮರ್ಜಿಯನ್ನು ಅರಿತ ರಮಾ ಟೀಚರ್, ಮೀನಮೇಷ ಎಣಿಸುವುದು, “ಇದು ನನ್ನ ರವಕೆ, ನನ್ನ ಮರ್ಜಿ, ಹೊಲಿದುಕೊಡಿ” ಎಂದು ರಮಾ ಟೀಚರ್‌ಗೆ ಗುಡುಗುವುದು ನಿಜಕ್ಕೂ ಅಮ್ಮಚ್ಚಿಯ ಆತ್ಮಾಭಿಮಾನದ ದ್ಯೋತಕ; ಹೆಣ್ಣುಮಕ್ಕಳ ಫ್ಯಾಶನ್ ಕ್ರೇಜ್‌ನ ಸಂಕೇತ.
ಹಿಂದುಗುಬ್ಬಿಯ ರವಿಕೆ ಹೊಲಿಯದೆ ಇದ್ದುದರಿಂದ ನಿರಾಸೆ, ಅಮ್ಮಚ್ಚಿಯ ತಾಯಿ ಮತ್ತು ವೆಂಕಪ್ಪಯ್ಯ ಇವಳನ್ನು ಲೇವಡಿ ಮಾಡಿ ನಗಿಸುವ, ಎಲ್ಲವನ್ನೂ ಅದುಮಿಟ್ಟುಕೊಂಡು ಕಾಲಕ್ಕಾಗಿ ಕಾಯುವ ಅಮ್ಮಚ್ಚಿ, ವೆಂಕಪ್ಪಯ್ಯ ತಿರುಪತಿಗೆ ಹೋದಾಗ ಅವನ ಶರ್ಟಿಗೆ ಗತಿಕಾಣಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ. ಕಾಲಕ್ಕಾಗಿ ಕಾಯುವ ಇಡೀ ಸ್ತ್ರೀ ಕುಲದ ವ್ಯಕ್ತಿತ್ವವನ್ನೇ ಇದು ಕಟೆದು ನಿಲ್ಲಿಸುತ್ತದೆ.
ತನ್ನ ಶರ್ಟಿಗಾದ ಗತಿಯನ್ನು ಕಂಡು ಕೆಂಡವಾಗುವ ವೆಂಕಪ್ಪಯ್ಯ, ಅಮ್ಮಚ್ಚಿಯನ್ನು ಹಿಗ್ಗಾಮುಗ್ಗ ಥಳಿಸುವುದು, ಅಮ್ಮಚ್ಚಿಯ ತುಟಿ ಒಡೆದು ರಕ್ತ ಒಸರುವುದು, ಪುರುಷಪ್ರಧಾನ ಸಮಾಜದ ದೌರ್ಜನ್ಯಕ್ಕೆ ಕನ್ನಡಿ ಹಿಡಿಯುತ್ತದೆ. ವೆಂಕಪ್ಪಯ್ಯ ತಿರುಪತಿಯಲ್ಲಿ ಹೊಟೆಲಿಡುವುದು, ಅಮ್ಮಚ್ಚಿಯ ವಿರೋಧದ ನಡುವೆಯೂ ಅವಳನ್ನು ಮದುವೆಯಾಗುವ ಪ್ರಾರಬ್ಧ. ಅವನೊಂದಿಗೆ ತಿರುಪತಿಗೆ ಪಯಣ. ಹೀಗೆ ಕಾಲ ಉರುಳುತ್ತದೆ; ಹೊರಳುತ್ತದೆ. ಒಂದು ದಿನ ದಿಢೀರೆಂದು ಅಮ್ಮಚ್ಚಿ ಪ್ರತ್ಯಕ್ಷ. ನಗೆಬುಗ್ಗೆಯಾಗಿದ್ದ ಅಮ್ಮಚ್ಚಿಯ ಮುಖದಲ್ಲಿ ನಗೆಯೆಂಬುದೇ ಮಂಗಮಾಯ! ಒಬ್ಬಂಟಿಯಾಗಿ ಬಂದ ಅಮ್ಮಚ್ಚಿಗೆ ಸೀತತ್ತೆಯಿಂದ ತರಾಟೆ-“ ಏನು ರಂಡೆ, ಒಬ್ಬಳೇ” ಎಂದು. “ಬರದೆ ಮತ್ತೆಂತ ಮಾಡ್ತ್‌ದ್ ಅಲ್ಲಿದ್ದ್? ನಿನ್ನ ಯೆಂಕಪ್ಪಯ್ಯ ನೇಣು ಹಾಕ್ಕೊಂಡ” ಎಂದು ಏನೂ ಆಗೇ ಇಲ್ಲವೆಂಬಂತೆ ಹೇಳಿದ ಅಮ್ಮಚ್ಚಿ ಕಣ್ಣನ್ನು ಮಿಣಕ್ಕನೆ ಮುಚ್ಚಿ ತೆರೆದು ನಕ್ಕಾಗ ಆ ನಗುವಿನಲ್ಲಿ- ತನಗೆ ಅಂಟಿಕೊಂಡ ಪೀಡೆ (ವೆಂಕಪ್ಪಯ್ಯ) ತೊಲಗಿದ ಎಂಬ ಭಾವವಿರುವುದನ್ನು ಇಲ್ಲಿ ತೋರಿಸಲಾಗಿದೆ.
