ದರ್ಶ ನಾರಿಯರ ಪ್ರತೀಕ


‘ಪಂಚ ಕನ್ಯೆಯರು -ಪರಮ ಪಂಚ ಮಿಥ್ಯೆಯರು’



 ಅಹಲ್ಯಾ ದ್ರೌಪದಿ ಸೀತಾ  ತಾರಾ ಮಂಡೋದರಿ ತಥಾ

 ಪಂಚಕನ್ಯಾ ಸ್ಮರೆ ನಿತ್ಯಂ ಮಹಾಪಾತಕ ನಾಶನಂ.

 ಎಂಬ ಶ್ಲೋಕದಲ್ಲಿ ಎಷ್ಟೊಂದು ಅರ್ಥ ರಾಶಿ ಇದೆ. ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ಈ ಐವರು ಮಹಿಳೆಯರ ಹೆಸರನ್ನು ಮುಂಜಾನೆ ಎದ್ದು ಪಠಿಸಿದರೆ ನಮ್ಮ ಪಾಪವೆಲ್ಲವೂ ನಾಶವಾಗುತ್ತದೆ ಎಂದು.

 ಪಂಚ ಕನ್ಯೆಯರ ಕುರಿತಾದ ಕೃತಿಯೇ ‘ಪಂಚ ಕನ್ಯೆಯರು ಪರಮ ಪಂಚ ಮಿಥ್ಯೆಯರು’. ಈ ಕೃತಿ ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಪ್ರದೀಪ ಭಟ್ಟಾಚಾರ್ಯ ಅವರ ಕೃತಿ ‘ಫೈವ್ ಹೋಲಿ ವರ್ಜಿನ್ಸ್ ಫೈವ್ ಸೀಕ್ರೆಟ್ ಮಿಥ್ಸ್’ ಎಂಬುದ ಕನ್ನಡಾನುವಾದ. ಉಡುಪಿಯ  ಟಿ ಎಂ ಎ ಪೈ  ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಮಹಾಬಲೇಶ್ವರ ರಾವ್ ಇದನ್ನು  ಅನುವಾದಿಸಿದ್ದಾರೆ.  

ಪಂಚಕನ್ಯೆಯರು ಭಾರತೀಯ ನಾರಿಯರಿಗೆ ಜ್ವಲಂತ ವ್ಯಕ್ತಿತ್ವದ ಮಾದರಿಗಳೆಂದು ಇಲ್ಲಿ ಪ್ರತಿಪಾದಿಸಲಾಗಿದೆ. ಪ್ರತಿಯೊಬ್ಬರ ಜೀವನ ರೇಖೆಯು ಭಾರತದ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ  ಪ್ರತಿಬಿಂಬಿತವಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯು ಪಂಚಕನ್ಯೆಯರ ವ್ಯಕ್ತಿತ್ವ ಹಾಗೂ ಜೀವನ ರೇಖೆಯನ್ನು ಅಭ್ಯಾಸ ಮಾಡಬೇಕು.

ಅಲ್ಪಚೇತನವು ಉದಾತ್ತ ಚೇತನವಾಗಲು ನೆರವು ನೀಡುವ ಸಲಕರಣೆಗಳಾಗುವುದೇ ಸದಾ ಸ್ಮರಣೀಯರಾದ ಪಂಚಕನ್ಯೆಯರಲ್ಲಿ ಕಂಡುಬರುವ ಏಕರೂಪವಾದ ಗುಣ. ಅವರನ್ನು ನಿತ್ಯ ಸ್ಮರಿಸಿಕೊಳ್ಳುವುದರ ಮೂಲಕ ನಮ್ಮ ಅಹಂಭಾವವನ್ನು ತ್ಯಜಿಸಿ ಉದಾತ್ತ ಚೇತನವಾಗುವ ಬಗೆಯನ್ನು ಹೇಗೆ ಕಲಿಯಬಹುದು ಎನ್ನುವುದನ್ನು ಪ್ರಸ್ತುತ ಕೃತಿಯಲ್ಲಿ ವಿವರಿಸಲಾಗಿದೆ. ಇಲ್ಲಿ ಅವರ ಶೀಲ ಭೌತಿಕ ದೇಹಕ್ಕೆ ಬದ್ಧವಾಗಿರುವಂಥದ್ದಲ್ಲ. ಇವರೆಲ್ಲರೂ ಪಾವಿತ್ರ್ಯ ಮತ್ತು ಸಚ್ಚ್ಚಾರಿತ್ರ್ಯದ ಪ್ರತೀಕ. ತಮ್ಮದಲ್ಲದ ತಪ್ಪಿಗೆ ಶಿಕ್ಷಿಸಲ್ಪಟ್ಟವರು.  ಅತ್ಯಂತ ಸೂಕ್ಷ್ಮ ಸನ್ನಿವೇಶಕ್ಕೆ ಸಿಲುಕಿದ್ದರೂ ನಿಷ್ಕಂಳಕಿತರಾಗಿ ಹೊರಬಂದವರು. ಒಟ್ಟಿನಲ್ಲಿ ಆದರ್ಶ ನಾರಿಯರ ಪ್ರತೀಕವಾಗಿದ್ದಾರೆ.