ಉಳಿದಂತೆ, ‘ವಾಣಿಮಾಯಿ’ ಕತೆಯಲ್ಲಿ ಅವಳ ದಿಟ್ಟತೆ ತೋರಿಸಲಾಗಿದೆ. ಮೆಟ್ಟಿಗಾಗಿ ಪಟ್ಟ ಪಡಿಪಾಟಲು, ಕೊನೆಗೆ ಅದರಿಂದ ಮುಕ್ತಿ, ಮೆಟ್ಟಿನಿಂದ ಕಾಲಿಗೆ ಪೆಟ್ಟಾಗುವುದು, ಆದರೂ ಅದಕ್ಕೆ ಕಾರಣನಾದ ನರಸಿಂಹನ ಮೇಲೆ ತೀರಿಸಿಕೊಂಡ ಸೇಡನ್ನು ಮನಸೆಳೆಯುವಂತೆ ನಿರೂಪಿಸಿದ್ದಾರೆ. ಗಂಡ ಹೆಂಡತಿಯ ವಯಸ್ಸು ಮೀರಿದಾಗ ಮರೆವೆಂಬ ಹೊರೆಯೂ ಸೇರಿ ಅವಾಂತರಗಳೇ ಹೆಚ್ಚಾಗುವುದು, ಅದನ್ನು ಸಂಬಾಳಿಸುತ್ತಾ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾ ಸಾಗುವ ಜೀವನದ ಸಂಜೆಯ ಘಟ್ಟದ ಚಿತ್ರಣವನ್ನು ‘ಮರೆವು’ ಕಥೆಯು ಹೊಂದಿದೆ.
‘ಪಥಿಕರು’ ಕಥೆಯು ದಾರಿ ಹುಡುಕುವ ಗೋಳನ್ನು ಬಿಚ್ಚಿಡುತ್ತದೆ. ಯಾವುದೋ ಮನೆ ಹುಡುಕಿ ಹೊರಟಾಗ ಪಡುವ ಪಾಡು. ವಿಳಾಸ ಕೇಳಿದಾಗ ಇಲ್ಲೇ ಹತ್ತಿರದಲ್ಲೇ ಇದೆ ಎಂದು ಅಲ್ಲಿಯವರೆಲ್ಲ ಹೇಳಿದರೂ ಅದು ಸಿಗುವ ತನಕ ಆಗುವ ತಳಮಳ, ಗೊಂದಲವನ್ನು ಚಿತ್ರಿಸಿದ್ದಾರೆ.
‘ಅಂತರಾಳದ ಬದುಕು’ ನಲ್ಲಿ ಉಳಿದುಬಿಡುವ ಮನದಾಳದ ಒಂದು ವಿಷಾದವಿದೆ. ಸರಿ ಯಾರು, ತಪ್ಪು ಯಾರೆಂದು ಅರಿಯುವ ಗೋಜಿಗೆ ಹೋಗದಿರುವುದು, ಸತ್ಯಾಸತ್ಯತೆಗಳ ತುಲನೆಯಲ್ಲಿ ಸತ್ಯ ಕಂಡರೂ ಅದನ್ನು ಆಚೆಗೆ ಹೇಳಲಾಗದ ಸ್ಥಿತಿಯನ್ನು ಕಾಣಬಹುದು. ‘ಅಳಿವು ಉಳಿವುಗಳ ನಡುವೆ’ ಯಲ್ಲಿ
ಮೂಕತ್ತೆ ಆಪ್ತವಾಗಿಬಿಡುತ್ತಾಳೆ. ಮೂಕತ್ತೆಗೆ ಮರೆವು. ಏನು ತಿಂದೆ ಎನ್ನುವುದು ಸಹ ನೆನಪಿರುವುದಿಲ್ಲ. ಆದರೆ ವಾಸ್ತವವಾಗಿ ನೆನಪುಗಳಿಗೆ ಮರೆವಿಗೂ ಅವಿನಾಭಾವ ಸಂಬಂಧ. ಮರೆಯಬೇಕಾದ್ದು ನೆನಪಲ್ಲೇ ಉಳಿಯುತ್ತವೆ. ನೆನಪಿನಲ್ಲಿಡಬೇಕಾದ್ದು ಮರೆತೇ ಹೋಗುತ್ತದೆ. ಅವಳಿಗೆ ಮರೆವೋ ಅಥವಾ ಮರೆವೆಂದು ನಾವು ತಿಳಿಯುತ್ತೇವೆಯೋ ಗೊತ್ತಾಗದು. ವಾಸುಮಾಣಿಯ ಹೊಸಮನೆ ಸಮಾರಂಭದ ವಿಚಾರದಲ್ಲಿ ಅವಳಿಗೆ ಸಾಕಷ್ಟು ವಿಚರಗಳು ನೆನಪಾಗುತ್ತವೆ. ಇದೇ ಇಲ್ಲಿನ ವೈಚಿತ್ರ್ಯ.
ಒಟ್ಟಿನಲ್ಲಿ, ಇಲ್ಲಿನ ಪ್ರತಿ ಕಥೆಯಲ್ಲೂ ಒಂದು ಸಾಮಾನ್ಯ ಘಟನೆಯನ್ನು ಹೇಗೆ ಕಥೆಯಾಗಿ ಬಿಂಬಿಸಬಹುದು ಎನ್ನುವುದನ್ನು ಲೇಖಕಿ ಬಹಳ ಜಾಣ್ಮೆಯಿಂದ ತೋರಿಸಿದ್ದಾರೆ.
Published by Dattareya Hegde on 17 April,2025
..................................
Comments
Post a Comment