ಪಂಚಕನ್ಯೆಯರಲ್ಲಿ  ಕಂಡುಬರುವ ಒಂದು ಸಮಾನ ಲಕ್ಷಣವೆಂದರೆ,  ಇವರೆಲ್ಲರೂ ಮಾತ್ರ ವಿಹೀನತೆಯರು. ಅಹಲ್ಯಾ, ತಾರಾ, ಮಂಡೋದರಿ ಮತ್ತು ದ್ರೌಪದಿ ಇವರ ಜನ್ಮವು ಅಸಹಜವಾದುದು. ಇವರು ಮಾತೆ ಉದರದಿಂದ ಜನಿಸಿದವರಲ್ಲ. ಅಹಲ್ಯೆಗೆ ಹೆತ್ತವರಿಲ್ಲ. ಪತಿ ಹಾಗೂ ಪುತ್ರನಿಂದ ದೂರವಾಗಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡುತ್ತಾಳೆ. ಕುಂತಿ ಹೆತ್ತವರಿಂದ ದೂರವಾಗಿ, ಎರಡು ಬಾರಿ ತನ್ನ ಗಂಡನನ್ನು ಕಳೆದುಕೊಳ್ಳುತ್ತಾಳೆ. (ಒಮ್ಮೆ ಮಾದ್ರಿಯ ವಿಷಯದಲ್ಲಿ, ಇನ್ನೊಮ್ಮೆ ನಿಜಕ್ಕೂ ಆತ ಮಾದ್ರಿಯ ತೋಳುಗಳಲ್ಲಿ ಕೊನೆಯುಸಿರೆಳೆದಾಗ) ರಾಮನ ಜೊತೆ ನಡೆದ ಯುದ್ಧದ ದೆಸೆಯಿಂದಾಗಿ ಮಂಡೋದರಿ ತನ್ನ ಪತಿ ಪುತ್ರರು ಹಾಗೂ ಬಂಧು ಬಳಗವನ್ನು ಕಳೆದುಕೊಳ್ಳುತ್ತಾಳೆ. ರಾಮನು ಮರೆಯಲಿ ನಿಂತು ಎಸೆದ ಬಾಣದಿಂದಾಗಿ ತಾರಾ ವಾಲಿಯನ್ನು ಕಳೆದುಕೊಳ್ಳುತ್ತಾಳೆ. ತನ್ನ ಐವರು ಪತಿಗಳು ತನ್ನನ್ನು ಪದೇ ಪದೇ ತಿರಸ್ಕರಿಸುವುದನ್ನು ದ್ರೌಪದಿ ಅನುಭವಿಸುತ್ತಾಳೆ.  ಪ್ರತಿಯೊಬ್ಬರು ಇನ್ನೊಂದು ಮಡದಿಯನ್ನು ಹೊಂದುತ್ತಾರೆ.

 ತನ್ನ ಎದೆಗಾರಿಕೆ ಮತ್ತು ಅದರ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯದಿಂದಾಗಿ ಪಂಚಕನ್ಯೆಯರಲ್ಲಿ ಅಹಲ್ಯಾ ವಿಶಿಷ್ಟ ಎನಿಸುತ್ತಾಳೆ. ಒಂದೇ ಒಂದು ಸಲ ತನ್ನ ಹೆಣ್ತನ ಬಯಸಿದ ಕಾರಣದಿಂದಾಗಿ ಆಕೆ ಕ್ರಮಬಾಹಿರವಾಗಿ ನಡೆದುಕೊಂಡ ಪರಿಣಾಮವಾಗಿ ಶಾಪಕ್ಕೆ ತುತ್ತಾಗುತ್ತಾಳೆ.

 ಇವರೆಲ್ಲರ ಜೀವನದಲ್ಲಿ ವೈಯಕ್ತಿಕ ದುರಂತ ಎದುರಾದಾಗಲೂ  ಇವರ್‍ಯಾರೂ ಕುಸಿದು ಯಾವಾಗಲೂ ಕೈಕಟ್ಟಿ ಕುಳಿತಿಲ್ಲ. ಪ್ರತಿಯೊಬ್ಬರೂ ತಲೆ ಎತ್ತಿ ತಮ್ಮ ಜೀವನ ತಾವೇ ನಡೆಸುತ್ತಾರೆ. ‘ಕನ್ಯೆ’ಯರ ಈ ಒಂದು ಗುಣ ಅವರನ್ನು ಉಳಿದ ಸ್ತ್ರೀಯರಿಂದ ಬೇರ್ಪಡಿಸುತ್ತದೆ. ಇಲ್ಲಿ ಅವರ ಜೊತೆಗಿ ವ್ಯವಹಾರದಲ್ಲಿ ಒಂದು ತೆರನಾದ ಶೋಷಣೆ ಇರುವುದನ್ನು ನಾವು ಕಾಣಬಹುದಾಗಿದೆ. ಸುಗ್ರೀವನು ತಾರಾಳ ಹಿಂದೆ ಅಡಗಿಕೊಂಡು ಕೋಪೋದ್ರಿಕ್ತ ಲಕ್ಷ್ಮಣನನ್ನು ಶಾಂತಗೊಳಿಸಲು ಆಕೆಯನ್ನು ಬಳಸಿಕೊಳ್ಳುತ್ತಾನೆ. ದೂರ್ವಾಸರನ್ನು ಸಂಪ್ರೀತಗೊಳಿಸಲು ಕುಂತಿಭೋಜ ಕುಂತಿಯನ್ನು ಬಳಸಿಕೊಳ್ಳುತ್ತಾನೆ. ದ್ರೋಣರ ಮೇಲೆ ಸೇಡು ತೀರಿಸಿಕೊಳ್ಳಲು ದ್ರ್ರುಪದನು ಪಾಂಡವರ ಜೊತೆ ನಂಟು ಬೆಳೆಸಲೆಂದು ದ್ರೌಪದಿಯನ್ನು ಬಳಸಿಕೊಳ್ಳುತ್ತಾನೆ. ಪಾಂಡವರು ತಮ್ಮ ಸಾಮ್ರಾಜ್ಯವನ್ನು  ಮರಳಿ ಪಡೆಯಲು ಮೂರು ಬಾರಿ ಕುಂತಿಯನ್ನು ದುಡಿಸಿಕೊಳ್ಳುತ್ತಾರೆ.  

ಒಳಿತು, ಕೆಡುಕನ್ನು ಬೇರ್ಪಡಿಸುವ ಸಂದಿಗ್ಧವಾದ ಲಕ್ಷ್ಮಣರೇಖೆಯನ್ನು ದಾಟುವ, ಲೈಂಗಿಕವಾಗಿ ಸ್ವತಂತ್ರಳಾದ ಹೆಣ್ಣನ್ನು ಒಂದಲ್ಲ ಒಂದು ರೀತಿಯಲ್ಲಿ  

ಶಿಕ್ಷಿಸುವ ಸಂಸ್ಕೃತಿಯನ್ನು ನಾವು ಇಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ  ಅಹಲ್ಯಾ ಪ್ರಸಂಗವೊಂದನ್ನು ಗಮನಿಸಬಹುದು. ಸುಸಂಸ್ಕೃತ ಮನೆತನದಲ್ಲಿ ಜನಿಸಿ ಅಸಾಧಾರಣ ಋಷಿಯನ್ನು ವರಿಸಿದ ಅಹಲ್ಯಾಳ ಮನಸ್ಸು ಅರೆಗಳಿಗೆ ದಾರಿ ತಪ್ಪಿದ್ದರಿಂದ ಆಕೆ ಘೋರ ತಪ್ಪನ್ನೆಸಗಿದಳು. ಶಾಪಗ್ರಸ್ಥಳಾದಳು. ಉಳಿದವರಿಗೆ ಇಲ್ಲೊಂದು ಪಾಠವಿದೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೂ ಕಲ್ಲಾದ ಅಹಲ್ಯೆ ರಾಮನ ಪಾದಧೂಳು  ಸೋಕಿದ ಮೇಲೆಯೇ  ಸಚೇತನಳಾದಳು. ದೇವರ ಪಾದಾರವಿಂದಗಳನ್ನು ಬಲವಾಗಿ ನಂಬಿದರೆ ಮಾತ್ರ  ಆತನ ಕೃಪಾಕಟಾಕ್ಷ ಸಾಧ್ಯ  ಎಂಬ ಸಂದೇಶ ಇಲ್ಲಿ ದೊರೆಯುತ್ತದೆ.  

ಉಳಿದ ಕನ್ಯೆಯರಿಗೆ ಹೋಲಿಸಿದರೆ ದ್ರೌಪದಿ  ಪ್ರತ್ಯೇಕವಾಗಿ ನಿಲ್ಲುವ  ಒಂದು ಲಕ್ಷಣವನ್ನು ನಾವು ಗಮನಿಸಬಹುದು. ತನ್ನ ಹೆಸರಿನಲ್ಲಿ ಒಂದು ಜೀವಂತ  ಸಂಪ್ರದಾಯ ಗಳಿದವಳು ಇವಳು. ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ  ಆಕೆಯ ಹೆಸರಿನಲ್ಲಿ ನೂರಾರು ದೇವಾಲಯಗಳಿವೆ. ವರ್ಷಂಪ್ರತಿ ಆಕೆಯನ್ನು ಹಾಡಿಹೊಗಳುತ್ತ ಬೀದಿನಾಟಕವನ್ನು ಅಲ್ಲಿ ನಡೆಸಲಾಗುತ್ತಿದೆ. ರಾಮ ಮತ್ತು ಸೀತೆಯರ ಹಲವಾರು ದೇವಾಲಯಗಳಿವೆ. ಆದರೆ ಅಲ್ಲಿ ವಿಗ್ರಹಭಂಜನ ನಡೆದಿದೆ. ಆದರೆ ದ್ರೌಪದಿ ದೇವಸ್ಥಾನದಲ್ಲಿ ಇದು ನಡೆದಿಲ್ಲ. ಇದಕ್ಕೆ ಕಾರಣವನ್ನು ವಿದ್ವಾಂಸರೊಬ್ಬರು ನೀಡುತ್ತಾರೆ-  ಸೀತೆ ಸಹನಾಶೀಲೆಯಾದ ಮಾತೆ. ಮೃದು, ಮಧುರ ವರ್ತನೆಯ ಮುಸುಕಿನಲ್ಲಿ ಆಕೆಯ ಒಡಲ ಬೆಂಕಿ ಕಂಡೂ ಕಾಣದಂತೆ ಉರಿಯುತ್ತದೆ. ಸೀತೆಗೆ ಮೇಲುಜಾತಿಯ ಯಾಜಮಾನ್ಯದೊಂದಿಗೆ ಸಂಬಂಧವಿದ್ದರೆ, ದ್ರೌಪದಿ ಸದಾ ಶ್ರೀಸಾಮಾನ್ಯನ ದೇವತೆ ಆಗಿದ್ದಾಳೆ.

 ಈಗ ಬಳಕೆಯಲ್ಲಿರುವ ಕನ್ಯೆಯರಲ್ಲಿ ದ್ರೌಪದಿ ಒಬ್ಬಳೇ ಮಹಾಭಾರತಕ್ಕೆ ಸಂಬಂಧಪಟ್ಟವರು. ಉಳಿದ ನಾಲ್ವರು ರಾಮಾಯಣಕ್ಕೆ ಸಂಬಂಧಪಟ್ಟವರು. ಜೀವನ ವಿಷಯದಲ್ಲಿ ನೀತಿಗೆಟ್ಟು ನಡೆದರೆ ಸ್ತ್ರೀಯರಿಗೆ ಒದಗುವ ಸಾಮಾಜಿಕ ಬಹಿಷ್ಕಾರ ಹಾಗೂ ಅನುಭವಿಸಬೇಕಾದ ಮಾನಸಿಕ ಸಮಸ್ಯೆಗಳನ್ನು ನಾವು ಕಾಣಬಹುದಾಗಿದೆ. ತಾರಾ  ರಾಜಕೀಯ ಪ್ರಬುದ್ಧತೆಯನ್ನು ಮೆರೆಯುವ ವ್ಯಕ್ತಿತ್ವದ ಗಟ್ಟಿತನಕ್ಕೆ ಸಾಕ್ಷಿಯಾಗಿದ್ದಾರೆ. ಸಂಕಟವನ್ನು ಎದುರಿಸಿ ನಿಲ್ಲುವ ಅಸಾಮಾನ್ಯ ಸಾಮರ್ಥ್ಯ ಆಕೆಯಲ್ಲಿರುವುದನ್ನು ಕೃತಿಯಲ್ಲಿ ತೋರಿಸಲಾಗಿದೆ. ತನ್ನ  ಚಾಣಾಕ್ಷತನದಿಂದ ಮಗ ಹಾಗೂ ರಾಜ್ಯವನ್ನು ವಿನಾಶದ ಅಂಚಿನಿಂದ ಪಾರು ಮಾಡುತ್ತಾಳೆ.  ಬಲು ನಿಪುಣೆ. ತಾರಾ ಮತ್ತು ಮಂಡೋದರಿ ಇಬ್ಬರು ಸಮಾನಚಿಂತನೆಯವರು. ತಮ್ಮ ಗಂಡಂದಿರಿಗೆ ವಿವೇಕ ಉಪದೇಶಿಸುತ್ತಾರೆ. ಆದರೆ ಈ ಪತಿರಾಯರು ಅದಕ್ಕೆ ಕಿಂಚಿತ್ತು ಬೆಲೆ ಕೊಡದೆ ವಿನಾಶರಾಗುತ್ತಾರೆ. ತಾರಾ ಮತ್ತು ಮಂಡೋದರಿ ತಮ್ಮ ರಾಜ್ಯವನ್ನು ಬಲಿಷ್ಠ, ಸಂಪದ್ಭರಿತವಾಗುವ ಹಾಗೆ ಮಾಡುತ್ತಾರೆ. ಮಹಾಭಾರತದಲ್ಲಿ ಕುಂತಿ ಮತ್ತು ದ್ರೌಪದಿ ರಾಜವಂಶದ ಹಣೆಬರಹಣೆ ಬರೆದಿದ್ದಾರೆ. ಮನೆಗೆಲಸ ಎಲ್ಲವನ್ನು ನಿಷ್ಕಾಮವಾಗಿ ಮಾಡಿಕೊಂಡು ಹೋಗುವಲ್ಲಿ ದ್ರೌಪತಿಯಲ್ಲಿನ ಸ್ತ್ರೀಯ ನಿಸ್ವಾರ್ಥ ಗುಣವನ್ನು ಕಾಣಬಹುದು.

ಒಟ್ಟಿನಲ್ಲಿ, ಐವರು ಕಥಾನಾಯಕಿಯರ ಬಾಳಿನ ಏಳುಬೀಳುಗಳನ್ನು ಈ ಕೃತಿ ಮಾರ್ಮಿಕವಾಗಿ ಚಿತ್ರಿಸಿದೆ. ಮೂಲ ಲೇಖಕರ ಬಹುಶ್ರತತ್ವ, ತಲಸ್ಪರ್ಶಿ ಅಧ್ಯಯನ  ಹಾಗೂ ವಿಶೇಷ ಒಳನೋಟಗಳಿಗೆ ಈ ಕೃತೊ ದ್ಯೋತಕವಾಗಿದೆ.  ಮೂಲ ಭಾವ ಹಾಗೂ ವಿಚಾರಗಳಿಗೆ ಎಲ್ಲಿಯೂ ಕುಂದುಂಟಾಗದ ಹಾಗೆ ಸಮರ್ಥವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ ಶ್ರೇಯಸ್ಸು ಮಹಾಬಲೇಶ್ವರ ರಾವ್ ಅವರಿಗೆ ಸಲ್ಲುತ್ತದೆ.

Published by Dattareya hegde on 16-4.2025

........................

Comments

Popular posts from this blog